ನಿನ್ನ ಮತ್ತು ನನ್ನ ನಡುವಿನ ಪದ
ಪ್ರಾಣಿಯೊಂದನು
ಬೇಟೆಯಾಡುವಂತೆ
ಆ ಪದವನು ಹಿಡಿಯಲು
ನನ್ನ ಬಲೆ/ಕುಣಿಕೆಗಳನ್ನು ಹಾಕಿ
ಕಾದಿದ್ದೇನೆ.
ಗಾಳಿಯಂತೆ ಸಂವೇದನಾಶೀಲವಾದ
ದೇವರಂತೆ ಯಾಮಾರಿಸುವ ಆ ಪದ
ನನಗೆ ಸಿಗದೆ ತೊಂದರೆ ಕೊಡುತ್ತಿದೆ.
ಎಲ್ಲರ ಸಮ್ಮುಖದಲ್ಲೂ
ನಿಮ್ಮನ್ನು ನನ್ನ ಮಡಿಲಲ್ಲಿಟ್ಟು
ನಿಮ್ಮ ಹೊಟ್ಟೆಯಿಂದ
ಕರುಳನ್ನು ಕೀಳುವಂತೆ
ಆ ಪದವನು
ಕೀಳಬೇಕು ಎಂಬುದು ನನ್ನ ಬಯಕೆ
ನನ್ನ ಮೂಳೆಗಳನು ಚುರುಗುಟ್ಟಿಸುವ
ಆ ಪದವಂತೂ
ನಿಮ್ಮ ರಕ್ತದ ನಂಜಾಗಿ ಹರಿಯುತ್ತಿದೆ
ಒಂದು ಪದ ಅಷ್ಟೇ!
ನಿಮಗೆ ವರವಾಗಿಯೂ
ನಮಗೆ ಶಾಪವಾಗಿಯೂ
ಜನಿವಾರವ ಎದೆಯ ಮೇಲೆ ಧರಿಸುವ
ಮಂತ್ರವಾಗಿಯೂ
ನನ್ನ ಅಗಲಿಸಿ ನಿಲ್ಲಿಸುವ
ಬೈಗುಳವಾಗಿಯೂ
ನಾನು ಸೋಲಬಹುದು
ಇಂದಲ್ಲ ನಾಳೆ
ನಮ್ಮ ಮಕ್ಕಳು
ಆ ಪದದ ಕೊಂಬನ್ನು ಹಿಡಿದು ನೂಕಿ
ಅದರ ಧ್ವನಿಪೆಟ್ಟಿಗೆಯನ್ನೇ
ಕತ್ತರಿಸುವರು
ತಮಿಳು ಮೂಲ: ಅಳಗಿಯ ಪೆರಿಯವನ್
ಅನುವಾದ: ಡಾ. ಮಲರ್ ವಿಳಿ . ಕೆ
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ
ಹೆಬ್ಬೆರಳಿನ ರಕ್ತ
ಊರಲ್ಲಿ
ಊರ ಬೀದಿಗಳಲಿ
ನೆರೆ ಹೊರೆಯ ಗ್ರಾಮಗಳಲಿ
ಏಳೂರ ಪಂಚಾಯಿತಿಕಟ್ಟೆಗಳಲಿ
ಹಳ್ಳಿ-ಗಿಳ್ಳಿಗಳಲಿ
ಇಂದು ಬೆಳಗಿನ ಜಾವ
ಸತ್ತು ಹೋದುದಾಗಿ
ಹೇಳಲ್ಪಟ್ಟವನು
ನಿನ್ನೆವರೆಗೂ ಜಾತಿ ರೋಗದಲ್ಲಿದ್ದವ
ಪ್ರಾಣವಿರುವವರೆಗೂ
ನಿನ್ನನು ಆತ ಬೀದಿಗೆ ಬರಲು ಬಿಡಲಿಲ್ಲ
ನಿನ್ನ ಸಹೋದರನ ಬಾಯಿಗೆ ಹೇಲನ್ನು ತುರುಕಿದುದು
ನಿನ್ನ ಭಾವ-ಮೈದುನನ ತುಂಡರಿಸಿದುದು
ನಿನ್ನ ಕುಲದ ಹೆಂಗಳೆಯರನು ಬಲಾತ್ಕಾರದಿ ಭೋಗಿಸಿದುದು ಇವನೇ
ದೇವಾಲಯಕ್ಕೆ ದಾನ-ದತ್ತಿಯ
ಸುರಿದು ಕೊಟ್ಟವನು
ಕೊಲೆಗಾರನನ್ನು ಜಾಮೀನಿನಲ್ಲಿ ಬಿಡಿಸಿದವ
ಕಳಂಕವನು ಪಂಚೆಯಲಿ ಅದ್ದಿ
ಪಕ್ಷದ ಪಂಚೆಯಾಗಿ ಉಟ್ಟು ಓಡಾಡಿದವ
ತನ್ನ ಜಾತಿಯ ಜನರಿಗೆ ಸಮಸ್ತವ ಮಾಡಿದವ
ನಿನಗೆ ಒಂದು ಪುಡಿಗಾಸೂ ನೀಡಿದ್ದಿಲ್ಲ
ನೀ ಸದಾ ಅವನ
ದೇವರು ಎಂಬೆ
ಅವನಾದರೋ ನಿನ್ನನು ಏನ್ಲಾ ನಾಯಿ
ಅಂತ ಕೂಡ ನೆನೆದುದಿಲ್ಲ
ನೀ ದುಡಿಮೆಗೆ ಕೂಲಿ ಕೊಟ್ಟುದ
ಉಪಕಾರವಾಗಿ ನೀ ತಿಳಿಯಬೇಕಿಲ್ಲ
ನೀನಿಲ್ಲದೆ ಆತಂಗೆ ಬದುಕಿಲ್ಲ
ಹೀಗಿರಲಾಗಿ
ಮತ್ತೇನ್ ಕಿತ್ಕೋಳ್ಳೋಕೆ ಆ ಪುಟಗೋಸಿಗೆ
ಅವನ ಹೆಣದ ಮುಂದೆ ನಿಂತು
ತಮಟೆ ಬಾರಿಸುತ್ತಿದ್ದೀಯಾ?
