ಮಾಮನ್ನನ್‌ ಎನ್ನುವ ಕಹಿ ಮದ್ದು: ಎಂ ನಾಗರಾಜ ಶೆಟ್ಟಿ

`ಸಿನಿಮಾ ಬಿಡುಗಡೆಯಾದ ಎರಡನೇ ವಾರದಲ್ಲಿ ಚಿತ್ರ ನೋಡುವುದು ಮತ್ತು ಅದರ ಬಗ್ಗೆ ಬರೆಯುವುದು ಕಷ್ಟದ ಕೆಲಸ. ಆಗಲೇ ಹಲವರು ಅದರ ಬಗ್ಗೆ ಬರೆದು-ಹೇಳಿ ಬಿಟ್ಟಿರುತ್ತಾರೆ. ಅವರ ಅಭಿಪ್ರಾಯಗಳು ನಮ್ಮ ತಲೆಯಲ್ಲೂ ನೆಲೆಗೊಂಡು ಬಿಟ್ಟಿರುತ್ತವೆ. ಅದರಿಂದ ಹೊರಬರಲು ಸಾಕಷ್ಟು ತಿಣುಕಬೇಕು. ಕೆಲವು ವಿಮರ್ಶೆಗಳು ಖಂಡಿಸಲೆಂದೇ ಹುಟ್ಟಿಕೊಳ್ಳುತ್ತವೆ! ಕೆಲವರಿಗೆ ಸಿನಿಮಾದ ಅಂತ್ಯವನ್ನು ಹೇಳುವ ಆತುರ. ಇದರಿಂದ ಚಿತ್ರದ ರಸಾಸ್ವಾದನೆಗೆ ಖಂಡಿತ ಧಕ್ಕೆಯಾಗುತ್ತದೆ. ʼಮಾಮನ್ನನ್‌ʼ ನೋಡಿದಾಗ ನನಗೂ ಅದೇ ಆಯಿತು. ಪುಣ್ಯವಶಾತ್‌ ನೋಡುವಂತಿಲ್ಲವೆಂದು ಯಾರೂ ಹೇಳಿರಲಿಲ್ಲ. ʼಪೆರಿಯೇರುಂ ಪೆರುಮಾಳ್‌ʼ ʼಕರ್ಣನ್‌ʼ ಚಿತ್ರದ ಬಳಿಕ ಮಾರಿ ಸೆಲ್ವರಾಜ್‌ ʼಮಾಮನ್ನನ್‌ʼ ಚಿತ್ರ ನಿರ್ದೇಶಿಸುತ್ತಾರೆ, ಅದರಲ್ಲಿ ವಡಿವೇಲುವಿಗೆ ವಿಶಿಷ್ಟವಾದ ಭೂಮಿಕೆಯಿದೆ ಎನ್ನುವುದೇ ನಿರೀಕ್ಷೆ ಹುಟ್ಟಿಸಿ ಚಿತ್ರದ ನಿರ್ಮಾಪಕರು, ನಿರ್ದೇಶಕರಿಗಿಂತ ಹೆಚ್ಚಾಗಿ ಅಭಿಮಾನಿಗಳೇ ಸಾಮಾಜಿಕ ಮಾಧ್ಯಮಗಳಲ್ಲಿ ಭರ್ಜರಿ ಪ್ರಚಾರ ನೀಡಿದ್ದರು. ತಮಿಳುನಾಡಿಗೆ ಸೀಮಿತವಾಗಿದ್ದ ಹೀರೋ ವರ್ಶಿಪ್‌ ಬೆಂಗಳೂರಿನ ತಮಿಳು ಪ್ರೇಮಿ ಕನ್ನಡಿಗರಿಗೆ ಸ್ವಲ್ಪ ಹೆಚ್ಚಾಗಿಯೇ ಅಂಟಿದೆ. ಚಿತ್ರ ಚೆನ್ನಾಗಿದ್ದರೆ ಅತಿಯಾಗಿ ಹೊಗಳುವ ಅವರು ಚೆನ್ನಾಗಿಲ್ಲದಿದ್ದರೆ ಮೌನಕ್ಕೆ ಜಾರುತ್ತಾರೆ! ನಿರ್ದೇಶಕನ ಅಥವಾ ಕಲಾವಿದನ ಮೇಲಿನ ಅತಿಯಾದ ನಿರೀಕ್ಷೆ, ಅವನ ಸೃಜನಶೀಲತೆಗೆ ಭಂಗ ತರುವ ಸಂಭವವೂ ಇದೆ. ಉತ್ತಮ ಚಿತ್ರ ಕೊಟ್ಟು ಭರವಸೆ ಮೂಡಿಸಿದ ನಿರ್ದೇಶಕರು ನಂತರದಲ್ಲಿ ವಿಫಲರಾಗಿದ್ದಕ್ಕೆ ಇದೂ ಕಾರಣವಿರಬಹುದು. ಇರಲಿ, ಮಾರಿ ಸೆಲ್ವರಾಜ್‌ ಭರವಸೆಯನ್ನು ಹುಸಿಗೊಳಿಸಿಲ್ಲ ಎನ್ನುವುದಕ್ಕೆ ʼಮಾಮನ್ನನ್‌ʼ ಚಿತ್ರದಲ್ಲಿ ಸಾಕಷ್ಟು ಕಾರಣಗಳಿವೆ.

