ನನ್ನ ನೆಚ್ಚಿನ, ನಲ್ಮೆಯ, ಪ್ರೀತಿಯ ಮುದ್ದು ಮಖದ ಗೆಳತಿ. ಸದಾ ನಗುತ್ತಲೇ ಇರುವ ಸುಮದೇವತೆ. ಹೇಗಿದ್ದೀಯಾ? . ನಿನ್ನನ್ನು ನಿತ್ಯವೂ ನನ್ನ ಮನದ ದೇಗುಲದಲ್ಲಿ ಪ್ರೇಮದಭಿಷೇಕ ಮಾಡಿ ಪೂಜಿಸುತ್ತ, ನಾನು ಪ್ರೇಮಭಕ್ತನೇ ಆಗಿಬಿಟ್ಟಿದ್ದೇನೆ. ಸದ್ದಿಲ್ಲದೇ ಶುರುವಾದ ಈ ಪ್ರೇಮಕ್ಕೆ ನೀನೇ ಸ್ಪೂರ್ತಿ. ಅದಕ್ಕೆ ಅನುರಾಗದ ಜೇನು ಹರಿಸಿ ಪೋಷಿಸಿ ಗಗನದಷ್ಟು ಪ್ರೇಮವನ್ನು ಬೆಳೆಸೆದವಳು ನೀನು. ಅದ್ಹೇಗೆ ನಿನ್ನನ್ನು ಮೋಹಿಸಿದೆನೋ ನಂಗೇ ಗೊತ್ತಿಲ್ಲ. ಮುದ್ದು, ನಿನ್ನ ಅಂದಕ್ಕೆ ಮರುಳಾಗಿ ನಿನ್ನ ಹಿಂದೆ ಬಿದ್ದು; ಪ್ರೇಮಿಸಿರುವುದು ಎಷ್ಟು ಸತ್ಯವೋ, ನಿನ್ನ ಹೃದಯದ ಸೊಬಗಿಗೆ ಸೋತಿರುವೆನೆಂಬುದೂ ಅಷ್ಟೇ ಸತ್ಯ . ಅದು ನಿಂಗೆ ಗೊತ್ತಿಲ್ಲವೆಂದೇನಲ್ಲ. ಮುದ್ದೂ. ನಿನ್ನ ಪ್ರೇಮದಪ್ಪುಗೆಯ ನಿರೀಕ್ಷೆಯಲ್ಲಿ, ನಾ ಕಾದಿರುವ ಈ ದಿನಗಳೆಲ್ಲ ಕತ್ತಲ ರಾತ್ರಿಗಳಂತಾದರೂ. ನಿನ್ನ ಪ್ರೇಮದ ಹಪಿಹಪಿ, ಈ ಕಾರ್ಗತ್ತಲನ್ನೂ ಮಧುರವಾಗಿಸಿವೆ. ನೀನೆಂದರೆ ಹಾಗೇ ನೋಡು. ಕತ್ತಲಲ್ಲೂ ಬೆಳದಿಂಗಳ ಅನುಭವ ನೀಡುವ ನಿನ್ನ ನೆನಪೇ ಪ್ರೇಮಮಯವಾಗಿದೆಯಾದರೆ ನಿನ್ನ ಸಾಂಗತ್ಯ ನೀಡಿದ ಹಿತಕ್ಕೆ ಇದ್ಯಾವುದೂ ಸಮವಲ್ಲ. ಏ ಬಂಗಾರಿ. ಆ ದಿನ, ಮೊದಲ ದಿನ, ನಮ್ಮ ನೋಟ ಮೊದಲ ಬಾರಿ ಸಂಧಿಸಿದಾಗ, ಕಣ್ಣಂಚಲಿ ನೀ ಬಿಟ್ಟ ಹೂ ಬಾಣ ನನ್ನೆದೆಯಲ್ಲಿ ಪ್ರೇಮದ ಹೂ ಮಳೆಯನ್ನೇ ಸುರಿಸಿಬಿಟ್ಟಿತ್ತು. ಆ ಕ್ಷಣವೇ ನಾ ತನ್ಮಯನಾಗಿ ಪುಳಕಿತಗೊಂಡು, ಒಂದಿಷ್ಟೂ ಚಂಚಲನಾಗದೆ ಆ ಪ್ರೇಮದ ಸುರಿಗೆಯನ್ನು ಆಸ್ವಾದಿಸಿದ್ದೇನೆ. ಇವತ್ತಿಗೂ ಅದನ್ನು ಸವಿಯುತ್ತಲೇ ಇದ್ದೇನೆ. ಮುದ್ದು.
ನಾ ನಿನ್ನ ಪ್ರೇಮವನ್ನು ಸವಿಯುವ ಹಂಬಲಿಗ ಮಾತ್ರ. ನನ್ನ ಪ್ರೇಮದ ದೋಣಿಯಲ್ಲಿ ನಿನ್ನನ್ನು ಬದುಕಿನುದ್ದಕ್ಕೂ ಹೊತ್ತು ಹೋಗುವ ಅಂಬಿಗ. ಅಂದು ನನ್ನ ಪ್ರೇಮ ನಿವೇದನೆಯನ್ನು ಒಪ್ಪಿ ಕೈ ಕುಲುಕಿ ನಕ್ಕಾಗ ಆ ಸ್ಪರ್ಶದ ಸೊಬಗನ್ನು ಮನದುಂಬಿಸಿಕೊಂಡು ನಿನ್ನಲ್ಲೆ ಕಳೆದುಹೋಗಿದ್ದೆ. ‘ಐ ಲವ್ ಯು ಟೂ ಕಣೋ’ ಎಂದು ನೀ ನಕ್ಕಾಗ ಹೊರಹೊಕ್ಕ ಆ ತುಟಿಯ ರೇಖಾಚಿತ್ರದಿ ಮಿಂದು ಮನಸಲ್ಲಿ ನಿನ್ನ ಬಿಂಬವನ್ನು ಮೂಡಿಸಿಕೊಂಡು ಮುದ್ದುಮಾಡಿದ್ದೆ. ಮುದ್ದು ಮುಖದ ಮಧುವಂತಿಯೇ ಮಧುಕರಕ್ಕಿಂತಲೂ ಸವಿಯಾದ ನಿನ್ನ ಪ್ರೇಮವನ್ನು ಪಡೆಯಲು ನಾನು ಇಂದಿಗೂ ಹೊಸತರಂತೆ ಪ್ರೇಮವನ್ನು ಯಾಚಿಸುತ್ತಲೇ ಇದ್ದೇನೆ, ನೀ ಪ್ರೇಮದೊಪ್ಪುಗೆಯನ್ನು, ಅಪ್ಪುಗೆಯೊಂದಿಗೆ ನೀಡುತ್ತಲೇ ಇರುವೆ. ಎಷ್ಟು ಮಧುರ ಅಲ್ವಾ ನಮ್ಮ ಪ್ರೇಮ. ಅಮರ ಕಣೇ ಅಮರ. ಅಷ್ಟೇ ಅಲ್ಲ. ನನ್ನ ಕಣಕಣದೊಳಗೂ ಪ್ರೇಮ ಕಾವ್ಯದ ಕಾರಂಜಿಯನ್ನು ಉಕ್ಕಿಸಿದ ಪ್ರೇಮ ಚಿಲುಮೆ ನೀನು. ಅನುಗಾಲವೂ ಒಲವಿನ ಆರೈಕೆಯಲ್ಲಿ ನೀ ತೋರಿದ ಮಮತೆಯನ್ನು ನಿನ್ನ ಸಹವಾಸದಲ್ಲಿ ಅನುಭವಿಸಿದ ಪ್ರೇಮದ ದಾಸ ಕಣೇ ನಾನು. ನೀನೆಂದರೆ ನನ್ನ ಹೃದಯದ ರಂಗು ಚಿತ್ತಾರವಾಗಿಬಿಡುತ್ತದೆ ಗೆಳತಿ . ಸಂತೋಷವೆನ್ನುವ ಮಾಣಿಕ್ಯವನ್ನು ನನ್ನೆದೆಗೆ ನೂಕಿದ ನಿರಾಭರಣ ಸುಂದರಿ ನೀನು. ನಿನ್ನ ಗುಂಗಲ್ಲೇ ಕಳೆದ ಆ ದಿನಗಳು ನನಗೆ ಗಂಧಮಯವಾಗಿವೆ. ಅದರ ಕಂಪನ್ನು ಇಂದಿಗೂ ಮತ್ತು ಈ ಜೀವನದುದ್ದಕ್ಕೂ ನಾನು ಆಘ್ರಾಣಿಸುತ್ತಲೇ ಇರುತ್ತೇನೆ.
ನನ್ನ ಒಂದೊಂದು ಹೆಜ್ಜೆಯಲ್ಲೂ ನಿನ್ನ ಪ್ರತಿ ಹೆಜ್ಜೆಗಳು ಜೊತೆಯಾದದ್ದು ನನಗೆ ವಸಂತವೇ ಸರಿ. ಪ್ರತಿ ದಿನವೂ ಪ್ರೇಮದ ಚಿಗುರು ಹೊಸದಾಗಿಯೇ ಮೂಡುತ್ತಿದೆ. ನಿನ್ನ ಅಷ್ಟೂ ಪ್ರೇಮದ ಸವಿ ಉಂಡ ನಾನೇ ಸುಖಿ ಅಲ್ವಾ ಮುದ್ದು. ಅದೃಷ್ಟವಂತನೂ ಕೂಡ. ಎಲ್ಲ ಸೀಮೆಗಳನ್ನು ಮೀರಿ ಒಂದಾಗಿದ್ದ ನಮಗೆ ಪ್ರೀತಿಯೇ ಒಂದು ಸೀಮಾರೇಖೆ ಆಯ್ತು. ನಿನ್ನ ಪ್ರೀತಿಯ ಅಮಲೇ ಅಮೃತಮಯವಾಗಿ ಅದರೊಳಗೆ ನಾವಿಬ್ಬರೂ ಮಿಂದೆದ್ದದ್ದು ನೆನಪಿದೆಯೇ?. ಅದನ್ನು ಸವಿದ ಪ್ರತಿ ಕ್ಷಣಗಳಲ್ಲೂ ನನ್ನ ಹೃದಯ ಪ್ರೇಮಾನುರಾಗವನ್ನು ಹಾಡಿದ್ದು ನಿನ್ನ ಎದೆಯಲ್ಲಿ ಶಾಶ್ವತ ದಾಖಲೆಯಾಗಿ ಉಳಿಯುತ್ತದಲ್ವಾ.? ನನ್ನ ಒಲವಿನ ಕೋರಿಕೆಯನ್ನು ಹೊರಹಾಕಲು ಅಂದು ನನ್ನ ಮನಸೇ ಓಲೈಸಿದ್ದರ ಫಲ ಇಂದು ನಿನ್ನ ಮಡಿಲಲ್ಲಿ ನನ್ನದೇ ರೂಪ ನಗುತ್ತಿದೆ. ಅದರ ಆರೈಕೆಯಲ್ಲಿ, ತವರಿನ ಸಿರಿಯಲ್ಲಿ ನನ್ನ ಮರೆತು ಬಿಟ್ಟೀಯಾ ಹೇಗೆ.!? ನಿನ್ನದೇ ನೆನಪಲ್ಲಿ ನಾ ನಿತ್ಯ ಕಳೆದು ಹೋಗುತ್ತಿದ್ದೇನೆ, ಬೇಗ ಬಂದು ಬಿಡೇ ಬಂಗಾರಿ. ನಾವಿಬ್ಬರೂ ಒಂದಾದ ಮೇಲೆ ಇದೇನು ನಿಮ್ಮ ತುಂಟಾಟ. ಇದೇನು ಪ್ರೇಮ ಪತ್ರ ಬರೆದಿರುವಿರಿ !?ಅಂತೀಯಾ. ಇದೇ ನನ್ನ ನಿಜವಾದ ಪ್ರೀತಿ ಮುದ್ದು. ನೀ ಜೊತೆಯಿದ್ದಾಗ ಅನುಭವಿಸಿದ ಎಲ್ಲ ಮಧುರ ಕ್ಷಣಗಳು ನನ್ನ ಸ್ಮೃತಿ ಪಟಲದಲ್ಲಿ ಸುಖ ನೀಡುತ್ತಲೇ ಇವೆ. ಎಲ್ಲವೂ ದಕ್ಕಿದ ಮೇಲೆ ಇದು ಎಂತದ್ದು? ಎಂದು ಸುಮ್ಮನಾದರೆ ನೀ ಕೊಟ್ಟ ಪ್ರೀತಿಗೆ ಅವಮಾನಿಸಿದಂತಾಗುತ್ತದೆ. ನಾವು ಕಳೆದ ಅನುಭವಿಸಿದ ಪ್ರೇಮ ಸಲ್ಲಾಪಗಳನ್ನು ವ್ಯಕ್ತಪಡಿಸುವ ಒಂದು ಮಾರ್ಗವೇ ಈ ಪ್ರೇಮ ಪತ್ರ. ಇದು ಯಾವತ್ತಿಗೂ ನಮ್ಮ ಬಂಧನವನ್ನು ಗಟ್ಟಿಗೊಳಿಸುತ್ತಲೇ ಇರುತ್ತದೆ.
ಪ್ರೇಮ ಪತ್ರ, ಪ್ರೇಮ ಯಾಚಿಸುವಾಗ ಮಾತ್ರವೇ ಇರೋದಾ. ಅಲ್ಲ. ಮಧುರ ಭಾವನೆಗಳು ಉಕ್ಕಿ ಬರುವಾಗ ಅವುಗಳನ್ನು ವ್ಯಕ್ತಪಡಿಸುವುದರಲ್ಲಿ ಇರುವ ಮಾದಕತೆ ಮತ್ತೆಲ್ಲೂ ಇಲ್ಲ. ಮುದ್ದು ನನಗುಳಿದದ್ದು ಈ ಕ್ಷಣಗಳಲ್ಲಿ ಆ ನೆನಪುಗಳು ಅಷ್ಟೇ ಅಲ್ವಾ. ನೀ ಬಿಟ್ಟು ಹೋದ ಅಷ್ಟೂ ಪ್ರೇಮದ ಭಾವನೆಗಳೇ ಅಲ್ವಾ ಇಂದು ನನ್ನನ್ನು ಜೀವಂತವಾಗಿರಿಸಿರುವುದು. ನಿನ್ನ ಜೊತೆ ಕಳೆದ ಆ ಮಧುರ, ಮಾಧುರ್ಯದ ಘಳಿಗೆಗಳೇ ಇಂದು ನನ್ನನ್ನುಳಿಸುವ ಗುಳಿಗೆಗಳಾಗಿವೆ. ಅಂದು ನೀ ನನ್ನ ಹೃದಯದಲ್ಲಿ ಹಾರಿಸಿದ ಒಲವಿನ ಚಿಟ್ಟೆ ಅನುದಿನವೂ ನನ್ನ ಮನಸಲ್ಲಿ ಚಿತ್ತಾರವನ್ನು ಪ್ರದರ್ಶಿಸುತ್ತಲೇ ಇದೆ. ಆ ಒಂದು ಪ್ರದರ್ಶನವನ್ನೇ ನೋಡಲು ನಾನು ಬದುಕುದ್ದೇನೆ. ಬದುಕಿರುತ್ತೇನೆ. ನಮ್ಮ ಪ್ರೇಮ ಸಲ್ಲಾಪ ನೋಡಿದ ಈ ಶಯನಾಲಯದ ಗೋಡೆಗಳು ಈಗ ನನ್ನ ಒಂಟಿತನವನ್ನು ನೋಡಿ ನೋಡಿ ಮಾಸಿ ಹೋಗಿವೆ. ನಿನ್ನ ಸ್ಪರ್ಷವಿಲ್ಲದೇ ಮನೆಯ, ಮನದ ಚೆಂಗುಲಾಬಿ ಬಾಡುತ್ತಿದೆ. ನಿನ್ನ ನೋಟದಿಂದ ವಂಚಿತವಾದ ತೋರಣಗಳೇಕೋ ಒಣಗುತ್ತಿವೆ. ಹೊಸತನವನ್ನು ಹುಟ್ಟಿಸಿಬಿಡೇ ಚಿನ್ನ. ನನ್ನ ಕರುಳ ಬಳ್ಳಿಯ ಆಗಮನ ಎಷ್ಟು ಹಿತವಾಗಿದೆಯೋ, ನಿನ್ನ ಬಿಟ್ಟಿರಲಾಗದ ಈ ಸಮಯ ಸಹಿಸಲಾಗದ ಕೊರಗಾಗಿದೆ
ಗೆಳತಿ. ಅಷ್ಟೆ ಅಲ್ಲ ನಾನೀಗ ಪ್ರೇಮ ರೋಗಿ ಆಗಿದ್ದೇನೆ. ಔಷಧೋಪಚಾರ ಮಾಡುವ ಪ್ರೇಮ ವೈದ್ಯೆ ನೀನು. ಬೇಗ ಬಂದು ಆ ನಿನ್ನ ತುಟಿ ಅಂಚಿನ ಒಂದು ಹನಿ ನನಗೆ ತಾಕಿಸಿಬಿಡು ಸಾಕು. ನಾ ಸಂಪೂರ್ಣ ಶರಣಾಗಿಬಿಡುತ್ತೇನೆ. ನಿನ್ನ ನೆನಪೇ ನನಗೆ ಜಾತ್ರೆಯಾಗಿದೆ, ಹೃದಯದ ಮೆರವಣಿಗೆ ಆಗಿದೆ. . ನನ್ನ ಈ ಒಲವಿನ ದಿಬ್ಬಣ ನೀನಿರುವಲ್ಲಿಯೂ ಬಂದು ಗರಿಬಿಚ್ಚಬಹುದು. ಆಗ ನನ್ನ ಬಿಟ್ಟಿರಲಾಗದೆ ಬೇಗನೆ ಓಡೋಡಿ ಬರುತ್ತೀ ಅಲ್ವಾ. ನಿನ್ನ ಪ್ರೀತಿಯ ಇನಿಯನನ್ನು ಸೇರ್ತೀ ಅಲ್ವಾ. ಕಾಯ್ತಾ ಇರ್ತೀನಿ ಮುದ್ದು ಮಡದಿಯೇ. ಲವ್ ಯು. ಲವ್ ಯು ಲಾಟ್.
–ವರದೇಂದ್ರ ಕೆ.