ಕಾವ್ಯಧಾರೆ

ನಾಲ್ಕು ಕವಿತೆಗಳು: ಲಿಂಗರಾಜ ಸೊಟ್ಟಪ್ಪನವರ

ಈ ಹಂಗಾಮಕೆ

ಹೀಗೆ
ಗಾಳಿಯ ಸುಮ್ಮನೆ ಒಂದು ಬೀಸು
ಏನು ಕಾರಣವಿರುತ್ತೆ ಹೇಳು ಒಳಗೆಳೆದುಕೊಂಡ ಈ ಕ್ಷಣದ ಉಸಿರಿಗೆ
ಯಾರ ಹೆಸರಿತ್ತು ಕೇಳು
ಎಷ್ಟೇ ನಿಟ್ಟುಸಿರುಗಳ ತರುವಾಯವೂ ನಿನ್ನ ಪುಪ್ಪಸಗಳಲಿ
ಉಳಿದೆ ಉಳಿಯುತ್ತೇನೆ ನಾನು

ಬರಿ ಹೆಸರಿಗೆ ಇಷ್ಟು ಉಬ್ಬಿ ಹೋಗುವಿಯಲ್ಲಾ
ಇನ್ನು ಕುಪ್ಪಸವ ನಾನೇ ಹೊಲಿದು ತರುವೆ
ಎಷ್ಟಾದರೂ ಉಬ್ಬು
ದಿಬ್ಬವೇರುತ್ತ ಸಾಗಲಿ ತೇರು
ಮಬ್ಬು ಹರಿದ ತರುವಾಯ ಕಣ್ಣುಜ್ಜಿಕೊಳ್ಳುವ ಚುಮು ಚುಮು ಮುಂಜಾವು
ಕಣ್ಣೆದುರೆ ಕರಗುವ ಕಾನು ಬಾನು
ಬೆಳ್ಳಿ ನಕ್ಷತ್ರಗಳು ಆನು ತಾನು
ಹರಿವ ತೊರೆಯ ಮೆರೆವ ನೊರೆಯಲಿ
ಯಾವ ದುಃಖ ಎಂಥ ಸುಖ

ಬರುವ ಹಬ್ಬಕೆ
ಬೇನಾಮಿ ಸುಖಗಳನು ನಿನ್ನ ಹೆಸರಿಗೆ ಬರೆಯುವೆ
ಸುಮ್ಮನೆ ಯಾವುದನ್ನೂ ಹೆಸರಿಸ ಹೋಗದಿರು
ಒಂದು ತಪ್ಪು ವಿಳಾಸದಲ್ಲಿ ನನ್ನ ನೀ ನಿನ್ನ ನಾ ಹುಡುಕಿಕೊಂಡು ಬಿಡೋಣ
ನೆದರಿಗೆ ಬೆದರು ಬೊಂಬೆಯಾಗಿ ನಿಂತಿರುವೆ ನೀನು ಚೆಲ್ವಿ ನಾನು ಚೆಲುವ
ತುಂಬು ಗಾಳು ನೀನು ಹುಂಬ ಬೆಳವ ನಾನು

ಈ ಮುಂಗಾರಿಗೆ ಒಂದು ಸುಂದರ ಚಾದರ ಹೆಣೆಯೋಣ
ನಾನೊಂದು ನೀನೊಂದು ಎಳೆ ಎಳೆಯಾಗಿ ತೊಡೆತೊಡಗಿ..
ನೊಂದ ನೆನಪುಗಳೆಲ್ಲ ಮಿಂದು ಹೋಗಲಿ
ಈ ಹಂಗಾಮಕೆ


ಈ ಕಾಲ ಕಾಲವಾಗದಿರಲಿ

ಇರಲಿ ಬಿಡು
ಇನ್ನೊಂದು ಬಾರಿ ಸಂದಿಸೋಣ

ಹೀಗೇಕಾಗುತ್ತದೆ ಎಂಬುದು ಅರ್ಥವೆ ಆಗುವದಿಲ್ಲ
ಬಹುಷಃ ನಿನಗೂ

ಮೊದಲ ಬಾರಿ ಬೇಟಿಗೆ
ಎಷ್ಟು ಸತಾಯಿಸಿತು ಈ ಕಾಲ
ಈ ಮುನ್ನ
ಅವೆಷ್ಟು ಮೊದಲುಗಳು ನಮ್ಮವಾಗದೆ ಹೋದವೇನೋ

ಒಂದು ಮುಗುಳ್ನಗೆಯ ವಿನಿಮಯ
ಎರಡು ಮಾತು
ಇಷ್ಟು ಸಾಕು ಸಾಕೆನಿಸಿತ್ತು ಮೊದಲ ಬೇಟಿಗೆ
ನಮಗಾದರೂ ಅಂತಹ ಬಯಕೆಗಳೆಲ್ಲಿದ್ದವು
ನೋಟವನೆ ಉಂಡುಟ್ಟು ಹಗುರಾದೆವು

ಎರಡನೇ ಬೇಟಿ ಎಷ್ಟು ಕಾಯಿಸಿತು
ಬರಗಾಲಕ್ಕೆ ಹೇಳಿದ್ದ ವಿದಾಯ
ಮಳೆಗಾಲಕ್ಕೆ ಸ್ವಾಗತ ಕೋರತೊಡಗಿತ್ತು
ಅಷ್ಟೂ ಕೌತುಕಗಳನು ಮೊಟ್ಟೆಯೊಡೆಯದಂತೆ ಅದೆಲ್ಲಿ ಅದ್ಹೇಗೆ ಇಟ್ಟುಕೊಂಡಿದ್ದೆವು ನಾವು
ಅಬ್ಬಾ ನಮ್ಮೊಳಗೇ ಅನಾದಿ ಹರವೂ
ಇಬ್ಬರಿಗೂ ಗೊತ್ತಿಲ್ಲದ ಕೌತುಕ ಇಬ್ಬರೊಳಗೂ

