ಕಸದಿಂದ ರಸ ಮಾಡುವ ಕುಶಲತೆಯಿಂದ ತನ್ನ ಬೆವರಿನ ಮಣ್ಣಿನಿಂದ ಸುಂದರ ಬಾಲನನ್ನು ತಿದ್ದಿತೀಡಿದ ಲೋಕದ ಮೊತ್ತಮೊದಲ ಕ್ರಿಯೆಟಿವ್ ಅಂಡ್ ಇನ್ನೋವೇಟಿವ್ ಹೆಣ್ಣು ಜಗನ್ಮಾತೆ ಪಾರ್ವತಿಯಾದರೆ, ಏನೋ ಅಚಾತುರ್ಯದಿಂದ, ತನ್ನಿಂದಲೇ ತರಿದು ಹೋದ ಪುತ್ರನ ಮುಂಡಕ್ಕೆ, ಆನೆಯ ರುಂಡವನ್ನು ಸೇರಿಸಿದ ಮೊತ್ತಮೊದಲ ಟ್ರಾಸ್ಪ್ಲಾಂಟ್ ಸರ್ಜನ್ ನಮ್ಮ ಡಾ॥ಶಿವಪ್ಪನವರು!
ಇಂಥ ಅಸಾಧ್ಯರ ಪುತ್ರನಾದ ಮೇಲೆ ನಮ್ಮ ಕರಿವದನ, ವಿನಾಯಕ ಸಾಧಾರಣವಾದ ಹೀರೋ ಆಗಲು ಸಾಧ್ಯವೇ?
ಹ್ಯೂಮರಸ್, ಕ್ಲೆವರ್, ಜೋವಿಯಲ್, ಡಿಪ್ಲೊಮೆಟಿಕ್, ಸ್ಮಾರ್ಟ್, ವೈಸ್, ಒಟ್ಟಿನಲ್ಲಿ ಟೋಟಲೀ ಎಲ್ಲ ವಿಚಾರದಲ್ಲಿಯೂ ಜೀನಿಯಸ್ ಗುಣಗಳಿಂದ ಸಕಲಸಂಪನ್ನನಾದ ಗಣಪ, ದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್! ಆದರೂ ಅಪ್ಪ ಮುಕ್ಕಣ್ಣನ ಮೂಗಿನ ಮೇಲೆಯೇ ಇರುವ ಮುಂಗೋಪ, ಕ್ರೋಧದಿಂದ ಕೆರಳಿದಾಗ ಶರ್ವಾಣಿಯು ಸಿಂಹಿಣಿಯಂತೆ ತೆಗೆಯುವ ಚಂಡಿಚಾಮುಂಡಿಯ ಅವತಾರ, ಕೈಲಾಸವೇ ಅದುರದುರಿ ಹೋಗುವಂತಹ ದಂಪತಿಗಳ ಕದನ ಕಾದಾಟ ನೋಡಿಯೋ ಏನೋ, ಗಣಪನದು ಬ್ರಿಲಿಯಂಟ್ ಡಿಸಿಶನ್! ಪುಣ್ಯಾತ್ಮ ಬ್ರಹ್ಮಚಾರಿಯಾಗಿ ಉಳಿದು ಬಚಾವಾದ. ಹೌದು, ಜಗತ್ಪಿತ, ಜಗನ್ಮಾತೆಯರಾದರೂ ಅವರೂ ದಂಪತಿಗಳೇ ತಾನೇ? ಅವರಲ್ಲಿ ಮಾತ್ರಕ್ಕೆ ಕಲಹ, ಕ್ಲೇಶ, ಭಿನ್ನಾಭಿಪ್ರಾಯ ಬರದೇ ಇರುತ್ತದೆಯೇ? ಅತಿ ಚತುರನಾದ ಈ ಅತಿಕಾಯ, ತಾನೇ ಅನುಭವಿಸಿ ಪಾಠ ಕಲಿಯುವುದಕ್ಕೆ ಮುಂಚೆಯೇ, ಮಾತಾಪಿತರ ಬದುಕನ್ನು ನೋಡಿಯೇ ನಿರ್ಧಾರಕ್ಕೆ ಬಂದನೆಂದು ಕಾಣುತ್ತದೆ. ಇಲ್ಲದಿದ್ದರೆ, ಕೈಲಾಸದೊಡೆಯ ಶಂಕರ ಸಾಹೇಬರ ಹಿರಿಯ ಪುತ್ರ, ಸಿದ್ದಿಬುದ್ದಿಯನ್ನು ಅರೆದು ಕುಡಿದವ,
