ಕಾವ್ಯಧಾರೆ

ಎರಡು ಕವಿತೆಗಳು: ಜ್ಯೋತಿಕುಮಾರ್‌ ಎಂ.

ಅವರವರ ಭಾವ

ಶವ ಹುಗಿದು ಬಂದವರು
ದೋಷ ಕಳೆಯಲೆಂದು
ಗುಂಡಿ ತೆಗೆದವನ
ವಸ್ತ್ರ ತುಂಬಿಸಿದರು.
ಕೂಲಿಯವರು ಹೊಟ್ಟೆ
ತುಂಬ ಕಳ್ಳು ಕುಡಿದು
ದೋಷವನು
ಜೀರ್ಣಿಸಿಕೊಂಡರು.

ತಾವು ಮಾಡಿದ
ಪಾಪ ಕರ್ಮಗಳು
ಕಳೆಯಲೆಂದು,
ಭಿಕ್ಷಾ ತಟ್ಟೆಗೆ
ಚಿಲ್ಲರೆ ಎಸೆದರು.
ಪಾಪದ ಅಕ್ಕಿಯ
ಅನ್ನ ಬೇಯಿಸಿ ತಿಂದು
ಅವರು ಅರಗಿಸಿಕೊಂಡರು.

ಕೈಗಂಟಿದ ರಕ್ತದ
ಕಲೆ ತೊಳೆಯಲೆಂದು
ಒಂದಿಷ್ಟು ಕಂತೆ
ದಾನ ಕೊಟ್ಟರು.
ರಕ್ತ ಕಲೆಯ ಊಟವ
ಅನಾಥ ಮಕ್ಕಳು ಉಂಡು
ರಕ್ತಗತವಾಗಿಸಿಕೊಂಡರು.

ಪಾಪದ ಪಿಂಡವೆಂದು
ಹಡೆದು ತೊಟ್ಟಿಗೆ
ಎಸೆದು ಹೋದರು.
ನಡುರಾತ್ರಿಯಲಿ
ಸಿಕ್ಕ ಕೂಸು
ಬಂಜರು ಜೀವನದ
ಅದೃಷ್ಟವೆಂದು
ನಡು ವಯಸ್ಸಿನ
ದಂಪತಿಗಳು
ಕಣ್ಣಿಗೊತ್ತಿಕೊಂಡರು.

ಯಾವುದು ದೋಷ?
ಯಾವುದೀ ಕರ್ಮ?
ಯಾರ ರಕ್ತದ ಕಲೆ?
ಯಾರು ಪಾಪದ ಪಿಂಡ?
ಜೀವನ, ಭಾವನ, ಪಾವನ.
ಅವರವರ ಭಾವಕ್ಕೆ
ಅವರವರದೆ ಭಕ್ತಿ,
ಅವರಿವರಿಗೆ ಅದೆ ಶಕ್ತಿ.


ಕಾರಣ

ಮನಸ್ಸುಗಳ
ಬೆಸೆದುಕೊಂಡಾಗ,
ಬಿಸುಪು ಕೈಗಳ
ಸ್ಪರ್ಶ ರೋಮಾಂಚನದಿಂ,
ಸುಮ್ ಸುಮ್ಮನೆ
ಆಲಂಗಿಸಿಕೊಂಡಾಗ,
ಬಳಿ ಸಾರಿ
ಮುದ್ದಾಡಿಕೊಂಡಾಗ,
ಕತ್ತಲೆ ಟಾಕೀಸಿನ
ಕೊನೆ ಸಾಲು ಹಿಡಿದಾಗ,
ಸೇರಲು ಹೊರಟು
ಬಾರದ ಬಸ್ಸ ಶಪಿಸಿದಾಗ,
ಅನುಮಾನವಿಲ್ಲದೆ
ನಡುಗಡ್ಡೆಯಲ್ಲಿ ಕೂಡಿದಾಗ,
ನಡುರಾತ್ರಿ ಎಬ್ಬಿಸಿ
ಕಚ್ಚಿ, ಕಾಡಿದಾಗ,
ಮಳೆಯಲಿ ನೆಂದು
ಪ್ರೀತಿಯಲ್ಲಿ ಮಿಂದಾಗ,
ಮಿದುವೆದೆ ಸೋಕಿ
ಬೆವರ ಮುತ್ತಾದಾಗ,
ಸೇಬೊಂದನ್ನೆ
ಇಬ್ಬರೂ ಕಾಡಿ ತಿಂದಾಗ,
ಹೆರಳ ತುಂಬಿ
ಮಲ್ಲಿಗೆ ಘಮವಾದಾಗ.
ಕಾರಣವೇ ಬೇಕಿರಲಿಲ್ಲ.
ಅದರ
ದಾದೂ ಇಬ್ಬರಿಗೂ
ಅಂಟಲಿಲ್ಲ.

ನೀ, ಅಂದು
ಬಿರುಗಾಳಿಯಂತೆ ಬಂದಾಗ,
ಕೈಯಳತೆ
ದೂರದಿಂ ನಿಂತಾಗ,
ಇಂದಿಗೆ ಎಲ್ಲಾ
ಮುಗಿತು ಅಂದಾಗ,
ಕಲ್ಲಾದ
ಹೃದಯ ನಿಂದಾದಾಗ,
ಇದೇ ಕೊನೆ
ಇನ್ನೂ ನೋಡೋದು ಬೇಡೆಂದಾಗ,
ಬತ್ತಿದಾ ಕೆರೆಗೆ
ಕಣ್ಣೀರೆ ಕೋಡಿಯಾದಾಗ,
ಇಡಿಯಲು ಹೋದ
ಕೈ ಕೊಸರಿಕೊಂಡಾಗ,
ಗೋಗರಿದರೂ
ಬಸ್ಸೇರಿ, ಕೈ ಬೀಸಿದಾಗ.
ಕಾರಣವೆ ಇರಲಿಲ್ಲ.
ಅದರೆ
ದರ್ದು ಇಬ್ಬರನ್ನೂ
ಬಿಡಲಿಲ್ಲ.

-ಜ್ಯೋತಿಕುಮಾರ್‌ ಎಂ.


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *