ಮುಸ್ಸಂಜೆಯ ಪ್ರೇಮ ಪ್ರಸಂಗ…: ಅಭಿಷೇಕ್ ಎಂ. ವಿ.

ಪ್ರೀತಿಯ ಮುಸ್ಸಂಜೆಯ ಒಡಲಾಳದ ಗೆಳತಿ ಮಧುರ,

ನಿನ್ನ ಶ್ರಾವಣ ತಂಗಾಳಿಯ ನಗು, ನನ್ನ ವಸಂತ ಋತುವಿನ ಹೃದಯದ ಚಿಗುರಿನಲ್ಲಿ ಮುದುಡದೆ ಇಂದಿಗೂ ಹಸಿರಾಗಿದೆ. ಗೆಳತಿ ಎಂದಿದ್ದಕ್ಕೆ ಕ್ಷಮೆ ಇರಲಿ. ಅಂದು ನಾನು ಮೌನಿಯಾಗಿದ್ದೆ. ವರ್ಷಗಳು ಉರುಳಿದ ಮೇಲೆ ಮೌನದ ಬಯಲಿಂದ ಹೊರಬಂದು ಈ ಪತ್ರ ಬರೆಯುತ್ತಿದ್ದೇನೆ. ನೀ ಇರುವ ವಿಳಾಸವನ್ನು ನಿನ್ನ ಸ್ನೇಹಿತೆಯಾದ ಪ್ರಿಯಾಳ ಬಳಿ ಪಡೆದೆ. ಅವಳೂ ನಿನ್ನ ಜೊತೆಯಲ್ಲೇ ಕೆಲಸ ಮಾಡುತ್ತಿರುವ ವಿಷಯ ತಿಳಿಯಿತು. ಮೊನ್ನೆ ಊರಿಗೆ ಬಂದ್ದಿದ್ದಳು.

ಹೇಗಿದ್ದೀಯ? ಮನಸಿನ ಅಂತರಾಳದ ಇತಿಹಾಸ ಪುಟಗಳಲ್ಲಿ ನಲ್ಮೆಯ ಪ್ರೀತಿ ದಾಖಲಾಗಿ ಇಂದಿಗೆ ೧೨ ವರ್ಷವಾಯಿತು. ಸಮುದ್ರದ ಅಲೆಗಳ ನರ್ತನದ ಖುಷಿಯಲ್ಲಿ ಬೆರೆತು, ಹಕ್ಕಿಯ ಕಲರವವ ಆಲಿಸಿ, ಪ್ರೀತಿಯ ಸಂತೈಸಿ, ಮನಸುಗಳ ಒಡಲಲ್ಲಿ ನವ ಚಿಗುರಿನ ಒಡನಾಡಿಯಾಗಿದ್ದೆ ನೀ ನನ್ನ ಬದುಕಲ್ಲಿ ಇದ್ದ ಪ್ರತಿ ಕ್ಷಣವು. ಎಲ್ಲವೂ ಆಶ್ಚರ್ಯವಾಗಿ, ಅಮೋಘವಾಗಿ ಕಾಣುತ್ತಿತ್ತು. ಬದುಕು ವಿಸ್ಮಯದ ಸಂತೆ, ಕೊಂಡುಕೊಳ್ಳಲು ಪ್ರೇಮ ಸಂತರು ಬರಬೇಕು ಎಂಬ ಸಾಲುಗಳಲ್ಲಿ ನಾ ಬೆರೆತು, ಕಾಮನಬಿಲ್ಲನ್ನು ಮಾರಾಟಕ್ಕಿಟ್ಟಿದ್ದರೇ ಮೊದಲು ಕೊಂಡು ನಿನ್ನ ಮುಡಿಗೆ ಮುಡಿಸಿ ಆನಂದಿಸುವ ಬಯಕೆಯಿತ್ತು.

