ಉಗಾದಿ
ಏಸೊಂದು ದಿವ್ಸಾತು
ನೀನು ಬಿಟ್ಟು ವ್ಹಾದ
ಬ್ಯಾಸರದ ನೆನೆಕೆಗಳಿಗೆ
ಎದೆ ಮ್ಯಾಲೆ ಬಂಡೆ
ಏರಿಕೊಂಡು, ಬಡಕೊಂಡು.
ಉಗಾದಿನೇ ಬಂತು ತಿರುಗಿ
ಮನದ ಬಾಗ್ಲ
ಮ್ಯಾಲಿನ ಮಾಂತೊಪ್ಲ
ಒಣ್ಗಿ ಶ್ಯಾನೆ ಮಾಸಾತು
ಬೇನ್ಗಿಡದ ತುಂಬ
ಸಿ ನೆನಪಾ ಹೂ
ಕಾದು ಬಿಟ್ಟಾವ ಭಾಳ
ಕೋಗ್ಲಿಯ ಗಂಟ್ಲು
ವಿರಹ ಕಟ್ಟೈತಿ
ಮೌನವಾಗಿ ಕುಂತೈತಿ
ಶಾಬಾದಿ ಮಠ್
ಕ್ಯಾಲೆಂಡರ್ ಕಾಯೋದ
ಖಾಯಂ ಅಂದೈತಿ
ಹಾಕ್ಕೊಂಡ ಅರಿವಿ
ನಿನ್ನ ನೆನಪ ಜಳಕದಾಗ
ತೋಯ್ದು ತಪ್ಡಿಯಾಗೈತಿ
ಪಚ್ಚಿಮದ ಸಂಜಿ ಬಾನಾಗ
ಚಂದ್ರನಂತ ನಿನ್ನ ಮಾರಿ
ಕಂಡು ಜೀವ ಜಲ್ ಅಂದೈತಿ
ಅಂದ್ರ ಬಾಹ್ರ ಆಟದಾಗ
ನಗುವ ನಿನ್ನ ರಾಣಿ ಕಾರ್ಡ್
ಸಿಕ್ಕಿ ಕೈ ಕೋಸಿರಾಡೈತಿ
ಉಗಾದಿಯಾದ್ರೂ
ಯಾಕ್ ಬಂತೋ
ನಿನ್ನ ನೆನಪ ವತ್ತು ತಂತೋ?!
ನೆಪ್ಪ ಐತ ನಿಂಗೆ
ನೀ ಬಿಟ್ಟ ವ್ಹಾಗಿದ್ದು
ಇದೇ ಬ್ಯಾಗುದಿಯ ಉಗಾದಿಗೆ
ಮನಸ್ಸ ಕೊಂದ್ಕಂಡ
ಮ್ಯಾಲಿ ಹಬ್ಬನೂ, ತಿಥಿ ತರ
ಅಂತ ರುದಯ ಬಡ್ಕಂಡೈತಿ.
-ಜ್ಯೋತಿ ಕುಮಾರ್.ಎಂ(ಜೆ.ಕೆ.).
ಪ್ರಕೃತಿಯ ತೋರಣ; ಯುಗಾದಿಯ ಸಂಭ್ರಮ
ಧ್ವನಿಸುತಿದೆ ಮನದಿ ಪುನರಾಗಮಿಸಿದ
ಯುಗಾದಿ
ನವ-ಚೈತನ್ಯ ತುಂಬುವ ಹೊಂಗನಸಿಗೆ
ಬುನಾದಿ !!
ವರ್ಣರಂಜಿತ ಹೂ-ಹಾಸಿನ ಹೊಸ ಚಿಗುರಿನ
ಮೆರವಣಿಗೆ
ಪ್ರಕ್ರತಿದೇವಿ ನಮಗಿತ್ತ ಪಂಚಾಮೃತದ
ಕೊಡುಗೆ !!
ಇಣುಕಿ ಧರೆಗಿಳಿದಳಿಲ್ಲಿ ಮರಳಿ ವೈಭವದಿ
ವಸುಂಧರಿ
ಸಂತಸ-ಸಂಭ್ರಮದಿ ಚೆಲುವಿನ
ಭುವನೇಶ್ವರಿ!!
ಮುಂಬಾಗಿಲಲಿ ಕಲಶವಿಟ್ಟು ಶುಭಕೋರಿ
ಸ್ವಾಗತಿಸುವಾ
ಮುನ್ನೆಡೆವ ದಾರಿಯಲಿ ದಿಕ್ಸೂಚಿಯಾಗಲೆನುತ
ಭಕ್ತಿಯಲಿ ಬೇಡುವಾ!!
ಚಿತ್ತಾರದಾ ರಂಗು-ರಂಗಿನ ರಂಗೋಲಿಯೊಡನೆ
ಮಲ್ಲೆ-ಮಾಲೆ ಮಾವು-ಬೇವು ಸಿಹಿ ಬೆಲ್ಲದೊಡನೆ!!
ಜೀವನ ಚಕ್ರವೀ ಮರಳಿ ಬರುವ ಯುಗಾದಿಯ
ಮುನ್ನುಡಿ
ಜತನವೀಯಲೆಮಗದುವೆ ಅಭಯಹಸ್ತದ
ಗಾರುಡಿ!!
ಸ್ರಷ್ಟಿ-ಚಕ್ರವು ಸಾಗುತಿಹುದು ನಿರಂತರದಲಿ
ಹೊಸ -ಋತುವಿನಲಿ ಹೊಸ -ಹುಮ್ಮಸ್ಸಿನಲಿ.!!
ನವ-ಭಾವ ಚಿಗುರೊಡೆಯುತಿದೆ
ಕಣ-ಕಣಗಳಲೀ
ಇದರ ಸಂಕೇತವಿಹುದಿಲ್ಲಿ ಯುಗಾದಿಯಾ
ದಿನಮಾನದಲ್ಲಿ.!!
ವಸಂತನಾಗಮನ ಮನೋಲ್ಲಾಸವೀಯಲಿ
ಉಲ್ಲಾಸ-ಉಯ್ಯಾಲೆಯಾಡಿ ಮನದಿ-ಮಲ್ಲಿಗೆಯ
ಘಮ ಪಲ್ಲವಿಸಲಿ !!
-ಕುಸುಮ ರಾವ್
ಯುಗಾದಿ
ಅವಳೀಗ ಮೈ ತುಂಬ ಹಸಿರ ಸೀರೆಯನ್ನುಟ್ಟು
ಒಡಲೊಳಗೆ ಹೂ ಬಿಟ್ಟಿದ್ದಾಳೆ
ಘಮ್ಮೆನ್ನಿಸುವ ಪರಿಮಳ ಸುತ್ತ ಮುತ್ತಲೂ ಪಸರಿಸಿದೆ
ಚಿಗುರುವ ಚೇತನ ಉಕ್ಕಿ ಹರಿದಿದೆ ಚೈತ್ರಮಾಸದಂದು
ಬೇಸಿಗೆ ಕಾಲಕೆ ತಂಪಿರಿಸುವ ತರುಣಿ
ದಣಿದು ಬಂದು ಕೂತರೆ ಸಾಕು
ಇವಳ ನೆರಳಲಿ ನೆಮ್ಮದಿ ಸಿಕ್ಕಂತೆ
ಯುಗಾದಿ ಹಬ್ಬದ ಸಂಭ್ರಮ ಸಡಗರದಲಿ
“ಯುವರಾಣಿ “ಇವಳೆ ಆಗಿರುವಳು
ಚಿಂತೆಯಲ್ಲಿದ್ದ ಮನಗಳಿಗೆ
ಚಿಗುರುವ ಚೈತನ್ಯದ ಪಾಠ ಹೇಳಿಬಿಡುವಳೊಮ್ಮೆ
ಕೆಲವೊಮ್ಮೆ ಏನಾದರೊಂದು ಸತ್ಯಾಂಶವಿದ್ದರೆ
ಕಹಿಯಾಗಿ ಕಾಣುವುದೆಂದು ಅರಿತುಕೊಳ್ಳಬೇಕಾಗಿದೆ
“ಬೇಡದಿರುವುದು ಬಾಡಿ ಉದುರಿ ಹೋಗಲಿ
ಬಾಳಿಗೆ ಬೇಕಾಗಿರುವುದು ಬೇಗನೆ ಚಿಗುರಲಿ
ಎಂಬ ಸಂದೇಶವನ್ನೊತ್ತು ಬರುತಿಹಳು
ಹೊಸ ವರುಷಕೆ ಸಂತಸದಿಂದ ಹಾರೈಸುತಿಹಳು….
-ಉಮಾ ಸೂಗೂರೇಶ ಹಿರೇಮಠ