ಮುಗುಳ್ನಗು ಒಂದನ್ನು ಎದೆಯಲ್ಲಿ ಬೆಳೆಯಲಿಕ್ಕೆ ಹಂಬಲಿಸುವವರ ಕಥೆಗಳ ಗುಚ್ಛ “ಮರ ಹತ್ತದ ಮೀನು”: ಡಾ. ನಟರಾಜು ಎಸ್.‌ ಎಂ.


ವಿನಾಯಕ ಅರಳಸುರಳಿಯವರು ಲೇಖಕರಾಗಿ ಕಳೆದ ಏಳೆಂಟು ವರ್ಷಗಳಿಂದ ಪರಿಚಿತರು. ಮೊದಲಿಗೆ ಕವಿತೆಗಳನ್ನು ಬರೆಯುತ್ತಿದ್ದವರು, ತದನಂತರ ಪ್ರಬಂಧ ಬರೆಯಲು ಶುರು ಮಾಡಿದರು. ನಂತರದ ದಿನಗಳಲ್ಲಿ ಕತೆಗಳನ್ನು ಸಹ ಬರೆಯುತ್ತಾ ಈಗ ತಮ್ಮ ಹತ್ತು ಕತೆಗಳಿರುವ “ಮರ ಹತ್ತದ ಮೀನು” ಕಥಾಸಂಕಲನವನ್ನು ಹೊರತಂದಿದ್ದಾರೆ. “ಮರ ಹತ್ತದ ಮೀನು” ಕೃತಿಯು 2023ನೇ ಸಾಲಿನ ಈ ಹೊತ್ತಿಗೆ ಪ್ರಶಸ್ತಿ ಪಡೆದ ಕೃತಿಯಾಗಿದ್ದು ಓದುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಸಹ ಪಡೆಯುತ್ತಿದೆ. ಈ ಪುಸ್ತಕಕ್ಕೆ ಲೇಖಕರಾದ ಮಣಿಕಾಂತ್‌ ಎ. ಆರ್.‌ ಮುನ್ನುಡಿ ಬರೆದಿದ್ದು, ಈ ಹೊತ್ತಿಗೆ ಸಂಸ್ಥೆಯ ಅಧ್ಯಕ್ಷರಾದ ಜಯಲಕ್ಷ್ಮಿ ಪಾಟೀಲರ ಆಶಯ ನುಡಿ, ಈ ಹೊತ್ತಿಗೆ ಪ್ರಶಸ್ತಿಗೆ ತೀರ್ಪುಗಾರರಾಗಿದ್ದ ಎಸ್‌ ಆರ್‌ ವಿಜಯಶಂಕರ್‌ ಅವರ ತೀರ್ಪುಗಾರರ ನುಡಿ ಈ ಪುಸ್ತಕದಲ್ಲಿದೆ. ಹೊಸ ಲೇಖಕರನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸುವ ಸಂಕಲ್ಪ ಹೊತ್ತಿರುವ ಸಾಹಿತ್ಯಲೋಕ ಪ್ರಕಾಶನದ ರಘುವೀರ್‌ ಸಮರ್ಥ್‌ ರವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅಜಿತ್‌ ಕೌಂಡಿನ್ಯರವರು ವಿನ್ಯಾಸ ಮಾಡಿರುವ ಚಂದದ ಮುಖಪುಟವಿರುವ ಈ ಪುಸ್ತಕವನ್ನು ಲಕ್ಷ್ಮೀ ಮುದ್ರಣಾಲಯ ಬೆಂಗಳೂರು ಇವರು ಅಚ್ಚುಕಟ್ಟಾಗಿ ಮುದ್ರಿಸಿದ್ದಾರೆ.

ವಿನಾಯಕ ಅವರ “ಮರ ಹತ್ತದ ಮೀನು” ಕೃತಿಯಲ್ಲಿ ಒಟ್ಟು ಹತ್ತು ಕತೆಗಳಿವೆ. ಈ ಪುಸ್ತಕದಲ್ಲಿ ಅನೇಕ ನಿರೂಪಕರಿದ್ದಾರೆ. “ಗೋಪಿಯ ಅಜ್ಜಿ” ಕತೆಯಲ್ಲಿ ಗೋಪಿ, “ಕೆಂಪು ಕುಂಕುಮ ಕಪ್ಪು ಕುಂಕುಮ” ಕತೆಯ ಸಣ್‌ ಪಾಂಡುರಂಗ, ಈ ಇಬ್ಬರೂ ನಿರೂಪಕರು ಚಿಕ್ಕ ವಯಸ್ಸಿನ ಹುಡುಗರಾಗಿದ್ದಾರೆ. “ಚಿಕಿತ್ಸೆ” ಕತೆಯ ಹರೀಶ್‌, “ಭೂಮಿ” ಕತೆಯ ಮನೂ, “ಸ್ವಯಂ” ಕತೆಯ ಶರತ್‌ ಈ ಮೂವರು ವಯಸ್ಕ ಹುಡುಗರು ಅಥವಾ ಯುವಕರು, “ಸಕಲಕಲಾವಲ್ಲಭ” ಕತೆಯ ರಂಗ್ಯಾ ಕಥೆಯ ಮೊದಲಾರ್ಧದಲ್ಲಿ ಪುಟ್ಟ ಹುಡುಗನಾಗಿಯೂ, ನಂತರ ವಯಸ್ಕನಾಗಿಯೂ ನಿರೂಪಣೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದಾನೆ. “ಮರ ಹತ್ತದ ಮೀನು,” “ನೆಲೆ,” “ಒಣ ಮರದ ಹಸಿರೆಲೆ,” ಮತ್ತು “ಗೋಡೆ” ಕತೆಗಳಲ್ಲಿ ಕತೆಗಾರನೇ ನಿರೂಪಕನಾಗಿದ್ದಾನೆ. ವಿನಾಯಕ ಅವರು ತಮ್ಮ ಕತೆಗಳಲ್ಲಿ ನಿರೂಪಕನ ವಯಸ್ಸಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದಾರೆ. ಹಾಗೆಯೇ ಇಲ್ಲಿರುವ ಎಲ್ಲಾ ಕತೆಗಳು ವ್ಯಕ್ತಿ ಕೇಂದ್ರಿತ ಕತೆಗಳೇ ಆಗಿವೆ. ಹೆಚ್ಚಿನ ಕತೆಗಳಲ್ಲಿನ ಕೇಂದ್ರ ಪಾತ್ರದ ಜೊತೆಗೆ ಪೂರಕ ಪಾತ್ರವಾಗಿ ಒಬ್ಬ ನಿರೂಪಕನಿರುತ್ತಾನೆ. ಇಲ್ಲ ಪರೋಕ್ಷವಾಗಿ ನಿರೂಪಕನೇ ಕೇಂದ್ರ ಪಾತ್ರವಾಗಿರುತ್ತಾನೆ. ಪ್ರತೀ ಕೇಂದ್ರ ಪಾತ್ರಗಳ ಬಗ್ಗೆ ಮಾತನಾಡುತ್ತಾ ಕತೆಗಾರ ವಿನಾಯಕ ಅವರು ಪ್ರತೀ ಕತೆಗಳಲ್ಲಿ ವ್ಯಕ್ತಿಗತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ ಹೋಗುತ್ತಾರೆ. ಮೇಲ್ನೋಟಕ್ಕೆ ಪ್ರತೀ ಕೇಂದ್ರ ಪಾತ್ರದ ಸಮಸ್ಯೆಗಳು ವ್ಯಕ್ತಿಗತ ಸಮಸ್ಯೆಗಳಾಗಿ ಕಂಡರೂ, ಮೂಲದಲ್ಲಿ ಅವು ಸಾಮಾಜಿಕ ಸಮಸ್ಯೆಗಳು ಎನ್ನುವುದು ಕತೆಗಳನ್ನು ಓದುತ್ತಾ ಹೋದಂತೆ ಮನವರಿಕೆಯಾಗುತ್ತದೆ.

ಈ ಕಥಾಸಂಕಲನದಲ್ಲಿ ಸಿಗುವ ಒಂದಷ್ಟು ವ್ಯಕ್ತಿಗತ ಸಮಸ್ಯೆಗಳ ಮೇಲೆ ಕಣ್ಣಾಡಿಸಿದರೆ ಈ ಪುಸ್ತಕದ ಮೊದಲ ಕತೆ “ಗೋಪಿಯ ಅಜ್ಜಿ” ಕತೆಯಲ್ಲಿ ಶೀರ್ಷಿಕೆಯೇ ಹೇಳುವಂತೆ ಅಜ್ಜಿ ಕೇವಲ ಮೊಮ್ಮಗನಿಗಷ್ಟೇ ಅಜ್ಜಿ ಎನ್ನುವುದು ಮನವರಿಕೆಯಾಗುತ್ತದೆ. ಮನೆಯಲ್ಲಿ ಆ ಅಜ್ಜಿ ಬೇರೆ ಯಾರಿಗೂ ಬೇಡವಾದ ಒಬ್ಬ ವ್ಯಕ್ತಿ ಎನ್ನುವುದನ್ನು ನಾವು ಅರಗಿಸಿಕೊಳ್ಳಲಾಗದ ವಿಷಯವಾದರೂ ಆ ಅಜ್ಜಿಯಂತೆ ಎಷ್ಟೋ ಹಿರಿಯ ಜೀವಗಳು ಮನೆಗಳಲ್ಲೋ, ಅನಾಥಾಶ್ರಮಗಳಲ್ಲೋ, ಇಲ್ಲ ಎಲ್ಲೋ ಯಾರೂ ದಿಕ್ಕಿಲ್ಲದವರ ರೀತಿ ದಿನ ಕಳೆಯುತ್ತಿರುವುದು ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಕತೆಗೆ ತದ್ವಿರುದ್ಧ ಎನ್ನುವಂತೆ “ಒಣಮರದ ಹಸಿರೆಲೆ” ಕತೆಯಲ್ಲಿ ವಯಸ್ಸಾದ ಹಾಸಿಗೆ ಹಿಡಿದ ತಂದೆಯನ್ನು ಮಗ ಆರೈಕೆ ಮಾಡುವುದನ್ನು ತುಂಬಾ ವಿಶಿಷ್ಟವಾಗಿ ಲೇಖಕ ಕಟ್ಟಿಕೊಟ್ಟಿದ್ದಾರೆ. ಇಂತಹ ಆರೈಕೆ ಮಕ್ಕಳಲ್ಲಿ ವಯಸ್ಸಾದ ಪೋಷಕರ ಮೇಲಿರುವ ತಾತ್ಸಾರದ ರೋಗಕ್ಕೆ ಮದ್ದು ಎನ್ನುವಂತಹ ಸಂದೇಶವನ್ನು ಕತೆಗಾರ ವಿನಾಯಕ ಅವರು ಈ ಕತೆಯಲ್ಲಿ ಹೇಳುವುದಲ್ಲದೇ ಹಿರಿಯ ಜೀವಗಳ ಪೊರೆಯಬೇಕಾದ ಅವಶ್ಯಕತೆಯನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಟ್ಟು ಒಂದು ಮಾದರಿಯನ್ನು ಸೃಷ್ಟಿಸಿದ್ದಾರೆ..

ಇಂಗ್ಲೀಷ್‌ ನಲ್ಲಿ “Everyone is a genius. But if you judge a fish by its ability to climb a tree, it will live its whole life believing that it is stupid.” ಎಂಬ ಮಾತೊಂದಿದೆ. ಈ ಮಾತಿನ ಸಾರಾಂಶ “ಪ್ರತಿಯೊಬ್ಬರೂ ಜಾಣರೇ. ಮೀನಿನ ಜಾಣ್ಮೆಯನ್ನು ಅದು ಮರ ಹತ್ತುವ ಸಾಮರ್ಥ್ಯದ ಮೇಲೆ ಅಳೆದರೆ ಇಡೀ ತನ್ನ ಜೀವನವನ್ನು ತಾನು ಶತದಡ್ಡ ಎಂದುಕೊಂಡು ಮೀನು ಬದುಕುತ್ತದೆ.” ಎಂದು ಹೇಳಬಹುದು. ಈ ಇಂಗ್ಲೀಷ್‌ ನುಡಿಗಟ್ಟಿನ ಆಧಾರದ ಮೇಲೆಯೇ ಪುಸ್ತಕದ ಶೀರ್ಷಿಕೆ ರಚಿತವಾಗಿರುವ ಕಾರಣಕ್ಕೆ “ಮರ ಹತ್ತದ ಮೀನು” ಕತೆಯು ವ್ಯಕ್ತಿಗತ ಸಮಸ್ಯೆಯಾದ ಕೀಳರಿಮೆಯ ಕುರಿತು ಬೆಳಕು ಚೆಲ್ಲುವ ಒಂದು ಕತೆಯಾಗಿದೆ. ಕೀಳರಿಮೆಯ ಕಾರಣಕ್ಕೆ ಎಷ್ಟೋ ಜನ ಜೀವನದಲ್ಲಿ ಆತ್ಮವಿಶ್ವಾಸವನ್ನೇ ಕಳೆದುಕೊಂಡು ವೈಫಲ್ಯತೆಯನ್ನಷ್ಟೇ ಬದುಕಿನ ತುಂಬಾ ತುಂಬಿಕೊಂಡು ಬದುಕಿಬಿಡುವವರಿದ್ದಾರೆ. ಅಂತಹ ಕೀಳರಿಮೆಯ ಒಂದು ಉದಾಹರಣೆಯನ್ನು ಇಟ್ಟುಕೊಂಡು ರಚಿಸಿರುವ “ಮರ ಹತ್ತದ ಮೀನು” ಕತೆಯನ್ನು ಓದಿದರೆ ಖಂಡಿತಾ ಕೀಳರಿಮೆಯಿಂದ ಬದುಕುತ್ತಿರುವವರು ಬದುಕಿನ ಇನ್ನೊಂದು ಮಗ್ಗುಲನ್ನು ನೋಡಬಹುದು.

“ಒಂಟಿತನ” ವಿನಾಯಕರ ಹಲವು ಕತೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪಾತ್ರಗಳೊಡನೆ ಜೊತೆಯಾಗಿಬಿಟ್ಟಿದೆ. “ಗೋಪಿಯ ಅಜ್ಜಿ” ಕತೆಯಲ್ಲಿನ ಅಜ್ಜಿಗಾಗಲಿ, “ಕೆಂಪು ಕುಂಕುಮ ಕಪ್ಪು ಕುಂಕುಮ” ಕತೆಯ ನಾಗರಯ್ಯನಿಗಾಗಲಿ, “ಚಿಕಿತ್ಸೆ” ಕತೆಯ ಸುಧಾಕರ್‌ ಪಟವರ್ಧನ್‌ ಗಾಗಲಿ, “ಮರ ಹತ್ತದ ಮೀನು” ಕತೆಯ ಗೌತಮ್‌, “ಸ್ವಯಂ” ಕತೆಯ ಶರತ್‌ ಗಾಗಲಿ, “ನೆಲೆ” ಕತೆಯಲ್ಲಿನ ಶಿಶಿರನಿಗಾಗಲಿ, “ಒಣಮರದ ಹಸಿರೆಲೆ” ಕತೆಯ ಪರಮೇಶ್‌ ಅಥವಾ ಪರಮ, ಕತೆಯ ಉದ್ದಕ್ಕೂ ಕಾಣುವುದು ಕಾಡುವುದು ಒಂಟಿತನವೇ ಹೊರತು ಬೇರೇನಿಲ್ಲ. ಗೋಪಿ ಅಜ್ಜಿ ಎಲ್ಲರೂ ಇದ್ದು ಯಾರೂ ಇಲ್ಲದಂತೆ ಬದುಕಿದರೆ, ಸುಧಾಕರ್‌ ಪಟವರ್ಧನ್‌ ಬಳಿ ಎಲ್ಲವೂ ಇದ್ದು ಯಾರೂ ಜೊತೆಗಿರುವುದಿಲ್ಲ. ಯೌವನದ ಹೊಸ್ತಿಲಲಿ ನಿಂತಿರುವ ಗೌತಮ್‌, ಶರತ್‌, ಶಿಶಿರ, ಪರಮರ ಒಂಟಿತನದ ಬಗೆಯೇ ಒಂದೊಂದು ತರಹದ್ದಾದರೆ, ಯೌವನದ ಹೊಸ್ತಿಲನು ದಾಟಿ ಬಂದಿರುವ ನಾಗರಯ್ಯನ ಒಂಟಿತನದ ಚಡಪಡಿಕೆಗಳೇ ಬೇರೆ. ಆ ಚಡಪಡಿಕೆಗಳು ಮತ್ತು ತಾನು ನಡೆದು ಬಂದ ಬದುಕಿನ ದಾರಿಯ ಕಷ್ಟ ಕೋಟಲೆಗಳ ಸಾರಾಂಶವನ್ನು ಕತೆಯ ನಿರೂಪಕ ಶಣ್‌ ಪಾಂಡುರಂಗನಿಗೆ ನಾಗರಯ್ಯ ಹೇಳುವುದೇ ಒಂದು ಜೀವನಪಾಠದಂತಿದೆ.

ನಾಗರಯ್ಯ ಶಣ್‌ ಪಾಂಡುರಂಗಗೆ ಹೇಳುವ ಒಂದು ಮಾತಿನ ಉದಾಹರಣೆ ಹೀಗಿದೆ: “ಹಂಗನ್ಬಾರ್ದು ಮಾಣೀ. ಈಗೇನೋ ಅಮ್ಮ ಇದಾರೆ. ನಡೀತದೆ. ಮುಂದೆಂತ ಹೇಳು? ಮನೆಗೋದಾಗ ತಟ್ಟೆ ಇಟ್ಟು ಬಡಿಸೋಕೆ, ಮನೆಗೆ ಹೋಗಿಲ್ಲಾಂದ್ರೆ ಬಾಗ್ಲಲ್ಲಿ ನಿಂತು ಕಾಯೋಕೆ ನಮ್ದೂಂತ ಒಂದು ಹೆಣ್ಣು ಜೀವ ಇರ್ಬೇಕು ಕಣಾ, ಹೆಣ್ಣು ತಾಯಿ. ಅವ್ಳ ಪ್ರೀತೀಲಿ ಭೇದ ಇರಲ್ಲ. ಆದ್ರೆ ಜಗತ್ತು ಹಾಗಲ್ಲ. ಅದು ಸ್ವಾರ್ಥ ನೋಡ್ತದೆ. ನಮ್ಮೋರು ಅಂತ ಯಾರೂ ಇಲ್ಲಿರೋ ಹಾಳು ಜೀವನ ನಮ್ಮಂತೋರಿಗೇ ಸಾಕು. ನಿಂಗದು ಬ್ಯಾಡ, ನೀನೇನೂ ಹೆದರ್ಬೇಡ, ಸಾಗರದ್ ಕಡೆ ಒಳ್ಕೊಳ್ಳೆ ಹೆಣ್ಣಿದ್ದೋ. ನಾನ್ ನೋಡ್ತೆ ನಿಂಗೆ.” ಈ ಮಾತನ್ನು ಗಮನಿಸಿದಾಗ ಮೇಲೆ ಹೆಸರಿಸಿದ ಅಷ್ಟೂ ಅವಿವಾಹಿತ ಹುಡುಗರಿಗೆ ವಿವಾಹವಾದರೆ ಅಥವಾ ಅವರಿಗೆ ಅವರ ಆಪ್ತರಾದವರ ಸಾಂಗತ್ಯ ದೊರೆತರೆ ಬಹುಶಃ ಅವರ ಒಂಟಿತನಗಳು ದೂರವಾಗುತ್ತವೇನೋ ಎಂದು ಕತೆಗಳನ್ನು ಓದುವಾಗ ಅನಿಸಿಬಿಡುತ್ತದೆ.

ಇನ್ನು ವಿನಾಯಕ ಅವರ ಭಾಷೆಯ ಬಳಕೆಯ ಬಗ್ಗೆ ಹೇಳಬೇಕೆಂದರೆ ಅವರು ಕವಿಯೂ ಕೂಡ ಆಗಿರುವ ಕಾರಣಕ್ಕೆ ಕಥನ ಕಲೆಯೂ ಅವರಿಗೆ ಸುಲಭವಾಗಿ ಸಿದ್ಧಿಸಿದೆ. ಕತೆಗಳಲ್ಲಿ ಅವರು ಬಳಸುವ ಉಪಮೆಯಂತಹ ಸಾಲುಗಳು ಬಹಳ ವಿಶಿಷ್ಟತೆಯಿಂದ ಕೂಡಿರುತ್ತವೆ. ಹವ್ಯಕ ಕನ್ನಡದ ಘಮ ಅನೇಕ ಕತೆಗಳಲ್ಲಿ ನಮಗೆ ಓದುಲು ಸಿಕ್ಕಿದರೆ, ಸಕಲಕಲಾವಲ್ಲಭ ಕತೆಯಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಓದುಗರಿಗೆ ತಲುಪಿಸುವಲ್ಲಿ ವಿನಾಯಕ ಅವರು ಯಶಸ್ವಿಯಾಗಿದ್ದಾರೆ.

ವಿನಾಯಕ ಅವರ ಈ ಪುಸ್ತಕದಲ್ಲಿನ ಒಂದಷ್ಟು ಉಪಮೆಗಳಂತಹ ಉದಾಹರಣೆಗಳು ಈ ಕೆಳಗಿನಂತಿವೆ:
೧. ಎಲ್ಲರ ಚಪ್ಪಾಳೆಯನ್ನು ಜೇಬಿಗೆ ತುಂಬಿಸಿಕೊಂಡು ಹೋದರು (ಮರ ಹತ್ತದ ಮೀನು)
೨. ಬಸವನ ಹಿಂದೆ ಬಾಲದಂತೆ ಬೆನ್ನಿಗೆ ತೊಟ್ಟ ಬ್ಯಾಗಿನಂತೆ ಬಾಸ್‌ ಸಹ ಅವನ ಹಿಂದೆ ಹೊರಟು ಹೋದರು (ಮರ ಹತ್ತದ ಮೀನು)
೩. ಹತ್ತು ದಿನಕ್ಕಿಂತ ಜಾಸ್ತಿ ಎಲ್ಲಾದರೂ ಓಡಾಡದೆ ಮನೆಯಲ್ಲೇ ಉಳಿದರೆ ನಾನು ಬದುಕಿಯೇ ಇಲ್ಲ ಅನಿಸೋಕೆ ಶುರುವಾಗುತ್ತದೆ. (ಕೆಂಪು ಕುಂಕುಮ ಕಪ್ಪು ಕುಂಕುಮ)
೪. ಬದುಕಿನ ಕಟ್ಟ ಕಡೆಯ ಕಾಲು ದಾರಿಯನ್ನು ಹುಡುಕಿ ಹೊರಟ ನಮ್ಮ ಪ್ರಯಾಣ ಹಾಗೆ ಆರಂಭವಾಯಿತು (ಚಿಕಿತ್ಸೆ)
೫. ಇಲ್ಲಿ ಯಾವುದೂ ಯಾರಿಗೂ ಸಾಕಾಗುವಷ್ಟಿಲ್ಲ. ಇದ್ದದ್ದನ್ನೇ ಹಂಚಿಕೊಳ್ಳಬೇಕು..(ಚಿಕಿತ್ಸೆ)
