ಪ್ರವಾಸ, ದೇಶ ಸುತ್ತು ಕೋಶ ಓದು ಎನ್ನುವ ನಾಣ್ಣುಡಿಯಂತೆ ಪುಸ್ತಕ ಓದುವುದು ಚಿಕ್ಕಂದಿನಿಂದ ಇದ್ದ ಹವ್ಯಾಸ, ಅದರ ಜೊತೆ ದೇಶ ಸುತ್ತುವುದು ಕೂಡ. ಅಂದರೆ ಚಿಕ್ಕಂದಿನಿಂದ ನಮ್ಮ ಕರ್ನಾಟಕದ ಪ್ರತೀ ಪ್ರದೇಶವನ್ನು ಸುತ್ತಿದ್ದೇನೆ. ಆದರೆ ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗೆ ಇಡೀ ಭಾರತ ಸುತ್ತುವುದು ಕೂಡ ಒಂದು ಕನಸು. ಈ ಕನಸಿಗೆ ಸಾಕಾರಗೊಂಡಿದ್ದು ಮೊನ್ನೆಯ ಅಮರನಾಥ ಯಾತ್ರೆ. ಕರ್ನಾಟಕದಿಂದ ಶುರುವಾಗಿ,ದೆಹಲಿ, ಅಂಬಾಲ, ಕಾಟ್ರಾ,ಕಾಶ್ಮೀರ, ರಾಜಸ್ತಾನ್, ಗುಜರಾತ್ ಹೀಗೆ ಭಾರತ ವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿದ ರೀತಿಯಲ್ಲಿ ಯಾತ್ರೆ ಕೈಗೊಂಡಿದ್ದು ವಿಶೇಷ. ಮಹಾಭಾರತ ಯುದ್ಧ 18 ದಿನಗಳು ನಡೆದದ್ದು ನಮ್ಮ ಯಾತ್ರೆಯ ದಿನಗಳು ಕೂಡ 18 ದಿನಗಳು. ಆ ಯುದ್ಧದಲ್ಲಿ ಹಲವಾರು ಘಟನೆಗಳು, ಸನ್ನಿವೇಶಗಳು ನಡೆದು ಒಂದು ಮಹಾ ಘಟನೆ ಆದರೆ ನಮ್ಮ ಜೀವನದಲ್ಲಿ ಈ 18 ದಿನಗಳ ಯಾತ್ರೆ ತುಂಬಾ ಮಹತ್ವ ಪಡೆಯಿತು..
ದೇವರ ದಯೆ ಇಲ್ಲದೇ ಏನೂ ನಡೆಯದು ಎಂಬುದಕ್ಕೆ ಸಾಕ್ಷಿಯಾಗಿ ನಮ್ಮ ಯಾತ್ರೆ ಹೊರಹೊಮ್ಮಿತು. ಅಮರನಾಥನಿಗೆ ಆರಾಮಾಗಿ ಹೋಗಿ ಬರಲು ಮೊದಲು ಪ್ರಕೃತಿ ಸಹಕರಿಸಬೇಕು ಇಲ್ಲದಿದ್ದರೆ ಹೋದವರು ವಾಪಸು ಬರುವುದೇ ಸಂಶಯ ಅನ್ನುವುದು ಎಲ್ಲರ ಅಂಬೊಣ. ಹಾಗಾಗಿ ನಾವು ಕೂಡ ಹೆದರಿದ್ದೆವು, ಹಾಗಾಗಿ ವಿಘ್ನ ನಿವಾರಕ ಗಣಪತಿಯಲ್ಲಿ ಸಂಕಲ್ಪ ಮಾಡಿ, ನಂಬಿದ ಗುರುಗಳಲ್ಲಿ ಬೇಡಿಕೊಂಡು ಯಾತ್ರೆಗೆ ಹೊರಟದ್ದು. ಯಾತ್ರೆಯಲ್ಲಿ ದೇವರ ದಯೆ ಹೇಗೆಲ್ಲ ಕೆಲಸ ಮಾಡಿತು ಎಂಬುದನ್ನ ಮುಂದೆ ಓದುತ್ತಾ ಹೋದರೆ ನಿಮಗೆ ಗೊತ್ತಾಗುತ್ತದೆ..
ಅಮರನಾಥ ಯಾತ್ರೆ ಮಾಡುವುದು ಬಹುದಿನದ ಕನಸು. ಈಗೊಂದು 3 ವರುಷದ ಹಿಂದೆ ಟಿಕೆಟ್ ಎಲ್ಲಾ ಬುಕ್ ಆಗಿ ಕೊನೆಗೆ ಕರೋನ ಕಾರಣಕ್ಕೆ ಯಾತ್ರೆ ರದ್ದಾಗಿತ್ತು. ನಮ್ಮ ಯಾತ್ರೆಯ ಕನಸು ಕೈಗೂಡಿದ್ದು ಮೊನ್ನೆ ಜೂನ್ 28 ಕ್ಕೆ.
ಯಾತ್ರಾ ತಯಾರಿ…
ಒಮ್ಮೆ ಯಾತ್ರೆ ರದ್ದಾಗಿದ್ದಾಕ್ಕಾಗಿ ಈ ಬಾರಿ ಹೋಗಲೇಬೇಕೆಂದು ಸಂಕಲ್ಪ ಮಾಡಿ ನಾನು ಹಾಗೂ ನಮ್ಮೇಜಮಾನರು 4 ತಿಂಗಳ ಮುಂಚೆಯೇ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದಾಯ್ತು. ನೋಡು ನೋಡುತ್ತಿದ್ದ0ತೆಯೇ ಯಾತ್ರಾ ದಿನಗಳು ಹತ್ತಿರವಾಗುತ್ತಿದ್ದವು. ಹಾಗಾಗಿ ಎರಡು ತಿಂಗಳಿಂದ ನಮ್ಮ ಬೆಳಗಿನ ವಾಕಿಂಗ್ ಶುರು ಆಯಿತು. ಪ್ರತಿದಿನ ಬೆಳಗ್ಗೆ ಐದರಿಂದ ಆರು ಕಿ. ಮೀ ನಡಿಗೆ ಶುರು ಆಯಿತು. ಏಕೆಂದರೆ ಅಮರನಾಥ ಯಾತ್ರೆ ಎಂದರೆ ತುಂಬಾ ದುರ್ಗಮ ಹಾದಿಯಲ್ಲಿ, ಹೋಗುವಾಗ ಬರುವಾಗ ಸರಿ ಸುಮಾರು 50 ಕಿ. ಮೀ ನಡಿಗೆ ಇರುತ್ತದೆ ಎಂಬುದನ್ನು ತಿಳಿದುಕೊಂಡಿದ್ದೆವು ಹಾಗಾಗಿ ನಮ್ಮ ದಿನನಿತ್ಯದ ನಡಿಗೆ ಶುರು ಆಯಿತು. ನೋಡುನೋಡುತ್ತಿದ್ದ0ತೆ ಯಾತ್ರಾ ದಿನಗಳು ಹತ್ತಿರತ್ತಿರ ಆಗುತ್ತಾ ಬಂದಂತೆ ಏನೋ ಮನಸಿನಲ್ಲಿ ಕಸಿವಿಸಿ, ಎಷ್ಟೋ ಜನರ ಮಾತಿಗೆ ಹೆದರಿಕೆ, ಏಕೆಂದರೆ ಅಮರನಾಥ ಯಾತ್ರೆ ಎಂದರೆ ಮರುಜೀವ ಪಡೆದ ಹಾಗೇ, ಹೋದವರು ವಾಪಸು ಬರುವುದೇ ಕಡಿಮೆ ಹಾಗೇ ಹೀಗೆ ಎಂದು ಗಾಳಿ ಸುದ್ದಿ. ಆದರೂ ನಾವು ದೇವರ ಮೇಲೆ ಭಾರ ಹಾಕಿ ಯಾತ್ರೆಗೆ ತಯಾರಿ ನಡೆಸಿದೆವು.
ಯಾತ್ರೆಗೆ ನಮ್ಮ ಶಿವಮೊಗ್ಗದಿಂದ ಒಂದು 35 ಜನರ ಗುಂಪು ಮಾಡಿ ಒಟ್ಟಿಗೆ ಹೋಗುವುದೆಂದು ತಯಾರಿ ನಡೆಸಿದ್ದರು. ಆ ಗುಂಪಿನಲ್ಲಿ ಮೊದಲು ಹೋದವರು, ಕೊನೆ ವರುಷ ಹೋಗಿ ದರುಶನ ಸಿಗದೇ ವಾಪಸು ಬಂದಿರುವವರು ಹಾಗೂ ನಮ್ಮ ಹಾಗೇ ಹೊಸದಾಗಿ ಹೋಗುವವರು ಎಲ್ಲಾ ರೀತಿಯವರು ಇದ್ದರು.. ಆಗಾಗ ಒಮ್ಮೆ ಮೀಟಿಂಗ್ ಕೂಡ ಮಾಡುತ್ತಿದ್ದರು. ಮೀಟಿಂಗ್ ನಲ್ಲಿ ಒಬ್ಬೊಬ್ಬರು ತಮ್ಮ ಅನುಭವ ಹೇಳುವುದನ್ನು ಕೇಳಿ ತುಂಬಾ ಭಯ ಆಗುತ್ತಿತ್ತು. ಹಾಗೆಯೇ ಅಲ್ಲಿ ಹಾಕುವ ಶೂಸ್, ಬಟ್ಟೆಗಳ ಬಗ್ಗೆ ಮಾಹಿತಿ ತೆಗೆದುಕೊಂಡು ಆದಷ್ಟು ಕಡಿಮೆ ಪ್ರಮಾಣದ ಲಗೇಜ್ ನೊಂದಿಗೆ ಹೊರಡಲು ತಯಾರಾದೇವು.
ನಮ್ಮ ಈ ಬಾರಿಯ ಯಾತ್ರೆಯು ದಾವಣಗೆರೆಯಿಂದ ಹೊರಟು ಅಂಬಾಲದಲ್ಲಿ ಇಳಿದು ಅಲ್ಲಿಂದ ಜಮ್ಮುವಿನ ಕಾಟ್ರ ಕ್ಕೆ ಹೋಗಿ ನಂತರ ಅಮರನಾಥ ಎಂಬುವುದಾಗಿತ್ತು. ಹಾಗಾಗಿ ದಾವಣಗೆರೆಗೆ ಪ್ರಯಾಣ ಬೆಳೆಸಿ ಅಲ್ಲಿಂದ ರೈಲಿನಲ್ಲಿ ಕಾಟ್ರಾ ತಲುಪಿದೆವು. ಕಾಟ್ರಾದಲ್ಲಿ ಮಾತಾ ವೈಷ್ಣದೇವಿ ದರ್ಶನ ಪಡೆದು, ಮಾರನೇ ದಿನ ಶಿವಕೋರಿ ಯ ಗುಹಂತರ ಶಿವನ ದರ್ಶನ ಪಡೆದು, ಅಮರನಾಥನ ಸನ್ನಿದಿಗೆ ಹೊರಡಲು ತಯಾರಾದೇವು.
ಅಮರನಾಥನಲ್ಲಿಗೆ ಪಯಣ...
ಅಮರನಾಥ ದರ್ಶನಕ್ಕೆ ಮೊದಲು ಕಾಟ್ರಾದಿಂದ ಪಹಾಲ್ಗಮ್ ವರೆಗೆ ಮೊದಲೇ ಬುಕ್ ಮಾಡಿದ ಬಸ್ ನಲ್ಲಿ ಹೋಗಿ ಅಂದು ರಾತ್ರಿ ಅಲ್ಲಿಯೇ base ಕ್ಯಾಂಪ್ ನಲ್ಲಿ ತಂಗಿ ಮಾರನೇ ದಿನ ಚಾರಣಕ್ಕೆ ತಯಾರಾದೇವು. ಮಾರನೇ ದಿನ ಬೆಳಗ್ಗೆ ಪಹಾಲ್ಗಮ್ ನಿಂದ ಚಂದನ್ವರಿ ವರೆಗೂ ಟ್ಯಾಕ್ಸಿ ಅಲ್ಲಿ ಹೋಗಿ ಅಲ್ಲಿ ಸೆಕ್ಯೂರಿಟಿ ಚೆಕಿಂಗ್ ನಡೆಸಿ ನಮ್ಮನ್ನು ಚಾರಣಕ್ಕೆ ಬಿಟ್ಟರು.
ಊಟ ತಿಂಡಿಯ ವ್ಯವಸ್ಥೆ...
ಇಲ್ಲಿ ಊಟ ತಿಂಡಿಯ ವ್ಯವಸ್ಥೆ ಬಗ್ಗೆ ಹೇಳಲೇ ಬೇಕು. ಏಕೆಂದರೆ ಪಹಾಲ್ಗಮ್ ಹತ್ತಿರತ್ತಿರ ಇರುವಾಗಿನಿಂದಲೇ ಲಂಗರುಗಳು ಎಂದು ಶುರು ಆಗುತ್ತವೆ. ಲಂಗರುಗಳೆಂದರೆ ನೂರಾರು ಜನರು, ಯಾತ್ರಿಕರಿಗೆ ಊಟ ತಿಂಡಿಯ ಸೇವೆ ಮಾಡಲೆಂದೆ ಒಂದು ತಿಂಗಳ ಮುಂಚಿನಿಂದ ಲಂಗರುಗಳನ್ನು ಹಾಕಿರುತ್ತಾರೆ. ಇಲ್ಲಿ ನಮಗೆ ಏನು ಬೇಕು ಏನು ಬೇಡ ಎಲ್ಲಾ ತರಹದ ವಿಧವಿಧ ತರಹೇವಾರಿ ತಿಂಡಿಗಳು free ಆಗಿ ಸಿಗುತ್ತವೆ. ನಾವು ಎಷ್ಟು ಬೇಕಾದರು ಯಾವುದೇ ಅಂಜಿಕೆ ಇಲ್ಲದೇ ತಿನ್ನಬಹುದು. ಆದರೆ ಸುಮ್ಮನೇ ಹಾಕಿಸಿಕೊಂಡು ಬಿಡುವ ಹಾಗೇ ಇಲ್ಲಾ, ನಮಗೆ ಕೆಲವೊಂದು ಉತ್ತರ ಭಾರತೀಯ ತಿನಿಸುಗಳು ರುಚಿಸದೆ ಹಾಗೇ ತಟ್ಟೆ ಇಡಲು ಹೋದರೆ ತಟ್ಟೆಯಲ್ಲಿದ್ದನ್ನ ಕಾಲಿ ಮಾಡಿಸಿಯೇ ಕೈತೋಳೆದುಕೊಳ್ಳಲು ಬಿಡುತ್ತಿದ್ದರು. ಅಲ್ಲಿನವರಿಗೆ ಆಹಾರದ ಮಹತ್ವ ಎಷ್ಟಿದೆ ಎಂದು ಆಶ್ಚರ್ಯ ಆಗುತ್ತಿತ್ತು.
ಚಂದನ್ ವಾಡಿ ಯಲ್ಲಿ ತಿಂಡಿ ತಿಂದು ಚಾರಣಕ್ಕೆ ಅಣಿಯಾದೆವು. ಚಳಿಯ ಆರ್ಭಟ ಇಲ್ಲಿಂದಲೇ ಶುರು ಆಯಿತು. ನಡೆಯಲು ಕೈಯಲ್ಲಿ ಕೋಲು ಹಿಡಿದು ಚಾರಣ ಶುರು ಮಾಡಿದೆವು. ಮೊದಲು pissu top ಎಂಬಲ್ಲಿಗೆ ಅತ್ಯಂತ ದುರ್ಗಮ ಹಾದಿಯ ನಡಿಗೆ. ಏದುಸಿರು ಬಿಡುತ್ತಾ ಮದ್ಯೆ ಮದ್ಯೆ ಕೊಡುವ dry fruits, ಚಾಕಲೇಟ್ ಎಲ್ಲವನ್ನೂ ತಿನ್ನುತ್ತಾ ಜೊತೆಗೆ ಕುದುರೆಯವರ ಕಾಟ(pissu top 2000, pissu top1000)ದೊಂದಿಗೆ ಅಂತೂ pissu top ಹತ್ತಿದೆವು. ಬೆಳಗ್ಗೆ 9 ಘಂಟೆಗೆ ಚಾರಣ ಶುರು ಮಾಡಿದವರು pissu top ಗೆ 12 ಗಂಟೆಗೆ ತಲುಪಿದೆವು. ಅಲ್ಲಿ ನಮ್ಮ ತ್ರಿವರ್ಣ ದ್ವಜ ಹಾರಾಡುತ್ತಿರುತ್ತದೆ. ಅಲ್ಲಿ ಫೋಟೋ ತೆಗೆಸಿಕೊಂಡು ಮುಂದಿನ ದಾರಿ ಸಾಗಿದೆವು. ಮುಂದೆ ಬರುವುದೇ ಶೇಷಾನಾಗ್. ಈಗ ಬರತ್ತೆ ಆಗ ಬರತ್ತೆ ಅಂತ ನಡೆದದ್ದೇ ನಡೆದದ್ದು. ಸುಂದರ ಪ್ರಕೃತಿಯ ರಮಣೀಯ ದೃಶ್ಯಗಳನ್ನು ಅಸ್ವಾದಿಸುತ್ತ, ಫೋಟೋಗಳನ್ನು ಸೆರೆಹಿಡಿಯುತ್ತ ಅಂತೂ ಸಂಜೆ ಐದರ ಸುಮಾರು ಶೇಷನಾಗ್ ತಲುಪಿದೆವು.
ಶೇಷಾನಾಗ ಪುರಾಣ…
ಶಿವನು ಪಾರ್ವತಿಯ ಬಳಿ ಅಮರತ್ವದ ಬಗ್ಗೆ ಹೇಳುವಾಗ ಇಲ್ಲಿಯೇ ತನ್ನ ಕೊರಳಲ್ಲಿದ್ದ ಹಾವನ್ನು ಬಿಟ್ಟುಹೋದ ಎಂಬ ಪ್ರತಿಥಿ. ಹಾಗಾಗಿ ಅಲ್ಲಿ ಈಗಲೂ ಹರಿಯುವ ನದಿಯು ಹಾವಿನಂತೆಯೇ ಕಾಣುತ್ತದೆ. ಹಾಗಾಗಿ ಶೇಷಾನಾಗ ಎಂಬ ಹೆಸರು ಬಂದಿದೆ ಎಂದು ಕೂಡ ಹೇಳುತ್ತಾರೆ.
