ಆಳುವ ಪ್ರಭುತ್ವದ ಅಮಾನವೀಯ ನಡೆಯ ಘನಘೋರ ಚಿತ್ರಣದ ಸಿನಿಮಾ – ಫೋಟೋ: ಚಂದ್ರಪ್ರಭ ಕಠಾರಿ

ಕೊರೊನಾ ಕಾಲದ ವಲಸಿಗರ ಸಂಕಷ್ಟಗಳ ಕತೆಯ ‘ಫೋಟೋ’ ಸಿನಿಮಾ ಅಷ್ಟಾಗಿ ಪ್ರಚಾರಗೊಳ್ಳದೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಯುವ ನಿರ್ದೇಶಕ ಉತ್ಸವ್ ಗೋನಾವರ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಸಿನಿಮಾವನ್ನು ಕಲೆಯಾಗಿ ಕಟ್ಟಿದ್ದಾರೆ. ಅಲ್ಲದೆ – ತನಗಿರುವ ಪ್ರತಿಭೆಯ ಜೊತೆಗೆ ಸಾಮಾಜಿಕ ಕಳಕಳಿ, ಬದ್ಧತೆಯನ್ನು ಮೆರೆದಿದ್ದಾರೆ.   

ಉತ್ತರಕರ್ನಾಟಕದ ರಾಯಚೂರು ಜಿಲ್ಲೆಯ ಮಸ್ಕಿಯ ಪುಟ್ಟ ಗ್ರಾಮದ ಬಾಲಕ ದುರ್ಗ್ಯ, ಶಾಲೆಯಲ್ಲಿದ್ದ ವಿಧಾನಸೌಧದ ಪಟ ಕಂಡು, ಅದರ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳಬೇಕೆಂದು ಬಯಸುತ್ತಾನೆ. ಅದೇ ಹೊತ್ತಿಗೆ ಶಾಲೆಗೆ ಹದಿನೈದು ದಿನಗಳ ರಜೆ ಘೋಷಣೆಯಾಗುತ್ತದೆ. ರಜೆಯನ್ನು ಬಳಸಿಕೊಂಡು ವಿಧಾನಸೌಧದ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳಲು, ಅಮ್ಮನನ್ನು ಕಾಡಿ ಬೇಡುತ್ತ, ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ದುಡಿಯುವ ಅಪ್ಪನ ಬಳಿಗೆ ಕಳುಹಿಸುವಂತೆ ಹಠ ಮಾಡುತ್ತಾನೆ. ಬೆಂಗಳೂರಿಗೆ ಬರುವಲ್ಲಿ ಸಫಲನೂ ಆಗುತ್ತಾನೆ. ಆದರೆ, ಆದಿನ ಫೋಟೋ ತೆಗೆಸಿಕೊಳ್ಳಲು ಅವನಪ್ಪನೊಡನೆ ವಿಧಾನಸೌಧದ ಕಡೆ ಹೊರಟಾಗ ಪೊಲೀಸರು ಅಡ್ಡಗಟ್ಟಿ ಮನೆಗೆ ವಾಪಸ್ಸು ತೆರಳುವಂತೆ ಲಾಠಿ ಬೀಸುತ್ತಾರೆ. ಇದ್ದಕ್ಕಿದಂತೆ ದೇಶಾದ್ಯಂತ ಕೊರೊನಾ ಪಿಡುಗನ್ನು ನಿಯಂತ್ರಿಸಲು ಲಾಕ್ ಡೌನ್ ಘೋಷಣೆ ಆಗಿರುವುದು ಅಪ್ಪನಿಗೆ ತಡವಾಗಿ ತಿಳಿಯುತ್ತದೆ. ಈಗ ಕೆಲಸವಿಲ್ಲದೆ ಬೆಂಗಳೂರಿನಲ್ಲಿ ಇರಲಾಗದೆ ತನ್ನೂರಿಗೆ ಬಸ್ಸು, ರೈಲುಗಳಿಲ್ಲದೆ ದುರ್ಗ್ಯನ ಅಪ್ಪ ಕಾಲ್ನಡಿಗೆಯಲ್ಲೇ ಊರನ್ನು ಸೇರಲು ನಿರ್ಧರಿಸುತ್ತಾನೆ. ಮುಂದೆ, ನೂರಾರು ಮೈಲಿ ದೂರದ ಊರಿಗೆ ಕಾಲ್ನಡಿಗೆಯಲ್ಲೇ ಹೋಗುವ ದುರ್ಗ್ಯ, ಅವನ ಅಪ್ಪ ಮತ್ತು ಅವನ ಊರಿನ ಸಹವಾಸಿಗಳ ಪಯಣವಾಗಿ ಚಿತ್ರ ಅನಾವರಣಗೊಳ್ಳುತ್ತದೆ.   

ಉತ್ಸವ್ ಗೋನಾವರ ಅವರು ಈ ಕಾಲ್ನಡಿನ ಪಯಣವನ್ನು ಸಂಯಮದಿಂದ, ನಾಜೂಕಾದ ದೃಶ್ಯ ಜೋಡಣೆಯಿಂದ ಕಟ್ಟಿರುವ ಪರಿ ಸಿನಿಮಾವನ್ನು ಒಂದು ಅದ್ಭುತ ಕಲಾಕೃತಿಯನ್ನಾಗಿಸಿದೆ. ಚಿತ್ರದುದ್ದಕ್ಕೂ ಅವರು ಬಳಸುವ ನಿಶ್ಯಬ್ಧದ ತಂತ್ರಗಾರಿಕೆ –  ವಲಸಿಗರ ನಡಿಗೆಯ ಸಂಕಟ ನೋವು, ಊರನ್ನು ತಲುಪುವ ಅನಿಶ್ಚಿತತೆಯನ್ನು ನೋಡುಗರ ಎದೆಗೆ ಇಳಿಯುವಂತೆ ಮಾಡುತ್ತದೆ. ಹೆದ್ದಾರಿಗುಂಟ ಸಾಗುವ ಪಯಣದ ಕ್ಯಾಮೆರ ಕಣ್ಣೋಟ ಪರಿಣಾಮಕಾರಿಯಾಗಿದೆ. ನಿರ್ಜನ ರಸ್ತೆಯಲ್ಲಿ ದುರ್ಗ್ಯ, ಅವನ ಅಪ್ಪನ ಒಬ್ಬಂಟಿ ಪಯಣವನ್ನು ಚಿತ್ರಿಸುವ ಕ್ಯಾಮೆರ ಮೇಲಕ್ಕೆ ನಿಧಾನವಾಗಿ ಏರುತ್ತ, ಹೆಬ್ಬಾವಿನಂತೆ ಮಲಗಿದ ಹೆದ್ದಾರಿ, ದೂರದ ದಿಗಂತವನ್ನು ಗುರುತಿಸುವ, ಅದರೊಟ್ಟಿಗೆ ಅವರಿಬ್ಬರೂ ಕಣ್ಣಿಗೆ ಕಾಣದಷ್ಟು ಸಣ್ಣದಾಗಿ ತೋರುವ ದೃಶ್ಯವಂತೂ ಪ್ರಕೃತಿ ಮಾನವನ ಸಂಘರ್ಷ, ಅದಕ್ಕಿಂತ ಹೆಚ್ಚಾಗಿ ನಾಗರೀಕ ಸಮಾಜದ ಮೇಲೆ ಪ್ರಭುತ್ವ ನಡೆಸುವ ನಿರ್ದಾಕ್ಷಿಣ್ಯ ದಬ್ಬಾಳಿಕೆಯನ್ನು ರೂಪಕವಾಗಿ ತೋರಿಸುತ್ತದೆ.  

ಕೊರೊನಾ ಪಿಡುಗು ಆರಂಭದ ದಿನದಿಂದ ಮೊದಲ್ಗೊಂಡು ಯಾವುದೇ ಪೂರ್ವ ತಯಾರಿ ಇಲ್ಲದೆ, ಮುಂದೆ ಜನಗಳು ಅನುಭವಿಸಬಹುದಾದ ಸಂಕಷ್ಟಗಳ ಪರಿಕಲ್ಪನೆ ಇಲ್ಲದೆ, ಹಲವಾರು ಬಾರಿ ಲಾಕ್ ಡೌನ್ ಅವಧಿಯ ವಿಸ್ತರಣೆಯನ್ನು ಘೋಷಿಸುವ ಪ್ರಧಾನಿಮಂತ್ರಿ ಮೋದಿಯವರ ಕಂಚಿನ ಕಂಠದ ಖಡಕ್ಕಾದ, ಖಚಿತ ಮಾತನ್ನು ಹಿನ್ನೆಲೆ ಧ್ವನಿಯಾಗಿ ಬಳಸಿರುವುದು, ಆಳುವ ಪ್ರಭುತ್ವದ ಅವಿವೇಕತನ, ಪ್ರಜೆಗಳ ಮೇಲಿನ ನಿಶ್ಕಾಳಜಿಯನ್ನು ತೋರುತ್ತದೆ. ಅಲ್ಲದೆ ನಾಗರೀಕ ಸಮಾಜವನ್ನು ಅವಮಾನಿಸುವಂತಿದೆ. ವಲಸೆ ಹೊರಟ ಬಡಜನರ  ನೋವಿನ ಕೊರೊನಾ ಕಾಲದ ಕತೆಯನ್ನು ಸಿನಿಮಾ ಹೇಳುತ್ತಲೇ ಪ್ರಧಾನಮಂತ್ರಿ ತನ್ನ ಪ್ರಜೆಗಳಿಗೆ ಸೂಚಿಸುವ ಅವೈಜ್ಞಾನಿಕ ನಡೆಗಳನ್ನು ಚಿತ್ರ ವ್ಯಂಗ್ಯ ಮಾಡುತ್ತದೆ. ಪ್ರಾರಂಭದ ದೃಶ್ಯವೊಂದರಲ್ಲಿ ಎಲ್ಲರೂ ವೈರಸ್ಸಿಗೆ ಹೆದರಿ ಮನೆಯಲ್ಲಿ ಉಳಿದಿರುವಾಗ, ಕೇಸರಿ ಶಾಲಗಳನ್ನು ಹೊದ್ದು, ನಿರ್ಭಿಡೆಯಿಂದ ಒಂದಷ್ಟು ಜನರು ಪ್ರಧಾನಮಂತ್ರಿ ಸೂಚಿಸಿದಂತೆ ತಟ್ಟೆ, ಜಾಗಟೆ ಬಡಿಯುತ್ತ, ಶಂಖವನ್ನು ಊದುತ್ತ “ಗೊ ಕೊರೊನಾ…ಗೊ ಕೊರೊನಾ” ಎಂದು ಅರಚುತ್ತ ಸಾಗುವ ದೃಶ್ಯ, ದೀಪ ಬೆಳಗಿಸುವ ಪಟಾಕಿ ಹಚ್ಚುವ ದೃಶ್ಯಗಳು – ಪ್ರಭುತ್ವವು ಹೇಗೆ ಜನರನ್ನು ಪಿಡುಗಿನಿಂದ ಪಾರು ಮಾಡುವ ಬದಲು ಅವರನ್ನು ಭಾವನಾತ್ಮಕವಾಗಿ ಉದ್ದೀಪಿಸಿ, ಜನರು ಯೋಚಿಸುವ, ಪ್ರಶ್ನಿಸುವ ದಿಕ್ಕನ್ನು ಬೇರೆಡೆಗೆ ತಿರುಗುವಂತೆ ಮಾಡುತ್ತದೆ ಎಂಬುದನ್ನು ನಿರ್ದೇಶಕರು ಬಹಳ ಧೈರ್ಯದಿಂದಲೇ ಆ ದೃಶ್ಯಗಳನ್ನು ಕಟ್ಟಿದ್ದಾರೆ. ಹಾಗೆ ಎರಡು ದೃಶ್ಯಗಳಲ್ಲಿ ಖಾಲಿ ಅಡುಗೆ ಸಿಲಿಂಡರನ್ನು ತಿರುಗುಮುರುಗಾಗಿಸಿ ಇಟ್ಟಿರುವುದು ಪ್ರಧಾನಮಂತ್ರಿ ಉಜ್ವಲ ಯೋಜನೆಯ ನಿಷ್ಪಲತೆಯನ್ನು ಸಂಕೇತಿಸುತ್ತದೆ.  

ನಿರ್ದೇಶಕರು ಕೊರೊನಾ ಕಾಲದ ಕರಾಳ ಮುಖಗಳನ್ನು ಪ್ರಜ್ಞಾಪೂರ್ವಕವಾಗಿ ದಾಖಲಿಸಿದ್ದಾರೆ. ದೈನಿಕ ಪತ್ರಿಕೆಯ ಸಂದರ್ಶನದಲ್ಲಿ ಅವರು ಫೋಟೋ ಸಿನಿಮಾವನ್ನು ಮಾಡಲು ಕಾರಣ, ಸ್ಪೂರ್ತಿಯನ್ನು ಕೇಳಿದಾಗ “ಲಾಕ್ ಡೌನ್ ಕಾಲದಲ್ಲಿ ಬಸುರಿ ಮಹಿಳೆಯೊಬ್ಬಳು ತನ್ನೂರು ಬಳ್ಳಾರಿಗೆ ನಡೆಯುತ್ತ ಸಾವನ್ನಾಪ್ಪಿದ ಸುದ್ದಿಯನ್ನು ಓದಿ ಆಘಾತಗೊಂಡದ್ದೇ ಸಿನಿಮಾ ಮಾಡಲು ಹೊರಟ ಮೊದಲೇ ಹೆಜ್ಜೆ” ಎನ್ನುತ್ತಾರೆ. ಸಿನಿಮಾ ಉತ್ಸವದಲ್ಲಿ ಪ್ರೇಕ್ಷಕರ ಸ್ಪಂದನೆ ಬಗ್ಗೆ ಕೇಳಿದಾಗ “ಪ್ರೇಕ್ಷಕರು ಮೆಚ್ಚುವುದು ನನಗೆ ಮುಖ್ಯವಲ್ಲ. ಮುಂದೆ ನೂರು ವರ್ಷಗಳ ನಂತರ ಒಮ್ಮೆ ಈ ಸಿನಿಮಾವನ್ನು ನೋಡಿದರೆ ಕೊರೊನಾ ಕರಾಳ ದಿನಗಳು ಹೇಗಿದ್ದವು ಎಂದು ತಿಳಿಯಬೇಕು. ಅದನ್ನು ದಾಖಲಿಸಿದ್ದೇನೆ” ಎನ್ನುತ್ತಾರೆ. ಅವರ ಮಾತುಗಳಲ್ಲಿ ಸಿನಿಮಾದಲ್ಲಿರುವ ತಾತ್ವಿಕ ನೆಲೆಗಟ್ಟನ್ನು ನಾವು ಗುರುತಿಸಬಹುದು. ಚಿತ್ರದ ಕೊನೆಯಲ್ಲಿ ಮಗನನ್ನು ಕಳೆದುಕೊಂಡ ತಾಯಿ ರೋದಿಸುತ್ತ ಗೋಡೆಗೆ ಅಂಟಿಸಿದ್ದ ವಿಧಾನಸೌಧದ ಪಟವನ್ನು ಹರಿದು ಹಾಕುವುದು, ಕ್ರೂರವ್ಯವಸ್ಥೆಯ ವಿರುದ್ಧ ಪ್ರತಿರೋಧವಾಗಿ ಚಿತ್ರಿತವಾಗಿರುವುದು ಒಂದು ಉದಾಹರಣೆ.

ದುರ್ಗ್ಯ ಮತ್ತು ಅವನ ಅಪ್ಪ ಕುಂಟುತ್ತ ಎಂದೂ ಮುಗಿಯದ ರಸ್ತೆಯಲ್ಲಿ ಸಾಗುವ ದೃಶ್ಯಕಟ್ಟುಗಳು ನೋಡುಗನು ಅವರ ಸಹಪ್ರಯಾಣಿಕನಾಗುವಂತೆ ಮಾಡುತ್ತವೆ. ಕೊನೆಯ ದೃಶ್ಯದಲ್ಲಿ ದುರ್ಗ್ಯನನ್ನು ಮನೆಗೆ ಕರೆ ತರುವ ದೃಶ್ಯವಂತೂ ಎಂಥಾ ಕಲ್ಲೆದೆಯವರನ್ನು ಕರಗಿಸಿ, ಕಣ್ಣಲ್ಲಿ ನೀರು ತರಿಸುತ್ತದೆ. 

ಜಹಾಂಗೀರ್, ಸಂಧ್ಯಾ ಅರಕೆರೆ, ಮಹದೇವ ಹಡಪದ್

ಮುಖ್ಯ ತಾರಾಗಣದಲ್ಲಿ ತಂದೆಯಾಗಿ ಮಹದೇವ ಹಡಪದ್, ಮಗನಾಗಿ ವೀರೇಶ್ ಗೊನಾವರ್, ತಾಯಿಯಾಗಿ ಸಂಧ್ಯಾ ಅರಕೆರೆ ಮತ್ತು ಸಂಬಂಧಿಕನಾಗಿ ಜಹಾಂಗೀರ್ ಪಾತ್ರಗಳಲ್ಲಿ ಜೀವಿಸಿದ್ದಾರೆ. ಪಾತ್ರಗಳು ಸಹಜ ನಟನೆಯಿಂದ ನಿರ್ವಹಿಸಿವೆ. ಹಾಗೆ ಸೃಜನಶೀಲ ಛಾಯಾಗ್ರಹಣ ಮತ್ತು ಸಂಕಲನ ಈ ಸಿನಿಮಾದ ಗೆಲುವಿಗೆ ಕಾರಣವಾಗಿವೆ. ಆ ಕಾರಣಕ್ಕೆ ನಿರ್ದೇಶಕರು ಸೇರಿದಂತೆ ಚಿತ್ರತಂಡ ಎಲ್ಲರೂ ಅಭಿನಂದನಾರ್ಹರು. 

ಕೊರೊನಾ ಕಾಲದ ಹಲವು ಭಾರತೀಯ ಸಿನಿಮಾಗಳು ಆ ಕಾಲಘಟ್ಟದಲ್ಲೇ ಕೆಲವು ತಯಾರಾಗಿ ಓಟಿಟಿ, ಚಿತ್ರಮಂದಿರದಲ್ಲಿ ಪ್ರದರ್ಶಿತವಾಗಿದೆ. ಆದರೆ, ಫೋಟೋ ಸಿನಿಮಾದಷ್ಟು ಸಹಜತೆಯಿಂದ, ಪರಿಣಾಮಕಾರಿಯಾಗಿ ಕಟ್ಟಿದ ಸಿನಿಮಾಗಳು ಬಹಳ ಕಡಿಮೆ. ಒಟ್ಟಿನಲ್ಲಿ ಮಾನವಕುಲದ ಮೇಲೆ ಪ್ರಕೃತ್ತಿ ಮಾಡುವ ದಾಳಿಯಿಂದ ಒದಗುವ ಸಂಕಟಗಳು, ಅದಕ್ಕಿಂತ ಹೆಚ್ಚಾಗಿ ಆಳುವ ಪ್ರಭುತ್ವ ಅಂಥ ಪಿಡುಗನ್ನು ನಿಭಾಯಿಸುವಾಗ ತೆಗೆದುಕೊಳ್ಳುವ ಅಮಾನವೀಯ ನಿರ್ಧಾರಗಳು ಜನರ ಬದುಕನ್ನು ಹೇಗೆ ವಿನಾಕಾರಣ ನರಕವಾಗಿಸುತ್ತದೆ ಎಂಬುದು ಫೋಟೋ ಸಿನಿಮಾದಲ್ಲಿ ಮನಮುಟ್ಟುವಂತೆ ನಿರೂಪಿತವಾಗಿವೆ. ಇಂಥ ವಸ್ತುವನ್ನು ನೇರವಾಗಿ, ದಿಟ್ಟವಾಗಿ ಹೇಳಿದ ನಿರ್ದೇಶಕ ಉತ್ಸವ್ ಗೋನಾವರ ಅವರ ಧೀಮಂತಿಕೆಯು ಮೆಚ್ಚುಗೆಗೆ ಪಾತ್ರವಾಗುತ್ತದೆ. ಇದೇ ಕಾರಣಕ್ಕೆ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗ ಬೇಕಿದ್ದ ಸಿನಿಮಾ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾದದ್ದು ಅಚ್ಚರಿ ಮೂಡಿಸುತ್ತದೆ. ಚಿತ್ರೋತ್ಸವದಲ್ಲಿ ಮೊದಲ ಅತ್ಯುತ್ತಮ ಚಿತ್ರಕ್ಕೆ ಇರಬೇಕಾದ ಎಲ್ಲಾ ಅರ್ಹತೆಗಳಿದ್ದರೂ ಫೋಟೋ ಸಿನಿಮಾಕ್ಕೆ ಮೂರನೇ ಸ್ಥಾನ ದಕ್ಕಿರುವುದನ್ನು ನೋಡಿದರೆ, ಬಹುಶಃ ತೀರ್ಪುಗಾರರು ಸಿನಿಮಾವನ್ನು ಕಲೆಯಾಗಿ ಮೆಚ್ಚಿ, ಆದರೆ ಸಿನಿಮಾದ ಕಂಟೆಂಟಿಗೆ ಮುಜುಗರ ಪಟ್ಟು ಅದನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆನ್ನಿಸುತ್ತದೆ. 

ಕೊನೆಯದಾಗಿ – ಮನರಂಜನೆಗಾಗಿಯೇ ಸಿನಿಮಾ ಎನ್ನುತ್ತ ಓತಪ್ರೋತವಾಗಿ ತಂತ್ರಜ್ಞಾನ ಬಳಸಿ ಕತೆ ಕಟ್ಟಿ, ಪ್ರೇಕ್ಷಕರನ್ನು ಚಲನಚಿತ್ರ ಮಂದಿರಕ್ಕೆ ಕರೆ ತರಲು ಇಲ್ಲದ ಸರ್ಕಸ್ ಮಾಡುವ, ಜನಪ್ರಿಯ ಸಿನಿಮಾಗಳ ಮಧ್ಯೆ, ಇತ್ತೀಚಿಗೆ ಬಂದ ಸಾಮಾಜಿಕ ಕಳಕಳಿಯ ಪಾಲಾರ್, ೧೯.೨೦.೨೧ ಸಾಲಿಗೆ ಫೋಟೋ ಸಿನಿಮಾ ಸೇರ್ಪಡೆಯಾಗಿ ಸಂವೇದನಾಶೀಲ ಪ್ರೇಕ್ಷಕರಲ್ಲಿ ಕನ್ನಡ ಸಿನಿಮಾದ ಬಗ್ಗೆ ಒಂದಷ್ಟು ಆಶಾಭಾವ ತಂದಿವೆ ಎಂದು ಭಾವಿಸಬಹುದು. 

ಚಂದ್ರಪ್ರಭ ಕಠಾರಿ (cpkatari@yahoo.com)


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Manjuraj H N
Manjuraj H N
1 year ago

ಆಳುವ ವ್ಯವಸ್ಥೆಯ ವಿರುದ್ಧ ಎಲ್ಲ ಕಾಲದಲೂ ಅಸಹನೆ ಮತ್ತು ಪ್ರತಿಭಟನೆ ಇದ್ದದ್ದೇ….

ಜನತೆಯ ಮಾಧ್ಯಮವಾದ ಸಿನಿಮಾದಲಿ ಇದು ಪರಿಣಾಮಕಾರಿಯಾಗಿ ಚಿತ್ರಣಗೊಳ್ಳಲು ಅವಕಾಶವಿದೆ. ಸಿನಿಮಾ ಎಂಬುದೇ ಸಾಹಿತ್ಯದ ಪ್ರಕಾರವಾದ ನಾಟಕದ ಆಧುನಿಕ ರೂಪ.

ಸಾಮಾನ್ಯವಾಗಿ ಪ್ರಶಸ್ತಿ ಪಡೆಯುವ ಇಂಥ ಸಿನಿಮಾಗಳು ಸಾಮಾನ್ಯ ಜನರಿಂದ ದೂರ ! ಇದು ವಿಪರ್ಯಾಸ. ಸಾಮಾನ್ಯರು ಮನೋರಂಜನೆ ಬಯಸುವರು.

ಬಹು ದೊಡ್ಡ ದೇಶ ನಮ್ಮದು. ಎಲ್ಲವನೂ ಪ್ರಧಾನಿಯಾದವರೇ ಸರಿ ಮಾಡಲು ಆಗದು.

