ಒಂದಷ್ಟು ವೈನ್ ಕುಡಿದು ಪಕ್ಕಾ ಕುಡುಕರ ಹಾಗೆ ಅಳಬೇಕು: ಪುನರ್ವಸು

ಮುಗಿಲೂರ ದೊರೆ ಮಗನಿಗೆ.

ಓಯ್ ಚಲ್ವಾ, ಹೇಗಿದೀಯಾ, ನಿನ್ನೆ ಬರ್ದಿದ್ದ ಪತ್ರ ಇಡೋಕೆ ಅಂತ ನಿನ್ ಮನೆಗೆ ಹೋದಾಗ, ನೀನು ನಮ್ಮೂರ ಸರಹದ್ದಿನಲ್ಲೆಲ್ಲೋ ಅದ್ಯಾವುದೋ ಕಿವುಡ ದೇವರ ಜಾತ್ರೆಯೊಳಗೆ, ಮೂಕ ಮೈಕಿಗೆ ದನಿಯಾಗಿ,

“ದೇವತೆ ನಿನ್ನ ನೋಡಲು ಪ್ರತಿ ಕ್ಷಣವೂ ಕಾಯುವೆನು,
ಅರೆ ಕ್ಷಣ ನೀ ಸಿಕ್ಕರೂ ನಾ ನಗುತಲೇ ಸಾಯುವೆನು.”

ಅಂತ ಹಾಡ್ತಿದ್ದೆ ನೋಡು, ಜೀವ ನಿನ್ನ ದನಿಯ ದಾರಿಯಗುಂಟ ಸುಳಿಯಾಗಿ ಹರಿದು ಹೋದಂಗಾಯ್ತು, ಆ ನಡುರಾತ್ರಿ ಹನ್ನೆರಡರಲ್ಲೂ ಅಷ್ಟೆಲ್ಲ ಜೀವದ ತುಣುಕಿನೊಳಗೆ ಸೇರಿದ ಗುಂಗೀ ಹುಳದ ಹಾಗೆ ಕಾಡ್ತೀಯಲ್ಲ, ಸಂಯಮದ ಮುಂತುದಿಯಂಥವನೆದುರು ಮಂಡಿಯೂರದೇ ಬೇರೆ ಯಾವ ದಾರಿಯೂ ಇಲ್ಲ ನನಗಂತೂ.

ನಿನ್ನ ಕೈಯ ಮಣಿಕಟ್ಟಿನ ಮೇಲೆ ಅದೆಷ್ಟೋ ಜನುಮಗಳಿಂದ ಜೊತೆಗಿದ್ದೀನಿ ಅನ್ನುವ ಹಾಗೆ ಬಿಗಿದಪ್ಪಿ ಕುಳಿತ ಕರೀದಾರದಿಂದ ಹಿಡಿದು, ನಿನ್ನ ಕುತ್ತಿಗೆ ಹಿಂದಿನ ಕಪ್ಪು ಮಚ್ಚೆ, ನಿನ್ನ ಹೃದಯವಿಲ್ಲದ ಫೋನು, ಮೂಕ ಮೈಕು, ನಿನ್ನ ಹಾಳಾದ ಆ್ಯಟ್ಟಿಟ್ಯೂಡು, ನಿನ್ನ ರೂಮಿನಲ್ಲಿರೋ ಹಳೇ ಕ್ಯಾಸೆಟ್ಟುಗಳು ಅವಶ್ಯಕತೆಗಿಂತಲೂ ಕಮ್ಮಿಯೇ ಮಾತಾಡುವ ನಿನ್ನ ಮೌನ, ಹೀಗೆ ನಿನ್ನದು ಅನ್ನೋ ಪ್ರತಿಯೊಂದರ ಮೇಲೂ ಒಂದಷ್ಟು ಲಕ್ಷ ಸಲ ಒಲವಾಗಿದೆ ನಂಗಂತೂ..

ಹೌದೂ, ಇವತ್ತು ಬೆಳಿಗ್ಗೆ ನಿನ್ನ ಅಂಗಿಯ ಬಟನ್ ಕಿತ್ತು ಹೋಗಿದ್ದಕ್ಕೆ ಕಿರುಚಾಡ್ತಿದ್ದಿಯಂತೆ, ಹೌದು ನಾನೇ ಕಿತ್ಕೊಂಡು ಬಂದಿರೋದು ಏನಿವಾಗ!!!!.

ಅದೇನಂದ್ರೆ ಗಿಜಿಗಿಜಿ ಅನೋವಷ್ಟು ಜನ ಸೇರಿದ ಗದ್ದಲದೊಳಗೆ ನಿನ್ನ ಒರಟು ಕೆನ್ನೆ ಮೇಲೆ ಮುತ್ತಿಡಬೇಕು, ನೀನು ನಿನ್ನ ಅಮ್ಮನ ಜೊತೆಗಿದ್ದಾಗ ನನ್ನ ಮದ್ವೆ ಯಾವಾಗಾಗ್ತೀಯ ಅಂತ ಕೇಳಿ ಕಾಡ್ಬೇಕು, ಸಿಕ್ಕಾಪಟ್ಟೆ ರಶ್ ಇರೋ ಬಸ್ಸಲ್ಲಿ ನಿನಗಿಂತ ಚೂರೇ ಚೂರು ದೂರದಲ್ಲಿ ನಿಂತು ನಿನ್ನ ಪ್ರೀತಿಸ್ತೀನಿ ಕಣೋ ಜಾಣ್ಮಲ್ಲ ಅಂತ ಇಡೀ ಜಗತ್ತಿಗೇ ಕೇಳುವ ಹಾಗೆ ಕಿರುಚಿ ಹೇಳ್ಬೇಕು, ನೀ ಹಾಡು ಹಾಡೋವಾಗ ನೇರ ನಿನ್ನೆದುರಿಗೇ ನಿಂತು ಕಣ್ಣೊಡೆದು ನಿನ್ನ ಸ್ವರ ತಪ್ಪುವ ಹಾಗೆ ಮಾಡ್ಬೇಕು, ಬೇಕು ಬೇಕಂತಲೇ ನನ್ನ ಹಣೆ ಮೇಲಿನ ಬಿಂದಿ ನಿನ್ನ ಶರ್ಟಿಗೆ ಅಂಟುವ ಹಾಗೆ ನಿನ್ನ ತಬ್ಕೊಂಡು ನಿನ್ನ ಅಮ್ಮನ ಕೈಯಿಂದ ನೀನು ಉಗಿಸಿಕೊಳ್ಳೋ ಹಾಗೆ ಮಾಡ್ಬೇಕು, ಸುಳ್ಳು ಸುಳ್ಳೇ ಜಗಳ ಮಾಡಿ ಒಂದಷ್ಟು ವೈನ್ ಕುಡಿದು ಪಕ್ಕಾ ಕುಡುಕರ ಹಾಗೆ ಅಳಬೇಕು, ಅದನ್ನ ನೋಡಿ ನೀನು ಹಣೆ ಚಚ್ಕೋಬೇಕು, ಹೀಗೇ ಇನ್ನೂ ಏನೇನೋ ಆಸೆಗಳು ಕಣೋ ಸುಂದ್ರಾ.

“ನಿನ್ನ ಕಂಡ ಮೇಲೆ ಕಣ್ಣು ಕುರುಡು ಆಗಿ ಹೋದರೂನೂ, ನಿನ್ನ ಕಣ್ಣ ಬೆಳಕಲ್ಲಿಯೇ ನಾ ನಡೆಯುವೆನೂ ಗೆಳತಿ ನಡೆಯುವೆನೂ, ನಿನ್ನ ಕಾಣದೇನೆ ನಾನು ಮಣ್ಣ ಸೇರಿ ಹೋದರೂನು ಮಣ್ಣ ಒಳಗೂ ನಿನ್ನ ನೆನಪಲೇ ಉಳಿಯುವೆನೂ ಗೆಳತಿ ಉಳಿಯುವೆನು,.. ಏನ್ಗೊತ್ತೇನೆ ಕೆಂಪೀ ನೀನು ಬರಿಯೋ ಪ್ರತೀ ಪತ್ರ ಓದೋದಕ್ಕೂ ಜೀವ ಅಂಗೈಯೊಳಗೆ ಹಿಡ್ಕೊಂಡು ಕಾಯ್ತಾ ಇರ್ತೀನಿ, ಒಂದೇ ಒಂದ್ಸಲ ಆ ನಿನ್ನ ಪತ್ರದೊಳಗಿರ್ತಾನಲ್ಲ ಆ ಮುಗಿಲೂರ ದೊರೆ ಮಗ ಅವ್ನು ನಾನೇ ಅಂತ ಒಂದೇ ಒಂದ್ಸಲ ಹೇಳೇ ಅಮೃತ ಶಿಲೆಯಂಥವಳೇ.

ಈ ಸಾಲುಗಳೊಳಗಿರೋ ಹುಡ್ಗಿ ನಾನೇ ತಾನೇ!!
ಹ್ಹಾಹ್ಹಾ ಇದೆಲ್ಲ ಇವಳಿಗೆ ಹೇಗೆ ಗೊತ್ತಾಯ್ತು ಅನ್ಕೋತಿದ್ದೀಯಾ??, ಪತ್ರ ಇಡೋಕೆ ಅಂತ ಹೋದ್ನಾ,, ನಿನ್ನ ರೂಮಿನ ಕನ್ನಡಿ ನನ್ನ ನೋಡಿ ನಗೋಕೆ ಶುರು ಮಾಡ್ತು ಯಾಕೆ ಸುಂದ್ರೀ ಅಂತ ಕೇಳಿದ್ಕೆ, “ನೀನು ಯಾರು ಅಂತನೇ ಗೊತ್ತಿಲ್ಲದವನನ್ನ ಇಷ್ಟೆಲ್ಲ ಪ್ರೀತಿಸ್ತೀಯಲ್ಲ ಅದ್ಹೇಗೆ?!.ಅಂತ ಕೇಳ್ತು, ಅದ್ಕೆ ನಾನೂ ಜೋರಾಗಿ ನಕ್ಕು ನಂಗೂ ಗೊತ್ತಿಲ್ಲ ಅಂದೆ.

