ತಿಳಿದೋ ತಿಳಿಯದೆಯೋ ಶರಣಾಗಿರುವೆ ಇಂದು ನಾನು ನಿನಗೆ: ಗಾಯತ್ರಿ ಭಟ್‌, ಶಿವಮೊಗ್ಗ

ನನ್ನೊಲವ ಪತ್ರ,

ಹೌದು ನನಗೆ ಗೊತ್ತು. ಪ್ರೇಮ ಪತ್ರ ಬರೆಯಬೇಕಿಲ್ಲವೆಂದು ನಮ್ಮ ಪ್ರೀತಿಗೆ.
ನಿನಗೂ ತಿಳಿದಿದೆ ನನ್ನ ಬಾಳ ಪಯಣದಲ್ಲಿ ನಿನ್ನ ನಾನು ಪ್ರೇಮಿಯಾಗಿ ಕಂಡೇ ಇಲ್ಲ. ತಿಳಿದಿಲ್ಲ ಅದು ಹೇಗೆ ಪ್ರೇಮಾಂಕುರವಾಗಿದೆ ಹಾಗೂ ಅಂದೆಂದಾಯಿತೆಂದು ? ಪ್ರೀತಿಯಿರುವುದಂತೂ ಸತ್ಯವೇ, ಅದಕ್ಕಾಗಿಯೇ ಮನದ ಲಹರಿಯನ್ನೆಲ್ಲಾ ಅಕ್ಷರಗಳಲ್ಲಿ ಬಿತ್ತಿಡುವ ಮನಸ್ಸಾಗಿದೆ ಯಾಕೋ ಇಂದು. ನನ್ನ ಮನದಂಗಳದ ಮಾತುಗಳನ್ನೆಲ್ಲಾ ನಿನ್ನ ಮನಸ್ಸೊಳಗೆ ಬಿತ್ತಿ ಅದಕ್ಕೊಂದು ಪ್ರೀತಿರೂಪಕ ಕೊಡುತ್ತಿರುವೆ. ಏನೆಂದು ಕರೆಯಲಿ ನಿನ್ನ ಗೆಳೆಯ, ಇನಿಯ ಇವೆಲ್ಲಾ ಯಾವುವೂ ಸರಿಹೊಂದುತ್ತಿಲ್ಲ. ಯಾರೂ ಇರದ ಮನಸ್ಸಲ್ಲಿ ಬಂದೆ ಹೇಗೆ ನೀ ಕ್ಷಣದಲ್ಲಿ ?! ತಿಳಿಯುತ್ತಲೆ ಇಲ್ಲ. ನನ್ನ ಮನ ದಿನಾ ದಿನಾ ನಿನ್ನೇ ಹುಡುಕುತ್ತಿದೆ ಯಾಕೆಂದು ನನಗೇ ತಿಳಿದಿಲ್ಲ ನೀ ನನಗೇನು ಎಂದು?. ಹುಡುಕುವಾಗ ಸಿಕ್ಕ ಸಂದೇಹಗಳಿಗೆ ಅಂತ್ಯನೀಡುತ್ತಿರುವೆ ಈ ಪತ್ರದೊಡನೆ.

ಹೇಗೆ ಸಿಕ್ಕಿದ್ದೇವೋ, ಯಾಕಾಗಿ ನಂಟಾಯಿತೋ. ಇಂದಿಗೂ ತಿಳಿದಿಲ್ಲ ನನಗೆ. ವಿಧಿಯಾಟವೇ ಇರಬೇಕು ವರುಷಗಳು ಜತೆಗಿದ್ದರೂ ತಿರುಗಿ ನೊಡದ ನಾನು, ನನ್ನ ಗಮನಿಸಿರದ ನೀನು ಕೊನೆಗೊಮ್ಮೆ ಜನ್ಮಗಳಿಗೆ ಜೊತೆಯಾಗುವಷ್ಟು ಹತ್ತಿರವಾಗುತ್ತೇವೆ ಎಂಬುದು ತಿಳಿದಿರದ ವಿಚಾರ. ನಂಟು ಗಟ್ಟಿಯಾಗುವುದೆಂಬ ಭಯದಲ್ಲೇ ನಮ್ಮ ಬಂಧ ಗಟ್ಟಿಯಾಗುತ್ತಲೇ ಇತ್ತು. ದಿನಗಳು ಉರುಳಿ ಮಾಸಗಳಾಗಿ ಕೊನೆಗೆ ವರುಷಗಳೇ ಆಗಿವೆ. ನನ್ನ ನಿನ್ನ ಬಂಧಕ್ಕೊಂದು ಚಂದದ ಶಿರ್ಷಿಕೆ ಇನ್ನೂ ಸಿಗಲಿಲ್ಲ. ನೀನೆಂದರೆ ನನಗೇನು ಎಂದು ಹೇಳಲೇ ಇಲ್ಲ ನಾನು. ಅಹುದು ನೀನು ಕೇಳಲೇ ಇಲ್ಲ.

ಇಂದು ಸಮಯ ಕೂಡಿಬಂದಿದೆ. ಕೇಳು. !

ಜಗದ ಎಲ್ಲಾ ಸುಖಗಳು ಒಂದೆಡೆಯಾದರೇ, ನೀ ಒಂದೆಡೆಯಿದ್ದರೆ, ನಿನ್ನನ್ನೇ ಆರಿಸಿಕೊಳ್ಳುವಷ್ಟು ನಿಷ್ಕಲ್ಮಶ ಗುಣ ನಿನ್ನದು. ನೀನು ಪ್ರತಿಯೊಬ್ಬರಿಗೂ ತೋರಿಸುವ ಪ್ರೀತಿ, ಅಪ್ಪ- ಅಮ್ಮನಿಗೆ ತೋರಿಸುವ ಶ್ರದ್ಧೆ, ನೀನು ಮಾತನಾಡುವ ರೀತಿ, ಪರರಿಗೆ ತೋರಿಸುವ ಕಾಳಜಿ, ಇವೆಲ್ಲವೇ ಇರಬೇಕು ನನ್ನನ್ನು ನಿನ್ನೆಡೆಗೆ ಪದೇ ಪದೇ ಎಳೆದದ್ದು. ನನ್ನೆಲ್ಲಾ ನೋವುಗಳಿಗೆ ನೀನೇ ನನ್ನ ಮಾನಸಿಕ ಶಕ್ತಿ. ಎಂತಹ ಬೇಸರದಲ್ಲೂ ನಿನೆಂದರೆ ನನಗೆ ಮರಳುಭೂಮಿಯಲ್ಲಿ ನೀರಿನ ಜಲಪಾತ ಕಂಡಂತಹ ಅನುಭವ. ಪ್ರೀತಿಯ ಪರಿಪೂರ್ಣತೆ ಇಲ್ಲೇ ಕಂಡಿತ್ತೇನೋ ನನಗೆ. ಕಾಣದ ಕಡಲಿಗೆ ಹಂಬಲಿಸಿದೇ ಮನಾ ಎಂಬಂತೆ ಮನವು ಸಿಗದ ದೂರದ ಪ್ರೀತಿ ಮಾಯೆಗೆ ಸಿಲುಕಿ ಹೋಗಿತ್ತು. ಪ್ರೀತಿ ನೀಡುವುದರಲ್ಲಿ ತಾಯಿಯಾಗಿ, ಸಲಹೆಯಲ್ಲಿ ತಂದೆಯಾಗಿ ನೀ ಪದೇ ಪದೇ ನನ್ನ ಕಾಡುತ್ತಲೇ ಇದ್ದೆ. ನೀನು ನನಗೇನೆಂದು ನಾ ಹುಡುಕುತ್ತಲೇ ಇದ್ದೆ. ಕಣ್ಣೇ ಕಾಣದ ಕುರುಡು ಲೋಕದಲ್ಲಿದ್ದಂತಿದ್ದೆ, ನಿನ್ನ ಒಲವ ಕಿರಣಗಳು ತಾಕಿದ್ದು, ನನ್ನ ಮುದ್ದಿಸಿದ್ದು ನನಗೆ ಗೊತ್ತೇ ಆಗಲಿಲ್ಲ. ಅಲ್ಲ, ನನಗೂ ಕಣ್ಣಿದೆ, ಬೆಳಕಾಗಿ ಬಂದ ಭಾವನೆಗಳನ್ನೆಲ್ಲಾ ಹಿಡಿದಿಡಬಹುದಾದ ಮನಸ್ಸಿದೆ ಎಂದು ತಿಳಿಸಿಕೊಟ್ಟದ್ದು ನೀನೆ. ಕೊನೆಗೆ ನೀನೇ ಆಗಿಬಿಡುವಷ್ಟು ನಿನ್ನವಳಾದ ಅನುಭವ. ನನ್ನತನವ ನಿನ್ನಲ್ಲಿ ಹುಡುಕುತ್ತಾ ಹೋದೆ. ನಮ್ಮಲ್ಲಿ ಹೆಚ್ಚಾಗಿ ಸಾಮ್ಯತೆಯಿಲ್ಲ ಆದರೆ ಭಿನ್ನತೆಯ ಗೌರವಿಸುವ ಗುಣವಿದೆ. ಅದೊಂದೇ ಸಾಕಲ್ಲವೆ ಭಿನ್ನಾಭಿಪ್ರಾಯ ತಪ್ಪಿಸಲು ? ಹಾಗೆಯೇ ಖುಷಿಯಾಗಿ ಇದ್ದು ಜಗತ್ತನ್ನೆಲ್ಲಾ ಒಪ್ಪಿಸಲು. !!!
ನಿನ್ನ ಪ್ರತಿ ಪಯಣಕ್ಕೂ ಜತೆಯಾಗಿ ನಿಲ್ಲುವ ಆಸೆಯಿದೆ ನನಗೆ.

ನಿನ್ನೆಲ್ಲಾ ಕನಸಿನಲ್ಲಿ ನನ್ನದೇ ಪಾಲಿರಬೇಕೆಂಬ ಅತಿ ಆಸೆಯೂ ಇದೆ.
ನಿನ್ನ ಸುಖದಲ್ಲಿ ಹಾಗೂ ದುಖಃದಲ್ಲೂ ನಾನು ನಿನ್ನೊಂದಿಗಿರಬೇಕೆನಿಸಿದೆ.
ಜಗದ ಸಂಕೋಲೆಗಳೆಲ್ಲಾ ಸರಳವಾಗಿ ಕಳಚುವ ನಂಬಿಕೆಯಿದೆ ನೀ ಜೊತೆಗಿದ್ದರೆ.
ನಿನ್ನವಳೇ ಆಗಿಬಿಡುವ ಆಸೆಯಿದೆ ನೀ ಒಪ್ಪಿಬಿಟ್ಟರೆ.
ಜಗದ ಸುಖ ದುಃಖಗಳಲ್ಲಿ ಜತೆಯಾಗಿರುವೆ, ಹೆಜ್ಜೆ ಹೆಜ್ಜೆಗೂ ನೆರಳಾಗಿರುವೆ,
ನೀನೊಬ್ಬನಿರಲು ಕಹಿ ಕ್ಷಣಗಳೆಲ್ಲಾ ಸಿಹಿಯೇ ನನಗೆ,
ಜಗತ್ತಿಗೆ ತೋರಿಸಬೇಕು ಇದ್ದರೆ ಹೀಗಿರಬೇಕು ಪ್ರೇಮಿಗಳೆಂದು,
ಬದುಕಿದರೆ ಹಾಗೆ ಬದುಕಬೇಕು ನಾವಿಬ್ಬರೇಂದೂ, ಎಂದೆಂದಿಗೂ.
ಪ್ರೀತಿ-ಪ್ರೇಮವೆಂದರೆ ಬೆಚ್ಚಿಬೀಳುವ ಅಮ್ಮ- ಅಪ್ಪಂದಿರೂ ಭಲೇ ಎನ್ನಬೇಕು. !!
ನಿದರ್ಶನದಂತಿರಬೇಕು ಪರರಿಗೆ. ನನಗೆ ಭರವಸೆಯಿದೆ. !
ಜತೆಯಾಗುವ ಕನಸೂ ಇದೆ. !