ಈ ಮುದ್ದು ಮುಖದ ಉಮಾನಂದನನಾದ ಮಂಗಳಮೂರ್ತಿ ಮದುವೆಗಿದ್ದಾನೆ ಎಂದರೆ, ಸಂಬಂಧಗಳಿಗೇನು ಕೊರತೆಯೇ?ಹದಿನಾಲ್ಕು ಲೋಕದ ಕನ್ಯೆಯರೂ ಕಾತರಿಸಿ ನಮ್ಮ ವರಸಿದ್ದಿವಿನಾಯಕನನ್ನ ವರಿಸಲು ಕ್ಯೂ ನಿಂತಿರುತ್ತಿದ್ದರು. ಆದರೆ, ನಮ್ಮ ಕರಿವದನ, ಈ ವರಿ, ಜಂಜಾಟವೆಲ್ಲಾ ಯಾಕ್ ಬೇಕೂ? ಅಂತ ಯೋಚಿಸಿ ಬ್ರಹ್ಮಚಾರಿಯಾಗಿಯೇ ಉಳಿದಿರಬೇಕು. ವಿವಾಹದ ಸುಳಿಗೆ ಸಿಕ್ಕಿಕೊಂಡು ಬದುಕನ್ನ ಸಿಕ್ಕು ಮಾಡಿಕೊಳ್ಳುವುದಾದರೂ ಯಾಕೇಂತ. . . ಸೋ…ಇವತ್ತಿಗೂ ಎಲ್ಲ ಸಂಸಾರಸ್ಥ ಪುರುಷರಂತೆ, ಹೆಂಡತಿಯರ ಮೊನಚು, ವ್ಯಂಗ್ಯ, ರೇಗುವ ಮಾತುಗಳ ಸುಳಿಗೆ ಸಿಕ್ಕಿಕೊಳ್ಳದೆ, ಎಲ್ಲ ತರಲೆತಾಪತ್ರಯಗಳಿಂದ ನುಣುಚಿಕೊಂಡು, ದಾಂಪತ್ಯದಿಂದ ದುರ್ದಾನ ತೆಗೆದುಕೊಂಡಂತೆ ದೂರವೇ ಉಳಿದುಬಿಟ್ಟಿದ್ದಾನೆ ನಮ್ಮ ದೂರ್ವಪ್ರಿಯ!
ನಿಜ ಅಲ್ವೇನ್ರೀ, ಒಂದು ಪಕ್ಷ ನಮ್ ಗಣಪ್ಪ ಮದ್ವೆ ಮಾಡಿಕೊಂಡಿದ್ದ ಅಂತಲೇ ಅಂದ್ಕೊಳ್ಳೀ, ಪ್ರತಿ ವರ್ಷವೂ ಕೈಲಾಸದಿಂದ ಇವ್ನು ಭಾದ್ರಪದ ಶುಕ್ಲ ಚೌತಿಯಂದು ಬಂದರೆ ಆಶ್ವೀಜವಾದರೂ ಭೂಲೋಕದಲ್ಲಿ ಯಾವ ಯೋಚನೆಯೂ ಇಲ್ಲದೆ ಟೆಂಟ್ ಹಾಕಬೇಕೂಂದ್ರೆ, ಕಟ್ಟಿಕೊಂಡ ಹೆಂಡ್ತಿ , ”ಏನ್ರೀ, ನಿಮಗೇನ್ ಸಂಸಾರದ್ ಜವಾಬ್ದಾರಿ ಇಲ್ವಾ?ಯಾವ್ ಚಿಂತೆ ಇಲ್ದಂಗೆ ಹರ, ಶಿವ ಅಂದ್ಕೋತಾ ತಿಂಗಳಗಟ್ಲೆ ಜುಮ್ ಅಂತ ಆರಾಮಾಗಿ ಹೊರಟ್ಬಿಡ್ತೀರಲ್ಲಾ! ಮೊದ್ಲೆಲ್ಲಾ ನಿಮ್ಗೆ ಯಾವ ಜವಾಬ್ದಾರಿ ಇರ್ಲಿಲ್ಲ. ಹೆಂಗೋ ಆಯ್ತು, ಇನ್ ಮುಂದೆ ಆದ್ರೂ ಸ್ವಲ್ಪ ರೆಸ್ಪಾನ್ಸಿಬಲ್ ಹಸ್ಬೆಂಡ್ ಆಗಿರೋಕೆ ಟ್ರೈ ಮಾಡಿ”, ಎಂದು
ನಮ್ಮ ಬೆನಕಪ್ಪನಿಗೆ ಬೆಂಡೆತ್ತಿ, ಇವನ ತಿರುಗಾಟಕ್ಕೆ ಬ್ರೇಕ್ ಹಾಕಿ, ಅವನ ಜುಟ್ಟು, ಜನಿವಾರವನ್ನ ಜುಂಗಾಡಿಬಿಡುತ್ತಿದ್ದಳು.
