ಲಾಕ್ ಡೌನ್: ಹಾಡ್ಲಹಳ್ಳಿ ನಾಗರಾಜ್

ಚೆಲುವೇಗೌಡನಿಗೆ ಮಾಮೂಲಿನಂತೆ ಬೆಳಗ್ಗೆ ಆರಕ್ಕೆ ಎಚ್ಚರವಾಯಿತು. ಹೊದಿಕೆಯೊಳಗೆ ಸದ್ದಾಗದಂತೆ ಮೆಲ್ಲಗೆ ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡ. ನಿದ್ದೆ ಹರಿದಿದ್ದರೂ ಏಳುವ ಮನಸ್ಸಾಗಲಿಲ್ಲ. ಕಣ್ಣು ಮುಚ್ಚಿಕೊಂಡವನು ಕಿವಿ ತೆರೆದುಕೊಂಡು ಸದ್ದಿಲ್ಲದೇ ಮಲಗಲು ಯತ್ನಿಸಿದ.

ತಾನು ಮಲಗಿರುವ ಪ್ಯಾಸೇಜಿನ ಹಿಂದಿನ ಬಚ್ಚಲು ಕಡೆ ಸೊಸೆಯ ಚಟುವಟಿಕೆ ನಡೆದಿತ್ತು. ಅವಳ ಗಂಡ ಹಾಗು ಮಕ್ಕಳು ಬಂದು ಹೋದ ನಂತರ ಕಕ್ಕಸ್ಸುಕೋಣೆಯನ್ನು ಬರಲಿನಿಂದ ರಪ್ ರಪ್ ಎಂದು ತೊಳೆದಳು. ಅಲ್ಲಿಂದ ಬಚ್ಚಲಿಗೆ ದಾವಿಸಿದವಳು ಬಟ್ಟೆ ಬಿಚ್ಚಿ ನಿಂತಿದ್ದ ಮಕ್ಕಳಿಗೆ ನೀರೆರೆದು ಹೊರಕಳಿಸಿ ತಾನೂ ಮೈತೊಳೆದುಕೊಂಡಳು. ಅಷ್ಟರಲ್ಲಿ ಅಡುಗೆ ಕೋಣೆಯಲ್ಲಿ ಕುಕ್ಕರ್ ಶಿಳ್ಳೆ ಕೇಳುತ್ತಲೇ, ತಲೆಗೂದಲಿಗೆ ಟವಲ್ ಸುತ್ತಿಕೊಳ್ಳುತ್ತಾ ದಡದಡನೇ ದಾವಿಸಿದಳು. ಅಲ್ಲಿಂದ ಬೆಡ್ ರೂಮಿಗೆ, ನಂತರ ಮಕ್ಕಳ ರೂಮಿಗೆ, ಅಲ್ಲಿಂದ ಡೈನಿಂಗ್ ಟೇಬಲಿಗೆ…

ಅಂಗಡಿಗೆ ಹೋಗುವ ಗಂಡನ ಕೈಗೊಂದು ಟಿಫಿನ್ ಡಬ್ಬ, ಮಕ್ಕಳ ಬೆನ್ನಿಗೆ ಬ್ಯಾಗು, ಕೈಗೆ ಲಂಚ್ ಬ್ಯಾಗು…
ಡೈನಿಂಗ್ ಟೇಬಲ್ ಕಡೆಯಿಂದ ತರಕಾರಿ ಬಾತಿನ ಘಮ… ಇದೆಲ್ಲವೂ ಮಲಗಿದಲ್ಲಿಂದಲೇ ಚಲುವೇಗೌಡನಿಗೆ ಅನುಭವವೇಧ್ಯವಾಗುತ್ತಿತ್ತು.

ಎಲ್ಲರೂ ಹೊರಹೋದ ಸೂಚನೆಯಂತೆ ಮುಂದಿನ ಬಾಗಿಲು ದಡಾರನೇ ಹಾಕಿಕೊಂಡಿತು.
ಮುಖದ ಮೇಲಿನ ಕಂಬಳಿಯನ್ನು ಕಾಲು ಕಡೆಗೆ ಎಸೆದು ಧಿಗ್ಗನೆ ಎದ್ದು ಕುಳಿತ. ಡೈನಿಂಗ್ ಟೇಬಲ್ ಬಳಿ ಬಂದವನು ಫ್ಲಾಸ್ಕ್ ತೆಗೆದುಕೊಂಡು ಅಲ್ಲಾಡಿಸಿ ನೋಡಿದ. ತಳದಲ್ಲಿ ಸ್ವಲ್ಪ ಕಾಫಿ ಇತ್ತು. ಬಗ್ಗಿಸಿಕೊಂಡು ಕುಡಿದು ಟಾಯ್ಲೆಟ್ ಕೆಲಸ ಮುಗಿಸಿ ಹೊರಬಂದ. ಮೊನ್ನೆ, ಭಾನುವಾರ ಅವನು ಟಾಯ್ಲೆಟ್ ಮಾಡಿ ಹೊರಬಂದ ನಂತರ ಅಲ್ಲಿಯೇ ಪಕ್ಕದಲ್ಲಿ ಬಟ್ಟೆ ಒಗೆಯುತ್ತಿದ್ದ ಸೊಸೆ ‘ಥೂ, ಎಂತಾ ಗಬ್ಬು ವಾಸನೆ! ಸತ್ತದನ ತಿನ್ಕಂಡ್ ಬಂದಿರ್ತಾರಾ ಏನ! ಎಂದು ಸಿಡಿಮಿಡಿಗೊಳ್ಳುತ್ತಾ ಮತ್ತೊಮ್ಮೆ ಡೆಟಾಲ್ ಹಾಕಿ ಟಾಯ್ಲಟ್ ರೂಮನ್ನೆಲ್ಲಾ ಬರಲಿನಿಂದ ರಪ್‍ರಪ್ ಎಂದು ಬಡಿಯುತ್ತಾ ಗುಡಿಸಿದ್ದುದು ನೆನಪಾಗಿ, ತಿರುಗಿ ಟಾಯ್ಲೆಟ್‍ಗೆ ಹೋಗಿ ಡೆಟಾಲ್ ಹಾಕಿ, ನೀರು ಹಾಕಿ ಬಂದ. ಬಾತ್‍ರೂಮಿನಲ್ಲಿ ಸೋಲಾರ್ ಟ್ಯಾಂಕಿನಿಂದ ಬರುವ ಬಿಸಿನೀರಿನ ನಲ್ಲಿ ತಿರುವಿ ಕೈಹಿಡಿದು ನೋಡಿದ. ತೆಳುಬೆಚ್ಚಗಿನ ನೀರು ತಾಕಿತು.

