ಆಗಸ್ಟ್ ಹದಿನೈದು: ಎಫ್.ಎಂ.ನಂದಗಾವ್

ಜುಲೈ ಕಳೆಯಿತು ಅಂದರೆ, ಅದರ ಹಿಂದೆಯೇ, ಆಗಸ್ಟ್ ತಿಂಗಳು ಬರುತ್ತಿದೆ. ಅದರೊಂದಿಗೆ ಆಗಸ್ಟ್ ಹದಿನೈದು ಬರುತ್ತದೆ. ಆಗಸ್ಟ್ ಹದಿನೈದು ನಮ್ಮ ದೇಶ ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿ ಸ್ವತಂತ್ರ ದೇಶವಾದ ದಿನ. ದೇಶದ ಪ್ರಜೆಗಳೆಲ್ಲರೂ ಸಂಭ್ರಮಿಸುವ ದಿನ. ಆದರೆ ನನ್ನ ಪಾಲಿಗದು ಸಿಹಿಕಹಿಗಳ ಸಂಗಮ. ಕಹಿ ಮತ್ತು ಸಿಹಿಗಳ ಹುಳಿಮಧುರ ಸವಿ ನೆನಪುಗಳ ಮಾವಿನ ಬುಟ್ಟಿಗಳನ್ನು ಹೊತ್ತು ತರುವ ದಿನ.

ಅಂದು ಒಂದು ದಿನವೆಲ್ಲಾ ಪೊಲೀಸ್ ಠಾಣೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೆ. ಮಾಡದ ತಪ್ಪಿಗೆ, ಅವಮಾನವನ್ನು ಅನುಭವಿಸಬೇಕಾಯಿತು. ಆದರೆ, ಅದು ನನ್ನ ಹಾಗೂ ನನ್ನಿಂದ ಅವಮಾನಿತಗೊಂಡಿದ್ದ ಒಬ್ಬ ಬಾಲಕನ ಬದುಕಿನ ಮಹತ್ವದ ತಿರುವುಗಳಿಗೆ ಕಾರಣವಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ.

ಹದಿನೈದು ವರ್ಷಗಳ ಹಿಂದೆ. ನಾನು ಬೀದರ್ ಜಿಲ್ಲೆಯ ಒಂದು ಊರಿನಲ್ಲಿದ್ದೆ. ಅದಕ್ಕೂ ಮುಂಚೆ ಒಂದೆರಡು ದಶಕಗಳ ಹಿಂದೆಯೇ ಬೀದರ್, ಕಲ್ಬುರ್ಗಿ, ವಿಜಯಪುರ (ಬಿಜಾಪುರ) ಜಿಲ್ಲೆಗಳನ್ನು ಸೇರಿಸಿ ಕಥೋಲಿಕ ಕ್ರೈಸ್ತರ ಗುಲ್ಬರ್ಗ ಧರ್ಮಕ್ಷೇತ್ರ ಅಂದರೆ ಡಯಾಸಿಸ್ ರಚನೆ ಮಾಡಲಾಗಿತ್ತು. ಡಯಾಸಿಸ್ ಅಂದರೆ, ಒಬ್ಬರು ಬಿಷಪ್‌ರ ಅಂದರೆ ಮೇತ್ರಾಣಿಗಳ ಅಧಿಕಾರ ವ್ಯಾಪ್ತಿಯ ಪ್ರದೇಶ. ಹೊಸದಾಗಿ ರಚನೆಗೊಂಡ ಆ ಧರ್ಮಕ್ಷೇತ್ರ ಒಂದು ರೀತಿಯಲ್ಲಿ ಧರ್ಮ ಪ್ರಚಾರದ ಧರ್ಮಕ್ಷೇತ್ರ. ಅಲ್ಲಿರುವ ಬೆರಳೆಣಿಕೆಯ ಪಾದ್ರಿಗಳಿಗೆ ಕೆಲಸಗಳ ಮತ್ತು ಜವಾಬ್ದಾರಿಗಳ ಸಂಖ್ಯೆ ಮಾಮೂಲಿಗಿಂತ ಸ್ವಲ್ಪ ಹೆಚ್ಚಿಗೇನೆ ಇರುತ್ತಿದ್ದವು. ಹೀಗಾಗಿ ಅಲ್ಲಿನ ಮೇತ್ರಾಣಿಗಳಿಗೆ ಬೇರೆ ಬೇರೆ ಡಯಾಸಿಸ್ ನ ಗುರುಗಳ ಎರವಲು ಸೇವೆ ಪಡೆಯುವುದು ಅನಿವಾರ್ಯವಾಗಿತ್ತು. ಅತಿವಂದನೀಯ ಮೇತ್ರಾಣಿಗಳಾದ ಬಿಷಪ್ ರಾಬರ್ಟ್ ಮಿರಾಂದಾ ಅವರು, ನಾನು ಸೆಮಿನರಿಯಲ್ಲಿ ಇರುವಾಗಲೇ ನನ್ನ ಹೆಸರನ್ನು ಗುರುತು ಹಾಕಿಕೊಂಡಿದ್ದರು.

ಮೂರ‍್ನಾಲ್ಕು ದಶಕಗಳ ಹಿಂದೆ ಈ ಜಿಲ್ಲೆಗಳಲ್ಲಿ ಕ್ರೈಸ್ತರೂ ಎಂದರೆ, ಕೇವಲ ಪ್ರಾಟೆಸ್ಟಂಟ್ ಕ್ರೈಸ್ತರು ಇದ್ದರು. ಉದ್ಯೋಗ ಅರಸಿಕೊಂಡು ಬಂದ ಕೆಲವು ಬೆರಳೆಣಿಕೆಯ ಕಥೊಲಿಕ ಕ್ರೈಸ್ತ ಕುಟುಂಬಗಳು ಅಲ್ಲಲ್ಲಿ ನೆಲೆಸಿದ್ದವು. ಅಲ್ಲಿ ಗುಲ್ಬರ್ಗ ಜಿಲ್ಲೆಯ ಕಲ್ಬುರ್ಗಿಯನ್ನು ಕೇಂದ್ರವಾಗಿ ಇರಿಸಿಕೊಂಡು ರಚನೆಯಾದ ಗುಲ್ಬರ್ಗ ಕಥೊಲಿಕ ಕ್ರೈಸ್ತ ಧರ್ಮಕ್ಷೇತ್ರದ ಹಿಂದೆಯೇ ಹಲವಾರು ಕನ್ಯಾಸ್ತ್ರೀ ಮಠಗಳು – ಕಾನ್ವೆಂಟ್ ಗಳು ಆ ಜಿಲ್ಲೆಗಳಲ್ಲಿ ಆರಂಭವಾಗಿದ್ದವು. ಜಿಲ್ಲೆಗಳಲ್ಲಿನ ಪ್ರಮುಖ ಊರುಗಳಲ್ಲಿ ಕಾನ್ವೆಂಟ್ ಗಳು ನಡೆಸುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ತೆರೆದುಕೊಂಡಿದ್ದವು. ಕೆಲವು ಕಡೆಗಳಲ್ಲಿ ಧರ್ಮಕ್ಷೇತ್ರದ ನೇರ ಆಡಳಿತದಲ್ಲಿ ಶಾಲೆಗಳು ಆರಂಭವಾದ್ದವು.

ಈ ಪ್ರದೇಶದಲ್ಲಿನ ಪ್ರಮುಖ ಆರ್ಥಿಕ ಚಟುವಟಿಕೆಯಾಗಿರುವ ಸಿಮೆಂಟ್ ತಯಾರಿಕೆಯಲ್ಲಿ ತೊಡಗಿರುವ ಕಾರ್ಖಾನೆಗಳ ಮಾಲಿಕರು, ಕನ್ಯಾಸ್ತ್ರೀಯರನ್ನು ಕರೆಸಿಕೊಂಡು ತಮ್ಮ ತಮ್ಮ ಕಾರ್ಖಾನೆಗಳ ಪ್ರಧಾನ ಕಚೇರಿಯ ಸಮೀಪದಲ್ಲಿರುವ ಸಿಬ್ಬಂದಿಗಳಿಗೆ ನಿರ್ಮಿಸಿದ ಸಾಲುಮನೆಗಳ ಸನಿಹದಲ್ಲಿ ಶಾಲೆಗಳನ್ನು ತೆರೆಯುವಂತೆ ಕೋರಿಕೊಳ್ಳುತ್ತಿದ್ದರು. ಜೊತೆಗೆ ಅವರುಗಳೇ ಮುಂದಾಗಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡುತ್ತಿದ್ದರು. ಇದಲ್ಲದೇ, ಧರ್ಮಕ್ಷೇತ್ರದ ಆಸಕ್ತಿಯಿಂದಾಗಿ ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್ಸುಗಳು ಹೋಗದ ಹಳ್ಳಿಗಳಲ್ಲೂ ಶಾಲೆಗಳನ್ನು ತೆರೆಯಾಗಿತ್ತು.

ನಾನು ಬೀದರ್ ಜಿಲ್ಲೆಯ ಆ ಊರಿಗೆ ತಲುಪುವಷ್ಟರಲ್ಲಿ, ಎಲ್ಲಾ ವ್ಯವಸ್ಥೆಗಳು ಒಂದು ಹಂತಕ್ಕೆ ಬಂದುಬಿಟ್ಟಿದ್ದವು. ಗುಲ್ಬರ್ಗ ಧರ್ಮಕ್ಷೇತ್ರದಲ್ಲಿನ ಬೀದರ್, ಕಲ್ಬುರ್ಗಿ, ವಿಜಯಪುರ ಜಿಲ್ಲೆಗಳ ಪ್ರಮುಖ ಊರುಗಳಲ್ಲಿ ಕಥೋಲಿಕ ಕ್ರೈಸ್ತರ ಉಪಸ್ಥಿತಿ ಎದ್ದುಕಾಣುವಂತೆ ಆಗಿತ್ತು. ಆಯಾ ಊರಲ್ಲಿನ ಶಾಲೆಗಳ ಪಕ್ಕದಲ್ಲಿ ಚರ್ಚುಗಳು ಇದ್ದವು. ಧರ್ಮಕ್ಷೇತ್ರದ ನೇರ ಆಡಳಿತಕ್ಕೆ ಒಳಪಡುವ ಈ ಶಾಲೆಗಳ ಉಸ್ತುವಾರಿ ಆಯಾ ಚರ್ಚಿನ ಧರ್ಮಕೇಂದ್ರದ ಗುರುಗಳ (ಪ್ಯಾರಿಷ್ ಪ್ರೀಸ್ಟ್) ಹೆಗಲಿಗೆ ಏರಿತ್ತು.

ಧರ್ಮಕೇಂದ್ರದ ಗುರುಗಳು ಮರ‍್ನಾಲ್ಕು ವರ್ಷಕ್ಕೊಮ್ಮೆ ಬದಲಾಗುತ್ತಿದ್ದರು. ಧರ್ಮಕೇಂದ್ರದ ಗುರುಗಳು ಬದಲಾದಂತೆ ಚರ್ಚಿಗೆ ಹೊಂದಿಕೊಂಡಿರುವ ಶಾಲೆಗಳ ಆಡಳಿತದಲ್ಲೂ ಕೆಲವಷ್ಟು ವ್ಯೆತ್ಯಾಸಗಳು ಆಗುತ್ತಿದ್ದವು. ಶಾಲೆಯ ಕಚೇರಿ ಸಿಬ್ಬಂದಿ ಶಿಕ್ಷಕರು, ಈ ಬಗೆಯ ಅಲ್ಪಸ್ವಲ್ಪ ವ್ಯತ್ಯಾಸಗಳಿಗೆ ಹೊಂದಿಕೊಂಡು ಹೋಗುವುದು ಅವರಿಗೆ ಅನಿವಾರ್ಯವೂ ಆಗಿತ್ತು.

ನನಗೆ ಯಾವ ಗಾಡ್ ಫಾದರ್ ಗಳು ಇರಲಿಲ್ಲ. ಗುರುಮಠ (ಸೆಮಿನರಿಯ) ತರಬೇತಿ ಮತ್ತು ಸೇವಾದರ್ಶಿ (ಡಿಕನ್) ಅವಧಿ ಮುಗಿದು ಗುರುಪಟ್ಟ (ಆರ್ಡಿನೇಷನ್) ಆಗುತ್ತಿದ್ದಂತೆಯೇ ನನ್ನನ್ನು ಗುಲ್ಬರ್ಗ ಧರ್ಮಕ್ಷೇತ್ರದ ಸೇವೆಗೆ ನಿಯೋಜಿಸಿದ್ದರು. ನನ್ನ ಗುರುಮಠದ ಬಹುತೇಕ ಸಹಪಾಠಿಗಳು ತಮ್ಮ ತಮ್ಮ ಚಿಕ್ಕಮಗಳೂರು, ಹಾಸನ, ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ ಧರ್ಮಕ್ಷೇತ್ರಗಳ ಊರುಗಳಿಗೆ ತೆರಳಿದರೆ, ನಾನು ಹಾಸನದ ಶೆಟ್ಟಿಹಳ್ಳಿಯವ ಅಲ್ಲಿಗೆ ಹೋಗಬೇಕಾಯಿತು. ಕರ್ನಾಟಕದ ಮುಕಟಮಣಿ ಒಂದೊಮ್ಮೆ ಶಿಖ್ ಗುರು ಗುರುನಾನಕರು ಬೀದರ್ ಗೆ ಭೇಟಿ ಕೊಟ್ಟಿದ್ದರೆಂದು ಹೇಳುತ್ತಾರೆ. ಅಂಥ ಪುಣ್ಯಕ್ಷೇತ್ರವೆಂದು ಗುರುತಿಸುವ ಬೀದರ್ ಜಿಲ್ಲೆಯ ಆ ಊರಿಗೆ ಹೋಗಿ ಮುಟ್ಟಿದ್ದೆ.

ಸಂತಪುರದಲ್ಲಿ ಸಂತ ಜೋಸೆಫ್ ರ ಚರ್ಚು ಮತ್ತು ಅದನ್ನು ಹೊಂದಿಕೊಂಡೇ ಸಂತ ಜೋಸೆಫ್ ರ ಪ್ರಾಥಮಿಕ ಶಾಲೆ ಮತ್ತು ಶಾಲಾ ಮಕ್ಕಳ ವಸತಿಯೂ ಇದೆ. ಅಲ್ಲಿಂದ ತುಸು ದೂರದಲ್ಲಿಯೇ ಸಂತ ಅಂಬ್ರೋಸರ ಕನ್ಯಾಮಠವಿದೆ. ಇವೆಲ್ಲಾ ಸಂತಪುರದಲ್ಲಿ ಅಂದರೆ ಸಂತಪುರದಲ್ಲಿ ಅಲ್ಲ, ಸಂತಪುರದಿಂದ ಸ್ವಲ್ಪ ದೂರ ಔರಾದ- ಬೀದರ್ ರಸ್ತೆಯಲ್ಲಿ ಒಂದೆರಡು ಕಿ.ಮೀ ಸಾಗಿದರೆ ಎಡಗಡೆ ವಿಶಾಲವಾದ ಬಯಲಲ್ಲಿ ಇದ್ದವು. ಬೇರೆ ಮಾತುಗಳಲ್ಲಿ ಸ್ಪಷ್ಟವಾಗಿ ಹೇಳುವುದಾದರೆ, ಸಂತ ಜೋಸೆಫ್ ರ ಚರ್ಚು ಮತ್ತು ಸಂತ ಜೋಸೆಪ್ ರ ಪ್ರಾಥಮಿಕ ಶಾಲೆ, ಶಾಲಾ ಮಕ್ಕಳ ವಸತಿ- ಬೋರ್ಡಿಂಗ್ ಊರ ಹೊರಗೆ ಇದ್ದರೆ, ಊರ ಹತ್ತಿರದಲ್ಲಿ ಸಂತ ಅಂಬ್ರೋಸರ ಕನ್ಯಾಮಠವಿದೆ.

ಅಲ್ಲಿಗೆ ತಲುಪಿದ ಹೊಸದರಲ್ಲಿಯೇ ಧರ್ಮಕೇಂದ್ರದ ಗುರು ಕ್ಲೆಮೆಂಟ್ ಕೊಲಾಸೊ ಅವರು, ಉಡುಪಿಯ ಹತ್ತಿರದ ಕಲ್ಯಾಣಪುರಕ್ಕೆ ತೆರಳಬೇಕಾಗಿ ಬಂದಿತು. ಇನ್ನೂ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸರಿಯಾದ ಮಾಹಿತಿ ಪಡೆದಿರಲಿಲ್ಲ. ಅಷ್ಟರಲ್ಲಿ ಅಲ್ಲಿನ ಸಕಲ ವ್ಯವಹಾರಗಳ ಜವಾಬ್ದಾರಿ ಹೊತ್ತುಕೊಳ್ಳಬೇಕಾಯಿತು. ಜವಾಬ್ದಾರಿ ಎಂದರೆ, ಚರ್ಚು, ಗುರುಗಳ ಮನೆ, ಶಾಲೆ, ಮಕ್ಕಳ ವಸತಿ ಮನೆ ಹೀಗೆ ಪಟ್ಟಿ ಬೆಳೆಯುತ್ತಲೇ ಇರುತ್ತಿತ್ತು.

ರಸ್ತೆಗೆ ಅಂಟಿಕೊಂಡಂತೆ ಚರ್ಚಿನ ಕಟ್ಟಡ ಇದ್ದರೆ, ಅದರ ಹಿಂದೆ ಗುರುಮನೆ ಇತ್ತು. ತುಸು ದೂರದಲ್ಲಿ ಬಯಲಿನ ಅಂಚಿಗೆ ಶಾಲೆಯ ಕಟ್ಟಡವಿತ್ತು. ಅದಕ್ಕೆ ಹೊಂದಿಕೊಂಡೇ ವಿದ್ಯಾರ್ಥಿಗಳ ಬೋರ್ಡಿಂಗ್ ಇತ್ತು. ಆ ಬಯಲು ಮಕ್ಕಳ ಆಟದ ಬಯಲು. ಅಲ್ಲಿ ಅಷ್ಟೊಂದು ಗಿಡಗಳನ್ನು ಬೆಳೆಸಿರಲಿಲ್ಲ. ಕೇವಲ ನಮ್ಮ ಗಡಿ ಗುರುತಿಸುವ ಗೋಡೆಯ ಹತ್ತಿರದಲ್ಲಿ ಬೆರಳೆಣಿಕೆಯಷ್ಟು ಗಿಡಮರಗಳಿದ್ದವು. ಆದರೆ, ಚರ್ಚಿನ ಮಗ್ಗಲು ಮತ್ತು ಗುರುಮನೆಯ ಸುತ್ತಲೂ ಗಿಡಮರಗಳನ್ನು ಒತ್ತೊತ್ತಾಗಿ ಬೆಳಸಲಾಗಿತ್ತು. ಅದೊಂದು ಸುಂದರ ಹಸಿರು ಹೊದ್ದ ಪರಿಸರ. ನಮ್ಮ ಬದುವಿನ ಗಿಡಗಳ ಆಚೆಗೆ ಇರುವ ಬಟಾ ಬಯಲಲ್ಲಿ ಕೆಂಪು ಬಣ್ಣದ ಮಸಾರಿ ಮಣ್ಣಿನ ಹೊಲಗಳಿದ್ದವು,

ಗುರುಮನೆಯ ಸುತ್ತ ಮಾವು, ಹಲಸು, ಲಿಂಬೆ, ಸೀಬೆ ಹಣ್ಣು ಹೀಗೆ ಬಗೆಬಗೆಯ ಹಣ್ಣಿನ ಗಿಡಗಳನ್ನು ನೆಡಲಾಗಿತ್ತು. ಗುರುಮನೆಯ ಮುಂದೆ ಸಂಪಿಗೆ ಮರದ ಜೊತೆಗೆ ಗುಲಾಬಿ, ಮಲ್ಲಿಗೆ, ಶ್ಯಾವಂತಿಗೆ, ಬಣ್ಣಬಣ್ಣದ ಕನಕಾಂಬರ ಹೂವಿನ ಗಿಡಗಳನ್ನು ಬೆಳೆಸಲಾಗಿತ್ತು. ಹಸಿರು ಸಸ್ಯ ಶಾಮಲೇ ಈ ಹಂತಕ್ಕೆ ಬರಲು ಗುರುಮನೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದ ಉಪದೇಶಿ ಆರೋಗ್ಯಪ್ಪ ಮತ್ತು ಅಡುಗೆ ಆಳು ಇನ್ನಾಸಪ್ಪ ಹಾಗೂ ಬೋರ್ಡಿಂಗ್ ನಲ್ಲಿ ವಾಸವಿದ್ದ ವಿದ್ಯಾರ್ಥಿಗಳ ಶ್ರಮ ಕಾರಣ ಎಂದರೆ ತಪ್ಪಾಗದು.

ಆದರೂ ಉಪದೇಶಿ ಆರೋಗ್ಯಪ್ಪನಿಗೆ ಬೋರ್ಡಿಂಗನಲ್ಲಿರುವ ಮಕ್ಕಳ ಬಗೆಗೆ ಅಷ್ಟೊಂದು ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅದಕ್ಕೂ ಹಲವಾರು ಕಾರಣಗಳಿದ್ದವು. ಆತ, ನಿತ್ಯ ಶಾಲೆಯತ್ತ ಬರುವ ಮಕ್ಕಳ ಜೊತೆಗೆ ಆಗಾಗ ಬರುತ್ತಿದ್ದ ಜೋರು ಮಾಡುವ ಪೋಷಕರೊಂದಿಗೆ ವಿನಯದಿಂದ ನಡೆದುಕೊಳ್ಳುತ್ತಿದ್ದ. ಅಂಥ ಪೋಷಕರ ಮೇಲಿನ ಸಿಟ್ಟುಸೆಡುವುಗಳನ್ನು ಮಕ್ಕಳ ಮೇಲೆ ತೋರಿಸುತ್ತಿದ್ದ. ನನಗೂ, ಅವನ ಈ ಕೆಟ್ಟ ಚಾಳಿಯ ಪರಿಚಯವಾಗುವಷ್ಟರಲ್ಲಿ ಸಾಕಷ್ಟು ಅನುಹುತಗಳು ಜರುಗಿಬಿಟ್ಟವು. ಅಡುಗೆ ಆಳು ಇನ್ನಾಸಪ್ಪ, ಆರೋಗ್ಯಪ್ಪನ ಚಾಳಿ ಬಗ್ಗೆ ಹೇಳಿದ್ದನ್ನು ನಾನು ಅಷ್ಟಾಗಿ ಕಿವಿಗೆ ಹಾಕಿಕೊಂಡಿರಲಿಲ್ಲ

ಮನೆಯಲ್ಲಿನ ಪೋಷಕರ ಕಾಟ ತಡೆಯದೇ ಮನೆಯಿಂದ ಓಡಿ ಬಂದ, ಜೊತೆಗೆ ಮನೆಯವರೇ ತುಂಟ ಮಕ್ಕಳ ಕಾಟದಿಂದ ಬೇಸತ್ತು ಅವರೇ ತಂದ ಮಕ್ಕಳಿರುವ ಬೋರ್ಡಿಂಗ ನಲ್ಲಿರುವ ಮಕ್ಕಳಲ್ಲಿ ಸ್ವಲ್ಪ ಒರಟುತನವಿತ್ತು. ಅದರಲ್ಲಿ ಕೆಲವು ಜಾಣ ಹುಡುಗರೂ ಇದ್ದರು. ಪ್ರತಿ ಶನಿವಾರ, ಅವರಿಗೆ ಒಂದು ಬಗೆಯಲ್ಲಿ ಸ್ವತಂತ್ರದ ದಿನ. ಮಕ್ಕಳ ಹೃದಯ ಖಾಲಿ ಪಾಟಿ (ಸ್ಲೇಟು) ಅಂತ ಎಲ್ಲೋ ಓದಿದ್ದ ನೆನಪು ನನಗೆ. ಆದರೆ, ಉಪದೇಶಿ ಆರೋಗ್ಯಪ್ಪನ `ಮಕ್ಕಳನ್ನು ಸಡಲ ಬಿಡಬಾರದು, ಅವರಿಗೆ ಸದರ ಕೊಡಬಾರದು’ ಎಂಬ ಕಿವಿಮಾತು ಕೇಳಿ, ನಾನು ಬಿಗಿಮುಖದಿಂದ ಮಕ್ಕಳಿಂದ ಸ್ವಲ್ಪ ಅಂತರ ಕಾಯ್ದುಕೊಂಡೇ ಬಂದಿದ್ದೆ.

ಅವು ಬೇಸಿಗೆಯ ರಜೆ ದಿನಗಳು. ಶಾಲೆಗೆ ಬೇಸಿಗೆ ರಜೆ. ಮಾವಿನ ಹಂಗಾಮು. ನಮ್ಮ ಗುರುಮನೆಯ ಸುತ್ತಲಿನ ಮಾವಿನ ಮರಗಳಲ್ಲಿ ಮಾವಿನ ಹಣ್ಣಿನ ಗೊಂಚಲುಗಳು ತೊನೆದಾಡುತ್ತಿದ್ದವು. ಉಪದೇಶಿ ಆರೋಗ್ಯಪ್ಪ ಅದಾರೋ ಒಬ್ಬ ಸಾಬಿಯನ್ನು ಕರೆಯಿಸಿ ಮಾವಿನ ಹಣ್ಣ ಇಳಿಸಿ ಹಣ್ಣು ಮಾಡಿಸೋಣ ಎಂದು ಹೇಳಿದ್ದ.

ಒಂದು ದಿನ ಶನಿವಾರ ಬೋರ್ಡಿಂಗ್ ಹುಡುಗರು ಊಟ ಮಾಡಿದ ನಂತರ ಗುಂಪು ಕಟ್ಟಿಕೊಂಡು ಊರಲ್ಲಿ ಸುತ್ತಾಡಿಬರಲು ಹೋಗಿಬರುವುದು ರೂಢಿ. ನನ್ನದೂ ಮಧ್ಯಾನ್ನದ ಊಟವಾಗಿತ್ತು. ಅಡುಗೆಯಾಳು ಇನ್ನಾಸಪ್ಪ ಸಂತೆಗೆ ಅಂತ ಊರಿಗೆ ಹೋಗಿದ್ದ. ಮಟಮಟ ಮಧ್ಯಾನ್ನ. ರೋಂಯ ಅಂತ ಗಾಳಿ ಆವಾಜ ಬಿಟ್ಟರೇ, ಎಲ್ಲ ಕಡೆಯೂ ಶಾಂತ ವಾತಾವರಣ. ಗುರುಮನೆಯಲ್ಲಿ ಹಾಗೆಯೇ ಹಾಸಿಗೆಯ ಮೇಲೆ ಒರಗಿದ್ದೆ. ನಿಧಾನವಾಗಿ ನಿದ್ರೆಯ ಜೊಂಪು ಹತ್ತಿತ್ತು.

ಮಲಗಿದ್ದ ಕೊಠಡಿಯ ಕಿಟಕಿ ಗ್ಲಾಸ್ ಠಳ್ಳಂತ ಒಡೆಯಿತು. ಹೊರಗಿಂದ ಸಣ್ಣ ಕಲ್ಲಿನ ಏಟ ಬಿದ್ದಿರಬೇಕು. ದಡಗ್ಗನೇ ಎದ್ದು ಕೂತ ನಾನು ಹಾಗೇಯೇ ಮುಂಚಿ ಬಾಗಲ ತಕ್ಕೊಂಡ ಹೊರಗೆ ಬಂದೆ. ಹಿಂದೆ ತನ್ನ ಕೊಠಡಿಯಲ್ಲಿ ಮಲಗಿದ್ದ ಉಪದೇಶಿ ಆರೋಗ್ಯಪ್ಪನೂ ಓಡಿ ಬಂದಿದ್ದ.

ಗುರುಮನೆ ಪಕ್ಕದ ಮಾವಿನ ಗಿಡದ ಕೆಳಗೆ ಮಾವಿನ ಕಾಯಿಗಳ ಗುಂಪು ಕಾಣಿಸಿತು. ಆ ಕಡೆ ಈ ಕಡೆ ಮಾವಿನ ಎಲೆಗಳು, ಎಳೆ ರೆಂಬೆಗಳು ಬಿದ್ದಿದ್ದವು. ಅತ್ತ ಇತ್ತ ಕಣ್ಣು ಹಾಯಿಸುವುದರಲ್ಲಿ, ದೂರ ಮರೆಯಲ್ಲಿ ಹುಡುಗರು ಕಂಡಂಗಾಯಿತು.

ಉಪದೇಶಿ ಆರೋಗ್ಯಪ್ಪ, ಧೋತರವನ್ನು ಕಚ್ಚಿ ಹಾಕಿಕೊಂಡು, `ಏ, ಏ ಭಾಡ್ಕೋ’ ಎನ್ನುವಷ್ಟರಲ್ಲಿ ನಾಲ್ಕಾರು ಹುಡುಗರು ಓಡಿ ಹೋಗುತ್ತಾ ಎಡವಿ ಬಿದ್ದಿದ್ದರು. ಆದರೂ ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಮತ್ತೆ ಎದ್ದು ಕಂಪೌಂಡ್ ಹಾರಿ ಓಡಿದ್ದರು. ಅವರು ಹೊಲಕ್ಕೆ ಬಂದಿದ್ದ ಹುಡುಗರೋ ಅಥವಾ ನಮ್ಮ ಬೋರ್ಡಿಂಗನಲ್ಲಿ ಇರುವ ಹುಡುಗರೋ ಗೊತ್ತಾಗಲಿಲ್ಲ.

ಸ್ವಾಮ್ಯಾರ, ನೀವ ಏನ ಹೇಳ್ರಿ, ನಮ್ಮ ಬೋರ್ಡಿಂಗ್ ಪೋರಗಳೂ ಅದರಾಗ ಇರಬೇಕ. ಇಲ್ಲಂದ್ರ ಹೊರಗಿನ ಮಂದಿಗೆ ಇಷ್ಟ ಧೈರ್ಯ ಬರೂದ ಕಡಿಮೆ’’ ಅಂದ, ಆರೋಗ್ಯಪ್ಪ,ಸ್ವಾಮ್ಯಾರ, ಅದೇನೋ ಸಿ ಸಿ ಟಿವಿ ಅಂತ ಬಂದಾವಂತ. ನಿಮ್ಮ ಮನಿ ಸುತ್ತ ಮುತ್ತ, ಸಾಲ್ಯಾಗ ಅಲ್ಲಿ ಇಲ್ಲಿ ಅಂಥಾವ ಒಂದೆರಡ ಹಾಕಿದರ, ಯ್ಯರ‍್ಯಾರ ಓಡಾಡ್ತಾರ ಅನ್ನೂದು ಗೊತ್ತಾಗ್ತದ. ಇಂಥವರ ಅಂತ ಪೊಲೀಸ್ ಕಂಪ್ಲೇಂಟ್ ಕೊಡಬಹುದು’’ ಅಂತ ತನಗ ಅನಿಸಿದ್ದನ್ನು ಹೇಳಿದ.

ನನಗೂ ಅವನ ಮಾತು `ಹೌದು’ ಅನ್ನಿಸಿತು. ಆರೋಗ್ಯಪ್ಪ ಮಕ್ಕಳು, ಇರ್ಲಿ ಬಿಡಪಾ’’ ಅಂದೆ. ಅದಕ್ಕೆ ಸುಮ್ಮನಾಗದ ಆರೋಗ್ಯಪ್ಪ, ಅದೆಂಗ್ ಸುಮ್ಕಿರಬೇಕ್ರಿ ಸ್ವಾಮ್ಯಾರ? ಇಂದ ಮಾವಿನ ಗಿಡಕ್ಕ ಬಂದವರು, ಗುರುಮನಿ ನುಗ್ಗಿದರ ಹೆಂಗರಿ? ಮತ್ತ ಹ್ವಾದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ನಡದಾಗ ಹುಡುಗರ ಅಪ್ಪಾ ಅವ್ವ ಬಂದ ಗದ್ಲಾ ಮಾಡಿದ್ರಿ. ಆವಾಗ ದೊಡ್ಡ ಸ್ವಾಮ್ಯಾರು ಸಿ ಸಿ ಟಿವಿ ಹಾಕಸೂಣಂತ ಠರಾವ ಮಾಡಿ ಅಂಗಡಿಗೆ ದುಡ್ಡ ಕೊಟ್ಟ ಬಂದಿದ್ರು.’’

“ಮತ್ತ ಏನಾಯಿತು?’’

“ಅಂಗಡಿಯಂವ ಇಂದ ಬರ್ತದ ನಾಳೆ ಬರ್ತದ, ತಂದ ಹಾಕ್ತೀನಿ ಅಂತ ಹೇಳಿಕೋತ ಮೂರ ತಿಂಗಳ ಕಳದಾನ್ರಿ ಸ್ವಾಮೇರ’’.

`ಸರಿ ನೋಡೋಣ’’ ಎಂದು ನಾನು ಸುಮ್ಮನಾದೆ. ಚರ್ಚಿನ ಕಚೇರಿ ಅನ್ನುವ ಕೊಠಡಿಗೆ ಹೋಗಿ ಹಾಗೇ ಕೆಲವು ಫೈಲ್‌ಗಳನ್ನು ತಿರಗಿ ಹಾಕುವಾಗ, ಬೀದರ್‌ನಲ್ಲಿರೂ ಸಿ ಸಿ ಟಿವಿ ಹಾಕುವವರ ಅಂಗಡಿಯ ಚೀಟಿ ಸಿಕ್ಕಿತು.ನಾಳೆ ರವಿವಾರ ಪೂಜಿ ಮುಗಿದ ಮೇಲೆ ಹೋಗಿ ನೋಡಿಕೊಂಡು ಬರೋಣ’ ಎಂದುಕೊಂಡೆ.

ರಾತ್ರಿ ಊಟ ಮಾಡಿ ಕೈ ತೊಳೆಯುತ್ತಿದ್ದಾಗ ಬಂದ ಆರೋಗ್ಯಪ್ಪ, “ಸ್ವಾಮ್ಯಾರ, ಮಧ್ಯಾನ್ನ ಬಂದ ಹುಡುಗರ ಟೋಳ್ಯಾಗ, ನಮ್ಮ ಬೋರ್ಡಿಂಗ್ ನ್ಯಾಗ ಇರೂ ಚಾರ್ಲಿನೂ ಇದ್ದರಿ. ಸಂಜಿಮುಂದ ಅವನ ಅಂಗಿ ಮ್ಯಾಲ ಮಾವಿನ ಹಣ್ಣ ಚೀಪಿಕೊಂಡ ತಿನ್ನುವಾಗ ಮೂಡು ಹಣ್ಣಿನ ರಸದ ಕಲಿ ಇದ್ದವು. ಅವಾಂ ಮೊದಲ ಬಾಯಿ ಬಿಡಲಿಲ್ಲ. ಚೊಣ್ಣ ಕಳದ ನೋಡಿದಾಗ, ಮೊಣಕಾಲ ಗಂಟಿಗೆ ತರಚಿದ ಗಾಯ ಆಗಿತ್ತು. ನನಗ ಎಲ್ಲಾ ಗೊತ್ತಾಯ್ತು. ಅವನ್ನ ಎಳಕೊಂಡ ಬಂದೀನ್ರಿ. ತಗೋರಿ ಛಡಿ ತಂದೀನಿ. ನಾಕ ಬಾರಸರಿ’’ ಎಂದು ನನ್ನ ಕೈಗೆ ಎಳೆ ಬಿದರಿನ ಕಡ್ಡಿ ಕೊಟ್ಟ.

ನನಗೂ ಮಧ್ಯಾನ್ನದ ಘಟನೆಗೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕು ಅನ್ನಿಸಿತ್ತು. ಉಪದೇಶಿ ಆರೋಗ್ಯಪ್ಪನ ಮಾತಿನಂತೆ, ಬಿದರಿನ ಬೆತ್ತದಿಂದ ಬೆನ್ನಿಗೆ ನಾಲ್ಕೆಂಟು ಹಾಕಿದೆ. “ಸ್ವಾಮ್ಯಾರ ನಂದೇನು ತಪ್ಪಿಲ್ಲ. ಹೊಡಿಬ್ಯಾಡ್ರಿ’’ ಎಂದು ಚಾರ್ಲಸ್ ಅಂಗಲಾಚುತ್ತಿದ್ದರೂ ನಾನು ಏನನ್ನೂ ಕೇಳಿಸಿಕೊಳ್ಳಲಿಲ್ಲ. ಅವನ ಬೆನ್ನ ಮೇಲೆ ಬಾರುಗಳು ಮೂಡಿದ್ದವು.

ಬೋರ್ಡಿಂಗ್ ನಲ್ಲಿದ್ದ ಉಳಿದಿದ್ದ ಹತ್ತಾರು ಹುಡುಗರು ಏನಾಗ್ತದೋ ನೋಡೂಣ ಅಂತ ಬಂದಿದ್ದರು. ನಾನು ಬೆತ್ತ ಹಿಡಿದು ಹೊಡೆಯುವಾಗ ಆಕಸ್ಮಿಕವಾಗಿ ಕತ್ತೆತ್ತೆ ಬಾಗಿಲ ಕಡೆ ನೋಡಿದೆ, ಹೆದರಿದ ಹುಡುಗರು ಓಡಿ ಬೋರ್ಡಿಂಗ ಸೇರಿದ್ದರು. ಉಪದೇಶಿ ಆರೋಗ್ಯಪ್ಪ ಹೇಳುವಂತೆ, `ಮಕ್ಕಳಿಗೆ ನನ್ನ ಕುರಿತು ಭಯಭಕ್ತಿ ಮೂಡಿರಬೇಕು’ ಎಂದು ಅಂದುಕೊಂಡೆ.

ಅಳುತ್ತಿದ್ದ ಚಾರ್ಲಸ್ ನ್ನ ಹಿಡಕೊಂಡು, ಬೋರ್ಡಿಂಗ್ ಕಡೆಗೆ ಹೊರಟಿದ್ದ ಆರೋಗ್ಯಪ್ಪ, “ಮಗನ, ಊರ್ ಉಡಾಳ ಪೋರಗಳ ಜೊತಿ ಸೇರ್ಕೊಂಡ್ ಕಳ್ಳತನ ಮಾಡ್ತಿ? ಸ್ವಾಮ್ಯಾರೂ ಛಲೋ ಮರಮ್ಮತ್ ಮಾಡ್ಯಾರು ನೋಡ ನಿನಗ ಇವತ್ತ. ಇನ್ನಷ್ಟ ಆದ್ರ, ಮದವೀನೂ ಆಗ್ತಿತ್ತು’’ ಎನ್ನುತ್ತ ಅವನನ್ನು ತಳ್ಳಿಕೊಂಡು ಹೊರಟಿದ್ದ. ಹಿಂತಿರುಗಿ ನೋಡುತ್ತಿದ್ದ ಚಾರ್ಲಸ್ ನ ಕಣ್ಣುಗಳು ಭಯವನ್ನಲ್ಲ ಇನ್ನೇನೋ ಹೇಳುತ್ತಿದ್ದವು. ಸಿಟ್ಟೋ? ತಿರಸ್ಕಾರದ ನೋಟವೋ? ಗೊತ್ತಾಗುತ್ತಿರಲಿಲ್ಲ.

ಮರುದಿನ ಬೆಳಿಗ್ಗೆ ಪೂಜೆಯ ಮೊದಲು, ಪೂಜಾಂಕಣದ ಸಿಂಗಾರಕ್ಕೆ ಬಂದಿದ್ದ ಸಿಸ್ಟರ್ ನಿರ್ಮಲಮ್ಮ ಅವರು ಬಂದು, ಫಾದರ್, ನೀವು ನಿನ್ನೆ ಸಂಜೆ ಚಾರ್ಲಿಗೆ ಹಂಗ ಹೊಡಿಬಾರ್ದಿತ್ತು. ಅವಾಂ ಅಂಥವನಲ್ಲ. ಕೂಡಿಸಿ ಬುದ್ಧಿ ಹೇಳಬೇಕಿತ್ತು’’ ಎಂದಾಗ,ಉಡಾಳ ಹುಡುಗರಿಗೆ ತಲೆಯ ಮೇಲೆ ಕೂಡಿಸಿಕೊಂಡು, ತಿನ್ನಾಕ ಉಂಡಿ ಕೊಡಬೇಕೇನು ಸಿಸ್ಟರ್?’’ ಎಂದು ಪ್ರಶ್ನಿಸಿದೆ.

ಆಗ, ಸಿಸ್ಟರ್ ತಮ್ಮ ಮುಖದಲ್ಲಿ ಗಂಭೀರತೆಯನ್ನು ಆರೋಪಿಸಿಕೊಂಡು, “ನಿಮ್ಮದಿನ್ನೂ ಎಳೆಯ ವಯಸ್ಸು. ದುಡುಕು ಬುದ್ಧಿ ಕೈಯಾಗ ಸಿಗಬ್ಯಾಡ್ರಿ. ಜಗತ್ತನ್ನೂ ನೀವಿನ್ನೂ ಬಹಳಷ್ಟು ನೋಡಬೇಕಿದೆ. ಚಾರ್ಲಿ ಒಳ್ಳೆಯ ಹುಡುಗ, ಓದಿನಲ್ಲಿ ಮುಂದಿದ್ದಾನೆ. ನೀವು ಗಮನಿಸಿಲ್ಲ. ನಿನ್ನೆ ಆತ ನಮ್ಮಲ್ಲಿಗೆ ಬಂದಿದ್ದ. ಕೋಲ ಹಿಡಕೊಂಡ ನಮ್ಮ ಮಠದ ಅಂಗಳದಾಗಿನ ಮಾವಿನಗಿಡದಾಗಿನ ಹಣ್ಣ ಕೀಳುಮುಂದ ಎಡಿವಿಬಿದ್ದಿದ್ದ. ಆವಾಗ ಅವನ ಮೊಣಕಾಲಿಗೆ ತರಚಿದ ಗಾಯ ಆಗಿತ್ತು. ತಾಯಿ ಇಲ್ಲದ ಕೂಸು. ಎರಡನೇ ಹೆಂಡತಿ ಮಾತ ಕೇಳಿ ಅವರಪ್ಪನೂ ಅವನಿಗೆ ಹೊಡಿತಿದ್ದ. ಅದಕ್ಕಂತ ನಾವು ಅವನನ್ನು ಕರಕೊಂಡಬಂದ ಬೋರ್ಡಿಂಗ್‌ಗೆ ಸೇರಿಸಿದ್ವಿ’’ ಅಂದಾಗ ನನಗೆ ಸಾರಾಸಾರ ವಿಚಾರ ಮಾಡದೇ, ಇನ್ನೊಬ್ಬರ ಮಾತು ಕೇಳಿ, ಅರಿಯದೇ ನಾನು ಮಾಡಿದ ನನ್ನ ತಪ್ಪಿನ ಅರಿವಾಯಿತು. ಹಾಗಾದರೆ, ಅಂದು ಮಾವು ಕದಿಯಲು ಬಂದಿದ್ದ ಹುಡುಗರು ಯಾರು? ಇದು ಯಕ್ಷ ಪ್ರಶ್ನೆಯಾಗಿ ನನಗೆ ಕಾಡತೊಡಗಿತು.

ಒಳ್ಳೆಯ ನಡೆನುಡಿಯಿಂದ ಉಳಿದವರಿಗೆ ಆದರ್ಶಪ್ರಾಯ ಆಗಿರಬೇಕಾದ ನಾನು ನಿನ್ನೆ ಮಾಡಿದ್ದೇನು? ಗುರುವಾದ ಪಾದ್ರಿಯಾದ ನನ್ನ ನಡವಳಿಕೆ ಗುರುಮನೆಗೆ ಸೂಕ್ತವಾಗಿತ್ತೆ?’ ಮನಸ್ಸು ಕದಡಿತು. ಪೂಜೆಯಲ್ಲಿ ಬೋರ್ಡಿಂಗ್ ಹುಡುಗರ ಜೊತೆ ಕುಳಿತಿದ್ದ ಚಾರ್ಲಸ್, ಇತರ ಮಕ್ಕಳೊಂದಿಗೆ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದ ಎಂದು ಭಾಸವಾಗುತ್ತಿತ್ತು. ಹೇಗೋ ಅಂದಿನ ಪೂಜೆ ಮುಗಿಸಿದೆ. ಹೊರಗೆ ಬಂದ ಜನ ನನಗೆಸ್ವಾಮ್ಯಾರ ಸರ್ವೇಶ್ವರನಿಗೆ ಸ್ತೋತ್ರ’ ಎಂದು ನಮಿಸುತ್ತಿದ್ದರೂ, ಮುಂದೆ ಸಾಗಿದ ಮೇಲೆ ವಾರೆಗಣ್ಣಿನಿಂದ ನನ್ನ ನೋಡಿಕೊಂಡು ತಮ್ಮತಮ್ಮಲ್ಲೇ ಗುಸುಗುಸು ಮಾತಾಡುವುದನ್ನು ಗಮನಿಸಿದೆ. ಪೂಜೆಗೆ ಬಂದ ಜನರೂ, ನನ್ನ ಬಗ್ಗೆ ಮಾತಾಡುವಂತೆ ಆಯಿತಲ್ಲ ಎಂಬ ಬೇಸರವೂ ಆಯಿತು.

ಮೇ ತಿಂಗಳು ಕೊನೆಯ ವಾರದಲ್ಲಿ ಶಾಲೆ ಆರಂಭವಾಯಿತು, ನೂತನ ದಾಖಲಾತಿಗಳೊಂದಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಯಿತು. ಜೊತೆ ಜೊತೆಯಲಿ ಬೋರ್ಡಿಂಗ್ ಗೆ ಮತ್ತಷ್ಟು ಮಕ್ಕಳು ಬಂದು ಸೇರಿಕೊಂಡರು. ಒಂದು ಬಾರಿ ನನ್ನನ್ನು ಕಾಣಲು ಬಂದ ಚಾರ್ಲಸ್ ನ ತಂದೆ, `ಮಗನಿಗೆ ಸರಿಯಾಗಿ ಮಾಡಿದಿರಿ. ಅವನು ಬಹಳ ವಾಂಡ (ತುಂಟ) ಅದಾನ್ರಿ’ ಎಂದು ದೂರಿದ್ದರು. ನಾನು ಮರೆತಿದ್ದ ಸಂಗತಿ ಮತ್ತೆ ನೆನಪಾಗುವಂತಾಯಿತು. ಇಷ್ಟಾಗುವಷ್ಟರಲ್ಲಿ ಸಿ ಸಿ ಟಿವಿಗಳನ್ನು ಅಳವಡಿಸುವವ ಬಂದು ಅಗತ್ಯ ಕಂಡ ಜಾಗಗಳಲ್ಲಿ ಅವನ್ನು ಅಳವಡಿಸಿದ್ದ.

ಜೂನ್ ತಿಂಗಳು ಬಂದಿತು, ಹೋಯಿತು. ಜುಲೈ ತಿಂಗಳು ಬಂದಿತು. ಅದೂ ಮುಗಿದು ಆಗಸ್ಟ್ ತಿಂಗಳು ಬಂದಿತು. ಆದರೂ ವಿಚಾರಣಾ ಗುರುಗಳು ಉಡುಪಿಯ ಕಲ್ಯಾಣಪುರದಿಂದ ಬರಲೇ ಇಲ್ಲ. ಹೇಗೋ ಎಲ್ಲವನ್ನು ಸಾವರಿಸಿಕೊಂಡು ಹೊರಟಿದ್ದೆ. ಸಿಸ್ಟರ್ ನಿರ್ಮಲಮ್ಮ ಅವರು ಶಾಲೆಯ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದುದು ನನಗೆ ಸ್ವಲ್ಪ ಕೆಲಸ ಹಗುರವಾದಂತಾಗಿತ್ತು.

ಎಂದಿನಂತೆ ಆಗಸ್ಟ್ ತಿಂಗಳು ಬಂದಿತು. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಯಿತು. ರಾಷ್ಟ್ರಧ್ವಜ ಧ್ವಜ ಹಾರಿಸಲು ಸಿದ್ಧತೆಗಳು ನಡೆದವು. ಶಾಲಾ ಕಪಾಟಿನಲ್ಲಿದ್ದ ಖಾದಿ ರಾಷ್ಟ್ರಧ್ವಜವನ್ನು ತೆಗೆದು ಶುಚಿಗೊಳಿಸಲಾಯಿತು. ಶಾಲೆಯ ಕಚೇರಿಯ ಮುಂದೆ ಮೈದಾನದ ಅಂಚಿನಲ್ಲಿದ್ದ ಧ್ವಜಸ್ತಂಭದ ಕಟ್ಟೆಯನ್ನು ಶುಚಿಗೊಳಿಸಿ, ಬಿಳಿಯ ಬಣ್ಣ ಬಳಿಯಲಾಯಿತು. ಧ್ವಜಸ್ತಂಭದ ಕೆಳಗೆ ಇಡಲು ಗೋಡೆಯ ಮೇಲೆ ನೇತು ಹಾಕಿದ್ದ ಮಹಾತ್ಮಾ ಗಾಂಧೀಜಿ ಅವರ ಪಟವನ್ನೂ ಶುಚಿಗೊಳಿಸಲಾಯಿತು. ಶಾಲಾ ಬ್ಯಾಂಡಿನ ಹುಡುಗರು ವಿವಿಧ ವಾದ್ಯಗಳೊಂದಿಗೆ ರಾಷ್ಟ್ರಗೀತೆ `ಜನಗಣಮನ’ ಹಾಡಲು ತಾಲೀಮು ನಡೆಸಿದ್ದರು. ಆ ಹುಡುಗರ ತಂಡದಲ್ಲಿ ಚಾರ್ಲಸ್ ಕೂಡ ಇದ್ದ. ಅವನು ಸ್ವಲ್ಪ ಹೆಚ್ಚು ಲವಲವಿಕೆಯಿಂದ ಓಡಾಡುತ್ತಿದ್ದಾನೆ ಅನ್ನಿಸುತ್ತಿತ್ತು. ಆದರೆ, ನನ್ನನ್ನು ಕಣ್ಣಿಟ್ಟು ನೋಡಿದಾಗಲೆಲ್ಲಾ, ಅವನ ಕಣ್ಣುಗಳಲ್ಲಿ ಅದೇನೋ ವಿಚಿತ್ರ ಬಗೆಯ ನೋಟ ನನ್ನನ್ನು ಇರಿದಂತಾಗುತ್ತಿತ್ತು.

ಅಕ್ಕಪಕ್ಕದ ಹೊಲದ ರೈತರನ್ನೂ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿತ್ತು. ಸ್ವಾತಂತ್ರ್ಯ ದಿನದ ಆಚರಣೆಯ ಪ್ರಯಕ್ತ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಬಂಧದ ಪೂರ್ವಭಾವಿ ಸಭೆ ನಡೆಸಿದಾಗ ಅವರನ್ನು ಕರೆಯಬೇಕೆಂದು ನಾನು ಸಲಹೆ ಕೊಟ್ಟಾಗ, ಸಿಸ್ಡರ್ ನಿರ್ಮಲಮ್ಮ ಜೊತೆಗೆ ಕೆಲವು ಹಿರಿಯ ಶಿಕ್ಷಕರು ಬೇಡ’ ಎಂದರು.ಯಾಕೆ ಕರೆಯಬಾರದು?’ ಎಂಬ ಪ್ರಶ್ನೆಗೆ, ಅವರುಗಳೊಂದಿಗೆ ಗಡಿ ಬದುವಿನ ಕುರಿತು ಸ್ವಲ್ಪ ವಿವಾದವಿದೆ. ಪ್ರಕರಣ ತಹಶೀಲ್ದಾರ್ ಕಚೇರಿಯವರೆಗೂ ಹೋಗಿದೆ. ಒಬ್ಬ ರೈತ ಪುಢಾರಿ ತರಲೆ ಮಾಡ್ತಾನೆ’ ಎಂಬ ಮಾಹಿತಿ ನೀಡಿದರು.ಸ್ವಾತಂತ್ರವನ್ನು ಸಂಭ್ರಮಿಸುವ ಸಂದರ್ಭದಲ್ಲಿ ಅವರನ್ನು ಕರೆಯದಿರುವುದು ಸರಿ ಕಾಣದು’ ಎಂಬ ನಿಲುವಿಗೆ ಅಂಟಿಕೊಂಡ ನಾನು, ಅವರಿಗೆ ಆಹ್ವಾನ ನೀಡಲು ಸೂಚಿಸಿದ್ದೆ.

ಆಗಸ್ಟ್ ಹದಿನೈದು ಬಂದೇ ಬಿಟ್ಟಿತು. ಮರುದಿನವೇ ಆಗಸ್ಟ್ ಹದಿನೈದು ಮತ್ತು ನಮ್ಮ ಚರ್ಚಿನಲ್ಲಿ ಮಾತೆ ಮರಿಯಳ ಸ್ವರ್ಗಾರೋಹಣದ ಹಬ್ಬದ ಸಂಭ್ರಮಕ್ಕೆ ಸಿದ್ಧತೆಗಳಾಗಿದ್ದವು. ಬೆಳಿಗ್ಗೆ ಏಳು ಗಂಟೆಗೆ ಹಬ್ಬದ ಪೂಜೆ ಮುಗಿಸಿಕೊಂಡು ನಾನು, ಸಂತ ಅಂಬ್ರೋಸರ ಕನ್ಯಾಸ್ತ್ರೀ ಮಠದ ಸಿಸ್ಟರ್ ಗಳು ಶಾಲೆಯ ಕಡೆ ನಡೆದೆವು. ಸಿಸ್ಟರ್ ನಿರ್ಮಲಾ ಅವರು, ಹಿಂದಿನ ದಿನವೇ ಬಗೆಬಗೆಯ ಹೂವಿನ ಮೊಗ್ಗುಗಳನ್ನು ಹಾಕಿ ರಾಷ್ಟ್ರಧ್ವಜವನ್ನು ಧ್ವಜಸ್ತಂಭಕ್ಕೆ ಕಟ್ಟಿ ಇಟ್ಟಿದ್ದರು. ಅವರೊಂದಿಗೆ ಬೋರ್ಡಿಂಗ್ ನಲ್ಲಿದ್ದ ಮಕ್ಕಳು ಕೈ ಜೋಡಿಸಿದ್ದರು. ಬೆಳಿಗ್ಗೆ ೮.೩೦ಕ್ಕೆ ಬಂದು ಅದನ್ನು ಹಾರಿಸುವುದಷ್ಟೇ ಇತ್ತು.

ನಾವುಗಳೆಲ್ಲ ಶಾಲೆಯ ಮೈದಾನದಲ್ಲಿನ ಧ್ವಜ ಸ್ತಂಭದ ಹತ್ತಿರ ಬರುವಷ್ಟರಲ್ಲಿ ಉಳಿದ ಶಿಕ್ಷಕರು ಮಕ್ಕಳನ್ನು ಸಾಲಾಗಿ ನಿಲ್ಲಿಸಿದ್ದರು. ಕಾರ‍್ಯಕ್ರಮವನ್ನು ವೀಕ್ಷಿಸಲು ವಿದ್ಯಾರ್ಥಿಗಳ ಪಾಲಕರೂ ಬಂದಿದ್ದರು. ನಮ್ಮ ನರೆಹೊರೆಯ ರೈತರೂ ಬಂದಿದ್ದರು. ಅವರೊಂದಿಗೆ ಅವರ ಮಕ್ಕಳು ಬಂದಿದ್ದರು. ರೈತರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿದಂತಿರಲಿಲ್ಲ. ಯಾರನ್ನು ಪುಢಾರಿ ಎಂದು ನಮ್ಮ ಶಾಲೆಯ ಹಿರಿಯ ಶಿಕ್ಷಕರು ತೋರಿಸಿದ್ದರೋ ಅವರನ್ನು ಕರೆದು ಧ್ವಜಾರೋಹಣ ಮಾಡಿ ಧ್ವಜವಂದನೆ ಸ್ವೀಕರಿಸುವಂತೆ ವಿನಂತಿಸಿಕೊಂಡೆ. ಅವರು ಸೈಕಲ್ ಮೋಟಾರು ಓಡಿಸುತ್ತಿದ್ದರು. ಆದ್ದರಿಂದ ಅವರನ್ನು ಫಟಫಟಿ ಪುಡಾರಿ ಎಂದು ಜನ ಕರೆಯುತ್ತಿದ್ದರು.

ನಮಗ್ಯಾಕ್ರಿ ಈ ಉಸಾಬರಿ’’ ಎಂದು ನುಡಿಯುತ್ತಿದ್ದರೂ, ಆ ಫಟಫಟಿ ಪುಢಾರಿ ಸಂಪನ್ನಪ್ಪ ಹತ್ತರಕಿ ದಾಪುಗಾಲು ಹಾಕುತ್ತ, ಧ್ವಜ ಹಾರಿಸಿ ಧ್ವಜ ವಂದನೇ ಸ್ವೀಕರಿಸಲು ಮುಂದೆ ಬಂದರು. ಕೆಳಗೆ ಧ್ವಜಸ್ತಂಭಕ್ಕೆ ಹಗ್ಗದ ಸರಕನ್ನು ಎಳೆದು ನಿಧಾನವಾಗಿ ಧ್ವಜವನ್ನು ಏರಿಸತೊಡಗಿದರು. ಹಿರಿಯ ಶಿಕ್ಷಕ ಅವರ ಸಹಾಯಕ್ಕೆ ನಿಂತಿದ್ದರು.ಭಾರತಮಾತಾ ಕಿ ಜೈ, ಒಂದೇ ಮಾತರಂ’’ ಮಕ್ಕಳ ಕೂಗು ಕೇಳಿಸಿತು. ಧ್ವಜವನ್ನು ಪೂರ್ತಿ ಏರಿಸಿ, ಇನ್ನೇನು ಹಗ್ಗ ಕಟ್ಟಬೇಕು, ಅಷ್ಟರಲ್ಲಿ “ಧ್ವಜ ಉಪರಾಟಿ ಹಾರೈತಲ್ರಿ” ಎಂದು ಯಾರೋ ಕೂಗಿದಂತಾಯಿತು.

ಹೌದು, ತಲೆ ಎತ್ತಿ ನೋಡಿದರೇ, ಧ್ವಜ ತಲೆಕೆಳಗಾಗಿ ಹಾರುತ್ತಿದೆ. ನಾನು ಸಿಸ್ಟರ್ ನಿರ್ಮಲಮ್ಮ ಅವರ ಮುಖ ನೋಡಿದರೆ, ಅವರ ಮುಖದಲ್ಲಿ ಅಚ್ಚರಿ ಎದ್ದು ಕಾಣುತ್ತಿತ್ತು. ಸುತ್ತ ಕಣ್ಣು ಹಾಯಿಸಿದಾಗ, ಜನಗಣಮನ ಹಾಡಲು ಸಿದ್ಧರಾಗಿ ನಿಂತಿದ ಬ್ಯಾಂಡ ಬಾರಿಸುವ ಮಕ್ಕಳ ಸಾಲಿನಲ್ಲಿದ್ದ ಚಾರ್ಲಸ್‌ನ ಮುಖದಲ್ಲಿ ಮಂದಹಾಸ ಮೂಡಿ ಮಾಯವಾದಂತೆ ಅನ್ನಿಸಿತು.

“ಏನ್ರಿ ಫಾದರ್, ನಿಮಗ ಅಕ್ಕಲ ಅದ ಇಲ್ಲೋ. ಇದೇನ ಕೆಲಸ ಮಾಡಿಸಿದ್ರಿ ನನ್ನ ಕೈಯಾಗ? ನಮ್ಮ ರಾಷ್ಟ್ರಧ್ವಜಕ್ಕ ಅಪಮಾನ, ನನ್ನಿಂದ ಈ ಅಪಚಾರ ಮಾಡಿಸಿದಿರಲ್ರಿ. ನಿಮ್ಮನ್ನ ಸುಮ್ಮನ ಬಿಡೂದಿಲ್ಲ’’ ಎಂದು ಧುಮಗುಡ ತೊಡಗಿದ, ಆ ಪುಢಾರಿ ರೈತ ಸಂಪನ್ನಪ್ಪ ಹತ್ತರಕಿ ಧೋತರದ ಚುಂಗನ್ನು ಹಿಡಿದು ಹೊರಟೇ ಬಿಟ್ಟ. ಉಳಿದ ರೈತರೂ ಅವರನ್ನು ಹಿಂಬಾಲಿಸಿದರು. “ತಡೀರಿ ಗೌಡ್ರ, ಸರಿ ಪಡಿಸೋಣ” ಎಂದು ಹಿರಿಯ ಶಿಕ್ಷಕರು ಪುಢಾರಿಯ ಬೆನ್ನ ಹಿಂದೆ ಸಾಗಿದರೂ, ಆ ಆಸಾಮಿ ಧುರಧುರನೇ ಉಳಿದ ರೈತರನ್ನು ಕರೆದುಕೊಂಡು ಹೊರಟೇ ಹೋದರು.

ಈ ತರಹದ ಬೆಳವಣಿಗೆ ಅನಿರೀಕ್ಷಿತವಾಗಿತ್ತು. ನನಗೆ ತಕ್ಷಣ ಏನು ಮಾಡಬೇಕು? ಎಂಬುದು ತೋಚಲಿಲ್ಲ. ಕೆಲವು ಮಕ್ಕಳ ಪಾಲಕರು ಬಾಯಿಗೆ ಬಂದಂತೆ ತಮ್ಮ ತಮ್ಮಲ್ಲಿ ಗುಸುಗುಸು ಮಾತನಾಡತೊಡಗಿದರು. ಶಿಕ್ಷಕರು ಮಕ್ಕಳು ಅಯೋಮಯ ಸ್ಥಿತಿಯಲ್ಲಿದ್ದರು. ಆತಂಕದಲ್ಲಿ ಸಿಸ್ಟರ್ ನಿರ್ಮಲಮ್ಮ ನನ್ನ ಬಳಿ ಸಾರಿ, ಈಗ, ಏನು ಮಾಡುವುದು?’’ ಎಂದು ಕೇಳಿದರು.ಸರಿ, ಇನ್ನೇನು ಮಾಡುವುದು ಧ್ವಜ ಇಳಿಸಿ, ಮತ್ತೊಮ್ಮೆ ಸರಿಯಾಗಿ ಹಾರಿಸುವಾ’’ ಎಂದೆ ನಾನು.

ಮಗದೊಮ್ಮೆ ಧ್ವಜ ಹಾರಿಸಿ ಮುಗಿಸುವಷ್ಟರಲ್ಲಿ, ಫಟಫಟಿ ಪುಢಾರಿ ಸಂಪನ್ನಪ್ಪ ಹತ್ತರಕಿ ತನ್ನ ಮೋಟಾರ್ ಸೈಕಲ್ಲಿನಲ್ಲಿ ಒಬ್ಬ ಪೋಲಿಸ್ ಕಾನ್ಸಟೇಬಲ್ ನನ್ನು ಕರೆದುಕೊಂಡು ಬಂದೇ ಬಿಟ್ಟಿದ್ದ. ನನ್ನ ಕಡೆ ಕೈ ತೋರಿಸುತ್ತಲೇ ಬಂದ.

“ಸಾಹೇಬ್ರ ಇವ್ರ ನೋಡ್ರಿ. ಈ ಸಾಲಿ ನಡಸಾವರು. ಇವತ್ತ ನನ್ನ ಕೈಲೆ ಉಪರಾಟಿ ರಾಷ್ಟ್ರಧ್ವಜ ಹಾರಿಸ್ಯಾರು. ಧ್ವಜಕ್ಕ ಎಂಥಾ ಅಪಮಾನ ಮಾಡಿಸ್ಯಾರ. ನನ್ನ ಗಾಡ್ಯಾಗ ಅವ್ರನ್ ಕರಕೊಂಡ ನಡೀರಿ ಸೇಷನ್ನಿಗೆ’’

“ಅಲ್ಲ, ಏನೋ ಎಡವಟ್ಟಾಗಿರಬೇಕು. ಸರಿ ಮಾಡಿವಲ್ಲಾ’’ ಎಂದು ನಾನು ಹೇಳಿದೆ,

ಆದರೆ, ಪುಢಾರಿ ಏನು ಹೇಳಿದ್ದನೋ ಏನೋ? ಆ ಪೋಲಿಸ್ ಕಾನ್ಸಟೇಬಲ್ ನನ್ನ ಮಾತು ಕೇಳುವ ಸ್ಥಿತಿಯಲ್ಲಿ ಇದ್ದಂತಿರಲಿಲ್ಲ.

“ಸಾರ್, ಮೊದಲ ನನ್ನ ಜೋಡಿ ನಡೀರಿ ಸ್ಟೇಷನ್ನಿಗೆ. ನೀವ್ ಏನ್ ಹೇಳೂದನ್ನ ಎಲ್ಲಾ ನಮ್ಮ ಇನ್ಸಪೆಕ್ಟರ್ ಸಾಹೇಬರಿಗೆ ಹೇಳ್ರಿ’’ ಎನ್ನುತ್ತಾ ಆ ಕಾನ್ಸಟೇಬಲ್ ನನ್ನನ್ನು ತಳ್ಳಿಕೊಂಡು ಹೊರಟೇ ಬಿಟ್ಟ.

ಎಲ್ಲರ ಮುಂದೆ ನಾನು ಆಡಿದ ಮಾತು ಕೇಳಿಸಿಕೊಳ್ಳದ ಕಾನ್ಸಟೇಬಲ್ ಎದುರು ವಾದ ಮಾಡುವುದು ಕಲ್ಲಿನ ಎದುರು ಕಿನ್ನರಿ ಬಾರಿಸಿದಂತೆ’ ಎಂದು ಕೊಂಡ ನಾನುಹೆಚ್ಚು ಗೊಂದಲಕ್ಕೆ ಅವಕಾಶ ಬೇಡ’ ಅಂದುಕೊಳ್ಳುತ್ತಾ “ಸರಿ, ನಡೀರಿ’’ ಎನ್ನುತ್ತಾ ಅವನ ಜೊತೆ ಹೋದೆ.

ಅಲ್ಲಿ ಪೋಲಿಸ್ ಸ್ಟೇಷನ್ ನಲ್ಲಿ ಮೂರು ಮತ್ತೊಬ್ಬರು ಕಾನ್ಸಟೇಬಲ್‌ರು ಇದ್ದರು. ನನ್ನನ್ನು ಕರೆದುಕೊಂಡು ಹೋಗಿದ್ದ ಕಾನ್ಸಟೇಬಲ್, ಕಳವು ಮಾಡಿ ಸಿಕ್ಕಿದ್ದ ಕಳ್ಳರ ಜೊತೆ ಒಂದು ಮರದ ಬೆಂಚಿನ ಮೇಲೆ ನನ್ನನ್ನು ಕೂಡಿಸಿ, ಸ್ಟೇಷನ್‌ನಲ್ಲಿನ ತನ್ನ ಕೆಲಸದಲ್ಲಿ ತೊಡಗಿದ.

ಫಟಫಟಿ ಪುಢಾರಿ ಸಂಪನ್ನಪ್ಪ ಹತ್ತರಕಿ ನನ್ನ ಕುರಿತು ಯಾವುದೇ ದೂರು ದಾಖಲಿಸಿದಂತಿಲ್ಲ. ಆದರೆ, ಅವನ ಬಾಯಿ ಮಾತಿನ ದೂರು ಆಧರಿಸಿ ಆ ಕಾನ್ಸಟೇಬಲ್ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ನೋಡಿದರೇ ಇನ್ಸಪೆಕ್ಟರ್ ಇರಲಿಲ್ಲ. ಅವರೆಲ್ಲೋ ಮಿನಿಸ್ಟರ್ ಕಾರ‍್ಯಕ್ರಮದ ಬಂದೊಬಸ್ತಿಗೆ ಎಂದು ಸಮೀಪದ ಯಾವುದೋ ಹಳ್ಳಿಗೆ ಹೋಗಿದ್ದರು.

ಒಟ್ಟಾರೆ, ನಮ್ಮ ಶಾಲೆಯಲ್ಲಿ ನಡೆಯಬೇಕಿದ್ದ ಆಗಸ್ಟ್ ೧೫ರ ಧ್ವಜಾರೋಹಣ ಸಮಾರಂಭಕ್ಕೆ ಗ್ರಹಣ ಹಿಡಿದಿತ್ತು. ಮಧ್ಯಾಹ್ನ ಆಯಿತು. ಶಾಲೆಯ ಶಿಕ್ಷಕರು ಬಂದು ನನ್ನೊಂದಿಗೆ ಮಾತನಾಡಿಸಿ ಧೈರ್ಯ ಹೇಳಿದರು. ಸಿಸ್ಟರ್ ನಿರ್ಮಲಮ್ಮ ಅವರು, ಆಗಲೇ ಟೆಲಿಫೋನಿನಲ್ಲಿ ಮಾತನಾಡಿ ಮೇತ್ರಾಣಿ (ಬಿಷಪ್)ಗಳಿಗೆ, ಇಲ್ಲಿ ನಡೆದ ಘಟನೆಗಳ ವರದಿ ಒಪ್ಪಿಸಿದ್ದರು. ಮಧ್ಯಾನ್ನ ಕಳೆಯುತ್ತಾ ಬಂದರೂ ಇನ್ಸಪೆಕ್ಟರರ ಸುಳಿವೇ ಇರಲಿಲ್ಲ.

ಅಷ್ಟರಲ್ಲಿ ತಲೆ ಓಡಿಸಿದ್ದ ಅಡುಗೆ ಆಳು ಇನ್ನಾಸಪ್ಪ ಮತ್ತು ಉಪದೇಶಿ ಆರೋಗ್ಯಪ್ಪ ಸಿಸಿ ಟಿ ವಿ ಅಳವಡಿಸಿದ್ದು ನೆನಪಾಗಿ, ನನ್ನ ಹತ್ತಿರ ಓಡಿಬಂದಿದ್ದರು. `ಸರಿ ನೀವು, ಅವನ್ನು ಸಿಸ್ಟರ್ ನಿರ್ಮಲಮ್ಮ ಅವರಿಗೆ ತೋರಿಸಿ. ನೋಡೋಣ. ದೇವರು ಏನಾದರೂ ದಾರಿ ತೋರಿಸಿಯೇ ತೋರಿಸುತ್ತಾನೆ’ ಎಂದು ಅವರನ್ನು ಸಾಗಹಾಕಿದ್ದೆ.

ಅತ್ತ ಮೇತ್ರಾಣಿಗಳು, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರೆಂದು ಕಾಣಿಸುತ್ತದೆ. ಒಬ್ಬ ಕಾನ್ಸಟೇಬಲ್ ಬಂದು, `ಸರ್ ಕಾಫಿ ತರಿಸಿಕೊಡಲಾ? ಸಾಹೇಬರು ಇನ್ನೇನು ಬರುವ ಹೊತ್ತಾಯಿತು’ ಎಂದು ಗೌರವದಿಂದ ಮಾತನಾಡಿಸಿದ. ಕಳ್ಳರ ಜೊತೆಗೆ ಬೆಂಚಿನಲ್ಲಿ ಕುಳಿತಿದ್ದ ನನ್ನನ್ನು ಎಬ್ಬಿಸಿ ಇನ್ಸಪೆಕ್ಷರ್ ಅವರ ಮೇಜಿನ ಮುಂದಿನ ಕುರ್ಚಿಯಲ್ಲಿ ಕುಳ್ಳಿರಿಸಿದ.

ನನ್ನ ಬಗ್ಗೆ ಬಹಳವಾಗಿ ತಲೆ ಕೆಡಿಸಿಕೊಂಡಿದ್ದ ಉಪದೇಶಿ ಆರೋಗ್ಯಪ್ಪ ಮತ್ತು ಅಡುಗೆ ಆಳು ಇನ್ನಾಸಪ್ಪ, ಸ್ವಾಮಾರದೇನು ತಪ್ಪಿಲ್ಲ. ಅವರನ್ನು ಹೆಂಗ ಬಿಡಸೂದು?’ ಅಂತ ಚಿಂತೆ ಮಾಡುತ್ತಿದ್ದಾಗ, ಅವರಿಗೆ ಈಚೆಗೆ ಅಳವಡಿಸಿದ್ದ ಸಿ ಸಿ ಟಿವಿ ಕ್ಯಾಮಾರದ ನೆನಪಾಯಿತು. ಇಬ್ಬರೂ ಸೇರಿ ಸಿಸ್ಟರ್ ನಿರ್ಮಲಮ್ಮ ಅವರನ್ನು ಕಂಡು, ``ನಮ್ಮ ಸ್ವಾಮಾರದೇನೂ ತೆಪ್ಪಿಲ್ಲ. ಅಮ್ನೋರ್, ಒಂದ ಸಾರಿ ಆಸಿ ಸಿ ಟಿವಿ’ ನೋಡತಿರೇನ. ಏನಾರ ಕಾಣಬಹುದು’’ ಎಂದು ಕೇಳಿಕೊಂಡರಂತೆ.

ಸಿಸ್ಟರ್ `ಸಿಸಿ ಟಿವಿ’ ಕೂಡಿಸಿದ ಅಂಗಡಿಯವನನ್ನು ಗುರುಮನೆಗೆ ಕರೆಯಿಸಿಕೊಂಡರು. ಅಗಸ್ಟ್ ಪಂದ್ರಾ ಹಿಂದಿನ ದಿನದ ರಾತ್ರಿಯಲ್ಲಿ ಆದ ರಿಕಾರ್ಡಿಂಗ್ ಅನ್ನು ಪ್ಲೇ ಮಾಡಿದಾಗ, ಅದರಲ್ಲಿ ಎಲ್ಲರೂ ಮಲಗಿದ ನಂತರ ಒಂಬತ್ತು ಗಂಟೆ ಮೂವತ್ತು ನಿಮಿಷಗಳಾದಾಗ ಒಬ್ಬ ಹುಡುಗನ ಆಕಾರ ಬಂದು ಧ್ವಜ ಇಳಿಸಿ, ಮತ್ತೆ ಏರಿಸಿದ್ದ ಕಂಡಿತು. ಮೂಡಿದ ಚಿತ್ರಗಳನ್ನು ಮತ್ತಷ್ಟು ದೊಡ್ಡದು ಮಾಡಿ ನೋಡಿದಾಗ, ಆ ಹುಡುಗನ ನಡಿಗೆಯನ್ನು ಗಮನಿಸಿ, ಆ ಹುಡುಗ ಚಾರ್ಲಸ್ ಎಂದು ಉಪದೇಶಿ ಆರೋಗ್ಯಪ್ಪ ಗುರುತಿಸಿದ. ಆಗ ಆರೋಗ್ಯಪ್ಪನಿಗೆ, ಅಡುಗೆ ಆಳು ಸಂಪನ್ನಪ್ಪ, ಸಿಸ್ಟರ್ ನಿರ್ಮಲಮ್ಮ ಅವರಿಗೆ ನಿರಾಳವಾದಂತಾಯಿತು. ಆದರೂ ಸಿಸ್ಟರ್ ನಿರ್ಮಲಮ್ಮ ಅವರಿಗೆ, ಅವರ ಕಣ್ಣುಗಳನ್ನು ನಂಬಲಾಗಲಿಲ್ಲ.

ಅಷ್ಟರಲ್ಲಿ ಸಂಜೆ ನಾಲ್ಕು ಗಂಟೆಯಾಗಿತ್ತು. ಸಿಸ್ಟರ್ ನಿರ್ಮಲಮ್ಮ ಅವರು, ಸಿಸಿ ಟಿವಿ ರಿಕಾರ್ಡ ಹಿಡಿದುಕೊಂಡು ಸ್ಟೇಷನ್ ಗೆ ಓಡಿ ಬಂದರು. ನನಗೆ, ಹೀಗೆ ಹೀಗೆ ಎಂದು ವಿವರಿಸಿದರು. ಚಾರ್ಲಸ್ ನ ಮುಖ ನನ್ನೆದುರಿಗೆ ಮೂಡಿತು. ತಪ್ಪಿಲ್ಲದ ಆ ಅನಾಥ ಹುಡುಗನಿಗೆ ಹೊಡೆದು ಅವನನ್ನು ಅನಾಥನೆಂದು ನೆನಪಿಸಿ ಅಪಮಾನಿಸಿದ್ದೆ.

ಮತ್ತಾಯನ ಶುಭ ಸಂದೇಶದಲ್ಲಿ, ಶಿಷ್ಯನಾದ ಪೇತ್ರನು ಪ್ರಭು ಯೇಸುಸ್ವಾಮಿ ಅವರಲ್ಲಿ, `ಸ್ವಾಮೀ ನನಗೆ ವಿರುದ್ಧ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ? ಎಂದು ಕೇಳಿದಾಗ, ಏಳು ಸಲವಲ್ಲ, ಏಳೆಪ್ಪತ್ತೇಳು ಸಲ ಕ್ಷಮಿಸಬೇಕು’ ಎಂದು ಒತ್ತಿ ಹೇಳಿದ್ದರ ಬಗ್ಗೆ ಪ್ರಸಂಗ ನೀಡುವ ನನ್ನಂಥವರ ನಡೆ ಹೇಗಿರಬೇಕು?

ಇನ್ಸಪೆಕ್ಟರ್ ಬಸವರಾಜ ಶೀಲವಂತರು ಬಂದಾಗ ಸಂಜೆ ಆರು ಗಂಟೆ. ಮಂತ್ರಿಗಳ ಕಾರ್ಯಕ್ರಮ ಮುಗಿದ ಮೇಲೆ, ತಮ್ಮ ಠಾಣಾ ಗಡಿಯ ವ್ಯಾಪ್ತಿಯವರೆಗೆ ಅವರ ಜೊತೆಗಿದ್ದು ಕಳುಹಿಸಿದ್ದರು. ಹಾಗೆಯೇ ಮನೆಯತ್ತ ಹೋಗಿ ಸ್ವಲ್ಪ ಸಮಯ ಮಲಗಿ ದಣಿವಾರಿಸಿಕೊಂಡು ಬಂದಿದ್ದರು. ಬಂದವರೇ ನನ್ನನ್ನು ಕಂಡು, ನಾನು ಬಾಯಿ ಬಿಡುವ ಮೊದಲೇ, “ಫಾದರ್ ನಮ್ಮ ಪಿಸಿಗಳಿಗೆ ಕೆಲವೊಮ್ಮೆ ಏನೂ ಗೊತ್ತಾಗುವುದಿಲ್ಲ. ಎಡವಟ್ಟು ಮಾಡುತ್ತಾರೆ. ಕ್ಷಮಿಸಿ. ಆ ತಪ್ಪು ನಡೆದದ್ದಾರೂ ಹೇಗೆ?’’ಎಂದು ಕೇಳಿದರು.

“ಇನ್ಸಪೆಕ್ಟರ್ ರೇ, ನನಗೆ ಒಂದೂ ಗೊತ್ತಿಲ್ಲ. ರಾತ್ರಿ ನಾವು ವ್ಯವಸ್ಥೆ ಮಾಡಿದಾಗ ಎಲ್ಲವೂ ಸರಿಯಾಗಿತ್ತು. ಬೆಳಿಗ್ಗೆ ಹೀಗಾಯಿತು. ತಪ್ಪು ಗೊತ್ತಾದ ತಕ್ಷಣ ಸರಿಪಡಿಸಿ ಕೊಂಡೆವು. ಅಷ್ಟರಲ್ಲಿ ಆ ಫಟಫಟಿ ಪುಢಾರಿ, ನಿಮ್ಮ ಕಾನ್ಸಟೇಬಲ್ ನನ್ನನ್ನು ಇಲ್ಲಿಗೆ ಕರೆದುಕೊಂಡು ಬರುವಂತೆ ಮಾಡಿದರು. ಮತ್ತೆ, ಈಗ ಕಾನ್ವೆಂಟಿನ ಸಿಸ್ಟರ್ ನಿರ್ಮಲಮ್ಮ ಬಂದಿದ್ದರು. ಸಿಸಿ ಟಿವಿಯಲ್ಲಿ ನಮ್ಮ ಬೋರ್ಡಿಂಗ್ ಹುಡುಗ ಈ ಕೆಲಸ ಮಾಡಿದಂತೆ ಕಾಣಿಸುತ್ತದೆ’’ ಎಂದು ನಾನು ಉತ್ತರಿಸಿದೆ.

“ಹಂಗಾರ.. ನೀವೊಂದ ಕಂಪ್ಲೆಂಟ್ ಬರದ ಕೊಡ್ರಿ. ಹೆಂಗೂ ಸಿಸಿ ಟಿವಿ ರಿಕಾರ್ಡಿಂಗ್ ಅದ. ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗ್ತದೆ. ಹುಡುಗನ್ ಹಿಡಿದ ಸದ್ಯಕ್ಕ ರಿಮಾಂಡ್ ಹೋಮಿಗೆ ಕಳಸೂಣ’’ ಎಂದರು.

“ಬೇಡ ಇನ್ಸಪೆಕ್ಟರ್, ಪಾಪ ಮಗು. ಏನೋ ಅರಿಯದೇ ತಪ್ಪು ಮಾಡಿರಬೇಕು. ನಮ್ಮ ಬೋರ್ಡಿಂಗ್ ಹುಡುಗ, ನಾವ ಬುದ್ಧಿ ಹೇಳ್ತೀವಿ’’ ಅಂದೆ.

ಸರಿ ನಿಮ್ಮಿಷ್ಟ’’ ಎಂದ ಇನ್ಸಪೆಕ್ಟರ್,ಇನ್ನು, ನೀವಿನ್ನು ಹೋಗಬಹುದು’’ ಎಂದು ಕಳುಹಿಸಿದರು.

ಸಿಸ್ಟರ್ ಸ್ವಲ್ಪ ತಿಳುವಳಿಕೆ ಹೇಳಿದ್ದರೋ ಏನೋ? ನಾನು ಗುರುಮನೆಗೆ ತಲುಪುವಷ್ಟರಲ್ಲಿ, ಚಾರ್ಲಸ್ ನನ್ನ ಕೊಠಡಿಯ ಬಾಗಿಲಿಗೆ ಬಂದು ನಿಂತಿದ್ದ.

ನನ್ನನ್ನು ನೋಡಿದೊಡನೇ, ಓಡಿ ಬಂದು ಕಾಲು ಹಿಡಿದುಕೊಂಡು, “ಸ್ವಾಮ್ಯಾರ, ನಂದ ತಪ್ಪಾಯಿತ್ರಿ. ನೀವು ಅವತ್ತ ನನ್ನ ತಪ್ಪ ಇಲ್ಲದಿದ್ದರೂ ಹೊಡದದ್ದ ಸಿಟ್ಟಿಲೇ, ನಿಮಗ ಅವಮಾನ ಆಗ್ಲಿ ಅಂತ ಹಿಂಗ ಹುಡಗಾಟಿಕಿ ಮಾಡಕ ಹೋದೆ. ಅದ ಹಿಂಗಾಯಿತ್ರಿ’’ ಎನ್ನತ್ತಾ ಕಣ್ಣಲ್ಲಿ ನೀರು ತಂದುಕೊಂಡ.


ಆಗಸ್ಟ್ ಹದಿನೈದರಂದು ಈ ರಾಷ್ಟ್ರಧ್ವಜ ತಲೆ ಕೆಳಗಾಗಿ ಹಾರಿದ ಘಟನೆ ನಡೆದು ತಿಂಗಳಾಗುಷ್ಟರಲ್ಲಿ, ವಂದನೀಯ ಮೇತ್ರಾಣಿಗಳು ನನ್ನನ್ನು ಅಲ್ಲಿಂದ ಎತ್ತಂಗಡಿ ಮಾಡಿ ಭಾಲ್ಕಿಗೆ ಕಳುಹಿಸಿದರು. ಆಗ ಸಿಸ್ಟರ್ ನಿರ್ಮಲಮ್ಮ ಅವರನ್ನು ಸಂಪರ್ಕಿಸಿದ ನಾನು, ಉಪದೇಶಿ ಆರೋಗ್ಯಪ್ಪನಿಗೆ ಬುದ್ಧಿ ಹೇಳುವಂತೆ ಹೇಳಿದೆ. ಓದಿನಲ್ಲಿ ಚುರುಕಾಗಿರುವ ಚಾರ್ಲಸ್‌ನನ್ನು ಸರಿಯಾಗಿ ನೋಡಿಕೊಳ್ಳಲು ಕೋರಿಕೊಂಡೆ. ಅವನ ವಿದ್ಯಾಭ್ಯಾಸದ ಖರ್ಚಿನ ಜವಾಬ್ದಾರಿ ನಾನು ಹೊರುತ್ತೇನೆ ಎಂದು ವಾಗ್ದಾನ ಮಾಡಿ, ಅದರಂತೆ ನಡೆದುಕೊಂಡೆ. ಆದರೆ, ನನ್ನ ಸಹಾಯದ ಬಗ್ಗೆ ಅವನಿಗೆ, ಅವನು ಅವನ ಕಾಲಮೇಲೆ ನಿಲ್ಲುವವರೆಗೆ ತಿಳಿಸಕೂಡದೆಂದು ಹೇಳಿದ್ದೆ. ಅಂತೆಯೇ, ಇನ್ನು ಮುಂದೆ ಏನೇ ವಿಷಯ ಗಮನಕ್ಕೆ ಬಂದರೂ ಪ್ರಮಾಣಿಸಿ ನೋಡಬೇಕು ಎಂದುಕೊಂಡೆ. ಜೊತೆಗೆ, ಓದಿನಲ್ಲಿ ಮುಂದಿರುವ ಮತ್ತೊಂದಿಷ್ಟು ಬಡವರು ಮತ್ತು ಅನಾಥ ಹುಡುಗರ ಶಿಕ್ಷಣ ವೆಚ್ಚ ಭರಿಸಲು ನಿರ್ಧರಿಸಿದೆ.

ಘಟನೆ ನಡೆದ ದಿನ, ನನ್ನ ಡೈರಿಯಲ್ಲಿ ಪದ್ಯವೊಂದನ್ನು ಬರೆಯಲು ಮುಂದಾಗಿದ್ದೆ.

ನಾನೊಬ್ಬನೇ ಅಲ್ಲ

ನಾನೊಬ್ಬನೇ ಅಲ್ಲ, ಹೌದು ನಾನೊಬ್ಬನೇ ಅಲ್ಲ.

ನನ್ನಂಥವರು ಎಷ್ಟೊಂದು ಜನ ಇದ್ದಾರೆ.

ಅಧಿಕಾರದ ಅಟ್ಟಹಾಸದ ಎದುರು ನಿಂತಿದ್ದಾರೆ,

ಬಾಯಿಗೆ ಕರಿಪಟ್ಟಿ ಕಟ್ಟಿಕೊಂಡು,

ಕೈಯಲ್ಲಿ ಉರಿವ ಮೇಣದ ಬತ್ತಿಯನ್ನು ಉರಿಸುತ್ತಾ.

ಯಾಕೋ ಪದ್ಯದ ಬರವಣಿಗೆ ಮತ್ತೆ ಮುಂದೆ ಸಾಗಿರಲಿಲ್ಲ.


ಕಳೆದ ೨೦೨೨ರ ಜನೆವರಿ ೨೬ರಂದು ಗಣರಾಜ್ಯೋತ್ಸವದಂದು ಜಾರಿಗೆ ಬಂದ ರಾಷ್ಟ್ರೀಯ ಧ್ವಜ ಸಂಹಿತೆ ೨೦೨೨ರ ಪ್ರಕಾರ, ಹಲವಾರು ತಿದ್ದುಪಡಿಗಳನ್ನು ಮಾಡಿ ಧ್ವಜ ಬಳಕೆಯನ್ನು ಸರಳಗೊಳಿಸಲಾಗಿದೆ. ಧ್ವಜ ಯಾವುದೇ ಗಾತ್ರದಲ್ಲಿದ್ದರೂ, ಆಯತಾಕರದ ಅದರ ಉದ್ದ ಮತ್ತು ಎತ್ತರದ ಅನುಪಾತವನ್ನು ೩:೨ಕ್ಕೆ ನಿಗದಿಪಡಿಸಲಾಗಿದೆ. ಈ ನೂತನ ತಿದ್ದುಪಡಿಯ ಪ್ರಕಾರ, ಹಿಂದಿನಂತೆ ರಾಷ್ಟ್ರಧ್ವಜವನ್ನು ದಿನವೂ ಸಂಜೆ ಕೆಳಗಿಳಿಸಿ ಮತ್ತೆ ಬೆಳಿಗ್ಗೆ ಬಂದು ಹಾರಿಸಬೇಕಿಲ್ಲ. ಆದರೆ, ಹಾನಿಗೊಳಗಾದ ಧ್ವಜವನ್ನು ಎಂದಿಗೂ ಪ್ರದರ್ಶಿಸಬಾರದು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯಕ್ತ, ಕಳೆದ ವರ್ಷ ೨೦೨೨ರ ಸಾಲಿನ ಸ್ವಾತಂತ್ರ್ಯ ದಿನಾಚರಣೆಯ ಸಂಧರ್ಭವನ್ನು ಜನ ಹೆಮ್ಮೆಯಿಂದ ಆಚರಿಸುವಂತೆ ಮಾಡಲು, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷವು, ಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಲು, ಮನೆಮನೆಗೂ ತ್ರಿವರ್ಣ ಧ್ವಜ (ಹರ್ ಘರ್ ತಿರಂಗಾ ಝಂಡಾ) ಅಭಿಯಾನ ಆರಂಭಿಸಿತ್ತು. ಈ ಅಭಿಯಾನದಲ್ಲಿ ೩೦ ಕೋಟಿಗೂ ಅಧಿಕ ರಾಷ್ಟ್ರಧ್ವಜಗಳು ಬಿಕರಿಯಾಗಿದ್ದವು. ಸರ್ಕಾರಿ ಸಂಸ್ಥೆಗಳು, ಶಾಸಕರು ಮೊದಲಾದವರೂ, ಈ ಅಭಿಯಾನಕ್ಕೆ ತಮ್ಮ ಕೈ ಜೋಡಿಸಿದ್ದರು. ಕಾರ್ಖಾನೆಗಳವರು, ಅಂಗಡಿಗಳವರು, ವಸತಿಗೃಹಗಳು, ಹೊಟೇಲ್ ಗಳು ಮತ್ತು ಆಯಾ ಮನೆಗಳವರು ತಮ್ಮ ತಮ್ಮ ಮನೆಗಳ ಮುಂದೆ ಎತ್ತರದಲ್ಲಿ ತಿರಂಗಾ ಧ್ವಜವನ್ನು ಹಾರಿಸಿ, ಆಗಸ್ಟ್ ೧೩ ರಿಂದ ೧೫ರ ವರೆಗೆ ನಡೆದ ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ಅಭಿಯಾನದಲ್ಲಿ ಪಾಲ್ಗೊಂಡು ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಪ್ರಮಾಣಪತ್ರವನ್ನೂ ನೀಡಲಾಗಿತ್ತು. ಇದಕ್ಕಾಗಿ ಪ್ರಧಾನ ಮಂತ್ರಿ ಜೂನ್ ೨೨ ರಂದು, ಈ ಅಭಿಯಾನವನ್ನು ಯಶಸ್ವಿಯಾಗಿ ಮಾಡುವಂತೆ ಭಾರತದ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದರು.

ಸ್ವಾತಂತ್ರ್ಯ ಪಡೆದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಊರೂರುಗಳಲ್ಲೆಲ್ಲಾ ಧ್ವಜಗಳ ವಿತರಣೆ, ಪ್ರದರ್ಶನ, ಹಾರಾಟ ನಡೆದವು. ಎಲ್ಲರ ಮನೆಗಳ ಮೇಲೂ ಕಂಬಗಳ ಮೇಲೆ ರಾಷ್ಟ್ರಧ್ವಜ ಹಾರಾಡಿತು. ಯಾರ ಧ್ವಜವೂ ಮೇಲಲ್ಲ ಕೇಳಲ್ಲ ಎಂಬಂತೆ ಎಲ್ಲ ಧ್ವಜಗಳೂ ಹಾರಾಡಿದ್ದವು. ಮೊದಲಾದರೆ ಸಾಂಪ್ರದಾಯಿಕವಾಗಿ ಕೈಯಿಂದ ನೇಯ್ದ ಖಾದಿ ಬಟ್ಟೆಯನ್ನೇ ಧ್ವಜಕ್ಕೆ ಬಳಸಲಾಗುತ್ತಿತ್ತು. ಧ್ವಜ ಸಂಹಿತೆಯ ತಿದ್ದುಪಡಿಯ ಹಿನ್ನೆಲೆಯಲ್ಲಿ ಹತ್ತಿ ಬಟ್ಟೆ ಅಲ್ಲದೇ ಯಂತ್ರದಿಂದ ಸಿದ್ಧಗೊಳ್ಳುವ ಪಾಲಿಯಸ್ಟರ್, ಉಣ್ಣೆ, ರೇಷ್ಮೆ ಬಟ್ಟೆಗಳಲ್ಲಿ ರಾಷ್ಟ್ರಧ್ವಜ ರಾರಾಜಿಸತೊಡಗಿತ್ತು.

ಅಂದು, ಚಿಕ್ಕಮಗಳೂರಿನ ಇಂದಿರಾಗಾಂಧಿ ರಸ್ತೆ, ಮಹಾತ್ಮಗಾಂಧಿ ರಸ್ತೆಗಳಲ್ಲಿ ಶಾಲಾ ಮಕ್ಕಳ ಪ್ರಭಾತಫೇರಿಗಳಲ್ಲದೇ ಮೋಟಾರ್ ಸೈಕಲ್ ರ‍್ಯಾಲಿಗಳು, ಬೈಸಿಕಲ್ ರ‍್ಯಾಲಿಗಳೂ ನಡೆದವು. ಆದರೆ ಕೆಲವು ನಿಜವಾದ ದೇಶಭಕ್ತರು, ಬಡವರು ತಮ್ಮಗಳ ಮನೆಗಳ ಮೇಲೆ ಭಯದಲ್ಲಿ ಧ್ವಜ ಹಾರಿಸಿದ್ದರು. ದೇಶದ ಸಂವಿಧಾನದ ಆಶಯಗಳನ್ನು ನಿಜ ಅರ್ಥದಲ್ಲಿ ಪಾಲಿಸದೇ, ಅದಕ್ಕೆ ಅಪಚಾರ ಮಾಡುತ್ತಿರುವ ಅಧಿಕಾರಶಾಹಿ ವಿರುದ್ಧದ ಕ್ರಮವೆಂದು, ತೋರಿಕೆಯ ದೇಶಪ್ರೇಮದ ಪ್ರದರ್ಶನಕ್ಕೆ ಒಪ್ಪದ ಕೆಲವು ನಿಜವಾದ ದೇಶ ಭಕ್ತರು ತಮ್ಮ ಮನೆಗಳ ಮೇಲೆ ಧ್ವಜಗಳನ್ನು ಹಾರಿಸುವ ಗೋಜಿಗೆ ಹೋಗಲಿಲ್ಲ. ಕೆಲವು ಕಿಡಗೇಡಿಗಳು ಸರಿರಾತ್ರ‍್ರಿ ಬಂದು, ಅಂಥ ಮನೆಗಳ ಮನೆ ಮುಂದೆ ನಿಂತು ದೇಶದ್ರೋಹಿಗಳ ಮನೆ ಎಂದು ಕೂಗಿ ಹೋದ ಘಟನೆಗಳೂ ನಡೆದವು.

ಆದರೆ, ಸ್ವಾತಂತ್ರ್ಯೋತ್ಸವ ಮುಗಿದು ತಿಂಗಳುಗಳು ಕಳೆದರೂ ಮನೆಗಳ ಮೇಲೆ ಹಾರುತ್ತಿದ್ದ ಧ್ವಜವನ್ನು ಇಳಿಸಲು ಯಾರೂ ಮುಂದಾಗಲಿಲ್ಲ. ಮಳೆ ಗಾಳಿಗೆ ಗಾಳಿಪಟವಾದ ಅದು, ಹರಿದದ್ದೂ ಮನೆಗಳವರ ಗಮನಕ್ಕೆ ಬರಲಿಲ್ಲ. ಅಂಗಡಿ ಮುಗ್ಗಟ್ಟುಗಳ ಮೇಲೆ, ಹೊಟೇಲುಗಳ ಕಟ್ಟಡಗಳ ಮೇಲೆ ಹಾರುತ್ತಿದ್ದ ಧ್ವಜಗಳ ಗತಿಯೂ ಅದೇ ಆಗಿತ್ತು. ಕೊನೆಗೆ ಯಾವ ಶಿಸ್ತಿನ ಕ್ರಮವಿಲ್ಲದಿದ್ದರೂ ಜನ, ಅಂಗಡಿಗಳವರು, ಉಳಿದವರು ನಿಧಾನವಾಗಿ ಧ್ವಜಗಳನ್ನು ತೆರವುಗೊಳಿಸಿದರು. ಅಳಿದುಳಿದಿದ್ದ ಧ್ವಜದ ಮಾನ ಉಳಿಯಿತು.

ಅಂದು ನನ್ನನ್ನು ಬೆಳಿಗ್ಗೆ ಪೊಲೀಸ್ ಸ್ಟೇಷನ್ ಗೆ ಹೋದವ ಸಂಜೆ ೪ರವರೆಗೆ ಲ್ಲಿಯೇ ಕೊಳೆಯುದಕ್ಕೆ ಕಾರಣನಾಗಿದ್ದ, ನಾನು ಉಡಾಳ ಎಂಬ ನಂಬಿದ್ದ ಅನಾಥ ಹುಡುಗ ಚಾರ್ಲಸ್ ತನ್ನ ಸ್ವಂತ ಪ್ರತಿಭೆಯಿಂದ ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಿದ್ದಾನೆ. ಸಿಸ್ಟರ್ ನಿರ್ಮಲಮ್ಮರ ಅನುಕಂಪ, ಬೆಂಬಲ ಮತ್ತು ಅನಾಮಿಕನ ಆರ್ಥಿಕ ಸಹಾಯದಿಂದ ಓದಿನಲ್ಲಿ ತೊಡಗಿಸಿಕೊಂಡು, ಮನಸ್ಸುಗೊಟ್ಟು ಓದಿ ಬಿ.ಇ ಮುಗಿಸಿ ಎಂಜಿನಿಯರ್ ಚಾರ್ಲಸ್ ಆಗಿದ್ದಾನೆ. ಈಗ ಮಂಗಳೂರಿನ ಆಯಿಲ್ ರಿಫೈನರಿಯಲ್ಲಿ ಇಂದು ಒಳ್ಳೆಯ ಸ್ಥಾನದ ಅಧಿಕಾರಿಯಾಗಿ ನೇಮಕಗೊಂಡಿದ್ದಾನೆ.

ಇಂದು ಅವನು ಬಿಡುವು ಮಾಡಿಕೊಂಡು, ಹದಿನೈದು ವರ್ಷಗಳ ನಂತರ ಅವನ ಕಲಿಕೆಯ ಜವಾಬ್ದಾರಿ ಹೊತ್ತಿದ್ದ ನನ್ನನ್ನು ನೋಡಲು ಚಿಕ್ಕಮಗಳೂರಿಗೆ ಬರುತ್ತಿದ್ದಾನೆ. ಕೆಲವು ಅನಿವಾರ್ಯ ಕಾರಣದಿಂದ ನಾನು ಮೋಬೈಲ್ ಬಳಕೆ ನಿಲ್ಲಿಸಿ ವರ್ಷಗಳೇ ಕಳೆದಿವೆ. ಏನೇ ಇದ್ದರೂ ಅದೆಲ್ಲಾ ಪತ್ರವ್ಯವಹಾರ. ನನ್ನ ಕೂದಲೂ ಸ್ವಲ್ಪ ನೆರೆತಿವೆ. ನಾನು ಅವನನ್ನು ಕಂಡಾಗ ಆತ ಒಬ್ಬ ಸಣ್ಣ ಹುಡುಗ. ಇಂದು ಒಬ್ಬ ಸುಂದರ ಯುವಕನಾಗಿ ಬೆಳೆದು ನಿಂತಿರಬೇಕು.

ನಾನು ಅವನನ್ನು ಗುರುತಿಸುವೆನೋ ಇಲ್ಲವೋ? ಅವನು, ನನ್ನನ್ನು ಗುರುತು ಹಿಡಿಯುವನೋ ಗೊತ್ತಿಲ್ಲ? ನನ್ನ ಇತ್ತೀಚೆಗಿನ ಪೋಟೊ ಅವನ ಬಳಿ ಇಲ್ಲ. ಅವನ ಫೋಟೊವು ನನ್ನ ಬಳಿ ಇಲ್ಲ. ಸಿಸ್ಟರ್ ನಿರ್ಮಲಮ್ಮ ನಾನಿರುವ ಜ್ಯೋತಿನಗರ ಮೇತ್ರಾಣಿಗಳ ನಿವಾಸದ ವಿಳಾಸವಷ್ಟೇ ಅವನಲ್ಲಿದೆ. ಅದೇನೋ ಒಂದು ಬಗೆಯ ಪುಳಕ, ಅಳಕು, ಕಳವಳ, ತಳಮಳ, ಸಂತೋಷ, ನೆಮ್ಮದಿ.. ಎಲ್ಲವೂ ಆಗುತ್ತಿದೆ.

-ಎಫ್.ಎಂ.ನಂದಗಾವ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಡಿ ಎಂ ನದಾಫ್ ಅಫಜಲಪುರ

ಅನುಭವವನ್ನೇ ಅತ್ಯುತ್ತಮ ಕತೆಯಾಗಿಸಿದಂತೆ ಆಗಸ್ಟ್ ಹದಿನೈದು ಓದಿಸಿಕೊಂಡು ಹೋಯಿತು. ಬೀದರಿನ ಕೆಮ್ಮಣ್ಣು ವಾಸನೆಯ ಅನುಭವಗಳನ್ನು ಕ ತೆಯಲ್ಲಿ ತುಂಬಿ ಕ್ರೈಸ್ತ ಪಾದ್ರಿತನದ ತುಂಬ ಸೊಗಸಾದ ನಿರೂಪಣೆಯಿಂದ ಬೇಸರವಿಲ್ಲದೆ ಓದುವಂತಾಯಿತು.
ಡಿ ಎಂ ನದಾಫ್ ಅಫಜಲಪುರ.

1
0
Would love your thoughts, please comment.x
()
x