ತೇರ ಹಳ್ಳಿಯ ಸಿನಿಮಾ ತೇರು: ಎಂ ನಾಗರಾಜ ಶೆಟ್ಟಿ

ʼಸಿನ್ಮಾ ಚೆನ್ನಾಗಿತ್ತು, ದರ್ಶನ್ ಸಿನ್ಮಾನೂ ತೋರ್ಸ್‌ಬೇಕಿತ್ತು” ಆರು ವರ್ಷದ ಪೋರ ಹೇಳಿದ ಮಾತು. ಈ ಮಾತಲ್ಲಿ ಸತ್ಯವಿದೆ. ಆರೇನು, ಅರವತ್ತರ ವಯಸ್ಸಿನವರೂ ಒಂದೇ ಬಗೆಯ, ರಂಜನೆಯ ಸಿನಿಮಾಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದಕ್ಕಿಂತ ಭಿನ್ನವಾದ, ಸಾಮಾಜಿಕ ಅರಿವು ಮೂಡಿಸುವ, ಬುದ್ದಿಯನ್ನು ಕೆಣಕುವ, ಕಟು ವಾಸ್ತವವನ್ನು ತಿಳಿಸುವ ಚಿತ್ರಗಳ ಬಗ್ಗೆ ಅರಿವು ಮೂಡಿಸಬೇಕು. ನಮ್ಮ ಪಠ್ಯಕ್ರಮದಲ್ಲಿ ಅದಕ್ಕೆ ಅವಕಾಶವಿಲ್ಲ.

ಸಿನಿಮಾ ಹಬ್ಬಗಳು, ಸಿನಿಮೋತ್ಸವಗಳು ಸ್ವಲ್ಪ ಮಟ್ಟಿಗೆ ಈ ಕೊರತೆಯನ್ನು ನೀಗಿಸುತ್ತವೆ. ಅವು ಸಿನಿಮಾ ನೋಡುವ, ಅರ್ಥ ಮಾಡಿಕೊಳ್ಳುವ, ವಿಶ್ಲೇಷಿಸುವ ಬಗೆಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತವೆ. ಕಿರಿಯರಿಂದ ಹಿರಿಯರ ವರೆಗೆ ವಿದ್ಯಾರ್ಥಿಗಳಂತೆ ಕುಳಿತು ಸಿನಿಮಾಗಳನ್ನು ನೋಡುವ ಅನುಭವದಲ್ಲಿ ಬಹಳಷ್ಟು ಖುಷಿಯೂ ಇರುತ್ತದೆ.

ಈ ಖುಷಿ, “ಆದಿಮ” ದಂತಹ ಜಾಗದಲ್ಲಿ ನನ್ನಂತವರಿಗೆ ಇಮ್ಮಡಿಯಾಗುತ್ತದೆ. ತೇರ ಹಳ್ಳಿ ಬೆಟ್ಟದ ಮೇಲಿರುವ ಆದಿಮದಲ್ಲಿರುವ ಕಟ್ಟಡಗಳು ಕೆಲವೇ ಕೆಲವು. ಆದರೆ ಅವುಗಳಿಗೆ ಕಲಾತ್ಮಕತೆಯ ಸ್ಪರ್ಶವಿದೆ. ಸುತ್ತ ಕಲ್ಲು ಬಂಡೆಗಳನ್ನು ಹೊತ್ತ ಬೆಟ್ಟಗಳು. ಬಿಸಿಲಿನ ಝಳಕ್ಕೆ ಮುಕ್ಕಾಗದ ಹಸಿರು. ಮಾಗಿಯ ಚುಮು ಚುಮು ಚಳಿ. ಇಂತಹ ಸುಂದರ ಪ್ರಕೃತಿಯಲ್ಲಿ ಬೆರೆತ ನಲ್ವತ್ತು ಬೆಚ್ಚನೆಯ ಮನಸ್ಸುಗಳು, ಜಾಗತಿಕ ಚಿತ್ರಗಳ ದರ್ಶನಕ್ಕಾಗಿ ತೇರಹಳ್ಳಿಯ ಆದಿಮದಲ್ಲಿ ಸೇರಿದ್ದವು.

ಈ ಬಾರಿ ಫೆಬ್ರವರಿ 4ಮತ್ತು 5ರಂದು ʼಆದಿಮʼದಲ್ಲಿ ಸಿನೆಹಬ್ಬ ನಡೆಯುತ್ತದೆ ಎಂದು ತಿಳಿದಾಗಲೇ ಉತ್ಸಾಹಿತನಾಗಿದ್ದೆ. ಐವಾನ್‌ಡಿʼಸೋಜ, ವಿ ಎಲ್‌ನರಸಿಂಹಮೂರ್ತಿ ಸ್ಥಳ ಪರೀಕ್ಷೆ, ಮಾತುಕತೆಗಳನ್ನು ನಡೆಸಿ ದಿನ ನಿಗದಿ ಮಾಡಿದ್ದರು. ʼಆದಿಮʼದ ಮಧ್ಯಭಾಗದಲ್ಲಿರುವ ಕುಟೀರದಲ್ಲಿ ನಲ್ವತ್ತು ಜನರಿಗಿಂತ ಹೆಚ್ಚು ಸೇರಲು ಸಾಧ್ಯವಿರಲಿಲ್ಲ. ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳ ಒಳಗೊಳ್ಳುವಿಕೆ ಆದ್ಯತೆಯಾಗಿತ್ತು.

ಸಿನೆಹಬ್ಬ ಬತ್ತದ ಉತ್ಸಾಹದ ಕೋಟಿಗಾನಹಳ್ಳಿ ರಾಮಯ್ಯನವರ ಹುರುಪನ್ನು ಹೆಚ್ಚಿಸಿತ್ತು. ಹಲವು ಕನಸುಗಳನ್ನು ಹೊತ್ತುಕೊಂಡೇ ತಿರುಗುವ ಅವರಿಗೆ ಸಿನಿಮಾವೂ ಒಂದು ಕನಸು. ಹಿಂದೊಮ್ಮೆ ʼಆದಿಮʼದಲ್ಲಿ ಋತ್ವಿಕ್‌ ಘಟಕ್‌ ಸಿನಿಮೋತ್ಸವವನ್ನು ಏರ್ಪಡಿಸಿದ ನೆನಪು ಅವರಲ್ಲಿ ಹಸಿರಾಗಿತ್ತು. ಅಂದಿನ ʼಘಟಕ್‌ʼ ಚಿತ್ರ ಪ್ರದರ್ಶನದಲ್ಲಿ ಭಾಗಿಗಳಾಗಿದ್ದ ಇಬ್ಬರು ವ್ಯಕ್ತಿಗಳು ನಮ್ಮೊಡನಿದ್ದು, ಅವರಿಗೆ ಈ ಚಿತ್ರಗಳು ʼಸಿನಿಮಾ ನೋಡಲುʼ ಕಲಿಸಿದ್ದನ್ನು ವೈಯಕ್ತಿಕವಾಗಿ ಹೇಳಿಕೊಂಡರು.

ನಾರಾಯಣ ಸ್ವಾಮಿಯವರು ತಂಬೂರಿಯನ್ನು ಮೀಡುತ್ತಾ, ಭಾವಪೂರ್ಣವಾಗಿ ಹಾಡಿ, ಸಿನೆಹಬ್ಬವನ್ನು ಶ್ರುತಿಗೊಳಿಸಿದರು.

ಪ್ರಾಸ್ತಾವಿಕ ಮಾತುಗಳಲ್ಲಿ ರಾಮಯ್ಯನವರು ಪ್ರಭುತ್ವ ಸಾರ್ವಜನಿಕರ ದನಿ ಅಡಗಿಸುತ್ತದೆ, ಫ್ಯಾಸಿಸಂ, ಕಲೋನಿಯಲಿಸಂ, ಕಮ್ಯುನಿಸಂ ಪ್ರಭುತ್ವಗಳ ಹಿಂಸೆಗಳಿಗೆ, ಸಿನಿಮಾಗಳು ಪ್ರತಿರೋಧವನ್ನು ತೋರಿ, ನೋಡುಗರಲ್ಲಿ ಎಚ್ಚರವನ್ನೂ, ಅರಿವನ್ನೂ ಮೂಡಿಸಿವೆ. ಇಟಾಲಿಯನ್‌ ಮತ್ತಿತರ ಪಶ್ಚಿಮದ ಚಿತ್ರಗಳ ಉದಾಹರಣೆ ಮೂಲಕ ನಿರ್ಮಾಪಕರ, ಪ್ರೇಕ್ಷಕರ ಸಂವೇದನೆಗಳು ಬದಲಾಗಲು ಕಾರಣವಾಗಿದ್ದನ್ನು ಅವರು ವಿವರಿಸಿದರು.

ಸಿನಿಮೋತ್ಸವಗಳಲ್ಲಿ ಚಿತ್ರಗಳನ್ನು ನೋಡುವ ಮೂಲಕ ಸಿನಿಮಾಗಳನ್ನು ನೋಡಲು ಕಲಿತೆ ಎಂದ ರಾಮಯ್ಯನವರು ಗೋವಾ ಸಿನಿಮೋತ್ಸವದ ನೆನಪನ್ನು ಹಂಚಿಕೊಂಡರು. ಗೋವಾ ಸಿನಿಮೋತ್ಸವದಲ್ಲಿ ಭಾಗಿಯಾಗಲು ಪ್ರತಿನಿಧಿ ಪತ್ರದ ಅವಶ್ಯಕತೆಯಿತ್ತು. ಲಂಕೇಶರನ್ನು ಭೇಟಿಯಾಗಿ ಪತ್ರ ಪಡೆದರು. ಯಲ್ಲೋ ಜರ್ನಲಿಸಂ ಕಾರಣ ನೀಡಿ ಅದಕ್ಕೆ ಮಾನ್ಯತೆ ದೊರಕಲಿಲ್ಲ. ಆದರೆ, ಗೋವಾ ಸಿನಿಮೋತ್ಸವದ ಪರಿಚಿತ ಸಂಘಟಕರು ಮುತುವರ್ಜಿ ವಹಿಸಿ, ಸಿನಿಮಾಗಳನ್ನು ನೋಡುವ ಅವಕಾಶ ಒದಗಿಸಿದರು. ರಾಮಯ್ಯನವರು ಕಳುಹಿಸಿದ ವರದಿ ʼಲಂಕೇಶ್‌ಪತ್ರಿಕೆʼಯಲ್ಲಿ ಪ್ರಕಟವೂ ಆಯಿತು. ಅಷ್ಟು ಹೊತ್ತಿಗೆ ರಾಮಯ್ಯನವರ ಕೈ ಖಾಲಿಯಾಗಿ ಊಟಕ್ಕೂ ತತ್ವಾರವಾಗಿತ್ತು. ಲಂಕೇಶರಿಗೆ ಫೋನ್‌ಮಾಡಿ ಹಣ ಕಳಿಸಿಲು ಕೋರಿದರಂತೆ. ʼವರದಿ ಮಾಡಿ, ಊಟಕ್ಕೆ ಹಣ ಕಳಿಸಲಾಗುವುದಿಲ್ಲʼ ಎಂದು ಜಾಣಜಾಣೆಯರ ಪತ್ರಿಕೆಯ ಲಂಕೇಶ್‌ ಹೇಳಿದ್ದನ್ನು ರಾಮಯ್ಯನವರು ನೆನಪಿಸಿಕೊಂಡರು.

2016 ರಲ್ಲಿ ʼಮನುಜಮತ ಸಿನಿಯಾನʼ ಎನ್ನುವ ವಾಟ್ಸಾಪ್‌ ಗುಂಪು ಪ್ರಾರಂಭವಾಗಿ, ದೇಶ, ವಿದೇಶಗಳ ಸಿನಿಮಾ ಕುರಿತ ಚರ್ಚೆಗಳು ನಡೆಯುತ್ತಿರುವಾಗ, ಸಿನೆಹಬ್ಬ ನಡೆಸುವ ಪ್ರಸ್ತಾವನೆ ಬಂತು. ವಿದ್ಯಾರ್ಥಿಗಳನ್ನು ಮತ್ತು ಯುವಜನರನ್ನು ಒಳಗೊಂಡು ದೇಶೀಯ, ಜಾಗತಿಕ ಚಿತ್ರಗಳನ್ನು ಅರ್ಥೈಸುವುದು, ತಂತ್ರಗಾರಿಕೆಯ ಪರಿಚಯ ಒದಗಿಸುವುದು, ಸಾಮಾಜಿಕ-ರಾಜಕೀಯ ಆಯಾಮಗಳನ್ನು ಪರಿಚಯ ಮಾಡುವುದು ಸಿನೆಹಬ್ಬದ ಉದ್ದೇಶಗಳಲ್ಲಿ ಸೇರಿತ್ತು. ಅದರಂತೆ ಮೊದಲ ಸಿನೆಹಬ್ಬ ಕುಪ್ಪಳ್ಳಿಯಲ್ಲಿ ಆಯೋಜಿತವಾಯಿತು. ಬಳಿಕ ನಿರಂತರವಾಗಿ ರಾಜ್ಯದ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಎರಡು ದಿನಗಳ ಸಿನೆಹಬ್ಬವನ್ನು ನಡೆಸುತ್ತಾ ಬರಲಾಗಿದೆ. ಈ ಸಿನಿಮಾ ಹಬ್ಬದಲ್ಲಿ ಪ್ರತಿ ಸಿನಿಮಾದ ಪ್ರದರ್ಶನದೊಂದಿಗೆ ಸಂವಾದಕ್ಕೆ ಅವಕಾಶವಿದ್ದು ಯುವ ಜನರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಪ್ರೋತ್ಸಾಹವನ್ನು ಕೊಡಲಾಗುತ್ತದೆ ಎನ್ನುವ ಮಾಹಿತಿಯನ್ನು ಕೆ ಫಣಿರಾಜ್‌ನೀಡಿದರು.

ಜಂಗಮ ಕನೆಕ್ಟಿವ್ಸ್‌ನ ಐವನ್‌ ಡಿʼಸೋಜಾ, ಸಿನೆಹಬ್ಬ ʼಆದಿಮʼ ದಲ್ಲಿ ನಡೆಸುವುದನ್ನು ನಿರ್ಣಯಿಸಿದ ನಂತರ ವಿ ಎಲ್‌ ನರಸಿಂಹಮೂರ್ತಿರವರೊಡನೆ ಆದಿಮದಲ್ಲಿ ಸುತ್ತಾಡಿದ್ದು, ಕೋಟಿಗಾನಹಳ್ಳಿ ರಾಮಯ್ಯ, ಎಚ್‌ ಎಮ್ ರಾಮಚಂದ್ರ, ಸಂದೀಪ್ ಮತ್ತಿತರರ ಸಹಕಾರವನ್ನು ನೆನೆದರು. ʼಪ್ರಭುತ್ವದ ಹಿಂಸೆ ಮತ್ತು ಪ್ರತಿರೋಧʼ ಈ ಬಾರಿಯ ಸಿನೆಹಬ್ಬದ ವಿಷಯವಾಗಿದ್ದು, ಐದು ಜಾಗತಿಕ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯೆಂಬ ಮಾಹಿತಿಯನ್ನು ಒದಗಿಸಿದರು.

ಎಚ್‌ ಎಮ್ ರಾಮಚಂದ್ರರವರು ʼಆದಿಮʼದಲ್ಲಿ ಸಿನೆಹಬ್ಬವನ್ನು ನಡೆಸುವ ಅವಕಾಶ ಒದಗಿದ್ದಕ್ಕೆ ಸಂತೋಷವನ್ನು ವ್ಯಕ್ತಪಡಿಸಿ, ಸಂಪೂರ್ಣ ಸಹಕಾರದ ಭರವಸೆ ನೀಡಿದರು.

ಸಿನಿಹಬ್ಬದ ಮೊದಲ ಚಿತ್ರ, ಜರ್ಮನಿಯ ʼದಿ ವೇವ್ಸ್ʼ. ಟೊಡ್‌ಸ್ಟ್ರಾಸೆರ್‌ ಎನ್ನುವ ಲೇಖಕನ ಅದೇ ಹೆಸರಿನ ಕಾದಂಬರಿಯನ್ನಾಧರಿಸಿ ಈ ಚಿತ್ರವನ್ನು ನಿರ್ಮಿಸಿಲಾಗಿದೆ. ಡೆನಿಸ್‌ ಗ್ಯಾನ್‌ಸೆಲ್‌ ಚಿತ್ರದ ನಿರ್ದೇಶಕ.

ರೈನರ್‌ ಒಬ್ಬ ಅಧ್ಯಾಪಕ. ಆತನಿಗೆ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಒಂದು ವಾರ Autocracy ಯ ಬಗ್ಗೆ ಪಾಠ ಮಾಡಲು ಹೇಳಲಾಗುತ್ತದೆ. ಅವನಿಗಿದು ಇಷ್ಟದ ವಿಷಯವಲ್ಲವಾದರೂ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅಟೋಕ್ರಸಿಯ ಅರಿವು ಮೂಡಿಸಲು ರೈನರ್‌ಪ್ರಾಯೋಗಿಕ ಪಾಠ ಮಾಡುವ ಪ್ರಯತ್ನ ಮಾಡುತ್ತಾನೆ. ಎಲ್ಲರೂ ಒಂದೇ ಬಣ್ಣ ಅಂದರೆ, ಬಿಳಿ ಬಟ್ಟೆಯನ್ನೇ ತೊಡಬೇಕು, ಒಂದೇ ಚಿಹ್ನೆಯನ್ನು ಬಳಸಬೇಕು, ಸಂಪರ್ಕಕ್ಕೆ ಬಂದಾಗ ಕೈಗಳನ್ನು ತೆರೆಯಂತೆ(waves)ಚಲಿಸಬೇಕು, ಹೀಗೆ ಎಲ್ಲದರಲ್ಲೂ ಏಕರೀತಿಯನ್ನು ಪಾಲಿಸಬೇಕು ಎನ್ನುವುದು ವಿದ್ಯಾರ್ಥಿಗಳಲ್ಲಿ ಸಂಚಲನ ಮೂಡಿಸುತ್ತದೆ. ತಮ್ಮಲ್ಲಿ ಒಗ್ಗಟ್ಟು ಮೂಡಿದೆ, ಎಲ್ಲರ ಉದ್ದೇಶವೂ ಒಂದೇ ಎನ್ನುವಂತಾಗಿದೆ ಎಂದು ವಿದ್ಯಾರ್ಥಿಗಳಲ್ಲಿ ಹುರುಪು ಮೂಡಿದರೆ, ಹೆಣ್ಣು ಮಗಳೊಬ್ಬಳು ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ, ಸೌಹಾರ್ದಕ್ಕೆ ಹೊಡೆತ ಎಂದು ವಿರೋಧಿಸುತ್ತಾಳೆ. ವಿದ್ಯಾರ್ಥಿಗಳ ಪೋಷಕರಲ್ಲಿ ಕೆಲವರ ವಿರೋಧ ವ್ಯಕ್ತವಾದರೂ, ಮ್ಯಾನೆಜ್‌ಮೆಂಟ್‌ ರೈನರ್‌ ಪರ ನಿಲ್ಲುತ್ತದೆ. ವಿದ್ಯಾರ್ಥಿಗಳು ತಂಡ ಕಟ್ಟಿಕೊಂಡು ಸ್ವೆಚ್ಛೆಯಿಂದ ವರ್ತಿಸಲು ತೊಡಗುತ್ತಾರೆ. ರೈನರ್‌ಹೆಂಡತಿಯೂ ಅವನ ಅತಿರೇಕಕ್ಕೆ ಒಪ್ಪದೆ ದೂರಾಗುತ್ತಾಳೆ. ವಾರದ ಕೊನೆಯ ದಿನದಂದು ವಿದ್ಯಾರ್ಥಿಗಳನ್ನು ಸರಿದಾರಿಗೆ ರೈನರ್‌ತರುವ ಪ್ರಯತ್ನ ಹಳಿ ತಪ್ಪುತ್ತದೆ.

ಫ್ಯಾಸಿಸಂನ ಬೀಜಗಳು ಮೊಳಕೆಯೊಡೆಯುವ ರೀತಿಯನ್ನು ಕಟ್ಟಿಕೊಡುವ 2008ರ ಈ ಸಿನಿಮಾ, ಹಿಟ್ಲರ್‌ನಂತವರು ಕಾಲವಾದ ಮೇಲೂ ಫ್ಯಾಸಿಸಂ ಹುಟ್ಟಬಹುದು ಎನ್ನುತ್ತಲೇ, ಆ ಕುರಿತ ಎಚ್ಚರಿಕೆಯನ್ನು ರವಾನಿಸುತ್ತದೆ. ಸಿನಿಮಾ ಉಂಟು ಮಾಡಿದ 108 ನಿಮಿಷಗಳ ಗಾಢ ಮೌನವನ್ನು ಮುರಿದು, ವಿದ್ಯಾರ್ಥಿಗಳನ್ನು ಮಾತಾಡುವಂತೆ ಪ್ರೇರೇಪಿಸಲಾಯಿತು.

ʼಚಿತ್ರ ಚೆನ್ನಾಗಿದೆ, ಅರ್ಥ ಆಗಲಿಲ್ಲʼ, ʼಅವರವರೇ ಹೊಡೆದಾಟ್ತಾರೆ, ಯಾಕೆ ಅಂತ ಗೊತ್ತಾಗ್ಲಿಲ್ಲʼ, ʼಗುಂಡಿಟ್ಟು ಕೊಲ್ಲುವುದ್ಯಾಕೆ”. . . . . ವಿದ್ಯಾರ್ಥಿಗಳು ಹೇಳುತ್ತಾ ಹೋದರು. . . . ಕೆಲವರಿಗೆ ಪಾಠ ಮಾಡುವುದು, ಪ್ರೇಮಿಗಳು ದೂರಾಗುವುದು ಅರ್ಥವಾಗಿತ್ತು. ಇಂಗ್ಲಿಷ್‌ ಸಬ್‌ಟೈಟಲನ್ನು ಓದುವುದು ಕಷ್ಟವಾಗಿತ್ತು.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆಲ್ಲಾ ಸೂಕ್ತ ಉತ್ತರ ನೀಡಲಾಯಿತು. ಸಂದೀಪ್‌ಚಿತ್ರವನ್ನು ವಿವರಿಸಿದರು. ನಿಧಾನವಾಗಿ ಸಬ್‌ಟೈಟಲ್‌ಗಳನ್ನು ಓದುವ ಅಭ್ಯಾಸ ಬೆಳೆಯುತ್ತದೆ, ಆ ಮೇಲೆ ಕಷ್ಟವಾಗುವುದಿಲ್ಲ ಎಂದು ಧೈರ್ಯ ತುಂಬಿದರು.

ಊಟದ ವಿರಾಮದ ನಂತರ ನೋಡಿದ ಚಿತ್ರ 1977 ರಲ್ಲಿ ತೆರೆಕಂಡ ʼಎ ಸ್ಪೆಷಲ್‌ಡೇʼ. 1938 ರಲ್ಲಿ ಹಿಟ್ಲರ್‌ ಮುಸಲೋನಿಯ ಭೇಟಿಗೆಂದು ಇಟಲಿಗೆ ಬರುತ್ತಾನೆ. ಆತನನ್ನು ಸಂಭ್ರಮದಿಂದ ಇದಿರುಗೊಂಡು, ವಿಶೇಷ ಪೆರೇಡನ್ನು ಆಯೋಜಿಸಲಾಗುತ್ತದೆ. ಆಂಟೋನಿಟಾ ಒಬ್ಬಳು ಗೃಹಿಣಿ. ಅವಳ ಗಂಡ ಹಿಟ್ಲರನ ಪರಮ ಭಕ್ತ. ಮನೆಕೆಲಸದಲ್ಲಿ ವ್ಯಸ್ತಳಾಗಿರುವ ಆರು ಮಕ್ಕಳ ತಾಯಿ ಆಂಟೋನಿಟಾ, ಎಲ್ಲರನ್ನು ಪೆರೇಡಿಗೆ ಹೊರಡಿಸಿ ಮನೆಯಲ್ಲೆ ಉಳಿದುಕೊಳ್ಳುತ್ತಾಳೆ. ಇನ್ನೇನು, ಸುಧಾರಿಸಿಕೊಳ್ಳಬೇಕೆನ್ನಿಸುವಷ್ಟರಲ್ಲಿ ಗೂಡಲ್ಲಿದ್ದ ಮುದ್ದಿನ ಮೈನಾ ಹಾರಿಹೋಗುತ್ತದೆ. ಗಾಬರಿಯಿಂದ ನೋಡುತ್ತಿರುವಾಗಲೇ ಎದುರುಗಡೆಯ ಪ್ಲಾಟಲ್ಲಿ ಕೂರುತ್ತದೆ. ಕರೆದರೂ ಬಾರದ ಹಕ್ಕಿಯ ಹಿಂದೆ ಬಿದ್ದು, ಆಕೆ ಅಪರಿಚಿತ ಮನೆಯ ಬಾಗಿಲು ತಟ್ಟುತ್ತಾಳೆ.

ಗ್ಯಾಬ್ರಿಯಲ್‌ ಪತ್ರಗಳಿಗೆಲ್ಲ ಮೊಹರು ಹಾಕಿ, ಪಿಸ್ತೂಲನ್ನು ಸಿದ್ಧವಾಗಿಟ್ಟು ಆತ್ಮಹತ್ಯೆ ಮಾಡಬೇಕೆನ್ನುವ ಸಮಯದಲ್ಲೆ ಕದ ತಟ್ಟುವ ಸದ್ದಾಗುತ್ತದೆ. ಗಾಬರಿಯಿಂದ ಪತ್ರಗಳನ್ನು ಪಕ್ಕಕ್ಕೆ ಸರಿಸಿ ಬಾಗಿಲು ತೆರೆದಾಗ, ಆಂಟೋನಿಟಾ ಎದುರಲ್ಲಿ ನಿಂತಿರುತ್ತಾಳೆ. ಹಕ್ಕಿಗೆ ತಿಂಡಿ ಹಾಕಿ, ಅದನ್ನು ಹಿಡಿಯಲು ಆಂಟೋನಿಟಾಗೆ ಆತ ಸಹಕರಿಸುತ್ತಾನೆ. ಇಬ್ಬರೂ ಮಾತಾಡುತ್ತಿರುವ ವೇಳೆಯಲ್ಲಿ ಅಪಾರ್ಟ್‌ಮೆಂಟಿನ ಕೇರ್‌ಟೇಕರ್‌ಮಹಿಳೆ ಬರುತ್ತಾಳೆ. ಆಕೆ ಸಂಶಯ ಪಟ್ಟಿದ್ದನ್ನು ಅರಿತ ಆಂಟೋನಿಟಾ ಹಿಂತಿರುಗಿದರೂ, ಗ್ಯಾಬ್ರಿಯಲ್‌, ಆಂಟೋನಿಟಾ ಇಷ್ಟ ಪಟ್ಟ Three Musketeers ಪುಸ್ತಕವನ್ನು ಕೊಡಲು ಅವಳಲ್ಲಿಗೆ ಬರುತ್ತಾನೆ. ಅವನಲ್ಲಿದ್ದಾನೆಂದು ತಿಳಿದು ಮತ್ತೆ ಬರುವ ಕೇರ್‌ಟೇಕರ್‌ ಮಹಿಳೆ, ಗ್ಯಾಬ್ರಿಯಲ್‌ ಬಗ್ಗೆ ಕೆಟ್ಟದ್ದನ್ನು ಹೇಳಿ ಆತ ಫ್ಯಾಸಿಸಂ ವಿರೋಧಿ ಎನ್ನುತ್ತಾಳೆ. ಇದರಿಂದ ಆಂಟೋನಿಟಾ ಗೊಂದಲಗೊಳಗಾಗುತ್ತಾಳೆ. ಗ್ಯಾಬ್ರಿಯಲ್‌ ಸತ್ಯವನ್ನು ಹೇಳಬೇಕಾಗುತ್ತದೆ. ಆಂಟೋನಿಟಾ ಕೂಡಾ ತನ್ನ ನೋವನ್ನು ಹೇಳಿಕೊಳ್ಳುತ್ತಾಳೆ. ಪರಸ್ತ್ರೀಯರ ಸಂಗ ಮಾಡುವ ಗಂಡ, ಮದುವೆಯ ನಂತರ ಒಂದು ದಿನವೂ ನಕ್ಕಿದ್ದಿಲ್ಲ ಎಂದು ಗ್ಯಾಬ್ರಿಯಲ್‌ನನ್ನು ಅಪ್ಪಿಕೊಳ್ಳುತ್ತಾಳೆ. ಆದರೆ ಅದು ಅವನಲ್ಲಾಗಲೀ, ಅವಳಲ್ಲಾಗಲೀ ಯಾವ ಬದಲಾವಣೆಯನ್ನೂ ತರದು. ಹಿನ್ನೆಲೆಯಲ್ಲಿ ಮಿಲಿಟರಿ ಪೆರೇಡ್‌ನ ಧ್ವನಿ ಕೇಳಿಬರುತ್ತಿರುತ್ತದೆ, ಘೋಷಣೆಗಳೂ ಮೊಳಗುತ್ತಿರುತ್ತವೆ.

ವೈಯಕ್ತಿಕ ಜೀವನವನ್ನು ಹೊಸಕಿ ಹಾಕುವುದು, ಸಬಲರಿಗಷ್ಟೇ ಅವಕಾಶ ಕಲ್ಪಿಸುವುದು, ಮಹಿಳೆಯರನ್ನು, ಲೈಂಗಿಕ ಅಲ್ಪಸಂಖ್ಯಾತರನ್ನು ಶೋಷಿಸುವುದು ಫ್ಯಾಸಿಸಂನ ಗುರಿ. ಗಂಡ, ಅಪ್ಪ ಮತ್ತು ಯೋಧ ಇವರು ಮಾತ್ರ ಗಂಡಸರು, ಉಳಿದವರು ಬದುಕಲು ಅರ್ಹರಲ್ಲ ಎನ್ನುವ ಫ್ಯಾಸಿಸ್ಟ್‌ ಮನಸ್ಥಿತಿಯನ್ನು ಚಿತ್ರ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಮಧ್ಯ ವಯಸ್ಸಿನ ಮಹಿಳೆಯಾಗಿ ಸೋಫಿಯಾ ಲಾರೆನ್‌ ಅದ್ಭುತವಾಗಿ ನಟಿಸಿದ್ದರೆ, ಮಾರ್ಸೆಲ್ಲೋ ಮಾಸ್ಟ್ರೋನ್ನಿ ನಟನೆಯೂ ಪರಿಣಾಮಕಾರಿಯಾಗಿದೆ.

“ಪಿಸ್ತೂಲ್‌ ನೋಡಿ ಕೊಲ್ಲುತ್ತಾನೆಂದುಕೊಂಡಿದ್ದೆʼ ಎಂದೊಬ್ಬ ಹುಡುಗ ಹೇಳಿದರೆ ʼಅವಳೇ ಪ್ರೀತಿ ಮಾಡ್ತಾಳೆ, ಅವನು ಸುಮ್ಮನೇ ಇದ್ದʼ ಎಂದೊಬ್ಬಳು ಹೇಳಿದಳು. ʼಪದೇ, ಪದೇ ಯಾಕೆ ಬರಬೇಕಿತ್ತು?ʼಎಂದು ಕೇರ್‌ಟೇಕರ್‌ ಬಗ್ಗೆ ಪ್ರಶ್ನಿಸಿದರೆ, ʼಹಕ್ಕಿ ಹಾರಿ ಹೋಗಿದ್ದು, ಹಿಡಿದಿದ್ದು ಇಷ್ಟವಾಯಿತುʼ ಎಂದು ನಾಚುತ್ತಾ ವಿದ್ಯಾರ್ಥಿನಿಯೊಬ್ಬಳು ಹೇಳಿದಳು. ಹೆಚ್ಚಿನ ಮಕ್ಕಳಿಗೆ ಈ ಚಿತ್ರದಲ್ಲಿ ಸಬ್‌ಟೈಟಲ್‌ ಓದಲು ಅಭ್ಯಾಸವಾಗಿತ್ತು. ಸರಳವಾಗಿದ್ದರಿಂದ ಇಷ್ಟವೂ ಆಗಿತ್ತು.

ಗೂಡಿನಿಂದ ಹಕ್ಕಿ ಹಾರಿ ಹೋಗುವುದನ್ನು ಬಿಡುಗಡೆಗೆ ಹೋಲಿಸಿದ ಕೋಟಿಗಾನಹಳ್ಳಿಯವರು, ಚಿತ್ರ, ಪ್ರಭುತ್ವ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದನ್ನು ಹೇಳುತ್ತದೆಂದು ವಿವರಿಸಿದರು. ಲೈಂಗಿಕ ಅಲ್ಪಸಂಖ್ಯಾತರೂ ಎಲ್ಲರಷ್ಟೇ ಸಮಾನರು, ಅವರಿಗೆ ಎಲ್ಲರಂತೆ ಬದುಕುವ ಹಕ್ಕಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಯಿತು.

ಇಸ್ರೇಲಿನ ಬಂಜರು ಪ್ರದೇಶವೊಂದರಲ್ಲಿ ಚಿತ್ರಿತವಾದ ನಾಡವ್‌ ಲಪಿಡ್‌ನ ಚಿತ್ರ ʼಅಹೆಡ್ಸ್‌ನೀʼ. ಸೈನಿಕನೊಬ್ಬನ ಕೆನ್ನೆಗೆ ಬಾರಿಸಿದಳೆನ್ನುವ ಕಾರಣಕ್ಕೆ, ಚಲನೆಗೆ ತೊಡಕಾಗುವಂತೆ ಮೊಣಕಾಲಿಗೆ ಗುಂಡೇಟು ಹೊಡೆದು ತರುಣಿಯೊಬ್ಬಳನ್ನು ಜೈಲಿಗೆ ತಳ್ಳಲಾಗುತ್ತದೆ. ಈ ವಿಡಿಯೋ ಜೊತೆಯಲ್ಲಿ, ತನ್ನದೊಂದು ಚಿತ್ರ ಪ್ರದರ್ಶನಕ್ಕಾಗಿ ಇಸ್ರೇಲಿನ ಬಂಜರು ನಗರಕ್ಕೆ ನಿರ್ದೇಶಕನೊಬ್ಬ ಬರುತ್ತಾನೆ. ಆತನ ಆಸಕ್ತಿಯನ್ನು ಖಚಿತ ಪಡಿಸಬೇಕು, ಚಿತ್ರೀಕರಣ ಮಾರ್ಗದರ್ಶಕ ಸೂತ್ರಗಳಿಗೆ ಹೊಂದಿಕೊಂಡಿಬೇಕು ಎನ್ನುವ ಕರಾರಿಗೆ ಸಹಿ ಹಾಕಲು ಹೇಳಲಾಗುತ್ತದೆ. ಚಿತ್ರ ಪ್ರದರ್ಶನಕ್ಕೆ ಏರ್ಪಾಡು ಮಾಡಿದ, ಅವನ ಚಿತ್ರಗಳನ್ನು ಮೆಚ್ಚುವ ಲೈಬ್ರರಿಯ ನಿರ್ವಾಹಕಿಯನ್ನು ಒಲಿಸಿ, ನಿರ್ದೇಶಕ ಪ್ರಭುತ್ವಕ್ಕೆ ವಿರೋಧವಾದ ಮಾತುಗಳನ್ನು ಅವಳಿಂದ ಆಡಿಸುತ್ತಾನೆ. ಈ ನಡುವೆ ಸಿರಿಯಾ ಯುದ್ಧದಲ್ಲಿ ಭಾಗಿಯಾಗಿ ಶತ್ರುಗಳ ವಶಕ್ಕೆ ಸಿಗುವ ಬದಲು, ಪ್ರಾಣಾಹುತಿಗೆ ಸಿದ್ಧವಾದ ಘಟನೆಯನ್ನೂ ಆಕೆಗೆ ಹೇಳುತ್ತಾನೆ.

ಪ್ರಭುತ್ವದ ಅಡಿಯಲ್ಲಿ ಕೆಲಸ ಮಾಡುವವರು ಸ್ವತಂತ್ರರಲ್ಲ, ಅವರು ಬದುಕಿಗಾಗಿ ರಾಜಿ ಮಾಡಿಕೊಳ್ಳುತ್ತಾರಷ್ಟೆ. ಹುಸಿ ದೇಶಭಕ್ತಿ ವ್ಯಕ್ತಿಗಳನ್ನು ನಾಶ ಮಾಡಲೂ ಹೇಸುವುದಿಲ್ಲ, ಮೊಣಕಾಲಿಗೆ ಗುಂಡೇಟು ಬಿದ್ದವಳಷ್ಟೇ ಕುಂಟುವುದಲ್ಲ, ನಿರಂಕುಶ ಆಡಳಿತಲ್ಲಿ ಎಲ್ಲರೂ ಕುಂಟುತ್ತಾರೆ ಎನ್ನುವುದನ್ನು ಹೇಳುವ ಸಂಕೀರ್ಣ ಚಿತ್ರವಿದು.