‘ಸಧ್ಯ’..! ಎನ್ನುತ್ತಾ ಸ್ನಾನ ಪೂರೈಸಿ, ಡೈನಿಂಗ್ ಟೇಬಲ್ ಮೇಲಿನ ಕುಕ್ಕರ್ ತಳದಲ್ಲಿದ್ದ ಬಾತನ್ನವನ್ನು ಕೆರೆದು ತಿಂದ. ಮೇಜಿನ ಮೂಲೆಯಲ್ಲಿ ತನ್ನ ದಿವಾನ್ ಕಾಟಿನ ಬಳಿ ಇದ್ದ ಹಳೆ ಬೀರು ಬಾಗಿಲು ತೆರೆದ ಸೂಟು, ಸಫಾರಿ ಸೇರಿದಂತೆ ತಾನು ತಹಸೀಲ್ದಾರ್ ಹುದ್ದೆಯಿಂದ ನಿವೃತ್ತನಾಗುವ ಮೊದಲು ಹೊಲೆಸಿದ್ದ ಹತ್ತುಹನ್ನೆರಡು ಜೊತೆ ಬಟ್ಟೆಗಳು ಹ್ಯಾಂಗರಿನಲ್ಲಿ ನೇತಾಡುತ್ತಿದ್ದವು. ಮನಸ್ಸಿಗೊಪ್ಪಿದ ಕಡು ನೀಲಿ ಬಣ್ಣದ ಗೆರೆ ಗೆರೆಯ ತುಂಬು ತೋಳಿನ ಶರ್ಟಿನ ಮೇಲೆ ಕಪ್ಪು ಪ್ಯಾಂಟ್ ಧರಿಸಿ, ಪಕ್ಕದ ವಾರ್ಡ್ ರೋಬ್ ಬಳಿಯ ಸೊಸೆಯ ನಿಲುವು ಗನ್ನಡಿನ ಮುಂದೆ ನಿಂತು ಡೈ ಮಾಡಿದ್ದ ಕಪ್ಪು ಕೂದಲನ್ನು ಓರಣವಾಗಿ ಬಾಚಿಕೊಂಡು ಹಿಂದಿನ ದಿನ ಶೇವ್ ಮಾಡಿದ್ದ ಕೆನ್ನಗೆ ಪೌಡರ್ ಹಾಕಿಕೊಂಡು, ಇರುವ ಶೂ ಗಳಲ್ಲಿ ಒಂದು ಜೊತೆ ಒಳ್ಳೆಯವನ್ನು ಧರಿಸಿ, ಡೋರ್ ಲಾಕ್ ಮಾಡಿ ಕಛೇರಿ ಕೆಲಸಕ್ಕೆ ಹಾಜರಾಗಲು ಹೋಗುವವನಂತೆ ಮುಖದಲ್ಲಿ ಉತ್ಸಾಹ ಧರಿಸಿ ಗಾಂಭೀರ್ಯದಿಂದ ರಸ್ತೆಗಿಳಿದ.

ಅಂದ ಮಾತ್ರಕ್ಕೆ ಅವನು ಹೊರಟದ್ದು ಯಾವುದೇ ಆಫೀಸಿನ ಕೆಲಸಕ್ಕಲ್ಲ ಇಲ್ಲಿಂದ 6 ಕಿಲೋ ಮೀಟರ್ ದೂರದಲ್ಲಿರುವ ಮಹಾರಾಜ್ ಪಾರ್ಕ್‍ಗೆ ಅಲ್ಲಿ ಇವನಿಗಾಗಿ ಕಾಯುವ ಗೆಳೆಯರಿದ್ದಾರೆ. ಅವರೆಲ್ಲರೂ ಇವನಂತೆಯೇ ಮನೆಯಲ್ಲಿ ಅವಗಡನೆಗೆ ಒಳಗಾಗಿರುವ ನಿವೃತ್ತ ನೌಕರರೇ. ಅವರೆಲ್ಲರೂ ‘Birds of the same feather flock together’ ಅನ್ನುತ್ತಾರಲ್ಲ ಹಾಗೆ ಹಕ್ಕಿಗಳು ಆ ವಿಶಾಲವಾದ ಪಾರ್ಕಿನ ಬೃಹದಾಕಾರದ ಮರಗಳ ಮೇಲೆ ಹಾರಾಡಿಕೊಂಡಿದ್ದರೆ, ಇವರೂ ಸಹ ಪಾರ್ಕಿಗೆ ತಲುಪಿದ ಮೇಲೆ ಗುಂಪು ಗುಂಪಾಗಿ ಹಕ್ಕಿಗಳಂತೆ ಸ್ವಚ್ಛಂಧವಾಗಿರುತ್ತಾರೆ. ಅವರವರಿಗೆ ಬೇಕಾದ ವಿಚಾರಗಳ ಬಗ್ಗೆ ವಿನಿಮಯ ಮಾಡಿಕೊಳ್ಳುತ್ತಾರೆ. ಅವರವರ ಒಲವಿನ ರಾಜಕೀಯ ಪಕ್ಷಗಳ, ನಾಯಕರ ಬಗ್ಗೆ ಮಾತಾಡಿಕೊಳ್ಳುತ್ತಾರೆ. ಮಾಧ್ಯಮದಲ್ಲಿ ಬಂದ ಸುದ್ಧಿಗಳ ಕುರಿತು ಚರ್ಚೆ ಮಾಡುತ್ತಾರೆ.

‘ಬೋಡಿ ತನ್ನ ತುರುಬನ್ನು ನೆನಪಿಸಿಕೊಂಡು ಸಂಭ್ರಮ ಪಟ್ಟುಕೊಂಡಳು’ ಎನ್ನುತ್ತಾರಲ್ಲ. ಹಾಗೆ, ತಮ್ಮ ನೌಕರಿಯ ಕಾಲದ ಘನತೆಯ ಬಗ್ಗೆ ಹೇಳಿಕೊಂಡು ಸಂಭ್ರಮ ಪಡುತ್ತಾರೆ. ಅಧಿಕಾರಿಗಳಾಗಿದ್ದರೆ ತಮ್ಮ ಕೆಳ ಹಂತದ ನೌಕರರನ್ನು ಗದರಿಸಿ ಶಿಸ್ತಿನಿಂದ ಕೆಲಸ ಮಾಡಿಸಿದ್ದರ ಬಗ್ಗೆ, ಕೆಳಹಂತದಲ್ಲಿ ನೌಕರಿ ಮಾಡಿದ್ದವರಾಗಿದ್ದರೆ ಅನಾವಶ್ಯಕ ಗದರಿದ ಅಧಿಕಾರಿಗಳನ್ನು ಎದುರಿಸಿ ನಿಂತ ಬಗ್ಗೆ, ಮೊದಲ ದಿನದ ನೌಕರಿಯ ಅನುಭವದ ಬಗ್ಗೆ, ಮೊದಲ ಲಂಚಕ್ಕೆ ಅಂಜಿಕೆಯಿಂದಲೇ ಕೈ ಒಡ್ಡಿ ಜಯಶೀಲರಾದ ಬಗ್ಗೆ, ಸೈಟು ಕೊಂಡ ಬಗ್ಗೆ, ಮನೆ ಕಟ್ಟಿಸಿದ ಬಗ್ಗೆ… ಹೀಗೆ ಒಂದೇ ಎರಡೇ ಇವರ ಚರ್ಚೆಗೆ ನಿಲುಕುವ ವಿಷಯ..!

ನೌಕರಿಯಲ್ಲಿದ್ದಾಗ ಅನುಭವಿಸಿದ ತಾರತಮ್ಯ ಈಗ ಇವರಲ್ಲಿ ಇಲ್ಲ. ಹರಿಜನ, ಬ್ರಾಹ್ಮಣ ಒಂದೇ ಬೇಂಚಿನಲ್ಲಿ ಒತ್ತೊತ್ತಿ ಕೂರುತ್ತಾರೆ. ಜವಾನ, ಅಧಿಕಾರಿಯಾಗಿದ್ದವನ ಹೆಗಲಮೇಲೆ ಕೈ ಹಾಕುತ್ತಾನೆ. ಕೆಳ ದೆರ್ಜೆಯ ನೌಕರನಾಗಿದ್ದವನು ಐ.ಎ.ಎಸ್‍ನಂತಹ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿಗಳಿಗೆ ಕತೆ ಪ್ರಸಂಗಗಳನ್ನು ಹೇಳಿ ಮುದಗೊಳಿಸುತ್ತಾನೆ… ಅಷ್ಟಕ್ಕೂ ಬೋರಾದವರರು ಪಕ್ಕದ ರಸ್ತೆಯ ಸುಧಾ ಹೋಟೇಲಿಗೆ ಜೋಡಿ ಜೋಡಿಯಾಗಿ ಹೋಗಿ ಅರ್ಧರ್ಧ ರವೆ ದೋಸೆ ತಿಂದು ಬೈಟು ಕಾಫಿ ಕುಡಿದು ಅರ್ಧರ್ಧಗಂಟೆ ಅಲ್ಲಿಯೇ ಕುಳಿತು ತಮ್ಮ ಖಾಸಗಿ ಸಮಸ್ಯೆಗಳ ಕುರಿತು ಮಾತನಾಡಿಕೊಳ್ಳುತ್ತಾರೆ. ಇವರು ತಿನ್ನುವ ಅರ್ಧ ದೋಸೆಗೂ ಒಂದೊಂದು ಬಟ್ಟಲು ಸಾಗು ಹಾಗು ಚಟ್ನಿ ಕೊಡಬೇಕಾದ್ದರಿಂದ ಹೋಟೇಲಿನವರು ಇವರ ಆಗಮನದಿಂದ ಮುಖ ಕಿವುಚಿಕೊಳ್ಳುತ್ತಾರೆ. ಇದು ಅವರ ಗಮನಕ್ಕೂ ಬಂದು ಕಸಿವಿಸಿಯಾದರೂ ಸಹಿಸಿಕೊಳ್ಳುತ್ತಾರೆ.

ಇನ್ನು ಮಧ್ಯಾಹ್ನವಾಯಿತೆಂದರೆ, ಮನೆಯಲ್ಲಿ ಹೊರಗೆ ನೌಕರಿ ಮಾಡುವ ಮಗ ಸೊಸೆ ಇದ್ದು, ಮದ್ಯಾಹ್ನಕ್ಕೆ ಸ್ವಲ್ಪ ಊಟ ಉಳಿಸಿ ಹೋಗುವ ಪರಿಪಾಠವಿದ್ದರೆ, ಮನೆಯಲ್ಲಿ ಇನ್ನೂ ಬದುಕಿದ್ದ ಮುದಿ ಹೆಂಡತಿ ಇದ್ದರೆ ಅಂಥವರು ಮನೆಗೆ ಮಧ್ಯದಲ್ಲೊಮ್ಮೆ ಭೇಟಿಕೊಟ್ಟು ಬರುವುದೂ ಉಂಟು. ಗೃಹಿಣಿಯರಾಗಿ ಮನೆಯಲ್ಲೇ ಇರುವ ಸೊಸೆಯಂದಿರಿದ್ದವರಂತೂ ಬೆಳಗ್ಗೆ ಮನೆ ಬಿಟ್ಟವರು ಸಂಜೆ ಕತ್ತಲಾದ ಮೇಲೆಯೇ ಹಿಂದಿರುಗುವುದು.

ಇವರೂ ಮದ್ಯಾಹ್ನದ ಹೊಟ್ಟೆಪಾಡಿಗೆ ಒಂದು ದಾರಿ ಹುಡುಕಿಕೊಳ್ಳಬೇಕಲ್ಲ..!
ಪಾರ್ಕಿನಿಂದ ಒಂದೆರಡು ಪರ್ಲಾಂಗ್ ದೂರದಲ್ಲಿರುವ ನಿವೃತ್ತ ನೌಕರರ ಸಂಘದ ಕಟ್ಟಡದಲ್ಲಿ ಅನಾಥ ಹಿರಿಯ ನಾಗರಿಕರಿಗೆಂದು ಸಮಾಜ ಸೇವಾ ಸಂಸ್ಥೆ (ಎನ್.ಜಿ.ಒ) ಊಟದ ವ್ಯವಸ್ಥೆ ಮಾಡಿರುತ್ತದೆ. ಕೆಲವರು ವಿಧಿ ಇಲ್ಲದೆ ಅಲ್ಲಿಗೆ ಹೋಗಿ ಒಳಗೊಳಗೆ ಮುಜುಗರ ಪಡುತ್ತಲೇ ಹಸಿವು ತೀರಿಸಿಕೊಂಡು ಬಂದು ಪಾರ್ಕಿನ ಬೆಂಚಿಗೊರಗಿ ತೂಕಡಿಸಿ ದಣಿವು ಕಳೆಯುತ್ತಾರೆ.


ಠಾಕು ಠೀಕಾಗಿ ಉಡುಪು ಧರಿಸಿ ಮಹಾರಾಜ ಪಾರ್ಕ್ ರಸ್ತೆಯಲ್ಲಿ ನಡೆದಿದ್ದರೂ ಚೆಲುವೇಗೌಡನ ಮನಸ್ಸು ಕಸಿವಿಸಿಗೊಳಗಾಗಿತ್ತು. ಹಲವಾರು ದಶಕಗಳ ಕಾಲ ಘನತೆಯ ಬದುಕು ನಡೆಸಿದ್ದ ಅವನಿಗೆ ಈ ಇಳಿಗಾಲದಲ್ಲಿ ಪಾರ್ಕಿನಲ್ಲಿ ಕಾಲ ಹರಣ ಮಾಡಿ ಮದ್ಯಾಹ್ನದ ಹಸಿವು ನೀಗಿಸಿಕೊಳ್ಳಲು ಸಮಾಜ ಸೇವಾ ಸಂಸ್ಥೆಯವರ ಅನ್ನಕ್ಕೆ ಕೈ ಒಡ್ಡುತ್ತಿದ್ದುದು ಭಿಕ್ಷೆಯಂತೆ ಭಾಸವಾಗತೊಡಗಿತು.

ಮೊದಲಿನಿಂದಲು ಆತ್ಮೀಯತೆ ಹೊಂದಿದ್ದ ಕಾಮಧೇನು ಅನಾಥಾಶ್ರಮ ಟ್ರಸ್ಟ್ನ ಅಧ್ಯಕ್ಷ ಡಾ. ಹೆಗ್ಗಡೆಗೆ ಇವನ ಇತ್ತೀಚಿನ ಬದುಕಿನ ಪರಿಸ್ಥತಿ ತಿಳಿದು ಹೋಗಿತ್ತು. ಅವರ ನರ್ಸಿಂಗ್ ಹೋಂಗೆ ರೆಗ್ಯುಲರ್ ಚಕಪ್‍ಗೆ ಹೋದಾಗ ಒಮ್ಮೆ ‘ಇಷ್ಟೆಲ್ಲಾ ಇದ್ದು, ಸುಮ್ನೆ ದಿಕ್ಕಿಲ್ಲದವರಂತೆ ಪಾರ್ಕಿನಲ್ಲಿ ಕಾಲ ಕಳೆಯುವ ಬದಲು ನಮ್ಮ ಅನಾಥಾಶ್ರಮಕ್ಕೆ ಬನ್ನಿ. ಅಲ್ಲೇ ನಿಮಗೆ ಹಿಡಿಸುವ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಘನತೆಯಿಂದ ಬದುಕಬಹುದು. ಇಳಿಗಾಲದಲ್ಲಿ ನಿಮ್ಮ ಆರೋಗ್ಯದ ನಿಗಕ್ಕೂ ಸಹಾಯವಾಗುತ್ತದೆ. ಬೇಕಾದರೆ ನಿಮ್ಮ ಪಿಂಚಣಿಯ ಒಂದು ಭಾಗವನ್ನು ಟ್ರಸ್ಟ್ಗೆ ಕೊಡಬಹುದು’ ಎಂದು ಹೇಳಿದ್ದು ನೆನಪಾಗಿ ಅದೇ ಸರಿಯೇನೋ ಅನ್ನಿಸಿತ್ತು. ಇಂದಿನ ಬದುಕನ್ನು ಕುರಿತು ಮನದಲ್ಲೇ ಮೆಲುಕು ಹಾಕುತ್ತಾ ಹೆಜ್ಜೆ ಸವೆಸುತ್ತಿದ್ದ…

ಈ ನಗರದ ಹೃದಯ ಭಾಗದಿಂದ ಕೇವಲ ಹನ್ನೆರಡು ಕಿಲೋ ಮೀಟರ್ ದೂರದ ಮಾರನಕೊಪ್ಪಲು ಹಳ್ಳಿಯ ರೈತಕುಟುಂಬದಲ್ಲಿ ಜನಿಸಿ ಬೆಳೆದು ಅಲ್ಲಿಯೇ ಎಸ್.ಎಸ್.ಎಲ್.ಸಿ ಪಾಸು ಮಾಡಿದ್ದು, ಹಲವು ವರ್ಷ ತಂದೇ ತಾಯಿಯೊಂದಿಗೆ ವ್ಯವಸಾಯದ ಬದುಕಿನಲ್ಲಿ ತೊಡಗಿಕೊಂಡದ್ದು, ಪಕ್ಕದ ಹಳ್ಳಿಯ ಹುಡುಗಿಯೊಂದಿಗೆ ಮದುವೆಯಾದದ್ದು, ಸ್ನೇಹಿತರ ನೆರವಿನೊಂದಿಗೆ ಉದ್ಯೋಗ ವಿನಿಮಯ ಕಛೇರಿಯ ಮುಖಾಂತರ ಡಿ.ಸಿ ಆಫೀಸಿಗೆ ಮೂರನೇ ದರ್ಜೆ ನೌಕರನಾಗಿ ಸೇರಿದ್ದು, ಹಳ್ಳಿಯಿಂದಲೇ ಹೋಗಿ ಬಂದು ನೌಕರಿ ನಿಭಾಯಿಸಿದ್ದು, ಎರಡು ಗಂಡು, ಒಂದು ಹೆಣ್ಣು ಮಕ್ಕಳ ಪೈಕಿ ಮೊದಲನೆಯವನನ್ನು ನಗರದಲ್ಲಿ ಪಿ.ಯು.ಸಿ ಗೆ ಸೇರಿಸಿದ್ದು, ಕಾಲಕಳೆದಂತೆ ಅವನು ಪೋಲಿ ಪಟಾಲಂ ಇಟ್ಟುಕೊಂಟು ಕಟ್ಟಿನ ಕೆರೆ ಪ್ರದೇಶದಲ್ಲಿ ತಿರುಗಾಡತೊಡಗಿದ್ದು, ಸ್ನೇಹಿತರ ಸಲಹೆಯಂತೆ ಅವನಿಗೆ ಪೆನ್ಷನ್ ಮೊಹಲ್ಲಾದಲ್ಲಿ ಒಂದು ದಿನಸಿ ಅಂಗಡಿ ಇಟ್ಟು ಕೊಟ್ಟದ್ದು, ಅಂಗಡಿಗೆ ಬರುತ್ತಿದ್ದ ಟಿ.ಸಿ.ಹೆಚ್ ಹುಡುಗಿ ರೂಪಾಳನ್ನು ಅವನು ಪ್ರೇಮಿಸಿ ಮದುವೆಯಾದದ್ದು, ಅವಳಿಗೆ ಹೌಸಿಂಗ್ ಬೋರ್ಡ್ ಕಾಲೋನಿಯ ಶಾಲೆಯಲ್ಲಿ ನೌಕರಿಯಾದದ್ದು, ಆ ವೇಳೆಗಾಗಲೆ ನಗರದಿಂದ ಮಾರನ ಕೊಪ್ಪಲ ಕಡೆಗೆ 5 ಕಿಲೋಮೀಟರ್ ದೂರದಲ್ಲಿ ಹಳ್ಳಿಯ ಜಮೀನಲ್ಲಿ ಪರಿವರ್ತನೆಗೊಂಡಿದ್ದ ಜಾಗದಲ್ಲಿ ಒಂದು ಸೈಟ್ ಮಾಡಿದ್ದು, ಅದೃಷ್ಠವೆಂಬಂತೆ ಅದೇ ದಿಕ್ಕಿನಲ್ಲಿ ಆರ್.ಟಿ.ಓ ಕಛೇರಿ, ಸೆಂಟ್ರಲ್ ಸ್ಕೂಲ್, ಹೌಸಿಂಗ್ ಬೋರ್ಡ್ ಮುಂತಾದವು ನಿರ್ಮಾಣವಾಗಿ ನಗರ ಬೆಳದದ್ದು, ಬ್ಯಾಂಕ್ ಲೋನ್ ಮಾಡಿಸಿಕೊಂಡು ಮನೆ ಕಟ್ಟುವ ನೆಪದಲ್ಲಿ ಆ ಸೈಟನ್ನು ಜುಲುಮೆ ಮಾಡಿ ಸೊಸೆ ತನ್ನ ಹೆಸರಿಗೆ ಬರೆಸಿಕೊಂಡದ್ದು, ಗರ್ಭಕೋಶದ ಕ್ಯಾನ್ಸರ್ ಇದ್ದ ಹೆಂಡತಿ ಹಳ್ಳಿಯಲ್ಲೇ ಕೊನೆಯುಸಿರೆಳದದ್ದು, ಮಗಳನ್ನು ಅಲ್ಲಿಯೇ ಮೂರು ಕಿಲೋಮೀಟರ್ ದೂರದ ಹಳ್ಳಿಯ ರೈತನಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟದ್ದು, ಸೊಸೆ ರೂಪ ಕಟ್ಟಿದ ಮನೆಯ ಗೃಹಪ್ರವೇಶಕ್ಕೆ ಹಳ್ಳಿಯಿಂದ ಬಂದಿದ್ದ ಎರಡನೆಯ ಸೊಸೆ ಆ ಆರ್ ಸಿ ಸಿ ಮನೆ ನೋಡಿ ಹೊಟ್ಟೆಕಿಚ್ಚಿನಿಂದ ಸಿಡಿಮಿಡಿಗೊಂಡು ಹೋಗಿದ್ದು, ನೌಕರಿಯಲ್ಲಿ ಬಡ್ತಿ ಹೊಂದಿ ಹಲವಾರು ವರ್ಷ ಉಪ ತಹಸೀಲ್ದಾರನಾಗಿ ಕೆಲಸ ಮಾಡಿದ್ದು, ಹಳ್ಳಿಯಲ್ಲಿದ್ದ ಮಗನ ಮನೆಗೆ ವರ್ಷಕ್ಕೊಮ್ಮೆ ಪಿತೃಪಕ್ಷದ ನೆಪದಲ್ಲಿ ಹೋಗಿ ಬಂದದ್ದು, ನಿವೃತ್ತಿ ಹೊಂದಲು ಇನ್ನೇನು ಒಂದು ತಿಂಗಳು ಇದೆ ಎನ್ನುವಾಗ ಬಡ್ತಿ ಸಿಕ್ಕಿ ‘ತಹಸೀಲ್ದಾರ’ ಎನಿಸಿಕೊಂಡದ್ದು, ನಿವೃತ್ತನಾದಾಗ ಬಂದ ಎಲ್ಲಾ ಹಣ ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ಬಳಕೆಯಾಗಿ ಬರಿಗೈ ಆದದ್ದು, ಹೀಗೆ … ಎಲ್ಲವೂ ಇದೀಗ ಕಣ್ಣಮುಂದೆ ನಡೆದುಹೋದಂತೆನಿಸಿತು


ಚೆಲುವೆಗೌಡ ಪಾರ್ಕ್ ತಲುಪುವ ವೇಳೆಗೆ ಸಹಪಾಠಿಗಳೆಲ್ಲಾ ನೆರೆದಿದ್ದರು. ದೂರದ ಬೇಂಚಿನಲ್ಲಿ ಕುಳಿತಿದ್ದ ಎಕ್ಸೈಸ್ ಆಫೀಸಿನಲ್ಲಿ ಪೀವನ್ ಆಗಿ ನಿವೃತ್ತಿ ಹೊಂದಿದ್ದ, ಚಲುವೆಗೌಡನ ನಿವೃತ್ತಿ ಪರ್ವದ ಹೊಸಾ ಗೆಳೆಯ ರಾಮಣ್ಣ ಎದ್ದು ನಿಂತು ‘ಓಯ್ ತಹಸೀಲ್ದಾರ್ರೆ.. ಇಲ್ಲಿದೀನಿ’ ಎನ್ನುತ್ತಾ ಕೈ ಬೀಸಿದ. ಜವಾನನಾಗಿದ್ದ ತಾನು ತಹಸೀಲ್ದಾರರಾಗಿದ್ದವರ ಗೆಳೆತನ ಪಡೆದಿದ್ದೇನೆಂದು ತೋರಿಸಿಕೊಳ್ಳುವ ಹೆಮ್ಮೆ ಇತ್ತು ಅವನ ಮಾತಿನಲ್ಲಿ!

ಇತ್ತೀಚೆಗೆ ಜನರ ಮಾತಿನ ವಿಷಯಕ್ಕೇನು ಕೊರತೆ ಇರಲಿಲ್ಲ.
ಕೊರೋನ ವೈರಸ್ ವಿಮಾನ ಏರಿ ದೇಶ ಪ್ರವೇಶಿಸಿದೆ ಎಂದಾಗ ಜನ ಲಘುವಾಗಿ ಪರಿಗಣಿಸಿದ್ದರು. ಯಾವಾಗ ಇಲ್ಲಿಯೂ ದೊಡ್ಡ ದೊಡ್ಡ ನಗರಗಳಲ್ಲಿ ಹಬ್ಬುತ್ತಿದೆ ಎಂದಾಗ ಜನರಂತೆಯೇ ಸರ್ಕಾರಗಳು ಹೌಹಾರಿದವು.
ಅದರ ಪರಿಣಾಮವೇ ಲಾಕ್‍ಡೌನ್..!

ಉದ್ದಿಮೆಗಳು, ಕಾರ್ಖಾನೆಗಳು ಲಾಕ್ ಡೌನ್ ಆಗುವುದನ್ನು ಕೇಳಿದ್ದ ಜನ, ಮನುಷ್ಯನ ಸಾಮಾಜಿಕ ಬದುಕೇ ಲಾಕ್‍ಡೌನ್‍ಗೆ ಒಳಗಾಗುವುದನ್ನು ಅರಿತು. ವಿಸ್ಮಯಕ್ಕೊಳಗಾದರು.
ಜನಸಂದಣಿಯಲ್ಲಿ ಕೆಮ್ಮುವುದರಿಂದ, ಸೀನುವುದರಿಂದ ವೈರಸ್ ಹರಡುತ್ತಿದೆ ಎಂದಾಗ ‘ಕೆಮ್ಮಂಗಿಲ್ಲ’ ಎಂದು ಜೋಕ್ ಮಾಡಿದವರೇ ತಮ್ಮ ನಗರಕ್ಕೆ ವೈರಸ್ ಕಾಲಿಟ್ಟಿದೆ ಎಂದಾಗ ಕಂಗಾಲಾದರು. ಜನ ಮಾಮೂಲಿನಂತೆ ದೇವರಿಗೆ ಮೊರೆ ಹೋದರು. ತಮ್ಮ ನಾಯಕರ ಅಣತಿಯಂತೆ ಸಾಮೂಹಿಕವಾಗಿ ದೀಪ ಬೆಳಗಿದರು. ಜಾಗಟೆ ಸದ್ಧು ಮಾಡಿದರು. ವೈರಸ್ ಹೆದರಲಿಲ್ಲ.

ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆದೇಶ ಹೊರಟಿತು. ಮುಖ ಗೌಸಿನಿಂದ ಮೂಗು ಬಾಯಿ ಮುಚ್ಛಿಕೊಳ್ಳುವಂತೆ ಫರ್ಮಾನು ಆಯಿತು. ಅದರಿಂದಲೂ ಕೋವಿಡನೆಂದು ಹೆಸರಿಸಿದ್ದ ರಕ್ಕಸನ ಅಬ್ಬರವೇನು ಕಡಿಮೆಯಾಗುವಂತೆ ತೋರಲಿಲ್ಲ.
ಹೊಟೇಲು ಮುಚ್ಚಿದರು, ಬಾರ್ ಮುಚ್ಚಿದರು. ಕೊನೆಗೆ ಮಂದಿರ ಮಸೀದಿಯನ್ನೂ ಮುಚ್ಚಿದರು. ಸಾರ್ವಜನಿಕ ಸ್ಥಳಗಳಲ್ಲಿ ಜನ ಗುಂಪುಗೂಡುವುದನ್ನು ನಿಷೇಧಿಸಿದರು. ಪಾರ್ಕಿಗೂ ಪೋಲೀಸರು ಬಂದರು. ಇಲ್ಲಿ ಯಾರೂ ನಾಳೆಯಿಂದ ಗುಂಪು ಗೂಡುವಂತಿಲ್ಲ, ಕಾನೂನು ಪಾಲಿಸಬೇಕು ಎಂದರು.

ಸ್ವಂತದವರ ಉಪೇಕ್ಷೆಗಿಂತ ಅವಮಾನ ಬೇರೆ ಏನಿದೆ..!
ಬೇಡದ ವ್ಯಕ್ತಿಯಾಗಿ ಮನೆಯವರೆದುರು 24 ಗಂಟೆ ಕೂರುವುದು ಹೇಗೆ..?
ಲಾಕ್‍ಡೌನ್ ಇದ್ದಾಗಲೂ ಮನೆಯಿಂದ ನುಸುಳಿಕೊಂಡು ಅಷ್ಟು ದಿನ ಪಾರ್ಕ್‍ಗೆ ಬಂದು ಬಿಡುತ್ತಿದ್ದರು.
ಈಗ ಪೋಲೀಸರು ಖುದ್ದು ಬಂದು ಇಳಿದಾಗ ಅವರಿಗೆ ಪೀಕಲಾಟಕ್ಕಿಟ್ಟುಕೊಂಡಿತು.
ನಮ್ಮಿಂದ ಯಾರಿಗೆ ಏನು ತೊಂದರೆಯಾಗುತ್ತದೆ..? ನಾವು ನಿವೃತ್ತ ಅಧಿಕಾರಿಗಳು, ನೌಕರರಲ್ಲವೇ..? ನಮಗೆ ಯಾರೇನು ಮಾಡುತ್ತಾರೆ..? ಎಂದು ಅವರವರೇ ಮಾತಾಡಿಕೊಂಡರು.

ಹೇಗೂ ನಾಳೆ ಬೆಳಗ್ಗಿನ ನ್ಯೂಸ್ ಬುಲೆಟಿನ್‍ನಲ್ಲಿ ಪ್ರಧಾನಿಗಳು ರಾಷ್ಟ್ರ ಉದ್ದೇಶಿಸಿ ಮಾತನಾಡುವವರಿದ್ದಾರಲ್ಲ, ಲಾಕ್‍ಡೌನ್ ಸಡಿಲಿಸುವ ಮಾತೇನಾದರು ಹೇಳಬಹುದು ಎಂದು ಆಶಾವಾದ ಇಟ್ಟುಕೊಂಡ ಜನ ಮಾರನೇ ದಿನ- ಎಲ್ಲರಲ್ಲದಿದ್ದರೂ- ಅರ್ಧಕ್ಕೂ ಹೆಚ್ಚು ಜನ ಪಾರ್ಕ್ ಒಳಗೆ ನುಸುಳಿಕೊಂಡು ತಮ್ಮ ತಮ್ಮಲ್ಲೇ ಗುಸು ಮಾತಾಡಿಕೊಳ್ಳುತ್ತಿದ್ದರು.

‘ಎಲ್ಲರೂ ಸ್ಟ್ರಿಕ್ಟಾಗಿ ಕಾನೂನು ಪಾಲಿಸಬೇಕು. ಇನ್ನೂ ಕೆಲವು ಕಾಲ ಈ ಕೋವೀಡನೊಂದಿಗೆ ಬದುಕಲು ಸಿದ್ಧರಾಗಬೇಕು’ ಎಂದು ಪ್ರಧಾನಿಯವರು ಬುಲೆಟಿನ್ನಿನಲ್ಲಿ ಹೇಳಿಬಿಟ್ಟಿದ್ದರು. ಆ ಕುರಿತೇ ಜನ ಮೆಲುಮಾತಿನ ಚರ್ಚೆಗೆ ತೊಡಗಿದ್ದರು. ಪೋಲೀಸರು ನುಗ್ಗಿ ಬಂದರು. ಮುಖ ಮೂತಿ ನೋಡದೆ ಲಾಠಿ ಬೀಸತೊಡಗಿದರು. ಜನ ಎದ್ದೆವೋ ಬಿದ್ದೆವೋ ಎಂದು ದಿಕ್ಕಾಪಾಲಾಗಿ ಓಡ ತೊಡಗಿದರು. ಲಾಠಿ ಎತ್ತಿಕೊಂಡು ಎದುರಿಗೆ ಬಂದ ಇನ್ಸ್ ಪೆಕ್ಟರ್ ಅನ್ನು ನೋಡಿದ ಚಲುವೆಗೌಡ. ಆತ ಗೊತ್ತಿದ್ದವನೇ..!

‘ನಾನು’ ಎನ್ನುತ್ತಾ ಕೈ ಅಡ್ಡ ಹಿಡಿದ.
‘ನೀನಾದ್ರೆ ಏನ್ ಮ್ಯಾಲಿಂದ ಬಂದಿದ್ದೀಯ..? ನಾಲ್ಕು ಕತ್ತೆ ವಯಸ್ಸಾಗಿದೆ ನಿಮಗೆಲ್ಲಾ ಅರ್ಥ ಆಗದಿಲ್ವಾ..?’ ಎನ್ನುತ್ತಾ ಯದ್ವಾತದ್ವಾ ಬಾರಿಸಿದ.
ತೀರಾ ಅವಮಾನಿತನಾದ ಅವನಿಗೆ ಏನು ಮಾಡಬೇಕೆಂದು ತೋಚಲಿಲ್ಲ.
‘ಹ್ಞೂ..!’ ಎನ್ನುತ್ತಾ ಪೋಲೀಸ್ ಮತ್ತೆ ಲಾಠಿ ತೋರಿಸಿದ. ಚೆಲುವೆಗೌಡನಿಗೆ ಬೇರೆ ದಾರಿ ಹೊಳೆಯಲಿಲ್ಲ. ಮನೆಯ ದಿಕ್ಕಿಗೆ ಓಡತೊಡಗಿದ.
ತಾನು ತಿರುಗಿ ಪ್ರವೇಶಿಸಬೇಕಾಗಿರುವ ಆ ಮನೆಯೊಳಗಿನ ವಾತಾವರಣದ ಬಗ್ಗೆಯೇ ಯೋಚಿಸುತ್ತಾ ಹೋದ.

ತಾನು ಕೊಂಡಿದ್ದ ಸೈಟಿನಲ್ಲಿ ಸೊಸೆ ಮನೆ ಕಟ್ಟಿಸಿದ್ದರು ಅವಳಿಗೆ ನೆಮ್ಮದಿ ಇರಲಿಲ್ಲ. ಅವಳ ಗಂಡ ಮದ್ಯಾಹ್ನದ ಪೆಗ್ಗಿಗೆ, ಸಂಜೆಯ ಕ್ವಾಟರಿಗೆ ದಾರಿ ಮಾಡಿಕೊಂಡು, ಹ್ಯಾಗೋ ಮನೆಗೆ ತಿಂಗಳ ದಿನಸಿ ತಂದು ಹಾಕುತ್ತಿದ್ದ.
ಸೊಸೆಯ ಗೆಳತಿಯರು ಅವಳ ಅತ್ತೆ ಮಾವಂದಿರು ಕಟ್ಟಿಸಿದ್ದ ಮನೆಗಳಲ್ಲಿ ವಾಸವಾಗಿದ್ದುದ್ದರಿಂದ ಅವರ ಪೂರ್ತಿ ಸಂಬಳವನ್ನು ಮನಬಂದಂತೆ ಖರ್ಚು ಮಾಡುತ್ತಾ ಖುಷಿಯಿಂದ ಇರುತ್ತಿದ್ದರು. ಇವಳದೋ ಸಂಬಳದ ಮುಖ್ಯ ಭಾಗ ಬ್ಯಾಂಕ್ ಲೋನ್ ಕಡೆಗೆ ಹೋಗುತ್ತಿತ್ತು. ಉಳಿದುದ್ದರಲ್ಲಿ ಮಕ್ಕಳ ಸ್ಕೂಲ್ ಫೀಸು, ಪುಸ್ತಕ, ಡೊನೇಶನ್ನು, ಟೀವಿ, ಫ್ರಿಡ್ಜಿನ ಕಂತು, ಎಲ್.ಐ.ಸಿ ಪ್ರೀಮಿಯಮ್, ಇನ್ನೂ ಹಲವು ಬಾಬ್ತು ಗಳಿಗೆ ಹೋಗಿ ಕೈಯಲ್ಲಿ ಬಿಡುಗಾಸೂ ಉಳಿಯುತ್ತಿರಲಿಲ್ಲ. ಮಕ್ಕಳ ಹೆಸರಿಗೆ ಆರ್‍ಡಿ, ಕಂತಿನಲ್ಲಿ ಚಿನ್ನ ಮಾಡಿಕೊಳ್ಳಲು ಹವಣಿಸಿದ್ದರೂ ಸಾಧ್ಯವಾಗದೇ ಮಾವನ ಪಿಂಚಣಿ ಹಣದ ಕಡೆ ನೋಡಿದಳು.

ಚೆಲುವೆಗೌಡನು ಒಂದೆರಡು ಖಾಸಗಿ ಕಂಪನಿಗಳ ಇನ್ಸುರೆನ್ಸ್ ಬಾಂಡ್ ತೆಗೆದುಕೊಂಡಿದ್ದ. ಮೆಡಿಕಲ್ ಇನ್ಸುರೆನ್ಸ್ ಕಂತು ಬೇರೆ ಕಟ್ಟಬೇಕಿತ್ತು. ಇನ್ನು ತಿಂಗಳ ಮೆಡಿಕಲ್ ಚೆಕಪ್, ಬಿ.ಪಿ, ಶುಗರ್‍ಗಾಗಿ ತೆಗೆದುಕೊಳ್ಳುವ ರೆಗ್ಯುಲರ್ ಮಾತ್ರೆಗಳು ಇವುಗಳೆಲ್ಲದರ ಪ್ರವರ ಹೇಳಿ ಸೊಸೆಯ ಆಸೆಗೆ ತಣ್ಣೀರೆರಚಿದ್ದ.
ಹಾಗಾಗಿ ಅವಳಿಗೆ ಮಾವನ ಬಗ್ಗೆ ಒಳಗೇ ಕುದಿಯುತ್ತಿತ್ತು…
ಮನೆಯ ಬಾಗಿಲು ಓರೆಯಾಗಿತ್ತು. ತಳ್ಳಿಕೊಂಡು ಒಳಗೆ ಕಾಲಿರಿಸಿದ ಹಾಲ್‍ನಲ್ಲಿ ಸೊಸೆ ರಿಮೋಟ್ ಹಿಡಿದುಕೊಂಡು ಟೀವಿಯ ಮುಂದೆ ಕುಳಿತಿದ್ದವಳಿಗೆ ಚಲುವೆಗೌಡನ ಮುಖ ನೋಡಿ ಮುಖ ಸಿಂಡರಿಸಿಕೊಂಡು ಪಕ್ಕಕ್ಕೆ ತಿರುಗಿ ಕೂತಳು.
ಮಕ್ಕಳಿಬ್ಬರು ಹಾಲ್ ಮಧ್ಯದಲ್ಲಿ ಕೇರಂ ಆಡುತ್ತಾ ತಮ್ಮತಮ್ಮಲೇ ತಕರಾರು ಮಾಡಿಕೊಳ್ಳುತ್ತಿದ್ದರು. ಅವರಿಗೆ ಆಟಕ್ಕೆ ಮೂರನೇ ವ್ಯಕ್ತಿ ಬೇಕಾಗಿದ್ದರು.