ಮಾರಿ ಸೆಲ್ವರಾಜ್‌ಎರಡು ರೀತಿಯಲ್ಲಿ ʼಮಾಮನ್ನನ್‌ʼ ಚಿತ್ರದಲ್ಲಿ ತಮ್ಮನ್ನು ಪ್ರಯೋಗಗೊಳಪಡಿಸಿಕೊಂಡಿದ್ದಾರೆ. ಮೊದಲನೆಯದು ಈ ವರೆಗೆ ನಿರ್ವಹಿಸಿದ ಪಾತ್ರಗಳಿಗಿಂತ ಭಿನ್ನವಾದ ವಡಿವೇಲು ಪಾತ್ರ. ಮತ್ತೊಂದು ಶೋಷಿತ ಜಾತಿಯನ್ನು ಕೇಂದ್ರ.ವಾಗಿರಿಸಿದ ರಾಜಕೀಯ ಚಿತ್ರದ ಕಟ್ಟೋಣ. ರಾಜಕೀಯ ಚಿತ್ರಗಳು ಅನೇಕವಿವೆ. ಅದೇ ರೀತಿಯಲ್ಲಿ ಶೋಷಿತರ ಸಿನಿಮಾಗಳೂ ಬಂದಿವೆ. ಆ ಬಗೆಯ ಹೆಚ್ಚಿನ ಸಿನಿಮಾಗಳಲ್ಲಿ ಬಲಿಷ್ಟ ಜಾತಿಗಳವರೇ ರಕ್ಷಕರೆನ್ನುವುದು ವಿಪರ್ಯಾಸ. ಇದಕ್ಕೆ ವ್ಯತಿರಿಕ್ತವಾಗಿʼಮಾಮನ್ನನ್‌ʼ ದಲಿತ (ಬಹುಶಃ ಇರುಳರ್)‌ ಜಾತಿಗೆ ಸೇರಿದ ವ್ಯಕ್ತಿಯೊಬ್ಬರ ಬದುಕು-ರಾಜಕೀಯವನ್ನು ನಿರೂಪಿಸುತ್ತದೆ. ಶೋಷಿತ ಜಾತಿಯ ವ್ಯಕ್ತಿ ಎಂಎಲ್‌ಎಯಾಗಿ ಆಯ್ಕೆಯಾದರೂ ಬಲಾಢ್ಯ ಜಾತಿಗಳವರ ಹಿಡಿತದಿಂದ ಹೊರ ಬರುವುದಿಲ್ಲ; ಮೂರು ಮಕ್ಕಳು ದಾರಣವಾಗಿ ಹತರಾದರೂ ನ್ಯಾಯ ಕೊಡಿಸಲಾಗದೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ. ಎರಡು ಅವಧಿಗೆ ಚುನಾಯಿತನಾದ ಜನ ಪ್ರತಿನಿಧಿಗೆ ಬಲಾಢ್ಯರೆದುರು ಕೂರಲು ಅವಕಾಶವಿಲ್ಲ. ಸಾಮಾಜಿಕ ನ್ಯಾಯವೆನ್ನುವುದು ಬಲಿಷ್ಟರ ಹಿತಾಸಕ್ತಿಯನ್ನು ಅವಲಂಬಿಸಿದೆ ಎನ್ನುವುದನ್ನು ʼಮಾಮನ್ನನ್‌ʼ ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ. ರತ್ನವೇಲು ಸ್ಪಷ್ಟವಾಗಿ ಹೇಳುತ್ತಾನೆ: “ಸಾಮಾಜಿಕ ನ್ಯಾಯವನ್ನು ಅಂತ್ಯಗೊಳಿಸಬೇಕು, ನಂತರ ಅಪ್ಪ ಮಗನನ್ನು ಮುಗಿಸಬೇಕು” ಇವು ಬಲಿತವರಿಗೆ ಸಾಮಾಜಿಕ ನ್ಯಾಯದ ಬಗೆಗಿರುವ ಅಸಹನೆಯನ್ನು ತೋರುವ ಮಾತುಗಳು. ಯಾವ ಪಕ್ಷ ಸೇರಿದರೂ ಅದನ್ನು ಗೆಲ್ಲಿಸುತ್ತೇನೆ, ತನಗೆ ಎದುರಾದವನನ್ನು ಯಾವ ರೀತಿಯಿಂದಲಾದರೂ ಸೋಲಿಸುತ್ತೇನೆ ಎನ್ನುವ ಅವನಲ್ಲಿ, ಜಾತಿ, ಅಂತಸ್ತು, ಸಂಪತ್ತಿನ ಮೂಲಕ ಚುನಾವಣೆಯಲ್ಲಿ ಗೆಲ್ಲಬಹುದು ಎನ್ನುವ ಅಹಂಕಾರವಿದೆ;ಇದು ಪ್ರಸ್ತುತ ರಾಜಕೀಯ.

