ಮನುಷ್ಯನ ಒಳ್ಳೆತನ ಕೆಟ್ಟತನ ಎಲ್ಲದಕ್ಕೂ ಕಾಲ ಕ್ಷಣ ಕ್ಷಣವೂ ಉತ್ತರಿಸುತ್ತಿದೆ. ನನಗೆ ಎಲ್ಲವೂ ಗೊತ್ತು. ನಾನು ನನ್ನಿಂದಲೇ ಎಲ್ಲ ಅಂದಾಗಲೆಲ್ಲ ನೀನು ಅನ್ನುವುದು ಬರಿ ಒಂದು ಅಣು ಮಾತ್ರ ನಿನ್ನಿಂದ ಏನೇನೂ ಇಲ್ಲ ಅಂತ ಸೃಷ್ಟಿಕರ್ತ ಉತ್ತರಿಸುತ್ತಿದ್ದಾನೆ. ಬ್ರಹ್ಮಾಂಡವೇ ಅವನಗಿರುವಾಗ ಈ ಹುಳು ಮಾನವ ಏನೂ ತಾನೇ ಮಾಡಬಲ್ಲ. ಇಲ್ಲಿ ಏನಿದ್ದರೂ ಅದೂ ಕಾಕತಾಳೀಯ. ನೀನು ನಿನಗಾಗಿ ಮಾಡಿಕೊಂಡಿದ್ದು ಎಲ್ಲವೂ ತಾತ್ಕಾಲಿಕ. ಇವತ್ತು ನೀನು ಏನೇ ಅನುಭವಿಸುತ್ತಿದ್ದರೂ ಅದೆಲ್ಲವೂ ನಿನ್ನ ಉಪಯೋಗಕ್ಕಾಗಿ ಮಾಡಿಕೊಂಡಿದ್ದು. ಅತಿಯಾದ ಬುದ್ಧಿ ಎಲ್ಲವನ್ನೂ ಕೊಡಬಹುದು ಹಾಗೇ ಎಲ್ಲವನ್ನು ಕಿತ್ತುಕೊಳ್ಳಬಹುದು. ಇದರ ಮಧ್ಯೆ ಜ್ಞಾನವನ್ನು ವಿಜ್ಞಾನವನ್ನಾಗಿ ಮಾಡಿ ನಿನಗೆ ಬೇಕಾದದ್ದನೂ ಪಡೆಯಲು ಪ್ರಯತ್ನಿಸಿದವನು ನೀನು. ಇವತ್ತು ನೀನು ಮಾಡಿಕೊಂಡಿರುವುದರಿಂದಲೇ ಎಲ್ಲವೂ ನಿನ್ನ ವಿರುದ್ಧ ಯುದ್ಧಕ್ಕೆ ಸಿದ್ಧವಾಗಿದೆ. ನಿನ್ನ ಮೇಲೆ ಎಲ್ಲವೂ ದಾಳಿ ಮಾಡುತ್ತಿದೆ. ಇವತ್ತು ಬಂದಿರುವ ರೋಗ ಒಂದು ನೆಪ ಮಾತ್ರ. ಸೃಷ್ಟಿಯೇ ತಿರುಗಿ ಬಿದ್ದರೆ ನಿನಗೆ ಉಳಿಗಾಲವಿದೆಯೇ? ರೋಗ ಅನ್ನೋದು ಒಂದು ನೆಪ ಮಾತ್ರ. ಮನುಷ್ಯನ ಉದ್ದಂಡ ಮನಸ್ಥಿತಿಗೆ ಇದೆಲ್ಲವೂ ಏನೇನೂ ಅಲ್ಲ. ಆದರೂ ಮಾನವ ಬುದ್ಧಿ ಕಲಿಯಲಾರ.. ಅವನದೇನಿದ್ದರೂ ಇದೇ ಬಂಡಬಾಳು ಅದೇನಾಗುತ್ತೋ ಆಗಲಿ ಆನ್ನುವ ಉದಾಸೀನ ಭಾವ. ಅದಕ್ಕೆ ಇಂದೂ ಏನೇನೋ ದುರಂತಗಳು ಸಂಭಾವಿಸುತ್ತಿದೆ. ನಡೆಯಬಾರದೆಲ್ಲ ಈ ಪ್ರಕೃತಿಯಲ್ಲಿ ನಡೆಯುತ್ತಿದೆ.
