ಕಾವ್ಯಧಾರೆ

ಮೂರು ಕವಿತೆಗಳು: ಶಕುಂತಲಾ ಬರಗಿ

ಹಠ ತೊಟ್ಟಿದ್ದೇನೆ

ಮನುಷ್ಯಳಾಗಿ ಇರುವ ಆಸೆಗಾಗಿ
ಮಾತು ಮಾತಿಗೂ ಚಲ್ಲು ಚಲ್ಲು ಆಡುವವರ ಮಧ್ಯೆ
ಡೌಲು ಡೌಲು ನಡತೆ ಇರುವವರ ಮಧ್ಯೆ
ಈ ಹೈಲು ಫೈಲು ಮಂದಿ ನಡುವೆ
ನನ್ನತನದ ಹೋರಾಟಕ್ಕೆ ಬದ್ಧಳಾಗಿದ್ದೇನೆ.

ಅಂಕುಡೊಂಕು ನೂರು ಒನಪಿಗೆ
ಚುಚ್ಚುವ ಕೊಂಕುಮಾತುಗಳ ನಡುವೆ
ಮಂಕು ಕವಿದ ನೂರು ಪ್ರಶ್ನೆಗೆ
ನಾನು ಮೌನ ತವಸಿಯಾಗಿದ್ದೇನೆ

ಸವಾಲು, ಜವಾಬುಗಳ ಝೇಂಕಾರದಲ್ಲಿ
ಸ್ಪರ್ಧೆ, ಪೈಪೋಟಿಗಳ ಆಳದಲ್ಲಿ
ಕೊಂಕು-ಡೊಂಕುಗಳ ವ್ಯವಸ್ಥೆಯಲ್ಲಿ
ಶಾಂತವಾಗಿ ಸೋಲಿಸುತ್ತೇನೆ ಅವರಿವರನ್ನು

ಒಪ್ಪದ ತಪ್ಪಿದ ವ್ಯವಸ್ಥೆಯ ಭಂಜನದಲ್ಲಿ
ಒತ್ತಿದ ಬಿತ್ತಿದ ಉಳು ಗೊಬ್ಬರದಲ್ಲಿ
ಅಸತ್ಯದ, ಅಧರ್ಮದ ಲೋಕದಲ್ಲಿ
ಮನುಷ್ಯಳಾಗೇ ಇರುವ ಹಠ ತೊಟ್ಟಿದ್ದೇನೆ.


ದೀಪಾವಳಿ ಮಾಡಬೇಕೆಂದಿದ್ದೇನೆ

ದೀಪಾವಳಿ ಮಾಡಬೇಕೆಂದಿದ್ದೇನೆ
ಎನ್ನ ಮನವನೊಮ್ಮೆ ಶುಚಿಗೊಳಿಸಿ
ಬಣ್ಣ ಬಳೆದು ಅಲಂಕರಿಸಿ
ನನ್ನದಲ್ಲದ ಅಸಂಖ್ಯ ವಿಷಯಗಳ ಎತ್ತಿ ಕುಕ್ಕಿ
ಹೊರ ಒಗೆದು ನನ್ನ ಮನದ ಗೋಡೆ ನಿಲ್ಲಿಸಿ
ನಾ ದೀಪ ಹಚ್ಚುವ ಹಬ್ಬ ಮಾಡಬೇಕೆಂದಿದ್ದೇನೆ

ನನ್ನ ಮನವನೊಮ್ಮೆ
ಗುಡಿಸಿ ನನ್ನದಲ್ಲದ ವ್ಯಕ್ತಿಗಳನ್ನು ಎತ್ತಿಹಾಕಿ
ಒಳ ಪ್ರಪಂಚವನ್ನು ನನ್ನಂತೆ ಮಾಡಿ
ಸುಣ್ಣವ ಬಳೆದು ಬಿಳಿಗೊಳಿಸಬೇಕೆಂದೆ
ಯಾಕೆಂದರೆ ಅಲ್ಲಿ ದೀಪಾವಳಿ ಮಾಡಬೇಕೆಂದಿದ್ದೇನೆ

ನನ್ನ ಮನದಲ್ಲಿ
ಕಲೆಯಾದ ಅವರಿವರ ಕಹಿನೆನಪುಗಳನ್ನು
ಕಲೆ ಗುರುತುಗಳನ್ನು ಎಕ್ಕಿ ತೆಗೆದು
ದೀಪಾ ಧೂಪ ಗಂಧ ಹಚ್ಚಿ
ಮನದ ರೂಪ ಕಾಣಿಸಬೇಕೆಂದಿದ್ದೇನೆ
ಸಿಹಿ ನೆನಪುಗಳ ಸಹಿಮಾಡಿ ಪರಿಮಳಗೊಳಿಸಿ
ಎನ್ನ ಮನದಲ್ಲೊಮ್ಮೆ ದೀಪಾವಳಿ ಮಾಡಬೇಕೆಂದಿದ್ದೇನೆ


ಬುದ್ದ -ಬುದ್ಧಿ

ಯುದ್ಧದ ಮನೆಯಲ್ಲಿ ಬುದ್ಧಿ ಹುಟ್ಟಿತ್ತು
ಯುದ್ಧದ ಮನದಲ್ಲಿ ಸಿದ್ಧಿ ಗಳಿಸಿತ್ತು
ಸಂಘರ್ಷದ ಹೊಯ್ದಾಟದಲ್ಲಿ ಹೂವೆಲೆ ಬಿದ್ದಿತ್ತು
ಹೂವಂಚಿನ ತುದಿಯಲ್ಲೊಂದು ನಗೆಯೊಂದು ಬೀರಿತ್ತು

ಮನದ ಆಸೆ, ತೃಷೆ ತ್ಯಜಿಸಿದವ
ಬುದ್ಧನಾಗಿ ಬುದ್ಧಿಯಾಗಿ
ಬುದ್ಧನಾಗಿ ಬುದ್ಧಿಯಾಗಿ
ಸಿದ್ಧಿಗಳಿಸಿ ಸಿದ್ಧ ಬುದ್ಧ ಬೌದ್ಧನೂ ಆದ

ಬೌದ್ಧ ಶಾಂತಿ ಹೊತ್ತು ಜಗವ ಸುತ್ತಿದ
ಶಾಂತಿ ಮೀರಿ ಅಹಿಂಸೆ ಹೊತ್ತು
ಈ ಮನುಕುಲದ ಬುಟ್ಟಿಗೆ ಇವೆರಡು ಸುರುವಿದ
ತುಂಬಿದ ಬುಟ್ಟಿ ಇಂದ

-ಶಕುಂತಲಾ ಬರಗಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *