ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 73): ಎಂ. ಜವರಾಜ್

-೭೩-

ಸರೊತ್ತು ಸರೀತಿತ್ತು

ಆ ಸರೊತ್ತಲ್ಲಿ
ವಯ್ನುಗ್ಗ ಮರದ ಕೊಂಬ ಮ್ಯಾಲ
ಗೂಕ್ಕ್.. ಗೂಕ್ಕ್.. ಗೂಕ್ಕ್..
ಗೂಗ ಗೂಕಾಕದು ಕೇಳ್ತಿತ್ತು

ಕತ್ಲು ಕವಿಕಂಡು ಏನೇನೂ ಕಾಣ್ದು

ನಾನು ತಡಿ ಮೂಲಲಿ
ಬೆಚ್ಗ ಬಿದ್ದಿರತರ ಅನ್ನುಸ್ತಿತ್ತು

ಆ ಮಾರ ಅದ್ಯಾವ್ ಮಾಯ್ದಲ್ಲಿ
ನಂಗೂ ಅರುವಾಗ್ದೆ ಇರತರ
ಕಿತ್ತೊಗಿದ್ದ ನನ್ ಮೂಲ ಮುಡ್ಕ
ಕೂದು ಕ್ವರುದು
ಗುದ್ದಿ ಹೊಲ್ದು
ಹದ ಮಾಡಿ
ಎದ್ದೋಗಿ ದಿಬ್ಗ ತಲ ಕೊಟ್ನ ಕಾಣಿ

ಆ ಮರದ ಕೊಂಬಲಿ
ಆ ಗೂಗ ಬುಟ್ಟೂ ಬುಡ್ದೆ
ಒಂದೆ ಸಮ್ಕ ಗೂಕಾಕ್ತ
ಆ ಗೂಕಾಕ ಗೂಗ ಸದ್ಗ
ಈ ಜೀವೂ ಅಳುಕ್ತ ಬೆಚ್ತ
ಎಚ್ರ ಆದಂಗಾಯ್ತು

ಎಚ್ರ ಆದ ಗಳುಗ್ಗ
ಇತ್ತಗ,
‘ಮೀಂಯ್ಞ್ಯಾಂವ್ ಮೀಂಯ್ಞ್ಯಾಂವ್’
ತಲ ಮ್ಯಾಲೆ ಇರತರ
ಕೊತ್ತಿ ಮೀಂವ್ಗುಟ್ಟ ಸದ್ದಾಯ್ತು

ಆ ಸದ್ಗ
ಸಂದಿ ಗ್ವಾಡವತ್ಲಿ
ಅದೆತರ ಇನ್ನೊಂದ್ ಕೊತ್ತಿ
ಇದ್ಕೂ ಜೋರಾಗಿ
‘ಮೀಂಯ್ಞ್ಯಾಂವ್ ಮೀಂಯ್ಞ್ಯಾಂವ್..’
ಅಂತ
ಬುಟ್ಟೂ ಬುಡ್ದೆ ಮೀಂವ್ಗುಟ್ತ
ನನ್ ದಿಗ್ಲೂ
ಅತ್ತಗು ಇತ್ತಗು ಓಡಾಡ್ತ
ಆ ಕತ್ಲೊಳ್ಗ
ನನ್ ಮೈಮ್ಯಾಕ್ಕ
ಅದೇನ ದಪ್ಪಂತ ಬಿದ್ದು
ಮ್ಯಾಗಿಂದ ಕೆಳಕ
ಅಮುಕಿ ಉಳ್ದಂಗಾಯ್ತು

