ನಾನು ಓದಿದ ಪುಸ್ತಕ : ದಹನ
ಲೇಖಕರು : ಶ್ರೀ ಸೇತುರಾಮ್
ಇಲ್ಲಿ ಬಂಡಾಯವಿಲ್ಲ … ಭಾವವಿದೆ
ನೈತಿಕತೆಗೆ ಬಣ್ಣಗಳಿಲ್ಲ … ಒಳ ನೊಟವಿದೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಅನೇಕ ಸ್ತ್ರೀ ಸಂವೇದಿಶೀಲ ಸಾಹಿತಿಗಳಿದ್ದಾರೆ, ಆಗಿ ಹೋಗಿದ್ದಾರೆ, ಮುಂದೆ ಭವಿಷ್ಯದಲ್ಲಿ ಆಗುವರು ಇದ್ದಾರೆ. ಆ ಎಲ್ಲಾ ಸಾಹಿತಿಗಳ ಸಾಹಿತ್ಯ ಒಳಗೊಂಡ ಮಹಿಳಾ ಸಂವೇದನಾ ಶೀಲ ಸಾಹಿತ್ಯದ ವಿಮರ್ಷೆ ಸಂಪೂರ್ಣವೆನಿಸುವುದು ಶ್ರೀ ಸೇತುರಾಮರ ದಹನ ಹಾಗೂ ನಾವಲ್ಲ ಈ ಎರಡು ಪುಸ್ತಕಗಳ ಬಗ್ಗೆ ಉಲ್ಲೇಖಿಸಿದಾಗ ಮಾತ್ರ ಎಂಬುವುದು ನನ್ನ ದೃಢವಾದ ಅಭಿಮತ.
ಈ ಪುಸ್ತಕದಲ್ಲಿನ ಕಥೆಗಳಿಗೆ ಚೌಕಟ್ಟಿಲ್ಲ, ಸ್ವಾತಂತ್ರವಿದೆ. ಇಲ್ಲಿ ಪಾತ್ರಗಳಿದ್ದಾವೆ ಆದರೆ ಅವುಗಳ ಕ್ರಿಯೆಗೆ ಮಹತ್ವವಿಲ್ಲ, ಭಾವಕ್ಕಿದೆ. ಪಾತ್ರಗಳನ್ನು ಮಡಿವಂತಿಕೆಯ ಚೌಕಟ್ಟನ್ನು ಮೀರಿ ಬೆಳಸಲಾಗಿದೆ ಆದರೆ ಸ್ವೇಚ್ಛಾಚಾರವಿಲ್ಲ, ಕೇವಲ ಸಮಾಜವನ್ನು ಪ್ರಶ್ನಿಸುವುದು ನನ್ನ ಕರ್ತವ್ಯ ಎಂಬತೆ ಪಾತ್ರಗಳಿಲ್ಲ ಉತ್ತರಿಸುವ ಪ್ರಯತ್ನವೂ ಇಲ್ಲಿ ಇದೆ ಎಂಬುವುದು ಈ ಪುಸ್ತಕದ ವಿಶೇಷ. ಕಥಾ ರರಚನೆಯಲ್ಲಿ ಬದುಕಿನ ದರ್ಶನದ ಅರಿವಿಗೆ ಮಹತ್ವ ನೀಡಲಾಗಿದೆ, ಅಂಧಕಾರದಿಂದ ಆಚೆಗೆ ನೋಟದ ಅವಶ್ಯಕತೆಯನ್ನು ಸಾರಲಾಗಿದೆ.