ಶೇಷಾನಾಗ ಪ್ರವೇಸಿಸುತ್ತಿದ್ದಾ0ತೆಯೇ below 0°c ನಷ್ಟು ಚಳಿ. ನೀರು ಮುಟ್ಟಿದರೆ ಕೈಯೇ ಮರಗಟ್ಟಿದ ಹಾಗೇ ಆ ಚಳಿಯಲ್ಲಿಯೇ ಗಡ ಗಡ ನಡುಗುತ್ತಾ, ಟೆಂಟ್ ಮಾಡಿ ನಾಳೆಯ ಚಾರಣಕ್ಕೆ ಅಣಿಯಾದೆವು. ಮುಂದೆ?
ರಾತ್ರಿ ಮಲಗಿದ್ದೇವೆ. ಧೋ ಎಂದು ಮಳೆರಾಯನ ಆಗಮನ. ಎಷ್ಟು ದೇವರಲ್ಲಿ ಬೇಡಿಕೊಂಡಿದ್ದೇವೆಯೋ ಮಳೆ ನಿಲ್ಲಿಸಿ ನಮಗೆ ಚಾರಣಕ್ಕೆ ಅನುಕೂಲ ಮಾಡಿಕೊಡು ಎಂದು. ಬೆಳಗ್ಗೆ ಎದ್ದವರು ಒಬ್ಬೊಬ್ಬರದು ಒಂದೊಂದು ಮಾತು, ಮಳೆ ಬಂದು ದಾರಿಯೆಲ್ಲಾ ಕೆಸರಾಗಿದೆ, ನಡೆಯುವುದು ಕಷ್ಟ ಎಂದು. ನಮ್ಮ ಜೊತೆ ಬಂದವರು ತುಂಬಾ ಜನ ಕುದುರೆ ಮಾಡಿಕೊಂಡು, ಪಾಲ್ಕಿ ಮಾಡಿಕೊಂಡು ಹೋದರು. ನಾವು ಮಾತ್ರ ಮನಸಿನಲ್ಲಿ ನಡೆದೇ ಹೋಗುವುದೆಂದು ದೃಢ ನಿರ್ಧಾರ ಮಾಡಿದ್ದರಿಂದ ನಡೆಯಲು ಶುರು ಮಾಡಿಕೊಂಡೇವು. ಶೇಷಾನಾಗ್ ನಿಂದ ಗಣೇಶ್ top ವರೆಗೂ ಬಲು ಪ್ರಯಾಸದ ದಾರಿ, ಅದರಲ್ಲೂ ಮಳೆ ಬಂದ ಕಾರಣ ದಾರಿ ಅನ್ನುವುದು ಕೆಸರು ಗದ್ದೆಯ ರೀತಿ, ಅದರ ಜೊತೆ ಐಸ್ ನಲ್ಲಿ ನಡೆಯುವ ಕಠಿಣ ಸವಾಲು. ಗಣೇಶ್ top ಬರುವವರೆಗೂ ನಡೆಯುತ್ತೇವೆಯೋ ಇಲ್ಲವೋ ಎಂಬoತಾಗಿತ್ತು. ಬರೀ ಒಂದು ಐದಾರು ಕಿ. ಮೀ ನ್ನೂ 4 ತಾಸು ತೆಗೆದುಕೊಂಡಿದ್ದೇವೆ ಅಷ್ಟು ಪ್ರಯಾಸದ ಹಾದಿ. ನಡು ನಡುವೆ ನಡೆಯಲು ಆಗುವುದೇ ಇಲ್ಲಾ ಎಂದು ಕುದುರೆಯವರೊಂದಿಗೆ ಚೌಕಸಿ ವ್ಯವಹಾರ, ನಮ್ಮ ರೇಟ್ ಗೆ ಅವರಿಗೆ ಆಗೋಲ್ಲ ಅವರ ರೇಟ್ ಗೆ ನಮಗೆ ಆಗದ ರೀತಿ. ಅಂತೂ ಅವರೊಂದಿಗೆ ವಾದ ವಿವಾದ ಮಾಡಿಕೊಂಡೆ ನಡೆದೇ ಗಣೇಶ್ top ತಲುಪಿದೆವು. ಇನ್ನೂ ಮುಂದಿನದು full ಐಸ್, ಬರ್ಫ್ ನಲ್ಲೆ ನಡೆಯುವ ಹೊಸ ಅನುಭವದ ನಡಿಗೆ.
ಅಬ್ಬಬ್ಬಾ ಬರ್ಫ್ ನಡಿಗೆ ಬೀಳುತ್ತಾ, ಏಳುತ್ತಾ, ಆಡುತ್ತ, ಮಿಲಿಟರಿ ಯವರ ಸಹಾಯ, ಸಹಚರರ ಸಹಾಯದೊಂದಿಗೆ ಅಂತೂ ಗುರಿಯನ್ನ ತಲುಪಿದೆವು. ಅಂದರೆ ಸಂಜೆ ಅರಕ್ಕೆ ಪಂಚತರಣಿ ತಲುಪಿದೆವು.
ಪಂಚತರಣಿ ಇತಿಹಾಸ…
ಶಿವನು ಪಾರ್ವತಿಗೆ ಅಮರತ್ವದ ಬಗ್ಗೆ ವಿವರಿಸಲು ಯಾರು ಕಾಣದ ದಾರಿಯಲ್ಲಿ ಸಾಗುತ್ತಿರುವಾಗ ಪಂಚ ಭೂತಗಳನ್ನು ಇಲ್ಲಿ ತ್ಯಜಿಸಿದ ಸ್ಥಳ ಎಂಬ ಪ್ರತೀತಿ.
