ದೃಶ್ಯಕಾವ್ಯವಾಗಿ ಗಮನ ಸೆಳೆಯುವ ಸಿನಿಮಾ-ಕೋಳಿ ಎಸ್ರು: ಚಂದ್ರಪ್ರಭ ಕಠಾರಿ

ತಮ್ಮ ಚೊಚ್ಚಲ ನಿರ್ದೇಶನದ ʼಅಮ್ಮಚ್ಚಿಯೆಂಬ ನೆನಪುʼ ಸಿನಿಮಾದ ಸುಮಾರು ನಾಲ್ಕು ವರುಷಗಳ ನಂತರ ಚಂಪಾ ಪಿ ಶೆಟ್ಟಿಯವರು ʼಕೋಳಿ ಎಸ್ರುʼ ಸಿನಿಮಾವನ್ನು, ಏಪ್ರಾನ್‌ ಪ್ರೊಡಕ್ಷನ್‌ ನಿರ್ಮಾಣದಲ್ಲಿ ತೆರೆಗೆ ತಂದಿದ್ದಾರೆ. ಸಾರ್ವಜನಿಕರಿಗೆ ಚಿತ್ರಮಂದಿರದಲ್ಲಿ ಇನ್ನೂ ಬಿಡುಗಡೆಯಾಗುವ ಮುಂಚೆಯೇ ಕೋಳಿ ಎಸ್ರು, ದೇಶ ವಿದೇಶಗಳಲ್ಲಿ ಜರುಗುತ್ತಿರುವ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತ, ಹಲವು ಪ್ರಶಸ್ತಿಗಳನ್ನು ಪಡೆದು ಸಿನಿಪ್ರಿಯರಲ್ಲಿ ಕುತೂಹಲ ಉಂಟು ಮಾಡುತ್ತಿದೆ.

ಚಂಪಾ ಪಿ ಶೆಟ್ಟಿಯವರ ಮೊದಲ ಚಿತ್ರವು ವೈದೇಹಿಯವರು ಬರೆದ ಕತೆಯನ್ನಾಧರಿಸಿದ್ದರೆ, ಕೋಳಿ ಎಸ್ರು ಕಾ.ತ. ಚಿಕ್ಕಣ್ಣ ಅವರ ʼಹುಚ್ಚೇರಿಯ ಎಸರಿನ ಪ್ರಸಂಗ’ ಕತೆಯಿಂದ ಪ್ರೇರೇಪಿತವಾಗಿದೆ. ನಿರ್ದೇಶಕಿಯೇ ಹೇಳುವಂತೆ ಕಾ.ತ. ಚಿಕ್ಕಣ್ಣ ಅವರ ಕತೆಯಲ್ಲಿನ ಸಣ್ಣ ಎಳೆಯನ್ನು ಹಿಡಿದು ದೃಶ್ಯಮಾಧ್ಯಮಕ್ಕೆ ಆಳವಡಿಸಿದ್ದಾರೆ. ಹಾಗೆ ಎಚ್ಚರಿಕೆಯಿಂದ, ಜಾಣ್ಮೆಯಿಂದ ಹೆಣೆದ ದೃಶ್ಯಗಳ ಜೋಡಣೆಯ ಕಸೂರಿ ಕೆಲಸದ ಫಲವಾಗಿ ಒಂದು ಸಶಕ್ತ ಚಿತ್ರಕತೆಯನ್ನು ಕಟ್ಟುವಲ್ಲಿ ಚಂಪಾ ಪಿ ಶೆಟ್ಟಿಯವರು ಯಶಸ್ವಿಯಾಗಿದ್ದಾರೆ. ಈ ವಿಷಯವಾಗಿ ಅವರ ಹಿಂದಿನ ಸಿನಿಮಾಕ್ಕೆ ಹೋಲಿಸಿದರೆ ಅವರ ಬೆಳವಣಿಗೆ, ಪ್ರಬುದ್ದತೆಯನ್ನು ಗುರುತಿಸಬಹುದು.