ತಲೆಗೆ ಏರಿದ ಅಹಂಕಾರದ ಮದ ಕಾಲಿಗೆ ಇಳಿಯುತ್ತಿದೆ ನೋಡು. ಉಸಿರಾಡಲು ಭಯವಾಗಿ ಬೆದರಿ ಕುಳಿತಿರುವೆ. ಯಾವ ಉಸಿರಿನಿಂದ ನನಗೆ ಆಪತ್ತು ಇದೆಯೋ ಎಂದು ಮುಸುಕು ಧರಿಸಿರುವೆ. ಇದು ನಿನ್ನ ಸ್ಥಿತಿ. ಬೇಡ ಬೇಡವೆಂದು ಬೇಡಿಕೊಂಡರೂ ಸೊಕ್ಕು ಬಿಡದೆ ಪ್ರಕೃತಿಯನ್ನು ನಾಶ ಮಾಡಿದೆ. ಯಥೇಚ್ಛವಾಗಿ ಸಿಗುವ ಶುದ್ಧ ಗಾಳಿಗಿಂತಲೂ ಮನೆಯೊಳಗೆ ನಾಲ್ಕು ರೆಕ್ಕೆ ಕೊಡುವ ಗಾಳಿಗೆ ದೇಹ ಒಗ್ಗಿ ಹೋಯಿತು. ಇವತ್ತು ಒಂದು ಜೀವ ಉಳಿಯ ಬೇಕಾದರೆ ಆಕ್ಸಿಜನ್ ಅನ್ನುವ ಸಿಲಿಂಡರ್ ನ ಅವಶ್ಯಕತೆ ಇದೆಯಂತೆ. ಎಲ್ಲಿಗೆ ಬಂದು ನಿಂತಿತು ಮಾನವನ ಪರಿಸ್ಥಿತಿ.. ಯಾವುದರ ಪರಿಣಾಮವನ್ನು ಇಂದು ನಾವೆಲ್ಲ ಅನುಭವಿಸುತ್ತಿದ್ದೇವೆ. ಇದಕ್ಕೆಲ್ಲ ಉತ್ತರ ಯಾರಿಂದ ನಿರೀಕ್ಷೆ ಮಾಡಬೇಕು? ಬಹುಶಃ ಇದಕ್ಕೆಲ್ಲ ಕಾಲವೇ ಉತ್ತರಿಸಬೇಕು. ಕಾಲನ ಕೈಯಲ್ಲಿ ಕೈಗೊಂಬೆ ನಾವು. ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ.
ಇಷ್ಟಾದರೂ ಮನುಷ್ಯನ ಸ್ವಾರ್ಥ ಇನ್ನು ನಿಂತಿಲ್ಲ. ರೋಗದ ಹೆಸರಲ್ಲೂ ದಂಧೆ, ಮಿತಿಮೀರುತ್ತಿದೆ. ಈ ಸಂಕಷ್ಟದ ಕಾಲಕ್ಕೂ ಕಿತ್ತು ತಿನ್ನುವ ಪಾಪಿಗಳ ಜೊತೆ ಬದುಕು ಸವೆಯಬೇಕಾಗಿದೆ. ರಾಜಕೀಯದ ಗಾಳಕ್ಕೆ ಪಾಪದ ಜೀವಗಳು ನಲುಗುತ್ತಿವೆ. ಮಾಡಿದ ಪಾಪ ತುಂಬಿ ಉಕ್ಕುತ್ತಿದೆ. ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ. ಇದು ನ್ಯಾಯವೇ.? ಪಾಪಿಗಳ ಆಯುಷ್ಯಕ್ಕೆ ಶರಾ ಬರೆಯುವ ತಾಕತ್ತು ಆ ದೇವರಿಗೂ ಇಲ್ಲವಾಯಿತೇ? ಎಲ್ಲಿಂದ ಎಲ್ಲಿಗೆ ಈ ಸ್ಥಿತಿ. ? ಇಷ್ಟಾದರೂ ನಾವೂ ಯಾವತ್ತು ಬುದ್ಧಿ ಕಲಿಯಲಾರೆವೂ. ನಮ್ಮದು ಮರೆತು ಬಿಡುವ ಬುದ್ಧಿ. ಇವತ್ತು ಏನಿದಿಯೋ ಅದು ಇವತ್ತಿಗಷ್ಟೆ. ನಾಳೆ ಯಥಾ ಪ್ರಕಾರ ನಮ್ಮ ಜೀವನ ಮುಂದುವರಿಯುತ್ತದೆ. ಇನ್ನಷ್ಟು ಬೇಕಾದದ್ದನ್ನು ನಾವು ಮಾಡುತ್ತಲೇ ಹೋಗುತ್ತೆವೆ. ನಮಗೆ ಯಾವುದು ಬೇಕಾಗಿಲ್ಲ.ನಮ್ಮದು ಸ್ವಾರ್ಥದ ಬದುಕು. ಇಲ್ಲಿ ನಮಗೆ ಬೇಕಾದಾಗೆ ಬದುಕುವ ಭರದಲ್ಲಿ ನಾಳೆಯ ಭವಿಷ್ಯವನ್ನು ಮರೆಯುತ್ತೇವೆ.
ಇವತ್ತು ಮತ್ತೆ ಬದುಕು ಕತ್ತಲಾಗುತ್ತಿದೆ. ಲೋಕಕ್ಕೆ ಹರಡಿರುವ ಮಹಾಮಾರಿಯೊಂದು ಎಗ್ಗಿಲ್ಲದೆ ಜೀವ ಹಿಂಡುತ್ತಿದೆ. ಜಾತಿ ಭೇಧ ಶ್ರೀಮಂತ ಬಡವ ಅಂತ ಯಾರನ್ನು ನೋಡುತ್ತಿಲ್ಲ ಈ ರೋಗ. ಮನುಷ್ಯ ತತ್ತರಿಸಿ ಕಂಗಾಲಾಗಿದ್ದಾನೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾನೆ. ನಾನು ನನ್ನದೂ ಎನ್ನುವ ಆಹಂಕಾರಕ್ಕೆ ಮತ್ತೊಮ್ಮೆ ಪೆಟ್ಟು ಬಿದ್ದಿದೆ. ಅತ್ತ ಹೊರಗೂ ಅಲ್ಲ ಇತ್ತ ಒಳಗೂ ಅಲ್ಲ. ತ್ರಿಶಂಕುವಿನಂತ ಜೀವನವಾಗಿದೆ. ಒಳಗೆ ಕೂತರೆ ಹೊಟ್ಟೆಯ ಚಿಂತೆ. ಹೊರಗಡೆ ಹೋದರೆ ರೋಗದ ಭಯ. ಇನ್ನೆನೂ ಎಲ್ಲ ಮುಗಿದೆ ಹೋಯಿತು ಅಂತ ನಿಟ್ಟುಸಿರು ಬಿಟ್ಟವರನ್ನು ಮತ್ತೆ ಉಸಿರು ಬಿಗಿ ಹಿಡಿಯುವಂತೆ ಮಾಡಿದ ಈ ವೈರಸ್ ಮನುಷ್ಯನ ಜೀವ ಜೀವನವನ್ನು ಇನ್ನಿಲ್ಲದಂತೆ ಅಲ್ಲಾಡಿಸುತ್ತಿದೆ. ಹೇ ಭಗವಂತ ನೀನೇ ಕಾಪಾಡು ಅಂತ ಪ್ರತಿಯೊಬ್ಬರು ಅವನನ್ನು ಕೇಳಿಕೊಳ್ಳುವಂತಾಗಿದೆ. ಅದೇನಾಗಿ ಹೋಯಿತು ನಮ್ಮ ಪರಿಸ್ಥಿತಿ. ಯಾವ ತಪ್ಪಿಗೆ ಈ ಶಿಕ್ಷೆ.? ಎಲ್ಲಿವರೆಗೆ ಈ ಭಯದ ಛಾಯೆ? ಬಹುಶಃ ಇದಕ್ಕೆ ಉತ್ತರ ಸದ್ಯಕ್ಕೆ ಯಾರ ಬಳಿಯೂ ಇರಲಾರದು.
ಮನುಷ್ಯನನ್ನು ಮನುಷ್ಯ ಅರ್ಥ ಮಾಡಿಕೊಳ್ಳುವ ಕಾಲ ಇನ್ಯಾವಾಗ ಬರುತ್ತದೆ? ಸದಾ ಭಯದಲ್ಲಿ ಬದುಕುವ ನಮಗೆ ಇನ್ನು ಯಾವಾಗ ಸತ್ಯ ದರುಶನವಾಗುತ್ತದೆ.? ಸ್ವಾರ್ಥ ತುಂಬಿದ ಪ್ರಪಂಚವಿದು. ಯಾರಿಗೆ ಏನೇ ಆಗಲಿ ನಾನು ಮಾತ್ರ ಸುಖವಾಗಿ ಇರಬೇಕು ಅಂತ ಬಯಸುವವರೆ ಇರುವಾಗ ಇನ್ನೇನೂ ತಾನೇ ಅಪೇಕ್ಷಿಸಲು ಸಾಧ್ಯ. ಅದೆಂತಹ ಘೋರ ಪರಿಸ್ಥಿತಿ ಬಂದರು ನಮಗೆ ಬುದ್ಧಿ ಬರುವುದು ಅಷ್ಟರಲ್ಲೇ ಇದೆ. ನಾನು ನನ್ನದು ನನ್ನಿಂದ ಅನ್ನುವವರ ಮಧ್ಯೆ ಬದುಕುವಾಗ ಎಲ್ಲವನ್ನೂ ಸಹಿಸಲೇಬೇಕು.
ಸಮಯ ಸದ್ದಿಲ್ಲದೆ ಸರಿಯುತ್ತಿದೆ. ಹಗಲು ರಾತ್ರಿಗಳ ಮಧ್ಯೆ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಆದರೆ ಈ ಭೂಮಿ ಮೇಲೆ ಬದುಕುವ ನಮ್ಮ ಜೀವನ ಮಾತ್ರ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಇವತ್ತಿದ್ದವರು ನಾಳೆ ಇರುತ್ತಾರೆ ಅನ್ನುವ ಯಾವ ಕಲ್ಪನೆಯೂ ನಮಗಿರುವುದಿಲ್ಲ. ಇವತ್ತಿನ ಆರೋಗ್ಯ ನಾಳಿನ ಭಾಗ್ಯ ಅಂತೀವಿ. ಆದರೆ ಆ ಭಾಗ್ಯವೇ ಕೈಕೊಟ್ಟರೆ ಉಳಿಗಾಲವಿದೆಯೇ. ನಮ್ಮಲ್ಲಿ ಕಲ್ಪನೆಗೂ ಮೀರಿದ ಒಂದು ಶಕ್ತಿಯಿದೆ. ಅದು ಆಡಿಸದಂತೆ ಆಡುವವರು ನಾವು. ಆದ್ರೂ ನಾವು ನಂಬಿರುವ ನಂಬಿಕೆಯನ್ನು ಉಳಿಸಿಕೊಂಡು ಬದುಕಲು ಪ್ರಯತ್ನಿಸುತ್ತೇವೆ. ಅದೇನೆ ಆದರೂ ಈ ಭೂಮಿ ಮೇಲೆ ಇರುವಷ್ಟು ದಿನ ಬದುಕ ಸವೆಯಲೇ ಬೇಕು. ಯಾವ ಕಾಲಕ್ಕೆ ಏನೂ ಆಗಬೇಕೋ ಅದನ್ನು ಆ ಕಾಲನೇ ನಿರ್ಧರಿಸುತ್ತಾನೆ. ಮನುಷ್ಯ ಇಲ್ಲಿ ನಿಮಿತ್ತ ಮಾತ್ರ. ಆದರೂ ಕೆಲವೊಮ್ಮೆ ಜವಾಬ್ದಾರಿ ಮರೆತು ಮನುಷ್ಯ ಮೃಗವಾದರೇ ಅದಕ್ಕೆ ಆ ದೇವರು ಇಂತಹ ಪರಿಸ್ಥಿತಿಯನ್ನು ತಂದಿಡುತ್ತಾನೆ ಅನ್ನುವ ಸತ್ಯವನ್ನು ಯಾರು ಮರೆಯಬಾರದು. ಬದುಕಿನ ಗುದ್ದಾಟದಲ್ಲಿ ಮನುಷ್ಯ ಒಳ್ಳೆತನಕ್ಕಾಗಿ ಬದುಕಿದಾಗ ಅದೆಂತಹ ಸಂದಿಗ್ಧದ ಪರಿಸ್ಥಿತಿಯಲ್ಲೂ ಉತ್ತಮವಾಗಿ ಬದುಕುಬಲ್ಲ. ಮಾನವೀಯತೆ ಒಂದಿದ್ದರೆ ಸಾಕು ಮತ್ತೆಲ್ಲವನ್ನೂ ಜಯಿಸಬಲ್ಲ.
–ಪೂಜಾ ಗುಜರನ್.