ಕೊಡಲಿಲ್ವೇ ! ಕೊಡಲಿಲ್ವೇ ! ?: ಎಂ ಆರ್ ವೆಂಕಟರಾಮಯ್ಯ

ಏನು ಕೊಡಲಿಲ್ಲಾ ! ಯಾರು ಕೊಡಲಿಲ್ಲಾ ? ಯಾತಕ್ಕೆ ಕೊಡಲಿಲ್ಲಾ ! ಏನೂ ಅರ್ಥವಾಗದೇ ! ಯಾರದೀ ಆಲಾಪ, ಪ್ರಲಾಪ, ಎಂದಿರಾ ! ಇದೆಲ್ಲಾ ನಮ್ಮವರದೇ, ನಮ್ಮ ಜನರದೇ, ಈ ಸಮಾಜದಲ್ಲಿರುವ ಹಲವರದೇ ಎಂದರೆ, ಉಹೂಂ, ಇದರಿಂದಲೂ ಏನೂ ಅರ್ಥವಾಗಲಿಲ್ಲಾ. ಎಲ್ಲಾ ಒಗಟು, ಗೊಂದಲಮಯವಾಗಿದೆ ಎನ್ನಬಹುದು ಕೆಲವು ಓದುಗರು. ಕೆಲ ಕೆಲವರ ಆಲಾಪ ಅವರವರದೇ ಆದ ಕಾರಣಗಳಿಗಾಗಿರುತ್ತದೆ, ಇವುಗಳ ಜಲಕ್ ಹೀಗಿದೆ :

ಪ್ರತಿ ದಿನವೂ ನಿಮ್ಮ ವ್ಯಾಪಾರ, ವ್ಯವಹಾರ, ಕಸುಬಿನ ಸಂಬಂಧವಾಗಿ ನೀವು ಭೇಟಿ ಮಾಡುವ ಹಲವರ ಪೈಕಿ, ಕೆಲವರದು ಇದೇ ರಾಗವೇ, ಮುಲುಗಾಟವೇ. ಏನು ಸ್ವಾಮಿ ಚೆನ್ನಾಗಿದ್ದೀರಾ ! ಎಂದು ಲೋಕಾರೂಢಿಯಾಗಿ ಕೇಳಿದ್ದೇ ತಡ, ಏನು ಚಂದವೋ, ಚಾರವೋ, ಅದನ್ನೆಲ್ಲಾ ಹೇಳಿ ದುಃಖ ಹೆಚ್ಚು ಮಾಡಿಕೊಳ್ಳುವುದಕ್ಕಿಂತಾ, ಹೇಳದೇ ನಮ್ಮಲ್ಲೇ ಅದನ್ನು ಅದುಮಿಟ್ಟುಕೊಳ್ಳುವುದೇ ಒಳ್ಳೆಯದು, ಅಂತಾರೆ ಇವ್ರು. ಪಾಪ, ಏನಿರಬಹುದು ಇವರ ದುಃಖ, ಸಂಕಟ, ಎಂದು ಕನಿಕರಿಸಿ, ಮತ್ತೆ ಅವರನ್ನೇ ಪ್ರಶ್ನಿಸಿದರೆ, ಆಗ ಬಾಯಿ ಬಿಡ್ತಾರೆ. ನೋಡಿ, ಆ ದೇವರು ನನಗೆ ವಿದ್ಯೆ, ಬುದ್ದಿ, ಎಲ್ಲಾ ಕೊಟ್ಟ, ಎಂತೆಂತಹವರಿಗೆಲ್ಲಾ ಐಶ್ವರ್ಯ ಕೊಟ್ಟ ಆ ದೇವರು, ನನಗೆ ಸಂಪತ್ತನ್ನು ಮಾತ್ರ ‘ಕೊಡಲಿಲ್ವೇ’ ! ಎಂಬ ಸಂಕಟ ಇವರದು.

