-೧-
ಸಂಜೆ ಆರೋ ಆರೂವರೆಯೋ ಇರಬಹುದು. ಮೇಲೆ ಕಪ್ಪು ಮೋಡ ಆವರಿಸಿತ್ತು. ರಿವ್ವನೆ ಬೀಸುವ ಶೀತಗಾಳಿ ಮೈ ಅದುರಿಸುವಷ್ಟು. ಕಪ್ಪುಮೋಡದ ನಿಮಿತ್ತವೋ ಏನೋ ಆಗಲೇ ಮಬ್ಬು ಮಬ್ಬು ಕತ್ತಲಾವರಿಸಿದಂತಿತ್ತು. ಕೆಲಸ ಮುಗಿಸಿ ಇಲವಾಲ ಕೆಎಸ್ಸಾರ್ಟೀಸಿ ಬಸ್ಟಾಪಿನಲ್ಲಿ ಮೈಸೂರು ಕಡೆಗೆ ಹೋಗುವ ಸಿಟಿ ಬಸ್ಸಿಗಾಗಿ ಕಾಯುತ್ತಿದ್ದ ಚಂದ್ರನಿಗೆ ಮನೆ ಕಡೆ ದಿಗಿಲಾಗಿತ್ತು. ಆಗಲೇ ಒಂದೆರಡು ಸಲ ಕಾಲ್ ಬಂದಿತ್ತು. ಬೇಗನೆ ಬರುವೆ ಎಂದು ಹೇಳಿಯೂ ಆಗಿತ್ತು. ಹಾಗೆ ಹೇಳಿ ಗಂಟೆಯೇ ಉರುಳಿತ್ತು. ಸಮಯ ಕಳಿತಾ ಕಳಿತಾ ಮನೆ ಕಡೆ ಮತ್ತಷ್ಟು ದಿಗಿಲಾಗಿ ಹೆಂಡತಿ ಮಕ್ಕಳು ಏನು ಮಾಡುತ್ತಿದ್ದಾರೊ.. ಈ ಮಳೆ ಈ ಸಿಡಿಲು ಗುಡುಗಿನಲ್ಲಿ ಕರೆಂಟಂತು ಖಂಡಿತ ಹೋಗಿರುತ್ತದೆ. ಕೈಬಿಡದ ಕಂಕುಳ ಕೂಸು ಬೇರೆ. ಊಟ ಮಾಡಿದ್ದಾರೊ ಇಲ್ಲವೊ.. ಅಥವಾ ಈ ಮಳೆ ಗಾಳಿ ಹೊಡೆತದಲ್ಲಿ ಅಡುಗೆ ಮಾಡಿದ್ದಾರೊ ಇಲ್ಲವೊ.. ಛೇ ಕಾಲ್ ಬಂದಾಗ ಇದನ್ನೆಲ್ಲ ಕೇಳಬಾರದಿತ್ತಾ ಅನಿಸಿತು. ಸದ್ಯ ಈಗ ಮೊಬೈಲ್ ಬ್ಯಾಟರಿ ಬೇರೆ ಡೌನ್ ಆಗಿದೆ. ಏನು ಮಾಡುವುದು.. ಈ ಬಸ್ ಯಾವಾಗ ಬರುತ್ತೆ.. ಈಗ ಮನೆಯಲ್ಲಿ ಅವರೆಲ್ಲ ಏನು ಮಾಡುತ್ತಿರಬಹುದು.. ಇದರೊಂದಿಗೆ ಅವ್ವನ ನೋವು, ಸಂಕಟ, ನರಳಾಟದ ಚಿತ್ರ. ವಯೋ ಸಹಜ ಹಾಸಿಗೆ ಹಿಡಿದ ಅವ್ವ, ತಾನು ಮದುವೆಯಾಗಿ ಬಂದ ದಿನದಿಂದ ಇಲ್ಲೀತನಕದ ತನ್ನ ಪುರಾತನ ಘಟನೆಗಳನ್ನು ನೆನೆದು ಯಾರು ಕೇಳುತ್ತಾರೊ ಬಿಡುತ್ತಾರೊ ಎಂಬುದನ್ನು ಲೆಕ್ಕಿಸದೆ ಅವಳಿಗವಳೇ ಆ ನೋವು ಸಂಕಟದಲ್ಲು ಮಾತಾಡಿಕೊಳ್ಳುವುದು ಮಾಮೂಲಾಗಿ ಕಿವಿಯಲ್ಲಿ ಗುಂಯ್ಞ್ ಗುಡುತ್ತ ಕಣ್ಮುಂದೆ ಬಂದಂತಾಗುತ್ತಿತ್ತು.
ಅವನ ಅವ್ವಳಿಗೆ ನೋವಿನ ಯಾತನೆಯಿಂದಾಗಿ ರಾತ್ರಿಯಲ್ಲಂತು ನಿದ್ದೆ ಇಲ್ಲ. ನರಳುವುದು. ಅಯ್ಯೋ ಉಸ್ಸೋ ಅನ್ನುವುದು ಅವ್ವನ ದಿನಚರಿ ಎಂಬಂತಾಗಿತ್ತು. ಅವ್ವನ ಸಂಕಟ ನೋವು ನೋಡಲಾಗದ ಚಂದ್ರ ಡಾಕ್ಟರಿಗೆ ತೋರಿಸಬೇಕಲ್ಲ ಅಂತ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಅಲ್ಲಿ ಡಾಕ್ಟರ್ ‘ಏನಾಗಿದೆ..’ ಅನ್ನೋದೇ ತಡ – ಕಣ್ಣುರಿ, ಕಾಲುರಿ, ಮೂಗುರಿ, ತಲೆಹಿಡ್ತ, ನಾಲ್ಗ ಕಚ್ಚಿಡ್ಕಳದು, ಬೆಕ್ಕುಳ್ಸೋದು, ಬೆನ್ನಿಡ್ತ, ಕಂಕ್ಳಿಡ್ತ, ಮಂಡಿಹಿಡ್ತ, ಕೀಲ್ನೋವು, ಹೊಟ್ಟುರಿ – ಹೀಗೆ ಇನ್ನು ಏನೇನೊ ಅವ್ವ ಹೇಳುವ ಪಟ್ಟಿಗೆ ಡಾಕ್ಟರೇ ಸುಸ್ತು. ಇಂಥ ನೋವು ಯಾತನೆ ತುಂಬಿಕೊಂಡು ನರಳುವ ಅವ್ವನ ಬಗ್ಗೆಯೂ ದಿಗಿಲು ಚಂದ್ರನಿಗೆ.