ಯಾಕೆ ಬೇಟಿಯಾಗುತ್ತಿದ್ದೇವೆ
ಯಾಕೆ ಭೇಟಿಯಾಗಬೇಕು ನಾವು
ಸಂಧಿಸಲೊಂದು ಸುಸಂಧಿ ಹುಡುಕುತ್ತಿರಬಹುದೇ ನಾನು ಮತ್ತೆ ನೀನು
ಈ ಬಾರಿ ಕೇಳಿಕೊಂಡುಬಿಡೋಣ
ಬಾರಿ ಎಂಬುದು ಅದೆಷ್ಟು ಭಾರಿ

ಈ ಬಾರಿ
ಮೂರನೇ ಬಾರಿ
ಮುಗಿದು ಹೋಗಿ ಬಿಡಲಿ
ಈ ಕೌತುಕಗಳು
ಬರಿ ನೋಟ ಬೇಟ
ಆಡಿದ ಮಾತುಗಳದ್ದೆ ಅನುರಣನ
ಬಳ್ಳಿ ಎರಡು ಕಾಯಿ ಬಿಟ್ಟ ಮೇಲೂ
ಹೂವು ಕುರಿತು ವ್ಯರ್ಥ ಆಲಾಪನೆಗಳು

ಕೇಳು
ಈ ಬಾರಿಯ ಬೇಟಿ ಸುಮ್ಮನೆ ಮುಗಿದು ಹೋಗಬಾರದು


ಪದ

ದೀಪವನು ಪರಂಜ್ಯೋತಿಯೆಂದು ದಿವ್ಯ ದೇದಿಪ್ಯವೆಂದು

ಬೆಳಗೆಂದು ಹೊಳುಹು ಎಂದು
ದಾರಿ ಎಂದು ದರ್ಶನವೆಂದು
ಏನೆಲ್ಲಾ ಬಣ್ಣಿಸಿದಿರಿ

ಬತ್ತಿಯ ಭಕ್ತಿಯ ಕುರಿತು
ತೈಲದ ಅರ್ಪಣೆಯ ಕುರಿತು
ಒಂದು ಮಾತೂ ಆಡದೆ ಹೋದಿರಿ
ಈ ಗಾಳಿಯು ಕಾಣದೆ ಹೋಯಿತು

ನಿಮ್ಮ ಬಣ್ಣನೆಗೆ ಮರುಳಾಗಿ
ರೆಕ್ಕೆ ಸುಟ್ಟುಕೊಂಡ ಹುಳುವಿನ ಕುರಿತು ಒಂದು ಪದ ಇದೆಯಾ ನಿಮ್ಮೆದೆಯಲ್ಲಿ


ಐ ಲವ್ ಯೂ

ಅವಳು ಹೇಳಿದ ಗುಡ್ ಮಾರ್ನಿಂಗ್
ಪದೇ ಪದೇ ನೆನಪಿಸಿಕೋಬೇಡ
ಯಾವುದೂ ಈಗ ಗುಡ್ ಆಗಿ ಉಳಿದಿಲ್ಲ

ಗುಡ್ ನೈಟ್ ಟೇಕ್ ಕೇರ್ ವಿಶಷ್
ತೆಗೆದು ಬಿಡು ಮಿದುಳಿನಿಂದ
ತಿಳಿಗೊಳಕ್ಕೆ ಪಾಚಿಗಟ್ಟಿದ್ದು ಇವತ್ತು ನಿನ್ನೆಯಲ್ಲ

ಅವಳ ಸ್ವೀಟ್ ಡ್ರೀಮ್ಸ್ ಹೊರತಾಗಿಯೂ ನೀನು ನಿದ್ದೆ ಹೋಗು
ಎಲ್ಲ ಕನಸುಗಳು ಬ್ಲಾಕ್ ಆಂಡ್ ವೈಟ್ ಆಗಿರುವದನು ಒಪ್ಪಿಕೊ

ಅವಳು ಹೇಳಿದ ಐ ಲವ್ ಯೂ ಒಂದು ಪದವಾಗಿತ್ತಷ್ಟೇ
ಅವಳಿಗಾಗಿ ಗುಲಾಬಿ ಬೆಳೆಯುವದನು ಇನ್ನಾದರೂ ಬಿಡು

ಎದೆಯ ಹೊಲದಲ್ಲಿ ಎಷ್ಟು ನೆತ್ತರು ಬಸಿದಿದೆ ನೋಡು
ಹೀಗಿದ್ದರೂ ಬದುಕಿರುವೆ
ಪ್ರೀತಿಯ ದೆಸೆಯಿಂದ ಎಂದು
ಮತ್ತೆ ಹೇಳದಿರು

ಮುಳ್ಳಿಲ್ಲದ ಗುಲಾಬಿ ಯಾರು ಬೆಳೆಯುತ್ತಾರೆ ಗೆಳೆಯ
ಎಲ್ಲರ ಎದೆಯೂ ಮುಳ್ಳಿಗೆ ಒಡ್ಡಿಕೊಳ್ಳಲೆ ಬೇಕು ತಿಳಿಯ

-ಲಿಂಗರಾಜ ಸೊಟ್ಟಪ್ಪನವರ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *