‘ಕುಂದಾಪ್ರ ಕನ್ನಡ ನಿಘಂಟು’ ಪುಸ್ತಕದ ಕುರಿತು: ಸಾವಿತ್ರಿ ಶ್ಯಾನುಭಾಗ

ಪುಸ್ತಕ: ‘ಕುಂದಾಪ್ರ ಕನ್ನಡ ನಿಘಂಟು’
ಪ್ರಧಾನ ಸಂಪಾದಕರು: ಪಂಜು ಗಂಗೊಳ್ಳಿ
ಸಂಪಾದಕರು: ಸಿ. ಎ. ಪೂಜಾರಿ, ರಾಮಚಂದ್ರ ಉಪ್ಪುಂದ
ಬೆಲೆ: ೬೦೦ ರೂಪಾಯಿ

ಕರ್ನಾಟಕದಲ್ಲಿ ಕನ್ನಡವನ್ನು ಪ್ರಾದೇಶಿಕವಾಗಿ ೧೮ ಶೈಲಿಯಲ್ಲಿ ಬಳಸಲಾಗುತ್ತದೆ ಎಂದು ಕೇಳಿದ್ದೇನೆ. ಧಾರವಾಡ ಕನ್ನಡ, ಮಂಗಳೂರು, ಹಾಸನ, ಉತ್ತರ ಕನ್ನಡದ ಕನ್ನಡ ಹೀಗೆ ನಾನಾ ಶೈಲಿಗಳು. ಮಂಗಳೂರು ಭಾಷೆ ಶುದ್ಧ ವ್ಯಾಕರಣದಂತೆ ಎಲ್ಲಿಗೆ ಹೋಗುವುದು ಮಾರಾಯ ಎಂದು, ಧಾರವಾಡದಲ್ಲಿ ಎಲ್ಲಿಗ್ ಹೊಂಟಿ, ಉತ್ತರ ಕನ್ನಡದಲ್ಲಿ ಹವ್ಯಕ ಭಾಷೆಯಲ್ಲಿ ಒಂದು ರೀತಿ, ಹೀಗೆ ಬೇರೆ ಬೇರೆ ಶೈಲಿಯಲ್ಲಿ ಮಾತನಾಡಲಾಗುವುದು ಕನ್ನಡ ಭಾಷೆಯ ವೈಶಿಷ್ಟ್ಯ. ಕಲ್ಯಾಣಪುರ ಹೊಳೆಯಿಂದ ಶಿರೂರು ಭಟ್ಕಳ್ ತನಕ ಕೇಳಿಬರುವ ಒಂದು ವಿಶಿಷ್ಟ ಉಪಭಾಷೆ ಕುಂದಾಪ್ರ ಕನ್ನಡ. ‘ಹೊಯ್ಕ್ ಬರ್ಕ್’ ಎಂದು ನೀವೆಲ್ಲ ಕೇಳಿರಬಹುದಾದ ಭಾಷೆ. ಶಿಷ್ಟ, ಗ್ರಾಂಥಿಕ ಕನ್ನಡದಲ್ಲಿ ಕಂಡುಬರದ ಹಳಗನ್ನಡದ ಎಷ್ಟೋ ಪದಪ್ರಯೋಗಗಳು ಕುಂದಾಪ್ರ ಕನ್ನಡದಲ್ಲಿ ಇನ್ನೂ ಚಾಲ್ತಿಯಲ್ಲಿವೆ. ಇಂತಹ ಭಾಷೆಯ ನಿಘಂಟು ನಿಮ್ಮ ಕೈಗೆ ಸಿಕ್ಕರೆ ಹೇಗಾದೀತು?ಅದೇನು ಸಾಧ್ಯವೆನ್ನುವ ಕಾರ್ಯವೇ ಎಂದು ನೀವು ಕೇಳಬಹುದು?ಅದಕ್ಕುತ್ತರವೆಂಬಂತೆ ಪಂಜು ಗಂಗೊಳ್ಳಿಯವರು ಪ್ರಧಾನ ಸಂಪಾದಕರಾಗಿ ನಮ್ಮ ಮುಂದೆ ಇಟ್ಟಿರುವ ಬೃಹತ್ ಹೊತ್ತಿಗೆಯೇ ‘ಕುಂದಾಪ್ರ ಕನ್ನಡ ನಿಘಂಟು’

ಕುಂದಾಪ್ರ ಕನ್ನಡ ಶಬ್ದ ಮತ್ತು ನುಡಿಗಟ್ಟುಗಳ ಸಂಗ್ರಹವೆಂದರೆ ಸಾಲದು, ಅವುಗಳ ವಿವರಣೆ ಸಹಿತ ನಮ್ಮ ಮುಂದಿಟ್ಟು ಭಾಷೆಯ ಬೆಳವಣಿಗೆಗೆ ಸಹಾಯ ಮಾಡಿದ್ದಾರೆ ಎಂದರೆ ಅವರ ಪರಿಶ್ರಮವೆಷ್ಟಿರಬಹುದು. ೨೦೦೧ ರ ಜುಲೈನಲ್ಲಿ ಶಬ್ದಕೋಶಕ್ಕೆ ಶಬ್ದಗಳ ಭಂಡಾರ ರಚಿಸಲು ತೊಡಗಿದ ತಂಡ ಇಷ್ಟು ವರ್ಷ ಪಟ್ಟ ಪರಿಶ್ರಮದ ಫಲವೇ ಈ ಹೊತ್ತಿಗೆ. ಮೀನುಗಾರಿಕೆ, ಬೇಸಾಯ, ಯಕ್ಷಗಾನ, ನಾಗಪೂಜೆ, ಢಕ್ಕೆ ಬಲಿ, ಸೋಣೆ ಆರತಿ, ದೈವ-ಭೂತ-ನಾಗ ದರ್ಶನ, ಕಂಬಳ, ಕೋಳಿ ಅಂಕ ಹೀಗೆ ನಾನಾ ವೈಶಿಷ್ಟ್ಯದಿಂದ ಕೂಡಿದ ಕುಂದಾಪುರ, ಉಡುಪಿಯ ಕಲೆಗೆ ಅದರ ಭಾಷೆಯ ಸೊಗಡು ಸೇರಿಯೇ ಪ್ರಸಿದ್ಧಿ ಎನ್ನಬಹುದು. ಈ ಚಟುವಟಿಕೆಗಳಲ್ಲಿ ಬಳಸಲಾಗುವ ಶಬ್ದ ಸಂಪತ್ತು ನಮಗೆ ಬೇಕೇ ಬೇಕು. ಬಾಲ್ಯದಲ್ಲಿ ಆಡಿರುವ ಚನ್ನೆಮಣೆ, ಗುಡ್ನ, ಎಂಜಲ್ ಗಿಳಿ ಆಟ, ಬೋಯ ಹೀಗೆ ನಾನಾ ಆಟಗಳು ಇಂದಿನ ಮಕ್ಕಳಿಗೆ ಆಡಿಸಬೇಡವೇ? ಅದರ ಬಗ್ಗೆ ತಿಳುವಳಿಕೆಯನ್ನು ನಮ್ಮ ಮುಂದಿಟ್ಟಿದ್ದಾರೆ.

ಹೋತೇ, ಮಾಡ್ತೆ, ಕೊಡ್ತೆ ಹೀಗೆ ಶಬ್ದವನ್ನು ಸಂಕ್ಷಿಪ್ತಗೊಳಿಸುವುದು ಈ ಭಾಷೆಯ ಎದ್ದು ಕಾಣುವ ಲಕ್ಷಣ. ಜನಸಾಮಾನ್ಯರ ಆಡುಭಾಷೆಯಾಗಿರುವ ಕರಣ ಮಹಾಪ್ರಾಣದ ಬಳಕೆ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಒಂದು ಭಾಷೆ ಅಭಿವೃದ್ಧಿ ಹೊಂದಲು ಮಡಿವಂತಿಕೆ ತೋರಿ ನಮ್ಮ ಭಾಷೆಯ ಶಬ್ದಗಳ ಹೊರತು ಹೊಸತು ನಮಗೆ ಬೇಡ ಎಂದರೆ ಆದೀತೇ, ಈ ಭಾಷೆಯೂ ಅಷ್ಟೇ ಹಿಂದಿ, ಮರಾಠಿ, ಉರ್ದು, ಅರೇಬಿಕ್ ಇತ್ಯಾದಿ ಭಾಷೆಗಳಿಂದಲೂ ಕೆಲವು ಶಬ್ದಗಳನ್ನು ಎರವಲು ಪಡೆದಿದೆ. ಕಲಸಿ, ನಸೀಫ್, ಹರ್ಕತ್ ಇತ್ಯಾದಿ. ನುಡಿಗಟ್ಟುಗಳು ಈ ಭಾಷೆಯ ವಿಶೇಷ ಆಸ್ತಿ. ತಮಾಷೆ ಮಾಡುತ್ತಲೇ ಸಾಮಾಜಿಕ ವೈರುಧ್ಯತೆಗೆ ಚಾಟಿ ಏಟು ನೀಡುವ ಗುಣ ಇವಕ್ಕಿದೆ. ಬೈಗುಳಗಳಂತೆ ಕಂಡರೂ ಒಡಲಾಳದಲ್ಲಿ ವಿಶೇಷ ಅರ್ಥ ಇವಕ್ಕಿವೆ. ಸುಮಾರು ೧೭೦೦ ನುಡಿಗಟ್ಟುಗಳ ಸಂಗ್ರಹ ಈ ಹೊತ್ತಿಗೆಯಲ್ಲಿದೆ. ಎಲ್ಲವನ್ನು ಅಕಾರಾದಿಯಾಗಿ ಜೋಡಿಸಿ , ಅರ್ಥ ವಿವರಣೆಯೊಂದಿಗೆ ನಮ್ಮ ಮುಂದೆ ಇಟ್ಟಿದ್ದಾರೆ. ‘ಅಮಾಸಿ ಬಪ್ಪೊರಿಗೆ ಹುಣ್ಮಿ ತಡಿತ್ತಾ?’ಎಂಬ ಕಾಲ ಯಾರಿಗೂ ಕಾಯೋದಿಲ್ಲ ಎಂಬ ಸಂದೇಶ, ‘ಅಂದಿನ ಕಾಲು ಅಲ್ಲ, ವಂಡಾರ ಕಂಬ್ಳು ಅಲ್ಲ’ ಎಂಬ ವಯಸ್ಕರ ಗೊಣಗಾಟ, ‘ಆ ಮಳಿ ಬಂದಾಗ ಈ ಕೊಡಿ ಹಿಡ್ದ್ರ ಸೈ’ಎಂಬ ಕಷ್ಟ ಬಂದಾಗ ನೋಡಿದರಾಯಿತು ಎಂಬ ಮನೋಭಾವ, ‘ಆನಿ ಕೊರಳಿಗ್ ಗೆಂಟಿ ಬ್ಯಾಡ’ಎಂಬ ಆನೆ ಇರುವಿಕೆಗೆ ಗಂಟೆ ಕಟ್ಟುವ ಅಗತ್ಯವಿಲ್ಲ ಎಂಬ ಮಾತು ಹೀಗೆ ವಿವರಣೆ ಸಹಿತ ಅರ್ಥಭರಿತ ನುಡಿಗಟ್ಟುಗಳ ಸಂಗ್ರಹವಿದೆ.