‘ತಾತಾ ಬಂತು, ತಾತಾ ಬಂತು’ ಎಂದು ಚಲುವೆಗೌಡನನ್ನು ಆಟಕ್ಕೆ ಕರೆದುಕೊಂಡರು.
ಅವನಿಗೆ ಹಸಿವಿನಿಂದ ಹೊಟ್ಟೆ ಚುರುಗುಡುತ್ತಿತ್ತು. ಯಾರಿಗೆ ಹೇಳುವುದು..? ವಿಧಿ ಇಲ್ಲದೆ ಮಕ್ಕಳೊಂದಿಗೆ ಆಟದಲ್ಲಿ ತೊಡಗಿಕೊಂಡ. ಹೊರ ಹೋಗಿದ್ದ ಮಗ ರಭಸದಿಂದ ಬಾಗಿಲು ತಳ್ಳಿಕೊಂಡು ಒಳಬಂದ. ಅಪ್ಪನೂ ಮಕ್ಕಳೊಂದಿಗೆ ಆಟದಲ್ಲಿ ತಲ್ಲೀನನಾಗಿ ಮಕ್ಕಳಂತೆಯೇ ಕೇಕೆ ಹಾಕುತ್ತಿರುವುದು ನೋಡಿದ ಲಾಕ್‍ಡೌನ್‍ನಿಂದಾಗಿ ಎಲ್ಲಾ ಕಡೆ ಬಂದ್ ಆದಂತೆ ತನ್ನ ಅಂಗಡಿಯನ್ನೂ ಬಂದ್ ಮಾಡಿದ್ದ. ಊಟಕ್ಕೆ ಮುಂಚೆ ಮದ್ಯಾಹ್ನದ ಪೆಗ್‍ಗೆ ಹೊಂದಿಸಿಕೊಂಡಿದ್ದ ಅವನು ಎಲ್ಲೂ ಬ್ರಾಂಡಿ ಅಂಗಡಿ ತೆರೆಯದಿದ್ದುದರಿಂದ ದಿಕ್ಕುತಪ್ಪಿದವನಂತೆ ಗಲ್ಲಿ ಗಲ್ಲಿ ಅಲೆದಾಡಿ ಬಂದಿದ್ದ. ತಲೆ ದಿಮಿಗುಡುತ್ತಿತ್ತು.

ತಾತಾ ಮೊಮ್ಮಕ್ಕಳು ಸಂಭ್ರಮದಿಂದ ಆಟದಲ್ಲಿ ತಲ್ಲೀನರಾಗಿರುವುದು ಕಂಡು ಅವನ ಮೈ ರಕ್ತ ಕುದ್ದು ಹೋಯಿತು.
‘ಏನ್ ನಿಮ್ಮ ಆರ್ಭಟ..!’ ಎನ್ನುತ್ತಾ ಕೇರಂ ಬೋರ್ಡ್ ಮಗುಚಿ ಹಾಕಿ ಅಡುಗೆ ಮನೆಗೆ ನುಗ್ಗಿ ತಟ್ಟೆಯಲ್ಲಿ ಅನ್ನ ಸಾರು ಹಾಕಿಕೊಂಡು ಬಂದು ಡೈನಿಂಗ್ ಟೇಬಲ್ ಮುಂದೆ ನಿಂತು ಕೊಂಡೇ ಗಬಗಬ ತಿನ್ನ ತೊಡಗಿದ.
ಗಲಿಬಿಲಿಗೊಳಗಾದ ಚಲುವೆಗೌಡನಿಗೆ ಏನು ಮಾಡಬೇಕೆಂದು ತೋಚಲಿಲ್ಲ.
ಎದ್ದು ನಿಂತು ತೊಟ್ಟಿದ್ದ ಸಫಾರಿ ಕೊಡವಿಕೊಂಡ ಪ್ಯಾಂಟ್ ಜೇಬಿನಲ್ಲಿದ್ದ ಮುಖಗವಸು (ಮಾಸ್ಕ್) ತೆಗೆದು ಮೂಗು ಬಾಯಿ ಮುಚ್ಚುವಂತೆ ಕಟ್ಟಿಕೊಂಡು ಮಾರನ ಕೊಪ್ಪಲು ಕಡೆ ದಾಪುಗಾಲಿನಿಂದ ನಡೆಯತೊಡಗಿದ.

ಹಳ್ಳಿಯ ಗೂಡಂಗಡಿಯಲ್ಲಿ ಮಕ್ಕಳಿಗೆಂದು ಎರಡು ಬಿಸ್ಕತ್ ಪ್ಯಾಕ್ ತೆಗೆದುಕೊಂಡು ಕಪ್ಪು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಹಿಡಿದು ನಡೆಯತೊಡಗಿದ. ತನ್ನ ಬದುಕೂ ಲಾಕ್‍ಡೌನ್‍ಗೆ ಒಳಗಾಗಿದೆ ಎನಿಸಿತು. ಕಳೆದು ಹೋಗಿದ್ದ ಹುಮ್ಮಸ್ಸನ್ನು ಪುನಃ ತುಂಬಿಕೊಳ್ಳುವವನಂತೆ ಜೋರಾಗಿ ಉಸಿರೆಳೆದುಕೊಳ್ಳತೊಡಗಿದ. ನಶ್ಯ ಕಲರ್ ಸಫಾರಿ ತೊಟ್ಟ ಮುಖ ಗವಸಿನಿಂದ ಮೂಗು ಬಾಯಿ ಮುಚ್ಚಿಕೊಂಡು ಬಲಗೈಲಿ ಹಿಡಿದ ಕಪ್ಪು ಪ್ಲಾಸ್ಟಿಕ್‍ಗಳ ಬೀಸುತ್ತಾ ಜೋರು ನಡಿಗೆ ನಡೆದಿದ್ದವನನ್ನೇ ಹಳ್ಳಿಯ ಜನ ವಿಚಿತ್ರವಾಗಿ ನೋಡಿದರು. ಊರು ಸಮೀಪಿಸಿತು. ಹೊಲಗಳಲ್ಲಿ ಹೆಂಗಸರು, ಗಂಡಸರು ಗುಂಪು ಗುಂಪಾಗಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು.