ಮತ್ತೆ ಕೆಲವರನ್ನು ಭೇಟಿ ಮಾಡಿದರೆ, ಅವರದು ಇನ್ನೊಂದು ರೀತಿಯ ದುಃಖ. ನೋಡಿ ಸರ್, ಮೂರು ತಲೆ ಮಾರು ಕುಳಿತು ತಿಂದರೂ ಸವೆಯದ ಸಂಪತ್ತು ನನಗಿದೆ. ಆದರೆ ಅದನ್ನು ವೃದ್ಧಿಸಿ, ರಕ್ಷಿಸಿಕೊಳ್ಳಲು ನನ್ನ ಮಕ್ಕಳಿಗೆ ವಿದ್ಯೆ ಬುದ್ಧಿಯನ್ನು ಆ ದೇವರು ‘ಕೊಡಲಿಲ್ವೇ’! ಎಂದು ಆಕಾಶದ ಕಡೆ ನೋಡಿ, ನಿಟ್ಟುಸಿರಿಟ್ಟವರು, ಇವರು.

ಛೇ, ನನಗೆ ಸಿಕ್ಕಿದ ಈ ಇಬ್ಬರೂ ತನಗೆ ದೇವರು ಅದು ಕೊಡಲಿಲ್ಲಾ, ಇದು ಕೊಡಲಿಲ್ಲಾ ಎಂದು ಗೋಳಾಡಿದರಲ್ಲಾ, ಎಂದು ಬೇಸರಿಸಿಕೊಂಡು, ಮನೆಯ ಕಡೆ ಹೊರಡುತ್ತಿದ್ದಂತೇ ಎದುರಾದರು ನನ್ನೊಬ್ಬ ಬಂಧು. ಕುಶಲೋಪರಿ ವಿಚಾರಿಸಿದಾಗ, ಆತನೆಂದ, ನೋಡಯ್ಯಾ, ನಿನಗೆ ತಿಳಿದಂತೆ ನಮ್ಮದು ಲಾಗಾಯ್ತಿನಿಂದ ಒಳ್ಳೆಯ ಸಂಪ್ರದಾಯಸ್ಥರ ಮನೆತನ. ಬೆಳಗ್ಗೆ ಎದ್ದ ಕೂಡಲೇ ಸ್ನಾನ, ಸಂಧ್ಯಾವಂದನೆ, ದೇವರ ಪೂಜೆ ಇಲ್ಲದೆ ಒಂದು ತೊಟ್ಟು ನೀರೂ ಬಾಯಿಗೆ ಹಾಕಿದವರಲ್ಲಾ. ಆದರೆ, ನಮ್ಮ ಪೂರ್ವ ಜನ್ಮದ ಪಾಪವೋ, ಯಾರ ಶಾಪವೋ, ನಮ್ಮ ದುರಾದೃಷ್ಟವೋ, ತಿಳಿಯದು. ಇವನೊಬ್ಬ ಕೆಟ್ಟ ಹುಳು ನಮ್ಮ ಹೊಟ್ಟೇಲಿ ಹುಟ್ಟಿದ್ದಾನೆ. ಆಚಾರ, ಸಂಪ್ರದಾಯ ಒಂದೂ ಇಲ್ಲಾ, ಈ ಮುಂಡೇದಕ್ಕೆ. ಹಾಸಿಗೆ ಮೇಲಿರುವಂತೇನೇ ಬೆಡ್ ಕಾಫಿ, ಮೈ ಮುರಿದು ಮೇಲೇದ್ದು, ನಾಲ್ಕು ಚೊಂಬು ಬಿಸಿ ನೀರು ಮೈ ಮೇಲೆ ಸುರಿದುಕೊಂಡು, ತಟ್ಟೆ ಮುಂದೆ ಕೂತ್ಕೊಳ್ತಾನೆ, ಇಬ್ಬರಿಗಾಗುವಷ್ಟು ಗಡದ್ದಾಗಿ ತಿಂದು ತೇಗಿ, ಊರು ಅಲೆಯೋಕೆ ಹೋಗ್ತಾನೆ. ಇವನಿಂದ ನಮ್ಮ ವಂಶದವರೆಲ್ಲಾ ನರಕಕ್ಕೆ ಹೋಗುವಂತಾಗಿದೆ. ಇವನಿಗೆ ಆ ದೇವರು ಒಳ್ಳೆ ಬುದ್ಧಿ ‘ಕೊಡಲಿಲ್ವೇ’ ! ಎಂದು ಹಣೆ ಚಚ್ಚಿಕೊಂಡ, ಆ ಹಿರಿಯ. ಇಷ್ಟು ಹೊತ್ತೂ ಆ ಜೀವ, ಯಾರ ಬಗ್ಗೆ ಪ್ರಲಾಪಿಸಿದ್ದು ಎಂಬುದು ತಿಳಿಯಲಿಲ್ವೇ ? ಅದೇ, ಅವರ ಏಕೈಕ ಪುತ್ರ ರತ್ನನದು ಎಂಬುದನ್ನು ವಿವರಿಸಬೇಕಿಲ್ಲಾ.