“ನಂಗೇಲಿ” ಇದು ಪ್ರಾರಂಭದ ಕಥೆ ಇದು ಮನೆಯೊಳಗಿನ ಹೋರಾಟದ ಕಥೆ, ಗೊಬ್ಬರ ವ್ಯಾಪರದಿಂದ ಶ್ರೀಮಂತನಾದ ಸೋಮಸುಂದರ ಅವಳ ಮಗಳು ಸೌಮ್ಯಳಿಂದ ತೆರೆದುಕೊಂಡರೂ ಹಣಕ್ಕಾಗಿ ಮದುವೆ ಎನ್ನುವುದನ್ನು ತಿರಸ್ಕರಿಸಿ ವಿದೇಶಕ್ಕೆ ಹೋಗಿ ತಿರುಗಿ ಬಂದು ಸಾಮಾನ್ಯ ಬದುಕಿನಿಂದ ಗೆಲ್ಲುತ್ತಾಳೆ ಸೌಮ್ಯ, ಆದರೆ ಕಥೆ ಇರುವುದೇ ಸೋಮಸುಂದರ ಸೊಸೆ ಕೇಂದ್ರಿತವಾಗಿ, ಸಾಮಾನ್ಯರಾಗಿ ಹುಟ್ಟಿ ಶ್ರೀಮಂತ ಮನೆತದ ಸೊಸೆಯಾಗಿ ಬದುಕಿನ ರಿವಾಜುಗಳರಿಯದೆ ಪ್ರತಿಭಟಿಸಿ, ಸೇಡಿನಿಂದ ಹಾದಿ ತಪ್ಪಿ ಆ ತಪ್ಪಿಗೆ ಪ್ರಾಯಚ್ಚಿತವಾಗಿ ಆತ್ಮಹತ್ಯೆ.. ಇದು ಕಥೆ.
“ಒಂದೆಲಗ” ಇದು ಮತ್ತೊಂದು ಕಥೆ… ಸರಸ್ವತಿ ಸಾಮಾನ್ಯ ಹೆಣ್ಣು, ಮೆಳ್ಳೆಗಣ್ಣು ಬೇರೆ, ತಮ್ಮನಂತೆ ಭಾವಿಸಿದ ಶ್ಯಾಮಸುಂದರ ಗಂಡನಾದ ನಂತರ ಡಾಕ್ಟರಾದ, ಎರಡು ಮಕ್ಕಳು, ಶ್ರೀಮಂತ ಬದುಕಿಗೆ ಇಂತಹ ಹೆಂಡತಿ ಬೇಡವಾದಳು, ಅದಕ್ಕೆ ಸರಿಯಾಗಿ ಗಂಡು ಮಗುವಿನ ಋಣ ತೀರಿತು, ಅಷ್ಟೇ ಸರಸ್ವತಿ ಹುಚ್ಚಾಸ್ಪತ್ರೆಗೆ ಮಗಳು ಹಾಸ್ಟೇಲ್ಲಿಗೆ. ಡಾಕ್ಟರ್ ಗಂಡನಿಗೆ ಇನ್ನೂಂದು ಮದುವೆ, ಅಂತಿಮವಾಗಿ ಮಗಳಿಂದ ತಾಯಿಗೆ ವಿಮುಕ್ತಿ, ಅವರವರ ತಪ್ಪಿಗೆ ಮಾನಸಿಕ ಶಿಕ್ಷೆ ಇದು ಸಾರಂಶ.
ಅಂತಿಮ ಹಾಗೂ ಕನ್ನಡ ಕಥಾ ಲೋಕದ ಶ್ರೇಷ್ಠ ಸಾಲಿನಲ್ಲಿ ಸೇರಲೇ ಬೇಕಾದ ಕಥೆ “ದಹನ”. ಇಲ್ಲಿ ಬಹಳ ಪಾತ್ರಗಳಿಲ್ಲ. ಪ್ರಮುಖವಾಗಿ ಎರಡು ಪಾತ್ರಗಳು ಒಂದು ಸಾಹಿತಿ, ನಾಟಕಗಾರ, ನಿರ್ದೇಶಕ ನಟ ಹಾಗೂ ಸಭ್ಯ ಸುಸಂಸ್ಕ್ರತ ಹೆಚ್.ಬಿ.ಆರ್ ಹಾಗೂ ಸಾಮಾನ್ಯ ಅವರ ಮಗಳ ವಯಸ್ಸಿನ ಗೃಹಿಣಿ ಅಕ್ಷತಾ ನಡುವೆ, ಇಲ್ಲಿ ಹಿಂದಿನ ಕಥೆಗಳಂತೆ ಹಂದರವಿಲ್ಲ, ಭಾವ ಪ್ರಧಾನವಾದ ಬದುಕಿನ ಸಭ್ಯತೆಯ ಇನ್ನೂಂದು ಮುಖವನ್ನು ಸಶಕ್ತವಾಗಿ ಅನಾವರಣಗೊಳಿಸಿದ್ದಾರೆ. ತನ್ನ ಮನಸ್ಸಿನ ತುಮುಲವನ್ನು ತೆರೆದಿಡಲು ತನ್ನ ಮನೆಗೆ ಆಹ್ವಾನಿಸುವ ಅಕ್ಷತಾ, ಅರವತ್ತರ ವಯಸ್ಸಿನ ಸಭ್ಯ ಹೆಚ್.ಬಿ.ಆರ್. ಮನಸ್ಸಿನಲ್ಲಿ ಕಾಮ ಪ್ರಧಾನವಾಗಿ ಸಾಗುತ್ತಾ ಅಂತಿಮವಾಗಿ ತಂದೆ ಮಗಳಾಗಿ ಕಥೆ ಸುಖಾಂತವಾಗುತ್ತದೆ.
