ಸೃಷ್ಟಿಯಲ್ಲಿ ಕೋಟ್ಯಾಂತರ ಜೀವರಾಶಿಗಳು ಉಂಟು. ಪ್ರತಿಯೊಂದು ಜೀವಿಗೂ ಅದರದೇ ಆದ ದೇಹರಚನೆ, ಆಹಾರಪದ್ದತಿ, ಬಣ್ಣ, ವರ್ತನೆ ಹೀಗೆ ಹಲವಾರು ವಿಭಿನ್ನವಾದ ವ್ಯತ್ಯಾಸಗಳನ್ನು ನೋಡಬಹುದು. ಈ ಸೃಷ್ಟಿಯನ್ನು ಬುದ್ದಿವಂತ ಜೀವಿಯಾದ ಮಾನವನು ವಿವಿಧ ರೀತಿಯಲ್ಲಿ ಅಧ್ಯಯನ ಮಾಡುತ್ತಾನೆ ಮತ್ತು ವ್ಯಾಖ್ಯಾನಿಸುತ್ತಾನೆ. ಕೆಲವರು ವೈಜ್ಞಾನಿಕ ದೃಷ್ಟಿಯಿಂದ, ಕೆಲವರು ಜೋತಿಷ್ಯ ಮತ್ತು ಖಗೋಳ ವೈಜ್ಞಾನಿಕ ದೃಷ್ಟಿಯಿಂದ ಅವರವರ ಮನಸ್ಥಿಗೆ ತಕ್ಕಂತೆ ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರತಿಯೊಂದು ಜಾತಿಯ ಪ್ರಾಣಿಗಳು, ಪಕ್ಷಿಗಳು, ಜೀವಜಂತುಗಳು ಪ್ರಕೃತಿಯ ಭಾಗಗಳಾಗಿ ಭೂಮಿಯಲ್ಲಿ ಮತ್ತು ನೀರಿನಲ್ಲಿ ವಾಸಿಸುತ್ತವೆ. ಅವುಗಳ ಜೀವನ ಕ್ರಮ ಮತ್ತು ಅವುಗಳ ಅಳಿವು ಉಳಿವು, ಪ್ರಕೃತಿಯ ಸಮತೋಲನ, ಇವುಗಳನ್ನು ಗಮನಿಸದರೆ ಇದರ ಹಿಂದೆ ಯಾವುದೋ ಒಂದು ದೈವದ ಕೈಚಳಕವೋ ಅಥವಾ ಒಂದು ದೈವಾಂಶ ಚೈತನ್ಯವೋ ಎಲ್ಲವನ್ನು ನಿಯಂತ್ರಿಸುತ್ತಿದೆ ಎನಿಸುತ್ತದೆ. ಹಾಗೆ ನೋಡಿದರೆ ಭೂಮಿಯ ಮೇಲೆ ಜೀವತಳೆದು ಇರುವ ಯಾವ ಜೀವಿಯೂ ವ್ಯರ್ಥವಾಗಿ ಹುಟ್ಟಿಲ್ಲ ಎನಿಸುತ್ತದೆ.
ನಾನು ಕನಕಪುದ ರೂರಲ್ ಪದವಿ ಕಾಲೇಖನಿ ಪ್ರಥಮ ವರ್ಷದ ಕಲಾವಿಭಾಗದ ವಿದ್ಯಾರ್ಥಿ. ನಾನು ದೇವರನ್ನು ಅತಿ ಹೆಚ್ಚಾಗಿ ನಂಬುತ್ತಿದ್ದೆ. ದೇವರ ಬಗ್ಗೆ ಆಚಾರ ವಿಚಾರಗಳು ರೂಢಿಸಂಪ್ರದಾಯಗಳನ್ನು, ನಂಬಿಕೆ ಮೂಢನಂಬಿಕೆಗಳನ್ನು ಪರಾಮರ್ಶೆ ಮಾಡದೆ ನಂಬುತ್ತಿದ್ದೆ. ದೇವರೆಂದರೆ ದೇವರ ಕಥೆಗಳು, ಹಾಡುಗಳು. ಪುರಾಣಗಳನ್ನು ಕೇಳುವಾಗ ನನಗೆ ಅರಿವಿಲ್ಲದಂತೆ ದೇವರಿಗೆ ಪರವಶನಾಗಿಬಿಡುತ್ತಿದ್ದೆ. ಒಮ್ಮೊಮ್ಮೆ ದೇವರು ನನ್ನೊಂದಿಗೆ ಇದ್ದಾನೆ ಎಂದು ಭಾಸವಾಗುತ್ತಿತ್ತು. ಏಕೆಂದರೆ ನನಗೆ ಹೆಚ್ಚು ಸ್ನೇಹಿತರಿದ್ದರು. ಅವರೊಡನೆ ಸಮಯ ಕಳೆದದ್ದು ಕಡಿಮೆ. ಒಂಟಿಯಾಗಿ ಕಾಡುಮೇಡು ಸುತ್ತುವುದು ನನ್ನ ಹವ್ಯಾಸ. ಒಬ್ಬನೇ ತಿರುಗುತ್ತಿದ್ದ ಕಾರಣ ಹಲವಾರು ವಿಷಯಗಳು ನನ್ನ ತಲೆಯಲ್ಲಿ ಓಡುತ್ತಿದ್ದವು. ಕೆಲವು ಬಾರಿ ನನ್ನನ್ನು ನಾನೆ ಅವಲೋಕಿಸಿಕೊಂಡಿದ್ದೂ ಉಂಟು. ನಂತರ ತರಗತಿಯಲ್ಲಿ ಪಠ್ಯಪುಸ್ತಕಗಳಲ್ಲಿದ್ದ ವಚನಸಾಹಿತ್ಯವು ನನ್ನನ್ನು ವಿಶೇಷವಾಗಿ ಸೆಳೆಯಿತು. ವಚನಸಾಹಿತ್ಯದ ಒಡಲನ್ನು ಭೇದಿಸುವ ಆಸೆ ಹೆಚ್ಚಾಯಿತು. ಕುತೂಹಲವೂ ಮೂಡಿತ್ತು. ಕನ್ನಡ ಸಾಹಿತ್ಯದ ಸಾಗರದಲ್ಲಿ ಮುತ್ತುರತ್ನಗಳಂತಿರುವ ವಚನಗಳು ನನ್ನನ್ನು ಸೆಳೆದವು. ವಚನಗಳ ಪರಿಭಾಷೆಯು ಅದರ ಭಾವವು, ವಚನಗಳಲ್ಲಿ ವ್ಯಕ್ತಪಡಿಸಿರುವ ವಸ್ತುವಿಷಯಗಳು, ಚರ್ಚೆಗಳು, ವಿಮರ್ಶೆಗಳು ಎಲ್ಲವೂ ಸರ್ವಕಾಲಿಕ ಸತ್ಯ ಮತ್ತು ವಾಸ್ತವಾಂಶಗಳಾಗಿವೆ. ೧೨ನೇ ಶತಮಾನದ ಆ ಕ್ರಾಂತಿಯು ಬಹಳ ಮೌಲ್ಯಯುತವಾದುದು. ವಚನಗಳು ಅರ್ಥವಾಗುತ್ತಿದ್ದಂತೆ ಇತ್ತ ದೇವರ ಮೇಲಿನ ಮೂಢನಂಬಿಕೆಗಳು ಮಾಯವಾದವು. ಭಕ್ತಿಯ ಬಗೆಗಿನ ವ್ಯಾಖ್ಯಾನಗಳು, ದೇವರ ಬಗೆಗಿನ ವ್ಯಾಖ್ಯಾನಗಳು ನನ್ನನ್ನು ದೇವರು ಮತ್ತು ಭಕ್ತಿಗಳಿಂದ ಬಂಧಮುಕ್ತಗೊಳಿಸಿತು. ಅದರ ಸ್ವರೂಪವನ್ನು ಧರ್ಮದ ಸ್ವರೂಪವನ್ನು ಸರಿಯಾಗಿ ಅರ್ಥಮಾಡಿಕೊಂಡಂತಾಯಿತು.
