ನೀನೊಂತರ ಹವಳದ ಮುತ್ತು. ಬಳಿ ಇಲ್ಲದೆಯೂ ಏರಿಸುತ್ತಿರುವೆ ನಿನ್ನದೇ ಮತ್ತು. ನಗು ನಗುತ ನನ್ನೆದೆ ಹೊಕ್ಕು ಬಾಳ ಕಣ್ಣಾದವಳು ಇಂದು ಕಣ್ಣಂಚಲಿ ನೆನಪಾಗಿ ಕುಳಿತಿರುವೆ. ಕರೆವೆನೆಂದರೂ ಕೇಳಿಸದ ಊರಲಿ ನೀ ಕುಳಿತಿರುವೆ. ನಕ್ಕು ನಲಿವ ನಕ್ಷತ್ರವಾಗಿ ಮಿನುಗುತ ಎಲ್ಲರಿಗೂ ಮೆರುಗು ತರುತ್ತಿರುವೆ ಎಂದು ಭಾವಿಸುವೆ. ಏಕೆಂದರೆ ನೀ ಎನಗೆ ಕಲಿಸಿದ ಮೊದಲ ಪ್ರೇಮವೇ ನಗು. ನೋವಿನಲ್ಲೂ ನಗು. ನೋವ ಮರೆಸಲು ನಗು. ಮಗುವಾಗಿಸೋ ನಗು. ಪೆದ್ದು ಪೆದ್ದು ಮಾತಿನಲೂ ಪ್ರಬುದ್ಧೆ ನೀ.
ತಿದ್ದಿ ಬುದ್ಧಿ ಹೇಳೋ ತಿಳುವಳಿಕೆಯಲಿ ಬುದ್ಧೆ ನೀ.ಬಾಳ ಪಯಣದಲ್ಲಿ ಯಾಕಿಷ್ಟು ಅವಸರಿಸಿದೆ ನನ್ನ ಒಂಟಿಯಾಗಿಟ್ಟು ಈ ಜಗದಲ್ಲಿ. ನನಗೆ ಬಾಳ ದಾರಿ ತೋರೋ ನೆಪದಲ್ಲಿ ಮುನ್ನಡೆದ ನೀ ಸೇರಿದೆ ಮರಳಿ ಬಾರದೂರಿಗೆ.
ನೀನಿಲ್ಲದ ಯಾನ ನೇಸರನಿಲ್ಲದ ಬಾನ
ನಿನ್ನೊಲವಿನ ಗಾನ ಎದೆಗಂಟಿದ ಮೌನ
ಬಚ್ಚಿಟ್ಟ ಮಾತೆಲ್ಲವ ಬಿಚ್ಚಿಡಲು ಹಾತೊರೆವೆ
ಆಲಿಸದೆ ನೀ ಯಾವೂರಲಿ ಕುಳಿತಿರುವೆ ll
ನೀನು ನನ್ನ ಬದುಕಿನ ಅಂಗಳಕ್ಕೆ ಕಾಲಿಟ್ಟಾಗ ಬದುಕೊಂದು ಸುಂದರ ಉದ್ಯಾನವನವಾಗಿತ್ತು.ಇನ್ನು ಅಲ್ಲಿ ಏನಿದ್ದರೂ ನಮ್ಮಿಬ್ಬರ ಒಲವಿನ ಹೂವುಗಳು ಅರಳಬೇಕು. ನಾವಿಬ್ಬರು ಆ ಒಲವಿನ ಹೂವನ್ನು ಕೊನೆವರೆಗೂ ಜೋಪಾನವಾಗಿ ಪಾಲಿಸಬೇಕು ಎಂದು ಬೆಟ್ಟದಷ್ಟು ಕನಸುಗಳನ್ನು ಹೆಣೆದಿದ್ದೆ. ಆದರೆ ಇಂದು ನನ್ನಿ ಹೃದಯ ಬರಡಾದ ಮರುಭೂಮಿಯಂತಾಗಿದೆ. ಏನಿದೆ ಇನ್ನು ಈ ಬದುಕಿನಲ್ಲಿ? ನೀನಿಲ್ಲದ ಯಾವ ಕ್ಷಣಗಳು ಪೂರ್ಣವಾಗುತ್ತಿಲ್ಲ. ಹೃದಯ ಬಿಕ್ಕಿ ಬಿಕ್ಕಿ ಅಳುತ್ತಿರುವಾಗ ಸಂತೈಸಲು ನನ್ನಿಂದ ಆಗುತ್ತಿಲ್ಲ. ನಿನ್ನ ಮಡಿಲಿನಾಸರೆ ಇಲ್ಲದ ಮೇಲೆ ಒಡಲು ನಿರ್ಜೀವವೇ. ನಿನ್ನ ನಗುವೇ ಕಾಣದ ಈ ಕಣ್ಣುಗಳಿಗೆ ಜಗವೇ ಅಂಧಕಾರದಂತೆ ಕಾಣುತ್ತಿದೆ.
ಆ ದಿನ ನೀನು ಪ್ರೀತಿಯಿಂದ ಬರೆಯುತ್ತಿದ್ದ ಆ ಮುದ್ದಾದ ಪತ್ರಗಳು ನಿನ್ನ ನೆನಪನ್ನು ಮತ್ತೆ ಮತ್ತೆ ನೆನಪಿಸುತ್ತಿದೆ. ನೀನು ಆ ದಿನ ಒಂದು ಮಾತು ಅಂದಿದ್ದೆ. ನಮಗೆ ಒಬ್ಬರ ಬೆಲೆ ಗೊತ್ತಾಗಬೇಕಾದರೆ ಅವರಿಂದ ಸ್ವಲ್ಪ ದೂರವಿದ್ದು ನೋಡಬೇಕಂತೆ. ಆಗ ನಾನು ನಿನ್ನ ಮಾತನ್ನು ತುಂಬಾ ಹಗುರವಾಗಿ ತೆಗೆದುಕೊಂಡಿದ್ದೆ. ಇವಳೆಲ್ಲಿ ನನ್ನ ಬಿಟ್ಟು ಹೋಗುತ್ತಾಳೆ ಅನ್ನುವ ಉದಾಸೀನ ಭಾವವಿತ್ತು ನನ್ನಲ್ಲಿ. ಇದೇ ನಾವು ಮಾಡುವ ಮೊದಲ ತಪ್ಪು. ಹುಡುಗಿ ಅತಿಯಾಗಿ ಪ್ರೀತಿಸುತ್ತಾಳೆ ಅಂದಾಗ ನಾವು ಉದಾಸೀನರಾಗುತ್ತೇವೆ. ಇವಳಿಗೆ ನಾನೇ ಸರ್ವಸ್ವ ಇನ್ನು ಇವಳು ನನ್ನ ದೂರ ಮಾಡಲಾರಳು ಅನ್ನುವ ಅತಿಯಾದ ನಂಬಿಕೆಯೊಂದು ಒಳಗಿಂದ ಗಟ್ಟಿಯಾಗಿರುತ್ತದೆ.
ಮೊದ ಮೊದಲು ಅವಳಿಗಾಗಿ ಪರಿತಪಿಸುವಷ್ಟು ಮನಸ್ಸು ಮತ್ತೆ ಅಷ್ಟಾಗಿ ಪರಿತಪಿಸುವುದಿಲ್ಲ. ಅದಕ್ಕೆ ಇರಬೇಕು ಇವತ್ತು ನೀನಿಲ್ಲದ ಒಂದೊಂದು ಕ್ಷಣವೂ ನನ್ನನ್ನು ನನ್ನ ಮನಸ್ಸನ್ನು ಇಷ್ಟೊಂದು ಕಾಡುತ್ತಿರುವುದು. ನಿನ್ನ ಗೈರು ಹಾಜರಿ ನನ್ನ ಬದುಕನ್ನು ಮತ್ತೆ ಸರಿ ಮಾಡುತ್ತದೆ ಅನ್ನುವ ಯಾವ ಸೂಚನೆಯೂ ನನಗೆ ಸಿಗುತ್ತಿಲ್ಲ.
