ಮೂರು ಕವಿತೆಗಳು: ಶಿವಮನ್ಯೂ ಪಾಟೀಲ

೧ ಆ ಬೆಳಕೊಂದು ಕತ್ತಲ

ಆ ಬೆಳಕೊಂದು ಕತ್ತಲ
ಗರ್ಭ ಸೀಳಿ ಬರುತಲಿದೆ ಈ ಜಗಕೆ.
ಧರಣಿ ಒಡಲ ಬಿಗಿದಪ್ಪಿಕೊಳ್ಳಲು
ಹಸಿರ ಹುಲ್ಲು ಹಾಸಿನ ಇಬ್ಬನಿಯ ಚುಂಬಿಸಲು.

ಜಗವೆಲ್ಲಾ ಗಾಢ ನಿದ್ರೆಯಲ್ಲಿ
ಮೈಮರೆತಿರಲು
ಹೊಂಬೆಳಕು ತಾ ಹೊಸತನದಿ
ಕೋಳಿ ಕೂಗುವ ದನಿಗೆ ದನಿಗೂಡಿಸುತಿದೆ.
ಸ್ಫೂರ್ತಿಯ ದಾರಿ ತೆರೆದು, ಹೊಸ
ಹೆಜ್ಜೆಗೆ ಹೆಜ್ಜೆ ಹಾಕುತ್ತಾ ಜೊತೆ ಸಾಗಿದೆ.

ಹಸಿರ ಬನದ ಸೊಬಗಿಗೆ
ಹಾರೋ ಹಕ್ಕಿಯ ಹುರುಪಿಗೆ.
ಬಾಗಿಲು ತಾ ತೆರೆದು ನಲಿಸುತಿದೆ.
ಹರಿವ ಜಲಧಾರೆಯ ನಾದದೊಳಗೆ
ಮೀಯುತ.
ಮೂಡುವ ಕಾಮನಬಿಲ್ಲಲಿ ಹೊಳೆಯುತ್ತಾ.
ಇರುಳ ತೆರೆಯ ಪರದೆಯ ಸರಿಸುತ್ತಾ
ಬೆಳಕೊಂದೂ ಓಡೋಡಿ ಬರುತಿದೆ
ಕತ್ತಲ ಗರ್ಭ ಸೀಳಿ, ಜಗಕೆ.

೨ ಜನನಿಗೊಂದು ಪ್ರಣಾಮ

ಆ ಪರಮ ದಿವ್ಯ ಆತ್ಮಕೊಂದು
ಆಕಾರ ಮಾಡಿ ದೇಹದ ಚಿತ್ರ ರಚನೆ ಮಾಡಿಬಿಟ್ಟೆ.
ನವಾಮಾಸಗಳನು ಉದರಲಿ ಉಲ್ಲಾಸದಿ ನೀ ಪೋಷಿಸಿಬಿಟ್ಟೆ.
ನಾಜೂಕಾದ ದೇಹದೊಳಗೆ ಉಸಿರು ತುಂಬಿಬಿಟ್ಟೆ.
ಉಸಿರು ಉಸಿರಲಿ ಮಮತೆಯ ನದಿಯನು ಹರಿಯಬಿಟ್ಟೆ.
ಅತ್ತಷ್ಟು ಸಲಕೂ ಅಮೃತವನಿಟ್ಟೆ
ನೀನೇ ಪ್ರಥಮ ಗುರುವಾಗಿ ಸಂಸ್ಕಾರವ ಕಲಿಸಿಕೊಟ್ಟೆ.

ಲಾಲನೆಯಲ್ಲಿ ದಣಿವನರಿಯದ ಒಣಕಲು ಒಡಲು
ನೋವನುಂಡರೆ ಸಾಂತ್ವನದ ಮಡಿಲು.
ಅತ್ತು ಬಂದವಗೆ ಹೊತ್ತು ಉಣಿಸಿದೆ
ರಾಜ ಕುವರನಂತೆ ಎತ್ತಿ ಆಡಿಸಿದೆ.
ಹೇಸಿಗೆ ಎಂದು ಹೆಸದೆ ಬಾಲ ಮುರಳಿಯಂತೆ
ಪೋಷಿಸಿದೆ.
ಸದಾ ನಿನ್ನ ಸ್ಮರಿಸುವೆ ,ನಿತ್ಯ ನಾ ವಂದಿಸುವೆ
ಕಣ್ಣಿಗೆ ಕಾಣುವ ದೈವರೂಪಿ ಮಹಾಮಾತೆಗೆ ಶತಕೋಟಿ ಪ್ರಣಾಮಗಳು.

ಪ್ರತಿ ಘಳಿಗೆ ನಿನ್ನ ಯೋಚನೆವೊಂದೆ
ಮಡಿಲಲಿ ಆಡುವ ಮಗನ ಯಶಸ್ಸು.
ನಿನ್ನ ಆಸೆಗಳ ಕಂಗಳ ಪೂರಾ
ತಾಯ್ತನದ ಮಮತೆಯ ನೋಟ ಬೀರುತಿದೆ.
ಬುದ್ಧಿಮಾತ ಬಲು ಹಗುರ ಕಂಡೆ
ತುತ್ತ ಮೇಲೆ ಸಿಹಿ ಮುತ್ತ ಕಂಡೆ
ಪಾಪಿ ನಾನು ಬದಲು ಹೇಳಲಿಲ್ಲ ನೀನು
ತಾಯಿ ಎನ್ನುವ ಪಟ್ಟ ದೊರೆತ ಮೇಲೆ
ಕ್ಷಮಾ ಗುಣವೂ ತಾನೆ ಸಿದ್ದಿಸಿತು.

೩ ಏಕಾಂತ

ಏಕಾಂತ
ಅದೆಷ್ಟು ಮಧುರ ಭಾವವನ್ನು
ಹೊತ್ತು ತಂದಿದೆ ನನಗಾಗಿ

ಕಳೆಯಬೇಕು ಹೀಗೆ
ಒಮ್ಮೊಮ್ಮೆ ಏಕಾಂತದ
ರಸಮಯ ಕ್ಷಣವನು ಅನುಭವಿಸಬೇಕು.

ಜಗವೆಲ್ಲಾ ಮೌನದಲಿ
ಮಲಗಿದೆ.
ಬೇಡದ ಗೊಡವೆಯಲ್ಲಾ
ರಜೆ ಹಾಕಿವೆ.

ಈ ಹೃದಯಕೆ ಗೊತ್ತು
ಏಕಾಂತದ
ಸಾವಿರಾರು ರಾತ್ರಿಗಳನ್ನು
ನಾನು ಹಾಗೆ ಕಳೆದಿರುವೆ.
-ಶಿವಮನ್ಯೂ ಪಾಟೀಲ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x