‘ಇವನ್ಯಾರು ಈ ವಯ್ಯ, ಮುಖಕ್ಕೆ ಮಾರ್ಗುಕ್ಕೆ ಕಟ್ಕಂಡು ಹೀಂಗ್ ಹೋಯ್ತಾ ಅವ್ನೆ’ ಎಂದು ಹೆಂಗಸರು ಪಿಸುನಗುತ್ತಾ ವ್ಯಂಗ್ಯವಾಡಿದರು. ಆ ಗುಂಪಿನಲ್ಲಿದ್ದ ಅವನ ಹೈಸ್ಕೂಲ್ ಸಹಪಾಠಿ ಅವನನ್ನು ಗುರುತು ಹಿಡಿದು ‘ನಮ್ಮ ಚೆಲುವ ಅಲ್ವಾ… ಎಂದೂ ಇಲ್ದೆ ಇದ್ದವನು ಇದೇನು ಹಿಂಗೆ ಊರ ಕಡೆ ಹೊರಟ..!’ ಎಂದು ಆಶ್ಚರ್ಯದಿಂದ ಅವನೆಡೆಗೆ ನೋಡ ತೊಡಗಿದ.
ಚಲುವೆಗೌಡನಿಗೆ ಮುಜುಗರವಾಗ ತೊಡಗಿತು. ಅಲ್ಲಿದ್ದವರನ್ನು ಎದುರಿಸಲಾಗದೆ ನಡುಗೆ ಬಿರುಸುಗೊಳಿಸಿದ.
ಮಗನ ಮನೆಯ ಮುಂದೆ ಮಣ್ಣಿನಲ್ಲಿ ಆಡಿಕೊಳ್ಳುತ್ತಿದ್ದ ಮೊಮ್ಮಕ್ಕಳು ಯಾರು ಈ ಅಪರೂಪದ ವ್ಯಕ್ತಿ ಎಂದು ವಿಸ್ಮಯದಿಂದ ನೋಡಿದರು. ವ್ಯಕ್ತಿ ಸಮೀಪವಾದಂತೆ ಗುರುತು ಹತ್ತಿತು.

‘ತಾತಾ ತಾತಾ’ ಎನ್ನುತ್ತಾ ಓಡಿದರು. ಕೈಯಲ್ಲಿದ್ದ ಕವರನ್ನು ಅವರಿಗೆ ದಾಟಿಸಿದ ತೆಗೆದುಕೊಂಡ ಮಕ್ಕಳು ‘ನನಗೆ ನನಗೆ’ ಎಂದು ಖುಷಿಯಲ್ಲಿ ಎಳೆದಾಡುತ್ತಿದ್ದರು. ಕೊಟ್ಟಿಗೆಯೊಳಗೆ ಕೆಲಸ ಮಾಡುತ್ತಿದ್ದ ಸೊಸೆ ಧಾವಿಸಿ ಬಂದು ಮಕ್ಕಳ ಕೈಯಲ್ಲಿದ್ದ ಬಿಸ್ಕತ್ ಕಿತ್ತು ರಪ್ಪನೆ ಬೀದಿಗೆ ಅಪ್ಪಳಿಸಿ ಎಸೆದಳು. ಮಕ್ಕಳು, ಪುಡಿ ಪುಡಿಯಾಗಿ ಮಣ್ಣಿನೊಂದಿಗೆ ಬೆರೆತ ಬಿಸ್ಕತ್‍ಗಳನ್ನು ಆಸೆಗಣ್ಣಿನಿಂದ ನೋಡತೊಡಗಿದರು. ಎದುರು ನಿಂತ ಸೊಸೆಯ ರೌದ್ರಾವತಾರ ಕಂಡ ಚೆಲುವೆಗೌಡ ಸ್ಥಂಭೀಭೂತನಾಗಿ ಉಸಿರು ಕಟ್ಟಿದವನಂತೆ ನಿಂತ. ಕೊಟ್ಟಿಗೆಯ ಹಿಂದೆ ಕುಂಟೇ ರಿಪೇರಿ ಮಾಡುತ್ತಿದ್ದ ಮಗ ಓಡಿ ಬಂದ.

ಒಂದೆಡೆ ಗಾಬರಿಗೊಂಡ ಅಪ್ಪ, ಇನ್ನೊಂದೆಡೆ ಆಸೆಗಣ್ಣಿನಿಂದ ನೆಲದ ಪಾಲಾದ ಬಿಸ್ಕತ್ ಅನ್ನು ನೋಡುತ್ತಿರುವ ಮಕ್ಕಳು, ಎದುರಿಗೆ ರೌದ್ರಾವತಾರ ತಾಳಿ ನಿಂತ ಹೆಂಡತಿ..!
‘ಯಾಕೆ, ಯಾಕೇ..! ಏನಾಯ್ತು ಈಗ..!’ ಎನ್ನುತ್ತಾ ಹೆಂಡತಿಯ ಮುಖ ನೋಡಿದ.
‘ಇನ್ನೇನು ಮತ್ತೆ ಅವಳ ಮನೇಲಿ ಇರೋದು ಬಿಟ್ಟು ಇಲ್ಲೇಕೆ ಬಂದಿದಾನೆ ನಿಮ್ಮ ಅಪ್ಪ… ಅಲ್ಲಿ ಹಳಸಿಗಂಡಿತ್ತಾ ಏನ..? ಮಕ್ಕಳ ಒಳ್ಳೇದು ಮಾಡಿಕೊಂಡು ಉಪಾಯದಲ್ಲಿ ಇಲ್ಲೇ ಸೇರ್ಕಳದೇನು ಬ್ಯಾಡ’ ಎನ್ನುತ್ತಾ ದುಡುದುಡನೆ ಕೊಟ್ಟಿಗೆಯೊಳಗೆ ಧಾವಿಸಿ ಹೋದಳು.
ರಸ್ತೆಗಿಳಿದ ಚಲುವೇ ಗೌಡ ಮುಖ ಗವಸು ಕಳಚಿ ಧಾರಾಕಾರವಾಗಿ ಇಳಿಯುತ್ತಿದ್ದ ಕಣ್ಣೀರು ಒರೆಸಿಕೊಳ್ಳುತ್ತಾ ‘ಮುಂದೇನು’ ಎಂದು ಯೋಚಿಸಿದ. ಮಗಳ ನೆನಪಾಯಿತು. ಕಷ್ಟ ಹೇಳಿಕೊಂಡು ಹೆಣ್ಣು ಮಕ್ಕಳ ಮನೆಯ ಬಾಗಿಲಿಗೆ ಹೋಗಬಾರದು ಎಂದು ಕೊಂಡ. ತನ್ನಷ್ಟೇ ವಯಸ್ಸಾಗಿದ್ದರು ಕೃಷಿ ಕೆಲಸದಲ್ಲಿ ತೊಡಗಿಕೊಂಡು ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗಾಡುವ ತನ್ನ ಬೀಗರ ಮುಂದೆ ಹೋಗಿ ನಿಲ್ಲುವ ಯೋಗ್ಯತೆ ತನಗಿಲ್ಲ ಎನ್ನಿಸಿತು.

ಡಾ. ಹೆಗಡೆ ಕೊಟ್ಟಿದ್ದ ಕಾಮಧೇನು ಅನಾಥಾಶ್ರಮದ ಆಫರ್ ತಲೆಯಲ್ಲಿ ಸುಳಿದು ಹೋಯಿತು. ಮುಂದೇನು ಮಾಡುವುದು ತೋಚದೆ ಕತ್ತಲನ್ನೇ ದಿಟ್ಟಿಸುತ್ತಾ ಮುಖಗವಸು ಕಟ್ಟಿಕೊಳ್ಳತೊಡಗಿದ.
ಅವನು ನಿಜವಾದ ಲಾಕ್‍ಡೌನ್‍ಗೆ ಒಳಗಾಗಿದ್ದ.

-ಹಾಡ್ಲಹಳ್ಳಿ ನಾಗರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ದಯಾ ಗಂಗನಘಟ್ಟ
ದಯಾ ಗಂಗನಘಟ್ಟ
3 years ago

ಸಂದರ್ಭೋಚಿತ ಧ್ರುವೀಯತೆಯ ಕಥನ.

1
0
Would love your thoughts, please comment.x
()
x