ಹೆಜ್ಜೆ: ವಿಜಯಾಮೋಹನ್‍ ಮಧುಗಿರಿ

ಇನ್ನು ಮಸುಕರಿಯದ ಮೋಡ, ಅದು ನೆಟ್ಟಗೆ ಕಣ್ಣಿಗ್ಗಲಿಸ್‍ತ್ತಿಲ್ಲ. ಆವತ್ತು ಬೆಳಕರದ್ರೆ ಊರು ನಾಡಿಗೆ ಹೊಸ ಸಮೇವು(ಸಂದರ್ಭ) ಚೆಲ್ಲುವ. ಬೇವು ಬೆಲ್ಲ ಒಂದಾಗಿ,ಭೂಮಿ ಮ್ಯಾಲೆ ಬದುಕೀರೆ ಕಷ್ಟ ಸುಖದ ಸಮಪಾಲಾಗಿ ಹಂಚಿ ಬದುಕ ಬೇಕೆಂದು, ಮತ್ತು ಅಂಗೆ ಹಂಚಿ ಉಣ್ಣುಬೇಕೆಂದ, ಅಜ್ಜ ಮುತ್ತಜ್ಜಂದಿರೆಲ್ಲ ಹೇಳುತ್ತಿದ್ದ ಯುಗಾದಿ ಹಬ್ಬ. ಮೊಗ್ಗುಲಲ್ಲಿ ಮಲಗಿದ್ದ ಹೆಂಡತಿಯ ಗೊರಕೆ, ಅದು ಅದ್ರ ಪಾಡಿಗದು ಯಾರ ಮುಲಾಜಿಗಜಂದೆ ಏರಿಳಿತದ ಸವಾರಿ ಮಾಡುತ್ತಿತ್ತು. ಹಬ್ಬದ ದಿನಗಳೇನಾದರು ಬಂದರೆ ಯಾರಿಗ್ ಮಾಡ್‍ಬೇಕ್ ಹಬ್ಬ ಅದು ಇಂಗೆ ಮಾಡ್‍ಬೇಕ್‍ಅಂಬೋದೇನೈತೆ? ಹೆಂಡತಿಯ ಪ್ರಶ್ನೆಗೆ ನಾನು ಉತ್ರ ಹೇಳಾಕ್ ಆಗ್‍ತಿಲ್ಲ, ಅಂತ ಉತ್ರಗಳನ್ನ ಬಿಡಿಸಿ ಬಿಡಿಸಿ ಹೇಳಿ ಹೇಳಿ ನಾನು ದಡ್‍ನಾಗ್‍ಬಾರ್‍ದು. ಅನುತ ಬದುಕಿದವನ ಒಂದೊಂದೆ ಗೆಪುತಿಗಳು ಮಾತ್ರ ಆಗಾಗ ತಿವಿಯಾಕಿಡುದುವು. ನಾನು ಹುಡುಗನಾಗಿದ್ದ ಯುಗಾದಿಗಳಲ್ಲಿ ಅಮ್ಮ ಸರುವತ್ತಿಗೆ ಎದ್ದು. ಬಗ್ಗಡದ ಹೊಲೆ ಸಾರಿಸಿ, ಪುಳ್ಳೆ ಪುರುಚಿಕ್ಕಿ, ನಿಗಿ ನಿಗಿ ಎಂದು ಉರಿಯುವ ಅಗ್ನಿ ದೇವನಿಗೆ ಕೈ ಮುಗಿದು. ಬ್ಯಾಳೆ ಬೆಯಿಸಿ ಗುಂಡು ಬಂಡೆಯೊಳಗೆ ಊರಣ ರುಬ್ಬಿ. ಹೋಳಿಗೆ ಸುಟ್ಟು, ಸಾರಿಗೆ ಕಾರ ರುಬ್ಬಿ ಕುದಿಸಿದಳೆಂದರೆ.ಅಮೃತದಂತ ಸಾರು ಉಂಡರೆ ಇನ್ನೊಂದಿಷ್ಟು ಉಂಬಾನೆ ಅಂಬೊ ಅಂಬಲದ ಅಡುಗೆಯ ಜೊತಿಗೆ. ಮೈಯ್ಯಾದ ಮೈಗೆಲ್ಲ ಅರಳೆಣ್ಣೆ ತಿಕ್ಕಿಸಿಕೊಂಡು. ಮಾವಿನ ತೋರಣ ಕಟ್ಟಿ, ಗಣ ಗಣನೆ ಕಾದ ಗುಡಾಣದ ನೀರುಯಿಕೊಂಡು. ಹೊಸ ಬನೀನು ಚಡ್ಡಿ ತೊಟ್ಟು, ಅಮ್ಮ ಇಕ್ಕಿದ್ದು ಉಂಡ ಹೋಳಿಗೆ ಊಟವೆಂದರೆ, ಇವತ್ತು ಹೆಂಡತಿ ಯಾವ ತುಪ್ಪ ಹಾಕಿ ಸುಟ್ಟರು. ಅದು ಯಾಕೊ ಆ ಹೋಳಿಗೆ ಗಮ್ಮತ್ತೆನಿಸುತ್ತಿಲ್ಲ. ತಿಳುಕೊಂಡಂಗೆಲ್ಲ ನಿರಾಳವಿಲ್ಲದ ಉಸಿರು ಬಸ ಬಸನೆನುತಿತ್ತು. ಬಲಗಡೆ ಮೊಗ್ಗಲಿಗೆ ತಿರಿಕ್ಕೆಂಡೆ,ನನ್ನ ಗೆಪುತಿಗಳು ಮಾತ್ರ ಯಾವಕಡೆಗು ತಿರುಗದೆ,ತಲೆಯೊಳಗೆ ತರಾವರಿಯಾಗತೊಡಗಿದವು. ಊರಲ್ಲಿ ಸಂದಿಮನೆಯ ರಂಗನಿಂದೆ ಹೊರಟ. ಸವಾರಿಯೊಳಗೆ ತಂದು. ಮನೆಯ ಹಜಾರದಲ್ಲಿ ಸುರಿಯುತ್ತಿದ್ದ, ರಾಶಿ ರಾಶಿ ಮಾವಿನೆಲೆಯ ಗುಚ್ಚ. ಐದಾರು ಮನೇರು ನಮ್ಮ ಮನೆಯ ಹಜಾರದೊಳಗೆ ಕುಂತು ಕಾಲಿಗೆ ದಾರ ಸುತ್ತಿಕೊಂಡು. ಎಣೆಯುತ್ತಿದ್ದ ಮಾವಿನ ತೋರಣಗಳು. ಬೇವಿನ ಕುಚ್ಚುಗಳು ಲಕಲಕನೆಂಬುತ್ತಿದ್ದವು, ಇಲ್ಲಿ ನೋಡೀರೆ ಇವತ್ತು ಮಾರ್ಕೆಟಿಗೆ ಹೋಗಿ ದುಡ್ಡು ಕೊಟ್ಟು ತರಬೇಕಿದ್ದ ಮಾವಿನ ಸೊಪ್ಪಿಗಾಗಿ. ಪರದಾಡುತ್ತಿರುವ ಬದುಕಿನಾಗೆ,ಎಲ್ಲದುಕ್ಕು ದುಡ್ಡು ದುಡ್ಡು ಅದಿಲ್ಲದಿದ್ರೆ ಯಾವುದು ಕೆಲಸಕ್ಕ ಬರಲ್ಲ, ಯಾವೋನು ಕೆಲಸಕ್ಕ ಬರಲ್ಲ, ಅಂಗೇನಾರ ಅಂದ್ ಕಂಡ್ರೆ ಇವತ್ತಿನ ನನ್ನ ಘಳಿಗೆಗಳು ಬಾರವಾಗ್‍ತಾವೆ. ಆ ಬಾರವಾದ ಮನಸ್ಸನ್ನು ಹಗುರ ಮಾಡ್‍ಕಾಬೇಕು. ಇಲ್ಲವಾದರೆ ನಾನು ಬದುಕೊ ಘಳಿಗೆಗಳು ತಟ್ಟಾಡ್‍ತ್ತಾವೆ.

ರೀ ಚೇತುಗೆ ಒಂದಿಷ್ಟು ಬೇಕರಿ ತಿಂಡಿ ಏನಾದರು ಕಟ್ಟಿಸ್‍ಕಂಡ್ ಬನ್ನಿ. ಹೆಣುತಿಯೆಂಬೋಳ ಆಜ್ನೆ, ನಾಕನೆ ತರಗತಿ ಓದುತ್ತಿದ್ದ ಮಗ, ಪಪ್ಪಾ ಬರಿ ಬಿಸ್ಕೇಟು ಮಿಚ್ಚೆರು ಎರೆಡೆ ತರಬೇಡ? ನನಗೆ ಕೇಕ್ ಬೇಕು, ಪಪ್ಸ ಬೇಕು, ರಸ್ಕ ಬೇಕು, ಎಂದು ಉದ್ದ ಪಟ್ಟಿಯಿಡುತ್ತ ತಕರಾರು ತಗೀತಿದ್ದ ಮಗನ ಮಾತಿಗೆ. ರೀ ತಿನ್ನೊ ವಯಸ್ಸಲ್ಲಿ ತಿನ್ಲಿ ಬಿಡ್ರಿ. ಅವನಿಗ್ ತರದೆ ಯಾರಿಗ್ ತಂದು ಕೊಡ್‍ತ್ತೀರ? ಹೆಣುತಿಯ ಶಿಪಾರಸ್ಸು, ನಾನು ತುಟಿ ಇಂಗೆರೆಡು ಮಾಡ್‍ದಂಗೆ ತೆಪ್‍ಗಾಗಿದ್ದೆ. ಆವತ್ತಿಂಗೆ ನನ್ನ ಸಣ್ಣ ವಯಸ್ಸಲ್ಲಿ ಬಡತನದ ಹಸಿವೆಂಬೋದು ಕಿತ್ತು ಹರಿಯುವಂತದ್ದು.ಅಂತ ಹಸಿವನ್ನ ಅನುಬೋಗಸ್‍ದವರಿಗೆ ಗೊತ್ತು. ಮನೆಯಲ್ಲಿ ಅಮ್ಮ ಊರೂರಿಗೆ ಕೂಲಿ ಮಾಡ ಬೇಕಿತ್ತು. ಅಪ್ಪ ಬೆಟ್ಟ ಬೆಟ್ಟವನ್ನ ದಾಟಿ ಸೌದೆ ಕಡಿದು ಮಾರ್ ಬೇಕಿತ್ತು. ನನ್ನ ಮುಂದೊಬ್ಬಳು ಅಕ್ಕ, ಬೆನ್ನಿಂದೆ ಇಬ್ಬರು ತಮ್ಮಂದ್ರು, ಬಡತನದ ಬಾವಿನಾಗೆ ನಳ್ಳುತ್ತಿದ್ದ ದಿನಗಳು. ಒಂದಲ್ಲ, ಎರಡಲ್ಲ, ಸಂಜೆ ಇಸ್ಕೂಲಿನಿಂದ ಬಂದು ಸ್ಲೇಟು ಒಂದ್ ಮೂಲಿಗೆ ಬ್ಯಾಗು ಒಂದ್ ಮೂಲಿಗೆ ಎಸದದ್ದೆ ತಡ. ಅಬೋ ಅಬೋ ಎನ್ನುತ್ತಿದ್ದ ಹಸಿವು, ಒಬ್ಬರ ಕಣ್ಣು ಒಬ್ಬರು ತಪ್ಪಿಸಿಕೊಂಡು. ದವಡೆತುಂಬ ಅಕ್ಕಿ ಸುರುಕೊಂತಿದ್ದೆವು.ಆವತ್ತಿಗೆ ನಾವು ಮಿಚ್ಚೇರು ಕಾಣ್‍ವಿ ಅಚ್ಚೇರು ಕಾಣ್‍ವಿ, ಅಕ್ಕಿ ತಿನ್ನೋದೆ ವೈಬೋಗದ ತಿಂಡಿ. ಮೊಗ್ಗಲು ಮನೆಯ ತಿಮ್ಮಕ್ಕಜ್ಜಿ, ಬದುಕು ಸವೆದು ಮುಪ್ಪು ಬಲಿತ ಸುಕ್ಕಲಿನ ಚರ್ಮದವಳು. ಅವಳ ಹಟ್ಟಿ ಬಯಲಲ್ಲಿ ಹೊಲೆಹೊತ್ತಿಸಿ, ಉರಿಯುತ್ತಿದ್ದ ಜೋಳದ ಹವಲಿಗೆ. ಉಪ್ಪು ನೀರುಯಿದು ಉರಿಯುತ್ತಿದ್ದ ಉಳ್ಳಿ ಕಾಳಿಗಾಗಿ. ನಿಯತ್ತಿನ ನಾಯಿಯಂತೆ ಕುಂತು ಕುಂತು. ಅಜ್ಜಿ ಹೇಳುತ್ತಿದ್ದ ಕೆಲಸಾನ್ನೆಲ್ಲ ಅಚ್ಚುಕಟ್ಟಾಗಿ ಮಾಡಿಕೊಟ್ಟು. ಅವಳು ಕೊಟ್ಟಷ್ಟು ಜ್ವಾಳದ ಹವಲು ತಿಂದು ನಿರಾಳ್ ವಾಗ್‍ದೆ. ಮತ್ತೆ ಅವಳ ಕೈ ಬಾಯಿಯನ್ನು ದಿಟ್ಟಿಸೀರೆ.ಎದ್ದೋಗ್ರಿ ಸಾಕಿನ್ನ ಹೋಗ್ರಿ ಹೋಗ್ರಿ ನಿಮಗಾಗೊವಷ್ಟು ಕೊಡೋಕೆ, ನಾನಿಲ್ಲಿ ಆಲೆ ಮನೆ ಇಕ್ಕಿಲ್ಲ. ಹಸಿವೆಂಬೋದು ತಬ್ಬಲಿ ನನಮಗಂದು. ಹುಡುಗುರುನ್ನು ಬಿಡಲ್ಲ, ಉಪ್ಪರಿಗೆ ಮ್ಯಾಲಿರೊರುನ್ನು ಬಿಡಲ್ಲ. ಎಂದು ಗೊಣಗಿಕೊಂಡೋಗುತ್ತಿದ್ದೋಳ ಬೆನ್ನು ದಿಟ್ಟಿಸಿ ತೆಪ್ಪಗಾಗ್‍ತಿದ್ವಿ.

ನಿಚ್ಚಳವಾದ ನಿಗವಾದ ಬೆಳಕು ಉಗೀತಿದ್ದ ಸೂರ್ಯನೆಂಬೋನು,ಅವನ ಪಾಡಿಗವನು ಬಲಿಯುತ್ತಿದ್ದ. ಅಂತದ್ದೊಂದು ಘಳಿಗೆಯೊಳಗೆ ಹೆಣುತಿ ತಂದಿಟ್ಟ ಸಕ್ರೆ ಬೆರೆಸಿದ ಹಾಲು. ಬ್ಯಾಡ ಬ್ಯಾಡ? ನನಗೆ ಬರಿ ಹಾಲು ಬ್ಯಾಡ? ಹಾಲಿಗೆ ಬೂಸ್ಟು ಬೆರೆಸಿಕೊಡಿರೆಂದು ರಚ್ಚೆ ಮಾಡುತ್ತಿದ್ದ ಮಗ. ಲೇ ಕೊಟ್ಟಿದ್ದು ಕುಡಿಯೊ, ಈ ತಿಂಗಳಿನ್ನು ಸಂಬಳವೆ ಆಗಿಲ್ಲ? ನಾಳೆ ನಾಡಿದ್ದು ತಂದು ಕೊಡುತ್ತೀನೆಂದ ನನ್ನುಸಿರು. ಗಂಟಲಲ್ಲಿ ಕರ ಕರನೆನ್ನುವಂತಾಯಿತು. ಮೂವತ್ತೆರಡು ವರುಷಗಳ ಕೆಳಗೆ. ನಮಗೆ ಕಾಪಿಯು ಇಲ್ಲ, ಟೀಯು ಇಲ್ಲ, ಮನೆಯಲ್ಲಿ ಅಗ ತಂದು ಆಗ ಉಣ್ಣುವಂತ ಬಡತನ. ಬೆಳಕರಿದು ಹೊಲೆ ಹೊತ್ತಿಸಿದರೆ ಕಾಪಿ ಮಾಡುವ ತಪ್ಪಲೆಗೆ. ಬೆಲ್ಲ ಹೊಂಚಿದರೆ ಪುಡಿಯಿಲ್ಲ, ಪುಡಿಹೊಂಚಿದರೆ ಬೆಲ್ಲವಿಲ್ಲ, ನನ್ನ ಅವ್ವ ಕಾಪಿಗೆ ತರುತ್ತಿದ್ದ ಸೆಟಾಕು ಹಾಲಿಗೆ, ಎಂಟು ಕಪ್ಪಿನಷ್ಟು ಕಾಪಿ, ಅದು ಬಿಸಿ ನೀರಿನಂತ ಪಾನಕ. ಅಂತ ಪಾನಕದಂತ ಕಾಪಿಗೆ ಕಿತ್ತಾಡಿ ಕುಡಿಯುವಾಗ. ನಾನು ಎಲ್ಲರಿಗಿಂತ ನನಗೆ ಜಾಸ್ತಿ ಬೇಕು.ನನಗೆ ಇನ್ನು ಲೋಟ ತುಂಬಿಲ್ಲ?ಎಂದು ರಾಜಕೀಯ ಮಾಡುತ್ತಿದ್ದುದ್ದನ್ನು ನೋಡಿ. ಅವ್ವ ನನ್ನ ಕಣ್ಣು ತಪ್ಪಿಸಿ, ಹೊಲೆಯ ಮೊಗ್ಗಲಲ್ಲಿದ್ದ ಎಡ್ಲರವಿಯ ಬಿಸಿನೀರು ಸುರಿದು ಕೊಡುತ್ತಿದ್ದಳಂತೆ,ಅಂತ ಲೋಟತುಂಬಿದ ಸಪ್ಪೆಯ ಕಾಪಿ ಕುಡುದು. ನಿಮಗಿಂತ ನಾನೆ ಜಾಸ್ತಿ ಕುಡುದೆ ಎಂದು ದೌಲುತೋರಿಸಿಕೊಂತಿದ್ದ. ಈ ತಿರುಬೋಕನ ಮನೆಗೆ ಸಕ್ರೆ ಕಾಪಿ ಕುಡಿಯೊ, ಶ್ರೀಮಂತ ನೆಂಟರೇನಾದ್ರು ಬಂದರೆ. ಬೆಲ್ಲವೆ ಇಲ್ಲದ ಬಡತನದ ಬದುಕಿನ ಅವ್ವನ ಕಳ್ಳು ಒದ್ದಾಡುತ್ತಿತ್ತು. ಅದು ದಿನವು ಮಾಡುವ ಕಾಪಿಯಲ್ಲ. ಮೂರು ದಿನಕ್ಕೊ ಆರು ದಿನಕ್ಕೊ ಮಾಡುವ ಕಾಪಿ. ರಾತ್ರಿ ಅವ್ವ ಹಿಟ್ಟು ಕೆರೆದ ಮಡಿಕೆಯನ್ನ ಹೊಲೆಗಡ್ಡೆಯ ಮ್ಯಾಲೆ ದಬ್ಬಾಕ್‍ತಿದ್ಲು. ಹಸಿವೆಂಬ ಅಗಾದತೆಯನ್ನ ನೀಗಿಸಿಕೊಂಬಲಾಗದೆ. ಬೆಳಗ್ಗೆ ನಾಮುಂದು ನೀ ಮುಂದು ಅಮುತ. ಪೈ ಪೋಟಿಯೊಳಗೆ ಮಡಕೆಯಲ್ಲಿ ಉಬ್ಬುತ್ತಿದ್ದ ಹಿಟ್ಟಿನ ಸೀಕನ್ನು ಕಿತ್ತಾಡಿ ತಿಂದರು.ಇಂಗದ ಹಸಿವಿನೊಳಗೆ, ಏಸೋ ದಿನ ಆ ಹಿಟ್ಟಿನ ಮಡಿಕೆ ಹೊಡಿಯುತ್ತಿತ್ತೇ ವಿನಃ ನಮ್ಮ ಹೊಟ್ಟೆ ತುಂಬುತ್ತಿರಲಿಲ್ಲ. ನನ್ನ ಹಳೆಯ ನೆನಪುಗಳು ಕವುಚಿಕೊಂಡಷ್ಟು. ಮನಸ್ಸು ಬಿಕೋ ಎನ್ನುತ್ತಿತ್ತು. ಆವತ್ತಿನ ಹಸಿವಿಗೆ, ಬಡತನದ ನಿಗ್ರಹಕ್ಕೆ, ಒದ್ದಾಡುತ್ತಿದ್ದ ಬ್ರೆಷ್ಟ್‍ನನ್‍ಮಕ್ಕಳು ನಾವು. ನನಗೆ ಬರೀ ಹಾಲು ಬೇಡ? ಅದಕ್ಕೆ ಬೂಸ್ಟ್ ಬೇಕೆ ಬೇಕೆಂದು. ಈ ಮೂರು ದಿವಸದಿಂದ ಹಾಸಿಗೆ ಬಿಟ್ಟು ಎದ್ದು ಬರದೆ. ಹಠ ಮಾಡುತ್ತಿರುವ ಮಗ,ಈಗ ಹಳೆ ಸಾಲ ಕೊಡ್ರಿ ಮೇಷ್ಟ್ರೆ ಮುಂದಿನ್ ತಿಂಗಳು ಆಗೋವಷ್ಟು ಸಾಮಾನ್ ಕೊಡ್‍ತ್ತೀನಿ. ಎಂದು ಈ ವಾರದ ಮುಂಚೆಯೆ ಹೇಳಿದ ಶೆಟ್ಟಿ. ಯಾರಿಗು ಗೊತ್ತಿಲ್ಲದ ನನ್ನ ಮೌನದುಸಿರು.ಅದಿಕ್ಕೆ ರೆಕ್ಕೆ ಪುಕ್ಕವಿಲ್ಲ. ಕೊಕ್ಕಿಲ್ಲ, ಕಾಲಿಲ್ಲ,ಒಂದೊಂದು ಸಲ ಜೀವ ಹಾರಾಡ್‍ದಂಗಾತದೆ ಹೇಳ್‍ಕಣ್‍ಲಾರೆ ಬಿಡ್‍ಲಾರೆ, ಕಾಲ ಅಂಬೋದು ಯಾರಿಗು ಎದರಲ್ಲ ತನ್ನಷ್ಟಕ್ಕೆ ತಾನು ಕರಗುತ್ತಲೇ ಐತೆ ಬದುಕಿನ ಆಸೆಗಳು ಅದರ್ ಜೊತೆ ಹುಟ್ಟಿಕೊಳ್ಳುವ ಕಷ್ಟಗಳು ಮಾತ್ರ. ಯಾವುವು ಕಡಿಮೆಯಾಗಿರಲಿಲ್ಲ,

ಹೆಣುತಿ ಅವಳಿಗೆ ಬಿಡುವಾದಂಗ್‍ಆದಂಗೆ, ಮನೆಯ ಕಾಂಪೊಂಡಿನಲ್ಲಿ ಹಾಕಿದ್ದ. ಮರಗಿಡಗಳ ಮದ್ಯೆಯ ಕಸ ಕಡ್ಡಿ ಹಾಯುತ್ತಿದ್ದೆ. ಮೇಷ್ಟ್ರೆ ಸಂಬಳ ಆಗಿದ್ರೆ ಬಡ್ಡಿ ದುಡ್ಡು ಕೊಡಬೇಕಂತೆ? ಆಂಗಂತ ಸತ್ಯಪ್ಪ ಶೆಟ್ರು ಹೇಳೀರು. ಎಂದು ಅವರ ಮನೆಯ ಆಳು ಹನುಮಂತನ ಬುಲಾವಿಗೆ. ಜೀವ ತಟ್ಟರಿಸಿದಂತ ಅನುಭವ. ಇಲ್ಲ ಕಣೋ ಇನ್ನು ಸಂಬಳ ಆಗಿಲ್ಲ? ನಡಿಯೊ ನಿಮ್ ಶೆಟ್ರಿಗೆ ನಾನೆ ಬಂದೇಳ್‍ತ್ತೀನಿ. ಎಂದು ಸಾಗಾಕಿದ ಬೆನ್ನಲ್ಲೆ, ಯಾಕಪ್ಪ ಮಾಡ್‍ದೆ? ನನ್ನ ಕಾಣ್‍ದೆ ಇರೋ ಗಿಲೀಟು ಸಾಲಾನ? ಎಂದ ಹೆಂಡತಿಯ ಚುಚ್ಚು ಮಾತು, ಆಡ್‍ಲಿಲ್ಲ ಕುಡಿಲಿಲ್ಲ ಸೂಳೆ ಅಂಬೋಳು ಮಟ್ ಮದ್ಲೆ ಇರ್‍ಲಿಲ್ಲ. ಸಾಲ ಯಾರ್‍ಗಾಗ್ ಮಾಡ್‍ದಪ್ಪ ಶಿವನೆ? ಎಂದು ಮೂಲೆ ಮಂಚದ ಮೇಲೆ ಮಲಗಿದ್ದ ಅವ್ವನ ಕಣ್ಣೀರು. ಕೋಟಿ ಕೋಟಿ ಕೊಳ್ಳೆ ಹೊಡ್‍ದ್‍ನೇನೊ? ಯಾರ್‍ದಾರ ಕತ್ತಿಸುಕುದ್‍ನೇನೊ?ಎನ್ನುವದಿಗಿಲು,

ಮಗ ಬೆಂಗಳೂರಿನಲ್ಲಿ ಇಂಜೀನಿಯರ್‍ ಓದಂಗಾದ.ಅವನ ಖರ್ಚು ಗಗನಕ್ ಮುಟ್ಟಾಕ್ ನೋಡ್‍ತು ನಾನು ಅಂದುಕೊಂಡಿದ್ದ ಬದುಕಲ್ಲಿ ಖರ್ಚೆ ಜಾಸ್ತಿ ಆದಾಯ್‍ವೆ ಕಡಿಮೆ ನನ್ನೆದೆಯಾಗೆ ತಟ್ಟರಿಸುವಂತಾಗಿತ್ತು. ತಿಂಗಳಿಗೆ ಮನೆಯ ಸಂಸಾರದ ಖರ್ಚು. ಮನೆಯ ಬಾಡಿಗೆ, ಹಬ್ಬ ಹರಿದಿನ, ಕಾಯಿಲೆ ಕಸಾರಕ್ಕೆ,ಬರುವ ಸಂಬಳ ಸಾಲುತ್ತಿಲ್ಲ. ಖರ್ಚು ವೆಚ್ಚದ ಇಳುವು ಬಳುವುಗಳನ್ನ ಹೇಳೀರೆ ಯಾರು ಕೇಳಿಸಿಕೊಮ್ಮುತ್ತಿಲ್ಲ. ಊನಪ್ಪ ನಿನ್ನ ಕಟ್ಟಿಕೊಂಡು ಈಸೊರ್ಸವಾದ್ರು. ಒಳ್ಳೆದೊಂದು ತಿನಲಿಲ್ಲ, ಬೆಳ್ಳುದ್ದೊಂದು ಉಡಲಿಲ್ಲ, ಯಾರು ಮಾಡ್‍ದಿದ್ದ ಸಂಸಾರ ನೀನೊಬ್ಬನೆ ಮಾಡ್‍ತ್ತಿದ್ದೀಯ? ಪರಪಂಚದ್ ಮ್ಯಾಲೆ ಯಾರು ಓದುಸ್‍ದಿದ್ದು ಮಗುನ್ನ ಓದುಸ್ ತಿದ್ದೀಯ? ಈಗ್ ನಿನ್ ಕಾಗಮ್ಮ ಗೂವಮ್ಮನ ಪಾಠ ಯಾರ್‍ಗೇಳ್‍ತ್ತೀಯ? ಪಕ್ಕದಲ್ಲಿ ಮಲಗಿರೊ ಹೆಂಡತಿ, ಅವಳ ದಿಂಬನ್ನ ದೂರಕ್ಕೆಳಕೊಂಡು ಮಲಗಿದ್ಲು

ಬೆಳಗ್ಗೆ ನಾನೇಳಾಕ್ ಮುಂಚೆಯೆ ಮನೆಯ ಮುಂದೆ ನಾಲ್ಕಾರು ಹೆಂಗಸರು ಗುಂಪು ಗೂಡಿದ್ದ ಚರ್ಚೆಯೊಳಗೆ. ಪಕ್ಕದ ಊರಿನಲ್ಲಿ ಹತ್ತು ವರ್ಷದ ಹೆಣ್ಣು ಮೊಗುವಿನ ಮ್ಯಾಲೆ. ಯಾರೊ ಪುಂಡು ಹುಡುಗ್ರು ಅತ್ಯಾಚಾರ ಮಾಡೆವರಂತೆ. ತೂ ತೂ ಎಂತ ನಾಯ್ ನನಮಕ್ಕಳವರೊ?. ಇಂತ ನಾಯ್ ನನ್ ಮಕ್ಕಳನ್ನ ಸಿಕ್ಕಿದ್ ಕಡೆ ಕೊಂದಾಕೊ ಕಾನೂನು ಬರ್ ಬೇಕೆಂದ ಹೆಣುತಿಯ ಆಕ್ರೋಶ. ಅವಳು ಕುಳಿತ ಇರುವೆಲ್ಲ ಕಾವಿಡಿದು ಒಮ್ಮೆಲೆ ಜಲಜಲನೆ ಅದುರಿದಂತೆ ಬಾಸವಾಗಿ. ನನ್ನೋಳಗಿನ್ನು ಮಾಯದ ದೊಡ್ಡ ಅವಮಾನವೊಂದು ಗೆಪುತಿಯಾಗಿ(ನೆನಪು) ತಟ್ಟನೆ ಕೆನ್ನೆಗೆ ಬಾರಿದಂತಾತು. ಅದು ಇಲ್ಲೀತಕ ಹೆಣುತಿಗೆ ಹೇಳಿಲ್ಲದ ಮಾತು.ತಪ್ಪಿ ತಾಕಿ ಅವಳಿಗೇನಾರ ಗೊತ್ತಾದ್ರೆ ಉಳಿಗಾಲವಿಲ್ಲದ ಪಜೀತಿಯಾದೀತು. ಆಗಿನ್ನ ಐದನೆ ತರಗತಿ ಹುಡುಗ, ಒಂದು ಮಟ ಮಟ ಮದ್ಯಾನ ನನಗೇನ್ ಮುಚ್ಚಿಕೊಂಡಿತ್ತೋ ಏನೋ? ಅದು ಕೆಟ್ಟ ಮಾತೆಂಬೋದು ನನಗೆ ಅಷ್ಟಾಗಿ ಗೊತ್ತಿರಲಿಲ್ಲ. ಯಾವ ಕಾಮೋದ್ರೇಕದ ಕಂಟು (ವಾಸನೆ) ತಾಕದವನು. ಊರ ಮದ್ಯೆಯ ಮಗ್ಗೋಡೆಯ ಬಯಲಲಿ.್ಲ ದೊಡ್ಡ ಉಣಸೆಮರವೊಂದಕ್ಕೆ ಹಗ್ಗವಾಕಿ ಉಯ್ಯಾಲೆಯಾಡುತ್ತ. ಒಬ್ಬಳೆ ತೂಗಿಕೊಳ್ಳುತ್ತಿದ್ದ ನನಗಿಂತ ಆರು ವರ್ಷ ದೊಡ್ಡವಳಾದ, ಗೊಲ್ಲರ ಗೌರಿಯೆಂಬ ಹುಡುಗಿಯನ್ನ. ಐದುಪೈಸಾಲಿಸ್ತಾನು ವಸ್ತಾವೇಮಮ್ಮಿ ಎಂದು. ನಿರ್ಭಯವಾಗಿ ಕರೆದಿದ್ದೆ, ಅಂತ ನೀಚ್‍ಗೆಟ್ಟ ಮಾತಿಗೆ ಅವಳು ಅಳ್‍ತಾ ಹೋಗಿ. ಮಲ್ಲಮ್ಮನ ಮಗ ಐದು ಪೈಸೆ ಕೊಡುತ್ತೀನಿ. ಬರ್ತೀಯೇನಮ್ಮಿ ಅಮುತ್ತಾನೆಂದು ಗಳಗಳನೆಅತ್ತಳಂತೆ. ಅಂತದ್ದೊಂದು ಕೆಟ್ಟ ಮಾತಿನಸಿಟ್ಟಿಗೆ ತಡೆಯಲಾರದ ಅವಳ ಇಬ್ಬರ ಅಣ್ಣಂದ್ರು. ಊರಿನ ಕುಲೋಸ್ತರನ್ನ ಸೇರಿಸಿಕೊಂಡು, ನನ್ನನ್ನು ದರ ದರನೆ ಎಳಕೊಂಡೋಗಿ. ನಮ್ಮೂರ ಶ್ಯಾನುಬೋಗರ ಸಂಪಿಗೆ ಮರಕ್ಕೆ ಕಟ್ಟಿಹಾಕಿಸಿ. ಹಸಿ ವಂಗೆ ಬರೆಯಲ್ಲಿ ತೀಡೀರು ತೀಡೀರು ಅಂದ್ರೆ, ಯಾವ ಅಗೇಸ್ತ್ರಿಗು ಬ್ಯಾಡದ. ಅವಮಾನದ ಹೊಡೆತ ನನಗೆ ಬಿದ್ದಿತ್ತು, ನಾನು ಬಾಯಿ ಬಡುಕೊಂಡರು ಬಿಡದೆ ಏ ಮುಟ್ಟಾಳ್ ನನಮಗನೆ ನೋಡಾಕ್ ಚೋಟುದ್ದ ಇದ್ದೀಯ. ಕಂಡೋರ್ ಹೆಣು ಮಕ್ಕಳನ್ನ ಇಂಗೆಲ್ಲ ಮಾತಾಡಸ್‍ತೀಯೇನಲೆ? ಎಂದು ಮೈಯೆಲ್ಲ ಬಾಸುಂಡೆ ಬರೊಂಗೆ ಹೊಡೆಯುವಾಗ. ಅದೇ ಬ್ರಾಮರ ನಾಗೇಶಪ್ಪ ದಡ ದಡನೆ ಓಡ್‍ಬಂದು ಬಿಡಿಸಿಕೊಂಡಿದ್ರು. ಆ ರಾತ್ರಿಯೆಲ್ಲ ಅವ್ವ ಆಗಾಗ ಉರಿದ ಉಪ್ಪಲ್ಲಿ ಕಾವು ಕೊಡುತ್ತ. ಇಂತ ಹುಟ್ಟು ಬಾರದ ಉಣ್ಣು ನನ್ನೊಟ್ಯಾಗ್ ಯಾಕ್ ಹುಟ್ಟುದೊ?ಎಂದುಒದ್ದಾಡಿದ ಅವಳ ದುಃಖದ ಕಣ್ಣೀರು ನನ್ನ ಮನದ ಹಂಡೆಯೊಳಗೆ. ಈಗಲು ತುಂಬ್‍ಕಂಡಂಗೆ ಐತೆ, ಆವತ್ತು ನಾನೇನು ಮಾಡದೆ ಅದು ಬಾಯಿ ಜಾರಿ ಆಡಿದ ಮಾತಿಗೆ. ಸಹಿಸಲಾರದ ಅವಮಾನವನ್ನ ಅನುಬವಸ್‍ದೆ. ಅಂತ ಅವಮಾನದ ಗಾಯವಿನ್ನು ನನ್ನೆದೆಯಾಗೆ ಹಸಿಯಾಗೆ ಐತೆ. ಆದರಿವತ್ತು ಅತ್ಯಾಚಾದ ಸರಣಿಗಳು ಕೊನೆಯಿಲ್ಲದಂಗೆ ಘಟಿಸ್‍ತ್ತಲೆ ಅವೆ. ನಿಜವಾಗಿ ಅತ್ಯಾಚಾರ ಮಾಡೋವರಿಗೆ ಸಿಕ್ಕಿತ್ತಾವಲೆ ಸಿಗದಾಕೊ ಕಾನೂನ್ ಬರ್‍ಬೇಕು.

ಕಾಲ ಬದ್ಲಾದಂಗೆ ನಾವು ಬದ್ಲಾಗ್‍ಬೇಕು, ಈ ಕಾಲದ ಕುಂಚಕ್ಕೆ ಅದು ಬಿತ್ತರಿಸುವ ಬಣ್ಣಕ್ಕೆ. ಬೆರಗಾಗಿ ನೋಡುವುದು ನಮ್ಮ ಸರದಿಯಾಗ್‍ಬಾರದು. ಅಂಗಂದುಕೊಂಡ್ರೆ ಅದಾಗಲ್ಲ ಬರೇ ಬ್ರಮೆಗಳನಿಟ್ಟುಕೊಂಡು ನಮ್ಮಲ್ಲಿ ಜೋತಾಡವರೆ ಜಾಸ್ತಿ. ಓ ಹೊ ಅಪ್ಪೇನೊ ಇವತ್ತು ಬಲಗಡೆ ಮಗ್ಗುಲಾಗೆ ಎದ್ದಂಗ್ ಕಾಣ್‍ತ್ತಾನ್ ಕಣಮ್ಮ. ನೋಡು ಬಾ ಆ ಮೂಲೆ ಮನೆ ರಂಗಸಾಮಯ್ಯನ ಕೂಟೆ ವದರಿದ್ದು ವದರಿದ್ದೆ. ಎಂದು ಅಮ್ಮನಿಗೆ ಕುಮ್ಮಕ್ಕು ಕೊಟ್ಟು ಆಡ್‍ಕಳ್‍ತ್ತಿದ್ದ ಮಗ. ಅವನ ಓದು ಮುಗಿಸಿ ಬೆಂಗಳೂರಿನ ಯಾವುದೋ ಕಂಪನಿಯಲ್ಲಿ ಇಂಜಿನಿಯರ್ ಕೆಲಸಕ್ಕೆ ಸೇರಿಕೊಂಡು. ನೆಟ್‍ಗೆ ಯಲ್ಡೊರುಸ ದಾಟಿರಲಿಲ್ಲ.

ರೀ….ರೀ… ಮಗ ಪೋನ್ ಮಾಡವನೆ ಕಣ್ರೀ. ಹೊಸ ಕಾರ್ ತಗಂತಾನಂತೆ ಹೆಣುತಿಯ ಸೇರು ಪಾವಿನ ಸಂತಸ. ಇನ್ನೇನು ಇವತ್ತು ಇವಳ್ ಕೇಸು ಮುಗೀತು. ಅವಳು ಮಾಡೊ ಕೆಲಸವೆಲ್ಲ ಮೂಲೆ ಸೇರ್‍ಕಂಡು. ಸೀಮೆಗಿಲ್ಲದಿದ್ ಮಗನ್‍ಸುದ್ದಿ ಹೇಳಿದ್ದು ಹೇಳಿದ್ದೆ. ಹಿಟ್ ಮಾಡಲ್ಲ ಹೊಟ್ಟೆ ತುಂಬಲ್ಲ. ಅವನೀಗ ಇಂಜಿನಿಯರ್ ಹುಡುಗ ಕಣ್ರಿ, ಅವನ ಅಂತಸ್ತಿಗೆ ಸರಿಯಾಗಿ ಕಾರ್ ಇಡ್ಲೇ ಬೇಕು. ಅಂದವಳ ಮಾತು ನಿಚ್ಚಳವಾಗಿತ್ತಾದ್ರು, ಯಾಕೊ ನನ್ನ ಪಕ್ಕೆಲುಬು ಕಳಕ್ ಎಂಬ ಸಂಕಟ, ಇಷ್ಟ್ ಗಕ್ಕನೆ ಅವನ್ ಕಾರು ಯಾರಿಗ್ ಬೇಕಾಗಿತ್ತು. ಅವನ್ ಓದ್‍ಸಾಕ್ ಮಾಡೀರೊ ಸಾಲ ಅಲ್ಲೇ ಮನಗೈತೆ. ಅಷ್ಟು ಇಷ್ಟು ಜಮೀನು ಕೊಂಡಿದ್ದ ಸಾಲಾನು ತೀರಿಲ್ಲ. ಯಾಕಮ್ಮ ನನಗ್ ಪೋನ್ ಮಾಡ್‍ದಂಗೆ ನಿನಗ್ ಮಾಡವನೆ? ಅವನ್ ತಲೆ ನೆಟ್‍ಗೈತೆ ತಾನೆ?ಮಾತು ನನ್ನೆದೆಯಾಗೆ ನಿಲ್ಲದಂಗೆ ಈಚೆ ನುಗ್ಗುತು. ತಲೆ ಕೆಟ್ಟಿರೋದು ನಿನಗಪ್ಪ ಅವನಿಗಲ್ಲ. ರಿಟೇರ್ಡಾಗತಕ ದುಡುದ್ರು, ನೀನ್ ನೆಟ್ಟಗೊಂದು ಟೀ ವಿ ಎಸ್ ಕೊಂಡ್‍ಕಮ್‍ಲಿಲ್ಲ,ಅಂತ ದರಿದ್ರದ್ ಬಾಳು ನಿಂದು. ಇನ್ನು ನೆನ್ನೆಯಿಲ್ಲ ಮನ್ನೆ ಕೆಲಸಕ್ ಸೇರ್‍ಕಂಡಿರೊವನು. ಕಾರ್ ತರ್‍ತಾನೆ ಅಂದ್ರೆ ನೀನ್ ಕಳಕಳಾ ಗಂಟೇನಪ್ಪ? ಅಂಗ್ ನೋಡೀರೆ ನಮ್ಮ ಬಂದು ಬಳಗದಾಗೆಲ್ಲ ಯಾರು ಕಾರಿಕ್ಕಿಲ್ಲ. ಸದ್ಯ ನಮ್ಮನೆ ಮುಂದೆ ಕಾರ್ ಬಂದು ನಿಂತ್ರೆ, ಅದಕ್ಕಿಂತ ವೈಬೋಗ ಇನ್ಯಾವುದೈತೇಳ್ರಿ? ಹೆಣುತಿಯ ಅರ್ಥವಿಲ್ಲದ ಮಾತು, ಈಗ ಮಗನ ವಯಸ್ಸು ಇನ್ನು ಇಪ್ಪತ್ತೈದು ದಾಟಿಲ್ಲ. ಸದ್ಯ ಇನ್ನು ಒಂದೆರೆಡು ವರ್ಷ ದುಡಿತಾನೆ. ಅಂಗೆ ಅವನು ದುಡದ್ ದುಡ್‍ನೊಳಗೆ ನನ್ ಸಾಲವೆಲ್ಲ ತೀರ್‍ತೈತೆಂಬ ಕನಸಿನಾಗಿದ್ದೋವನಿಗೆ. ಮಗನ ಬದುಕು ಇಷ್ಟು ಗಕ್‍ನೆ ಬದಲಾಗ್‍ತೈತೆ ಅಂಬೋದು. ನನ್ ನಿಗಕ್ ಬರಲಿಲ್ಲ ರಂಗಣ್ಣ ಎಂದೆ. ಇಂತದುಕ್ಕೆ ನಾವು ಸಂತೋಷ ಪಡಬೇಕ್ ಕಣ್ರೀ ಮೇಷ್ಟ್ರೇ. ನಾವಂತು ಇಂತ ಸುಖವಾದ್ ಬದುಕುನ್ನ ಅನ್‍ಭವಸ್‍ಲಿಲ್ಲ. ಅವರಾದ್ರು ಚೆನ್ನಾಗಿರಲಿ ಬಡ್ರಿ ಮೇಷ್ಟ್ರೆ, ಎಂದು ಎದುರು ಬೀದಿಯ ರಂಗಸ್ವಾಮಿಯ ಕೈ ನನ್ನ ಬುಜವನ್ನೆಲ್ಲ ಸವರ್‍ತು. ಎಲ್ಲೊ ನನ್ನೆದೆಯ ತಾಕತ್ತೆಂಬೋದು ಯಡವಟ್ಟಿಗೆ ಜಾರಿರ್‍ಬೇಕೆಮುತ. ಸರಿ ಸರಿ ತರಲಿ ಬಿಡಪ್ಪ ಅವರಮ್ಮ ನನ್ನಿಂದ ಅಂತ ಸುಖ ಪಡಲಿಲ್ಲವಂತೆ. ಮಗನಿಂದಲಾದ್ರು ಸುಖವಾಗಿರಲಿ ಮಾತು ಅನಾಯಾಸವಾಗಿ ಈಚೆ ಬಂತು.

ಒಂದು ಸಂಜೆಯ ಕೆಂದೂಳನ್ನು ಸೀಳಿಕೊಂಡು. ರಸ್ತೆಯಲ್ಲದ ರಸ್ತೆಯನ್ನು ದಾಟಿಕೊಂಡು, ಅಪ್ಪಟ ಕಂದು ಬಣ್ಣದ ಕಾರು. ಗಕ್ಕನೆ ಮನೆಯ ಮುಂದೆ ಬಂದು ನಿಂತ್ಕಂತು. ಹೆಣುತಿಯ ಸಂಬ್ರಮಕ್ಕೆ ಮಿತಿಯಿಲ್ಲದಂತಾತು, ಆ ಕಾರನ್ನ ಮುಟ್ಟಿ ಮುಟ್ಟಿ ನೋಡೀಳು. ಆ ಕಾರಿಗೆ ಬೊಟ್ಟಿಕ್ಕಿ ಹೂವ್ವ ಮುಡಿಸಿ ಆರತಿ ಬೆಳಗಿದ್ದು ಬೆಳಗಿದ್ದೆ. ಮುತ್ತೈದೆಯರಿಗೆ ಕುಂಕುಮ ಕೊಟ್ಟಿದ್ದೂ ಕೊಟ್ಟಿದ್ದೆ. ಅಂಗೆ ಮೈ ಮರೆತು ವೈಬೋಗವುಣ್ಣುತ್ತಿದ್ದ ಅಮ್ಮನಿಗೆ. ಮಗ ಕಾರು ಹತ್ತಿ ವಾಪಸ್ಸೋಗುವ ಮುಂಚೆ. ಅದೇನೊ ಅವಳ ಕಿವೀಲಿ ಯಾರಿಗು ಕೇಳಸ್‍ದಂಗೆ, ಅವನಂತರಾಳದ ಉಸಿರನ್ನ ಬಸಬಸನೆ ಕಕ್ಕಿ ಹೋದ. ಅವಳ ಮುಖವರ್ಣವಾಗ್‍ಲಿಲ್ಲ ವಿವರ್ಣವಾತು. ಅವಳು ನಕ್ಕ ವೈಭೋಗವೆಲ್ಲ ಜಲ ಜಲನೆ ಉದುರುವಂತೆ. ಅವಳುನ್ನ ಜಿಗಟೀರು ತೊಟ್ಟು ರಕುತವಿಲ್ಲದ. ಕಳಾ ಹೀನಳ ಮುಖದವಳಂಗೆ ನಿಂತೇ ಬಿಟ್ಲು. ಅದೇನು ಸುದ್ದಿಯೇಳು? ನಿನ್ನ ಮಗಕಿವಿಯಲ್ಲಿ ಹೇಳಿದ್ದು ಏನೇಳು? ಎಂದು ಇನ್ನಿಲ್ಲದಂಗೆ ಸಾಹಸ ಮಾಡಿ ಕೇಳ್‍ದೆ. ಅವಳಿಗು ಆ ಸುದ್ದಿಯನ್ನ ಅರುಗಿಸಿಕೊಂಬಲಾಗದೆ. ಮೂರುದಿನ ಮೌನವಾಗಿ ಕುದೀತಿದ್ಲು. ಆ ರಾತ್ರಿ ಬೆಳದಿಂಗಳ ಬೇಸಿಗೆಯೊಳಗೆ, ರೀ ನಿಮ್ಮಗ ಯಾವುದೊ ಮರಾಠಿ ಹುಡುಗೀನ ಮೆಚ್ವವನಂತೆ ಕಣ್ರೀ. ಆ ಹುಡುಗೀನು ಇಂಜಿನಿಯರಂತೆ, ಅವಳನ್ನ ಬಿಟ್ರೆ ಯಾರುನ್ನು ಮದುವೆ ಆಗಲ್ಲವಂತೆ, ಎಂದವಳ ಕಣ್ಣೀರು ಗಳಗಳನೆ ಜಾರಿದವು,

ಯಾವೊತ್ತು ಜಾತಿ ಬೇದ ಮಾಡ್‍ಬಾರದು? ನಾವೆಲ್ಲರು ಒಂದೆ, ಮಹೇಶನ ಮೈಯಲ್ಲಿ ಬಿಳಿ ರಕ್ತವಾ? ಇಲ್ಲಾ ಸಾ, ಸುಜಾತಳ ಮೈಯಲ್ಲಿ ನೀಲಿ ರಕ್ತವಾ? ಇಲ್ಲಾ ಸಾ, ರಮೇಶನಿಗೆ ಕಪ್ಪು ಸೂರ್ಯನಾ? ಇಲ್ಲಾ ಸಾ, ಶೈಲಜಳಿಗೆ ಬಿಳಿ ಸೂರ್ಯನಾ? ಇಲ್ಲಾ ಸಾ,ಅಂದ್ ಮೇಲೆ ನಮ್ಮೆಲ್ಲರಿಗು ಒಂದೇ ಭೂಮಿ, ಒಂದೆ ನೀರು, ಒಂದೆ ಸೂರ್ಯ, ಒಂದೆ ಗಾಳಿ, ಇಲ್ಲಿ ನಾವೆಲ್ಲರು ಒಂದೆ ಯಾರು ಹೆಚ್ಚಲ್ಲ, ಯಾರು ಕಡಿಮೆಯಿಲ್ಲ, ನಾವೆಲ್ಲರು ಒಂದೇ ತಾಯಿಯ ಮಕ್ಕಳಿದ್ದಂತೆ. ಎಂದು ಪುಂಖಾನುಪುಂಕವಾಗಿ ಹೇಳುತ್ತಿದ್ದ ನನಗೆ. ಮಗ ಮರಾಠಿ ಹುಡುಗಿಯನ್ನ ಮೆಚ್ಚಿದ್ದಾನೆಂಬ ಸುದ್ದಿ ಕೇಳಿ. ನನ್ನ ಕೈ ಕಾಲುಗಳೆಲ್ಲ ತ್ರಾಣ ಕಳಕೊಂಡವು. ಕಿಟಕಿಯಲ್ಲಿ ಕಾಣುತ್ತಿದ್ದ ಬ್ಯಾಸಿಗೆ ಬೆಳದಿಂಗಳ ಚಂದ್ರ.. ಬೂದು ಬಣ್ಣದ ಮೋಡವನ್ನ ಸೀಳಿ ಸೀಳಿ ಉರುಳಾಡುತ್ತಿದ್ದ.