ಅನಾದಿ ಕಾಲದಿಂದಿಡಿದು, ಹೆಣ್ಣು ಆರ್ಥಿಕವಾಗಿ ಸಬಲಳಾಗುತ್ತಿರುವ ಈ ರೊಬೊಟಿಕ್‌ ಯುಗದವರೆಗೂ ಸಮಾಜದ ಯೋಚನೆ, ಚಿಂತನೆ ಪುರುಷ ಪ್ರಾಧಾನ್ಯ ವ್ಯವಸ್ಥೆಯಿಂದ ಮುಕ್ತಿ ಪಡೆಯದಿರುವುದು. ಆ ಕಾರಣವಾಗಿ ಹುಟ್ಟಿ ಬೆಳೆದ ಮನೆಯನ್ನು ತೊರೆದು ವಿವಾಹವಾದ ಗಂಡನ ಮನೆಯನ್ನು ಸೇರುವ ಹೆಣ್ಣು ಮಾತ್ರವೇ ಕುಟುಂಬವನ್ನು ಕಾಪಾಡಲು ಜವಾಬ್ದಾರಳು ಎಂದು ಗಂಡು ಭಾವಿಸುವುದು. ಇಂತಹ ಬದಲಾಗದ ಪರಿಸ್ಥಿತಿಯಲ್ಲಿ ಕುಟುಂಬದ ಹೊಣೆ ಹೊತ್ತ ಮಹಿಳೆಯ ದೈಹಿಕ, ಮಾನಸಿಕ ಶೋಷಣೆಯ ಅದೆಷ್ಟೋ ಕತೆಗಳು ಬಂದಿವೆ. ಸಿನಿಮಾಗಳು ಆಗಿವೆ. ಗಂಡಾಳ್ವಿಕೆಯ ಮನಸ್ಥಿತಿ ಬದಲಾಗುವವರೆಗೂ ಅವು ಹಲವು ಪ್ರಕಾರವಾಗಿ ಅಭಿವ್ಯಕ್ತಿಗೊಳ್ಳುತ್ತಿರುತ್ತವೆ.

ಕೋಳಿ ಎಸ್ರು ಕೂಡ ಇಂತಹದೇ ಕತೆಯುಳ್ಳದ್ದಾದರೂ ಚರ್ವಿತಚರ್ವಣ ಅನಿಸದ ಹೊಸತನದ ನಿರೂಪಣೆಯಿಂದ ಕೂಡಿದ, ಸ್ತ್ರೀ ಮುಖ್ಯ ಭೂಮಿಕೆಯ ಸಿನಿಮಾವಾಗಿದೆ. ಹುಚ್ಚೇರಿ ಈ ಚಿತ್ರದ ನಾಯಕಿ. ಅನಿವಾರ್ಯವಾಗಿ ತನಗಿಂತಲೂ ವಯಸ್ಸಾದ, ಕುಡಿತಕ್ಕೆ ದಾಸನಾದವನನ್ನು ಮದುವೆಯಾಗಿ, ಮೂರೊತ್ತು ಅಮಲಿನಲ್ಲಿರುವ ಬೇಜವಾಬ್ದಾರಿ, ದುಡಿಯದ ಗಂಡ ಕುಟುಂಬ ನಿರ್ವಹಣೆಗೆ ಬೆನ್ನು ತೋರಿರುವಾಗ, ತಾನೇ ಕೂಲಿನಾಲಿ ಮಾಡುತ್ತ ಮಗಳು, ವಯಸ್ಸಾದ ಅತ್ತೆಯನ್ನು ಸಾಕುವ ಹೊಣೆಯನ್ನು ಹೊತ್ತಿದ್ದಾಳೆ. ಬೆಳಗ್ಗಿನಿಂದ ರಾತ್ರಿಯವರೆಗೂ ದುಡಿದರೂ ಸಿಗುವ ಒಂದಷ್ಟು ಪಾವು ಅಕ್ಕಿ, ನಾಲ್ಕು ಕಾಸು ಅರೆಹೊಟ್ಟೆ ತುಂಬಿಸಲು ಸಾಕಾಗದೆ ಹೈರಾಣಾಗುತ್ತಾಳೆ. ಕೂಡಿಟ್ಟ ಪುಡಿಗಾಸನ್ನು ಎಗರಿಸಿ ಕುಡಿತಕ್ಕೆ ಬಳಸುವ ಗಂಡನನ್ನು ಪ್ರಶ್ನಿಸಿದರೆ “ನನ್ನಪ್ಪ ಕಟ್ಟಿದ ಹಟ್ಟಿಯಿದು. ಇಲ್ಲಿದ್ದ ಕಾಸು ತಗೊಂಡದರೆ ಅದು ಕಳ್ಳತನ ಹೇಗೆ?” ಎಂದು ವಿತಂಡವಾದ ಮಾಡುತ್ತ, ವಾಚಾಮಗೋಚರವಾಗಿ ಬೈಯುವವನನ್ನು, ಮಗನ ದುರ್ನಡೆಯನ್ನು ಸಮರ್ಥಿಸುವ ಅತ್ತೆಯನ್ನು ಸಹಿಸಿಕೊಂಡು ಬದುಕು ದೂಡಬೇಕಾದ ದೈನೇಸಿ ಸ್ಥಿತಿ ಹುಚ್ಚೇರಿಯದು. ಆದರೆ, ಕಷ್ಟಗಳ ನುಂಗುತ್ತ ಅವುಡು ಕಚ್ಚಿ ದಿನ ನೂಕುವ ಹುಚ್ಚೇರಿ, ಪರಿಸ್ಥಿತಿ ಮಿತಿ ಮೀರಿದರೆ ಎದೆಗುಂದದೆ ಮಾತಿನ ಚಾಟಿಯನ್ನು ಬೀಸುವ ಗಟ್ಟಿಗಿತ್ತಿ.

ಮಗಳು ಬಹಳ ಇಷ್ಟ ಪಡುವ ಕೋಳಿ ಎಸ್ರನ್ನು ಮಾಡಿಕೊಡುವ ಅವಕಾಶ ಅವಳ ಬಡತನಕ್ಕಿಲ್ಲ. ಹಾಗಾಗಿ ಊರಲ್ಲಿ ಯಾರೇ ಕೋಳಿ ಕತ್ತರಿಸಿದರೂ ಎಸರಿಗಾಗಿ ಅವರ ಮನೆ ಮುಂದೆ ಮಗಳ ಆಸೆ ಪೂರೈಸಲು ಡಬ್ಬಿ ಹಿಡಿದು ನಿಲ್ಲುವುದು ಗತ್ಯಂತರವಿಲ್ಲದ ಕೆಲಸ. ಹಾಗೊಮ್ಮೆ ಮಗಳನ್ನು ಮೆಚ್ಚಿಸಲು ಊರ ಗೌಡರ ಮನೆಯಲ್ಲಿ ನಡೆದ ಔತಣವನ್ನು ನೆಚ್ಚಿ ಕೋಳಿ ಎಸ್ರಿಗಾಗಿ ಹೋಗುತ್ತಾಳೆ. ಅಲ್ಲಿ ಅವಳಿಗೆ ಕೋಳಿ ಎಸ್ರು ದಕ್ಕುವುದೇ? ಅದನ್ನು ಮಗಳಿಗೆ ಉಣಬಡಿಸುತ್ತಾಳೆಯೇ? ಸಿನಿಮಾವನ್ನು ನೋಡಿಯೇ ಅನುಭವಿಸಬೇಕು.