ನನ್ನ ಹೇಳದ ಎಷ್ಟೋ ಮಾತುಗಳು ಮನದಲ್ಲೇ ಉಳಿದವು. ನಾ ಹೇಳಿದ ಎಷ್ಟೋ ಮಾತುಗಳು ನಿನಗೆ ತಿಳಿಯದಾದವು. ಅರೆಬರೆ ಆಂಗ್ಲ ಕನ್ನಡದಲ್ಲಿ ವಾಟ್ಸಪ್ಪಿನಲ್ಲಿ ಗೀಚುವ ಮಾತುಗಳು, ಅರೆ ಅರ್ಥವಾದರೂ ಬೇಸರಿಸದೇ ನೀ ಕೊಡುವ ಸಂದೇಶಗಳು ನನ್ನ ಮನದಲ್ಲಿನ ಯಾವ ಭಾವನೆಗಳ ತಿಳಿಸಿವೆಯೋ ನಾ ಕಾಣೆ. ಅದಕ್ಕಾಗಿ ಇಂದು ಪತ್ರವೇ ಬರೆದಿರುವೆ. !!! ಅಚ್ಚಕನ್ನಡದಲ್ಲಿ ನನ್ನ ಸ್ವಚ್ಛ ಭಾವನೆಗಳ ಅತಿಯಾಗಿ ಅನಿಸಿದರೂ ಅಚ್ಚುಕಟ್ಟಾಗಿ ನಿನಗೆ ಭಿನ್ನವಿಸಿಕೊಳ್ವ ಆಸೆಯಾಗಿತ್ತು. ಮರೆಯದ ಭಾವನೆಗಳ ಅಪ್ಪಟ ಅಚ್ಚು ಮಾಡಿರುವೆ ನೀನು ನನ್ನ ಮನದೊಳಗೆ. ತಿಳಿದೋ ತಿಳಿಯದೆಯೋ ಶರಣಾಗಿರುವೆ ಇಂದು ನಾನು ನಿನಗೆ. ಜೊತೆಯಾಗಲು ಬಯಸುತ್ತಿರುವೆ ಕೊನೆಗೆ ಕೊನೆಯವರೆಗೆ.

ಭವದ ಬಂಧವನ್ನೆಲ್ಲಾ ಕಳಚಿ ದೂರ ಹೋಗಿಬಿಡುವಷ್ಟು ಬೇಸರದಲ್ಲೂ ನಿನ್ನೊಂದು ಕರೆ, ನಿನ್ನ ಒಂದು ಮಾತು, ಒಂದೇ ಒಂದು ನಗು ನನಗೆ ಚೈತನ್ಯ ನೀಡಬಲ್ಲುದು. ನೀನೆ ಜಗತ್ತಾಗಿಬಿಡುವಷ್ಟು ಒಲವು ಬಡಿಸಬಹುದು. ಅದಕ್ಕಾಗಿಯೇ ಈ ನಿವೇದನೆ. ನನ್ನಳಲ ಬೇಡಿಕೆ.

ಹುಡುಕಲಿ ಎಲ್ಲಿಂದ ಹೇಳು ನನ್ನ ನಾನು ? ನಾ ನಿನ್ನಲ್ಲೇ ಕಳೆದು ಹೋಗಿರುವಾಗ?
ಇರಲಿ ಹೇಗೆ ತನ್ನಷ್ಟಕ್ಕೇ. ? ಮನಸ್ಸು ನೀನೇ ಬೇಕು ಎನ್ನುತ್ತಿರುವುದು ಆಗಾಗ.
ಜೀವದ ಗೆಳೆಯನೆ ಜೀವನದ ಜೊತೆಗಾರ ಎಂದು ನನಗೆ ಅನಿಸಿರುವಾಗ.
ಒಮ್ಮೆ ಕೇಳಬೇಕಿದೆ ನಿನ್ನನುಭವ.
ನನ್ನ ನಿನ್ನ ಗೆಳೆತನದ ಭಾಂದವ್ಯವ.
ನಿನಗೂ ನನ್ನಂತೆ ಪ್ರೀತಿಯಾಗಿದ್ದರೇ,
ಮರೆಯದಂತೆ ಕಳುಹಿಸಿಬಿಡು ಇದಕ್ಕುತ್ತರವ.

ಇಂತೀ ನಿನ್ನವಳಾಗಬಯಸುವ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x