ನಿಂಗೊತ್ತೇನೋ ಚಲ್ವಾ, ಆ ಕನ್ನಡಿಗೆ ನಿನ್ಮೇಲೆ ಬೆಟ್ಟದಷ್ಟು ಒಲವಿದ್ಯಂತೆ,ಹೇ ನಾ ಬೇಡ ಅನ್ನೊಲ್ಲಪ್ಪಾ ನಿನ್ನಿಷ್ಟ..
ಹಾಗೇ ಪತ್ರ ಇಡೋಕೆ ಅಂತ ನಿನ್ ಕಬೋರ್ಡ್ ಓಪನ್ ಮಾಡಿದವಳಿಗೆ ನೀನು ಬರ್ದಿದ್ದ ಡೈರಿ ಈ ಸಾಲುಗಳ ಜೊತೆಗೆ, ನಾ ಕನ್ನಡಿಯ ಮೂತಿಗೆ ಅಂಟಿಸಿದ್ದ ಬಿಂದಿ, ಸಂತೇಲಿ ಕಳೆದು ಹೋಗಿದ್ದ ಒಂಟಿ ಗೆಜ್ಜೆ, ನಾ ಅವತ್ತು ಜಾತ್ರೇಲಿ ನಿನ್ನ ಕೈಗೆ ತುರುಕಿದ್ದ ಫೋನ್ ನಂಬರ್ರಿನ ಚೀಟಿ, ಅವತ್ತು ನಾನು ಆಸೆಯಿಂದ ನೋಡ್ತಾ ನಿಂತಿದ್ದ ಝುಮುಕಿ, ಹೇರ್‌ಪಿನ್ನು, ನನ್ ಬರ್ಥ್‌ಡೇ ಗೆ ಅಣ್ಣ ಕೊಡಿಸಿದ್ದ ಬಿಳೀ ಮುತ್ತಿನ ಸರ, ನಾನು ಪ್ರೀತಿಯಿಂದ ಸಾಕಿಕೊಂಡಿದ್ದ ನವಿಲುಗರಿ ಎಲ್ಲ ಸಿಕ್ತು, ನಾನೊಬ್ಬಳೇ ಇಂಥದ್ದೆಲ್ಲ ಕದೀತೀನಿ ಅನ್ಕೊಂಡಿದ್ದೆ ನೀನೂ ಕದಿತೀಯಲ್ಲ ಸಕ್ಕತ್ ಇಷ್ಟ ಆಯ್ತು..

ಹಾಗೇ ಬರೋವಾಗ ನಿನ್ನ ಅಂಗಿಯದೊಂದು ಬಟನ್, ಗೋಡೆ ಮೇಲಿದ್ದ ನಿಂದೊಂದು ಹಳೇ ಫೋಟೋದ ಜೊತೆಗೆ ನಿನ್ನ ಡೈರಿಯೊಳಗೆ ನೀನು ಬರೆದಿದ್ದ ನಮ್ಮಿಬ್ಬರ ಹೆಸರಿನ ಹಾಳೆಯನ್ನೂ ಕದ್ಕೊಂಡು ಬಂದಿದ್ದೀನಿ,.
ಈಗ ವಿಚಾರಕ್ಕೆ ಬರ್ತೀನಿ, ನೀ ಎಷ್ಟೇ ತಿಪ್ಪರ್‌ಲಾಗ ಹಾಕಿದ್ರೂ ನಿಮ್ಮನೆ ತುಳಸಿಕಟ್ಟೆಗೆ ಪೂಜೆ ಮಾಡೋ ಗಂಡುಬೀರಿ ಹೆಣ್ಣು ನಾನೇ, ಇನ್ನಾದ್ರೂ ಕಂಡ ಕಂಡ ಜೋಯಿಸರ ಮನೆ ಅಲಿಯೋದು ಬಿಡು ಅಂತೇಳು ನಿಮ್ ಅಮ್ಮಂಗೆ.

ಇನ್ನಾದರೂ ನಾ ದುಷ್ಟ ಕಣೇ ದೆವತೆಯೇ ಅನ್ನೋ ಡೈಲಾಗ್ ಹೊಡಿಯೋದು ಬಿಟ್ಟು ನನ್ನೆದುರಿಗೆ ಬಾ, ನಿನ್ನ ದೈವತ್ವ, ದುಷ್ಟತನ, ತುಂಟತನ, ನೇರವಂತಿಕೆ, ಪ್ರತಿಯೊಂದೂ ಸಮ್ಮತವೇ ನನಗೆ..


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x