ಬಡತನದ ಬೇಗೆಯಲ್ಲೂ ಹುಚ್ಚೇರಿಯ ಮಗಳ ಪ್ರೀತಿ, ಕಾಳಜಿ, ಮಮತೆಯ ದೃಶ್ಯಗಳು ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಅದರಲ್ಲೂ ಸಿನಿಮಾದ ಕೊನೆಯ ದೃಶ್ಯಗಳಂತೂ ಪ್ರೇಕ್ಷಕರನ್ನು‌ ಕಣ್ರೆಪ್ಪೆ ಮುಚ್ಚದಂತೆ ಕುತೂಹಲಕಾರಿಯಾಗಿದೆ. ಅಲ್ಲಿ ಫ್ಲಾಶ್ ಬ್ಯಾಕ್ ತಂತ್ರವನ್ನು ಪರಿಣಾಮಕಾರಿಯಾಗಿ ನಿರ್ದೇಶಕಿ ಬಳಸಿದ್ದಾರೆ. ಮೊದಲಿಗೆ ಹೊಟ್ಟೆ ತುಂಬಿಸುವುದೇ ಕಷ್ಟವಾಗಿ, ಮಗಳ ಶಾಲಾ ಕಲಿಕೆ ಬಗ್ಗೆ ನಿರಾಸಕ್ತಿ ತೋರುವ ಹುಚ್ಚೇರಿ ಕೊನೆಯಲ್ಲಿ ಸ್ಕೂಲ್‌ ಬ್ಯಾಗನ್ನು ಅವಳಿಗೆ ಕೊಡುವುದು, ಬಡತನ ನೀಗಲೂ ಅಕ್ಷರ ಕಲಿಕೆಯ ಅಗತ್ಯತೆಯ ದ್ಯೋತಕವಾಗಿದೆ.

ಚಾಮರಾಜ ನಗರದ ಹಳ್ಳಿಯೊಂದರಲ್ಲಿ ಸಾಗುವ ಸಿನಿಮಾ – ಅಲ್ಲಿನ ಜನರ ಬದುಕನ್ನು ಚಿತ್ರಿಸುವುದರ ಜೊತೆಗೆ ರಂಗಚಟುವಟಿಕೆ, ಜಾನಪದ ಹಾಡುಗಳನ್ನು ದಾಖಲಿಸುವುದರೊಂದಿಗೆ ಸಾಂಸ್ಕೃತಿಕ ಜಗತ್ತನ್ನು ಕಟ್ಟಿಕೊಡುತ್ತದೆ. ಈ ಸಿನಿಮಾದಲ್ಲಿ ಗಮನ ಸೆಳೆಯುವ ಮತ್ತೊಂದು ಅಂಶ ಪಾತ್ರಗಳ ಸಂಭಾಷಣೆ. ಆ ಭಾಗದ ಗ್ರಾಮ್ಯ ಸೊಗಡು ಕನ್ನಡ ಭಾಷೆಯು ಕೃತಕೃತೆಯಿಲ್ಲದ ಸಹಜವಾಗಿ ಮೂಡಿ ಬಂದಿದೆ. ಅದನ್ನು ಆಸ್ವಾದಿಸುವುದೇ ಒಂದು ಆನಂದ.