ದೇಶ್‍ದಾಗೆ ದಿಕ್ಕವಿಲ್ಲದೋರು ಹೆಣ್ಣು ಕೊಡಾರು ಬಂದ್ರು. ಯಾಕ್ ಮಲ್ಲಮ್ಮ ನಿಮ್ಮುಡುಗುಂದಿನ್ನು ಮದುವೆನೆ ಸಟ್ಟಾಗ್‍ಲಿಲ್ಲ? ಎಂದು ಕೇಳುತ್ತಿದ್ದವರ ಬಾಯಿಗೆ. ಊನ್ ತಾಯಿ ಹೆಣ್ಣು ಕೊಡಾರೇನೊ, ಮಸ್ತಾಗ್ ಬರ್‍ತಾಅವರೆ, ಆದ್ರೆ ಒಂದೂ ಸಟ್ಟಾಗ್‍ತಿಲ್ಲ, ಇಲ್ಲಾ ಸಾಲಾವಳಿ ಕೂಡ್ ಬರಲ್ಲ, ಇಲ್ಲಾ ಗಣ ಗುಣ ಕೂಡ್‍ಬರ್‍ತಾ ಇಲ್ಲ, ಇಲ್ಲಾ ದಾರಿ ಬಟ್ಟೆ ಸರಿಯಾಗ್ ಬರ್‍ತಿಲ್ಲ, ಇಲ್ಲಾ ನಮ್ಮನೆ ದೇವ್ರು ಹೂವ್ವಾ ಕೊಡುತಿಲ್ಲ, ಎಲ್ಲಾ ಕೂಡ್ ಬಂತು ಅಂದ್ರೆ ಅವನಿಗ್ ತಗ್ಗಾಟ್ಟಾದ್ ಹೆಣ್ಣು ಸಿಗತಿಲ್ಲ. ಇಂಗಾಗ್ ಕುಂತೈತಮಣಿ, ನಮ್ಮುಡುಗನ್ ಜೊತೇರ್‍ದೆಲ್ಲ ಮದುವೆ ಆತು. ಇವನಿಗ್ ನೋಡೀರೆ ಒಂದು ಸಟ್ಟಾಗ್‍ತಿಲ್ಲ. ಅವನಣೆಗೆ ಅದೇನ್ ಬರ್‍ದೈತೋ ಏನೊ? ಎಂದು ಅವ್ವ ದಿಕ್ಕು ದಿಕ್ಕಿನ ದೇವರಿಗೆಲ್ಲ ಕೈ ಮುಗುದು. ಒಳ್ಳೆಯ ಹೆಣ್ಣು ಸಿಗದ ದುಃಖವನ್ನು ನುಂಗುತ್ತಿದ್ದೋಳು. ಸೂರ್ಯ ಹುಟ್ಟೋದುನ್ನೆ, ಸೂರ್ಯ ಮುಳಗೋದುನ್ನೆ, ಎಣಿಸುತ್ತಿದ್ದ ಅವ್ವನ ಮುಂದೆ. ನನಗೀಗಲೆ ಮದುವೆ ಬೇಡವೆಂದು ಸೋಗಲಾಡಿ ತನಕ್ಕೆ ಜೋತು ಬಿದ್ದವನಂತೆ ನಟಿಸಿ. ಒಳಗೆ ವಿರಹದೊಗೆಯಲ್ಲಿ ಘಾಟಿಲ್ಲದೆ ಕೆಮ್ಮುತ್ತಿದ್ದೆ. ಅವ್ವನ ಅರಕೆಯ ಮಹಾಪೂರಕ್ಕೆ ಸೋತ. ಯಾವದೇವರೊ ಏನೊ? ದಾರಿ ಬಟ್ಟೆ ಸಮವಾದ, ಸಾಲಾವಳಿ ಕೂಡಿಬಂದ, ಗಣ ಗುಣ ವಿಶೇಷದ, ಬಲಗಡೆ ಹೂ ಕೊಟ್ಟ ದೇವರ ನೇತೃದ್ವದಲ್ಲಿ. ಅಷ್ಟೇನು ಅಪ್ಸರೆಯಲ್ಲದ, ನೋಡಲು ಮುದ್ದಾದ ಹೆಣುತಿ ನನಗೆ ಸಿಕ್ಕಿದ್ದಳು. ತಗಿ ಮಲ್ಲಮ್ಮ, ಇಷ್ಟದಿನಾ ಕಾದಿದ್ದಕ್ಕು ಒಳ್ಳೆ ನಾಜೋಕಾದ ಹುಡುಗೀನ್ ತಂದೆ ಬಿಡಮ್ಮ. ಎಂದು ಊರವರ ಬಾಯೊಳಗೆ ಅವ್ವನ ಎದೆಯಾಗಿನ ಉಬ್ಬಿದ ಕೊಡ, ತುಂಬಿ ತುಂಬಿ ತುಳುಕಾಡಂಗಾಯಿತು.

ಇವತ್ತು ಊರವರ ಮುಂದೆ, ಕುಲೋಸ್ತರ ಮುಂದೆ, ಬಂಧು ಬಳಗದವರ ಮುಂದೆ, ಇದ್ದೊಬ್ಬ ಮಗನಿಗೆ ಮರಾಠಿ ಹುಡುಗಿಯನ್ನು ತಂದು. ಸೊಸೆ ಅನುತ ಎಂಗೇಳ್‍ಕಮುಲಿ? ಒಳಗೆ ನನ್ನೆದೆಯ ಇಕ್ಕೆಲುಬುಗಳೆಲ್ಲ ನುಣ್ಣಗೆ ಪುಡಿ ಪುಡಿಯಾಗುವಂತ ನೋವು. ಯಾವುದೊ ಆಸ್ತಿ ಕೈತಪ್ಪಿ ಹೋಯಿತೆನ್ನುವ ಸಂಕಟ. ಅಲ್ರೀ ಮೇಷ್ಟ್ರೆ ನಾಕ್ ಜನಕ್ಕೆ ಹೇಳಾರಾಗಿ. ನೀವೆ ಇಂಗೆ ಹಠ ಮಾಡ್‍ತಾ ಕುಂತ್ರೆ ಎಂಗ್ರಿ? ಅವನೊಪ್ಪಿದ್ ಗದ್ದೇನ ಅವನೆ ಗೇಯ್‍ಬೇಕ್ ಕಣ್ರಿ. ಆಗ್ಲೇ ಪಸಲು (ಬೆಳೆ)ನಿಗಿ ನಿಗಿ ನಗೋದು, ನೀವ್ ನಾಕ್ ಮಕ್ಕಳಿಗೆ ಫಾಠ ಹೇಳಾರಾಗಿ, ಇಂಗ್ ತಿಳುವಳಿಕೇನ ನುಂಗತಾ ಕುಂತುಕಂಡ್ರೆ. ಪರ್ ಪಂಚ ಮುಂದುಕ್ಕೋಗೋದು ಯಾವಾಗ್ರಿ? ಎಂದ ಅದೇ ರಂಗಣ್ಣನ ಏರುದ್ವನಿಗೆ. ನನ್ನಿಂದ ಮುಂದುಕ್ಕೋಗುತೈತೇನಯ್ಯ? ನಾನು ಯಾವೂರಿಗೆ ಯಾವ್‍ದಾಸ್‍ನಯ್ಯ? ಒಟ್ಯಾಗಿನ ಕುತಾವಲ ತಡಿಲಾರದೆ ಕಕ್ಕಿದ ಮಾತಿಗೆ. ಅಲ್ಲ ಅಲ್ಲ ಮೇಷ್ಟ್ರೆ ಕ್ವಾಪ ಮಾಡ್‍ಕಾಬ್ಯಾಡ್ರಿ ಮೇಷ್ಟ್ರೆ? ನಿಮ್ಮಿಂದ ಪರ್‍ಪಂಚ ಮುಂದುಕ್ಕೋಡ್ತಿಲ್ಲ, ಆದ್ರೆ ಓಡ್ ತಿರೊ ಪರ್‍ಪಂಚದ್ ಕಡೆ ಮನಸ್ಸೆಂಬೊ ಬಾಗಲ್‍ನ್ನ ತಕ್ಕಂಡ್ ನೋಡ್ ಬೇಕು ಮೇಷ್ಟ್ರೇ. ಅಂದವನ ಮುಂದೆ ನಾನು ಮೇಷ್ಟ್ರಾಗಿದ್ದು ಲಾಯಕ್ಕಿಲ್ಲವೇನೊ? ಅನುಸ್ತು, ಅಲ್ಲ ಮೇಷ್ಟ್ರೆ ಸಂಕಟ ಪಡೋಕೆ ನೀವೇನ್ ಕಳಕಂಡಿದ್ದೀರಾ? ನಿನ್ ಮಗ ಸೊಸೆ ನೂರ್ ವರುಷ ಬಾಳೋ ಪೈರುಗುಳು. ಅಂತ ಪೈರುಗಳನ್ನ. ನಾವು ನಿರುಮ್ಮಳವಾಗಿ ( ಸಮಾದಾನ) ನೋಡೋದುನ್ನ ಕಲೀ ಬೇಕೆ ವಿನಃ ನಿಷ್ಟೂರಕ್ಕೆ ಬಲಿಯಾಗೋದು ಬ್ಯಾಡ ಬಿಡ್ರಿ ಮೇಷ್ಟ್ರೆ. ಎಂದ ಅದೇ ರಂಗಣ್ಣನ ಏರುದ್ವನಿಗೆ ತಲೆ ದೂಗಿ ನಿದಾನಕ್ಕೆ ಎದ್ದೆ. ಮನಸ್ಸು ತಟ್ಟರಿಸುತ್ತಿತು, ಅದ್ದೂರಿ ಯಾದ ಎಂಗೇಜ್ ಮೆಂಟು, ಬೆಲೆ ಬಾಳುವ ಬಟ್ಟೆ, ದುಬಾರಿ ವಡವೆ, ನೋಡಿ ನೋಡಿ ದಣಿದ ಕಣ್ಣು, ಎಲೆಯ ತುಂಬ ಹೇಳಲಾಗದ ಊಟದ ಪದಾರ್ಥಗಳು.

ರೀ ಮಗ ಆಗ್ಲೇ ಸೊಸಿಗೆ ಇಪ್ಪತ್ತೈದು ಸಾವರದ್ದು ಮೊಬೈಲು ಕೊಡಸವನಂತ್ರಿ. ಅಲ್ಲಿ ಎಂಗೇಜ್ ಮೆಂಟಿನಾಗೆ ಹೆಣ್ಣಿನ ಕಡೆಯವರು ಮಾತಾಡ್‍ತಿದ್ರು. ರಾತ್ರಿ ಕತ್ತಲೆ ಬಿಡಿಸದ ಅರೆಬೆತ್ತಲೆಯ ನಿದ್ದೆ. ನನ್ನ ಹೃದಯ ನನ್ನೋಳಗೆ ಐತೊ? ಇಲ್ಲವೋ? ಎಂಬ ಅನುಮಾನ. ಆವತ್ತು ಇವಳನ್ನ ಮದುವೆಯಾಗಿ ಒಂದು ವರ್ಸವಾದ್ರು, ಅವಳಿಗೊಂದು ಕುಪ್ಪಸವೊಲೆಸಿರಲಿಲ್ಲ, ನಮ್ಮನೆ ಒಳಗಿನ ಹೊರಗಿನ ಕಸ, ಮುಸುರೆ, ಬದುಕು, ಬಾಳು, ಅಮುತ ಜೀವ ತೇಯುತ್ತಿದ್ದವಳನ್ನು ನೋಡಿ. ಅಮ್ಮ ಅವಳು ನಮ್ಮನಿಗ್ ಬಂದು ವರ್ಸವಾಗ್‍ತಾ ಬಂತು. ಅವಳಿಗೊಂದು ಸೀರೆ ತಂದುಕೊಡ್ಲಿಲ್ಲವಲ್ಲ? ಅಂದೆ ಬ್ಯಾಡ ಕಣೊ ಬ್ಯಾಡ? ಅಂಗೆಲ್ಲ ಕೊಡಸ್ ಬಾರ್‍ದು? ಅವಳೊಂದು ಮಗುವಿನ ತಾಯಿಯಾಗಾ ತಕ, ನಾವು ಗಂಡನ ಮನೆಯವರು ಏನೂ ತರಂಗಿಲ್ಲ. ಅವಳು ತವರು ಮನೆಯಿಂದಾನೆ ತರ್ ಬೇಕು, ನಮ್ಮಮ್ಮ ನಮ್ಮಜ್ಜಿ ನಾನು ಎಲ್ರು ಇಂಗೆ ಬಾಳ್‍ದವರು. ನಿನ್ನೆಣುತೀನು ಇದುನ್ನೇ ಅನುಸರಸ್ ಬೇಕ್ ಕಣಪ್ಪ. ಎಂದ ಅವ್ವನ ಮೌಡ್ಯತೆಯೊಳಗೆ ಮದುವೆಯಾಗಿ ಮೂರುವರ್ಸವಾದ್ರು,. ನನ್ನ ಹೆಣುತಿಗೆ ನಾನು ಏನೋಂದು ಕೊಡಿಸಿರಲಿಲ್ಲ. ಇವತ್ತು ಸೊಸೆ ಯಾಗೊವಳು ನೆಟ್ಟಿಗಿನ್ನ ನಮ್ಮೊಸಿಲೇ ದಾಟಿಲ್ಲ. ಅವಳಿಗೆ ಇಪ್ಪತ್ತೈದು ಸಾವಿರದ ಮೊಬೈಲು. ಉಸಿರು ಎಲ್ಲೋ ಸಿಗಾಕ್ಕಂಡತೆ, ಮಲಕ್ಕೆಂಡ್ರು ಒದ್ದಾಡಂಗಾಗ್‍ತಿತ್ತು, ಕುಂತರು ಒದ್ದಾಡಂಗಾಗ್‍ತಿತ್ತು, ಲೆಟ್ರಿನ್ ರೂಮಿಗೆ ಐದಾರು ಸಲ ಓಡಾಡಿದ್ದಾತು. ಮದುವೆಯ ತಯಾರಿಗಾಗಿ ಕನಸುಗುಳನ್ನ. ಕಣ್ಣಾಗೆ ಪೇರಿಸಿಕೊಂಡು ಓಡಾಡುತ್ತಿದ್ದ ಮಗನನ್ನು. ಲೇ ಚೇತು ಆ ಹುಡುಗಿಯಿನ್ನ ನಮ್ಮನೆ ಒಳಿಕ್ಕೆ ಹೆಜ್ಜೇನಾರ ಇಟ್ಟಿಲ್ಲ. ಈಗ್ಲೆ ಮೊಬೈಲು ಕೊಡುಸೊ ಅವಸರ ಏನಿತ್ತಲಾ? ಎಂದೆ ನನ್ನೆದೆಯ ಮಾತು ತಾಕತ್ತಾಗಿತ್ತು, ಊನಪ್ಪ ನಿನ್ನಂತ ಅವೇಕ್(ಅವಿವೇಕಿ) ಬಾಳು ಬಾಳುದ್ರೆ. ನ್ನನ್ನುನ್ನ ಯಾರಾದ್ರು ಚಪ್ಲೀಲಿ ಹೊಡಿತಾರೆ ಎಂದ. ಅವನ ಅಂಗಾಲಿನಿಂದ ಹತ್ತಿಕೊಂಡ ಸಿಟ್ಟು. ನೆತ್ತಿ ಬಾಯೊಳಗೆ ಬಸ ಬಸನೆಂದು ಉರಿಯತೊಡಗಿತು. ನಿದ್ದೆ ಬಾರದ ಆ ರಾತ್ರಿ ಮೋಡದೊಟ್ಟೆಯೊಳಗಿನ ಅದೆ ಚಂದ್ರ. ನಿರುಮ್ಮಳನಾಗಿ ಉರುಳಾಡಿದ್ದು ಕಾಣಿಸಲೇ ಇಲ್ಲ.
ವಿಜಯಾಮೋಹನ್‍ ಮಧುಗಿರಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x