ಅದ್ ಹೋದ್ರೆ ಹೋಗ್ಲಿ ಬಿಡಿ, ”ಏನ್ರೀ ನೀವೂ?ನಿಮ್ ಭಕ್ತರೇ ಎಂತೆಂಥ ಆಡಿ, ಬೆನ್ಜ಼ು, ರೋಲ್ಸ್ ರಾಯ್ಸ್, ಫೆರಾರಿ ಕಾರ್ಗುಳಲ್ಲಿ ಜು……. . ಯ್ ಅಂತ ಓಡಾಡ್ತಾರೆ. ನೀವೂ ಇದೀರಾ, ನಮ್ಮದಾದ್ರೂ ಎಂಥಾ ಪ್ರೆಸ್ಟೀಜಿಯಸ್ ಫ್ಯಾಮಿಲಿ! ಅಂಥದ್ರಲ್ಲೀ…. . ಇನ್ನೂ ಈ ಓ…. ಲ್ಡ್ ಮಾಡಲ್ ಬೋಡಿ ಇಲೀ ಅನ್ನೋ ವೆಹಿಕಲ್ಲಿನಲ್ಲೀ ನೀವು ಕೂತು ಕುಟು ಕುಟೂಂತ ಅಂತ ಓಡಾಡ್ತಿದ್ರೆ, ಛೆಛೆ ನನ್ಗೇ ನಾಚ್ಕೆ ಆಗುತ್ತೆ. ಈ ಸಂಕ್ಟಾನ ಯಾರಲ್ಲಿ ಹೇಳ್ಕೊಳ್ಳೀ?”, ಅಂತ ನಮ್ಮ ಫಾಲಚಂದ್ರ ಗಣಪನ ತಲೆಗೆ ಮೊಟಕಿ, ಸೋಟಿಯನ್ನ ತಿವಿಯದೆ ಬಿಡುತ್ತಿದ್ದಳೇ?ಈ ವಿಚಾರದಲ್ಲಿ ಅವಳದಾದ್ರೂ ಪಾಪ ಏನ್ ತಪ್ಪಿದೇ?
ಇನ್ನು ಇವನೇನಾದರೂ ದಿನವೂ ಸಂಜೆ ಆಯ್ತೂಂದ್ರೆ ಪೆಂಡಾಲಿನಲ್ಲಿ ಕಣ್ ಬಿಟ್ಕೊಂಡು ಐಟಮ್ ಸಾಂಗುಗಳಿಗೆ ಹುಡುಗ ಹುಡುಗಿಯರು ಕುಣಿಯುವುದನ್ನ ನೋಡಿದ್ದಿದ್ರೆ, ಗಣಪನ ಹೆಂಡ್ರೇನಾದರೂ ಸುಮ್ನೆ ಬಿಡ್ತಿದ್ಳೇ…. ?”ಛೇ ಎಂಥಾ ಬರ್ಬಾದ್ ಟೇಸ್ಟ್ರೀ ನಿಮ್ದೂ?ಸಂಸಾರಸ್ಥರಾಗಿ, ಇಂಥದ್ದೆಲ್ಲಾ ನೋಡೋಕಾದ್ರೂ ನಿಮ್ಗೆ ಹೇಗೆ ಮನ್ಸ್ ಬರುತ್ತೆ?ಆ ಚಂದದ್ ಕುಣ್ತ ನೋಡಕ್ಕೆ ಕೆಲ್ಸ ಕೇಮೆ ಬಿಟ್ಟು ಹೋಗ್ತೀರಾ?ಸುಮ್ನೆ ಮನೇಲಿ ತೆಪ್ಗಿರಿ ”ಅಂತ ನಮ್ಮ ದಂತವಕ್ರನಿಗಿರೋ ಮತ್ತೊಂದು ಕೋರೆ ಹಲ್ಲನ್ನೂ ಕಿತ್ತು ಕೈಗೆ ಕೊಟ್ಟಿರೋಳು! ಖರೇ ಅಲ್ಲೇನ್ರೀ, ಇಂಥ ನಾಚ್ ಗಳ್ನ ಗಂಡನೆಂಬ ಪ್ರಾಣಿ ವಾಚ್ ಮಾಡಿದ್ರೆ ಯಾವ್ ಹಂಡ್ತಿ ತಾನೇ ಸುಮ್ನಿದ್ದಾಳೇಳ್ರೀ!
ಇನ್ನು ಈ ಲಂಬೋದರನೇನೋ, ಈಗ ಯಾವ ಯೋಚನೆ ಇಲ್ಲದೆ ಭಕ್ತರು ಕೊಟ್ಟಿದ್ದನ್ನೆಲ್ಲಾ ತಿಂದುಂಡ್ಕೊಂಡು ಆರಾಮಾಗಿ ಹೆಂಗೋ ಬದುಕ್ನ ಕಳೀತಿದಾನಾ…. . . ಏನಾದ್ರೂ ಮಗ್ಗುಲಲ್ಲಿ ಮಡದಿ ಎನ್ನುವವಳಿದ್ದಿದ್ದರೆ, ”ಅಯ್ಯೋ ನಿಮ್ಮ, ಏನ್ರೀ ನಿಮ್ಗೆ ಸ್ವಲ್ಪಾನೂ ಡಿಸಿಪ್ಲೀನ್ ಇಲ್ವಲ್ಲಾ?ನೋಡಿದ್ದೆಲ್ಲಾ ಬರೀ ಸ್ವಾಹ ಮಾಡೋದೇನಾ ಕೆಲ್ಸಾ? ಹೋಗಿ ನಿಮ್ ಡ್ಯಾಡೀನ ನೋಡೀ, ಹೆಂಗ್ ಈ ವಯಸ್ಸಲ್ಲೂ ಹೆಂಗೆ ಫಿಟ್ಟಾಗಿದಾರೆ! ಇನ್ನೂ ನಿಮ್ ಸಿಬ್ಲಿಂಗ್ಸಾಗ್ಲೀ, ಹೆಂಗ್ ಬಾಡಿ ಮೇನ್ಟೇನ್ ಮಾಡಿದಾರೆ. ನೀವೂ ಇದೀರಾ……. ಹೋಗ್ಹೋಗೀ…. . , ಸಂದೂ ಗಡದ್ದಾಗಿ ಕಂಠಪೂರ್ತಿ ತಿಂದ್ಕೊಂಡ್ ಪಟ್ಟಾಗಿ ಸಿಟ್ ಮಾಡೋ ಬದ್ಲು, ಸ್ವಲ್ಪ ವರ್ಕೌಟಾದ್ರೂ ಮಾಡಿ ಫಿಟ್ಟಾಗ್ ಬನ್ನಿ ”, ಅಂತ ಸಿಟ್ಟಿನಿಂದ ನಮ್ಮ ಶ್ರೀಕಂಠಸುತ ಗಜಕರ್ಣನ ಕಿವಿಯನ್ನ ಹಿಂಡಿ, ಅವನಿಗೆ ಡಯಟ್, ಫಿಟ್ನೆಸ್ಸೂಂತ ಜಿಮ್ಮಿಗೆ ಓಡಿಸಿರೋಳು! ಹೌದ್ರೀ, ಒಬ್ಬ ಕೇರಿಂಗ್ ವೈಫ್ ಯಾರೇ ಆಗಲಿ, ಇದನ್ನೇ ಮಾಡ್ತಿದ್ಳು ತಾನೇ? ಡಿಡ್ ಐ ಸೇ ಎನಿಥಿಂಗ್ ರಾಂಗ್?