ಎಲ್ಲಿ ಹೋದರೂ ಅಲ್ಲೂ ಬಂದ್ಯಾ ಜಡೇ ರಂಗ ಎಂಬ ಗಾದೆಯಂತೆ, ನಾ ಹೋದ ಜಾಗದಲ್ಲೆಲ್ಲಾ ಇಂತಹವರೇ ಸಿಕ್ತಿದ್ದಾರಲ್ಲಾ ಇವತ್ತು, ನಾ ಎದ್ದ ಘಳಿಗೆಯೇ ಸರಿಯಿಲ್ವೇನೋ ಎಂದು ಪೇಚಾಡಿಕೊಳ್ಳುತ್ತಾ ಮನೆ ಕಡೆ ಹೊರಟೆ. ನಿಮಿಷಗಳಲ್ಲೇ ಎದುರಾದವರು ನನ್ನ ಸಮೀಪ ಬಂಧುವಿನ ಸೋದರಿ. ಏನು ಸಮಾಚಾರ, ಎಲ್ಲಾ ಆರಾಮಾನಾ, ಎಂದಿದ್ದೇ ತಡ, ಈಕೆಯೂ ಶುರು ಮಾಡಿದಳು. ನಾನು ವಿದ್ಯಾವಂತೆ. ಖಾಯಂ ನೌಕರಿ. ಕೈ ತುಂಬಾ ಸಂಬಳ. ನಿವೃತ್ತಿಯಾದ ಮೇಲೆ ಯಾವ ಕೆಲಸ ಮಾಡದೆ ಮನೆಯಲ್ಲಿ ಕೂತರೂ ಪಿಂಚಣಿಗೆ ಹಕ್ಕುದಾರಳು. “ಋಣಾನು ಬಂಧ ರೂಪೇಣ ಪತಿ ಪತ್ನಿ ಸುತಾಲಾಯಃ” ಎಂಬ ಹಳೆಯ ಗಾದೆಯಂತೆ, ಒಳ್ಳೆಯ ಪತಿ, ಸ್ವಂತ ಮನೆ, ಸುಖ ಜೀವನಕ್ಕೆ ಬೇಕಾದದ್ದು ಎಲ್ಲಾ ಇದೆ ಎಂದರು.