ಮಾನಗೆಟ್ಟವನೇ
ಸತ್ತೋದ ಸತ್ತೋದ ಅಂತ
ಆತನನು ಹೂಳೋವರೆಗೂ
ನೀನು ತಮಟೆ ಬಾರಿಸಿ ಹೇಳಬೇಕಾದ
ಅಗತ್ಯವಾದರೂ ಏನು?
ಭಿತ್ತಿಪತ್ರವ ಅಂಟಿಸಲಿ
ಆಟೋದಲ್ಲಿ ಧ್ವನಿ ವರ್ಧಕವ ಕಟ್ಟಿ
ಊರೂರಿಗೆ ಹೋಗಿ ಕೂಗಿ ಹೇಳಲಿ
ಕೇಬಲ್‌ದೂರದರ್ಶನದಲಿ
ಜಾಹಿರಾತು ನೀಡಲಿ
ಶಂಖ ಊದಲಿ
ನಿನಗೇನ್‌ಬಂತು ಗ್ರಹಚಾರ?
ಹೊಟ್ಟೆಗೆ ಇಲ್ಲದಿದ್ದರೆ
ಒಡಲು ಬಡಕಲಾಗುವಂತೆ ದುಡಿ
ಸತ್ತಾದರೂ ಒಂಟೋಗು
ಹೊಡೆದರೆ ಹೊಡೆ
ಬದಿಗೆ ಸರಿದು ನಿಂತು
ನೋಟದೆಂಜಲನು ಒರೆಸುತ್ತಾ
ಕೈಬಿಟ್ಟ ಒಂಟಿತನದಲಿ
ನೀನು ತಮಟೆ ಬಾರಿಸುತ್ತಿರುವುದು
ಕಾಲ ಪೂರ್ತಿ
ಎದೆಗೊಡೆದುಕೊಂಡು ಹಲುಬುವಂತೆ ಕಾಣುತ್ತಿದೆ
ಎದೆಯ ಸೀಳುತ್ತಿದೆ
ನಿತ್ರಾಣ ದೇಹ ಕುಲುಕುವಂತೆ ನೀನೂ
ತೋಳುಗಳಿಗೆ ಬಿಡುವಿಲ್ಲದೆ ನಿನ್ನ ಮೊಮ್ಮಗನೂ
ಹೊಡೆದು ಧೂಳೆಬ್ಬಿಸುವುದು
ನಿನಗೆ ಸಂಗೀತ
ಆತನಿಗೋ ಮೈಲಿಗೆಯ ಸದ್ದು
ಸಮಾರಂಭಗಳಿಗೆ ಹೋಗಿ ನೀ ಬಾರಿಸಿದರೆ
ಸನ್ಮಾನ ಸಿಗುವುದು
ಜಾತಿ ಜನರಿಗೆ ಬಾರಿಸಿದರೆ
ಪುಡಿಗಾಸು ತಾನೇ ಗಿಟ್ಟುತ್ತೆ
ತಮಟೆ ಬಾರಿಸಲು ನಿರಾಕರಿಸಿದುದಕ್ಕಾಗಿ
ಹೆಬ್ಬೆರಳ ಕಳೆದುಕೊಂಡವರ
ರಕ್ತ ಸೋರುತ್ತಿರಲು
ಇನ್ನೂ ಏಕೆ ಬಾರಿಸುತ್ತಿರುವೆ?
ಬಾರಿಸುವುದನು ನಿಲ್ಲಿಸು
ಕಡ್ಡಿಯನು ಮುರಿದು
ಆ ತಮಟೆಯನು ಕಿತ್ತು
ಬೆಂಕಿ ಹಚ್ಚಿಬಿಡು.
ತಮಿಳು ಮೂಲ: ಅಳಗಿಯ ಪೆರಿಯವನ್
ಅನುವಾದ: ಡಾ. ಮಲರ್ ವಿಳಿ . ಕೆ
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