ಮೂಕರೋಧನೆ
ವರುಷದಿಂದ ವರುಷಕ್ಕೆ
ಹೆಚ್ಚಿದೆ ನೇಸರನ ತಾಪ
ಉರಿಬಿಸಿಲಿಗೆ ನಲುಗಿ
ತಾಳ್ಮೆಯ ತಾಯಿಗೆ ಬಂದಿದೆ ಕೋಪ ||
ಬರದ ನೆಲದಲ್ಲಿ ಜಲವಿಲ್ಲ
ಉಳುವ ಯೋಗಿಗೆ ಒಲವಿಲ್ಲ
ನಿಸರ್ಗದೊಳಂತೂ ಚೆಲುವಿಲ್ಲ
ಸೃಷ್ಟಿ ಸಂಕುಲಕ್ಕೆ ಉಳಿವಿಲ್ಲ ||
ಅಳಿಯುತಿದೆ ಪಾವನದ ಎಲರು
ಬಣಬಣಗುಟ್ಟುತಿದೆ ಹಸಿರಿನ ಉಸಿರು
ಒಡಲ ಕ್ಷಾಮಕೆ ವೈದ್ಯನಾರು
ಖಗ ಮೃಗಗಳಿಗೆ ಎಲ್ಲಿದೆ ಸೂರು? ||
ಗೋಳಿನ ಬಾಳೊಳಗೂ ನೀನಾದೆ ಮಾನ್ಯತೆ
ಸಜೆಯಾದರೂ ಧರೆಯೂಡಿದೆ ನಿನಗೆ ಧನ್ಯತೆ
ಪ್ರತಿಯೊಂದಕ್ಕೂ ನಿನ್ನದೇ ಮಾರ್ನುಡಿ
ಬೆಲೆಯಿಲ್ಲದ ಹೊತ್ತಿಗೆಗೆ ಬೇಕಿಲ್ಲ ಮುನ್ನುಡಿ ||
-ಕ.ಲ.ರಘು.
ಮೆಟ್ಟಿನ ಹುಡುಗ
ಹತ್ತಲ್ಲದ ಹೊತ್ತಿನಲ್ಲೂ
ಹೊಲಿಯುತ್ತಿದ್ದಾನೆ… ತಿಕ್ಕುತ್ತಿದ್ದಾನೆ …
ಕಂಡವರ ಕೆರ ಹಿಡಿದ ಶೂಗಳನ್ನು.
ಉರಿಬಿಸಿಲಿಗೆ ಮೈಯ್ಯೊಡ್ಡಿ,
ಹರಕು ಮುರುಕಿನ ಕೊಡೆಯಡಿ
ಬೆವರುತ್ತಾ,
ಬೆವರನ್ನೇ ರಕ್ತದಂತೆ ಬಸಿದು,
ಎಣ್ಣೆಯಂತೆ ಹಚ್ಚಿ…
ಕಾಯುತ್ತಿವೆ…
ಮತ್ತಷ್ಟು ಸಾಲುಗಟ್ಟಿವೆ ಕಾರುಗಳು,
ಅವನ ರಕ್ತ ಬಸಿಯಲು..!
ತಂಪಿನಿಂದಿಳಿದು
ಕೊನೆಯ ನಾಲ್ಕು ಹೆಜ್ಜೆ
ನೆಲಕೂರಲು ಅನುಮಾನಿಸುತ್ತಾ…
ಎಷ್ಟು ತಿಕ್ಕಿದರೇನು..?
ಬಸಿದರೆಷ್ಟೇನು..?
ಬಸಿದಷ್ಟೂ ಬಸಿಯುತ್ತಲೇ ಇದೆ
ಹಸಿವಿನುರಿ ಜ್ವಾಲೆ…!
ಹೊಲಿಯುತ್ತಲೇ ಸಾಗಿದೆ…
ಅವನ ಸೋತ ಕಣ್ಣುಗಳು,
ಕಾರಿನೊಳಗೆ ತಿನಿಸಿಷ್ಟನ್ನು ತಿಂದು,
ಮುಖಕುಜ್ಜಿ, ನೆಲಕೆಸೆದು
ತಂಪಿನೊಳಗೂ ಬೆವರುವ
ಮಕ್ಕಳನ್ನು ಕಾಣಲು…
ಹರಿಯುತ್ತಲೇ ಇದೆ
ಬೆವರಿನ ಧಾರೆ…!
ಮತ್ಯಾರೋ ಕೈಚೀಲದಲ್ಲಿ ತಂದು
ಎಸೆದಿದ್ದಾರೆ ಅವನತ್ತ…
ಅವನ ಚಿಂದಿಯಾದ ಕರಾಳ
ಭವಿಷ್ಯದಂತಹ ತೂತುಬಿದ್ದ
ಹಿಮ್ಮಡಿಯ ಚಪ್ಪಲಿಗಳನ್ನು.