ಮೋಜಿಗಾಗಿ ಪ್ರೀತಿಸಲಿಲ್ಲ. ನಿನ್ನ ಹೊತ್ತು ಮೆರೆಸಲು ಸನಿಹ ಬಂದೆ. ಕಂಡ ಕನಸುಗಳೆಲ್ಲವೂ ಆಸೆಗಳ ರೂಪು ಪಡೆದು ನಂತರ ವಿಫಲವಾಗಿ, ಎಂದೂ ಮರಳದ ಊರಿಗೆ ಹೋಗಿವೆ. ಚಂದ್ರನ ಮೈಮೇಲೆ ಕವಿತೆ ಬರೆದು ನೀ ಇರುವ ಊರಿಗೆ ಕಳಿಸುವ ಹುಚ್ಚು ಆಸೆಯಿತ್ತು. ನಿನ್ನ ವಿಳಾಸವಿಲ್ಲವೆಂಬ ಕುಂಟು ನೆಪವೂ ಇತ್ತು. ಅಷ್ಟರಲ್ಲಿ ಎಲ್ಲವೂ ಮುಗಿದಿತ್ತು ಗೆಳತಿ. ಹೊರನೋಟ, ಒಳನೋಟ, ಬಂಧನ, ಬೆಸುಗೆ. ಅಲೆಗಳನ್ನು ದಾಟಿ, ಸಮುದ್ರದ ಹೃದಯ ಭಾಗದಲ್ಲಿ ದ್ವೀಪವಾಗಿ ಒಬ್ಬನೇ ನಿಂತುಬಿಟ್ಟೆ ನಾನು, ನೀ ತೊರೆದ ಗಳಿಗೆಯ ಬಳಿಕ. ಒಂಟಿತನ, ಮೌನ ಈಗ ನನ್ನ ಗೆಳತಿಯರು. ಅದು ನೀ ನನಗೆ ಕೊಟ್ಟ ಉಡುಗೊರೆ.

ಬಯಲಿನಾಚೆಗಿನ ಸೌಂದರ್ಯ ನಿನ್ನ ಬಳಿಯೇ ಸವಿದಾಯಿತು. ನೊಂದ ಹೃದಯ ನೋವಿನ ಸಂತೃಪ್ತಿಯಿಂದ ತುಂಬಿ ತುಳುಕುತಿದೆ. ಸಾಯುವ ಕೊನೆ ಕ್ಷಣದವರೆಗೂ ಪ್ರೀತಿಸುವೆ ಎಂಬ ನಿನ್ನ ಸುಮಧುರ ಸಾಲುಗಳು ನನ್ನ ಜೀವನದ ಎಂದೂ ಮರೆಯದ ಹಾಡುಗಳು. ನನ್ನ ಬದುಕಿನ ಒಳ ಅರ್ಥವನ್ನು ನಿನ್ನ ಹೊಳೆವ ಕಣ್ಣುಗಳಲ್ಲಿ ನೋಡ ಬಯಸಿದೆ. ಆ ನೋಟದ ಪ್ರತಿ ಕ್ಷಣಗಳಲ್ಲೂ ಹೊಸ ಜನ್ಮ ಪಡೆದ ಆನಂದ, ತೊದಲಿನ ಆಲಾಪವಿತ್ತು ನನ್ನಲ್ಲಿ.

ಬಯಸಿದ್ದೆಲ್ಲವನ್ನೂ ಪಡೆಯುವ ಹುಮ್ಮಸ್ಸು ಈಗ ಬರಿದಾಗಿದೆ. ಪ್ರತಿ ಸಂಜೆಯ ಹೊತ್ತು ರವಿ ಮುಳುಗುವ ಸಮಯದ ನಮ್ಮಿಬ್ಬರ ಭೇಟಿ ಈಗಲೂ ನೆನಪಿದೆ. ಬೆಳಕು ಇರುಳನ್ನು ಆಹ್ವಾನಿಸುವ ಹೊತ್ತು, ಸಾಗರ ತನ್ನ ಬೋರ್ಗರೆತವ ಕ್ಷಣಕಾಲ ನಿಲ್ಲಿಸಿ ಮತ್ತೇ ತನ್ನ ಬಿರುಸನ್ನು ಶುರುಮಾಡುವ ಹೊತ್ತು, ಹಕ್ಕಿಗಳು ಗೂಡು ಸೇರುವ ಹೊತ್ತು, ವರ್ಣರಂಜಿತ ಮೋಡವು ಕ್ಷಣಕಾಲ ನಿದ್ರಿಸುವ ಹೊತ್ತು, ಚಂದ್ರ ಬೆಳದಿಂಗಳ ಬೆಳಕನ್ನು ಸೂಸುವ ಹೊತ್ತು. ಸಾಕಲ್ಲವೇ ಸಾಕ್ಷಿ? ನಮ್ಮ ಹೊತ್ತು ಮುಳುಗಿದ ಅಂದಿನ ಪ್ರೀತಿಗೆ !.

ಭಾವ ಸ್ಪರ್ಶಗಳು ಉದಯಿಸಿದ ಇರುಳಿಗೆ ಸಾಕ್ಷಿಯಾಗಿ ನಿಂತ ದಿನಗಳವು. ಏನನ್ನೋ ಹೇಳಬಯಸಿ ನಕ್ಕು ಸುಮ್ಮನಾಗುತ್ತಿದ್ದೆ ನಾನು. ಇಬ್ಬರಿಗೂ ತಿಳಿದಿತ್ತು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ ಎಂದು. ಪ್ರೀತಿಸಿದ್ದು ನಾ ಮಾತ್ರವೆಂದು ತಿಳಿದದ್ದು ಮಾತ್ರ ಎಣಿಕೆಯ ದಿನಗಳು ಶೂನ್ಯವಾದಗ. ಈಗಲೂ ಕೇಳುವೆ ನಿನ್ನನ್ನು, ಆ ದಿನ ನೀ ಹೇಳಿ ಹೋದ ಸಾಲಿನ ಒಳ ಅರ್ಥವನ್ನು?. ಕೇವಲ ಆಕರ್ಷಣೆಯೆಂದು ಹೇಳಿ ಹೋದ ದಿನ ಮರುಕಳಿಸಿದರೆ, ನನ್ನ ಬಳಿ ಸಾಕ್ಷಿಗಳಿವೆ. ಆ ದಿನ ಸೋತ ಸಾಕ್ಷಿಗಳು, ಇಂದು ಗೆಲ್ಲಬಹುದಲ್ಲವೇ ಗೆಳತಿ?.

ಹೃದಯ ನಿನ್ನ ಮಾತಿನ ರಾಗವಿಲ್ಲದೆ ಹಾಡುವುದ ನಿಲ್ಲಿಸಿ ವರ್ಷಗಳಾಯಿತು. ಸೋಲನ್ನು ಸವಿಯಾಗಿ ಸ್ವೀಕರಿಸು ಎಂಬ ಅಪ್ಪನ ತಿಳುವಳಿಕೆಯ ಸಾಲುಗಳು ಆ ಕ್ಷಣಕ್ಕೆ ಉಸಿರನ್ನು ಮರಳಿ ಕೊಟ್ಟರು, ಆ ಮುಸ್ಸಂಜೆಗಳು ಮೌನದ ಬಯಲನ್ನು ದಾಟಿ ಬರದಾಗಿವೆ. ಬದುಕಿನ ಮುಂದಿನ ನಿಲ್ದಾಣದಲ್ಲಿ ಮತ್ತು ಪ್ರತಿ ನಿಲ್ದಾಣದಲ್ಲೂ ನೀ ಮರಳಿ ಸಿಗುವೆ, ನನಗಾಗಿ ಕಾಯುತ್ತಿರುವೆ ಎಂಬ ಮರೀಚಿಕೆಯ ನಂಬಿಕೆ ಮನದಾಳದಲ್ಲಿ ತೆಲುತ್ತಿದೆ. ಎಲ್ಲಾ ಮುಸ್ಸಂಜೆಗಳು ನಮ್ಮಿಬ್ಬರ ಪ್ರೀತಿಯ ಸಲುವಾಗಿಯೇ ದೇವರು ರುಜು ಮಾಡಿರುವನೆಂಬ ಉಲ್ಲಾಸ ಆ ದಿನಗಳಲ್ಲಿ ಜಲಪಾತದ ಹಾಗೆ ಹರಿಯುತ್ತಿತ್ತು. ಆದರೀಗ, ಈ ಕ್ಷಣಗಳಲ್ಲಿ ಮುಸ್ಸಂಜೆಯ ಕೂಗು ಕಮರಿದೆ. ಕಡಲ ಅಂತರಾಳವ ಸೇರಿ ಮೌನವಾಗಿದೆ.

“ಅಭಿ ಜೀವನ ಎಂದರೆ ಕನಸುಗಳ ಆಗರ. ಪ್ರೀತಿ ಈ ವಯಸ್ಸಿನ ಆಕರ್ಷಣೆ ಅಷ್ಟೇ. ಸಾಧಿಸುವುದು ಬಹಳಷ್ಟಿದೆ. ಅಪ್ಪನಿಗೆ ವರ್ಗಾವಣೆಯಾಗಿದೆ. ಬರುವ ಸೋಮವಾರವೇ ಹೋರಡಬೇಕು. ಮತ್ತೆ ಜೀವನದಲ್ಲಿ ನಿನ್ನನ್ನು ಭೇಟಿಯಾಗುತ್ತೆನೋ ಇಲ್ಲವೋ ನನಗೆ ತಿಳಿದಿಲ್ಲ. ಇಂದು ಈ ಮುಸ್ಸಂಜೆ ಸಾಗರದ ದಡದಲ್ಲಿ ಕೂತು ಕಾಲ ಕಳೆಯುವ. ಸಾಧ್ಯವಾದರೆ ನನ್ನನ್ನು ಮರೆಯಲು ಪ್ರಯತ್ನಿಸು” ಎಂದಷ್ಟೇ ಹೇಳಿ, ಕೆಲ ಕಾಲ ಜೊತೆಗಿದ್ದು ಹೊರಟು ಹೋದೆ.

ನಿನ್ನನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವೆ, ನೀನೆ ನನ್ನ ಬದುಕಿನ ದೊಡ್ಡ ಸಾಧನೆ ಎಂದು ಜೋರಾಗಿ ಕಿರುಚಿಕೊಳ್ಳುವ ಅವಸರ, ಕೋಪ, ಪ್ರೀತಿ ಹೃದಯದಲ್ಲಿ ಹೊಮ್ಮಿದರೂ, ಏಕೋ ಏನೂ ಹೇಳದೆ ನಾ ಮೂಕನಾದೆ. ನನ್ನ ಪ್ರೀತಿಯ ಸೋಲನ್ನು ಪ್ರೀತಿಸಿದವಳ ಮುಂದೆಯೇ ಒಪ್ಪಿಕೊಂಡೆ. ಭಾವನೆಗಳು ಬತ್ತಿಹೋದ ದಿನವದು. ಆಸೆಗಳು ತನ್ನ ತವರೂರನ್ನು ಬಿಟ್ಟು ದೂರ ಪಯಣವ ಬೆಳೆಸಿದ ದಿನವದು. ಸೋತ ಪ್ರೇಮಿಯಾಗಿ, ಇಂದಿಗೂ ನಿನ್ನ ಹೆಸರನ್ನು ಮನದ ಮೂಲೆಯಲ್ಲಿ ಬಚ್ಚಿಟ್ಟು ಆರಾಧಿಸುತ್ತಿರುವೆ. ಮತ್ತೊಮ್ಮೆ ನನ್ನ ಬದುಕಿಗೆ ನೀ ಎಂದಿಗೂ ಬರಬೇಡ. ನಮ್ಮಿಬ್ಬರ ಹಳೆಯ ನೆನಪುಗಳೇ ಮುಸ್ಸಂಜೆಯ ತಂಪು ಕಡಲಲ್ಲಿ ಬೀಸುತ್ತಿದೆ, ಅಷ್ಟೇ ಸಾಕು ಮನಸ್ಸು ತುಂಬಿಕೊಳ್ಳಲು. ಆದರೆ ಮುಸ್ಸಂಜೆಯ ಹೊಳಪು ಕೊಂಚ ಕರಗಿದೆ. ಒಂಟಿ ಸೇತುವೆಯ ಪ್ರೇಮ ಪ್ರಯಾಣಕ್ಕೆ ಒಗ್ಗಿಕೊಂಡಿದ್ದೇನೆ. ನಿನ್ನ ನೆನಪುಗಳು ಇಂದಿಗೂ ಎಂದಿಗೂ ನವಿರಾಗಿರುತ್ತವೆ.

ಇಂತಿ
ನಿನ್ನ ಮುಸ್ಸಂಜೆಯ ಪ್ರೀತಿಯ ಸೊಗಸಾದ ಆರಾಧಕ,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x