ನನಗೆ ಎಲ್ಲಾ ಇದೆ, ನಾ ಸುಖಿ ಎನ್ನುವರೇ ಅಪರೂಪ ಈ ಕಾಲದಲ್ಲಿ ನೀವು ಬಹಳ ಅದೃಷ್ಟಶಾಲಿ, ಎನ್ನುತ್ತಿದ್ದಂತೆ ಏನ್ ಸುಖವೋ, ಏನ್ ಅದೃಷ್ಟವೋ ಅಂಕಲ್ ಎಂದು ಮುಖ ಬಾಡಿಸಿಕೊಂಡರು. ಅದ್ಯಾಕ್ರೀ ಹಾಗಂತೀರೀ ? ಏನು ನಿಮ್ಮ ಕೊರತೆ ! ಎಂದು ನಾ ವಿಚಾರಿಸಿದಾಗ, ಅಗತ್ಯವಾದದ್ದೆಲ್ಲಾ ನನ್ನ ಬಳಿ ಇದೆ. ಆದರೆ, ‘ಚೆನ್ನಾಗಿರೋ ಆ ನನ್ನ ಸೋದರರು’, ನನಗೆ ‘ಕೊಡಲಿಲ್ವೇ’ ? ಅಂತ ತಮ್ಮ ದುಃಖ ತೋಡಿಕೊಂಡರು ಈಕೆ. ಎಲ್ಲಾ ನನ್ನ ಹತ್ತಿರವಿದೆ ಅಂತಾ ನೀವೇ ಹೇಳಿದಿರಿ. ಹೀಗಿರುವಾಗ, ಸೋದರರ ಕಡೆ ಏಕೆ ನೋಡ್ತೀರಿ ನೆರವಿಗಾಗಿ ! ಎಂದರೆ, ಏ, ಅಪ್ಪ ಅಮ್ಮ ಮಾಯವಾದ ನಂತರ, ಸೋದರರಿರೋದೇ ಸೋದರಿಯರನ್ನು ನೋಡಿಕೊಳ್ಳೋಕೇ ಅಲ್ವೇ ! ಆಗೊಮ್ಮೆ ಈಗೊಮ್ಮೆ ಸೋದರಿಯರನ್ನು ತೌರಿಗೆ ಕರೆ ತಂದು, ಅದು, ಇದು, ಕೊಡ್ತಾ ಇರಬೇಡವೇ, ಹಾಗಿದ್ರಲ್ವೇನೇ ಚಂದ, ‘ಕೊಡಲಿಲ್ವೇ, ಅವರು ಕೊಡಲಿಲ್ವೇ’ ಎಂದು ಮತ್ತೆ ಈ ಸೋದರಿ ತಮ್ಮ ಅಳಲು. ತೋಡಿಕೊಂಡರು. ಪಾಪ, ನಿಮ್ಮ ಭಾದೆ ನನಗೆ ಅರ್ಥವಾಗುತ್ತೆ, ಆದರೆ, ಸೋದರಿಯರಾಗಿ, ನೀವು, ಅಣ್ಣಂದಿರಿಗೆ ಏನೇನು ಕೊಟ್ಟು ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದಾಗ, ಆಕೆ ತಮ್ಮ ಬಾಯಿ ಇಷ್ಟಗಲ ತೆಗೆದು, ಆಹಾ ! ಹೆಣ್ಣು ಹೆಂಗಸು, ನಾ ಎಂತದ್ದು ಕೊಡುವುದು, ಅವರಿಗೆ, ಇಷ್ಟಕ್ಕೂ, ಹೆಂಗಸಿನ ಹತ್ತಿರ ಅವರು ಕೈ ಚಾಚಿದರೆ ಅವರ ಗಂಡಸುತನಕ್ಕೇ ಅವಮಾನವಲ್ವೇ ! ಅನ್ನೋ ನೀತಿ ಪಾಠ ಬೋಧಿಸ್ತಾರೆ, ಈಕೆ. ಮೆಚ್ಚುವಂತಹುದೇ, ಇವರ ವಾದ ಎಂದಿರಾ , ‘ತಾ ಅಂಬೋದು ತಲಾಂತರದಿಂದ ಬಂದದ್ದು, ಕೋ ಎನ್ನುವುದು ಕುಲಕ್ಕೇ ಇಲ್ಲಾ’ ಎಂಬುದು ಇವರ ತಾರಕ ಮಂತ್ರ.

ಅಂದೆಲ್ಲಾ ನನ್ನ ಮನ ಕೊರೆದ ಒಂದು ವಿಷಯ ಎಂದರೆ, ಯಾಕೆ ನಮ್ಮ ಜನ ಹೀಗಾದರು ! ಎಂಬುದು. ದೇವರು ನಮಗೆ ಕೈ ಕಾಲು ಗಟ್ಟಿಯಾಗಿ ಕೊಟ್ಟಿದ್ದಾನೆ, ಆರೋಗ್ಯ ಭಾಗ್ಯ ಇದೆ. ಶರೀರ ಶ್ರಮ ಪಟ್ಟು ದುಡಿದು, ನಿನ್ನ ಕಾಯಕದ ಫಲ ನೀ ತಿನ್ನು ಎಂದು ಬುದ್ದಿಯನ್ನೂ ಕಲಿಸಿದ್ದಾನೆ, ನಮಗಾ ದೇವರು. ಇಂದು, ನಮಗಿಂತಾ ದುರದೃಷ್ಟವಂತರು, ನಿರ್ಭಾಗ್ಯರು ಎನಿಸಿಕೊಂಡ ನಾನಾ ವಿಧವಾದ ಅಂಗವಿಕಲತೆ ಉಳ್ಳವರೂ ಅವರಿವರ ಮುಂದೆ ಕೈ ಚಾಚದೆ, ತಮ್ಮ ಅನ್ನ ತಾವೇ ಸಂಪಾದಿಸಿಕೊಂಡು ಆತ್ಮ ಗೌರವ ಕಾಪಾಡಿಕೊಂಡಿದ್ದಾರೆ. ವಸ್ತುಸ್ಥಿತಿ ಹೀಗಿದ್ದು, ನಮ್ಮ ಅಂಗಾಂಗಗಳೆಲ್ಲಾ ನೆಟ್ಟಗಿರುವಾಗ, ಒಡವೆ, ವಸ್ತ್ರ, ಹಣ, ಭೂಮಿ, ಮುಂತಾದ ಇಹ ಲೋಕದ ಭೋಗ ಭಾಗ್ಯಗಳಿಗಾಗಿ ಅವರಿವರ ಕಡೆ ನೋಡಿ, ‘ಕೊಡಲಿಲ್ವೇ ! ಅವರು ಕೊಡಲಿಲ್ವೇ’ ಎಂದೇಕೆ ನಾವು ಅಳಬೇಕು ? ಈ ವಿಚಾರದಲ್ಲಿ ವಿಕಲಾಂಗರಿಗಿಂತಾ ನಾವು ದುರ್ಬಲರಾದೆವೆ ?

ಬಹುಶಃ ಇಂತವರನ್ನು ನೋಡಿಯೇ ಇರಬೇಕು, “ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು | ಬೇಕೆನುತ ಬೊಬ್ಬಿಡುತಲಿಹ ಘಟವನಿದನು || ಏಕೆಂದು ರಚಿಸಿದನೋ ಬೊಮ್ಮನೀ ಬೇಕು ಜಪ | ಸಾಕೆನಿಪುದೆಂದಿಗೆಲೋ –ಮಂಕುತಿಮ್ಮ” ಎಂದರು, ಅಂದೇ, ಡಿ ವಿ ಜಿ ಯವರು. ನಮ್ಮೀ ಶರೀರ ನಶ್ವರ. ಎಂದಾದರೊಂದು ದಿನ ಇದು ಭೂಮಿಗೆ ಬಿದ್ದು ಮಣ್ಣಾಗುವುದೋ, ಬೆಂಕಿಗೆ ಸಿಕ್ಕಿ ಉರಿದೋ ನಾಶವಾಗುವಂತಹುದು. ನಾವೀ ಲೋಕವನ್ನು ಬಿಟ್ಟಾಗ ನಮ್ಮ ಜೊತೆ, ನಮ್ಮ ಪತಿ, ಪತ್ನಿ, ಮಕ್ಕಳು, ಆಸ್ತಿ ಇವ್ಯಾವುದೂ ನಮ್ಮ ಸಂಗಡ ಬರುವುದದಿಲ್ಲ, ನಮ್ಮ ಜೀವಿತಾವಧಿಯಲ್ಲಿ ನಾವು ಮಾಡಿದ ಪುಣ್ಯ ಕಾರ್ಯಗಳು, ದಾನ, ಧರ್ಮದ ಫಲ ಮಾತ್ರವೇ ನಮಗೆ ಸದ್ಗತಿ ದೊರಕಿಸಿಕೊಡುವುದು. ಅದಕ್ಕಾಗಿಯೇ, ನಮ್ಮ ಹಿರಿಯರಂದಿರುವುದು, ಮರಣಾನಂತರ ಪರಲೋಕದಲ್ಲಿ ನಮ್ಮ ಸಹಾಯಕ್ಕೆ ತಂದೆ, ತಾಯಿ, ಮಕ್ಕಳು, ಹೆಂಡತಿ, ನೆಂಟರು ಯಾರೂ ಬರುವುದಿಲ್ಲ.. ವ್ಯಕ್ತಿ ಮಾಡಿದ ಧರ್ಮವೊಂದೇ ಅವನನ್ನು ಕಾಪಾಡುವುದು (ಮನುಸ್ಮೃತಿ 4. 239) ವಸ್ತು ಸ್ಥಿತಿ ಹೀಗಿರುವಾಗ ನಾವು ಅವರಿವರ ಕಡೆ ನೋಡಿ, ಭಿಕ್ಷುಕರಂತೆ ಅದು, ಇದು ‘ಕೊಡಲಿಲ್ವೇ , ಕೊಡಲಿಲ್ವೇ’ ಎಂದು ಹಲಬುವುದಕ್ಕಿಂತಾ, ಓ ದೇವ, ನನಗೆ ಸದ್ಬುದ್ಧಿ ಕೊಡು, ಒಳ್ಳೆಯ ವಿವೇಕ, ವಿವೇಚನೆ ಕೊಡು, ಸಾರ್ಥಕ ಜೀವನ ನಡೆಸುವ ಮಾರ್ಗ ತೋರು, ಮೋಕ್ಷ ದಯಪಾಲಿಸು ಎಂದು ಆ ಸೃಷ್ಠಿಕರ್ತನನ್ನು ನಾವೇಕೆ ಪ್ರಾರ್ಥಿಸಬಾರದು. ! ಇಂತಹಾ ಕೋರಿಕೆ ಇಹ ಪರಗಳೆರಡಕ್ಕೂ ಒಳಿತಲ್ಲವೇ ‘ಬೇಡುವುದಾದರೆ, ನರನನ್ನು ಬೇಡಬೇಡ, ಅವ ಹುಟ್ಟು ತಿರುಕ, ಬದಲಿಗೆ ಆ ದೇವನನ್ನು ಬೇಡು, ನೀ ಬೇಡಿದ್ದನ್ನ ಅವ ಕೊಡಬಲ್ಲ’ ಎಂಬ ಪುರಂದರ ದಾಸರ ಮಾತು, ‘ಮನುಷ್ಯ ಕೊಟ್ಟಿದ್ದು ಮನೆಯ ತನಕ, ದೇವರು ಕೊಟ್ಟಿದ್ದು ಕೊನೆಯ ತನಕ’ ಎಂಬ ಗಾದೆ ಈ ಸಂದರ್ಭದಲ್ಲಿ ಉಲ್ಲೇಖಾರ್ಹ.

ಇದೇ ಸಂದರ್ಭದಲಿ, ‘ಕೊಡಲಿಲ್ವೇ ! ಕೊಡಲಿಲ್ವೇ ‘ ಎಂದು ಅವರಿವರ ಮುಂದೆ ಕೈ ಚಾಚಿ ಬೇಡುವವರು ನೆನಪಿಡಲೇಬೇಕಾದ ಮುಖ್ಯ ಅಂಶವೆಂದರೆ, ಕೊಡು ಎಂದು ಕೈ ಚಾಚಿ ಬೇಡುವಾಗ ನಮ್ಮಲ್ಲಿ ನೆಲೆಸಿರುವ ಪಂಚ ದೇವತೆಗಳು, ಅರ್ಥಾತ್, ಲಜ್ಜೆ, ಸಂಪತ್ತು, ಧೀ ಪ್ರಜ್ಞೆ, ಧೃತಿ ಮತ್ತು ಕೀರ್ತಿಗಳು ನಮ್ಮನ್ನು ಅಗಲಿ ಹೋಗುವುವು ಎಂದಿದೆ ಒಂದು ಶ್ಲೋಕ. ಆದ್ದರಿಂದ, ಸದಾ ‘ಕೊಡಲಿಲ್ವೇ, ಕೊಡಲಿಲ್ವೇ’ ಎಂದು ಪ್ರಲಾಪಿಸುತ್ತಾ ಈ ಶ್ರೇಷ್ಠ ಮಾನವ ಜನ್ಮವನ್ನು ವ್ಯರ್ಥ ಮಾಡಿ ಪರಾವಲಂಭಿಗಳಾಗದೆ, ನಮಗೆ ಅಗತ್ಯವಾದದ್ದನ್ನು ನಾವೇ ಶ್ರಮವಹಿಸಿ ದುಡಿದು ಗಳಿಸೋಣ, ನಮ್ಮ ಆತ್ಮ ಗೌರವವನ್ನು ಕಾಪಾಡಿಕೊಳ್ಳೋಣ, ಮಾನವೀಯ ಗುಣಗಳನ್ನು ವೃದ್ಧಿಸಿಕೊಂಡು, ಸದಾ ಸತ್ಕರ್ಮ, ಸದಾಚಾರ, ಸದ್ವ್ಯವಹಾರ, ಧ್ಯಾನ ಪೂಜಾದಿ ಕಾರ್ಯಗಳಿಗಾಗಿ ಹೆಚ್ಚು ಕಾಲವನ್ನು ವಿನಿಯೋಗಿಸಿ, “ಇಲ್ಲಿಯ ಬಾಳು ಅಲ್ಲಿಯ ಬದುಕಿಗೆ ಸುಖದ ಸೋಪಾನ” ಮಾಡಿಕೊಂಡು ವಿವೇಕಿಗಳಾಗೋಣ.

– ಎಂ ಆರ್ ವೆಂಕಟರಾಮಯ್ಯ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Nanda
Nanda
2 years ago

ತುಂಬಾ ಅರ್ಥಪೂರ್ಣ ಬರಹ

1
0
Would love your thoughts, please comment.x
()
x