೬. ಮಳೆಗೆ ಎದೆ ಹಾಸಿದ್ದ ರಸ್ತೆಯತ್ತ ತಿರುಗಿದೆ (ಭೂಮಿ)
೭. ಭೂಮಿಯ ಮೊಗದಲ್ಲಿ ಸಣ್ಣ ಮುಂಜಾವೊಂದು ಮೂಡಿತು (ಭೂಮಿ)
೮. ಹಂಗಿನ ಜೀವನ ನಡೆಸುತ್ತಿರುವವರಿಗೆ ದೂರುವ ಹಕ್ಕಿರುತ್ತದೆಯೇ ಹೊರತು ದೂರುವ ಸ್ವತಂತ್ರವಿರುವುದಿಲ್ಲ (ಭೂಮಿ)
೯. ಸ್ಥಿರ ಬದುಕನ್ನು ಕಟ್ಟಿಕೊಂಡವರ ಕನವರಿಕೆಯಲ್ಲೂ ಹುಟ್ಟಿದೂರೇ ಇರುತ್ತದೆಂದರೆ!? (ನೆಲೆ)
೧೦. ಅಪ್ಪನ ನೆನಪುಗಳಿಂದ ಪಾರಾಗಿ ಮುಗುಳ್ನಗುವೊಂದನ್ನು ಎದೆಯಲ್ಲಿ ಬೆಳೆಯಲಿಕ್ಕೆ ಅವನು ತೆಗೆದುಕೊಂಡ ಸಮಯ ಬರೋಬ್ಬರಿ ಎರಡು ವರ್ಷಗಳು (ಒಣ ಮರದ ಹಸಿರೆಲೆ)

ಹೀಗೆ ವಿನಾಯಕ ಅವರು ಚಂದವಾಗಿ ಕತೆಯನ್ನು ನಮಗೆ ಕಟ್ಟಿಕೊಡುತ್ತಲೇ ಅವರೇ ಬರೆದ ಹಾಡಿನ ಸಾಲಿನಂತೆ “ಯಾವ ಹಾಡ ಹಾಡಬೇಕು ನೋವ ಮರೆಯಲು ಯಾವ ದೈವ ಹರಸಬೇಕು ಜೀವ ನಲಿಯಲು..” ಎಂಬಂತಹ ಭಾವವನ್ನು ಎಲ್ಲಾ ಕತೆಗಳಲ್ಲಿಯೂ ಅವರಿಗೆ ಗೊತ್ತಿಲ್ಲದ ಹಾಗೆಯೇ ಹರಡಿಬಿಟ್ಟಿದ್ದಾರೆ. ಆ ಕಾರಣಕ್ಕೆ ವಿನಾಯಕರವರ ಅನೇಕ ಕತೆಗಳನ್ನು ಕೂಲಂಕುಶವಾಗಿ ನೋಡಿದಾಗ ಗತಕಾಲದ ನೆನಪುಗಳನ್ನು ಮೆಲುಕು ಹಾಕುತ್ತಾ, ವಾಸ್ತವ್ಯದ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುತ್ತಾ ಕತೆಯನ್ನು ಮುಂದುವರೆಸಿಕೊಂಡು ಹೋಗುವ ಲೇಖಕರು, ಪ್ರತಿ ಕತೆಯನ್ನು ಸಾಮಾನ್ಯವಾಗಿ ಒಂದು ವಿಷಾದದಿಂದಲೇ ಅಂತ್ಯಗೊಳಿಸಿದ್ದಾರೆ. ಅದನ್ನ ದುಃಖಾಂತ್ಯ ಅನ್ನಲಾಗದು. ಅದು ವಿನಾಯಕರವರ ಕಥನ ಶೈಲಿಯಾಗಿದೆ. ಓದುಗರಾಗಿ ನಾವು ಅದನ್ನು ಒಪ್ಪಿಕೊಳ್ಳಬೇಕಿದೆ. ಹಾಗೆಯೇ ಈ ಪುಸ್ತಕದಲ್ಲಿನ “ಸ್ವಯಂ” ಎಂಬ ಕತೆಯಲ್ಲಿ ಬರುವ ವೈದ್ಯಲೋಕದ ಭಾಷೆಯನ್ನು ತುಂಬಾ ಅಚ್ಚುಕಟ್ಟಾಗಿ ಬರೆದಿರುವುದನ್ನು ನೋಡಿದಾಗ ವಿನಾಯಕ ಅವರು ವೈಜ್ಞಾನಿಕ ಬರಹದೆಡೆಗೂ ಒಲವು ತೋರಬೇಕು ಎನಿಸುತ್ತದೆ. ಅಷ್ಟು ಸಲೀಸಾಗಿ ಸಾಮಾನ್ಯರಿಗೂ ಅರ್ಥವಾಗುವ ರೀತಿ ಅವರು ಕೆಲವು ಪ್ರಸಂಗಗಳ ಕುರಿತು ಬರೆದಿದ್ದಾರೆ. ಒಟ್ಟಾಗಿ ಒಮ್ಮೊಮ್ಮೆ ತುಂಬಾ ಪರ್ಸನಲ್‌ ಆದ ವಿಷಯಗಳನ್ನು ಲೇಖಕ ತನ್ನ ಕತೆಗಳಲ್ಲಿ ಬೆರೆಸಲು ಹೋದಾಗ ಕಥನದ ಓಘಕ್ಕೆ ಚೂರು ದಕ್ಕೆಯಾದಂತೆ ಕಂಡರೂ ಕತೆಗಳನ್ನು ಧ್ಯಾನಿಸಿ ಬರೆದಿರುವ ಕಾರಣಕ್ಕೆ ವಿನಾಯಕ ಅವರ ಕತೆಗಳು ಓದಿಸಿಕೊಂಡು ಹೋಗುತ್ತವೆ.

ಈಗಾಗಲೆ ವಿನಾಯಕರವರ ಹಾಡುಗಳು ಭಾವಗೀತೆಗಳಾಗಿಯೂ ಯೂ ಟ್ಯೂಬ್‌ ನಲ್ಲಿ ಲಭ್ಯವಿವೆ. ಜೊತೆಗೆ “ನವಿಲು ಗರಿ ಮರಿ ಹಾಕಿತು” ಲಲಿತ ಪ್ರಬಂಧ ಸಂಕಲನವನ್ನು ಈಗಾಗಲೆ ಹೊರತಂದಿರುವ ವಿನಾಯಕರವರ “ಮರ ಹತ್ತದ ಮೀನು” ಎಂಬ ಈ ಕಥಾಸಂಕಲನ ಹೆಚ್ಚು ಕನ್ನಡಿಗರ ಮನೆಮನಗಳಿಗೆ ತಲುಪಲಿ ಎಂದು ಹಾರೈಸುತ್ತಾ ಅವರ ಈ ಹೊಸ ಪುಸ್ತಕಕ್ಕೆ ಶುಭ ಹಾರೈಸುತ್ತೇನೆ.

-ಡಾ. ನಟರಾಜು ಎಸ್.‌ ಎಂ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x