ಬಹುಷಃ ಪೂರ್ಣ ಕಥೆಗಳಲ್ಲಿ ಪಾತ್ರಗಳಿಗಿಂತ ಲೇಖಕರೇ ಆವರಿಸುವುದು ಸೇತುರಾಮ್ ಇವರ ಲೇಖನಿಯ ಶಕ್ತಿ, ಪಾತ್ರಗಳ ವಿಸ್ತರಣೆಗಿಂತ, ಭಾವನೆಗಳಇಗೆ ಹಾಗೂ ಸಮಾಜದ ವ್ಯವಸ್ಥೆಗೆ ಹರಿತವಾದ ಮಾತಿನಿಂದ ಪ್ರಶ್ನಿಸುವುದು ಪ್ರಧಾನವಾಗಿದೆ. ಬಹು ಮುಖ್ಯವಾಗಿ ಆ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಲಾಗಿದೆ ಎಂಬುವುದು ವಿಶೇಷ. ಲೇಖಕರ ನಾಟಕಗಳನ್ನು, ಧಾರವಾಹಿಗಳನ್ನು ಹಾಗೂ ಅವರ ಮಾತುಗಳನು ಕೇಳುವ ಅಭ್ಯಾಸವಿದ್ದವರಿಗೆ ಈ ಪುಸ್ತಕ ಹೆಚ್ಚು ಆಪ್ತವಾಗುತ್ತದೆ.
ಅಂತಿಮವಾಗಿ,
ಸಮಾಜದಲ್ಲಿ ಅಂಕುಡೊಂಕುಗಳು ಅತ್ಯಂತ ಸಾಮಾನ್ಯವಾದ ಸಂಗತಿ. ಆದರೆ ಅದನ್ನು ಪ್ರಶ್ನಿಸುವುದು ಸಹ ಅನಿವಾರ್ಯ, ಆ ಪ್ರಶ್ನೆಗಳು ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕೆ ಹೊರತು ಮಾರಕವಲ್ಲ. ಪ್ರಶ್ನೆಗಳಿಗೆ ಉತ್ತರವನ್ನು ಸಹ ನಾವು ಕಂಡುಕೊಳ್ಳಬೆಕು ಎಂಬ ಪ್ರಜ್ಣೆಯನ್ನು ಜಾಗೃತಗೊಳಿಸುವ ಅಭಿವ್ಯಕ್ತಿತ ಮಾಧ್ಯಮ ಕಥಾ ಜಗತ್ತು. ಅದನು ಸುಂದರವಾಗಿ ಸರಿಯಾಗಿ ಬಳಸಿಕೊಂಡಿರುವ ಸೇತುರಾಮ್ ಸರ್ ಇವರಿಂದ ಇನ್ನಷ್ಟು ಮಹಿಳಾ ಕೇಂದ್ರಿತ ಕಥಾ ಪುಸ್ತಕಗಳ ಅವಶ್ಯಕತೆ ಕನ್ನಡ ಸಾಹಿತ್ಯ ಲೋಕಕ್ಕಿದೆ ಎಂಬುವುದು ಓದುಗನಾಗಿ ನನ್ನ ಪ್ರಾರ್ಥನೆ.
ಸಹಜ ಭಾವನೆಗಳಿಗೆ ಅಕ್ಷರ ಸ್ವರೂಪ
ಪ್ರಕಾಶಕರು : ಶ್ರೀ ಸೇತುರಾಮ್.ಎಸ್.ಎನ್.
ಮರು ಮುದ್ರಣದ ವರ್ಷ : 2020
ಹಣ : 150/-
ಪೋನ್ : 944805988