ಪಂಚತರಣಿಗೆ ಕಾಲಿಡುತ್ತಿರುವಾಗಲೇ ಗಡ ಗಡ ನಡುಗಲು ಶುರು, ಮೂರು ದಿನದಿಂದ ಸ್ನಾನವಿಲ್ಲದೆ ಕೆಸರು, ಐಸ್ನಲ್ಲಿ ಓಡಾಡಿದ ಶ್ರಮಕ್ಕೆ, ಒಂದು ಬಕೆಟ್ ಬಿಸಿನೀರಿಗೆ 100ರೂಪಾಯಿಯಂತೆ ಕೊಟ್ಟು ಫ್ರೆಶ್ ಆದೆವು. ಬಾಟಲಿ ಬಿಸಿ ನೀರಿಗೆ 20 ರೂಪಾಯಿ. ಅಲ್ಲಿ ತಣ್ಣೀರು ಮುಟ್ಟಿದರೆ ಕೈ ಶೆಟೆದು ಹೋಗುವ ರೀತಿ ಅಷ್ಟೊಂದು ಚಳಿ ಅಬ್ಬಬ್ಬಾ.
ಇನ್ನೂ ನೆಚ್ಚಿನ ಅಮರನಾಥನ ದರ್ಶನಕ್ಕೆ ಮಾರನೇ ದಿನ ಹೋಗಲು ಅಣಿಯಾದದ್ದು.
Holy cave.
ಮಾರನೇ ದಿನ ಬೆಳಗ್ಗೆ ಅಮರನಾಥನ ದರ್ಶನಕ್ಕೆ ಬೆಳಗ್ಗೆ 6. 45 ಚಾರಣ ಕೈಗೊಂಡೇವು. ಪಂಚತರಣಿಯಿಂದ ಅಮರನಾಥನ ಗುಹೆಗೆ ತುಂಬಾ ಕಿರಿದಾದ ದಾರಿ. ಕುದುರೆ, ಪಲ್ಕಿ, ಹಾಗೂ ನಡೆದು ಹೋಗುವವರಿಗೆ ಎಲ್ಲರಿಗೂ ಒಂದೇ ದಾರಿ.. ನಡು ನಡುವೆ ಕೆಸರು, ಕಲ್ಲು, ಮಣ್ಣು, ice ಅದರಲ್ಲಿಯೇ ನಡೆಯುತ್ತಾ ನಡೆಯುತ್ತಾ ಅಂತೂ ಸರಿ ಸುಮಾರು ಮದ್ಯಾಹ್ನ 12ಕ್ಕೆ ಅಮರನಾಥನ ದರ್ಶನ ಪಡೆದೆವು. ಜೊತೆಗೆ ಅಲ್ಲಿದ್ದoತಹಎರಡು ಪಾರಿವಾಳಗಳು ನಮಗೆ ದರ್ಶನ ಕೊಟ್ಟು ಪುರ್ ಎಂದು ಹಾರಿಹೋದವು..
ಅಮರನಾಥನ ಸ್ಥಳ ಪುರಾಣ...
ಅಮರನಾಥ ಹಿಂದೂ ಧರ್ಮದ ದೇವ ಶಿವನಿಗೆ ಸಮರ್ಪಿತವಾಗಿರುವ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹೆ ದೇವಾಲಯ. ಸುಮಾರು ೫೦೦೦ ವರ್ಷಗಳಷ್ಟು ಹಳೆಯದಿರಬಹುದೆಂದು ನಂಬಲಾಗಿರುವ ಈ ದೇವಾಲಯವು ಹಿಂದೂ ಪುರಾಣದಲ್ಲಿ ಮಹತ್ವವನ್ನು ಹೊಂದಿದೆ. ಗುಹೆಯೊಳಗೆ ಮಂಜಿನ ಗೆಡ್ಡೆಯೊಂದು (stalagmite) ಲಿಂಗದ ಆಕಾರವನ್ನು ಹೊಂದಿದ್ದು ಇದನ್ನು ಇಲ್ಲಿ ಪೂಜಿಸಲಾಗುತ್ತದೆ. ೩,೮೮೮ ಮೀಟರ್ ಎತ್ತರದಲ್ಲಿ ಇರುವ ಈ ದೇವಾಲಯವು ಶ್ರೀನಗರದಿಂದ ಸುಮಾರು ೧೪೧ ಕಿ. ಮಿ. ದೂರದಲ್ಲಿದೆ. ಅಮರನಾಥ ಪದದ ಅರ್ಥ ಅಮರ ಅಂದರೆ ಚಿರಂಜೀವಿ ಹಾಗು ನಾಥ ಅಂದರೆ ದೇವರು ಎಂಬ ಎರಡು ಪದಗಳಿಂದ ಈ ಸ್ಥಳವು ಅಮರನಾಥ ಎಂಬ ಹೆಸರನ್ನು ಪಡೆದಿದೆ.
ಅಮರನಾಥ ಗುಹೆಯು ಶಿವನಿಗೆ ಸಂಬಂಧಿಸಿದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶಿವನು ಬ್ರಹ್ಮಾಂಡದ ಸೃಷ್ಟಿಯ ಕಥೆಯನ್ನು ಮತ್ತು ಅಮರತ್ವದ ರಹಸ್ಯವನ್ನು ತನ್ನ ಸಂಗಾತಿಯಾದ ಪಾರ್ವತಿಗೆ ಇಲ್ಲಿ ಈ ಗುಹೆಯಲ್ಲಿ ವಿವರಿಸಿದ್ದಾನೆ ಎಂದು ಹೇಳಲಾಗುತ್ತದೆ. ಧರ್ಮಗ್ರಂಥಗಳು ಹೇಳುವಂತೆ, ಒಮ್ಮೆ ಪಾರ್ವತಿಯು ಶಿವನನ್ನು ಕುತೂಹಲದಿಂದ ಮುಂಡ ಮಾಲೆ ಧರಿಸಲು ಕಾರಣವನ್ನು ಕೇಳಿದಳು, ಅದಕ್ಕೆ ಶಿವನು,ಪ್ರಿಯತಮೆ ನೀನು ಹುಟ್ಟಿದಾಗಲೆಲ್ಲಾ ನಾನು ಹೊಸ ತಲೆಯನ್ನು ಧರಿಸುತ್ತೇನೆ ಮತ್ತು ಅದನ್ನು ನನ್ನ ಮುಂಡ ಮಾಲೆಗೆ ಸೇರಿಸುತ್ತೇನೆ ಎಂದಾಗ ಇದರಿಂದ ಗೊಂದಲಕ್ಕೊಳಗಾದ ಪಾರ್ವತಿ ಶಿವನನ್ನು ಕೇಳಿದಳು, ನೀವು ಅಮರನಾಗಿದ್ದೀರಾ ಮತ್ತು ನಾನು ಪ್ರತಿ ಬಾರಿ ಸಾಯುತ್ತೇನೆ ಮತ್ತು ನನ್ನ ದೇಹವು ನಾಶವಾಗುತ್ತದೆ ಏಕೆ? ಆಗ ಶಿವನು ಪಾರ್ವತಿಗೆ ಉತ್ತರಿಸಿದ, ಇದು ಅಮರಕಥೆಯಿಂದಾಗಿ ಸಂಭವಿಸುತ್ತದೆ. ಮಾ ಪಾರ್ವತಿಯ ನಿರಂತರ ಬೇಡಿಕೆಯ ಮೇರೆಗೆ, ಅವರು ಏಕಾಂತ ಸ್ಥಳವನ್ನು ಆಯ್ಕೆ ಮಾಡಿದರು (ಇದರಿಂದಾಗಿ ಬೇರೆ ಯಾರೂ ಕಥೆಯನ್ನು ಕೇಳಲು ಸಾಧ್ಯವಾಗುವುದಿಲ್ಲ),
ಅದಕ್ಕಾಗಿಯೇ ಅವನು ತನ್ನ ಬುಲ್ ನಂದಿಯನ್ನು ಪಹಲ್ಗಾಮ್ನಲ್ಲಿ ಬಿಟ್ಟನು, ಅದರ ಮೇಲೆ ಅವನು ಸವಾರಿ ಮಾಡಿದನು, ಚಂದನ್ವಾರಿಯಲ್ಲಿ ಅವನು ಚಂದ್ರನನ್ನು ತನ್ನ ಕೂದಲಿನಿಂದ ಹೊರತೆಗೆದನು, ಶೇಷನಾಗ್ ದಂಡೆಯಲ್ಲಿ ಅವನು ತನ್ನ ಹಾವನ್ನು ಬಿಟ್ಟನು. ಅವರು ತಮ್ಮ ಮಗ ಗಣೇಶನನ್ನು ಮಹಾಗುಣ ಪರ್ವತದಲ್ಲಿ ಬಿಟ್ಟರು ಮತ್ತು ಪಂಜತರ್ಣಿಯಲ್ಲಿ ಅವರು ಮಾನವನ ಕಟ್ಟಡ ಸಾಮಗ್ರಿಗಳು ಎಂದು ನಂಬಲಾದ ಗಾಳಿ, ನೀರು, ಭೂಮಿ, ಆಕಾಶ ಮತ್ತು ಬೆಂಕಿಯ ಎಲ್ಲಾ ಐದು ಅಂಶಗಳನ್ನು ಬಿಟ್ಟುಹೋದರು. ಭಗವಾನ್ ಶಿವ ಮತ್ತು ಪಾರ್ವತಿ ಸಹ ಭೂಮಿಯನ್ನು ತ್ಯಾಗ ಮಾಡುವ ಸಂಕೇತವಾಗಿ ತಾಂಡವ ನೃತ್ಯವನ್ನು ಮಾಡಿದರು ಮತ್ತು ತಮ್ಮ ನಿರೂಪಣೆಯನ್ನು ಮುಂದುವರಿಸಲು ಅಲ್ಮಾರನಾಥ ಗುಹೆಯನ್ನು ತಲುಪಿದರು. ನಂತರ ಶಿವನು ಜಿಂಕೆಯ ಚರ್ಮದ ಮೇಲೆ ಸಮಾಧಿಯ ಮೇಲೆ ಕುಳಿತು ಏಕಾಗ್ರತೆಗೆ ಹೋದನು. ಯಾವುದೇ ಜೀವಿಯು ಕಥೆಯನ್ನು ಕೇಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವನು ರುದ್ರನನ್ನು ಸೃಷ್ಟಿಸಿದನು, ಅವನಿಗೆ ಕಾಲಾಗ್ನಿ ಎಂದು ಹೆಸರಿಸಿದನು. ಜೀವಿಯ ಪ್ರತಿಯೊಂದು ಕುರುಹುಗಳನ್ನು ತೊಡೆದುಹಾಕಲು ಗುಹೆಯನ್ನು ಬೆಂಕಿಯಿಡಲು ಶಿವನು ರುದ್ರನನ್ನು ಕೇಳಿದನು. ನಂತರ ಅವರು ಪಾರ್ವತಿಗೆ ಪ್ರಪಂಚದ ಕಥೆಯನ್ನು ಹೇಳಲು ಪ್ರಾರಂಭಿಸಿದರು. ಅಚಾತುರ್ಯದಿಂದ ಜಿಂಕೆಯ ಚರ್ಮದ ಕೆಳಗೆ ಬಿದ್ದಿದ್ದ ಮೊಟ್ಟೆಯೊಂದು ರಕ್ಷಣೆ ಪಡೆಯಿತು ಮತ್ತು ಈ ಮೊಟ್ಟೆಯಿಂದ ಹುಟ್ಟಿದ ಜೋಡಿ ಪಾರಿವಾಳಗಳು ಅಮರ ಕಥಾ ಕಥೆಯನ್ನು ಕೇಳಿ ಅಮರವಾದವು ಎಂದು ನಂಬಲಾಗಿದೆ. ವಿವಿಧ ಸಂದರ್ಭಗಳಲ್ಲಿ ಜನರು, ಪ್ರಯಾಸಕರ ಮಾರ್ಗದಲ್ಲಿ ಚಾರಣ ಮಾಡುವಾಗ ಜೋಡಿ ಪಾರಿವಾಳಗಳನ್ನು ನೋಡಿದ್ದಾರೆ. ನಾವು ಕೂಡ ಆ ಪಾರಿವಾಳಗಳನ್ನು ನೋಡಿ ಪುನೀತಾರಾದೇವು.