ಚುನಾವಣೆಯಲ್ಲಿ ಗೆಲ್ಲಲು ಶೋಷಿತರು ಬಲಿಷ್ಟರನ್ನು ಓಲೈಸುವುದು, ಅಂಥ ಪಕ್ಷಕ್ಕೆ ಸೇರುವುದು, ಹಾಗೂ ಅವರ ಹಂಗಿನಲ್ಲಿರುವುದು ಅನಿವಾರ್ಯವೆನ್ನಿಸುವ ಪರಿಸ್ಥಿತಿ ಇದೆ. ಬಹಳ ಹಿಂದೆಯೇ ಇದನ್ನು ಮನಗಂಡು ಬಾಬಾ ಸಾಹೇಬ್‌ ಅಂಬೇಡ್ಕರ್‌ ಪ್ರತ್ಯೇಕ ಮತಕ್ಷೇತ್ರದ ಬೇಡಿಕೆಯನ್ನಿಟ್ಟಿದ್ದರು. ʼಮಾಮನ್ನನ್‌ʼ ಚಿತ್ರದ ಮೂಲಕ ಮಾರಿ ಸೆಲ್ವರಾಜ್‌ ಸೂಚ್ಯವಾಗಿ ಪ್ರತ್ಯೇಕ ಮತಕ್ಷೇತ್ರದ ಅಗತ್ಯವನ್ನು ಹೇಳಲು ಬಯಸಿದಂತೆ ಕಾಣುತ್ತದೆ. ಮಾಮನ್ನನ್‌ ಪಾತ್ರವನ್ನು ನಿರ್ವಚಿಸಿದ ರೀತಿಯೂ ವಿಶಿಷ್ಟವಾದುದು. ಬಲಿಷ್ಟರನ್ನು ಎದುರು ಹಾಕಿಕೊಳ್ಳದೆ ಅವರ ಮರ್ಜಿಯನ್ನು ಪಾಲಿಸುವ ಮಾಮನ್ನನ್‌ ಎಚ್ಚೆತ್ತುಕೊಳ್ಳುವ ಸಂದರ್ಭದ ನಿರ್ವಹಣೆ ಬಹಳ ಸಹಜವಾಗಿದೆ. ಮಾಮನ್ನನ್‌ ಮಗನಂತೆ ದುಡುಕುವವನಲ್ಲ. ಯುದ್ಧವನ್ನು ಗೌರವದಿಂದ ಗೆಲ್ಲಬೇಕೆನ್ನುವ ವಿವೇಚನೆಯಿರುವ ಆತನಲ್ಲಿ ರಿವಾಲ್ವರ್‌ ಕೈಗೆತ್ತಿಕೊಳ್ಳುವ ಕಸುವೂ ಇದೆ. ಚುನಾವಣೆಯ ಸಂದರ್ಭದಲ್ಲಿ ಆತನ ತಾಳ್ಮೆ ಮತ್ತು ಪ್ರಬುದ್ಧತೆ ಪ್ರಕಟವಾಗುತ್ತದೆ. ಅದಿವೀರನ್‌ನ ದುಡುಕುತನದ ಬದಲಾಗಿ ಮಾಮನ್ನನಲ್ಲಿ ವಿವೇಕವಿದೆ. ಈ ಮೂಲಕ ಯುವ ಜನರ ಆಕ್ರಮಣಕಾರಿ ಧೋರಣೆಗೆ, ಎಚ್ಚರದ, ನ್ಯಾಯಿಕ ಹೋರಾಟದ ದಾರಿಯನ್ನು ʼಮಾಮನ್ನನ್‌ʼ ಸೂಚಿಸುವಂತಿದೆ. ತಮ್ಮ ಮೇಲಿನ ನಿರ್ದೇಶಕರ ನಂಬಿಕೆಗೆ ವಡಿವೇಲು ನ್ಯಾಯ ಒದಗಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಕಷ್ಟ ಪಟ್ಟು ಅಭಿನಯಿಸಿರುವಂತೆ ತೋರಿದರೂ ಪಾತ್ರದ ಔಚಿತ್ಯವನ್ನುಅರಿತು ನಟಿಸಿದ್ದಾರೆ.

ಹೊಸ ತಲೆಮಾರು ಹಳಬರಿಗಿಂತ ಭಿನ್ನವಾಗಿ ಯೋಚಿಸುತ್ತಾರೆ ಎನ್ನುವುದನ್ನು ರೂಪಿಸಲು ಮಾರಿ ಸೆಲ್ವರಾಜ್‌ ಚಿತ್ರದಲ್ಲಿ ಹಲವು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಸ್ವಜಾತಿಯ ಸಂಘದ ಪ್ರತಿನಿಧಿ, ನಮ್ಮ ಮಾತು ಅವರು ಕೇಳುವುದಿಲ್ಲ ಎಂದು ರತ್ನವೇಲುವಿಗೆ ಹೇಳುವುದು, ಮಾಮ್ಮನ್ನನ್‌ ಬೆಂಬಲಕ್ಕೆ ಬರುವ ಯುವಜನರು, ಇಂತಾ ಕೆಲವು ದೃಶ್ಯಗಳು. ಸಣ್ಣ, ಸಣ್ಣ ದೃಶ್ಯ ಕಟ್ಟುಗಳಲ್ಲಿ ಮಾರಿ ಸೆಲ್ವರಾಜ್‌ ಇಷ್ಟವಾಗುತ್ತಾರೆ. ಇಲ್ಲಿ ಅವರ ಪ್ರತಿಭೆಯ ಹೊಳಹು ಕಾಣುತ್ತದೆ. ಮಾಮನ್ನನ್‌ ಹೆಂಡತಿಯ ಕಾಲು ಹಿಡಿಯುವುದು, ಮಗನ ಹರಿದ ಜೇಬನ್ನು ಮುಟ್ಟುವುದು, ಹಂದಿ ಮರಿಯನ್ನು ಮುದ್ದಾಡುವುದು ಇಂತಾ ಸೂಕ್ಷ್ಮಗಳು ಬಹಳಷ್ಟನ್ನು ಹೇಳುತ್ತವೆ. ತಿರುವಲ್ಲವರ್‌ ಕವಿತೆಗಳು, ಅಂಬೇಡ್ಕರ್‌ ಮಾತುಗಳನ್ನು ಸಂದರ್ಭೋಚಿತವಾಗಿ ಬಳಸಿಕೊಳ್ಳುವದರಲ್ಲೂ ಚಂದವಿದೆ. ಪ್ರತಿಮೆಗಳ ಮೂಲಕ ನಿರೂಪಣೆ ಮಾಡುವುದರಲ್ಲಿ ಮಾರಿ ಸೆಲ್ವರಾಜ್‌ ಸಿದ್ಧಹಸ್ತರು. ಇಲ್ಲಿಯೂ ಹಂದಿ, ಬೇಟೆ ನಾಯಿಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಉದಯ ನಿಧಿ ಸ್ಟಾಲಿನನ್ನು ಅದಿವೀರನ್‌ ಆಗಿ ಸಹಿಸಿಕೊಳ್ಳುವುದು ಕಷ್ಟ. ಅವರ ಮರಗಟ್ಟಿದ ಮೋರೆ ಪ್ರೀತಿಸುವಾಗಲು ಬದಲಾಗದಿರುವುದು ಚೋದ್ಯವೇ ಸರಿ. ಈ ಕೊರತೆಯನ್ನು ತುಂಬಿಕೊಡುವುದು ಫಹಾಧ್ ಫಾಸಿಲ್.‌ ಸಲೀಸಾದ ಪಾತ್ರ ನಿರ್ವಹಣೆ ಅವರದ್ದು. ಉದಯನಿಧಿಯ ಕಣ್ಣುಗಳು ನಿಸ್ತೇಜವಾಗಿದ್ದರೆ, ಫಹಾದ್ ಫಾಸಿಲ್ ಕಣ್ಣುಗಳಲ್ಲಿ ಅಭಿನಯಿಸುತ್ತಾರೆ!

