ಮೂರು ಕವಿತೆಗಳು: ಶಕುಂತಲಾ ಬರಗಿ

ಹೆಣ್ಣು

ನೂರು ಸಂಕೋಲೆಯಲ್ಲಿ ಸಿಲುಕಿ
ವಿಲಿ ವಿಲಿ ಒದ್ದಾಡುವ ಜೀವ
ಸಂಕೋಲೆಯ ಬಿಡುಗಡೆಗೆ ಹಪಹಪಿಸಿ
ಗೀಳಿಡುತ್ತಿರುವ ಪಾಪಿ ಕಾಡಿನ ಪ್ರಾಣಿ.

ನಾವೆಷ್ಟು ಬೈದರು ಅಂದರು
ಉಗುಳು ನುಂಗುವಂತೆ
ಒಳ ಹಾಕಿಕೊಳ್ಳುವ
ಅಂತಶಕ್ತಿಯ ಅಗಾಧ ಮರ !

ಎಳೆ ಕೈ ಬಿಗಿದಳೆದು ಕಟ್ಟಿ
ಕುಟ್ಟಿ ಒಡೆದಾಕಿದರು
ಒದ್ದಾಡದೆ ಸುಮ್ಮನೆ ಇದ್ದಾಳೆ
ಅವಳೇ ಒಂದು ಸಾತ್ವಿಕ ಶಕ್ತಿ

ಅವಳು ಇವಳು ಯಾವಳು
ಮತ್ತೊಬ್ಬಳು ಮಗದೊಬ್ಬಳು
ಹೀಗೆ ಅನ್ಯಾಯಕ್ಕೇ
ಒಳಗಾದವರ ಸಂಖ್ಯೆ ಏರುತ್ತಲೇ ಇರುತ್ತದೆ

ಅವರ ಕೋಪ ತಾಪ ಶಾಪಗಳ
ಅವಶೇಷಗಳ ಮೆತ್ತಿಕೊಂಡಿವೆ
ಈ ಪುರುಷಧೀನ ಪುರದಲ್ಲಿ
ಇನ್ನೂ ಮೆತ್ತಿಕೊಂಡಿವೆ ಶಾಪದ ಗುರುತುಗಳಾಗಿ !

ಕೂಗು ಅಳು ನೋವಿನ ಧ್ವನಿ
ಪ್ರತಿಧ್ವನಿಗಳು ಅನುರಣಿಸುತ್ತಿವೆ
ಈ ಪುರುಷಾಂದಕಾರದ ಸಮಾಜದಲ್ಲಿ
ಅನುರಣಿಸುತ್ತಿವೆ ನೋವ ಕೂಗಾಗಿ
ಅಷ್ಟೇ ಅಲ್ಲ ಶಾಪಗಳಾಗಿ
ಗಟ್ಟಿ ಗುರುತುಗಳಾಗಿ ಉಳಿದಿವೆ

ಕಾಡಿನ ಮೃಗಗಳೆದುರು
ಓಡಿದ ಜಿಂಕೆಗಿಂತ
ಬಲೆಯಲ್ಲಿ ಸಿಕ್ಕ ಜಿಂಕೆಯಂತೆ
ಓಡದೆ ಶರಣಾಗಿ ಸತ್ತಿದ್ದಾಳೆ ಹೆಣ್ಣಾಗಿ !

***

ಮನುಷ್ಯಳಾಗಿಯೇ ಇರುವ ಆಸೆ…

ಮನುಷ್ಯಳಾಗಿ ಇರುವ ಆಸೆ ಒಂದು
ಮಾತು ಮಾತಿಗೂ ಚಲ್ಲು ಚಲ್ಲು ಆಡುವವರ ಮಧ್ಯೆ
ಡೌಲು ಡೌಲು ನಡತೆ ಇರುವವರ ಮಧ್ಯೆ
ಈ ಹೈಲು ಫೈಲು ಮಂದಿ ನಡುವೆ
ನನ್ನತನದ ಹೋರಾಟಕ್ಕೆ ಬದ್ಧಳಾಗಿದ್ದೇನೆ

ಅಂಕುಡೊಂಕು ನೂರು ಒನಪಿಗೆ
ಚುಚ್ಚುವ ಕೊಂಕುಮಾತುಗಳ ನಡುವೆ
ಮಂಕು ಕವಿದ ನೂರು ಪ್ರಶ್ನೆಗೆ
ನಾನು ಮೌನ ತವಸಿಯಾಗಿದ್ದೇನೆ

ಸವಾಲು ಜವಾಬುಗಳ ಜೇಂಕಾರದಲ್ಲಿ
ಸ್ಪರ್ಧೆ ಪೈಪೋಟಿಗಳ ಆಳದಲ್ಲಿ
ಕೊಂಕು ಡೊಂಕುಗಳ ವ್ಯವಸ್ಥೆಯಲ್ಲಿ
ಶಾಂತವಾಗಿ ಸೋಲಿಸುತ್ತೇನೆ ಅವರಿವರನ್ನು

ಒಪ್ಪದ ತಪ್ಪಿದ ವ್ಯವಸ್ಥೆಯ ಭಂಜನದಲ್ಲಿ
ಒತ್ತಿದ ಬಿತ್ತಿದ ಉಳು ಗೊಬ್ಬರದಲ್ಲಿ
ಅಸತ್ಯದ ಅಧರ್ಮದ ಲೋಕದಲ್ಲಿ
ಮನುಷ್ಯಳಾಗೇ ಇರುವ ಹಠ ತೊಟ್ಟಿದ್ದೇನೆ

***

ಹೌದು ಕಣೆ ಅಕ್ಷತಾ

ಹೌದು ಕಣೆ ಅಕ್ಷತಾ
ಸೋಮವಾರ ಪಾತ್ರೆ ತೊಳೆಯುವಾಗ
ತಡವಾಯಿತೆಂದು ಅಮ್ಮ ಬೈದರು
ಕುಳಿತು ಕುಳಿತು ಸೋಮಾರಿಯಾದ ಅಣ್ಣನಗುತ್ತಿದ್ದ
ನೈಟಿಯ ಮಧ್ಯದಲ್ಲಿ ಸಿಲುಕಿ ಅಳುತ್ತಿದ್ದೆ.

ಹೌದು ಹೌದು ಸಂಪ್ರೀತಾ
ಮೊನ್ನೆ ಚಹಾ ಸೂಸುವಾಗ
ಸ್ವಲ್ಪೇ ಸ್ವಲ್ಪ ಚಹಾ ಚೆಲ್ಲಿದ್ದಕ್ಕೆ
ಅಜ್ಜಿ ಝೇಂಕಾರದಿಂದ ಗದರುತ್ತಿದ್ದಳು
ಹಾಲು ಕುಡಿಯುತ್ತಿದ್ದ ತಮ್ಮನಕ್ಕ
ಮಸಿಯ ಅರಬಿ ಇಡಿದೆ ನಾನು ಅಳುತ್ತಿದೆ

ಹೌದು ನೀತಾ
ನಿನ್ನೆ ಇಸ್ತ್ರಿ ಮಾಡುವಾಗ
ನೀಟಾಗಿ ಮಡಚಿಲ್ಲವೆಂದು
ಅಪ್ಪ ಏನೇನೋ ವಟಗೂಡುತ್ತಿದ್ದ
ಸುಮ್ಮನೆ ನಿಂತಿದ್ದ ಕಾಕಾ ನಗುತಿದ್ದ
ಕೈ ವಸ್ತ್ರದಲ್ಲಿ ಮುಖ ಮುಳುಗಿಸಿ ನಾ ಅಳುತ್ತಿದ್ದೆ

ಹೌದು ಹೌದು ಶ್ವೇತಾ
ಅವತ್ತು ಕಾಲೇಜಿಗೆ ತಳವಾಯಿತೆಂದು
ತಡವಾಯಿತೆಂದು ಸರ್ ಬಯ್ಯುತ್ತಿದ್ದರು
ಹುಡುಗರ ಹಿಂಡಿನಲ್ಲೊಬ್ಬ ಜೋರಾಗಿ ನಗುತ್ತಿದ್ದ
ಬೇಜಾರಿಲ್ಲ ಕಣೇ ಶ್ವೇತಾ
ಆದರೂ ದಾವಣಿಯ ಅಂಚಿನಲ್ಲಿ ಅಳುತ್ತಿದ್ದೆ

ಹೌದು ರೀತಾ ಹೌದು
ಇಂದು ಅವಸರಕ್ಕೆ ಓಡಾಡುತ್ತಲೇ ಇರುತ್ತೇನೆ
ಬೇಗ ಬೇಗ ನಡಿಯುತ್ತೇನೆಂದು
ಗಂಡ ಒಂದೇ ಸವನೆ ಒದರುತ್ತಿದ್ದ
ನಿಂತ ಅತ್ತೆ ಮಾವ ಬಂಧುಗಳು ನಗುತ್ತಿದ್ದರು
ನಾ ಮಾತ್ರ ಸೆರಗಿನಂಚಿನಲಿ ಅಳುತ್ತಿದ್ದೆ

ಇಲ್ಲ ಇಲ್ಲ ಗೀತಾ
ಅತ್ತೆ ಮಾವ ಗಂಡ ಮಗ ಬೈಯುತ್ತಿರುತ್ತಾರೆಂದು
ನಾನೇನು ಮಗಳ ಯುನಿಫಾರ್ಮಿನಲ್ಲಿ
ಸಿಲುಕಿ ಮುಖ ಅಡಗಿಸಿಕೊಂಡು
ಸೋತು ಸೋತು ಬಿಕ್ಕಳಿಸುವುದಿಲ್ಲ

ಹೌದು ಕಣೆ ನೀತಾ
ಹೆಣ್ಣು ಬಾಳ ಕವಿತೆ ಓದಿದ ಬಳಿಕ
ಮಸಿ ಅರಬಿ ಕೈ ವಸ್ತ್ರ ಸೆರಗಿನ ಅಂಚು
ದಾವಣಿ ತುದಿ, ಯುನಿಫಾರ್ಮ್ ಬಟ್ಟೆ
ಇವೇ ನಮ್ಮ ರೋಧನೆಲೋಕದ ಮೂಕಸಾಕ್ಷಿಗಳು

-ಶಕುಂತಲಾ. ಬರಗಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x