“
ಅಬ್ಬಬ್ಬಾ, ಈ ನಿಮ್ ಟಮ್ಮಿಗೆ ಸುತ್ಕೊಳೋಕೆ ಈ ಸರ್ಪೆಂಟೇನಾ ಸಿಕ್ಕಿದ್ದೂ? ಅದೋ…. . , ನನ್ನನ್ನೂ ನಿಮ್ ಹತ್ತಿರಕ್ಕೆ ಬಿಡದಂತೆ ಬುಸ್ ಗುಡ್ತಿರುತ್ತೆ. ಯಾರಾದ್ರೂ ನೋಡಿದರೂ ಕೂಡಾ, ಇಸ್ಸಿಸ್ಸೀ. . …. ನನ್ಗೇ ಎಷ್ಟು ಎಂಬರಾಸಿಂಗ್!!!!ಮೊದ್ಲು ಅದ್ನ ತೆಗ್ದಾಕಿ. ಈ ವೀಕೆಂಡು ಶಾಪಿಂಗ್ ಹೋದಾಗ ನಾನೇ ಒಳ್ಳೆ ಟಾಮಿ ಹಿಲ್ಫಿಗರೋ, ಆಲೆನ್ ಸೋಲಿನೋ, ವ್ರಾಗ್ಲರ್ ಬ್ರಾಡಿನ ಒಂದು xxxxxxxxl ಬೆಲ್ಟ್ ತಂದ್ಕೊಡ್ತೀನಿ. ಮೊದ್ಲು ಅದನ್ನ ಕಳ್ಚಿ, ಇದ್ನ ಬಿಗ್ಕೊಳ್ಳಿ”, ಅಂತ ನಾಗಿಣಿಯಂತೆ ಬುಸುಗುಡುತ್ತಾ ಈ ನಾಗಾಭರಣನಿಗೆ ಬೆಂಡಿತ್ತಿ ಬ್ರೇಕಾಕಿರ್ತಿದ್ಲು! ಈ ಗಂಡನೆಂಬ ಪ್ರಾಣಿ, ಸಂದೂ ಮೂಷಿಕ, ಉರಗದಂಥ ಜೀವಿಗಳ ಸಹವಾಸದಲ್ಲಿದ್ದರೆ, ಯಾವ ಸಹಧರ್ಮಿಣಿ ತಾನೇ ಸಹಿಸ್ತಾಳೇ?
“ಅಯ್ಯೋ…. . ಇಲ್ ಹೆಂಗಾದ್ರೂ ಇದ್ಕೊಳಿ. ಭೂಲೋಕಕ್ಕೂ ಈ ಅವ್ತಾರ್ದಲ್ಲೇ ಹೋಗ್ತೀರಾ?
ನಿಮ್ದೇನಾದ್ರೂ ಸಲ್ಮಾನ್ ಖಾನ್ ಥರ ಸಿಕ್ಸ್ ಪ್ಯಾಕ್ಸ್ ಬಾಡೀನಾ? ಈ ಫ್ಯಾಮಿಲಿ ಪ್ಯಾಕನ್ನ ಅಷ್ಟು ಧಾರಾಳ್ವಾಗಿ ಕೋಟ್ಯಾಂತರ ಜನರ ಮುಂದೆ ಎಕ್ಸ್ಪೋಸನ್ನ ಮಾಡೋ ಅವಶ್ಯಕತೆಯಾದ್ರೂ ಇದೆಯೇ?ಈ ಘಟದಂಥ ಹೊಟ್ಟೆಯನ್ನ ಪ್ರದರ್ಶನ ಮಾಡೋಕೆ ಮುಜುಗರವಾದ್ರೂ ಆಗೋಲ್ವೇೊ ನಿಮ್ಗೆ?ಮೊದ್ಲು ಈ ಅಂಗೀನ್ ತಗ್ಲಾಕೊಂಡ್ ಹೋಗಿ. ಎಲ್ಲಿಯಾದ್ರೂ ನಿಮ್ ಬೇರ್ ಬಾಡೀಗೆ ದೃಷ್ಟಿ ಗಿಷ್ಟಿ ಆದೀತು”, ಅಂತ ಈ ಶಂಭುಸುತನಿಗೆ ಮಂಗಳಾರತಿ ಮಾಡಿ ಅಂದವಾದ ಒಂದು ಅಂಗಿ ತಗಲಾಕಿ ಕಳಿಸುತ್ತಿದ್ದಳು. ಅರ್ಧಾಂಗಿ ಎನ್ನುವವಳು ಏನೇ ಎಗರಾಡಿದರೂ, ಅದರ ಹಿಂದೆ ಆಕೆಯ ಅರ್ಧಾಂಗನ ಮರ್ಯಾದೆಯನ್ನು ಕಾಪಾಡುವ ಕಾರ್ಯದತ್ತಲೇ ಯೋಚಿಸುವವಳಲ್ಲವೇ?