ಆಂಗ್ಲ ಭಾಷಾ ವ್ಯಾಮೋಹದಿಂದ ಸ್ಥಳೀಯ ಭಾಷೆಗಳನ್ನು ನಿರ್ಲಕ್ಷಿಸಿ ಭಾಷೆ ನಶಿಸಿ ಹೋಗುವ ಪರಿಸ್ಥಿತಿ ಕೆಲವು ಭಾಷೆಗಳದು. ಸಣ್ಣ ಊರಿನಲ್ಲೂ ಮಕ್ಕಳನ್ನು ಸ್ಥಳೀಯ ಭಾಷಾ ಮಾಧ್ಯಮದ ಶಾಲೆಗೆ ಕಲಿಸಲು ಪಾಲಕರು ಹಿಂಜರಿಯುತ್ತಾರೆ. ಈ ಪರಿಸ್ಥಿತಿಯಲ್ಲಿ ಒಂದು ಭಾಷೆಯ ಶಬ್ದ, ನುಡಿಗಟ್ಟುಗಳನ್ನು ಸಂಗ್ರಹಿಸಿ ಸಾಮಾನ್ಯ ಜನರು ದಿನಬಳಕೆಯ ಉಪಯೋಗಿಸುವಂತೆ ಮಾಡುವುದು ನಮ್ಮೆಲ್ಲ ಆದ್ಯ ಕರ್ತವ್ಯ. ಬರಿ ಪುಸ್ತಕ ರಚಿಸಿದರೆ ಭಾಷೆ ಬೆಳವಣಿಗೆ ಆದೀತೇ ಎಂಬ ಮಾತು ಬರಬಹುದು. ಆದರೆ ಸಣ್ಣ ಪ್ರಯತ್ನವೂ ದೊಡ್ಡ ಪರಿಣಾಮ ಬೀರಬಹುದು. ಹಿಬ್ರೂ ಭಾಷೆ ಉಳಿಸಲು ಒಬ್ಬನೇ ಒಬ್ಬ ಶ್ರಮ ಪಟ್ಟು, ಆ ಭಾಷೆ ಉಳಿಸಲು ಪಟ್ಟ ಶ್ರಮದ ಬಗ್ಗೆ ನಾವು ಕೇಳಿದ್ದೇವೆ. ಅದೇ ರೀತಿ ಹನಿ ಹನಿ ಗೂಡಿ ಹಳ್ಳವೆಂಬಂತೆ ಪ್ರತಿ ಪ್ರಯತ್ನದಿಂದ ಭಾಷೆ ಉಳಿಸಲು ಸಾಧ್ಯವೇ ಸಾಧ್ಯ ಎಂಬ ನಂಬೋಣ.

ಸಾವಿತ್ರಿ ಶ್ಯಾನುಭಾಗ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x