ಕನ್ನಡ ಸಾಹಿತ್ಯ ಪರಂಪರೆ ದಿನದಿನೆ ಹುಲುಸಾಗಿ ಬೆಳೆಯುತ್ತ ಸಾಗಿದೆ. ಅದೊಂದು ಕಾಲದಲ್ಲಿ ಸಾಹಿತ್ಯ, ಬರಹವೆಂದರೆ ಪ್ರಾಧ್ಯಾಪಕರು,ಪಂಡಿತರಿಗೆ ಮಾತ್ರ ಸಿಮೀತ ವಾಗಿತ್ತು. ಆ ದಿನದ ಸಾಹಿತ್ಯವು ತನ್ನದೇ ಆದ ಛಂದೋಬದ್ಧ ಚೌಕಟ್ಟಿನಲ್ಲಿತ್ತು. ಆಧುನಿಕ ಸಾಹಿತ್ಯದ ಕಾಲದ ಈ ದಿನಮಾನದಲ್ಲಿ ‘ಮುಕ್ತಛಂದ’ದ ಮೂಲಕ ಎಲ್ಲವೂ ಮುಕ್ತವಾಗಿ ಅನಾವರವರಣಗೊಳ್ಳುತ್ತಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ವಾಟ್ಸಪ್,ಫೇಸ್ ಬುಕ್ಕ್, ಇಂಟರ್ನೆಟ್ ಗಳ ಸಂಪರ್ಕ ಹಾಗೂ ಸಂವಹನದ ಮೂಲಕ ವೇದಿಕೆಯನ್ನು ಹಂಚಿಕೊಳ್ಳುವದರೊಂದಿಗೆ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಿದೆ.
ಇಂತಹ ಕಾಲಘಟ್ಟದಲ್ಲಿ ರಾಯಚೂರಿನ ಸೃಜನಶೀಲ ಬರಹಗಾರ ಕವಿ,ಕಥೆಗಾರರಾದ ಶ್ರೀ ವೇಣು ಜಾಲಿಬೆಂಚಿಯವರು ವೃತ್ತಿಯಿಂದ ವಕೀಲರಾಗಿ ಪ್ರವೃತ್ತಿಯಿಂದ ಸಾಹಿತ್ಯದಲ್ಲಿ ಕೃಷಿ ಮಾಡುತ್ತ ಈಗಾಗಲೇ “ಅಪ್ಪ ಮಗನ ಕಥೆಗಳು” ಕೃತಿಯೊಂದಿಗೆ ಪರಿಚವಾಯವಾದವರು. ದಶಕಗಳ ಬಿಡುವಿನ ನಂತರ ಗೆಳೆಯರ ಒಡನಾಟ ಮತ್ತು ವಾಟ್ಸಪ್, ಫೇಸ್‌ಬುಕ್‌ಗಳ ಮೂಲಕ ಸಾಹಿತ್ಯದಲ್ಲಿ ಸಕ್ರಿಯವಾಗಿ, ಈಗ ಎರಡನೇ ಕೃತಿಯಾದ “ತಿಳಿಯದೇ ಹೋದೆ” ಕವನ ಸಂಕಲನದೊಂದಿಗೆ ಕಾವ್ಯಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬೆಂಗಳೂರಿನ ನಿವೇದಿತ ಪ್ರಕಾಶನ ಪ್ರಕಟಿಸಿದ ತಿಳಿಯದೇ ಹೋದೆ ಕೃತಿಯಲ್ಲಿ ಒಟ್ಟು ನಲವತ್ಮೂರು ಕವನಗಳನ್ನು ಓದುಗರ ಮುಂದಿಟ್ಟಿದ್ದಾರೆ. ‘ಪೂಜ್ಯ ತಂದೆಯವರು ಸಾಹಿತಿಗಳಾಗಿದ್ದೆ ಸಾಹಿತ್ಯ ನನಗೂ ಬಳುವಳಿಯಾಗಿ ಬಂದಿತು’ ಎನ್ನುತ್ತಾರೆ. ಕೋಮಲ ಹೃದಯದ ಕವಿಮಿತ್ರ ವೇಣು ಜಾಲಿಬೆಂಚಿಯವರ ಮನದಾಳದಲ್ಲಿ ವ್ಯವಸ್ಥೆಯ ವಿರುದ್ಧ ಮನದೋಳಗೆ ಮಣದಷ್ಟು ಆಕ್ರೋಶವಿದ್ದರು,ವಾಸ್ತವಿಕತೆಯನ್ನು ಅರಿತು ಎದರುಗೊಳ್ಳದೆ ತಮ್ಮ ಅಭಿವ್ಯಕ್ತಿಯನ್ನು ಕಾವ್ಯದ ಮೂಲಕ ಪ್ರತಿರೋಧವನ್ನು ಒಡ್ಡಿದ್ದಾರೆ. ಬಾಳಿ ಬದುಕಬೇಕಾದ ದಿನಗಳಲ್ಲಿ ವವ್ಯಸ್ಥೆಯನ್ನು ಎದುರಿಸಲಾಗದೆ ‘ತಿಳಿಯದೇ ಹೋದೆ’ ಎನ್ನುವ ಅಂತರಂಗದ ದನಿ ಗುಡುಗುತ್ತದೆ.
‘ನನ್ನ ಹೃದಯ ಅಂಗಡಿಗೆ
ಬೀಗ ಬಿದ್ದು ಹೋಗಿದೆ
ನಿನ್ನ ನೋಡಿದ ಮೇಲೆ’
(ಬಾ ಹೆಣ್ಣೆ)
ಪ್ರತಿಯೊಬ್ಬ ಕವಿಯೂ ಮೊದಮೊದಲು ಕಾವ್ಯ ಬರೆಯುವುದೆ ಪ್ರೀತಿ, ಪ್ರೇಮದ ವ್ಯಾಮೋಹದಲಿ ಆಗೆ ವಯೊಸಹಜದಂತೆ ಜಾಲಿಬೆಂಚಿಯವರು ಕೂಡ ತಮ್ಮೊಳಗಿನ ಅಗಾಧವಾದ ಪ್ರೀತಿಯನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. ಕನ್ನಿಕೆಯ ಮೋಹದ ಬಲೆಗೆ ಬಿದ್ದ ಪ್ರೀತಿಯ ಮನಸ್ಸು ಆ ಶಹರಿಗೆ ಧಿಕ್ಕಾರ ಕೂಗುತ್ತ ಅವಳಗಾಗಿ ದಾರಿ ಕಾಯುವ ಪರಿ ಪ್ರೀತಿಯ ವಿಶ್ವಾಸವನ್ನು ತೋರ್ಪಡಿಸಿದೆ.
‘ನಾನು;
ಅಯ್ಯೋ,ಎಲ್ಲಾದರೂ ಉಂಟೆ
ನೀ ನನ್ನ ಅರ್ಧಾಂಗಿ
ನೋಡು ಅದರಲ್ಲಿ
ಅರ್ಧಂಗಿ ನೀನು!
ಬರಿ ಹರಿದು ಹೋದ
ಅಂಗಿ ನಾನು!
(ಹೀಗೊಂದು ಲಹರಿ)
ಗಂಡ-ಹೆಂಡತಿಯ ನಡುವಿನ ಭಾವ ಸಂವಾದ ಈ ಕವಿತೆಯಲ್ಲಿ ಸೊಗಸಾಗಿ ಎಣದಿದ್ದಾರೆ. ಇಲ್ಲಿ ಕವಿ ಸಂಭಾಷಣೆಯನ್ನು ತಮ್ಮ ಬದುಕಿನ ಒಂದು ಘಟನೆಯನ್ನು ಕಾವ್ಯ ರೂಪದಲ್ಲಿ ಹೆಣದ ಹದಗಾರಿಕೆ ನಯವಾಗಿ ಮೂಡಿಬಂದಿದೆ. ವಾಸ್ತವಿಕತೆಯನ್ನು ತೆರದಿಡುವ ಮೂಲಕ ಸಮಾಜ ಮುಖಿಯಾದ ಚಿಂತನೆ ಸಾರ್ವಕಾಲಿಕವಾದ ವಿಚಾರವನ್ನು ಅನುರಣಿಸಿದ್ದಾರೆ.ವಿಭಿನ್ನರಿತಿಯ ಕಾವ್ಯ ಪ್ರಯೋಗ ವಿಶಿಷ್ಟವಾದದು.
‘ಅದು ಜೇನುಗೂಡೆಂದು ಭಾವಿಸಿ
ಒಲುಮೆಯ ಮಾತನೊಂದು
ಹಂಚಿಕೊಳ್ಳಲು ಹೋದೆ
ಒಲುಮೆಯಲ್ಲ,ಪ್ರೀತಿಯಲ್ಲ ಬರಿ
ಬೆಂಕಿ ದ್ವೇಷದ ಜ್ವಾಲೆಯಂದು ತಿಳಿಯದೇ ಹೋದೆ!
(ತಿಳಿಯದೇ ಹೋದೆ)
ಈ ಸಂಕಲನದ ತಲೆಬರಹವಾದ “ತಿಳಿಯದೇ ಹೋದೆ” ಇಡಿ ಸಂಕಲನದೋಳಗಿನ ಕಾವ್ಯಕ್ಕಿಂತಲೂ ಒಂದಾಣೆ ತೂಕ ಹೆಚ್ಚಿದೆ ಅನ್ನೋದೆ ನನ್ನ ಅನಸಿಕೆ. ಈ ಕವನದುದ್ದಕ್ಕೂ ಕವಿ ಹೇಳುತ್ತಾನೆ: ಹೂವೆಂದು ನೋಡಿದೆ ಹಾವಾಗಿ ಕಂಡಿದ್ದು, ಜೇನೆಂದು ಸವಿಯಲು ಹೋದಾಗ ವಿಷವಾಗಿದ್ದು,ಒಲುಮೆಯಿಂದ ಮಾತಾಡಿದಾಗ ದ್ವೇಷದ ಜ್ವಾಲೆ ಉಕ್ಕಿದ್ದು,ಹುಡುಗರ ಮಾತೆಂದು ಬಣ್ಣಿಸಿದೆ ಅದು ತಂತ್ರಜ್ಞಾನದ ನೂತನ ಪ್ರತಿಮೆಯಾಗಿದ್ದು,ಪುರುಸೊತ್ತಿನಲ್ಲಿ ಹೇಳಿದ ವಿಚಾರ ನರಸತ್ತ ಮನುಷ್ಯನನ್ನು ಬಡಿದೆಬ್ಬಿಸಿದ ಆತ್ಮಘೋಷವಾಗಿದ್ದು ಇಲ್ಲಿಯ ಎಲ್ಲಾ ಸಾಲುಗಳನ್ನು ನೋಡಿದಾಗ ಕ್ಷಣ ಮೈ ಜುಮ್ಮೆನ್ನುವಂತಿದೆ. ಇದೇ ಕವಿಯ ವಾಸ್ತವತೆಯ ವಿರುದ್ಧ ಮನದ ತಳಮಳ ಎದ್ದು ಕಾಣುತ್ತದೆ. ವ್ಯವಸ್ಥೆಯ ವಿರುದ್ಧ ದನಿ ಎತ್ತಲಾರದೆ,ನೋಡಿಯು ನೋಡದಂತೆ ತಿಳಿಯದೇ ಹೋದೆ ಎನ್ನುವ ಕವಿಯ ಮನದ ಭಾವಗಳು ಇಲ್ಲಿ ದಾಖಲಾಗಿವೆ.
‘ತೊಟ್ಟಿಲಲಿ ಆಡುವ ಮುದ್ದು ಕಂದಮ್ಮ
ಹಡೆದವರ ಹೆಗಲಿಗೆ ಹೆಗಲಾಗಲು
ಏಸೊಂದು ಬಾವಿಯಲ್ಲಿ ಈಸಬೇಕು’
(ಯುಗದ ತಲ್ಲಣ)
ಜಗದಲಿ ಒಂದಡೆ ಒಳಿತು ನಡೆಯುವದರ ಹಿಂದೆನೆ ಕೆಡಕು ಮಾಡಲು ಬೆನ್ನಟ್ಟಿ ನಿಂತಾಗ ಇಲ್ಲಿ ಯಾವದು ಒಳಿತಾಗಲು ಸಾಧ್ಯವಿಲ್ಲ. ಈ ಯುಗದ ವರ್ತಮಾನದ ತಲ್ಲಣಕ್ಕಾಗಿ ಎಷ್ಟೊಂದು ಚರಮಗೀತೆ ಬರೆಯಬೇಕು ಎನ್ನುವ ಕವಿಯ ನೋವು ಇಲ್ಲಿ ಸೂಕ್ತವಾದ ಹೊಲಿಕೆಗಳ ಮೂಲಕ ವಿವರಿಸಿದ್ದಾರೆ.