ಅಂದು ಫ್ರೆಬ್ರವರಿ ೨೬ ಶನಿವಾರ. ೨೮ನೇ ತಾರೀಖು ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಆವರಣವನ್ನು ಶುಚಿಗೊಳಿಸುವ ಕಾರ್ಯದಲ್ಲಿ ಕಾಲೇಜಿನ NCC ವಿದ್ಯಾರ್ಥಿಗಳು ಮತ್ತು NSS ವಿದ್ಯಾರ್ಥಿಗಳು ನಿರತರಾಗಿದ್ದರು. ನಾನೊಬ್ಬ NCC ವಿದ್ಯಾರ್ಥಿಯಾದ್ದರಿಂದ ನಾನು ಆ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೆ. ನಮ್ಮ ಗುಂಪಿಗೆ ನಮ್ಮ ಕಾಲೇಜಿನ ಸ್ಥಾಪಕರಾದ ಶ್ರೀ ಎಸ್ ಕರಿಯಪ್ಪನವರ ಸಮಾಧಿಯ ಸುತ್ತ ಗುಡಿಸಿ ಸ್ವಚ್ಛಗೊಳಿಸುವ ಕೆಲಸವನ್ನು ವಹಿಸಿದ್ದರು. ಆದ್ದರಿಂದ ಎಲ್ಲವೂ ಕಾರ್ಯಪ್ರವೃತ್ತರಾದೆವು. ನಾನು ಪೈಪಲ್ಲಿ ನೀರನ್ನು ಹಿಡಿಯುತ್ತಿದ್ದೆ. ಮತ್ತೊಬ್ಬ ಸ್ನೇಹಿತ ಪೊರಕೆಯಿಂದ ನೀರಿನ ಸಮೇತ ಕಸವನ್ನು ಗುಡಿಸುತ್ತಾ ಬಂದ. ಸ್ವಲ್ಪ ಸಮಯದ ನಂತರ ನೀರಿನ ವೇಗ ಕಡಿಮೆಯಾಯಿತು. ಪೈಪಿನಲ್ಲಿ ನೀರು ಬರದಿದ್ದ ಕಾರಣ ಕೆಳಗೆ ಬಗ್ಗಿಕೊಂಡು ನೀರು ಹಿಡಿಯುತ್ತಿದ್ದೆ. ದೂರದಲ್ಲಿ ನನ್ನ ಗೆಳೆಯರು ಕರೆದರು. ಸುಮಾರು ಹೊತ್ತು ಬಗ್ಗಿಕೊಂಡೇ ಕೆಲಸ ಮಾಡುತ್ತಿದ್ದ ನಾನು ದಿಢೀರನೆ ಮೇಲೆದ್ದೆ. ಮೊದಲೇ ಮೂರು ಬಾರಿ ಪೆಟ್ಟಾಗಿದ್ದ ಬೆನ್ನಿನ ಕೆಳಗಡೆಯ ಮೂಳೆ ಜರುಗಿದಂತಾಗಿ ನಿಂತಲ್ಲೇ ನಿಂತುಬಿಟ್ಟೆ. ಸುಮಾರು ಐದು ನಿಮಿಷಗಳ ಕಾಲ ಕಲ್ಲಂತೆ ಜಗ್ಗದೆಯೇ ನಿಂತುಬಿಟ್ಟೆ. ಬೆನ್ನಿನಲ್ಲಿ ವಿಪರೀತ ನೋವುಂಟಾಯಿತು. ತಕ್ಷಣ ನನ್ನ ಸ್ನೇಹಿತನ ಸಹಾಯದಿಂದ NCC ಯ Senior Under Officer (SUO) ಅವರ ಅನುಮತಿ ಪಡೆದು, ಗಾಡಿಯಲ್ಲಿ ಕೂರಲು ತುಂಬಾ ಕಷ್ಟವಾದರೂ ತಡೆದುಕೊಂಡು ಹೇಗೋ ಆಸ್ಪತ್ರೆಗೆ ಹೊರಟೆ. ಆದರೆ ದುರಾದೃಷ್ಟವಶಾತ್ ಅಲ್ಲಿ ಆಸ್ಪತ್ರೆ ಮುಚ್ಚಿತ್ತು. ಅಲ್ಲಿ ತುರ್ತು ನಿಗಾ ಘಟಕದ ವೈದ್ಯರಿದ್ದರು. ನಡೆದಿದ್ದನ್ನು ವೈದ್ಯರಿಗೆ ತಿಳಿಸಿದೆವು. ಅವರು ಒಂದು ಸೂಜಿ ಚುಚ್ಚಿ ೪ ಮಾತ್ರ ಬರೆದುಕೊಟ್ಟು, ಒಂದು ಬಾರಿ ಮೂಳೆ ವೈದ್ಯರಿಗೆ ತೋರಿಸಿಕೊಳ್ಳಿ ಎಂದು ಹೇಳಿದರು. ಅಲ್ಲಿಂದ ಹೇಗೋ ಕಷ್ಟಪಟ್ಟು ಮನೆಗೆ ಬಂದೆ. ವಿಪರೀತ ನೋವಿನಿಂದ ಹಾಸಿಗೆ ಹಿಡಿದು ಮಲಗಿದೆ. ನಿದ್ದೆಬಾರದೆ ಹಾಗೆಯೇ ೨ ತಾಸು ಮಲಗಿದ್ದೆ. ಹೊಟ್ಟೆ ಹಸಿದಿದ್ದರೂ ಕುಳಿತು ಊಟ ಮಾಡುವುದು ಅಸಾಧ್ಯವಾಗಿತ್ತು. ಹೇಗೋ ಒಂದು ದಿನ ನೋವಿನಲ್ಲೇ ಕಳೆದೆ. ಮಾರನೆಯ ದಿನ ಮನೆಯವರಿಗೆ ನಡೆದಿದ್ದನ್ನು ಹೇಳಿದೆ. ಅವರು ಬಿಸಿನೀರಿನ ಶಾಖವನ್ನು ಕೊಟ್ಟರು ಮತ್ತು ಮೂಳೆ ನೋವಿನ ಎಣ್ಣೆಯನ್ನು ತರಿಸಿ ಬೆನ್ನಿಗೆ ಹಚ್ಚಿದರು. ಹೇಗೋ ಊಟ ಮಾಡಿ ಮಲಗಿದೆ. ಎರಡು ದಿನದ ನಂತರ ಒಂದಷ್ಟು ದೂರ ನಡೆಯುವಂತಾದೆ.
ಸೋಮವಾರ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು. ನಾನು NCC ವಿದ್ಯಾರ್ಥಿಯಾದ್ದರಿಂದ NCC ಸಮವಸ್ತ್ರ ಧರಿಸಿ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು. ಆದರೆ SUO ರವರ ಅನುಮತಿ ಪಡೆದು ನಾನು ಕಾಲೇಜಿನ ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಪ್ರೇಕ್ಷಕನಾಗಿ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದೆ. ಸುಮಾರು ೩ ಗಂಟೆಗಳು ಕುಳಿತ ಕಾರಣ ಬೆನ್ನು ನೋಯಲು ಶುರುವಾಯಿತು. ತರಗತಿಗೆ ಹೋಗಿ ಬೆಂಚಿನ ಮೇಲೆ ಅಂಗಾತ ಮಲಗಿಕೊಂಡೆ. ಸ್ನೇಹಿತರು ಊಟ ತಂದುಕೊಟ್ಟರು. ಊಟ ಮಾಡಿಕೊಂಡು ಮಧ್ಯಾಹ್ನ ೩ ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದು ನಮ್ಮ ಊರಿನ ಬಸ್ಸಿಗೆ ಹತ್ತಿ ಕುಳಿತೆ. ಬಸ್ಸಿನಲ್ಲಿ ಒಬ್ಬ ಮಂಗಳಮುಖಿಯು ಪ್ರಯಾಣಿಕರಲ್ಲಿ ಕಾಸು ಕೇಳುತ್ತಾ ಮಾತನಾಡಿಸುತ್ತಾ ಬರುತ್ತಿದ್ದರು. ಬಸ್ಸಿನಲ್ಲಿ ಮಾತನಾಡಿಸುವಾಗ ನಾನು ಎದ್ದು ಬಸ್ಸಿನಿಂದ ಇಳಿದುಬಿಡಲೇ ಎನಿಸಿತ್ತು. ಆದರೆ ಬೆನ್ನು ನೋವಿನ ಕಾರಣ ಸುಮ್ಮನೆ ಕುಳಿತೆ. ನನ್ನ ಬಳಿ ಬಂದ ಮಂಗಳಮುಖಿ ನನ್ನನ್ನು ಏನೂ ಕೇಳಲಿಲ್ಲ. ದೊಡ್ಡ ದೇಹ ಮತ್ತು