ಕೆಲವು ವಿಷಯಗಳಲ್ಲಿ ಮಾರಿ ಸೆಲ್ವರಾಜ್‌ ರಾಜಿ ಮಾಡಿಕೊಂಡಿದ್ದಾರೆ ಕೂಡಾ. ಅದಿವೀರನ್‌ ಏಕಾಂಗಿಯಾಗಿ ಫೈಟ್‌ ಮಾಡುವುದು, ಚುನಾವಣಾ ಫಲಿತಾಂಶದ ಲಂಬಿತ ವಿವರಣೆ, ಒಂದು ಪಕ್ಷದ ಪರವೆಂದು ಕಾಣುವ ದೃಶ್ಯಗಳು, ಅನವಶ್ಯವೆಂದು ಅನ್ನಿಸುವ ಹಾಡುಗಳು, ಚಿತ್ರದ ಸುದೀರ್ಘ ಅವಧಿ ಸ್ವಾರಸ್ಯವನ್ನು ಕೆಡಿಸುವ ಅಂಶಗಳು. ಲಾಭ ನಷ್ಟದ ಲೆಕ್ಕಾಚಾರವಿರುವ ಸಿನಿಮಾ ರಂಗದಲ್ಲಿ ಸಾಮಾಜಿಕ ನ್ಯಾಯದ ಪರವಾಗಿದ್ದು, ದಲಿತ-ದಮನಿತರ ಪಾತ್ರವನ್ನು ಕೇಂದ್ರವಾಗಿರಿಸಿ ಚಿತ್ರ ನಿರ್ಮಾಣ ಮಾಡುವುದು ಸುಲಭವಲ್ಲ. ಇಂತಹ ಸವಾಲನ್ನು ಎದುರಿಸುವಾಗ ಕಮರ್ಶಿಯಲ್‌ ಅಂಶಗಳು ಬೇಕಾಗಬಹುದು. ಚಿತ್ರದಲ್ಲಿ ಈ ಅಂಶಗಳು ಸ್ವಲ್ಪ ಹೆಚ್ಚೇ ಇವೆ. ದೇಹದ ಆರೋಗ್ಯಕ್ಕೆ ಕಹಿ ಗುಳಿಗೆಯನ್ನು ಸಿಹಿ ಲೇಪನದೊಂದಿಗೆ ಸೇವಿಸುವಂತೆ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಮನರಂಜನೆಯ ಸರಕನ್ನು ಸಹಿಸಿಕೊಳ್ಳಬೇಕಾಗುತ್ತದೆ.

ಕೊನೆಗೆ, ಇನ್ನು ಆಗಲೇ ಕೆಲವರು ಹೇಳಿ ಬಿಟ್ಟಿರುವ ಮಾತು: ನಿರ್ಲಕ್ಷಿತ ಸಮುದಾಯದ ವ್ಯಕ್ತಿ ಬಂದಾಗ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಎದ್ದು ನಿಲ್ಲುವ ಸಂದರ್ಭದ ಚಿತ್ರಣ. ಇದೊಂದು ಅದ್ಭುತವಾದ ಕಲ್ಪನೆ. ಇದು ವೀಕ್ಷಕನಲ್ಲಿ ಗಾಢವಾದ ಪರಿಣಾಮ ಉಂಟು ಮಾಡುತ್ತದೆ. ಇಂತಹ ಅಂಶಗಳೇ ಮಾರಿ ಸೆಲ್ವರಾಜ್‌‌ ರನ್ನು ಮೆಚ್ಚುವಂತೆ ಮಾಡುತ್ತವೆ!

-ಎಂ ನಾಗರಾಜ ಶೆಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x