ಈ ಸಿನಿಮಾದ ಯಶಸ್ವಿಗೆ ಬಹು ಮುಖ್ಯ ಕೊಡುಗೆ ಇಲ್ಲಿಯ ತಾರಾಗಣ. ಹುಚ್ಚೇರಿಯಾಗಿ ರಂಗಭೂಮಿ ಮತ್ತು ಸಿನಿಮಾ ಕಲಾವಿದೆ ಅಕ್ಷತಾ ಪಾಂಡವಪುರ ಅದ್ಭುತವಾಗಿ ನಟಿಸಿದ್ದಾರೆ. ಭಾವನೆಗಳನ್ನು ಅವರು ಕಣ್ಣು, ತುಟಿ ಚಲನೆಯಲ್ಲಿ ಪ್ರಕಟಿಸುವ ಪರಿ ನೆನಪಲ್ಲಿ ಉಳಿಯುವಂತಾದ್ದು. Gesture ಮತ್ತು posture ಗಳಲ್ಲಿ ತಮ್ಮದೇ ಶೈಲಿಯಲ್ಲಿ ನಟಿಸಿ ಪ್ರತಿಭಾವಂತಿಕೆಯನ್ನು ಮೆರೆದಿದ್ದಾರೆ. ಕುಡುಕ ಗಂಡನಾಗಿ ಪ್ರಕಾಶ್‌ ಶೆಟ್ಟಿ ಮತ್ತು ಪುಟ್ಟ ಮಗಳಾಗಿ ಅಪೇಕ್ಷಾ ಚೋರನಹಳ್ಳಿ ನಟನೆಯೂ ಪಾತ್ರೋಚಿತವಾಗಿದೆ. ಈ ಮೂರು ಪ್ರಮುಖ ಪಾತ್ರಗಳಲ್ಲದೆ ಸಿನಿಮಾದಲ್ಲಿ ಬರುವ ಹಲವು ಪಾತ್ರಗಳು ನಟನೆಯ ಯಾವ ವಿಶೇಷ ತರಬೇತಿ ಇರದ ಹಳ್ಳಿಗರಿಂದಲೇ ಸಹಜವಾಗಿ ನಿರ್ವಹಿಸಿರುವುದು ಅಚ್ಚರಿ ತರುತ್ತದೆ. ಅದಕ್ಕಾಗಿ ನಿರ್ದೇಶಕಿ ಚಂಪಾ ಪಿ ಶೆಟ್ಟಿಯವರ ಪರಿಶ್ರಮ ಮೆಚ್ಚುವಂತದ್ದೆ.

ಒಂದೊಂದು ದೃಶ್ಯಕಟ್ಟುಗಳನ್ನು ಚಿತ್ರದ ಆಶಯಕ್ಕೆ ಪೂರಕವಾಗಿ ಸೆರೆ ಹಿಡಿದ ಡಿಒಪಿ ಫ್ರಾನ್ಸಿಸ್‌ ಅವರ ಕ್ಯಾಮೆರ ಕಸುಬುದಾರಿಕೆ ಸಿನಿಮಾದ ಹೈಲೆಟ್.‌ ಹಾಗೆ ಹರೀಶ್‌ ಕೊಮ್ಮೆ ಅವರ ಸಮಂಜಸ ಸಂಕಲನವಿದೆ. ಸಂಗೀತ್‌ ಥಾಮಸ್‌ ಮತ್ತು ಜೈಪಾಲ್‌ ರಾಜ್‌ ಅವರ ಸಂಗೀತ ವಿದೆ.

ಮಾಂಸಾಹಾರ ತಿನ್ನುವ ಪದ್ದತಿಯನ್ನೇ ಲೇವಡಿ ಮಾಡುತ್ತ ಆಹಾರ ರಾಜಕೀಯ ಮಾಡುತ್ತಿರುವ ಈ ಕಾಲಘಟ್ಟದಲ್ಲಿ, ಮಾಂಸಾಹಾರದ ಖಾದ್ಯದ ಹೆಸರೇ ಸಿನಿಮಾದ ಟೈಟಲ್‌ ಆಗಿರುವುದು ಗಮನ ಸೆಳೆಯುವಂತದ್ದು.

ಇತ್ತೀಚಿನ ದಿನಗಳಲ್ಲಿ ಕೆಲವಾದರೂ ಸದಭಿರುಚಿ ಕನ್ನಡ ಸಿನಿಮಾಗಳು ತೆರೆ ಕಾಣುತ್ತಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ಕೋಳಿ ಎಸ್ರು. ಮೊದಲೇ ಹೇಳಿದಂತೆ ಈ ಸಿನಿಮಾ ಈಗಾಗಲೇ ನ್ಯೂಯಾರ್ಕ್ ಇಂಡಿಯನ್ ಫಿಲ್ಮ ಫೆಸ್ಟಿವಲ್ ಗೆ ಆಯ್ಕೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಔರಂಗಾಬಾದ್‌ನಲ್ಲಿ ನಡೆದ ಪ್ರತಿಷ್ಠಿತ ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಅಲ್ಲದೆ ಇಂಡಿಯನ್ ಕಾಂಪಿಟೆಷನ್ ಸ್ಪರ್ಧೆಯಲ್ಲಿ ಎರಡು ಪ್ರಶಸ್ತಿಗಳಿಗೆ ಭಾಜನವಾಗಿದೆ.

ಔರಂಗಾಬಾದ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಚಿತ್ರದ ನಾಯಕಿ ಅಕ್ಷತಾ ಪಾಂಡವಪುರ ಮತ್ತು ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಬಾಲ ನಟಿ ಅಪೇಕ್ಷಾ ಚೋರನಹಳ್ಳಿ ಪಡೆದುಕೊಂಡಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಸಿನಿಮಾವೆಂದು ಪ್ರಶಸ್ತಿ ಪಡೆದಿದೆ. ಈಗ – ಅಕ್ಷತಾ ಪಾಂಡವಪುರ ಅವರನ್ನು ಮೆಲ್ಬೊರ್ನ್‌ ಭಾರತೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮ ನಿರ್ದೇಶನ ಮಾಡಲಾಗಿದೆ. ಅವರು ಆ ಪ್ರಶಸ್ತಿಗೆ ಆಯ್ಕೆಯಾಗಲೆಂದು ಹಾರೈಸೋಣ. ಚಂಪಾ ಪಿ ಶೆಟ್ಟಿಯವರಿಗೆ ಸಿನಿಮಾವನ್ನು ಕಲೆಯಾಗಿ ಕಟ್ಟುವ ಪ್ರತಿಭಾವಂತಿಕೆ ಇದೆ. ಅವರಿಂದ ಮತ್ತಷ್ಟು ಕೋಳಿ ಎಸ್ರಿನಂತಹ ಕಲಾತ್ಮಕ, ಸದಭಿರುಚಿ ಸಿನಿಮಾಗಳು ಬರಲಿ ಎಂದು ಹಾರೈಸೋಣ.

-ಚಂದ್ರಪ್ರಭ ಕಠಾರಿ
cpkatari@yahoo.com

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
M Nagaraja Shetty
M Nagaraja Shetty
1 year ago

ಮಹತ್ವಾಕಾಂಕ್ಷೆ ಇಲ್ಲದ ಅಚ್ಚುಕಟ್ಟಾದ ಸಿನಿಮಾ.
ನಟನೆ ನಿರ್ದೇಶನ ಚೆನ್ನಾಗಿದೆ. ನಿಮ್ಮ ಅಭಿಪ್ರಾಯಕ್ಕೆ ಸಹಮತವಿದೆ

ಎಸ್. ಪಿ. ಗದಗ.
ಎಸ್. ಪಿ. ಗದಗ.
1 year ago

ಚಿತ್ರದ ವಿಮರ್ಶೆ ಚೆನ್ನಾಗಿದೆ. ಚಿತ್ರದ ಬಗ್ಗೆ, ಪಾತ್ರದರಿಗಳ ಬಗ್ಗೆ, ನಿರ್ದೇಶಕರ ಬಗ್ಗೆ ಹಾಗೂ ಕತೆಯ ಮೂಲದ ಬಗ್ಗೆ ಬಹಳಷ್ಟು ವಿಚಾರ ತಿಳಿದು ಕುಟುಂಬದ ಜೊತೆಗೂಡಿ ಸಿನಿಮಾ ನೋಡುವ ಖುಷಿ,ಕುತೂಹಲ ಹೆಚ್ಚಾಗಿದೆ. ಧನ್ಯವಾದಗಳು.

2
0
Would love your thoughts, please comment.x
()
x