ಅಧಿಕಾರಶಾಹಿ ಸಹ ಇಂಥಲ್ಲಿ ಕಾರ್ಯ ನಿರ್ವಹಿಸುವ ಪಾತ್ರ ದೊಡ್ಡದು. ಸತ್ಯವನು ಏಕಮುಖವಾಗಿ ನೋಡುವ ದೃಷ್ಟಿಕೋನ ಆಧಾರಿತ ಚಿತ್ರಗಳು ಮತ್ತು ಸಾಹಿತ್ಯ ಊನ ಮಾತ್ರವಲ್ಲ ಇದೂ ಒಂದು ರೀತಿಯ ಪೂರ್ವಾಗ್ರಹಪೀಡಿತ.

ಏನೇ ಇರಲಿ, ಕೊರೊನಾ ಕಾಲವನು ನಮ್ಮ ದೇಶ ಸಮರ್ಥವಾಗಿ ನಿಭಾಯಿಸಿತು. ಅದಕ್ಕೆ ವೈದ್ಯರು ಮತ್ತು ಪೊಲೀಸರು ಸ್ವಂತ ಜೀವನವನೇ ತ್ಯಾಗ ಮಾಡಿದರು.

ದೂರುವ ಕಾಲ ಮುಗಿಯಿತು !

“ಯಾರ ದೂರುವೆ? ನಿನ್ನ ಯಾನ ಶೂನ್ಯನಾವೆ”

ಈಗೇನಿದ್ದರೂ ಮನವರಿಕೆ ಮಾಡಿಕೊಳ್ಳುವ ಪ್ರಬುದ್ಧ ನೋಟ ಬೇಕಾಗಿದೆ.

ಸಾಹಿತ್ಯ ಮತ್ತು ಸಿನಿಮಾಗಳು ಯಾರನ್ನೋ ಯಾವುದನ್ನೋ ಟಾರ್ಗೆಟ್ ಮಾಡಿ ದೂರುತ್ತಿದ್ದರೆ ಸಂವೇದನಾಶೀಲರು ನೊಂದುಕೊಂಡು ಸುಮ್ಮನಾಗುತ್ತಿರುತ್ತಾರೆ.

ಯಾರ ವಿರುದ್ಧ ಬಂಡಾಯವೇಳುವಿರಿ? ಬುದ್ಧನನ್ನು ಓದಿಕೊಂಡವರು ಆತನ ಮಧ್ಯಮ ಮಾರ್ಗವನು ಅರಿಯದವರಾಗಿ ಮಾಡುತ್ತಿರುವ ಅನಾಹುತಗಳೀಗ ನಮ್ಮ ದೇಶದ ನಿಜ ಸಂಕಷ್ಟ ; ಕೊರೊನಾ ಅಲ್ಲ. ಮತಿಹೀನ !

ಏನೇ ಇರಲಿ, ಸಿನಿಮಾ ಕುರಿತು ಬರೆದಿದ್ದೀರಿ. ನಿಮ್ಮ ಬರೆಹ ಚೆನ್ನಾಗಿದೆ. ಅದರಿಂದಲೇ ಸಿನಿಮ ಅರ್ಥವಾಗಿದ್ದು. ನಾನು ಸಿನಿಮಾದ ಕಥಾವಸ್ತು ಕುರಿತು ಇದುವರೆಗೂ ಬರೆದದ್ದು. ಏಕೆಂದರೆ ಸಾಹಿತ್ಯದ ಕೆಲಸ ಇರುವುದು ವಸ್ತು ಯಾವುದಾದರೇನು? ಅದನ್ನು ಅಭಿವ್ಯಕ್ತಿಸಿದ ಕ್ರಮ ಶ್ರಮಗಳನ್ನು ಕುರಿತು ಎಂದು ನಾನು ನಂಬಿರುವವನು.

(ನಿಮಗೆ ನೋವಾಗಿದ್ದರೆ ಕ್ಷಮಿಸಿ, ನಾನು ಸಾಮಾನ್ಯವಾಗಿ ಪ್ರತಿಕ್ರಿಯಿಸುವುದಿಲ್ಲ, ಮೌನವಾಗಿ ನೋಯುತ್ತೇನೆ, ನರಳುತ್ತೇನೆ)

ಮಂಜುರಾಜ್

1
0
Would love your thoughts, please comment.x
()
x