ಅಯ್ಯೋ ಇಷ್ಟೊತ್ತಾದರು ಇನ್ನೂ ಒಂದ್ ಬಸ್ ಬಂದ ಹಾಗೆ ಕಾಣಲಿಲ್ಲ. ಬರೀ ರಸ್ತೆ ನೋಡುವುದೇ ಆಯ್ತು.. ಥೂತ್ತೇರಿ.
ಈ ಎಲ್ಲ ನೋವಲ್ಲು ಅವನ ಅವ್ವ ತನ್ನ ಸಮಾದಾನಕ್ಕೊ ಇನ್ನೇನಕ್ಕೊ ಹೇಳುತ್ತಿದ್ದ ಅವಳ ಹಳೇಗಾಲದ ಕಥೆಗಳು ಈ ಕಾಲಕ್ಕೆ ಅಂದಾಜಿಸಿಕೊಂಡರೆ ಅವು ಬಹಳ ರೋಚಕವಾಗಿ ಬೆಚ್ಚಗೆ ಕೇಳುವಂತಿದ್ದವು. ಇವೆಲ್ಲವನ್ನು ಚಂದ್ರ ಕುಂತು ಕೇಳದಿದ್ದರು ಓಡಾಡ್ತ, ಕೆಲ್ಸ ಮಾಡ್ತ, ಊಟ ಮಾಡ್ತ ಕಿವಿಗೆ ತಾನಾಗೇ ತೂರಿಕೊಳ್ಳುತ್ತಿದ್ದುದ ಬಿಸಾಕುವ ಮಾತೇ ಇಲ್ಲ. ಅವ್ವನ ಈ ಕಥೆಗಳು ಗೊತ್ತೊ ಏನೊ.. ಕೆಲವಂತು ಅಸ್ಪಷ್ಟ. ಇವು ಚಂದ್ರನಿಗೆ ಯಾವಾಗ್ಯಾವಾಗಲೋ ಆಗಾಗ ನೆನಪಿಗೆ ಬಂದು ಬಿಡುತ್ತವೆ. ಆಗ ಏನೊ ನೆಪದಲ್ಲಿ ಅವ್ವನಲ್ಲಿಗೆ ಹೋಗಿ ಸಲುಗೆಯಿಂದ ತನಗಿಷ್ಟವಾದ ಸಂಗತಿ ಕೇಳಲು ಸುಮ್ಮನೆ ಕೆದಕುತ್ತಾನೆ. ಅವಳು ಹಗುರಾದವಳಂತೆ ಎದ್ದು ಕುಂತು ಮುಖದಲ್ಲೆ ನಕ್ಕು ಚಂದ್ರನನ್ನು ನೋಡಿ ಅವೆಲ್ಲವನ್ನು ಮತ್ತೆ ರಿಪೀಟ್ ಮಾಡಿ ಹೇಳತೊಡಗುವಳು. ಹಾಗೆ ಅವನು ಕುತೂಹಲಕ್ಕೊ ಇನ್ನೇನಕ್ಕೊ ಕೆಲವು ಸಂಗತಿಗಳನ್ನು ಕೆದಕಿ ಕೆದಕಿ ಪದೇ ಪದೇ ಕೇಳುವನು. ಅದರಲ್ಲಿ ಅವಳು ತನ್ನ ಜೊತೆ ಬದುಕಿ ಬಾಳಿದ ಅಕ್ಕಪಕ್ಕದವರು, ಮನೆಯ ಓರಗಿತ್ತಿಯರು, ಬಾವ, ಮೈದ, ತನ್ನಿಡೀ ಮನೆ ಮಕ್ಕಳು ಅಳಿಯ ಸೊಸೆ ಬೀಗ ಬೀಗತೀಯರು, ಊರು, ಊರೊಕ್ಕಲುತನವೇ ತುಂಬಿರುತ್ತಿತ್ತು.
ಇಷ್ಟೊತ್ತಿಗೆ ಬಸ್ ಹತ್ತಿದ್ದರೆ ಅರ್ಧ ಮುಕ್ಕಾಲು ದಾರಿ ಸಾಗಬಹುದಿತ್ತೇನೊ. ಆದರೆ ಗಂಟೆಯಿಂದ ಕಾದರೂ ಬಸ್ ಇಲ್ಲ.
ಅದಿರಲಿ ಈ ಬಸ್ಟಾಪಲ್ಲಿ ಜನವೊ ಜನ. ಒಂದು ಬಸ್ ಬಂದರೂ ಓಡೋಡಿ ಹೋಗಿ ಹೇಗಾದರು ಸರಿ ಒಳ ಹತ್ತಿ ತೂರಿಕೊಂಡರೆ ಸಾಕಿತ್ತು. ಸಿಟಿ ಬಸ್ ಇಲ್ಲದ್ದಿದ್ದರು ಪರವಾಗಿಲ್ಲ ಕೆಂಪು ಲೈನ್ ಬಸ್ ಬಂದರೂ ಸಾಕಿತ್ತು ಸಬರ್ಬನ್ ಬಸ್ಟ್ಯಾಂಡ್ ತಲುಪಿ ಅಲ್ಲಿಂದ ಹೇಗೋ ಊರು ಸೇರಿಕೊಳ್ಳಬಹುದಿತ್ತು. ಆದರೆ ಅವೂ ಇಲ್ಲ. ಈ ಗಾಳಿ ಹೊಡೆತದಲ್ಲಿ ಆತರದ ಕೆಂಪು ಬಸ್ ಅಲ್ಲೊಂದು ಇಲ್ಲೊಂದು ಅಂತ
ಬಂದರೂ ಅದರಲ್ಲಿ ಒಬ್ಬಿಬ್ಬರು ಇಳಿವವರನ್ನು ಬೇಗಬೇಗ ಇಳಿಸಿ ಇಲ್ಲಿ ನಿಂತಿದ್ದ ಗಜಗಾತ್ರದ ಜನ ನೋಡಿಯೊ ಏನೊ ಕಂಡಕ್ಟರ್ ಸೀಟ್ ಫಿಲ್ ಅಂತಾನೊ, ನಿಲ್ಲೋಕೆ ಜಾಗ ಇಲ್ಲ ಅಂತಾನೊ, ಏನೊ ಒಂದು ನೆಪ ಹೂಡಿ ರೈಟ್ ರೈಟ್ ಅಂದು ಬಿಡುತ್ತಿದ್ದ. ಅದರಲ್ಲು ಈ ಮೋಡದ ವಾತಾವರಣದ ಬೀಸುವ ಶೀತಗಾಳಿಯಲ್ಲಿ ಕೇಳಬೇಕೆ.. ಕಂಡಕ್ಟರ್ ರೈಟ್ ಅನ್ನುವ ಮುನ್ನವೇ ಸೈಡ್ ಮಿರರ್ ನೋಡ್ತಾ ನೋಡ್ತಾನೇ ಡ್ರೈವರ್ ಬಸ್ ಮೂವ್ ಮಾಡುತ್ತಿದ್ದದ್ದು ಮಾಮೂಲಿಯಾಗಿತ್ತು.
ಈ ಶೀತಗಾಳಿಯೋ ನಿಲ್ಲುವ ಸೂಚನೆ ಖಂಡಿತ ಇರಲಿಲ್ಲ. ಅದರೊಂದಿಗೆ ಗುಡುಗು ಸಿಡಿಲು ಮಿಂಚು. ಇದರೊಂದಿಗೆನೆ ಮಳೆ ಪಟಪಟನೆ ಉದುರ ತೊಡಗಿತು. ಧೋ.. ಅಂತ ಮಳೆ ಸುರಿಯುತ್ತ ಅದರ ನಡುವೆಯೇ ಐದಾರು ಕೆಂಪು ಲೈನ್ ಬಸ್ ಭರಗುಟ್ಟುತ್ತಾ ಹೋದವು. ಚಂದ್ರನಿಗೆ ಥತ್ ಅನ್ನಿಸಿತು.
ಇದೇ ಹೊತ್ತಲ್ಲಿ ಒಂದು ಗುಂಪು ಮಳೆಯಲ್ಲಿ ನೆನೆಯುತ್ತ ಓಡೋಡಿ ಬಂತು. ಚಂದ್ರನಿಗೆ ಮಳೆ ನಿಂತು ಬಸ್ ಬಂದರೆ ಸಾಕಿತ್ತು. ಇದರ ಹೊರತು ಯಾರ ಮೇಲೂ ಯಾವುದರ ಮೇಲೂ ದಿಗಿಲಿಲ್ಲದವನಂತೆ ರಸ್ತೆ ಕಡೆನೇ ನೋಡ್ತ ನಿಂತಿದ್ದ. ಹಾಗೆ ಓಡಿ ಬಂದ ಗುಂಪಿನ ವ್ಯಕ್ತಿಯೊಬ್ಬ ಚಂದ್ರನ ಹತ್ತಿರ ಬಂದು ಗುರುತು ಹಿಡಿದವನಂತೆ ಊರು ಕೇರಿ ಇಂಥವರ ಮಗ ಅಂತೆಲ್ಲ ಕೇಳಿದ. ಚಂದ್ರನೂ ಆ ವ್ಯಕ್ತಿಯನ್ನು ಎಲ್ಲೊ ನೋಡಿದ ಗುರುತು. ಅದೂ ಸರಿಯಾಗಿ ಗೊತ್ತಾಗುತ್ತಿಲ್ಲ. ಇಷ್ಟಾಗಿಯೂ ಅವರು ಮುಖ ತಿರುಗಿಸದೆ ಪರಿಚಯ ಇರುವವನಂತೆ ‘ಓ ಬನ್ನಿ ಬನ್ನಿ ಏನಿಲ್ಲಿ ನೀವು.. ನೋಡಿ ಮಳೆ ಯಾವ್ತರ ಉಯ್ತಿದೆ’ ಅಂತ ಹೇಳ್ತ ಒಳಗೊಳಗೆ ಯಾರಿಂವ.. ಎಲ್ಲೊ ನೋಡಿದಂಗಿದೆ ಅನ್ನಿಸ್ತಿದೆ. ಆದ್ರೆ ಎಲ್ಲಿ.. ಯಾರು.. ಅಂತ ಗೊತ್ತಾಗ್ತ ಇಲ್ವಲ್ಲ ಅಂದುಕೊಂಡ.
ಮಳೆ ಮತ್ತೆ ಜೋರಾಯ್ತು. ಆ ಗಾಳಿಯೋ ಎಲ್ಲರನ್ನು ತೂರಿಕೊಂಡು ಹೋಗುವಂತೆ ಬೀಸ ತೊಡಗಿತು.
ಇದರ ನಡುವೆ ಅಲ್ಲೆ ಹಿಂದಿನಿಂದ ಯಾರದೊ ಕೇಕೆ ಸದ್ದು ಕೇಳಿತು. ನಿಂತಿದ್ದ ಜನ ಚದುರಿದಂತೆ ತೋರಿತು. ಇವರು ಇವರ ಪಾಡಿಗೆ ಮಾತಾಡುತ್ತಲೇ ಇದ್ದರು. ಅಲ್ಲಿ ನಿಂತಿದ್ದ ಜನರೊ ದಿಕ್ಕಾಪಾಲಾದವರಂತೆ ಅಲ್ಲಲ್ಲೆ ಸುತ್ತು ಹಾಕ ತೊಡಗಿದ್ದರು. ಜನರ ನಡುವೆ ತೂರಿ ಬಂದವಳು ಯಾರೋ ಹುಡುಗಿ ಇರಬೇಕು. ಇಲ್ಲ ಇಲ್ಲ ಹೆಣ್ಣೆಂಗಸು ಇರಬೇಕು. ಇದ್ಯಾವುದೂ ಖಚಿತವಾಗಿ ಗೊತ್ತಾಗುತ್ತಿಲ್ಲ. ಅಷ್ಟೊತ್ತಿಗೆ ಕರೆಂಟ್ ಹೋಯ್ತು. ಇಡೀ ಕೆಎಸ್ಸಾರ್ಟಿಸಿ ಬಸ್ಟ್ಯಾಂಡ್ ಒಳ ಆವರಣ ಕತ್ತಲು ಕತ್ತಲು. ಈಗ ಜನರ ಮಧ್ಯೆ ಒಂದೆರಡು ಮೊಬೈಲ್ ಟಾರ್ಚ್ಗಳು ಬೆಳಗಿದವು. ಕೇಕೆ ಹಾಕುತ್ತಾ ತೂರಿ ಬಂದವಳ ತಲೆಗೂದಲು ರಟ್ಟುಗಟ್ಟಿ ಕೆದರಿದಂತಿತ್ತು. ಹಲ್ಲು ಕಿರಿದು ಕೆಕ್ಕರಿಸಿ ನೋಡುತ್ತ ನಗಾಡ ತೊಡಗಿದಳು. ಅವಳ ನಗು, ನೋಟ, ಬಂದ ರಭಸ, ಕೊಳೆಯಾದ ಅವಳ ಬಟ್ಟೆ ನೋಡುತ್ತಿದ್ದ ಕೆಲವರು ಮೂಗು ಮುಚ್ಚಿಕೊಂಡವರಂತೆ ಕಂಡರು. ಅವಳು ತೊಟ್ಟಿದ್ದ ಲಂಗದಾವಣಿ ಹರಿದು ಜೂಲಾಗಿತ್ತು. ಆ ಜೂಲಾಗಿದ್ದ ಲಂಗ ಮೇಲೆತ್ತಿ, ಮತ್ತೆ ಕೆಳಬಿಟ್ಟು ಹತ್ತಿರತ್ತಿರ ಬಂದಂಗೆ ಚಂದ್ರ ತಿರುಗಿ ನೋಡಬೇಕು ಅಷ್ಟರಲ್ಲಿ ಅವಳು ಅವನ ಬೆನ್ನಿಗೆ ರಪ್ಪಂತ ಗುದ್ದೀ ಗುದ್ದೀ ಗುದ್ದುತ್ತಲೇ ‘ಏಯ್ ನಾಯಿ ನನ್ಮಗ್ನೆ ದಾರಿ ಬುಡಲೇಯ್.. ನಾ ಬತ್ತಿರದು ಗೊತ್ತಿಲ್ವ ನಿನ್ ಬುಂಡ್ಗ ನನ್ನುಚ್ಚ ಉಯ್ಯ ಬೇವರ್ಸಿ ಮುದೇವಿ’ ಅಂತ ಬೈದು ದಡಕ್ಕನೆ ಕೆಳಗಿಳಿದು ಕೇಕೆ ಹಾಕುತ್ತ ಆ ಮಳೆಯೊಳಗೇ ಓಡಿ ಮತ್ತೆ ಹಂಗೇ ತಿರುಗಿ ಮೇಲತ್ತಿ ಬಂದು ಒಳಗೋದಳು.. ಆಗ ಎದುರು ನಿಂತು ಮಾತಾಡುತ್ತಿದ್ದವನು ಅವಳ ಕಡೆ ಕೈತೋರಿದವನಂತೆ ಕಂಡರೂ ಚಂದ್ರನಿಗೆ ಹೊಡೆದ ಅವಳ ಹೊಡೆತಕ್ಕೊ ಬೈಗುಳಕ್ಕೊ ಅವಳ ಆಕಾರಕ್ಕೊ ಏನೋ ಅಂಜಿದವನಂತೆ ತನ್ನ ಗುಂಪಿನ ಕಡೆ ಮೆಲ್ಲಗೆ ಸರಿದಿದ್ದ. ಇಷ್ಟಾದರು ಚಂದ್ರ ಏನೂ ಆಗಿಲ್ಲವೇನೊ ಅನ್ನೊತರ ಅದ್ಯಾಕೊ ಏನೊ ತನ್ನ ಬೆನ್ನಿಗೆ ಗುದ್ದಿ ಓಡಿ ಹೋದವಳನ್ನೇ ಒಂದೇ ಸಮನೆ ದಿಟ್ಟಿಸತೊಡಗಿದ.
ಹೀಗೆ ಅವನ ಕಣ್ಣುಗಳು ಬಿಟ್ಟೂ ಬಿಡದೆ ಅವಳತ್ತಲೇ ನೋಡ್ತನೋಡ್ತಾ ಅವನವ್ವ, ಅಪ್ಪ ಅಣ್ಣ ಅಕ್ಕಂದಿರಲ್ಲಿ ಆಗಾಗ ಬಿತ್ತರವಾಗುತ್ತಿದ್ದ ಗತಕಾಲದ ಮೆಲಕುಗಳು, ಹಾಗೇ ಅವನವ್ವನ ಅತ್ತೆ. ಆ. ಅತ್ತೆಯ ವಾರಗಿತ್ತಿ ಕುಲದ ಹಿರೀಕಳು ನವುಲೂರಮ್ಮಳು ಅವನ ದೊಡ್ಡವ್ವ ಮತ್ತು ಮಗಳು ನೀಲಳ ಬಗ್ಗೆ ಆಡುತ್ತಿದ್ದ ಬಿಡುಬೀಸಾದ ಆ ಮಾತುಗಳು ಮತ್ತೂ ಮುಂದುವರಿದು ಅವಳ ಮಕ್ಕಳು ಸೊಸೇರ ಕೊಂಕುಗಳು ರಪ್ಪನೆ ಎರಗಿ ಒಮ್ಮೆಲೆ ಮರುಕಳಿಸಿದಂತಾಗಿ ಅವೆಲ್ಲ ಒಮ್ಮೆಲೆ ಒತ್ತರಿಸಿ ಮೈಮನವನ್ನು ಆವರಿಸಿ ಅವನ ದೊಡ್ಡವ್ವ ದೊಡ್ಡಪ್ಪ, ದೊಡ್ಡಪ್ಪನ ಮಗಳು ನೀಲ – ನೀಲಕ್ಕ ಎದುರಾಗಿ ಗಹಗಹಿಸಿ ನಕ್ಕಂತಾಯ್ತು.
ಆಗ ಅವನಿನ್ನು ಚಿಕ್ಕವನು. ಅವನ ಮನೆಯ ಗೋಡೆ ಒತ್ತಿಗಿದ್ದ ತೆಂಗಿನ ಮರ ಒರಗಿ ನಿಂತಿರುತ್ತಿದ್ದ ನೀಲ ಸುಮ್ಮನೆ ನಗೋಳು. ಬೀದಿಯಲ್ಲಿ ತಿರುಗಾಡುವವರು ಏನಾದರು ತಿನ್ನುತ್ತಾ ಹೋಗುತ್ತಿದ್ದರೆ ಕೇಳೋಳು. ಅವರು ಗೊಣಗುಟ್ಟುತ್ತಲೇ ದೂರ ನಿಂತು ಕೊಡೋರು. ಅವರು ಕೊಟ್ಟದ್ದನ್ನು ನೀಲ ಈಸಿಕೊಂಡು ಹಲ್ಲು ಕಿರಿದು ನಕ್ಕು ಬಾಯಿಗಾಕಿ ತಿನ್ನುತ್ತ ನಿಂತಲ್ಲಿಗೇ ಬಂದು ನಿಲ್ಲೋಳು.
ಅವಳು ನಿಲ್ಲುವ ತೆಂಗಿನ ಮರದ ಒತ್ತಿಗೆನೆ ಇರುವ ಗೋಡೆಯ ಮಗ್ಗುಲಿಗೆ ಎರಡು ಚಿಕ್ಕ ಮರದ ಗೂಟಗಳಿದ್ದವು. ಚಂದ್ರನ ಅಪ್ಪ ಶಿವಯ್ಯ ಗೇಯುವ ತನ್ನೆರಡು ಹಸುಗಳನ್ನು ಆ ಗೂಟಕ್ಕೆ ಕಟ್ಟಿ ಹುಲ್ಲು ಹಾಕಿ ನೀರು ಕುಡಿಸುತ್ತ ನೀಲಳ ಕಡೆ ತಿರುಗಿ ಗುರಾಯಿಸಿ ಅವಳು ಅಲ್ಲಿ ನಿಲ್ಲದಂತೆ ತಾಕೀತು ಮಾಡಿ ರೇಗುತ್ತಿದ್ದುದು ದಿನನಿತ್ಯದ ಕೆಲಸವಾಗಿತ್ತು. ಅವನು ಹಾಗೆ ರೇಗಲು ಒಂದು ಕಾರಣವೂ ಇತ್ತು. ತೆಂಗಿನ ಮರವೆಂದರೆ ದೇವರ ಸಮಾನ. ಅವನ ದೃಷ್ಟಿಯಲ್ಲಿ ಮುಕ್ಕಣ್ಣೇಶ್ವರ. ಆ ಮುಕ್ಕಣ್ಣೇಶ್ವರನಿಗೆ ಮುಟ್ಟು ತಟ್ಟು ಆಗದು. ಮುಟ್ಟು ತಟ್ಟಿನವರೇನಾದರು ಆ ಮರವನ್ನು ಮುಟ್ಟಿಯೋ ಒರಗಿಯೋ ನಿಂತರೆ ಆ ಮರಕ್ಕೆ ರೋಗ ಬಂದು ಗೊಡ್ಡಾಗಿ ಫಲ ನಿಂತು ಆ ನಿಂತ ಫಲದ ಶಾಪ ಮನೆಮಂದಿಗೆಲ್ಲ ಸುತ್ತಿಕೊಳ್ಳುತ್ತೆ ಅನ್ನುವ ಭೀತಿ ಇತ್ತು.
ನೀಲ ಮುಟ್ಟಾಗುತ್ತಿದ್ದುದು ಎಲ್ಲರಿಗೂ ಗೊತ್ತಿರುವಂಥದ್ದೇ. ಹೆಣ್ಣಿನ ಮುಟ್ಟು ಅದೇನು ಹೊಸ ವಿಚಾರವಲ್ಲ. ಆದರೆ ಅವಳು ಮುಟ್ಟಾದರೆ ಆ ಮುಟ್ಟಿನ ರಕ್ತ ತೊಟ್ಟಿದ್ದ ಲಂಗ ದಾವಣಿಯನ್ನೆಲ್ಲ ಅಲ್ಲಲ್ಲಿ ಚಿತ್ರ ಚಿತ್ತಾರವಾಗಿ ರಚಿಸಿತ್ತು. ಆ ಚಿತ್ರ ಚಿತ್ತಾರದಂತಿದ್ದ ರಕ್ತದ ಕಲೆ – ಲಂಗದಾವಣಿಯ ಕೆಳಗೆ ಮೇಲೆ ಪಟ್ಟುಪಟ್ಟಿನ ಹಾಗೆ ಮೆತ್ತಿಕೊಂಡು ಅದು ಒಣಗಿ ರಟ್ಟುಗಟ್ಟಿಕೊಂಡು ಕೆಂಪಗೆ ಕಪ್ಪಗೆ ಕಾಣುತ್ತಿತ್ತು. ಅದನ್ನು ಅವಳ ಅವ್ವ ಚೆನ್ನಬಸವಿನೊ ತಂಗಿ ಶಿವಿಯೊ ‘ಏಯ್ ನಿಂಗ ಗ್ಯಾನ ಗೀನ ಇಲ್ವ ಮುಟ್ಟಾಗಿರದು ಗೊತ್ತಿಲ್ವ.. ಜನ ಏನಂದರು.. ಬಂದು ಬಟ್ಟ ಬಿಚ್ಚಾಕಿ ನೀರುಯ್ಕಂಡು ಬೇರೆ ಬಟ್ಟ ಹಾಕಳಕಿಲ್ವ..’ ಅಂದ್ರೆ ಅವರನ್ನೇ ದುರುದುರು ನೋಡಿ ದಾಪುಗಾಲಾಕಿ ಹೋಗಿ ಅವರ ಮುಂದಲೆ ಹಿಡಿದು ‘ನಂಗೆ ಗ್ಯಾನ ಇಲ್ಲ ಅಂದಯ ನಾಯಿ ಮುಂಡ..’ ಅಂತ ಜಾಡಿಸಿ ಒದೆಯೋಳು.
ಶಿವಯ್ಯ ಇದನ್ನೆಲ್ಲ ಕಂಡಿದ್ದ. ಅವನೇ ಕೆಲವು ಸಲ ಆತರದ ಗಳಿಗೇಲಿ ಅವರಿಗೆ ಬುದ್ದಿ ಹೇಳಿ ಬಿಡಿಸಿ ಕಳಿಸಿದ್ದ. ಆದರೆ ಅವನೂ ಆಗಾಗ ಇದರ ಬಗ್ಗೆ ವರಾತ ತೆಗೆದು ನೆಟ್ಟ ಮರದ ಗೂಟ ಕಿತ್ತುಕೊಂಡು ಹೊಡೆಯಲು ಹೋಗುತ್ತಿದ್ದ. ಈತರ ಆಗಿ ಅವರಿವರು ಬಂದು ಬಂದು ನೋಡೋರು. ನೋಡಿದರು ಏನೂಂದೂ ಮಾತಾಡದೆ ಸುಮ್ಮನಾಗೋರು.
ಚಂದ್ರನ ಅಪ್ಪ ಶಿವಯ್ಯನೇ ಅಲ್ಲ ಅವರ ಮನೆಯ ಇನ್ನೂ ಕೆಲವರು ನೀಲಳನ್ನು ಇದೇ ಕಾರಣಕ್ಕೆ ಎಡಬಿಡದೆ ರೇಗುವುದು ಹೊಡೆಯುವುದು, ಅವಳು ನಿಂತ ಕುಂತ ಮರದ ಬುಡಕ್ಕೆ ಗೊಬ್ಬಳಿ ಮುಳ್ಳು ಕಾರಕುತ್ರ ತಂದು ಹಾಕಿ ಅವಳು ಒರಗಿ ನಿಂತುಕೊಳ್ಳದಂತೆ ಮರದ ಸುತ್ತ ಕಟ್ಟೋರು. ಆಗ ಅವಳು ಶಿಶುವಾರದ ಜಗುಲಿ ಅಂಚಿಗೆ ನಿಂತು ನೋಡ್ತಾ ಅವರ ಪಾಡಿಗೆ ಅವರು ಏನಾದ್ರು ಕಟ್ಟಿ ಕೊಳ್ಳಲಿ ಅಂತ ಕೇರು ಮಾಡದೆ ರಾತ್ರಿ ಎಲ್ಲರು ಮಲಗಿದ ಮೇಲೆ ಕಾಲುವೆ ಏರಿ ಕಡೆ ಒಬ್ಬಳೇ ಹೋಗುವಳು. ಅದೆಲ್ಲಿ ಹುಡುಕಿದಳೊ ಹೊರಲಾರದ ಒಂದು ದಪ್ಪ ಸೈಜುಗಲ್ಲು ಹೊತ್ತುಕೊಂಡು ಬಂದು ಅವರು ಕಟ್ಟಿದ್ದ ಆ ಮುಳ್ಳಿನ ಹೊತ್ತೊತ್ತಿಗೇ ಆ ಸೈಜುಗಲ್ಲನ್ನು ಇಟ್ಟು ಕೂರೋಳು. ಕೆಲ ದಿನಗಳ ನಂತರ ಆ ಸೈಜುಗಲ್ಲೂ ಮಾಯವಾಗಿ ಇತ್ತ ನೀಲ ರಾತ್ರೋ ರಾತ್ರಿ ಮರಕ್ಕೆ ಕಟ್ಟಿದ್ದ ಮುಳ್ಳನ್ನು ಕಿತ್ತು ದಂಡಿನಮಾರಿ ಬೇಲಿ ಕಡೆ ಎಸೆದು ಬಂದು ಮರದ ಸುತ್ತ ಉದುರಿದ್ದ ಮುಳ್ಳು ಕಸಕಡ್ಡಿನೆಲ್ಲ ಗುಡಿಸಿ ಎತ್ತಾಕಿ ಹಂಗೇ ಒರಗಿ ನಿಂತಳು. ಈತರ ಎಷ್ಟೋ ಸಲ ಆಗಿ ಆಗಿ ಶಿವಯ್ಯನಿಗೆ ಥುತ್ ಅನ್ನಿಸತೊಡಗಿತು.
ಹೇಳಿ ಕೇಳಿ ಶಿವಯ್ಯನ ಮನೆ ಇದ್ದುದು ಸಂದಿ ಕಡೆ. ಸಂದಿ ಮನೆ ಅಂತಾನೆ ಕರಿತಿದ್ದದ್ದು. ಆ ಮನೆ ಬಾಗಿಲೂ ಸಂದಿ ಕಡೆನೆ ಇದ್ದುದು.. ಅಲ್ಲಿಂದಲೇ ತಿರುಗಾಡುವುದು. ಈ ಕಡೆಯಿಂದ ಒಂದಾಳು ಹೋಗುತ್ತಿದ್ದರೆ ಆ ಕಡೆಯಿಂದ ಒಂದಾಳು ಬಂದರೆ ತಗುಲಿಕೊಂಡೇ ಹೋಗಬೇಕು. ಇಲ್ಲ ಮೈ ಓರೆ ಮಾಡಿಕೊಂಡು ಹೋಗಬೇಕು. ಅಷ್ಟು ಕಿರಿದು ಆ ಸಂದಿ. ಅವನ ತಮ್ಮ ಸಿದ್ದಯ್ಯನದೂ, ಅಣ್ಣ ನಿಂಗಯ್ಯನದೂ.. ಅಂದ್ರೆ ನೀಲಳ ಮನೆ ಇದ್ದುದೂ ಆ ಕಡೆನೆ. ಎಲ್ಲರ ಮನೆ ಬಾಗಿಲೂ ಉತ್ತರ ದಿಕ್ಕಿಗೆ.
ಶಿವಯ್ಯನ ಅಪ್ಪ ಸತ್ತ ಮೇಲೆ ದೊಡ್ಡ ಮನೆಯೊಂದು ಅವ್ವ ಅಡಿನಿಂಗಿಯ ಸುಪರ್ದಿಯಲ್ಲಿ ಮೂರು ಭಾಗವಾಗಿತ್ತು. ಅಡಿನಿಂಗಿ ನಡುಕಲವನಾದ ಶಿವಯ್ಯನ ಜೊತೆ ಇರಲು ಒಪ್ಪಿಕೊಂಡಾಗ ಆಜ್ಪಾಲು ಅಂತ ಶಿವಯ್ಯನಿಗೇ ಉಳಿದು ಅವರಿಬ್ಬರಿಗಿಂತ ಇವನಿಗೆ ಜಾಸ್ತಿ ಜಾಗ ಸಿಕ್ಕಿತ್ತು. ಶಿವಯ್ಯನ ಹತ್ತನ್ನೊಂದು ಮಕ್ಕಳ ಕುಟುಂಬಕ್ಕೀಗ ಅಡಿನಿಂಗಿಯ ವಾಸ್ತವ್ಯದಿಂದ ವರವೇ ಆಯ್ತು. ಹೊಲಗದ್ದೆಯೂ ಸಿಕ್ಕಿತು. ನಿಂಗಯ್ಯನ ಹೆಂಡತಿ ಚೆನ್ನಬಸವಿಗೆ ನೀಲಳ ನಂತರ ಎರಡು ಗಂಡು ಒಂದು ಹೆಣ್ಣಾಯಿತು. ಸಿದ್ದಯ್ಯನಿಗೆ ಮಕ್ಕಳ ಫಲವೇ ಇಲ್ಲದಾಗಿ ಅವನ ಹೆಂಡತಿ ದುಂಡಿಗೆ ಎಲ್ಲದಕ್ಕು ಶಿವಯ್ಯನ ಮಕ್ಕಳೇ ಗತಿಯಾಗಿ ಆ ಗತಿಯ ಕಾರಣ ಒಳಗೇ ಕುದಿಯೊಂದು ಬೇಯುತ್ತಿತ್ತು. ಹಾಗಾಗಿ ಅವರೆಲ್ಲರ ಹೊಟ್ಟೆಯಲ್ಲಿ ಶಿವಯ್ಯ ಮತ್ತವನ ಮಕ್ಕಳ ಮೇಲೆ ಆ ಕುದಿಯ ಕಾವು ಆಗಾಗ ಒಳಗೊಳಗೇ ಜರುಗುತ್ತಿತ್ತು.
ಇದನ್ನೆಲ್ಲ ಚಂದ್ರ ಜಗುಲಿ ಮೇಲೊ ವಯನುಗ್ಗೆ ಮರದ ಬುಡದ ಕೆಳಗೆ ಕುಳಿತೊ ನೋಡ್ತ ಕೇಳ್ತಿದ್ದ. ಆದರೆ ನೀಲ ಯಾರ ರೇಗುವಿಕೆಗೂ ಬಡಪಟ್ಟಿಗೆ ಬಗ್ಗುವವಳಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಹಾಗೆ ಅವಳನ್ನು ರೇಗುವವವರು ಅವಳ ಮೇಲಿನ ಸಿಟ್ಟಿಗಲ್ಲ ಬದಲಿಗೆ ಸುಮ್ಮನೆ ಬೆದರಿಸಿ ಅಲ್ಲಿಂದ ಕಳಿಸುವುದೇ ಆಗಿತ್ತು ಎಂದುಕೊಂಡರು ಎಷ್ಟೋ ಸಲ ನಿಜವಾಗಿಯೂ ರೇಗಿ ಹೊಡೆದು ಕಳಿಸಿದ್ದಿದೆ.
ಒಂದು ದಿನ ಚಂದ್ರನ ಕಿರಿ ಅಣ್ಣ ಸೂರಿ ತಾನು ಕುಯ್ದು ತಂದಿದ್ದ ಹಸಿಹುಲ್ಲಿನ ಹೊರೆಯಲ್ಲಿ ಕಾಚಕ್ಕಿ ತೆನೆ ಇದ್ದದ್ದು ಕಂಡು ಅವಳು ಅದನ್ನು ಬಿಚ್ಚಿ ಒದರಿ ಕಾಚಕ್ಕಿ ತೆನೆ ಕಿತ್ತು ಸೀರೆ ಸೆರಗಿಗೆ ಕಟ್ಟಿಕೊಂಡು ಒಂದೊಂದೆ ಒಂದೊಂದೆ ಉಜ್ಜಿ ಉಜ್ಜಿ ಉರುಬಿ ತಿನ್ನುತ್ತಿದ್ದರೆ ಕಾಚಕ್ಕಿ ಹಾಲ್ನೊರೆ ಬಿಟ್ಟು ಅವಳ ಕಟಬಾಯಿಯಿಂದ ಈಚೆ ಬಂದು ಸೋರುತ್ತ ಅದನ್ನು ಅವಳು ಎಡಗೈಯಿಂದ ಒರೆಸಿ ಮತ್ತಷ್ಟು ತೆನೆ ತೆಗೆದು ಉಜ್ಜಿ ಉಜ್ಜಿ ತಿನ್ನುತ್ತಿದ್ದಳು. ಇದನ್ನು ಕಂಡ ಸೂರಿ ಸಿಟ್ಟಾಗಿ ಹುಣಸೇ ಸಬ್ಬೆ ತಂದು ರೇಗುತ್ತ ಓಡಾಡಿಸಿಕೊಂಡು ಮೈಯೆಲ್ಲ ಬಾಸುಂಡೆ ಬರುವಂತೆ ಹೊಡೆದ ಏಟಿಗೆ ನೀಲ ಒಂದೆರಡು ದಿನ ನಾಪತ್ತೆಯಾಗಿದ್ದಳು. ಇದರಿಂದ ನೀಲಳ ಅವ್ವ ನಿಗಿನಿಗಿ ಕೆಂಡವಾಗಿ ಲಕಲಕನೆ ಬೈಯುತ್ತ ಊರು ಕೇರಿ ಸುತ್ತಿ ಸಾಕಾದರು ನೀಲ ಸಿಗದೆ ಬೀದಿಯಲ್ಲಿ ಧೂಳೆರಚುತ್ತ ಹಿಡಿಶಾಪ ಹಾಕಿದ್ದಳು. ಇದೆಲ್ಲವನ್ನು ನೋಡುತ್ತ ಕೇಳುತ್ತಿದ್ದ ಶಿವಯ್ಯನಿಗೆ ಥೂ ಅನ್ನಿಸಿ ಸೂರಿಯನ್ನು ಕರೆದು ಕ್ಯಾಕರಿಸಿ ಉಗಿದು ಮನೆಯೊಳಗೆ ದೊಡ್ಡ ರಂಪವಾಗಿತ್ತು. ಇದರಿಂದ ಸೂರಿ ಬೆದರಿದಂತೆ ಕಂಡರು ಅದನ್ನು ತೋರಿಸಿಕೊಳ್ಳದೆ ರಾತ್ರಿ ಹೊತ್ತು ಬಂದವನು ಕುಡಿದು ಚಿತ್ತಾಗಿದ್ದ. ಅವನ ರಂಪಾಟ ರೇಗಾಟ ನೀಲಳ ಅವ್ವ ಚೆನ್ನಬಸವಿಗಿಂತಲೂ ಜೋರಿತ್ತು. ಬೀದಿಯಲ್ಲಿ ನಿಂತು ಬೈಯುತ್ತಿದ್ದ ಸೂರಿ ನೀಲನ ಅವ್ವ ಚನ್ನಬಸವಿಯನ್ನು ಲುಚ್ಚ ಲೌಡಿ ಅಂತ ಕೂಗಿ ‘ಏಯ್ ನೀ ಏನ್ನ ಮಾತಾಡದು. ಸೂಳೆ ಮಗಳೆ ಹಳೇ ಎಕ್ಡದಲ್ಲಿ ಹೊಡಿತಿನಿ ಲೋಪರ್ ಮುಂಡೆ. ನೀ ಏನ ಅಂತ ಇಡಿ ಊರ್ಗೇ ಗೊತ್ತು. ಯಾರ್ ಮುಂದ ಮಾತಾಡ್ತ ಇದ್ದಯ್ ಅನ್ನ ಗ್ಯಾನನಾರ ಇದ್ದುದ ಕುಲ್ಗೇಟ್ ಮುಂಡ.. ಆ ಬೌಲ ಎಲ್ಲಿಗೋದಳು.. ಬತ್ತಳ ಬುಡು. ನಾ ಕಂಡಿಲ್ವ ಅವ ಹೋಗದು. ಅವ ಏನ್ ಮಾಡುದ್ರು ಮಾಡ್ಲಿ ಅಂತ ಹಂಗೇ ಬುಡ್ಬೇಕ..’ ಅಂತ ಗಂಟಲು ಕಿತ್ತೋಗ ತರ ಅರಚಾಡ ತೊಡಗಿದ.
ಈಗ ದೊಡ್ಡವ್ವ ಚೆನ್ನಬಸವಿ ಸರದಿ. ಅವಳೂ ಕೂಗಾಡಿ ಅರಚಾಡಿ ಊರ ಕುಲದತ್ತ ಹೋದಳು. ಸೂರಿ ನಿಂತಲ್ಲೆ ನಿಂತು ಬೀಡಿ ಕಚ್ಚಿಕೊಂಡು ಸೇದುತ್ತ ‘ಕುಲ್ಕೊದಳಂತ ಕುಲ್ಕ ಎಂಥ ಕುಲನ.. ನಾ ಕಾಣ್ದೆದ್ ಕುಲ’ ಅಂತ ಸಿಡಿಸಿಡಿ ಸಿಡಿಯ ತೊಡಗಿರುವಾಗಲೆ ನೀಲ ದಂಡಿನ ಮಾರಿಗುಡಿ ಮೂಲೆಯ ಮುಂಡಗಳ್ಳಿ ಬೇಲಿ ಸಂದಿ ದಾಟಿ ಸೀರೆ ಸೆರಗ ತಲೆ ಮೇಲೆ ಹಾಕಿಕೊಂಡು ಬಿರಬಿರನೆ ಬಂದು ಅದೇ ತೆಂಗಿನ ಮರ ಒರಗಿ ನಿಂತು ‘ಇದ್ಯಾಕ ಸೂರಿ ಇಂಗ್ ಬೊಯ್ತಿದೈ. ಯಾರೇನಂದ್ರು ಹೇಳು ಸಟ್ಗ ಅವ್ರ ನರ ಕಿತ್ತು ನಾಯಿಗಾಕ್ತಿನಿ’ ಅಂತ ಕಿಸಕ್ಕನೆ ನಕ್ಕಳು.
-ಎಂ.ಜವರಾಜ್
(ಮುಂದುವರಿಯುವುದು….)
ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.