ಒಂದ್ ಮಾತಾಡಿದ್ರೆ ಹೆಚ್ಚು, ಒಂದ್ ಮಾತಾಡಿದ್ರೆ ಕಡ್ಮೆ ಅನ್ನೋಹಂಗೆ, ಪಾಪದ ನಮ್ ಪಿಳ್ಳೇರಾಯ ಏನಾದ್ರೂ ಅಪರೂಪಕ್ಕಾದರೂ ಬಾಯಿ ಬಿಟ್ಟು, ”ಅಲ್ಲ ಕಣೇ, ನಾನು ಹೇಳೋದು ಸ್ವಲ್……”, ಅನ್ನುವುದರೊಳಗೇ ಮಿಸೆಸ್ ಪಿಳ್ಳೆರಾಯ, ”ಸಾಕು ಮುಚ್ರೀ ಬಾಯಿ. ನಿಮ್ಗೆ ಬೇಜಾನ್ ಬುದ್ದಿ ಇದೇಂತ ನನ್ ಹತ್ರ ಪ್ರೂವ್ ಮಾಡೋಕ್ ಬರ್ಬೇಡೀ. ನಿಮ್ ಆಟವೆಲ್ಲಾ ನನ್ಹತ್ರ ನಡ್ಯೋಲ್ಲ”, ಅಂತ ಸಹಸ್ರನಾಮ ಮಾಡಿರುತ್ತಿದ್ದಳಾ……ಇನ್ನು, ”ಅಯ್ಯಪ್ಪಾ…ಈ ಬೊಂಬಾಯಿಗೆ ಬಾಯಿ ಕೊಡೋರ್ ಯಾರಪ್ಪಾ ಶಿವಶಿವ”ಅಂತ ಸುಮ್ನೆ ಮಾತಾಡ್ದೆ ಕೂತ್ರೆ, ”ಏ…. ನದೂ, ನಾನು ಇಲ್ಲಿ ಗಂಟೆಯಿಂದ್ಲೂ ಗಂಟ್ಲು ಹರ್ಕೋತಾನೇ ಇದೀನೀ, ನೀವೇನ್ ಕಮಕ್ ಕಿಮಕ್ ಅನ್ದೇ ಬಾಯಲ್ಲಿ ಕಡ್ಬು ಕಚ್ಕೊಂಡಂಗೆ ಕೂತಿದೀರಲ್ಲಾ!ಈ ನಿಮ್ ಜಾಣಕಿವುಡನ ಆಟ ನನ್ ಹತ್ರ ನಡ್ಯೋಲ್ಲ”, ಅಂತ ಸುಮ್ಮನಿದ್ದರೂ ನಮ್ಮ ಸುಮುಖನಿಗೆ ಲಟ್ಟಣಿಗೆ ಪೂಜೆ ಮಾಡಿರುತ್ತಿದ್ದಳು. ಯಾಕೇಂದ್ರೆ ಗಂಡಸಿನ ನಿಜವಾದ ಬಂಡವಾಳ ಹೆಂಡತಿಗೆ ತಾನೇ ಗೊತ್ತಿರೋದೂ!
