ಪಂಜು ಕಾವ್ಯಧಾರೆ

ಮಿಡ್ ನೈಟ್ @ಪ್ರೀಡಂ

ಹೀಗೆ ಏಕಾಂತದಲ್ಲಿ
ಇರಲು ಯಾವಾಗಲೂ
ನನಗೆ ಇಷ್ಟ
ಇದು, ಅವನು ಬಿಟ್ಟು ಹೋದ
ಹಲವುಗಳಲ್ಲಿ ಇದು ಕೂಡ.

ಪ್ರತಿ ರಾತ್ರಿ ಎರಡು ಪೆಗ್ ವೈನ್
ಮತ್ತವನ ಖಾಲಿ ನೆನಪು
ಇಷ್ಟೇ, ಚಂದ್ರನ ಆಸರೆಯಲ್ಲಿ
ಮಧು ಹೀರುತ್ತಾ,
ತೇಲುತ್ತಾ ಹಾಗೆ ಒರಗಿಕೊಳ್ಳುವೆ.

ಒಮ್ಮೊಮ್ಮೆ ಅವನೊಂದಿಗೆ ಕಳೆದ
ತುಂಟ ಪೋಲಿ ನೆನಪುಗಳು
ಬೇಡವೆಂದರು
ನನ್ನ ಅಂಗಾಲಿಗೆ ಮುತ್ತಿಡುತ್ತಾ
ಬಲವಂತವಾಗಿ ಕಾಡಿಸುತ್ತವೆ.

ಹೂ ಮುಗುಳಿಗೆ
ತಾಕಿಸಿದ ಅವನ ಕಿರು
ನಾಲಿಗೆ ರುಚಿ,
ಮತ್ತೆ ಮತ್ತೆ
ಕವಾಟಗಳೆರಡು ಬಯಸುತ್ತವೆ.

ಸಿಕ್ಕು ಬಿದ್ದ
ಕೂದಲಲ್ಲಿ ಅವನಾಡಿಸಿದ
ಕಿರು ಬೆರಳಾಟ
ಮತ್ತೆ ಬೇಕನಿಸುತ್ತದೆ.

ಹೀಗೀಗ ಬರೀ ಖಾಲಿ,
ಎರಡು ಪೆಗ್ ವೈನ್ ಜೊತೆ
ಅವನ ನೆನಪಿನೊಂದಿಗೆ
ಹಾಗೊಮ್ಮೆ ಹಿಗೊಮ್ಮೆ
ಬೆರಳುಗಳು ಇಣುಕಿ ಬಂದಾಗಲೇ
ಚಿಂತೆ ಕಳೆದು ಚಿತ್ತದಲ್ಲೇ ಅಡ್ಡಾಗುವೆ.

ಬರೀ ಎರಡು ಪೆಗ್ ವೈನ್
ಮತ್ತವನ ನೆನಪು
ಅಷ್ಟೇ, ಏಕಾಂತ ಸಂಪನ್ನ!!

ಆನಂದ ಎಸ್ ಗೊಬ್ಬಿ

ಸಾಕಲ್ಯ

ಭಾವದಲೊಮ್ಮೆ ಜೀವಿಸಿಬಿಡುವೆ
ಜೀವಂತವಾಗಿ ಸುಮ್ಮನೇ
ಹಮ್ಮುಬಿಮ್ಮುಗಳ ಹೊದಿಕೆಯಿರದ
ಶಾಂತವದನದ ಹೆಮ್ಮೆಯೇ
ಮಾತು ಮೌನದ ನಡುವೆ
ಮುಕುರ ಸಮಗೆರೆಯ ಹಾಕಿ
ನಿಲ್ಲುವೆನು ಹದವ ತಪ್ಪದಂತೆ
ಎಲ್ಲಾ ಲೋಕದಲೂ ನಾನು ಕಾಣುವಂತೆ
ನಗುವ ಬೀರುವೆ ತಪ್ಪದೇ
ಪ್ರೀತಿ ಒಡಲಿಗೆ ಮುದ್ದು ಮಡಿಲಿಗೆ
ಮಗುವ ರೀತಿ ಬದುಕುವೆ
ದೊಡ್ಡ ಬದುಕಿಗೆ ಸಣ್ಣ ಖುಷಿಯ
ಅಂಬಾರಿ ಮೆರವಣಿಗೆ ತರುವೆ
ಆಸ್ತೆಯೊಳೊಮ್ಮೆ ನಕ್ಕು ಹಗುರಾಗಿ
ಉಸಿರು ಸಣ್ಣಗೆ ಬಿಡುವೆ
ಗಾಳಿ ಗಂಧ ಹರಡಿದಂತೆ
ಸುಮದ ನೆರಳು ತಂಪಿನಂತೆ
ಬುವಿಯಲಿ ಕಾಣುವ ಸ್ವರ್ಗದಂತೆ
ಚಿತ್ರವಾಗಿ ಬದುಕುವೆ
ಅಳಿದ ಮೇಲೂ ಪ್ರಕೃತಿಯಲ್ಲಿ
ಸಾಲುಗಳಾಗಿ ಉಳಿಯುವೆ
ದೇಶ ಕಾಲ ಎಲ್ಲಾ ಮೀರಿ
ಸಾಕಲ್ಯ ಪಡೆಯುವೆ…….

ನಾಗರಾಜ ಬಿ.ನಾಯ್ಕ


ಮತದಾನ

ಯಾರಿವರು? ಯಾರಿವರು?
ಮನೆಬಾಗಿಲಿಗೆ ಬಂದವರು
ಯಾರಿವರು ಯಾರಿವರು?

ಚಿಹ್ನೆಯನ್ನು ತೋರಿಸುವರು
ದಾನವನ್ನು ಕೇಳುವರು
ಮತವನ್ನು ನೀಡಿ ಹೇಳುವರು
ಯಾರಿವರು? ಯಾರಿವರು?

ಕಥೆಗಳನ್ನು ಕಟ್ಟಿದವರು,
ಮನವ ಹಿತ ವ್ಯೆತ್ಯನ್ನರಿಯರು
ದೇಶವೆಂಬ ಮಾತೆಯನ್ನು ತೋರಿಸಿ,
ಮನದಲ್ಲಿಯ ಮತವ ದಾನವಾಗಿ ಕೇಳವರು
ಯಾರಿವರು? ಯಾರಿವರು?

ಮತಕ್ಕಾಗಿ ಮತಾಂದತೆಯನ್ನು ಸೃಷ್ಟಿಸಿದವರು
ಮನುಜ ಹಿತವನ್ನೇ ಹಾಳುಗೆಡುವಿಹರು
ಗದ್ದುಗೆಯಲ್ಲಿ ಕುಳಿತು ಗುದ್ದಾಡುತ್ತಾ ಉದಾರತೆ ಮರೆತು
ಉದರವನ್ನು ಉರಿಸುವ ಯಾರಿವರು? ಯಾರಿವರು?

ಹಸಿವು ಅರಿಯರು ಹಸಿರು ಕಿತ್ತವರು
ಕ್ರಾಂತಿಯ ಹೆಸರಿನಲ್ಲಿ
ಬದುಕಿನ ಕಾಂತಿಯೇ ಆರಿಸಿದವರು
ಯಾರಿವರು ? ಯಾರಿವರು?

ವಿಶ್ವ ಮಾನವರು ನಾವು ನಾವೆಲ್ಲರು ಒಂದೇ
ವಿಂಗಡಿಸಿ ಆಳುವರು
ಇವರು ಯಾರೆಂದು?
ಯಾರಿವರು? ಯಾರಿವರು?

ದಾನ ನೀಡುವ ನಾವು-ನೀವು
ನಮ್ಮ ದಾನ ಮತದಾನ
ಮತ ಹಾಗೂ ದಾನ ಒಂದಾದರೇ,
ಅದು ಒಂದು ನಾಣ್ಯ ಎರಡು ಮುಖಗಳು

ಯೋಚಿಸಿ ಚಲಾಯಿಸಿದ ಮತ
ಮರು ಸೃಷ್ಠಿಯ ಮತ್ತೊಂದು ಇತಿಹಾಸ
ಮನವೆಂಬ ಕನ್ನಡಿಯನ್ನು ನೋಡಿದಾಗ
ಇವರೇ ನಾವು, ನಾವೇ ಇವರು.
-ಸಂತೋಷ್ ಜಾಧವ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x