ಆ ನಂತರ baltal ಕಡೆ ಇಳಿಯುವ ದುರ್ಗಮ ಹಾದಿ, ನೆನೆಸಿಕೊಂಡರೆ ಈಗಲೂ ಮೈ ಜುಮ್ ಎನ್ನುತ್ತದೆ. ತುಂಬಾ ಇಳಿಜಾರಾದ ಹಾದಿ, ಮಳೆ ಬಂದ ಕಾರಣ ದಾರಿ ಉದ್ದಕ್ಕೂ ಕೆಸರು ಮಯ. ಸ್ವಲ್ಪ slip ಆದರೂ ಪ್ರಪಾತಕ್ಕೆ ಬೀಳುವಂತಹ ದಾರಿ, ಅದರಲ್ಲಿಯೇ ಲ್ಲಿ ನಡೆದು balatal base ಕ್ಯಾಂಪ್ ಸರಿ ಸುಮಾರು ರಾತ್ರಿ ಎಂಟಕ್ಕೆ ತಲುಪಿದೆವು. ಮಾರನೇ ದಿನ ಶ್ರೀ ನಗರದ ವಿವಿಧ ಪ್ರದೇಶಗಳನ್ನು ನೋಡಲು ಅಣಿಯಾದೆವು.
ದೇವರ ದಯೆ ದೊರೆತದ್ದು...
ಮರುದಿನ ಮುಂಜಾನೆ ಸರಿಯಾಗಿ 4 ಗಂಟೆಗೆ ಬಸ್ಸಿನಲ್ಲಿ ಹೊರಟು ಶ್ರೀ ನಗರ ತಲುಪಿದರೆ ಅಲ್ಲಿಂದ ಜೋರು ಮಳೆ. ಶ್ರೀ ನಗರ ಎಂದರೆ ಮಿಲಿಟರಿ ಕಾವಲು ಪಡೆಯ ಹದ್ದಬಸ್ತಿನಲ್ಲಿರುವ ಜಾಗ, ನಾವು ಶ್ರೀನಗರದ ವಿವಿಧ ಪ್ರದೇಶಗಳನ್ನು ನೋಡಲು ಹೋಗುವುದೆಂದು ಅಂದುಕೊಂಡಿದ್ದೆವು. ಆದರೆ ಮಳೆ ಜೋರಾದ ಕಾರಣ ಬಸ್ ಮುಂದೆ ಹೋಗಲು ತುಂಬಾ ಪ್ರಯಾಸದಾಯಕವಾಗಿದ್ದು ನಮ್ಮ ಡ್ರೈವರ್ ನ ಸಲಹೆಯ ಮೇರೆಗೆ ಶ್ರೀನಗರ ನೋಡುವುದನ್ನ ಡ್ರಾಪ್ ಮಾಡಿ ಮೊದಲು ಶ್ರೀನಗರವನ್ನು ದಾಟಿದರೆ ಸಾಕೆಂದು ಊಟ ತಿಂಡಿ ಬಿಟ್ಟು ದೇವರ ಧ್ಯಾನ ಮಾಡುತ್ತಾ ಬಸ್ಸಿನಲ್ಲಿ ಕುಳಿತೆವು. ಶ್ರೀ ನಗರ ದಾಟುವುದು ಅಷ್ಟು ಸುಲಭ ವಲ್ಲ, ಮಿಲಿಟರಿ ಕಂಗಾವಲಿನಲ್ಲಿ, ಅತ್ಯಂತ ಕಿರಿದಾದ ರಸ್ತೆ, ಪಕ್ಕಕ್ಕೆ ಪ್ರಪಾತ ಅಂತಹ ದಾರಿಯಲ್ಲಿ ಮಾಮೂಲಿ ಯಾಗಿ ಬಸ್ ಓಡಿಸುವುದೇ ಒಂದು ಸಾಹಸ ಅದರಲ್ಲಿ ಜೋರು ಮಳೆಯಲ್ಲಿ ನಮ್ಮ ಡ್ರೈವರ್ ನಮ್ಮನ್ನು ಸುರಕ್ಷಿತವಾಗಿ ಶ್ರೀನಗರ ತಲುಪಿಸಿದರು. ಶ್ರೀ ನಗರದ ರಾಮ್ ಬನ್ ಎಂಬಲ್ಲಿ ನಮ್ಮ ಕಣ್ಣೆದುರೇ ಒಂದು ಬಸ್ ಪ್ರಪಾತಕ್ಕೆ ಬಿದ್ದಿದ್ದನ್ನ ನೋಡಿ ಮೈ ಜುಮ್ ಎನಿಸಿತು. ನಮ್ಮ ಡ್ರೈವರ್ನ ಸಮಯ ಪ್ರಜ್ಞೆ ಯಿಂದ ಅಂತೂ ಸಂಜೆ 4 ಗಂಟೆಗೆ ಶ್ರೀ ನಗರ ದಾಟಿ ಸರಾಗವಾಗಿ ಉಸಿರಾಡಿದೆವು. ಅಲ್ಲಿಂದ ಮುಂದೆ ನಮಗೆ ಒಂದೊಂದೇ ಸುದ್ದಿಗಳು ಹೊರಬಂದವು. ಅಮರನಾಥನಾ ಸನ್ನಿದಿಯ ಅರ್ಧದಲ್ಲಿ ಮೇಘಸ್ಪೋಟ ಆಗಿದೆ,ಯಾತ್ರೆ ರದ್ದಾಗಿದೆ, ಮದ್ಯದಲ್ಲಿ ಸಿಲುಕಿರುವವರು ಅಲ್ಲಲ್ಲಿಯೇ ಇದ್ದಾರೆ ಎಂಬ ಸುದ್ದಿ. ನಾವಂತೂ ಆ ದೇವರ ದಯೆಯಿಂದ ಯಾವುದೇ ಕಷ್ಟಕ್ಕೆ ಸಿಲುಕದೆ ಪಾರಾಗಿದ್ದೆವು. ಆ ದೇವರಲ್ಲಿ ಎಷ್ಟು ಬೇಡಿದರೂ ಕಡಿಮೆಯೇ. ಒಂದೇ ಒಂದು ದಿನ ನಮ್ಮ ದರ್ಶನ ತಡವಾಗಿದ್ದರು ನಾವೂ ಕೂಡ ಅಲ್ಲಿಯೇ ಸಿಕ್ಕಿ ಹಾಕಿಕೊಳ್ಳಬೇಕಿತ್ತು ಆದರೆ ಆ ದೇವರ ಅನುಗ್ರಹದಿಂದ ಆರಾಮಾಗಿ ಪ್ರಕೃತಿಯ ವರದೊಂದಿಗೆ ಹೋಗಿ ಬಂದೆವು. ನಂತರ ಜಮ್ಮುವಿನಲ್ಲಿ ಕಾಳಿ ಮಾತಾ ದೇವಸ್ಥಾನ ಮುಂತಾದ ದೇವಸ್ಥಾನಗಳನ್ನು ನೋಡಿ ಅಜ್ಮಿರ್ ಕಡೆ ಪಯಣ ಬೆಳೆಸಿದೆವು.
