ಎರಡು ಸಾವಿರ ವರ್ಷಗಳ ಹಿಂದಿನ ಸಂಗಂ ಸಾಹಿತ್ಯ ಪುರನಾನೂರು

ತಮಿಳು ಮೂಲ: ಪ್ರೊ. ಸಾಲಮನ್‌ ಪಾಪಯ್ಯ
ಅನುವಾದ: ಡಾ. ಮಲರ್‌ ವಿಳಿ ಕೆ
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ

ಹಾಡು- ೧
( ಧರ್ಮತಪ್ಪದ ರಾಜನ ಆಳ್ವಿಕೆ)

ರಾಜನೇ
ಬಾನ ಮಿತಿಯವನೇ! ದೇವನೇ!
ನಿನ್ನ ಹೊಗಳದವರನ್ನು,
ಅವರ ತಪ್ಪುಗಳನ್ನು,
ನೀ ಸಹಿಸಿಕೊಳ್ಳುವೆ.
ಅವರ ತಪ್ಪು,
ಸಹಿಸಿಕೊಳ್ಳತಕ್ಕದ್ದಲ್ಲ
ಎಂದು ಕಂಡರೆ,
ಅವರನ್ನು ಅಳಿಸುವುದು ಹೇಗೆಂದು
ಯೋಚಿಸುವ ಜ್ಞಾನದಿ ನೀ

ಆಗಸದಂತೆ ವಿಶಾಲವಾದವನು.

ಹಗೆಗಳ ಅಳಿಸುವ ಸಾಮರ್ಥ್ಯದಲ್ಲಿ
ನೀ ಆಗಸವ ತಾಕಿ ಬೀಸುವ
ಗಾಳಿಯಂತಹವನು.
ಅವರನ್ನು ಅಳಿಸುವುದರಲ್ಲಿ
ಗಾಳಿಯೊಡನೆ ಬರುವ ಬೆಂಕಿಯಂತಹವನು.

ಎಲ್ಲರಿಗೂ ಒಳಿತನ್ನುಂಟು ಮಾಡುವುದರಲ್ಲಿ ನೀನು
ನೀರಿನಂತಹವನು.
ಬೆಳಗಿನ ಹೊತ್ತು ಪೂರ್ವದಲಿ
ನಿನ್ನ ಕಡಲಲಿ (ಉದಯಿಸುವ)ಕಾಣುವ ಸೂರ್ಯ
ಸಂಜೆಯಲಿ ಬೆಳ್ಳನೆಯ ಅಲೆಗಳಿರುವ
ನಿನ್ನ ಪಶ್ಚಿಮ ಕಡಲಲಿ ಮುಳುಗುವುದು.
ಇವುಗಳ ನಡುವೆ ಸದಾ
ಹೊಸ ಹೊಸ ಆದಾಯವ ತರುವ ಊರುಗಳು
ನಿನ್ನ ನಾಡಲ್ಲಿ ಉಂಟು.

ಕೇಸರಗಳು ಅಲುಗಾಡುವಂತೆ ತಲೆಯಾಡಿಸುವ
ಕುದುರೆಗಳನ್ನುಳ್ಳ ಪಾಂಡವರ್
ಐವರೊಡನೆ ಕೋಪಗೊಂಡು
ನಾಡನ್ನು ತಮ್ಮ ವಶಪಡಿಸಲು
ಬಂಗಾರದ ತುಂಬೆ ಮಾಲೆಯ ಧರಿಸಿ
ಸಮರಗೈಯಲು ಬಂದ ದುರ್ಯೋಧನಾದಿಗಳು ನೂರು ಜನ
ಸಮರಾಂಗಣದಿ ಹೋರಾಡಿ ಸಾಯುವವರೆಗೂ
ಎರಡು ಪಕ್ಷದವರಿಗೂ
ಭೂರಿ ಭೋಜನ ಎಂಬ ಅತಿ ಹೆಚ್ಚು ಉಣಿಸನ್ನು
ಕೊರತೆಯಿಲ್ಲದೆ ನೀಡಿದವನೇ!
ತನ್ನ ಸಹಜ ಸವಿಯ ಬಿಟ್ಟು
ಹಾಲು ಹುಳಿಯಾಗುವುದೇ?- ಹುಳಿಯಾದರೂ;
ತನ್ನ ಬೆಳಕನ್ನು ಕಳೆದುಕೊಂಡು
ಸೂರ್ಯನು ಕತ್ತಲಾಗುವುದೇ?- ಕತ್ತಲಾದರೂ
ನಾಲ್ಕು ವೇದಗಳ ಸನ್ನಡತೆ
ಬದಲಾಗುವುದೇ?- ಬದಲಾದರೂ
ನುಡಿಯಿಂದಲೂ, ನಡೆಯಲ್ಲೂ ಬದಲಾಗದ
ಮಂತ್ರಿ, ಸೇನಾಧಿಪತಿಗಳೆಂಬ ಎಲ್ಲರೊಡನೆ

ಸಂಜೆ ಮರೆಯಾಗುವ ಸಮಯದಿ
ಮಾಡಲು ಕಠಿಣವಾದ
ಗಾರ್ಹಪತ್ಯ, ದಕ್ಷಿಣ, ಆಹವನೀಯ,
ಎಂಬ ಮೂರು ಬಗೆಯ ಬೆಂಕಿಯು
ಹಾರುವರಿಂದ ರಕ್ಷಿಸುವ ಯಜ್ಞದಲಿ ಉರಿಯಲು
ಆ ಬೆಂಕಿಯ ಬೆಳಕಿನಲ್ಲಿ
ಬೆಟ್ಟಗಳ ಮೇಲೆ
ಚಿಕ್ಕ ತಲೆಯ ಮರಿಗಳೊಡನೆ
ದೊಡ್ಡ ಕಂಗಳ ಜಿಂಕೆಗಳ ಜೋಡಿಗಳು ನಿದ್ರಿಸುವುವು;

ಅಂತಹ ಸನ್ನಿವೇಶದಲ್ಲಿ
ಬಂಗಾರದಂತಹ ಶಿಖರವಿರುವ
ಹಿಮಾಲಯ ಪರ್ವತ ಮತ್ತು ಪೊದಿಯ ಪರ್ವತದಂತೆ
ಅಚಲವಾಗಿ
ನಿಡುಗಾಲ ಬಾಳ್ಗೆ.

ವಿಶೇಷಾಂಶ: ಚೇರಮಾನ್‌ ಪೆರುಂಚೋಟ್ರು ಉದಿಯಂ ಚೇರಲಾದನ್‌ ಎಂಬ ಅರಸನನ್ನು ಕುರಿತು ಹಾಡಿದ ಹಾಡು
ಕವಿ: ಮುರಂಜಿಯೂರ್‌ ಮುಡಿನಾಗರಾಯರ್‌ ಹಾಡಿದುದು

ಹಾಡು- ೨
( ಹುಲಿಯ ಗುಹೆಯಾಗಿದ್ದ ಬಸಿರ್(‌ ಹೊಟ್ಟೆ)

ನನ್ನ ಸಣ್ಣ ಮನೆಯ ಮುಂದಿರುವ
ಬಲಯುತ ಕಂಭವನ್ನು ಹಿಡಿದುಕೊಂಡು
ʼನಿನ್ನ ಮಗ ಎಲ್ಲಿದ್ದಾನೆʼ
ಎಂದು ಕೇಳುತ್ತಿದ್ದೀರಲ್ಲಾ!
ನನ್ನ ಮಗ ಎಲ್ಲಿದ್ದಾನೆ
ಅದನ್ನು ನಾನು ಅರಿಯೆ

ಹುಲಿ ಮಲಗಿದ್ದಂತಹ
ಕಲ್ಲಿನಿಂದಾದ ಗುಹೆಯಂತೆ

( ಆ ಹುಲಿಯಂತಹ) ನನ್ನ ಮಗ
ಇದ್ದ ಬಸಿರ್‌ ಇಗೋ ಇದೇ
ಆದರೆ ಅವನಾದರೂ
ಯುದ್ಧರಂಗದಲ್ಲಿ ಮಾತ್ರ ಕಾಣಸಿಗುತ್ತಾನೆ.
(ಕಾಣಲು ಬಯಸಿದರೆ)
ಅವನನ್ನು ಅಲ್ಲಿಗೆ ಹೋಗಿ ನೋಡಿ

ವಿಶೇಷಾಂಶ: ಚೋಳನ್‌ ಕೋಪ್ಪೆರುಂನರ್‌ ಕಿಳ್ಳಿಯ ಕಾವರ್ಪೆಂಡು (ಸಾಕು ತಾಯಿ) ವೇ ಈ ಕವಯಿತ್ರಿ ಎಂದು ಹೇಳುತ್ತಾರೆ ( ವ. ದ. ರಾಮ)
ಕವಯಿತ್ರಿ: ಕಾವರ್‌ ಪೆಂಡು

ಹಾಡು: ೩

( ದುಡಿವ ಬಡವ)

ಊರಿನೊಳಗೆ ಜಾತ್ರೆಯ ಆಚರಣೆ;
ನನ್ನ ಪತ್ನಿಗೆ ಹೆರಿಗೆಯ ಸಮಯ;
ಸೂರ್ಯ ಮರೆಯಾಗುತ್ತಿದ್ದಾನೆ.
ಮಳೆ ಹೊಯ್ಯುತ್ತಿದೆ.
( ಹೆಂಡತಿಗೂ ನೆರವಾಗಬೇಕುʼ ಜಾತ್ರೆಗೂ ಹೋಗಬೇಕು)
ಇಂಥ ಸ್ಥಿತಿಯಲ್ಲಿ
ಮಂಚಕ್ಕೆ ಹಗ್ಗವ ಹೆಣೆವ

ದುಡಿವ ಬಡವನ ಕೈಯಲ್ಲಿನ
ಚರ್ಮದ ಪಟ್ಟಿಯ ಹೊಲಿವ
ಸೂಜಿಗಿಂತ ವೇಗವಾದುದು

ಊರನ್ನು ಮುತ್ತಿಗೆಯಿಡಲು ಬಂದ ವೀರನೊಡನೆ
ಆತ್ತಿ ಹೂವಿನಿಂದ ಕಟ್ಟಲ್ಪಟ್ಟ ಶಿರಮಾಲೆಯ ಧರಿಸಿ
ಈ ಮಹಾ ವೀರ ಕಿಳ್ಳಿ ಹೂಡುವ ಯುದ್ಧ

ವಿಶೇಷಾಂಶ: ಚೋಳನ್‌ ಪೋರವೈಕ್ಕೋಪ್ಪೆರುನರ್ಕಿಳ್ಳಿ ರಾಜನ ಬಗ್ಗೆ
ಕವಿ ಸಾತ್ತಂದೈಯಾರ್‌ ಹಾಡಿದುದು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x