ನಿನಗಾಗಿ ಹಂಬಲಿಸುವ ಕ್ಷಣಗಳಲ್ಲಿ ಮತ್ತದೆ ಪತ್ರಗಳ ರಾಶಿಯನ್ನು ಮುಂದೆ ಹರವಿ ಸುಮ್ಮನೆ ಕೂರುತ್ತೇನೆ. ನಿನ್ನ ಜೊತೆ ಕಳೆದ ಎಲ್ಲ ಕ್ಷಣಗಳು ಅದು ಕಲ್ಪನೆಗೂ ನಿಲುಕದು. ಇವತ್ತು ಮತ್ತೆ ಒಂಟಿ ನಾನು. ನೀನಿರದ ಮೇಲೆ ಬದುಕಲೇನಿದೆ ಅಂತ ನನ್ನ ನಾನು ಪ್ರಶ್ನಿಸಿಕೊಂಡಾಗ ಬದುಕು ನಿರ್ಜೀವವಾಗಿ ಬಿಡುತ್ತದೆ.
ಆವತ್ತು ನೀನು ಇಲ್ಲ ಅಂದಾಗ ನಂಬಲು ನಾನು ಸಿದ್ದವಾಗಿರಲಿಲ್ಲ. ಅಷ್ಟು ಸುಲಭವಾಗಿ ನನ್ನ ತೋಳತೆಕ್ಕೆಯಿಂದ ನೀನು ಬಿಡಿಸಿಕೊಂಡು ಹೋದೆಯಾ.? ಇಷ್ಟೇನಾ ಈ ಪ್ರೀತಿಗೆ ಇರುವ ಶಕ್ತಿ.?
ಆದುದನು ಮರೆತು ನಡೆಯಲು
ಮರೆವೇ ಇಲ್ಲವಾಯಿತೇ
ಹಾರೋ ಹಕ್ಕಿಗೆ ಗೂಡು ಕಟ್ಟಲು
ಮರವೇ ಇಲ್ಲವಾಯಿತೇ
ಜನ್ಮ ಜನ್ಮದ ಬಂಧು
ನನ್ನ ಬಿಟ್ಟು ಹೋಗಿಹೆ ಇಂದು ll
ಗತಿಸೋ ಸಮಯದ ಸೂಚಿಯೇ ಮುಳ್ಳಾಗಿರುವಾಗ ಸದಾ ಕಾಲ ಹೂವನ್ನೇ ಬಯಸುವ ನಾವೆಷ್ಟು ಹುಂಬರು. ಬಗೆದಷ್ಟು ಬರಿದಾಗದ ನಿನ್ನೀ ನೆನಪು ಸುಡುತಿದೆ ನನ್ನದೆಯನು ನೀಡದೆ ಒಂದಿನಿತು ತಂಪು.
ಕೈಗೂಡದ ಕನಸೆಲ್ಲವೂ ಇಂದು ಕಣ್ಣಾಲಿಯ ಕೈ ಸೇರಿದೆ. ಮತ್ತೆ ಹುಟ್ಟಿ ಬರುವ ಸೂರ್ಯನಂತೆ ನೀ ಮರಳಿ ಬಂದು ನನ್ನ ಸೇರಬಾರದೆ?…ಸಹೃದಯಿಗಳೆಂದರೆ ದೇವರಿಗೆ ಪಂಚ ಪ್ರಾಣ ಅಲ್ಲವೇ. ಅದಕ್ಕಿರಬಹುದು ಒಳ್ಳೆಯ ವ್ಯಕ್ತಿ, ವ್ಯಕ್ತಿತ್ವಗಳನ್ನು ದೇವರು ಬೇಗನೇ ತನ್ನ ಬಳಿಗೆ ಕರೆಸಿಕೊಳ್ಳುತ್ತಾನೆ. ಬಹುಶಃ ಈ ಕಾರಣಕ್ಕಾಗಿ ಕೆಟ್ಟ ವ್ಯಕ್ತಿತ್ವಗಳು ಜಾಸ್ತಿ ಆಗಿ ಭೂಮಿ ದಿನೇ ದಿನೇ ಕೆಡುತ್ತಿದೆ. ಕ್ಷಣ ಕ್ಷಣಕೂ ಸಾಯುತ್ತಿರುವ ಈ ಹೃದಯಕೆ ಸಾಂತ್ವನದ ಹಂಗೇಕೆ. ಎದೆಯ ಗೂಡಲಿ ಗುಬ್ಬಚ್ಚಿಯಂತೆ ಬೆಚ್ಚಗೆ ಕೂತಿದ್ದ ನಿನ್ನ ನೆನಪು ಎಂಬ ಗೂಡಿಗೆ ಯಾವ ಕಿಡಿ ಸೋಕಿ ಸುಡುತಿದೆ ಎನ್ನ. ಸಾಗಿ ಬಿಡು ಸಮಯ ಮಾಗಿದ ಹಣ್ಣಾಗುವೆ ನಾನು. ಅವಳೊಲವಿನ ನೆನಪನು ಹೊತ್ತು ಈ ಭುವಿಯಲಿ ಮಣ್ಣಾಗುವೆ ನಾನು.
ನೀನು ನನ್ನ ಸೇರಲಿಲ್ಲ
ಈ ಉಸಿರು ಇನ್ನೂ ಹಾರಲಿಲ್ಲ
ಕನಸಿನ ಕಣ್ಣೇ ಕುರುಡಾಗಿದೆ
ಒಲವಿನ ಮಣ್ಣೇ ಬರಡಾಗಿದೆ ll
ಮನದಲಿ ಸುರಿಯುವ ಬೆಂಕಿಯ ಮಳೆಗೆ ಹಿಡಿಯಲಿ ಹೇಗೆ ಸಾಂತ್ವನದ ಕೊಡೆಯ. ಹಣೆಯಲಿ ಇರದ ನಿನ್ನೆಸರನು ಹೃದಯದಿ ಕೆತ್ತಿರುವೆ ಒಲವೆಂಬ ಉಲಿಪೆಟ್ಟಲಿ ಸದಾ ಹಸಿರಾಗುವಂತೆ. ಭುವಿಯು ಎಷ್ಟು ಸುತ್ತು ಸುತ್ತಿದರೂನು, ರವಿಯು ಎಷ್ಟು ದಿನ ಹೊತ್ತಿದರೂನು ಬರಿದಾಗದ ನಿನ್ನ ನೆನಪೇ ನನ್ನಯ ದಿನಚರಿ.ಅಂಬಿಗನಿಲ್ಲದ ಹಾಯಿದೋಣಿ ಸರಿ ದಿಕ್ಕಲ್ಲಿ ಸಾಗಿ ದಡ ಸೇರುವುದಾದರೂ ಹೇಗೆ?..ತೇಲುತಿಹುದು ಕಣ್ಣೀರಲಿ ನನ್ನ ಬದುಕೆಂಬ ಹಾಯಿದೋಣಿ ನೀನಿಲ್ಲದೆ. ಬಾನ ಜ್ಯೋತಿಯು ನಂದಿ ಹೋದ ಮೇಲೆ ಭುವಿಗೆ ಬೆಳಕ ನೀಡುವವರಾರು?… ಆವರಿಸಿದ ಕತ್ತಲೆಯಲಿ ಎಲ್ಲವೂ ಶೂನ್ಯ. ಬರ ಬಂದಂತೆ ಮುತ್ತಿಕೊಂಡ ನೀರವ ಮೌನ ಮಾತ್ರವೇ ಉಳಿಯಿತು ಎನ್ನ ಬಾಳಿಗೆ. ಮಾತಾಡಬಾರದೆಕೊಮ್ಮೆ ಮೌನವನು ಮೌನಿಯಾಗಿಸುವಂತೆ. ನಮ್ಮೊಲವೇ ದಿಕ್ಕ ತೋರುವುದು ಎನಗೆ ನೀನಿರುವ ಊರಿಗೆ. ಸೇರಿಕೊಳ್ಳುವೆ ನಿನ್ನನು ನಾ ಈ ಪಾಪಿ ಜಗದ ಮೌನವ ಕೊಂದು.
–ಚೇತನ್ ಪೂಜಾರಿ, ವಿಟ್ಲ.