ನಂತರ ಅಜ್ಮಿರ್ ಬ್ರಹ್ಮ ದೇವಸ್ಥಾನ, ದ್ವಾರಕಾ ಕೃಷ್ಣ ನಾ ದೇವಸ್ಥಾನ, ವೇರವಾಲ್ ಸೋಮನಾಥ ದೇವಸ್ಥಾನ ದ ದರ್ಶನ ಪಡೆದು ಜುಲೈ 14 ರಂದು ನಮ್ಮ ಕರ್ನಾಟಕದ ಉಡುಪಿಯಲ್ಲಿ ರೈಲಿಳಿದು, ಅಲ್ಲೂ ಕೃಷ್ಣ ನ ದರ್ಶನ ಪಡೆದು ರಾತ್ರಿ 9 ಕ್ಕೆ ನಮ್ಮ ಶಿವಮೊಗ್ಗ ತಲುಪಿದೆವು..
ಇನ್ನೂ ಖರ್ಚಿನ ವಿಷಯ…
ನಾವು ಹೋಗುವಾಗ ಬರುವಾಗ ರೈಲಿನಲ್ಲೇ ಹೋಗಿದ್ದರಿಂದ ಇಬ್ಬರಿಂದ ರೈಲಿನ ಖರ್ಚು 5000 ರೂಪಾಯಿಗಳು ಮಾತ್ರ. ಇನ್ನುಳಿದಂತೆ ನಾವು ಒಂದು ತಂಡದಿಂದ ಹೋಗಿದ್ದರಿಂದ ಅಲ್ಲಿ ಎಲ್ಲಾ ಕಡೆ ರೂಮ್ ಅಂದರೆ dormitery ಟೈಪ್ ಹಾಗೂ ಬೇರೆ ಬೇರೆ ರೂಮ್ ಮಾಡಿದ್ದರೂ ಕೂಡ ಶೇರಿಂಗ್ ಸಿಸ್ಟಮ್ ಇದ್ದ ಕಾರಣ ಒಬ್ಬೊಬ್ಬರಿಗೆ ac ರೂಮ್ ಆದರೂ ಕೂಡ 250 ರಿಂದ 300 ರೂಪಾಯಿ ವರೆಗೆ ಮಾತ್ರ ಖರ್ಚಾಗಿದ್ದು. ಇನ್ನುಳಿದಂತೆ ಊಟ ತಿಂಡಿ, ಪರ್ಚಸಿಂಗ್ ಎಲ್ಲಾ ಸೇರಿ ಇಬ್ಬರಿಂದ 10000 ರೂಪಾಯಿಗಳು, ಒಟ್ಟಿನಲ್ಲಿ ಇಬ್ಬರಿಂದ ನಮ್ಮ ಯಾತ್ರೆಯ ಖರ್ಚು 20 ರಿಂದ 25 ಸಾವಿರ ಮಾತ್ರ. ನಾವು ಯಾವುದೇ ಪ್ಯಾಕೇಜ್ ಟ್ರೇಪ್ ಅಲ್ಲಿ ಹೋಗಿದ್ದರೂ ಒಬ್ಬರಿಗೆ 50000 ದಷ್ಟಾಗುತ್ತಿತ್ತು ಆದರೆ ಇಲ್ಲಿ ಇಬ್ಬರಿಂದ 25ಸಾವಿರ ಮಾತ್ರ. ನಾವು ನಡೆದೇ ಯಾತ್ರೆ ಮುಗಿಸಿದ್ದಕ್ಕಾಗಿ ಇಷ್ಟು ಆಗಿದೆ,ಇನ್ನೂ ಯಾರಾದರೂ ಕುದುರೆ, ಪಲ್ಕಿ, ಹೆಲಿ ಕ್ಯಾಪ್ಟರ್ ತಗೊಳುವುದಾದರೆ ಅವರಿಗೆ ಎಕ್ಸ್ಟ್ರಾ 10ಸಾವಿರದಷ್ಟು ಖರ್ಚಗುತ್ತದೆ ಅಷ್ಟೇ. ಇಷ್ಟೆಲ್ಲ ಕಡಿಮೆ ಖರ್ಚಿನಲ್ಲಿ ಹೋಗಿ ಬರಲು ಪ್ಲಾನ್ ಮಾಡಿದ ಶಿವಮೊಗ್ಗದ ಶಾಂತಲಾ ಸಿಲ್ಕ್ ಅಂಗಡಿಯ ಮಾಲೀಕರಾದ ವಿಜಯ್ ಕುಮಾರ್ ಬಿದ್ರೆ ಸರ್ ರವರಿಗೆ ಧನ್ಯವಾದಗಳನ್ನ ಅರ್ಪಿಸಲೇ ಬೇಕು.
ಅಂತೂ ಬಹುದಿನದ ಕನಸು ಅಮರನಾಥ ನೆಡೆಗೆ ನಮ್ಮ ಪಯಣ ದೇವರ ದಯೆಯಿಂದ ಎಲ್ಲವೂ ಸುಸುತ್ರವಾಗಿ ಸಾಗಿ ಒಂದು ಯುದ್ಧ ಜಯಿಸಿದಷ್ಟು ಖುಷಿಯಿಂದ ಮನೆಗೆ ವಾಪಾಸ್ಸಾದೇವು.
-ಶ್ರೇಯ ಕೆ ಎಂ
Very nice