ಗೆಳೆಯಾ..
ನಿನ್ನ ನೆನೆದಾಗ ನನಗರಿವಿಲ್ಲದೆ ಮನಸಿನ ಯಾವುದೋ ಮೂಲೆಯಲ್ಲಿ ಸಂವೇದನ ಭಾವವೊಂದು ಆಗ ತಾನೇ ಬಿದ್ದ ಮಳೆಗೆ ಎಳೆ ಗರಿಕೆ ಚಿಗುರೊಡೆದಂತೆ ಚಿಗುರಿ ಬಿಡುತ್ತದೆ.. ಆ ಭಾವದ ಪರಿಯ ಹುಡುಕಲೊರಟರೆ ಪ್ರೇಮ ಲಹರಿಯೊಂದು ಮನದ ಕಣಿವೆಯೊಳಗೆ ಹರಿದು ಹಸಿರಾಗಿಸಿ ಬಿಡುತ್ತದೆ.. ನಿನ್ನೆಡೆಗಿನ ಮಧುರ ಭಾವವೊಂದು ನನ್ನೊಳಗೆ ಹರವಿಕೊಂಡು ಪ್ರೀತಿ ಹೇಳುವ ಆ ಕ್ಷಣಕೆ ಪ್ರತಿ ಘಳಿಗೆಯೂ ಹಾತೊರೆಯುವಂತೆ ಮಾಡಿಬಿಡುತ್ತದೆ..
ಮೊದಲ ನೋಟದ ಬೆಸುಗೆ ಹೃದಯದ ಅಂತರಂಗದಲ್ಲಿ ಒಲವಿನ ತರಂಗ ಎಬ್ಬಿಸಿ ಭಾವಗಳ ಬಂಧನದಲ್ಲಿ ಬಂಧಿಸಿ ಪ್ರೇಮಾಂಕುರವಾಗಿಸಿತು.. ನಿನ್ನ ನಾ ಪ್ರೀತಿಸುವೆ ಎಂಬ ಮಾತನ್ನು ಹೃದಯದ ಹಾಳೆಯ ಮೇಲೆ ಮನಸಿನ ಶಾಯಿ ಉಯಿಲು ಬರೆಯಿತು.. ಅನುರಾಗದಿಂದ ಆಪ್ತತೆ ಬೆಳೆಸಿ ಆತ್ಮೀಯನಾದ ನಿನಗೆ ನನ್ನಾತ್ಮವನೆ ಅರ್ಪಿಸುವ ಮನಸಾಯಿತು.. ನನ್ನೊಳಗೆ ಅಂಕುರಗೊಂಡ ಒಲವು ನಿನ್ನಂತರಂಗದಲ್ಲಿ ಅರಳಬೇಕು..
ಯಾವುದೇ ಆಸೆಗಳಿಲ್ಲ, ಆಕಾಂಕ್ಷೆಗಳಿವೆ.. ಎಲ್ಲವನ್ನು ಪಡೆಯಲೆ ಬೇಕೆಂಬ ಬಯಕೆಗಳಿಲ್ಲ, ಹಂಚಿಕೊಳ್ಳಬೇಕೆಂಬ ಕನಸುಗಳಿವೆ.. ಬೊಗಸೆಯಷ್ಟು ಒಲವಿದ್ದರೂ ಸಾಕು ಕಡಲಷ್ಟು ಗೌರವಿಸುವ ಮನಸು ನನ್ನವನದಾಗಬೇಕೆಂಬ ತುಡಿತ ನನ್ನದು..ನಮ್ಮಿಬ್ಬರ ಪ್ರೀತಿ ಇತಿಹಾಸವಾಗದಿದ್ದರೂ ಮನಸುಗಳ ಉಸಿರಿನಲ್ಲಿ ಅಪಹಾಸ್ಯ ಆಗದೆ ಇದ್ದರೆ ಸಾಕು ಬದುಕಿಬಿಡುವೆ ನಾನು ನಿನ್ನವಳಾಗಿ ನಿನ್ನ ನೆರಳಿನ ನೆರಳಾಗಿ.. ವಸ್ತುಗಳಿಂದ ಪ್ರೀತಿಯನ್ನ ಎಂದೂ ನಾ ಅಳೆಯುವುದಿಲ್ಲ.. ಮನಸಿನ ಮುನಿಸನು ನಿನ್ನ ಒಲವೆಂಬ ಕನಸು ತಣಿಸಿದರೆ ಸಾಕು.. ಜೊತೆ ನಡೆಯುವಾಗ ಬಳ್ಳಿ ಮರವ ಬೆಸೆದಂತೆ ಬೆರಳಿಗೆ ಬೆರಳು ಬೆಸೆದು ನಗುವನು ನೋವನು ಹಂಚಿಕೊಂಡು ಪರಸ್ಪರ ಸಂತೈಸಿಕೊಳ್ಳಬೇಕು.. ಯಾವದಕ್ಕೂ ಹಠವಿಲ್ಲ, ಹಠವಿದ್ದರೂ ಅದು ಮಗುವಿನ ಹಠವೆಂದು ತಿಳಿದು ನೀ ಈಡೇರಿಸುವಾಗ ನಿನ್ನ ಮಡಿಲಲಿ ನಾ ಸಂತೈಸಿಕೊಳ್ಳಬೇಕು.. ಮನದ ದಣಿವು ಎಷ್ಟೆ ಇರಲಿ ಇಳಿಸಂಜೆಯ ಹೊತ್ತಲ್ಲಿ ಜೋಡಿಯಾಗಿ ಕೂತಾಗ ನಿನ್ನೆದೆಯ ಮೇಲೆ ನನ್ನ ಮಲಗಿಸಿಕೊಂಡು ಬಿಡು ನಾನು ಮತ್ತೆ ಹೊಸಮುಂಜಾವನು ಕಾಣುವೆ..
ನಿನ್ನ ಸಮಾಧಾನದ ಮಾತುಗಳೆ ನನಗೆ ಅಮೃತಧಾರೆಯಾಗಿ, ನನ್ನ ಒಲವಿನ ತುಂಟ ನೋಟವೆ ನಿನಗೆ ಲೀನವಾಗುವಂತೆ ಜಗಮರೆಸುವ ಪ್ರೀತಿ ನೀಡಬೇಕಿದೆ.. ಸಂಧ್ಯೆಯ ಮಡಿಲಿಗೆ ಜಾರುವ ಸೂರ್ಯನ ಮನ ಇಳಿಸಂಜೆಯ ತಂಪಲ್ಲಿ ನಿನ್ನ ಕೈ ಹಿಡಿದು ನಾ ನಡೆಯುವಾಗ ಮತ್ತಷ್ಟು ಅಸೂಯೆಯ ಬೆಂಕಿಯಿಂದ ಕೆಂಪಾಗುವಾಗ ನೀ ನನ್ನ ಮುಂಗುರುಳ ಸರಿಸಿ ಮುದ ನೀಡಬೇಕು.. ಕಡಲ ಅಲೆಗಳು ಓಡೋಡಿ ಬಂದು ಅಂಗಾಲುಗಳ ಸ್ಪರ್ಶಿಸುವಾಗ ನಮ್ಮೊಳಗಿನ ಭಾವವನ್ನು ಮತ್ತಷ್ಟು ವಿನ್ಯಾಸಗೊಳಿಸಿ ಒಲವಿಗೆ ಹೊಳಪು ಹೆಚ್ಚಿಸಬೇಕು.. ಸೌಂದರ್ಯವಿರುವದು ಮನಸಿನಲ್ಲಿ ನಾವು ತೋರೊ ಗುಣದಲ್ಲಿ ನಾವಿಬ್ಬರೂ ನಡೆದುಕೊಳ್ಳೊ ಭಾವದಲ್ಲಿ ಇದನ್ನು ಇಬ್ಬರೂ ಚೆನ್ನಾಗಿ ಅರಿತು ಒಲವಿನ ಪಯಣ ಬೆಳಸಬೇಕು..
ನನ್ನ ಪಾಲಿಗೆ ನಿನ್ನ ಪರಿಶುದ್ಧ ಪ್ರೀತಿ ಬಾಳಿನ ಪ್ರಣತಿ.. ಕತ್ತಲೆಯ ಬದುಕಲಿ ಬೆಳಕು ಕೊಡುವ ಅನುಭೂತಿ.. ನಿದಿರೆಯ ಸ್ವಪ್ನಗಳಲಿ ನೀನೇ ಬೇಕು ಎನ್ನುವಷ್ಟು ಹಿಡಿದಿದೆ ಮತಿ.. ಹಾಗೆಂದ ಮಾತ್ರಕ್ಕೆ ನಾ ಸ್ವಾರ್ಥಿಯಲ್ಲ ಈ ಹೇಳದಿರೋ ಪ್ರೀತಿಯ ಅವ್ಯಕ್ತ ಭಾವದಲ್ಲಿ ಅದೇನೋ ಭಾವೋತ್ಕರ್ಷದ ಸೆಳೆತ..! ನಿನ್ನ ಅಪ್ಪುಗೆಯ ಸವಿಯಲ್ಲಿ ಅಂಟಿಕೊಂಡ ನೆರಳು ಕೂಡ ಬೆಚ್ಚಗಾಗುವಾಗ ಹುಣ್ಣಿಮೆಯ ಬೆಳದಿಂಗಳ ತಂಪು ಕೂಡ ಬಿಸಿಯಾಗಬೇಕು.. ಕಡು ರಾತ್ರಿಯ ನಿಶ್ಯಬ್ದಕೂ ಪ್ರೇಮದ ಶಬ್ದ ಕೇಳಬೇಕು.. ನನ್ನೀಡಿ ಬದುಕಿನ ಕಣಕಣವನು ನಿನ್ನೊಂದಿಗೆ ಕಳೆಯಬೇಕೆಂಬ ಮನದ ಮಿಡಿತವಷ್ಟೇ!
ನನ್ನೆಲ್ಲವನು ನಿನಗಾಗಿ ಅರ್ಪಿಸಿ ನಿನ್ನ ಹೊಸಬದುಕಿಗೆ ಬಂದಾಗ ಬಯಸುವುದಿಷ್ಟೇ.. ಮಳೆ ಸುರಿದು ನಿಂತಾಗ ಮರದ ರೆಂಬೆಯ ಅಲುಗಾಡಿಸಿದಾಗ ಬೀಳುವ ಹನಿಗಳಷ್ಟೇ ಮುದ ನೀಡುವ ಚಂದದ ಬೊಗಸೆಯಷ್ಟು ಪ್ರೀತಿಯನ್ನು.. ನಿನ್ನೊಲವಲಿ ಮುಗಿಲೆತ್ತರಕ್ಕೆ ಹಾರಬೇಕೆಂದು ಬಯಸಿದಾಗ ನೀ ರೆಕ್ಕೆಯಾಗುವೆ ಎಂಬ ಭರವಸೆಯಿಂದ ಈ ನಿರ್ಣಯ ತೆಗೆದುಕೊಂಡಿರುವೆ.. ಹುಸಿಯಾಗಿಸಬೇಡ ಒಲವನ್ನು ವಸಂತದ ಚಿಗುರಂತೆ ಹಸಿರಾಗಿರಿಸು.. ನಮ್ಮಿಬ್ಬರ ಬಾಂಧವ್ಯ ಆ ಹಸಿರಲಿ ಅರಳುವ ಹೊಸ ಹೂವಾಗಲಿ..
ಅದೆಷ್ಟೋ ಕನಸುಗಳ ಕನವರಿಕೆಯ ನಿನ್ನ ಕಡಲಳಾದ ಎದೆಯೊಳಗೆ ನನಸಾಗಿಸಿ ದಣಿದ ತವಕಗಳ ಹವಣಿಕೆಯ ಸಮಾಧಾನಿಸಬೇಕು.. ಮನ ನಿನ್ನೊಲವಿಗೆ ರಚ್ಚೆ ಹಿಡಿದ ಮಗುವಿನಂತೆ ಹಠ ಮಾಡುವಾಗ ರೋಮಗಳ ಹರವಿಕೊಂಡ ನಿನ್ನೆದೆಯೊಳಗೆ ತಲೆಯಾನಿಸಿ ಮನದ ದುಗುಡವ ದೂರ ಮಾಡಿ ಮತ್ತಷ್ಟು ಮನಸೋಲಬೇಕು.. ಇನ್ನೂ ಅದೆಷ್ಟೋ ಹೇಳಲಾಗದ ಸಂವೇದನ ಭಾವಗಳು ಅಕ್ಷರಕ್ಕೂ ನಿಲುಕದೆ ಸತಾಯಿಸಿ ಬಿಡುತ್ತವೆ.. ನನ್ನೊಳಗೆ ನನಗೆ ಗೊತ್ತಿಲ್ಲದಂತೆ ಉದಯಿಸಿದ ಈ ಪ್ರೀತಿಯನ್ನ ನಿನ್ನೊಂದಿಗೆ ಈ ಪತ್ರದೊಂದಿಗೆ ಹೇಳುತ್ತಿರುವೆ. ನೀ ನನ್ನ ಸ್ವೀಕರಿಸುವೆಯೋ? ತಿರಸ್ಕರಿಸುವೆಯೋ? ಗೊತ್ತಿಲ್ಲ ಆದರೆ ಈ ಹೃದಯ ನಿನ್ನ ಬಿಟ್ಟು ಮತ್ಯಾರನ್ನು ಪ್ರೀತಿಸುವುದಿಲ್ಲ.. ಹಾ ಒಂದು ಮಾತು ನೀ ನನ್ನ ಪ್ರೀತಿಸದಿದ್ದರೂ ಪರವಾಗಿಲ್ಲ ನನ್ನ ಪತ್ರದಲ್ಲಿ ನಿನಗೆ ನನ್ನೆದೆಯೊಳಗಿನ ಭಾವಗಳ ಹೇಳಿದೆ ಎಂಬ ಭಾವವೇ ಸಾಕು..!
ಹಾ ಹಾ ಇಷ್ಟಕ್ಕೆ ಮುಗಿಲಿಲ್ಲ.. ಇಷ್ಟೇ ಓದಿದ್ದೀಯ ಇನ್ನೊಂದಿಷ್ಟು ಓದಿಬಿಡು..
ಈ ಚಳಿಗಾಲದ ಬೆಳಗಿನಲಿ ಹಿಮ ಸುರಿವ ಮಂಜಿನಲಿ ಮೊದಲ ಕಿರಣ ಭುವಿಗೆ ಸ್ಪರ್ಶವಾಗುವ ಹೊತ್ತಿನಲಿ ನಿನ್ನದೆಗೆ ತಲೆಯಾನಿಸಿ ಹೃದಯದ ಸದ್ದಾಲಿಸುತ ನಾ ಹೇಳಬೇಕಿದೆ ಪ್ರೇಮಿಗಳ ದಿನದ ವಿಶೇಷ ಶುಭಾಶಯ.. ಸಾಧ್ಯವಾದರೆ ಸಿಕ್ಕಿ ಬಿಡು!
ಇಂತಿ..
ನಿನ್ನವಳು