ಅರ್ಧ ಬಿಸಿಲು, ಅರ್ಧ ಮಳೆ, ಪೂರ್ಣ ಖುಷಿ, ಪೂರ್ಣ ಪೈಸಾ ವಸೂಲ್: ಜ್ಯೋತಿ ಕುಮಾರ್. ಎಂ(ಜೆ. ಕೆ.).

ರೈತ ಬೇಸಾಯ ಮಾಡಬೇಕು ಅಂದ್ರೆ, ಮುಂಗಾರಾ?, ಹಿಂಗಾರಾ?ಯಾವ ಬೆಳೆ ಬೆಳೆಯುವುದು, ಯಾವ ಮಣ್ಣಿಗೆ ಯಾವ ತಳಿ ಸೂಕ್ತ. ಮಣ್ಣಿನ ಪರೀಕ್ಷೆ ಮಾಡಿಸಬೇಕಾ? ಯಾವ ಯಾವ ಬೆಳೆಗಳಿಗೆ ಮತ್ತೆ ಯಾವ ಯಾವ ಮಣ್ಣಿನ ವಿಧಕ್ಕೆ ಯಾವ ಯಾವ ಗೊಬ್ಬರ ಸೂಕ್ತ, ಕೊಟ್ಟಿಗೆನೋ? ಸರ್ಕಾರಿ ಗೊಬ್ಬರನೋ?ವಿವಿಧ ರೀತಿಯ ಕಳೆ ಹಾಗೂ ಕೀಟಗಳ ನಿರ್ವಹಣೆ ಹೇಗೆ? ಇಷ್ಟೆಲ್ಲಾ ತಿಳಿದು ಮಾಡಿದ ಬೇಸಾಯಕ್ಕೆ ಉತ್ತಮ ಫಲ ಬಂದೆ ಬರುತ್ತೇ ಅನ್ನೋ ಗ್ಯಾರಂಟಿ ಇರುವುದಿಲ್ಲ. ಅಷ್ಟಿಲ್ಲದೇ ಹೇಳುತ್ತಾರೆಯೆ, “ಬೇಸಾಯ ನೀ ಸಾಯ, ನಿನ್ನ ಮನೆಯವರೆಲ್ಲ ಸಾಯ” ಅಂತ.

ಆದರೆ ಇದೆಲ್ಲಕ್ಕೂ ಅನ್ವರ್ಥಕವೆಂಬಂತೆ, ತಮ್ಮ ಪಾಡಿಗೆ ತಾವು ಸಾಹಿತ್ಯ ಕೃಷಿ ಮಾಡುತ್ತಾ, ಕವನ, ಕಥೆ, ವ್ಯಕ್ತಿತ್ವ ವಿಕಸನದ ಲೇಖನಗಳು, ಸಾಪ್ತಾಯಿಕ ಪುರವಣಿಗಳ ಲೇಖನಗಳು ಹಾಗೂ ವಿಮರ್ಶೆಯಂತ ಬೆಳೆಗಳನ್ನು ವರ್ಷಪೂರ್ತಿ ಬೆಳೆಯುತ್ತಾ ಹುಲುಸಾದ ಇಳುವರಿಯನ್ನು ತೆಗೆಯುತ್ತಿರುವವರು, ಸದಾಶಿವ ಸೊರಟೂರು ಅವರು. ಸೊರಟೂರುರವರು ನೇರ ನಿರೂಪಣೆಯ, ಸರಳ ಭಾಷೆಯ ಪ್ರಯೋಗದಿಂದ, ಜನ ಸಾಮಾನ್ಯರನ್ನು ಬೇಗ ಮುಟ್ಟಬಲ್ಲರು ಅಲ್ಲದೇ ಕನ್ನಡ ಸಾಹಿತ್ಯಕ್ಕೆ ನಿಜವಾಗಿಯೂ ಸ್ಥಿರಾಸ್ತಿಯಾಗಿದ್ದಾರೆ ಎಂಬುದರಲ್ಲಿ ಯಾವುದೇ ಅತಿಶಯ ಇರುವುದಿಲ್ಲ.

ಸದಾಶಿವ ಸೊರಟೂರು ಇವರ “ಅರ್ಧ ಬಿಸಿಲು, ಅರ್ಧ ಮಳೆ” ಕಥಾ ಸಂಕಲನವು ಒಟ್ಟು ಹತ್ತು ಕಥೆಗಳನ್ನು ಒಂದಿದ್ದು, ಮಾನವೀಯ ಸಂಬಂಧಗಳ ನೆಲೆಗಟ್ಟಿನ ಮೇಲೆಯೆ ರಚಿಸಲಾಗಿರುತ್ತದೆ. ಇಂದಿನ ಆನ್ ಲೈನ್ ಯುಗದಲ್ಲಿ ಮಾನವೀಯ ಸಂಬಂಧಗಳ ಬೆಲೆ, ಮಾನವೀಯ ಮೌಲ್ಯಗಳು ಅಂದ್ರೇನು? ಎಂದು ಕೇಳುವ ಸ್ಥಿತಿಗೆ ಬಂದು ನಿಂತಿರುವ, ವ್ಯಾವಹಾರಿಕ ಜಗತ್ತಿನಲ್ಲಿನ, ದುಗುಡ ದುಮ್ಮಾನ ತುಂಬಿಕೊಂಡು, ವಾರಕ್ಕೊಂದು ಭಾನುವಾರದಂದು ಭಾವನೆಗಳೆಲ್ಲವನ್ನೂ ವಾಂತಿ ಮಾಡಲು ಪ್ರಯತ್ನಿಸುತ್ತಿರುವ, ಯಾಂತ್ರಿಕ ಮಾನವರ ಜಗತ್ತಿನವರು, ಅತೀ ಜರೂರು ಓದಲೇ ಬೇಕಾದ ಕಥಾ ಸಂಕಲನಗಳ ಗುಚ್ಛ ಇದಾಗಿದೆ.

ನಿರೂಪಕರು ಯಾವಾಗಲೂ, ಯಾವುದೇ ಒಂದು ಕಥಾ ವಸ್ತುವಿನ ಆಯ್ಕೆಯಲ್ಲಿ ವ್ಯಕ್ತಿತ್ವವನ್ನು ಗೌರವಿಸುತ್ತಾರೆಯೆ, ಹೊರೆತು, ವ್ಯಕ್ತಿಯನ್ನಲ್ಲ. ಮೊದಲ ಕಥೆ ‘ನೀಲಿ’ಯಲ್ಲಿಯೂ ಇದೇ ಸಂಭವಿಸುವುದು. ನೀಲಿ, ಅವಳ ದೇಹ, ಸೌಂದರ್ಯ ಊರಿನಲ್ಲಿರುವ ಪ್ರತಿಯೊಂದು ಗಂಡು ಪ್ರಾಣಿಗೂ ಬೇಕು. ಧೈರ್ಯ ಇಲ್ಲದವರು ನೀಲಿಯೊಂದಿಗೆ ಕನಸಿನಲ್ಲಿಯೆ ಮಲಗಿ ಎದ್ದು, ಸ್ವಪ್ನ ಸ್ಖಲನ ಮಾಡಿಕೊಂಡಿರುತ್ತಾರೆ. ಆದರೆ, ನೀಲಿ ಸತ್ತ ಮೇಲೆ, ಯಾವೊಬ್ಬ ಗಂಡಸೂ ಅವಳ ಮನೆಯ ಕಡೆ ಸುಳಿಯುವುದಿಲ್ಲ, ನಿರೂಪಕನ್ನನ್ನೂ ಒಳಗೊಂಡತೆ, ಕಾರಣ “ಅವಳನ್ನು ಇವನು ಕೂಡ ಇಟ್ಟಕೊಂಡಿದ್ದ ಅನಿಸುತ್ತೆ” ಎಂದು ಬರಬಹುದಾದ ಆಪಾಧನೆ. ನಿರೂಪಕ ನೀಲಿಯ ಮೇಲಿನ ಅನೇಕ ಭಾವನೆಗಳ ತೊಳಲಾಟದಿಂದ, ಏನೇನೋ ಮಾಡಲಾ? ಎಂದು ಯೋಚಿಸಿ ಕೊನೆಗೆ ವಾಸ್ತವ ಅಂತ್ಯವನ್ನೇ ನೀಡುತ್ತಾರೆ, ಕಥೆ ಮುಗಿಸುತ್ತಾರೆ. ಆದರೆ ಇದನ್ನು ಓದಿ, ಪುಸ್ತಕ ಎತ್ತಿಟ್ಟರೂ, ಮುಚ್ಚಿಟ್ಟರೂ, ಬೆರಳಿಗೆ, ಮನಸ್ಸಿಗೆ ಅಂಟದೇ ಇರದೂ, ನೀಲಿ ಎಂಬ ರಂಗು!!.

‘ಹಾಸಿಗೆ ಇದ್ದಷ್ಟೆ, ಕಾಲು ಚಾಚ ಬೇಕು’, ತಮ್ಮ ಅಗತ್ಯ ಹಾಗೂ ಬೇಕು ಬೇಡಿಕೆಗಳಿಗೆ ಅನುಗುಣವಾದ ಶಾಲೆ ಸೇರಬೇಕು, ಇದ್ದಿದ್ದರಲ್ಲಿಯೆ ಕಲಿಯಬೇಕು. ಪರಸು ಸೇರಿದ್ದು ಸರ್ಕಾರಿ ಶಾಲೆಯೆ ಆದರೂ, ಅವನೂ ಕನಸಿನಲ್ಲಿಯೂ ಊಹಿಸಿರದ ಪೆನ್ಸಿಲ್, ನೂರು ಮೀಟರ್ ಓಟದ ಪ್ರಥಮ ಸ್ಥಾನಕ್ಕಾಗಿ ಸಿಕ್ಕು ಬಿಡುತ್ತದೆ. ಪೆನ್ಸಿಲ್ ಏನೋ ಸಿಕ್ತು, ಆದರೆ ಅದನ್ನು ಕೆತ್ತುವುದು ಹೇಗೆ? ಆ ಕಾರ್ಯದಲ್ಲಿ ಅವನಿಗೆ ಯಾವೊಂದು ಪಾತ್ರದ ಸಹಕಾರವೂ ಸಿಗದ ಕಾರಣ, ಅದೊಂದು ‘ಬಿಸಿಲು ಕೋಲಿ’ನಂತೆ ಗೋಚರಿಸಿ, ನಿರುಪಯುಕ್ತವಾಗುತ್ತದೆ.

ತೇಜು, ನೆರೆದ ಜಾತ್ರೆಯಲ್ಲಿ ತನ್ನ ಅಮ್ಮನ್ನನ್ನು ಹುಡುಕಲು ಹೋಗಿ ತಾನೇ ಗೂಡನ್ನು ಬಿಟ್ಟು ಹೋಗುತ್ತಾನೆ. “ಲಲಿತಕ್ಕ ಇದ್ದಿದ್ರೆ ತೇಜುಗಾದರೂ ಬರುತ್ತಿದ್ಲು ಅಲ್ವ್ರಾ?ಅದೇನು ಮಾಡಿದ್ನೊ…”ಎನ್ನುವ ಮಾತುಗಳಿಂದಾನೆ, ತೇಜುವಿನ ಅಪ್ಪನ ಕುಟಿಲ ವ್ಯೂಹ, ತೇಜುವಿನ ಅನಾಥ ಪ್ರಜ್ಞೆ ಇವಲ್ಲವೂ ಬಹು ಸೊಗಸಾಗಿ ಮೂಡಿ ಬಂದಿರುವುದು, “ಹಾರಿದ ಪುಟ್ಟ ಹಕ್ಕಿಯ ಜಾಡು” ಕಥೆಯಲ್ಲಿ.

ಹುಡುಗಿಯೊಬ್ಬಳು, ಯೌವ್ವನದ ಹಂತ ತಲುಪುವುದು, ಅವಳು ರಜಸ್ವಲೆಯಾಗುವುದು, ಹೆಣ್ಣಾಗುವುದು, ಹಣ್ಣಾಗುವುದು, ಈ ಪುರುಷ ಪ್ರಧಾನ ಸಮಾಜದಲ್ಲಿ ತುಂಬ ಮುಖ್ಯವಾಗುತ್ತದೆ. ಹೆಣ್ಣು ಮೈ ನೆರೆದಿಲ್ಲ ಅಂದರೆ, ಅದು ಬಂಜೆ ನೆಲ, ಗೊಡ್ಡು ಬಿದ್ದ ಪಶು ಅಂತಲೇ ಅರ್ಥ. ತನ್ನ ಗೆಳತಿಯರು ಮಾಡುತ್ತಿದ್ದ ಅವಮಾನಗಳಿಂದ, ತಪ್ಪಿಸಿಕೊಳ್ಳಲು ಗೀತ ಮಾಡುವ ಉಪಾಯಗಳು, ಜೀನ್ಸ್ ಮತ್ತು ಟಾಪ್ ಅನ್ನು ತೊಡುವ ಆಸೆಯನ್ನು ಒತ್ತಿ ಇಡಿಯುವುದು, ಈ ಎಲ್ಲಾ ತೊಳಲಾಟಗಳನ್ನು ಕವಿ ಸ್ವತಃ ಅನುಭವಿಸಿದಂತೆ ವ್ಯಕ್ತಪಡಿಸುತ್ತಾ ಹೋಗುತ್ತಾರೆ, “ಕನಸಿನಲ್ಲಿ ಸುರಿದ ಕೆಂಪು ಮಳೆ”ಯಲ್ಲಿ.

ಗಂಡು ದಿಕ್ಕಿಲ್ಲದಿದ್ದರೆ, ಒಳ್ಳೆ ಅಂಗ ಸೌಷ್ಟವವನ್ನು ಹೊಂದಿದ್ದರೆ, ಮತ್ತದೇ ಪುರುಷ ಪ್ರಧಾನ ಸಮಾಜದಲ್ಲಿ ಯಾವುದೇ ರಕ್ಷಣೆಯ ಗ್ಯಾರಂಟಿ ಇರುವುದಿಲ್ಲ, ಹೆಣ್ಣಿಗೆ. “ಬಯಲಿ”ಗೆ ಬಿದ್ದ ಅವಳನ್ನು ಉಂಡು, ಒಂದು ಹೆಣ್ಣು ಮಗವನ್ನು ದಯಪಾಲಿಸಿದ, ಈರಪ್ಪ ಎಂದಿಗೂ ವಾಪಾಸ್ಸು ಬರದ ಮೊಲದ ಬೇಟೆಗೆ ಹೋಗಿರುತ್ತಾನೆ. ನಾಲ್ಕು ನಾಲ್ಕು ದಿನಕ್ಕೆ ಊರುಗಳನ್ನು ಬದಲಾಯಿಸುತ್ತಾ, ಬಿಕ್ಷೆ ಬೇಡಿ ಉಂಡು, ಬಯಲಲ್ಲಿ ಮಲಗಿದಾಗ, ಮತ್ತದೇ ರಕ್ಕಸ ದೇಹಿಯಿಂದ ದೈಹಿಕ ಸುಖ ಉಣ್ಣುತ್ತಾಳೆ. ಸುಲಭಕ್ಕೆ ವೈಶ್ಯಯಾಗಬಹುದಾದವಳು ಕುಳಿತು ಯೋಚಿಸಿ, ಒಂದು ಅಸನಾದ ಬದುಕು ಕಟ್ಟಿಕೊಳ್ಳಲು ಹೊರಡುತ್ತಾಳೆ. “ಬಯಲು ಆಲಯದೊಳಗೊ, ಜಗವೆ ಬಯಲೊಳಗೊ” ಯೋಚನೆಗೆ ಹಚ್ಚಿ.

ಸಣ್ಣ ಮಕ್ಕಳನ್ನು ಶಾಲೆಗೆ, ವಯಸ್ಸಾದವರನ್ನು ಅನಾಥಾಶ್ರಮಕ್ಕೆ , ಬಿಟ್ಟು ಬರುವಾಗ ಅವರುಗಳು ಅನುಭವಿಸೋ ಯಾತನೆ, ದೇವರಿಗೆ ಪ್ರೀತಿ. ದೊಡ್ಡಪ್ಪನ್ನನ್ನು ಮನೆಯಿಂದ ಹೊರಗೆ ಹಾಕಿದಾಗ, ಅವರು ಅನುಭವಿಸುವ ಹಿಂಸೆಯನ್ನು ನಿರೂಪಕರು, ಮಳೆಯ ರೂಪದಲ್ಲಿ ವ್ಯಕ್ತ ಪಡಿಸಿದ್ದಾರೆ. ಆದರೆ ಇದ್ಯಾವುದನ್ನೂ ಯಾರಿಗೂ ಹೇಳದೆ, ಹೊಳೆಯ ಪಾಲಾಗುವ “ ಮುಗಿಲ ದುಃಖ” ಕಥೆಯನ್ನು ಇಂದಿನ ತಲೆಮಾರಿನವರು ಸಾವಾಕಾಶವಾಗಿ ಕುಳಿತು ಓದಬೇಕು.

ಕೆಲವು ದಿನಗಳ ಹಿಂದೆ ಮನೆ ಬಿಟ್ಟು ಹೋದ ತಮ್ಮ, ಶಾಲೆಯಲ್ಲಿ ಹೆಣ್ಣಾಗಿ ಬದಲಾಗುತ್ತಿರುವ ಸಂಜೀವ. ಇವರುಗಳ ನಡುವೆ ಅಸಹಾಯಕರಾಗಿ ಒದ್ದಾಡೋ ಸುಬ್ಬು ಮಾಸ್ತರ್. ತೃತೀಯ ಲಿಂಗಗಳನ್ನು ನಮ್ಮ ಸಮಾಜ ನಡೆಸಿಕೊಳ್ಳುತ್ತಿರುವ ರೀತಿ, ಅವುರುಗಳ ಭಾವನೆಗಳಿಗೆ ನಾವು ಸ್ಪಂಧಿಸುತ್ತಿರುವ ರೀತಿಯನ್ನು ಓದಿ, ಕಣ್ಣೀರಾಗಬೇಕು “ಅರ್ಧ ಬಿಸಿಲು, ಅರ್ಧ ಮಳೆ “ ಕಥೆಯಲ್ಲಿ. ಇದೊಂದು ಪ್ರಸ್ತುತ ಕಾಲಘಟ್ಟದ ಸಮಸ್ಯೆಯೊಂದನ್ನು ಅತ್ಯಂತ ಮಾರ್ಮಿಕವಾಗಿ ಇಡಿದಿಟ್ಟ ಕಥೆಯಾಗಿರುವುದರಿಂದ, ಸಂಕಲನ ಟೈಟಲ್ ಆಗಿಯೂ ಬಳಕೆಯಾಗಿದೆ.

ಮಾನವ ಸಾಮಾಜಿಕ ಪ್ರಾಣಿ ನಿಜ. ಆದರೆ, ತನ್ನ ದೇಖ ರೇಕೆಗಳ ಮುಂದೆ ಎಲ್ಲವೂ ನಗಣ್ಯ ಎಂದು ಭಾವಿಸುತ್ತಾನೆ. “ಹುಚ್ಚು” ಕಥೆಯಲ್ಲಿನ, ಗೋಪಾಲಪ್ಪ, ಭಂಟಿ, ಟೆಲಿಫೋನ್ ಬೂತ್ ಹಾಗೂ ಸಮುದ್ರ ಇವುಗಳ ಸಂಬಂಧ ಅವರ್ಣನೀಯ, ಅನವರತ. ತಾನು ಮೆಚ್ಚಿದವಳನ್ನು ಮದುವೆಯಾಗುವುದಕ್ಕೋಸ್ಕರ, ಅಪ್ಪನ್ನನ್ನು ದೂರವಿರಿಸುವ ಮಗ, ಗೋಪಾಲಪ್ಪನ ಮಡಿಲಿಗೆ ಬಂದು ಬೀಳುವ ಭಂಟಿ, ಅದಕ್ಕೆ ಹುಚ್ಚು ಇಡಿಯುವುದು, ಜೊತೆಗೆ ಸಮಾಜಕ್ಕೆ ಹುಚ್ಚು ಇಡಿಯುವುದು, ಅನುಭವಿಸಬೇಕೆ, ವಿನಃ, ವರ್ಣಿಸಲಸದಳ.

ಲೈಂಗಿಕತೆಗೋಸ್ಕರ ಮದುವೆಯಾಗುವುದಾ?ಅಥವಾ ಮದುವೆಯಾದ ಕಾರಣಕ್ಕೆ ಲೈಂಗಿಕ ಕ್ರಿಯೆ ನಡೆಸುವುದಾ?ಸಂತಾನ ಮದುವೆಯ ಬೈ ಪ್ರಾಡಕ್ಟಾ? ಇತ್ಯಾದಿ ಪ್ರಶ್ನೆ ಕೇಳುವ “ಹೆಸರು ಬೇಡ, ಊರು ಬೇಡ”ದಲ್ಲಿನ ರೀನಾ, ಇವುಗಳಿಗೆ ಸಂಪಾದಕರ ಪರವಾಗಿ ಸಮಾಧಾನದ ಉತ್ತರ ಬರೆಯುವ ತರುಣ್. ಸೊಗಸಾದ ನಿರೂಪಣೆಯೊಂದಿಗೆ ಮೂಡಿ ಬಂದ ಕೊನೆಯ ಕಥೆಯಾಗಿದೆ.

ಒಟ್ಟಾರೆಯಾಗಿ ಈ ಕಥಾ ಸಂಕಲನ, ತನ್ನನ್ನು ತಾನು ಓದಿಸಿಕೊಂಡು ಹೋಗುವ ಗುಣ, ದೊಂದಿಗೆ, ಓದುಗನ್ನನ್ನು ಯೋಚನೆಗೆ ಕೂರಿಸುತ್ತದೆ. ಆಲೋಚಿಸುವಂತೆ ಮಾಡುತ್ತದೆ. ಮಾನವ ಪ್ರಪಂಚದ ಅನೇಕ ದುಃಖ, ದುಮ್ಮಲಗಳು, ಸಂಬಂಧಗಳು, ಬೇಗುದಿಗಳು, ತೊಳಲಾಟಗಳು, ಒಳನೋಟಗಳು ಪೂರ್ಣ ತುಂಬಿ ಕೊಂಡ, ಒಂದು ಮಧುರ ಅನುಭೂತಿಯನ್ನು ನೀಡುತ್ತದೆ.

ಮೊದಲ ಕಥಾ ಸಂಕಲನದಲ್ಲಿಯೇ ಅನೇಕ ಭರವಸೆಗಳನ್ನು ಹುಟ್ಟು ಹಾಕಿರುವ ಸದಾಶಿವ ಸೊರಟೂರು ಇವರ ಲೇಖನಿಯಿಂದ, ಇನ್ನು ಇಂತ ಅನೇಕ ಸಂಕಲನಗಳು ಮೂಡಿ ಬರಬಹುದಾದ ಖಾತ್ರಿ ಭರವಸೆಯನ್ನು ಪ್ರತಿಯೊಬ್ಬ ಓದುಗ ಇಟ್ಟುಕೊಳ್ಳಬಹುದಾಗಿದೆ.

ಈ ಪುಸ್ತಕ ಕೊಳ್ಳಲು ಸಂಪರ್ಕಿಸಿ: ವೀರಲೋಕ ಬುಕ್ಸ್‌ 7022122121

ಜ್ಯೋತಿ ಕುಮಾರ್. ಎಂ(ಜೆ. ಕೆ.).ಜ್ಯೋತಿ ಕುಮಾರ್. ಎಂ(ಜೆ. ಕೆ. ), ಇವರು ಓದಿದ್ದು, ಎಮ್, ಎಸ್ಸಿ. ಎಮ್, ಇಡಿ. ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಮೇಷ್ಟ್ರು. ಮೂಲತಃ ದಾವಣಗೆರೆ ತಾಲ್ಲೂಕು ಹಾಗೂ ಜಿಲ್ಲೆಯ ಮುದಹದಡಿ ಗ್ರಾಮದವರು. ಸದ್ಯ ಸಂತೆಬೆನ್ನೂರಿನಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಹವ್ಯಾಸಿ ಬರಹಗಾರರಾಗಿದ್ದು, ಪ್ರಸ್ತುತ ಇವರ ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಹಾಯ್ ಬೆಂಗಳೂರು, ಮಂಗಳ, ನಿಮ್ಮೆಲ್ಲರ ಮಾನಸ ಪತ್ರಿಕೆ, ಪಂಜು ಮ್ಯಾಗಝೀನ್ ಗಳಲ್ಲಿ ಪ್ರಕಟವಾಗಿವೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x