‘ಬರೆಯಲಾಗದ ಕವಿತೆ
ಒಮ್ಮೊಮ್ಮೆ
ಬಣ್ಣಗಳಿದ್ದರೂ ಕಣ್ಣುಗಳಲಿ ಕುಂಚ ಅರಳದೆ ಹೋದಂತೆ. (ಬರೆಯಲಾಗದು ಕವಿತೆ ಒಮ್ಮೊಮ್ಮೆ)
ಕವಿ ವೇಣು ಜಾಲಿಬೆಂಚಿಯವರು ಕಾವ್ಯ ರಚನೆಯ ಕುರಿತು ಎರಡು ಕವಿತೆ ನಮ್ಮ ಮುಂದಿಟ್ಟಿದ್ದಾರೆ. ‘ಈ ಕವನ ಇದು ನನ್ನದೆನ್ನಲೆ’ ಹಾಗೂ ‘ಬರೆಯಲಾಗದ ಕವಿತೆ’ ಈಗಾಗಲೇ ನನ್ನ ಹುಟ್ಟಿಗಿಂತಲೂ ಮೊದಲು ಜನ್ಮತಾಳಿದ ಈ ಕವಿತೆಯನ್ನು ಅದ್ಹೇಗೆ ನನ್ನದೆನ್ನಲಿ ಎನ್ನುವ ಆತಂಕದೊಂದಿಗೆ ಕವಿತೆ ಬರೆಯುತ್ತ ಮತ್ತೆ ಒಮ್ಮೊಮ್ಮೆ ಬರೆಯಲಾಗದು ಕವಿತೆ ಎನ್ನುವ ಆಶಯ ಬೆರಗುಗೊಳಿಸುತ್ತದೆ. ಕವಿ ಇಲ್ಲಿ ವ್ಯವಸ್ಥೆಯ ಕುರಿತು,ವರ್ತಮಾನದ ಕುರಿತು ಏನೆಲ್ಲಾ ಬರೆದರು ಅದು ಸಮಾಜ ಸುಧಾರಣೆಯಾಗದೆ ಇದ್ದಾಗ ಕವಿ ಬೆಸರಸಿಕೊಳ್ಳುತ್ತ ಒಮ್ಮೊಮ್ಮೆ ಕವಿತೆ ಬರೆಯಲಾಗದು ಎನ್ನುವ ಮಾತು ಮಾರ್ಮಿಕವಾಗಿದೆ.
ಕವಿ ವೇಣು ಜಾಲಿಬೆಂಚಿಯವರು ಇನ್ನೂ ಅನೇಕ ಕವಿತೆಗಳ ಮೂಲಕ ಇಲ್ಲಿ ತಮ್ಮ ಮನದ ತಳಮಳವನ್ನು ಓದುಗರೊಂದಿಗೆ ಅನುಸಂಧಾನ ಮಾಡುತ್ತ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅವರಳೊಗೆ ಕವಿ ಹೃದಯ ಅವಿತಿದ್ದರಿಂದಲೆ ಇಷ್ಟೆಲ್ಲಾ ಭಾವಗಳು ಕಾವ್ಯದೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಿದೆ. ಹಾಗೆ ಕವಿಮಿತ್ರ ಜಾಲಿಬೆಂಚಿಯವರಿಂದ ಇನ್ನೂ ಅನೇಕ ಕೃತಿಗಳು ಬರೆಯಿಸಿಕೊಳ್ಳಲಿ. ಲೋಕದ ಮುಂದೆ ಅವು ತಮ್ಮ ನಿಲವು ಅನಾವರಣಗೊಳಿಸಲೆಂದು ನಾವೆಲ್ಲಾ ಶುಭ ಹಾರೈಸೋಣ.
-ಮಹಾದೇವ ಎಸ್, ಪಾಟೀಲ
ಪುಸ್ತಕ: ತಿಳಿಯದೇ ಹೋದೆ (ಕವನ ಸಂಕಲನ)
ಪ್ರಕಾಶಕರು: ನಿವೇದಿತಾ ಪ್ರಕಾಶನ
ಬೆಲೆ: Rs.70/-
ಸಂಪರ್ಕಿಸಿ: 9448733323