ನಿಲುಗನ್ನಡಿ ಪುಸ್ತಕ ಕುರಿತು ಕುಂ.ವೀ.ಅವರ ಅನಿಸಿಕೆ

ಸಹಸ್ರಾರು ವರ್ಷಗಳ ಹಿಂದೆಯೇ ‘ಮಸ್ಕಿ’ ಸಾಮ್ರಾಟ್ ಅಶೋಕನನ್ನು ಆಕರ್ಷಿಸಿದ ರಾಜ್ಯದ ಪ್ರಾಚೀನಾತಿ ಪ್ರಾಚೀನ ಸ್ಥಳ. ಆದರೆ ಸ್ವಾತಂತ್ರ್ಯೋತ್ತರವಾಗಿ ಮಸ್ಕಿ, ‘ಕೋಡಗುಂಟಿ’ ಎಂಬ ಹೆಸರಿನಿಂದ ಸಾಹಿತ್ಯಿಕವಾಗಿ ಹೆಸರಾಗಿದೆ. ಇಲ್ಲಿನ ಈ ಫ್ಯಾಮಿಲಿಗೆ ಸಾಂಸ್ಕೃತಿಕ ಹಿನ್ನಲೆ ಇದೆ, ಸದಭಿರುಚಿ ವ್ಯಕ್ತಿತ್ವವಿದೆ. ಬಸವರಾಜ ಮತ್ತು ಅವರ ತಂಗಿ ರೇಣುಕಾ, ಬಂಡಾರ ಹೆಸರಿನ ಪ್ರಕಾಶನ ಸಂಸ್ಥೆ ಆರಂಭಿಸಿದವರು, ತನ್ಮೂಲಕ ಸದಭಿರುಚಿ ಕಿತಾಬುಗಳನ್ನು ಪ್ರಕಟಿಸಿದವರು, ಈ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಯುವ ಮನಸ್ಸುಗಳನ್ನು ಪ್ರೋತ್ಸಾಹಿಸಿದವರು. ರೇಣುಕಾಳ ಚಟವಟಿಕೆಗಳನ್ನು ಹಲವು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಿರುವೆ. ಈಕೆ ಸಂವೇದನಾಶೀಲ ಮಹಿಳೆ, ಪ್ರತಿಭಾವಂತೆ ಮತ್ತು ಸಾಹಿತ್ಯೋಪಾಸಕಿ. ವಿದ್ಯಾರ್ಥಿದೆಸೆಯಿಂದ ಬರಹದ ನಂಟು, ಸಾಹಿತಿಗಳ ಒಡನಾಟವಿರಿಸಿಕೊಂಡು ತನ್ನ ವ್ಯಕ್ತಿತ್ವವನ್ನು ಸುಸಂಸ್ಕೃತೀಕರಣಗೊಳಿಸಿಕೊಂಡು ಬೆಳೆದವರು. ಬಳಪದ ಚೂರು ಹೆಸರಿನ ಕವನ ಸಂಕಲನ ಪ್ರಕಟಿಸಿರುವ ಈಕೆ ಜನಪದ ಹಾಡುಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕರ್ನಾಟಕದಲ್ಲಿ ಶವಸಂಸ್ಕಾರ ಎಂಬ ಇವರ ಸಂಪಾದಿತ ಕೃತೀನ ಎಲ್ಲರು ಓದಲೇಬೇಕು. ಇವೊಂದೆ ಅಲ್ಲದೆ ಇನ್ನು ಹಲವು ಕೃತಿಗಳನ್ನು ರಚಿಸಿದ್ದಾರೆ, ಸಂಪಾದಿಸಿದ್ದಾರೆ, ಜಾನಪದರೊಡನೆ ಆತ್ಮೀಯವಾಗಿ ಒಡನಾಡಿದ್ದಾರೆ. ಸಾಹಿತ್ಯ ಸಂಸ್ಕೃತಿ ಸಂಬಂಧೀ ಸೆಮಿನಾರುಗಳಲ್ಲಿ ಭಾಗವಹಿಸಿದ್ದಾರೆ, ತನ್ಮೂಲಕ ಅಕಾಡೆಮಿಕ್ ವಲಯದಲ್ಲಿ ಹೆಸರಾಗಿದ್ದಾರೆ.

ಗೃಹಕೃತ್ಯಗಳ ನಡುವೆಯೂ ಈ ಕ್ರಿಯಾಶೀಲ ಮಹಿಳೆ ಹಲವು ಕಥೆಗಳನ್ನು ಸಾಂದರ್ಭಿಕವಾಗಿ ರಚಿಸಿರುವುದು ಗಮನಾರ್ಹ ಮತ್ತು ಸ್ವಾಗತಾರ್ಹ. ಓರಲ್ ಟ್ರೆಡಿಷನ್ ಯುಗದಲ್ಲಿ ಮಹಿಳೆ ಕಥೆಗಳ ವಾರಸುದಾರಳು ಮತ್ತು ಮಹಾ ಪೋಷಕಳು, ಈ ಕಾರಣದಿಂದ ರೇಣುಕಾ ಇಲ್ಲಿನ ಕಥೆಗಳನ್ನು ಬರೆದಿರುವರು ಎನ್ನುವುದು ಮುಖ್ಯವೆ ಹೊರತು ಹೇಗೆ ಎಂತಾಂತ ಅಲ್ಲ. ಇಲ್ಲಿನ ಹನ್ನೆರಡೂ ಕಥೆಗಳು ಮಸ್ಕಿ ತೊಟ್ಟಿಲಲ್ಲಿ ಬೆಳೆದವುಗಳೆ. ಇವು ಇಲ್ಲಿನ ನೆಲಮೂಲ ನಂಬಿಕೆಗಳಿಗೆ ಸಂಬಂಧಿಸಿದವುಗಳೆ, ಈ ಕಥೆಗಳ ಕನ್ನಡಿಯಲ್ಲಿ ಗ್ರಾಮೀಣ ಧೀರೋದಾತ್ತ ಮಹಿಳೆಯ ಹಲವು ಮುಖಗಳ ಪ್ರತಿಬಿಂಬಗಳಿವೆ. ಜಾಗತೀಕರಣದ ದಾಂಧಲೆಯಿಂದ ಬದಲಾದ ಹಳ್ಳಿಗಳ ಚೆಹರೆಯನ್ನು ಪ್ರಶ್ನಿಸುವ ಕಥೆಗಳೆ. ಮಸ್ಕಿ ಪರಿಸರದ ಪ್ರಾದೇಶಿಕ ಭಾಷೆಯ ನೇಯ್ಗೆಯಲ್ಲಿರುವ ಈ ಕಥೆಗಳು ಸಲೀಸಾಗಿ ಓದಿಸಿಕೊಳ್ಳುತ್ತವೆ. ರೇಣುಕಾ ಅವರಿಗೆ ಗ್ರಾಮೀಣ ಪ್ರದೇಶದ ಬಗೆಗಿನ ಕಾಳಜಿಯನ್ನು ಇಲ್ಲಿನ ಪ್ರತಿ ಕಥೆಗಳು ಧ್ವನಿಸುತ್ತವೆ. ರೇಣುಕಾ ಅಪ್ಪಟ ಕಥೆಗಾರ್ತಿ ಎನ್ನುವುದಕ್ಕೆ ಪುರಾವೆ ಈ ಸಂಕಲನ.

ಕುಂವೀ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x