ಸಂಜೆಯಾಗುತ್ತಲೇ ನಯವಾಗಿ ಎತ್ತಿಟ್ಟು,
ಒಪ್ಪವಾಗಿ ಜೋಡಿಸುತ್ತಿದ್ದಾನೆ.
ನಾಳೆಗಳ ಕನಸಿನ ಹೂ ಹಾದಿಯನ್ನು
ಮೆಟ್ಟಿ ನಿಂತು ನೀರ್ಕುಡಿಯಲು ಬಂದ
ಚಿಂದಿ ಚಪ್ಪಲಿಗಳನ್ನು.
ಹೊರಟು ನಿಂತಿದ್ದಾನೆ
ಸೋತ ಕನಸುಗಳೊಡನೆ…
ಮುಂದೋಡುತ್ತಿದ್ದ ನೆರಳೂ
ಈಗ ಸೋತು ಹಿಂಬಾಲಿಸುತ್ತಿದೆ…
ನಾಳೆ ಬರಬಹುದು
“ನೆರಳೂ ಜಿಗಿದು ಮುಂದೋಡಬಹುದು…”
-ರಕ್ಷಿತ್ ಮೇಲಾರಿಕಲ್ಲ್
ಕ್ರಾಂತಿ ಗೀತೆ
ನೋಡದ ನೋಟ ಕೇಳದ ಪಾಠ
ವೇಗದ ಓಟ ನಿಮಗೆ ತುಂಟಾಟ, ನಮಗೆ ಸಂಕಟ
ಇದು ನಮ್ಮ ಕ್ರಾಂತಿಗೀತೆ
ಮನ ನೊಂದವರಿಗಾಗಿ ಮನನೊಂದು ಹೆಣೆದ ಗೀತೆ
ನ್ಯಾಯಕ್ಕೆ ತಕ್ಕಡಿಯಾಗುವ ಗೀತೆ
ಉತ್ತೋರು ನಾವು ಬಿತ್ತೋರು ನಾವು
ಬೆಲೆಯಿಲ್ಲದ ಬಾಣಲೆಯಲ್ಲಿ ಅರೆಬೆತ್ತಲಾಗಿ ಬೆಂದೂರು
ಹಸಿದವರ ನೆತ್ತರ ಕುಡಿದೋರು
ಕಾಸಿಗೆ ಕಾನೂನು ಕೊಂಡು ಸುಖನಿದ್ರೆ ಮಾಡೋರು
ಸ್ವತಂತ್ರರು ನೀವು, ಅತಂತ್ರರು ನಾವು
ಕಷ್ಟಪಟ್ಟು ಓದಿದೋರು
ಕಷ್ಟದಲ್ಲಿ ಉಳಿದು ಪ್ರಥಮ ದರ್ಜೆಗೆ ಸುಸ್ತಾದೋರು ನಾವು
ಹಾಡಿಕೊಂಡು ಕುಣಿದೋರು
ಪ್ರಶ್ನೆಪತ್ರಿಕೆಯನ್ನು ಲೀಕ್ ಮಾಡಿ ರ್ಯಾಂಕ್ ಪಡೆದೋರು ನೀವು
ನಮಗೆ ಕಾಲವಿಲ್ಲ.. ನಿಮ್ಮ ಹುಚ್ಚಾಟಕ್ಕೆ ಕೊನೆಯಿಲ್ಲ!!
ದುಡ್ಡಿಗಾಗಿ ಅಲೆದೋರು
ಅಲೆದಲೆದು ಕೂಡಿಸಿ ಕನಸ ಕಟ್ಟಿಕೊಂಡೋರು ನಾವು
ಘರ್ಜನೆಯ ಬೀರಿದೋರು
ರೈತೋದ್ಧಾರದ ಹೆಸರಲ್ಲಿ ನಮ್ಮ ಕನಸನ್ನೇ ತುಳಿದೋರು
ಗೆಲುವು ನಿಮ್ಮ ಹೆಸರಲ್ಲಿ.. ಸಂಪತ್ತು ನಿಮ್ ಹೆಸರಲ್ಲಿ..
ಅನ್ಯಾಯ ಮಾತ್ರ ನಮ್ ಹೆಸರಲ್ಲಿ..
ಕಾವೇರಿ ಬಿಟ್ಟೋರು
ನಗುವಿನಲಿ ನೋವ ಮುಚ್ಚಿಟ್ಟು ಕೊನೆಯಲ್ಲಿ ಉಳಿದೋರು
ಬರಿಗೈಲಿ ಬಂದೋರು
ಅಧಿಕಾರ ಕಸಿದು ಕೈತುಂಬಾ ಉಂಡು ತೇಗಿದೋರು
ನಿಮ್ಮ ನೆಣ ಕರಗಲಿಲ್ಲ.. ನಮ್ಮ ಗೋಳು ಕೇಳೋರಿಲ್ಲ..
ಬೆವರ ಸುರಿಸಿದೋರು
ನಿಮ್ಮ ಕುಟುಂಬವನ್ನು ಎಡೆಬಿಡದೆ ಕಾಯೋರು
ಮೋಸದಾಟ ಕಲಿತೋರು
ಕಾಯುವ ನೆಪದಲ್ಲಿ ಅತ್ಯಾಚಾರವೆಸಗಿ ಕಾಡುವವರು
ತಪ್ಪೆಲ್ಲಾ ನಮ್ಮದು.. ನಿಮ್ಮನ್ನು ಆರಿಸಿದುದು!!
ಬಚ್ಚಿಟ್ಟ ನಿಮ್ಮ ಸುಲಿಗೆ ವಂಚನೆಗಳಿಗೆ
ತಿರುಮಂತ್ರ ಸಿದ್ಧವಾಗುತೈತಿ
ವಿಪರ್ಯಾಸದ ನನ್ನ ಕೂಗು
ಮುಗಿಲು ಮುಟ್ಟಿದ ಓಲೆ ಬಂದೈತಿ
ಭೋರ್ಗರೆವ ನಿಮ್ಮ ಸೊಕ್ಕು ಮುರಿಯುವ
ಶಸ್ತ್ರ ತಯಾರಾಗುತೈತಿ
ನಿಮ್ಮಾಣೆ ನನ್ನಾಣೆ ಜಗದ್ಗುರು ಭೈರವೇಶ್ವರನಾಣೆ
ಬರುತೈತಿ ಬರುತೈತಿ ನಿಮ್ ಹುಚ್ಚಾಟಕ್ಕೆ
ತೆರೆ ಎಳೆಯುವ ಕಾಲ ಬರತೈತಿ..
ಇದು ನಮ್ಮ ಕ್ರಾಂತಿಗೀತೆ
ಮನ ನೊಂದವರಿಗಾಗಿ ಮನನೊಂದು ಹೆಣೆದ ಗೀತೆ
ನ್ಯಾಯಕ್ಕೆ ತಕ್ಕಡಿಯಾಗುವ ಗೀತೆ!!
-ಅನಂತ ಕುಣಿಗಲ್
“ಒಳಗಣ್ತೆರೆದು ನೋಡು”
ನೀನಾಡಿದ ಮಾತಿಗೆ,
ನೀ ತೋರಿದಾ ಸಿಟ್ಟಿಗೆ,
ನಿನ್ನ ಮೇಲಿನ ಪ್ರೀತಿಯಾಗಲಿ,
ಒಲವಾಗಲಿ ಕಡಿಮೆಯಾಗಲಿಲ್ಲ.
ನಿನ್ನ ಚುಚ್ಚು ಮಾತಿಗೆ,
ಗಾಯದ ಮೇಲೆ ಬರೆ ಹಾಕಿ ಉಪ್ಪು ಸವರುವಂತಿದ್ದರು,
ನಿನ್ನ ಮೇಲಿನ ಪ್ರೀತಿಯಾಗಲಿ,
ಒಲವಾಗಲಿ ಕಡಿಮೆಯಾಗಲಿಲ್ಲ.
ನನ್ನ ಪರರೊಂದಿಗೆ ಹೋಲಿಸಿ,
ಅತ್ಯಂತ ಕೆಳಮಟ್ಟದಲ್ಲಿ ನೋಡಿದಾಗಲು,
ನಿನ್ನ ಮೇಲಿನ ಪ್ರೀತಿಯಾಗಲಿ,
ಒಲವಾಗಲಿ ಕಡಿಮೆಯಾಗಲಿಲ್ಲ.
ಎಲ್ಲರೆದುರು ಹಂಗಿಸಿ,
ಅತ್ಯಂತ ಹಿನಾಯವಾಗಿ ನಡೆಸಿಕೊಂದಾಗಲು
ನಿನ್ನ ಮೇಲಿನ ಪ್ರೀತಿಯಾಗಲಿ,
ಒಲವಾಗಲಿ ಕಡಿಮೆಯಾಗಲಿಲ್ಲ.
ಇತರರಿಗೆ ಸಹಾಯಮಾಡಿ,
ಎನಗೆ ಸಹಾಯ ಮರೆತಿರುವೆ ಎಂದ ಮಾತ್ರಕ್ಕೆ,
ನಿನ್ನ ಮೇಲಿನ ಪ್ರೀತಿಯಾಗಲಿ,
ಒಲವಾಗಲಿ ಕಡಿಮೆಯಾಗಲಿಲ್ಲ.