ನಂಗ ದಿಗ್ಲಾಗಿ
ಕೂಗಕು ಆಗ್ದೆ
ಇರಕು ಆಗ್ದೆ
ಆ ಕತ್ಲೊಳ್ಗ ಕತ್ಲಾಗಿ ಇರವತ್ಲಿ
‘ನಾನು ಕಣಣ್ಣ ಗುಂಡ್ಕಲ್ಲು
ಒಳ್ಕಲ್ ಮ್ಯಾಲ ಮನ್ಗಿದ್ದಿ
ಕೊತ್ತಿ ಬಂದು ಅರುಚ್ತ ಅರುಚ್ತ
ಒಂದಾಪ್ಗ ನೆಗಿತು ಕಣಣ್ಣ
ಅದು ನೆಗ್ದ ರಬ್ಸುಕ್ಕ
ನಾನಂಗೆ ಉಳ್ಕಂಡಿ ಕಣಣ್ಣ..’
ಅಂತ
ಆ ಕತ್ಲೊಳ್ಗ ಗುಂಡ್ಕಲ್ಲು
ಮಾತಾಡ್ತ ಇರದು ಕೇಳ್ತಿತ್ತು.

ಆಗ,
ಉಸುರ ಮ್ಯಾಕ್ಕ
ಎತ್ತಿ ಬುಟ್ಟಂಗಾಗಿ
‘ಆಯ್ತು ಬುಡು’ ಅಂದಿ.

ಒಳಗ ,
‘ಏಯ್ ಕತ್ತ ಲೌಡಿ’
‘ಏಯ್ ಬಿದ್ಕ ನಾಯಿ
ಕಿಸಿ ಅಂದ್ರ ಕಿಸಿದೆ
ಲೌಡಿನಂತ ಲೌಡಿ’ ಅನ್ನದು
ಮನ ಬಾಗ್ಲ
ಸೀಳ್ಕಂಡು ಗಲಕಾಕ ಸದ್ದು
ಆ ಸರೊತ್ತುನ ಗವ್ಗತ್ಲು
ಸುಮ್ನ ಮನಿಕಂಡು ಕೇಳ್ತಿತ್ತು

‘ಆ ಅಯ್ನೋರು
ಹೊಟ್ಟಲುಟ್ಟ ಮಗುಳ್ನು ಬುಡ್ದೆ
ಅನ್ಸರ್ಣಿ ಮಾಡ್ಕಂಡಿದ್ರಂತ..
ಅದು ಬಸ್ರಾಗಿ ಮೊಖ ತೋರಕಾಗ್ದೆ
ಮನ ಬುಟ್ಟು ಹೊಯ್ತಂತಾ..’ ಅಂತ
ಗುಂಡ್ಕಲ್ಲು ಗೊಣುಕ್ತು.

‘ಊ್ಞ.. ಆದ್ರ
ಮನ ಬುಟ್ಟು ಹೋದ ಮಾತು ಅಲ್ಲ
ಆ ಚೆಂಗುಲಿಗ ಗಂಟಾಕಿ
ತಲ ತೊಳ್ಕಂಡ್ಮಾತು..’ ಅಂದಿ

‘ಆ ಚೆಂಗುಲಿನ ಪರ್ಶು
ಹೊಡ್ದು ಸಾಯ್ಸುದ್ನಂತ
ಅಂವ ಸತ್ಮೇಲ ಸವ್ವಿ ಕಾಣ್ದಂತ’

‘ಅದೇನ ಕಾಣಿ’

‘ಆ ಅಯ್ನೋರ್ ಪಾದ
ಹೋದ್ತವೆಲ್ಲ ಇರ್ತಿದೈ
ಅದೇನ ಕಾಣಿ ಅಂತಿದೈ’

‘ಅಯ್ಯೋ ಒಂದ್ಸಲ
ಹಿಂಗೆ ಸರೊತ್ತು
ಆಗ ಒಂದೆಣ್ ದನಿ ಕೇಳ್ದಿ
ನಂಗ ಗೆಪ್ತಿ ಇರ ದನಿನೆ ಅನ್ನುಸ್ತು
ಈಗ ನೀನೆಳ ಮಾತು ಕೇಳ್ತಿದ್ರ
ಆ ಸರೊತ್ಲಿ ಬಂದಿದವ
ಆ ಸವ್ವಿನೆ ಅಂತ ಕಾಣುತ್ತ’

‘ಆ ಸವ್ವಿ ಇಲ್ಗು ಬಂದಿದ್ದ
ಆಗ್ಲು ಇಂತ ಸರೊತ್ತೆ
ಕಂಕುಳ್ಳಿ ಕೂಸಿತ್ತು
ಈ ಮಾರ ಕುಡ್ದು ಬಿದ್ದಿದ್ನ
ಅವ್ನೆಡ್ತಿ,
ಗುಸುಗುಸು ಮಾತಾಡ್ತ
ಒಳಕ ಎಳ್ಕಂಡ’
ಅಂತನ್ನ ಮಾತು
ಗುಂಡ್ಕಲ್ ಬಾಯಿಂದ
ಉದುರಿ ಉದುರಿ ಬಿದ್ವಲ್ಲೊ..

ಆತರ ಉದುರಿ ಬಿದ್ದೊತ್ತಲ್ಲಿ
ಕವಿಕಂಡಿರ ಕತ್ಲೂ
ಬೆಳಕಾಗಿ ಕಾಣ್ತಲ್ಲೊ..

ಕಾಲೊ ನನ್ ಒಡಿಯ ಕಾಲಯ್ಯೊ

ನೀ ಸುಟ್ಟು ಬೂದಿಯಾದೆಲ್ಲೊ
ಆ ಪರ್ಶು ಜೈಲಾದ್ನಲೊ..
ಆ ಜೈಲಾದ ನಿನೈದ
ಆ ಪೋಲೀಸ್ರುನೂ ಕಣ್ತಪ್ಸಿ ಓಡಾಡ್ತವ್ನಲ್ಲೊ
ನೀ ಸಾಕಿ ಸಲ್ದ ಸವ್ವಿನೂ
ಆ ಸವ್ವಿ ಕರುಳ ಕುಡಿನೂ
ಅನಾಥ್ವಾಗಿ ಅಲಿತ ಇರದ ಕೇಳಿ
ನನ್ ಕರುಳು ಕಿತ್ತಗಾಯ್ತದಲ್ಲೊ

ಕಾಲೊ ನನ್ ಒಡಿಯ ಕಾಲಯ್ಯೊ..

ನಂಗ ಅಂಗ್ಳು ಒಣಿಕಂಡು
ಸಂಕ್ಟ ತುಂಬ್ಕಂಡಗಾಗಿ
ಕಣ್ಲಿ ನೀರು ಹರಿತಾ
ಆ ಸರೊತ್ತೂ ಸರಿತಾ
ಆ ಮರದ ಕೊಂಬ ಮ್ಯಾಲಿನ
ಗೂಗೂ ಗೂಕಾಕದ ನಿಲ್ಸಿ
ಅಲ್ಲೊಂದ್ ಇಲ್ಲೊಂದ್
ಕಾಗ ಕೂಗವತ್ಲಿ
ಕೆಮ್ತ ಕ್ಯಾಕುರುಸ್ತ
ಆ ಮಾರ ಎದ್ದು ಈಚ್ಗ ಬಂದು
ಮೋಟು ಬೀಡಿ ತಗ್ದು
ತುಟಿಗ ಕಂಚ್ಗಂಡು
ಕಡ್ಡಿಗೀರಿ ಬೀಡಿ ಹಸ್ಕಂಡು
ಮ್ಯಾಲುಕ್ಕ ನೋಡ್ತಾ
ದಮ್ಮ ಎಳಿತಾ
ಜಗುಲಿಗ ತಿಕ ಊರಿ
ಹಂಗೆ
ನನ್ದಿಕ್ಕೇ ಮೊಖ ಮಾಡ್ದಗಾಯ್ತು.

-ಎಂ.ಜವರಾಜ್


ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x