ಇಷ್ಟು ಮಾತ್ರಕ್ಕೆ ಇರುಳು ಕಂಡ ಬಾವಿಯಲ್ಲಿ ಹಗಲು ಹೋಗಿ ಬೀಳೋಕೆ ನಮ್ ಗಣಪತಿ ಬಪ್ಪನೇನು ಬೆಪ್ಪುತಕಡಿಯೇ? ಹೆಂಡತಿಯ ಮುಂದೆ ಹೆಂಡತಿಯ ಮುಂದೆ ಎಂಥ ಗಂಡನದ್ದೇ ಆಗಲಿ, ”ಖೇಲ್ ಖತಮ್, ನಾಟಕ್ ಬಂದ್!”ಗಂಡನೆಂಬ ಪ್ರಾಣಿ, ತನ್ನ ಪಾಣಿಗ್ರಹಣ ಮಾಡಿ ವರಿಸಿದ ಸಹಧರ್ಮಿಣಿಯ ಮುಂದೆ ಮಂಕುಸಾಮ್ರಾಣಿಯೇ ಎಂದು ದೂರದಿಂದಲೇ ನೋಡಿ ಅರ್ಥ ಮಾಡಿಕೊಂಡಿದ್ದ ನಮ್ಮ ಧೂಮ್ರವರ್ಣ!
ಹೆಂಗೋ ಜುಮ್ ಅಂತ ಸ್ವತಂತ್ರವಾಗಿರೋದು ಬಿಟ್ಟು, ಯಾಕ್ರೀ…. ಬೇಕೂ…. ಹೆಜ್ಜ್ ಹೆಜ್ಜೆಗೂ ಹೆಡ್ಡೇಕೂ, ಸ್ಟೆಪ್ ಸ್ಟೆಪ್ಪಿಗೂ ಸ್ಟ್ರೆಸ್ಸೂ…. . ! ಲಾಟ್ಸ್ ಆಫ್ ಬರ್ಡನ್ನು, ಟನ್ಸ್ ಆಫ್ ಟೆನ್ಷನ್ನೂ…. ! ಇರಲಾರದವನು ಇರುವೆ ಬಿಟ್ಕೊಂಡ ಎನ್ನುವಂತೆ, ಸಿಂಪಲ್ ಆಗಿರೋ ಲೈಫ್ನ ಕಾಂಪ್ಲಿಕೇಟ್ ಮಾಡಿಕೊಳ್ಳೋ ಮೂರ್ಖ ಶಿಖಾಮಣಿಯೇ?ಅಲ್ಲರೀ, ನಮ್ಮ ಗಣಾಧಿಪ, ಜಾಣರಜಾಣ! ಅದಕ್ಕೇ…. ಜಗತ್ ಖಿಲಾಡಿ ನಮ್ ದುಂಡಿ ಮಹಾರಾಜ ಜೀವನದಲ್ಲಿ ವೈಸ್ ಡಿಸಿಶನ್ ತೆಗೆದುಕೊಂಡಿದ್ದ ಕಾರಣ, ಇವತ್ತಿಗೂ ದಿ ಮೋಸ್ಟ್ ಹ್ಯಾಪಿ ಅಂಡ್ ಬೌನ್ಸಿ ಬ್ಯಾಚುಲರ್!
ಈ ಲೇಖನ, ಮದುವೆಯಾಗಿ ತಮ್ಮ ಸ್ವತಂತ್ರ ಹಾಗೂ ಎಲ್ಲ ಹಕ್ಕುಗಳನ್ನೂ ಕಳೆದುಕೊಂಡಿರುವವ ಪಾಪದ ಎಲ್ಲಾ ಮಹಾಪುರುಷರಿಗೆ ನನ್ನ ಕರುಣಾಪೂರ್ವಕ ಸಮರ್ಪಣೆ!!!!
ವಿದ್ಯಾಧಿಪತಿ ಗಣಪತಿಯ ವಿಚಾರವಾಗಿ ತಮಾಷೆಯಾಗಿ ಬರೆದ ಈ ಲೇಖನಕ್ಕೆ ಆ ದೇವಾಧಿದೇವನಲ್ಲಿ ಕ್ಷಮೆ ಕೋರುತ್ತಾ….
-ರೂಪ ಮಂಜುನಾಥ, ಹೊಳೆನರಸೀಪುರ.