ನನ್ನ ಮೇಲಿನ ದೂರು-ದುಮ್ಮಾನಗಳು,
ಆರೋಪ ಪಟ್ಟಿ ಸಲ್ಲಿಸಿದಾಗಲೂ,
ನಿನ್ನ ಮೇಲಿನ ಪ್ರೀತಿಯಾಗಲಿ,
ಒಲವಾಗಲಿ ಕಡಿಮೆಯಾಗಲಿಲ್ಲ.
ನನ್ನದೇನು ತಪ್ಪಿಲ್ಲದಿದ್ದರೂ,
ರೋಷದಿಂದ ಪ್ರಶ್ನಿಸಿದಾಗಲು,
ನಿನ್ನ ಮೇಲಿನ ಪ್ರೀತಿಯಾಗಲಿ,
ಒಲವಾಗಲಿ ಕಡಿಮೆಯಾಗಲಿಲ್ಲ.
ಸಿಟ್ಟಿಂದ ದೂರಹೋಗಬೇಕೆಂಬ,
ಒಂಟಿಯಾಗಿರಬೇಕೆಂಬ ಬಯಕೆ ಬಂದಾಗಲು,
ನಿನ್ನ ಮೇಲಿನ ಪ್ರೀತಿಯಾಗಲಿ,
ಒಲವಾಗಲಿ ಕಡಿಮೆಯಾಗಲಿಲ್ಲ.
ಇದೋ ನನ್ನದೊಂದು ಭಿನ್ನಹ…
ಕೋಪ, ಅಹಂಕಾರ, ದ್ವೇಷ, ಇತ್ಯಾದಿ ಬದಿಗೊತ್ತಿ ಒಳಗಣ್ತೆರೆದು ನೋಡು.
ಆಗಲು ಹೇಳುವೇನು,
ನಿನ್ನ ಮೇಲಿನ ಪ್ರೀತಿಯಾಗಲಿ,
ಒಲವಾಗಲಿ ಕಡಿಮೆಯಾಗಲಿಲ್ಲವೆಂದು.
–ರಾಘವೇಂದ್ರ ಪಟಗಾರ
ಬದುಕು
ಹಾರಾಡ ಬಯಸುವೆ ಆಗಸದೆತ್ತರಕೆ
ಹಕ್ಕಿ ಬಳಗದಂತೆ..
ಕನಸುಗಳ ಮೂಟೆ ಹೊತ್ತ ಮನ
ಹಾರಲು ರೆಕ್ಕೆಯ ಬಯಸುತಿದೆ..
ಕಿಟಕಿಯ ಮರೆಯಿಂದ ಕಾಣುವ ಬೆಳಕು
ಬದುಕ ಬೆಳಗುತಿರೆ ಎಂದು ಆಶಿಸುತ್ತಿದೆ..
ಮುಂಜಾನೆಯ ಸೂರ್ಯನಂತೆ ದಿಗಂತದಿ
ನಾನೂ ಬೆಳಗಬೇಕು..
ಗುಟುಕಬೇಕು ಹಕ್ಕಿಗಳ ಇಂಚರದಂತೆ
ನನ್ನೀ ಕನಸುಗಳ ಸಾಲನು..
ನುಡಿಗಳನು ಪೋಣಿಸುವಂತೆ ಸುಲಭವಲ್ಲ ಬಾಳು
ಮಾತಿಗೆ ಮೀಸಲಾದ ಧನಾತ್ಮಕ ಚಿಂತನೆ
ಬಾಳಿಗೆ ಕಾಲಿಟ್ಟಿಲ್ಲ..
ಸ್ನೇಹ ನಟಿಸುವರೆ ಹಲವರು, ಅದು
ಅರಿತರೂ ಮೌನ ಮುರಿಯದೆ ಇರುವುದು..
ಕನಸುಗಳನು ಬೆನ್ನಹತ್ತಿದರೆ ನಾವು
ಮುಂದೊಮ್ಮೆ ನನಸಾಗಿ ಬರುವುವು..
ಎಲ್ಲಕ್ಕಿಂತ ಹೊಂದಿಕೆಯೆಂಬುದು ಮುಖ್ಯ,
ಅದಿಲ್ಲದೆ ಹೋದರೆ ಕನ್ನಡಿಯ ಚೂರುಗಳಂತೆ
ಒಡೆದು ಹೋಗುವುದು ಬದುಕು..
-ಅನುರಾಧ ಕಲ್ಲಂಗೋಡ್ಲು