ಬದುಕಲ್ಲಿ ಸ್ಪಷ್ಟತೆ ಇರಲಿ, ಪಡೆಯುವ ಉತ್ತರದಲ್ಲೂ ಏಳುವ ಪ್ರಶ್ನೆಗಳಲ್ಲೂ: ಮಧುಕರ್ ಬಳ್ಕೂರ್

ಅವನು : “ನನಗೂ ಬರೀಬೇಕು ಅಂತಾ ತುಂಬಾ ಆಸೆ ಸರ್. ಆದರೆ ಏನ್ಮಾಡೋದು? ಕೆಲಸದ ಒತ್ತಡ, ಬ್ಯುಸಿ. ಟೈಮೆ ಸಿಗಲ್ಲ ನೋಡಿ. ಡ್ಯೂಟಿ ಮುಗಿಸಿ ಮನೆಗ್ ಬಂದ್ ಮೇಲಂತೂ ಅದು ಇದು ಅಂತಲೆ ಆಗೊಗುತ್ತೆ. ಇನ್ನೆಲ್ಲಿ ಸರ್ ಬರೆಯೋದು..?”

ಅವರು : “ಓ ಹೌದಾ, ಮನೆಗೆ ಬಂದ್ ಮೇಲೆ ಬಹಳ ಕೆಲ್ಸ ಇರುತ್ತೆ ಅನ್ನಿ ..?”

ಅವನು : ” ಹಾಗೆನಿಲ್ಲ, ಡ್ಯೂಟಿ ಮಾಡಿ ದೇಹ ದಣಿದಿರತ್ತೆ ನೋಡಿ. ಹಾಸಿಗೆಗೆ ಹೋಗಿ ಒಂದ್ ಅರ್ಧ ಗಂಟೆ ಮಲಗಿರ್ತಿನಿ. ಆಮೇಲೆ ಅದು ಇದು ಅಂತಾ ಸಣ್ಣ ಪುಟ್ಟ ಕೆಲ್ಸ ಅಷ್ಟೇ”

ಅವರು : “ಹೌದೌದು. ವಿಶ್ರಾಂತಿ ಬೇಕೆ ಬೇಕು. ಅದಿಲ್ಲಾ ಅಂದ್ರೆ ತುಂಬಾನೆ ಕಷ್ಟ. ಆದ್ರೆ, ಹೀಗ್ ಮಾಡಿದ್ರೆ ಹೇಗೆ..? ಹ್ಯಾಗೂ ಸುಸ್ತಾಗಿ ವಿಶ್ರಾಂತಿ ತಗೋತಿರಲ್ವ, ಜೊತೆಗೆ ಸಂಗೀತಾನೂ ಕೇಳಿ.. ಅದರಲ್ಲೂ ನಮ್ಮ ಹಳೇ ಕನ್ನಡ ಸಿನಿಮಾ ಗೀತೆಗಳನ್ನು ಕೇಳ್ತಿದ್ರೆ ಆಯಾಸ ಪರಿಹಾರ ಆಗೋದಲ್ಲದೆ ನಿಮಗೆ ಸಾಹಿತ್ಯ ಬರೀಯೋ ಮೂಡ್ ಬಂದ್ರು ಬರಬಹುದು”

ಅವನು : “ಏನ್ ಸರ್.. ಹಾಡ್ ಕೇಳಿದಾಕ್ಷಣ ಬರೆಯೋ ಮೂಡ್ ಬರುತ್ತಾ..? ಏನೋಪಾ..! ಹಾಗೆನಾದ್ರು ಆಗೋದಾಗಿದ್ರೆ ಇವತ್ತು ಎಲ್ಲರೂ ಸಾಹಿತಿಗಳಾಗಿ ಇರ್ಬೇಕಿತ್ತು ಅಲ್ವಾ… ಬಿಡಿ ಸರ್ ಆ ಮಾತು, ಬರೀ ಅದನ್ನೆ ಕೇಳ್ತಾ ಇದ್ರೆ ಅಡಿಗೆ ಮಾಡೋರು ಯಾರು..? ಹೊಟ್ಟೆ ತುಂಬೋದ್ ಹೇಗೆ..?”

ಅವರು : “ಓಹ್.. ಅಡಿಗೆ ಬೇರೆ ಮಾಡ್ತೀರಾ..? ಸರಿ ಹಾಗಿದ್ರೆ, ಅದನ್ನೆ ಬರೆದ್ ಬಿಡಿ. ಬರಿಬೇಕು ಅನ್ನೋದ್ ತಾನೆ ನಿಮ್ಮ ಆಸೆ. ಅಂದ ಮೇಲೆ ಹಾಡ್ ಬರೆದರೇನು ಅಡುಗೆ ರೆಸಿಪಿ ಬರೆದ್ರೇನು, ಒಟ್ಟಿನಲ್ಲಿ ಬರಿತಿರಬೇಕು”

ಅವನು : “ಏನ್ ಹೇಳ್ತಿದೀರಾ ಸರ್ ನೀವು! ಅಡುಗೆ ರೆಸಿಪಿ ಬರೆಯೋದಾ..!? ಅಲ್ಲಾ ಸರ್…‌‌‌.. ಅದನ್ನೆಲ್ಲ ಬರೆದಿಡೋವಷ್ಟು ನಮಗೆಲ್ಲಿ ಅಡುಗೆ ಬರುತ್ತೆ ಅಂತಾ….?”

ಅವರು : ” ಅದ್ಯಾಕ್ ಹಾಗಂತೀರಾ, ಬಂದಷ್ಟು ಬರಿರೀ… ಅದರಲ್ಲೇನು ಹೋಗೋದು? ಒಂದ್ ವಿಷ್ಯ ಗೊತ್ತಾ..? ಎಲ್ಲರಿಗೂ ಎಲ್ಲದೂ ಬರಲ್ಲ ಕಣ್ರಿ… ನಾಲ್ಕೆ ನಾಲ್ಕು ಬಗೆ ಮಾಡೋಕ್ ಬಂದ್ರನೂ ಸರಿ. ನಾಲ್ಕು ಜನರಿಗೆ ಉಪಯೋಗ ಆಗೋ ತರಹ ಇರ್ಬೇಕು. ಇಂತದ್ದೊಂದು ಐಟಮ್ ಮಾಡೊದ್ ಹ್ಯಾಗೆ ಅಂತಾ ನನಗೊಬ್ಬನಿಗೆ ಹೇಳಿದ್ರೆ ಬರೀ ನನಗಷ್ಟೆ ತಿಳಿಯುತ್ತೆ. ಅದೇ ಬರೆದಿಟ್ಟರೆ.? ಒಂದ್ ಕಂಟೆಂಟ್ ಆಗಿರುತ್ತೆ. ವಿಚಾರ ಮಾಡಿ”.

ಅವನು : “ಸರ್ ಅದು ಹಾಗಲ್ಲ”

ಅವರು : “ಏನ್ ಹಾಗಲ್ಲ. ಓಹ್..‌ ಎಲ್ಲರೂ ಮಾಡೋ ಐಟಮ್ಮೆ ನೀವು ಮಾಡ್ತಿರೋದು ಅಂತನಾ..? ಅದರಲ್ಲೇನು..? ಅದೇ ಐಟಮ್ ನ ಯಾರ್ ಎಷ್ಟೇ ಸಲಾ ಮಾಡಿದ್ರುನೂ ನೀವು ಮಾಡಿದ ರೀತಿಯಲ್ಲಂತೂ ಇರೋಕೆ ಸಾಧ್ಯ ಇಲ್ಲಾ ನೋಡಿ. ಅಂದ್ಮೆಲೆ ನೀವು ಬರೆದ ಆ ರೆಸಿಪಿ ಕೂಡಾ ಹಾಗೆನೆ. ನಿಮ್ಮ ಹಾಗೆ ಇನ್ನೊಬ್ರು ಬರೆಯೋಕೆ ಸಾಧ್ಯ ಇಲ್ಲಾ . ಏಕೆಂದರೆ ಅದರಲ್ಲಿ ನೀವು ನಿಮ್ಮ ಅನುಭವವನ್ನ ಇಳಿಸಿರ್ತೀರಾ. ನಿಮ್ಮ ಅನುಭವ ಬೇರೆ ಯಾರುದ್ದೊ ಆಗೋಕೆ ಸಾಧ್ಯ ಇಲ್ಲಾ ಅಲ್ವಾ.? ಒಂದ್ ಕೆಲ್ಸ ಮಾಡಿ. ರಾತ್ರಿ ಮಲಗೋಕೆ ಮುಂಚೆ ಒಂದ್ ಅರ್ಧ ಪುಟ ದಿನಚರಿ ಬರೆಯೋದನ್ನ ರೂಢಿ ಮಾಡಿ. ಇಡೀ ದಿನ ಏನೇನ್ ಮಾಡಿದ್ರಿ. ಏನೇನ್ ಆಯಿತು ಎಲ್ಲಾ ಬರೀರಿ. ಆಮೇಲ್ ನೋಡಿ. ಬರೆಯೋಕೆ ಟೈಮಿಲ್ಲ ಅಂತಾ ಹೇಳೋದೆ ಇಲ್ಲ ನೀವು”

ಅವನು : ” ಬರಿಬಹುದು ಸರ್.. ಆದ್ರೆ ಅದೆಲ್ಲಾ ಎಷ್ಟ್ ದಿನ ಅಂತಾ ? ಮಾಡಿದ್ದನ್ನೆ ಮಾಡ್ತ ಇದ್ದರೆ ಬೋರ್ ಆಗಲ್ವಾ. ಸಮ್ ಥಿಂಗ್ ಸ್ಪೇಷಲ್ ಇರ್ಬೇಕು ಅನ್ಸಲ್ವಾ”

ಅವರು : “ಓ…ಹೋ… ಅದಾ ನಿಮ್ಮ ಪ್ರಾಬ್ಲಮ್ಮು…. !! ಅಲ್ರಿ ನೀವಿನ್ನು ಶುರುನೆ ಮಾಡಿಲ್ಲ ಆಗಲೇ ಬೋರು ಅಂತಿದಿರಲ್ಲ..!! ಸರಿ, ಹೀಗ್ ಹೇಳ್ತಿನಂತ ಅನ್ಕೊಬೇಡಿ, ದಿನಾಲೂ ಹೊರಗಡೆ ಕೆಲಸಕ್ಕೆ ಹೋಗ್ ಬರ್ತಿರಲ್ವ, ಅದು ಕೂಡಾ ಬೋರ್ ಆಗ್ ಬೇಕಲ್ಲ..? ಓಹ್….. ಅದಕ್ಕೆ ಸಂಭಳ ಬರುತ್ತಲ್ವ. ಅಂದ್ರೆ ನಿಮ್ಮ್ ಸಮಸ್ಯೆ ಇರೋದು ಬೋರ್ ಆಗುತ್ತೆ ಟೈಮು ಇಲ್ಲಾ ಅನ್ನೊದ್ರಲಲ್ಲ. ನಿಮಗೆ ಬರೀಬೇಕು ಅನ್ನೊ ಆಸೆ ಇದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಅದರಿಂದ ನಿರೀಕ್ಷೆ ಮಾಡ್ತಿದೀರಾ ನೀವು. ತಪ್ಪಲ್ಲ ಬಿಡಿ. ಆದ್ರೆ ಪ್ರಯಾಣ ಶುರು ಮಾಡದೇನೆ ಇದೆಲ್ಲಾ ಹ್ಯಾಗ್ ಸಾಧ್ಯ ಅಂತೀನಿ? ಸಾವಿರ ಮೈಲಿ ಪ್ರಯಾಣ ಮಾಡಬೇಕಿದ್ರು ಮೊದಲೆ ಹೆಜ್ಜೆಯಿಂದ್ಲೆ ಶುರು ಮಾಡಬೇಕು ಅಲ್ವಾ..”

ಅವನು : “ಅಯ್ಯೊ ಆ ತರಹ ನಿರೀಕ್ಷೆ ಅಂತಾ ಏನೂ ಇಲ್ಲ ಸರ್. ಏನೋ.. ಅಲ್ಪ ಸ್ವಲ್ಪ ಹೆಸರು ಮಾಡಬೇಕಂತ… ಅಷ್ಟೇ”

ಅವರು : ” ಅದು ಕೂಡಾ ನಿರೀಕ್ಷೆನೆ ಆಯಿತಲ್ಲರೀ…. ಸರಿ, ನಿಮಗೇನು..? ಹೆಸರು ಮಾಡಬೇಕು ತಾನೆ ..? ಅದಕ್ಯಾಕ್ರಿ ಬರೀಬೇಕು..? ಹೆಸರು ಮಾಡೋಕೆ ತುಂಬಾನೆ ದಾರಿ ಇದೆ ಅಲ್ವಾ. ಅದು ಅಲ್ಲದೆ ನಿಮ್ಮ ಬಗ್ಗೆ ಬೇರೆ ಯಾರೇ ಬರೆದ್ರುನೂ ನಿಮಗೆ ಹೆಸರು ಬರುತ್ತೆ ಅಲ್ವಾ..? ನೀವೇ ಯಾಕ್ ಬರೀಬೇಕು ಅಂತಾ..!!?”

ಅವನು : “ಅದು ಆ ತರಾ ಅಲ್ಲ ಸರ್, ಹಾಗ್ ನಮ್ಮ ಬಗ್ಗೆ ಬರೆದ್ರುನೂ ಅದೆಷ್ಟ್ ಜನ ನೋಡ್ತಾರೆ ಹೇಳಿ..? ಅದು ಕೂಡಾ ಎಷ್ಟ್ ಹೊತ್ತು ನೆನಪಲ್ಲಿರುತ್ತೆ ಹೇಳಿ…? ಬೆಳಿಗ್ಗೆ ನೋಡಿ ಸಂಜೆ ಆಗೊ ಹೊತ್ತಿಗೆ ವಿಷಯ ಹಳತಾಗಿರುತ್ತೆ. ಬಿಡಿ ಸರ್, ಇಷ್ಟಕ್ಕೂ ನಮ್ಮ ಬಗ್ಗೆ ಯಾರ್ ಬರಿತಾರೆ…?”

ಅವರು : “ಬರೀಯೋ ಹಾಗೆ ಕೆಲಸ ಮಾಡ್ರಿ, ಯಾಕ್ ಬರೆಯೋಲ್ಲ? ಯಾಕೋ ನಿಮ್ಮ ಸಮಸ್ಯೆನೆ ಅರ್ಥ ಆಗ್ತಾ ಇಲ್ಲಾ ನನಗೆ. ಬರೀಬೇಕು ಆಸೆ ಅಂತೀರಾ. ಟೈಮಿಲ್ಲ ಅಂತೀರಾ.‌ ಹೆಸರು ಮಾಡಬೇಕು ಅಂತೀರಾ. ಅದನ್ನ ತುಂಬಾ ಜನ ನೋಡ್ಬೇಕು, ಶಾಶ್ವತವಾಗಿ ಉಳಿಬೇಕು ಅಂತಾ ಫೀಲ್ ಮಾಡ್ತೀರಾ‌‌..‌ ಒಂದ್ ಹೇಳ್ಲಾ, ಮೊದಲು ಮಾಡೋ ಕೆಲ್ಸನಾ ಫೀಲ್ ಮಾಡೋದನ್ನ ಕಲೀರಿ, ಅಂದ್ರೆ ನೀವು ಮಾಡೋ ಕೆಲಸನಾ ಮೊದ್ಲು ಪ್ರೀತಿಸಿ. ಮಾಡೋ ಕೆಲ್ಸದಲ್ಲಿ ಪ್ರೀತಿ ಇದ್ದರೆ ಆಮೇಲೆ ಸಿಕ್ಕೊ ಖುಷಿನೆ ಬೇರೆ ಕಣ್ರೀ.. ಬರವಣಿಗೆ ಕೂಡಾ ಹಾಗೆನೆ… ಅದನ್ನ ಮಗು ತರಾ ಅನುಭವಿಸುವುದನ್ನ ಕಲೀಬೇಕು. ಒಂದ್ ಅಂಬೆಗಾಲಿಡೊ ಮಗು ಅದೆಷ್ಟು ಸಾರಿ ಬಿದ್ದು ಎದ್ದು ಖುಷಿಪಡುತ್ತೆ ನೋಡಿ. ಹಾಗೆ ಬರವಣಿಗೆ ಅನ್ನೋದು, ನಿಮ್ಮ ಮೂಡ್ ಅನ್ನ ಖುಷಿ ಪಡಿಸೊ ತರಾ ಇರ್ಬೇಕು. ಬೊರ್ ಅನ್ಸತ್ತಾ…? ಏನ್ ಸಿಕ್ಕತೊ ಅದನ್ನ ಓದಿ..ಯಾರಿಗ್ ಗೊತ್ತು, ಏನಾದ್ರು ಬರೀಲಿಕೆ ವಿಷ್ಯ ಸಿಕ್ಕಿದ್ರು ಸಿಕ್ಕಬಹುದು. ಅದೂ ಬೋರ್ ಆಯಿತಾ …? ಒಳ್ಳೆ ಸಂಗೀತ ಕೇಳಿ. ಬರೀ ಕೇಳೋದಷ್ಟೆ ಅಲ್ಲ, ಅದರ ಸಾಹಿತ್ಯ, ಬಾವಾರ್ಥ, ಎಲ್ಲಾನೂ ಆಲಿಸಿ.. ಆಗ್ ಅದರ ಅನುಭವಾನೆ ಬೇರೆ ಇರುತ್ತೆ ನೋಡಿ..! ಅದೂ ಸಾಕ್ ಅನ್ಸತ್ತಾ , ಹಂಗೆ ಸ್ವಲ್ಪ ದೂರ ಅಡ್ಡಾಡಿ. ನಿಮ್ಮ ಸುತ್ತಲೂ ಏನೇನ್ ನಡಿತೀದೆ ಅನ್ನೋದನ್ನ ಗಮನಿಸಿ. ಇನ್ನು ಒಂದ್ ವಿಷ್ಯ, ನೀವೆನೇ ಮಾಡಿದ್ರು ನಿಮ್ ಮೈಂಡ್ ಪ್ರೇಶ್ ಆಗೋ ತರಹ ಮಾಡಬೇಕು ಕಣ್ರಿ .ಅಂದ್ರೆ ನೆಕ್ಟ್ ನೀವು ಮಾಡೋ ಕೆಲ್ಸಕ್ಕೆ ಒಂದು ಸ್ಪೂರ್ತಿ, ಹುಮ್ಮಸ್ಸು ಕೋಡೋ ತರಹಾ ಆ ಕೆಲ್ಸ ಇರಬೇಕು. ವಿಶ್ರಾಂತಿ ಅಂದ್ರೆ ಸುಮ್ಮನೆ ಕುತ್ಕೊಳ್ಳೋದು ಮಲಗೋದಂತಷ್ಟೆ ಅಲ್ಲಾ. ಆ ಟೈಮಲ್ಲಿ ಇನ್ನು ಯಾವುದೊ ಕೆಲಸ ಚಟುವಟಿಕೆ ಮಾಡಿದ್ರುನೂ ಅದು ಕೂಡಾ ವಿಶ್ರಾಂತಿನೆ. ಕೆಲಸ ಆದ ಮೇಲೆ ಪಡಿಯೋ ವಿಶ್ರಾಂತಿನಾ ಇನ್ನೊಂದು ಯಾವುದೊ ಚಟುವಟಿಕೆ ಮಾಡೋ ಮುಖಾಂತರಾನೂ ಪಡಿಬಹುದು ಕಣ್ರಿ. ಅದು ಯಾವ ತರಹ ಅನ್ನೋದನ್ನ ನೀವು ಆಯ್ಕೆ ಮಾಡ್ಕೊಂಡು ಸೆಟ್ ಮಾಡ್ಕೋಬೇಕು ಅಷ್ಟೇ. ಕೆಲಸ ಮಾಡಿ ದೇಹಕ್ಕೆ ಸುಸ್ತಾದ್ರೆ ಮನಸಿಗೆ ಕೆಲ್ಸ ಕೊಡಿ. ಮನಸ್ಸು ಉಲ್ಲಾಸವಾಗೊ ಹಾಗೆ ಬುದ್ದಿ ಚುರುಕಾಗೊ ಹಾಗೆ ಏನಾದ್ರು ಮಾಡ್ತೀರಿ. ಒಟ್ಟಿನಲ್ಲಿ ಏನೋ ಒಂದು ಉಪಯೋಗಕ್ಕೆ ಬರೋ ಹಾಗೆ ನಡೀತಿರಬೇಕು. ಎಲ್ಲರಿಗೂ ದಿನದಲ್ಲಿ ಇರೋದು ಇಪ್ಪತ್ತನಾಲ್ಕು ಗಂಟೆನೆ ರೀ.. ಅಂದ ಮೇಲೆ ಆ ಅವಧಿಲಿ ನಿಮ್ಮ ಮೂಡ್ ಹೇಗ್ ಇರುತ್ತೆ ಯಾವುದ್ಯಾವುದಕ್ಕೆ ಎಷ್ಟೆಷ್ಟು ಟೈಮು ಕೋಡ್ತಿರಾ ಅನ್ನೋದು ಕೂಡಾ ಮುಖ್ಯ ಆಗುತ್ತೆ .ಹಾಗಾಗಿನೆ ಏನೇ ಶುರು ಮಾಡೋಕೆ ಅಂತಾ ಹೋದ್ರುನೂ ಗಳಿಗೆ ಬರಲಿ ಮಹೂರ್ತ ಬರಲಿ ಅಂತಾ ಕಾಯ್ ಬೇಡಿ .ಸುಮ್ಮನೆ ಶುರು ಮಾಡಿ. ಈ ಪ್ರಪಂಚದಲ್ಲಿ ಯಾವುದು ವೇಸ್ಟ್ ಅನ್ನೋದು ಇಲ್ಲ ಕಣ್ರಿ. ಹಾಗೆನೆ ಈ ಪ್ರಪಂಚದಲ್ಲಿ ಯಾವುದು ಶಾಶ್ವತ ಅನ್ನುವಂತದ್ದೂ ಇಲ್ಲ. ಈ ಹಣ, ಹೆಸರು, ನಿರೀಕ್ಷೆನೆಲ್ಲಾ ಸ್ವಲ್ಪ ದಿನ ಮರೆತುಬಿಡಿ. ಜಸ್ಟ್ ನಿಮ್ಮ ಖುಷಿಗೋಸ್ಕರ ಶುರುಮಾಡಿ. ಒಂದ್ ತಿಳ್ಕೋಳ್ಳಿ, ಎಷ್ಟೇ ಸುಂದರವಾಗಿರೋ ಹೆಂಡ್ತಿ ಸಿಕ್ಕಿದ್ರು ದಿನದ ಇಪ್ಪತ್ತನಾಲ್ಕ್ ಗಂಟೆ ಅವರನ್ನ ನೋಡೊಕೆ ಆಗೋತ್ತಾ? ಇಲ್ಲಾ ಅಲ್ವಾ.. ಹಾಗ್ ನೋಡೋಕೆ ಹೋದ್ರೆ ಹೆಂಡ್ತಿನೂ ಬೋರೇ ಆಗೋದಲ್ವ? ಈ ಹೆಸರು, ಕೀರ್ತಿ, ಸಂಪತ್ತು ಕೂಡಾ ಹಾಗೆನೆ. ತುಂಬಾ ಹೊತ್ತು ಅದೇ ಗುಂಗಲ್ಲಿ ಇರೋಕೆ ಹೋಗಬಾರದು”

ಅವನು : “ಸರಿ ಸರ್, ನಾನೀಗ ಏನ್ ಮಾಡ್ಬೇಕು ಅಂತೀರಾ .?”

ಅವರು : ” ಏನು ಇಲ್ಲಾ. ನಿಮಗಿರೋ ಪ್ರಾಬ್ಲಮ್ಮು ನಿಮ್ಮ ಬಗ್ಗೆ ನಿಮಗೆ ಸ್ಪಷ್ಟತೆ ಇಲ್ಲದೆ ಇರೋದು. ನಿಮಗೇನು ಬೇಕು ನೀವೇನು ಆಗ್ಬೇಕು ಅನ್ನೊದ್ರ ಬಗ್ಗೆ ಖಚಿತತೆ ಇಲ್ಲದಿರೋದೆ ನಿಮ್ಮ ಸಮಸ್ಯೆ. ಸಾರಿ, ಇದೊಂದ್ ವಿಷ್ಯನಾ ನಾನು ನಿಮಗೆ ಹೇಳೋಕೆ ಆಗಲ್ಲ. ಏಕೆಂದರೆ ನಿಮಗೇನು ಬೇಕು ನೀವೇನ್ ಆಗ್ಬೇಕು ಅನ್ನೊದನ್ನ ನೀವೇ ಡಿಸೈಡ್ ಮಾಡ್ಬೇಕು. ಹೌದಲ್ವ”.

ಹೌದು,

ಬದುಕಿನ ಪ್ರಯಾಣ ಅಂತಾ ಶುರುಮಾಡಿದ ಮೇಲೆ ಈ ತೆರೆನಾದ ಪ್ರಶ್ನೆಗಳು, ಡೌಟ್ ಗಳು, ನಿರೀಕ್ಷೆಗಳು ಶಾರ್ಟ್ ಕಟ್ ಗಳು ಎದುರಾಗುತ್ತಲೆ ಇರುತ್ತವೆ. ಅದಕ್ಕೆ ಉತ್ತರವೂ ಕೂಡಾ ನಮ್ಮಲ್ಲಿಯೆ ಇರುತ್ತದೆ. ಎಷ್ಟೊ ಬಾರಿ ಈ ತರಹದ ಪ್ರಶ್ನೋತ್ತರಗಳು ನಡೆಯುತ್ತಲೇ ನಮ್ಮ ಸಮಯ ಕಳೆದುಹೋಗಿಬಿಡುತ್ತದೆ. ಕಾರಣ, ಸ್ಪಷ್ಟತೆ ಇಲ್ಲದಿರೋದು.

ಬಹುತೇಕ ಬಾರಿ ನಾವು ಏನ್ ಆಗ್ಬೇಕು, ಏನಕ್ಕೆ ಹೊರಟಿದೀವಿ, ಅದೇನ್ ಏನಾಗುತ್ತೆ ಅನ್ನೊ ಸ್ಪಷ್ಟತೆ ಇಲ್ಲದೆನೆ ಏನೆನೋ ಮಾಡ್ತಾ ಇರ್ತಿವಿ, ಇಲ್ಲವಾ ಆ ದಾರಿಲಿ ಹೋಗ್ತಾ ಹೋಗ್ತಾ ಆ ಸ್ಪಷ್ಟತೆನಾ ಕಳಕೋತಾ ಇರ್ತಿವಿ. ಆಗ ಮಾಡ್ಕೊಳ್ಳೊ ಗೊಂದಲಕ್ಕೆ, ಚಿಂತೆಗೆ ಯಾರು ಏನೇ ಸಲಹೆ, ಸಹಾಯ ನೀಡಿದ್ರು ಅದು ಕೆಲಸಕ್ಕೆ ಬರೋದಿಲ್ಲ. ಇದ್ಯಾಕೆ ಹೀಗೆ ಅಂದ್ರೆ ತುಂಬಾ ಸಾರಿ ನಾವು ಕಟ್ಟ್ ಕೊಳ್ಳೊ ಆಸೆ ಆಕಾಂಕ್ಷೆಗಳಿಗೆ ರೆಕ್ಕೆ ಪುಕ್ಕ ಇರುತ್ತೆ ವಿನಃ ಸ್ಪಷ್ಟತೆ ಅನ್ನೋದು ಇರುವುದಿಲ್ಲ. ಏನೇ ಆದರೂ ನಾವೆಲ್ಲ ಮನುಷ್ಯರು. ಆಸೆ ಪಡೋದು, ಆಕಾಂಕ್ಷೆ ಇಟ್ಟುಕೊಳ್ಳೊದು, ಕನಸು ಕಾಣುವುದು ಎಲ್ಲಾ ಸಹಜವಾಗಿಯೆ ನಡೆಯುತ್ತೆ. ಆದರೆ ಅದರಲ್ಲಿ ಎಷ್ಟು ಸ್ಪಷ್ಟವಾಗಿದ್ದೇವೆ ಎನ್ನುವ ಉತ್ತರ ಮಾತ್ರ ನಮ್ಮ ಬಳಿ ಇರಬೇಕಷ್ಟೆ. ಅದಿಲ್ಲದಿದ್ದಾಗಲೆ ಸಮಸ್ಯೆ. ಹಾಗಾಗಿ ವಿಷ್ಯ ಏನೇ ಇರಲಿ, ಸಂಧರ್ಭ ಯಾವುದೇ ಬರಲಿ, ಆದರೆ ಸ್ಪಷ್ಟತೆಯನ್ನು ಮಾತ್ರ ಕಳೆದುಕೊಳ್ಳುವುದು ಬೇಡ.

ಅಂದಹಾಗೆ ಈ ಮೇಲಿನ ಸಂಭಾಷಣೆಯ ಸಾಲುಗಳು ಯಾರೋ ಇಬ್ಬರ ನಡುವೆ ನಡೆದುದಾದರೂ ಈ ಇಬ್ಬರ ಪ್ರಶ್ನೋತ್ತರಗಳು ನಮ್ಮೊಳಗೂ ಇರುವುದರಿಂದ ಸ್ಪಷ್ಟತೆಯ ಉತ್ತರಕ್ಕಾಗಿ ಪ್ರಶ್ನೆಯೂ ಕೂಡ ಸ್ಪಷ್ಟತೆಯಿಂದ ಕೂಡಿರಬೇಕಾಗಿರುತ್ತದೆ.

-ಮಧುಕರ್ ಬಳ್ಕೂರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x