ಹಗಲವಾದ ಮುಖವುಳ್ಳ ಆ ಮುಖದಲ್ಲಿ ಶಾಂತ ಸ್ವಭಾವವು ಕಾಣುತ್ತಿತ್ತು. ಹಸನ್ಮುಖಿಯಾಗಿದ್ದರು. ಅವರು ನನ್ನನ್ನು ಹಣ ಕೇಳದಿದ್ದರೂ ನಾನೇ ಅವರನ್ನು ಕರೆದು “ಅಕ್ಕ ಬನ್ನಿ” ಅಂದೆ. ಅವರಿಗೆ ನನ್ನ ಮೆಲು ದ್ವನಿಯಲ್ಲಿ ನನ್ನ ಸಂಕಟ ಅರಿವಾಯಿತೇನೋ ಎಂಬಂತೆ ಹತ್ತಿರ ಬಂದು ಕಿವಿಕೊಟ್ಟರು. ನಾನು ವಿನಮ್ರವಾಗಿ “ಅಕ್ಕ ನನಗೆ ಬೆನ್ನು ಮೂಳೆಯಲ್ಲಿ ನೋವಿದೆ. ಅದು ವಾಸಿಯಾಗಲಿ ಎಂದು ಆಶೀರ್ವಾದ ಮಾಡಿ” ಎಂದು ಕೇಳಿದೆ. ಅವರು “spinal cord ನೋವು ಇದೆಯಾ?” ಎಂದು ಕೇಳಿದರು. “ಹೌದು” ಎಂದೆ. ಅವರು ನನ್ನನ್ನು ಮುಂದಕ್ಕೆ ಬಾಗಿಸಿ ತಮ್ಮ ಸೆರಗಿನಿಂದ ಬೆನ್ನು ಸವರಿ ಯಾವುದೋ ಮಂತ್ರ ಜಪಿಸಿ, ಕೈಯಿಂದ ನೇವರಿಸಿ ಅವರ ಸೊಂಟಕ್ಕೆ ನಟಿಕೆ ತೆಗೆದರು. ನಾನು ಅವರಿಗೆ ೫೦ ರೂಪಾಯಿ ಕೊಟ್ಟೆ. ಅವರು ೨ ರೂಪಾಯಿ ನಾಣ್ಯವನ್ನು ನನ್ನ ಜೇಬಿನಲ್ಲಿ ಇಟ್ಟರು. ಕೃತಜ್ಞ ಭಾವದಿಂದ ಅವರ ಮುಖವನ್ನು ನೋಡಿದೆ. ಅವರ ಮುಖದಲ್ಲಿ ತಾಯಿಯ ಒಲುಮೆ, ಅಕ್ಕನ ಸಹೃದಯವನ್ನು ಕಂಡೆ. ಒಂದು ರೀತಿಯಲ್ಲಿ ಅವರ್ಣನೀಯ ವಾತ್ಸಲ್ಯವು ಒಂದು ಕ್ಷಣ ಬಂದು ಹೋದಂತೆ ಭಾಸವಾಯಿತು.
ಮನೆಗೆ ಹೋಗಿ ೩ ಗಂಟೆ ಮಲಗಿ ವಿಶ್ರಾಂತಿ ತೆಗೆದುಕೊಂಡೆ. ಗಾಢವಾದ ನಿದ್ರೆಯು ನನ್ನನ್ನು ಆವರಿಸಿತ್ತು. ನಿದ್ದೆಯಿಂದ ಎದ್ದಾಗ ಸ್ವಲ್ಪಮಟ್ಟಿಗೆ ಬೆನ್ನು ನೋವು ಕಡಿಮೆಯಾಗಿತ್ತು. ಒಂದು ರಾತ್ರಿ ಕಳೆದ ಮೇಲೆ ಬೆನ್ನು ನೋವು ಸಂಪೂರ್ಣವಾಗಿ ಮಾಯವಾಗಿತ್ತು. ನಡೆದ ಘಟನೆಗಳನ್ನು ಒಮ್ಮೆ ಅವಲೋಕನ ಮಾಡಿಕೊಂಡೆ. ಈ ಘಟನೆ ನನ್ನ ಮನಸ್ಸಿನಲ್ಲಿ ಇನ್ನೂ ಸೋಜಿಗದಂತೆ ತೋರುತ್ತಿದೆ. ನಾನು ಕನಕಪುರ ಬಸ್ ನಿಲ್ದಾಣಕ್ಕೆ ಬಂದಾಗಲೆಲ್ಲಾ ನೋಡುತ್ತೇನೆ. ಅಂದು ಫ್ರೆಬ್ರವರಿ ೨೮ನೇ ತಾರೀಖು ಬಸ್ಸಿನಲ್ಲಿ ಕಂಡವರು ಮತ್ತೆಲ್ಲೂ ಕಾಣಲಿಲ್ಲ. ದೇವರನ್ನು ನಂಬದ ನನಗೆ ಈ ಘಟನೆಯು ದ್ವಂದ್ವವನ್ನುಂಟು ಮಾಡಿದೆ.
-ಪ್ರಜ್ವಲ್ ಎಸ್. ಜಿ., ಸೀಗೆಕೋಟೆ.