ವಿದ್ಯಾರ್ಥಿಗಳಲ್ಲಿ ಈ ಚಿತ್ರದ ಬಗ್ಗೆ ಹಲವು ಪ್ರಶೆಗಳಿದ್ದವು: ಬಿಸಿಲಲ್ಲಿ ನಡೆಯುವವ ಯಾಕೆ ಬೀಳುತ್ತಾನೆ? ಆಕೆ ಹೇಳಿದ್ದನ್ನು ವಿಡಿಯೋ ಮಾಡುವ ಉದ್ದೇಶವೇನು? ಸೈನಿಕರೆಲ್ಲ ಏಕೆ ಗುಳಿಗೆ ತೆಗೆದುಕೊಳ್ಳುತ್ತಾರೆ?

ಈ ಚಿತ್ರಕ್ಕೆ ವಿವರಣೆಯ ಅಗತ್ಯವಿತ್ತು. ಇಸ್ರೇಲ್‌, ಪಾಲೆಸ್ತೀನ್‌ಸಂಬಂಧ, ಆಕ್ರಮಿತ ಪ್ರದೇಶಗಳ ಜನರ ಬವಣೆ, ಆಗಾಗ್ಗೆ ನಡೆಯುತ್ತಿರುವ ಕದನಗಳು ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ ಚಿತ್ರವನ್ನು ಅರ್ಥಮಾಡಿಸುವ ಪ್ರಯತ್ನ ನಡೆಯಿತು. ಧರ್ಮಧಾರಿತವಾಗಿ ಜಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಘರ್ಷದ ಬಗೆಗೂ ತಿಳಿಹೇಳಲಾಯಿತು.

ಸಮಯ ಒಂಬತ್ತಕ್ಕೆ ಹತ್ತಿರವಾಗಿತ್ತು. ಮೀನು ಸಾರು ಸಿದ್ಧವಿದೆಯೆಂಬ ಸುದ್ದಿಯಿಂದ ಹೊಟ್ಟೆಯಲ್ಲಿ ಪ್ರತಿರೋಧ ಶುರುವಾಗಿತ್ತು. ಮೊದಲ ದಿನದ ಸಿನೆಹಬ್ಬಕ್ಕೆ ತೆರೆಬಿತ್ತು.

ತೇರಹಳ್ಳಿ ಬೆಟ್ಟದ ಮೇಲಿಂದ ತೂರಿ ಬರುವ ನಸುಕಿನ ಕಿರಣಗಳು ಮೈಮನಸ್ಸುಗಳನ್ನು ಮುದಗೊಳಿಸುತ್ತಿದ್ದವು. ಬೆಟ್ಟದ ಮೇಲೆ ಮೈನಡುಗಿಸುವ ಚಳಿಯಿದೆ ಎಂದು ಹೆದರಿಸಿದ್ದರಿಂದ ಸಾಕಷ್ಟು ಬೆಚ್ಚಗಿನ ದಿರಿಸುಗಳನ್ನು ತಂದಿದ್ದೆವು. ಆಪ್ತರ ಸಹವಾಸ, ಮಾತಿನ ತಾಕಲಾಟ, ಚಿತ್ರಗಳ ವೈವಿಧ್ಯ, ಕೆಂಡ ಹಾಯವ ಭಂಡ ಮನಸ್ಸುಗಳಿಗೆ ಬೆದರಿ, ಶಿಶಿರ ತಲೆ ಮರೆಸಿಕೊಂಡಿದ್ದ. ಬೆಳಗ್ಗಿನ ಜಾವ ಚಾರಣಕ್ಕೆ ಸೂಕ್ತ ಸಮಯವೆಂದು ಅನ್ನಿಸಿದರೂ, ಸಿನಿಮಾ ನೋಡುವ ಸಂಭ್ರಮವನ್ನು ಕಳೆದುಕೊಳ್ಳಲಾರದೆ, ಆತುರಾತುರವಾಗಿ ಸಿದ್ಧವಾಗುವಾಗಲೇ ʼಮೇಫಿಸ್ಟೋʼ ಕಾಣಿಸಿಕೊಂಡಿದ್ದ.

ಜರ್ಮನಿಯ ಸಣ್ಣ ನಗರವೊಂದರಲ್ಲಿ ನಟನಾಗಿದ್ದ ಹೆಂಡ್ರಿಕ್‌ ಹೊಜೆನ್‌ ಖ್ಯಾತಿ ಗಳಿಸುವ ಬಯಕೆಯಿಂದ ಬರ್ಲಿನ್‌ಗೆ ಬರುತ್ತಾನೆ. ನಾಜಿ ಆಡಳಿತದ ಪ್ರಾರಂಭದ ಆ ಕಾಲದಲ್ಲಿ ಮಂದಾಗುವುದನ್ನು ಊಹಿಸಿ, ಅವನ ಪರಿಚಿತರು ದೇಶವನ್ನು ಬಿಡುತ್ತಿರುತ್ತಾರೆ. ಹೆಂಡ್ರಿಕ್‌ ಹೊಜೆನ್‌ ಹೆಂಡತಿಯೂ ದೇಶ ಬಿಟ್ಟು ಬರುವಂತೆ ಒತ್ತಾಯಿಸುತ್ತಾಳೆ. ಆದರೆ ಕಲಾವಿದರಿಗೆ ಪ್ರಭುತ್ವ ಏನೂ ಮಾಡದು, ಎನ್ನುವ ನಂಬಿಕೆಯಲ್ಲಿ ಆತ ಬರ್ಲಿನ್‌ನಲ್ಲಿಯೇ ಉಳಿದು, ಸರಕಾರದ ಆಣತಿಯಂತೆ ಕೆಲಸ ಮಾಡುತ್ತಾನೆ. ಖ್ಯಾತಿಯಲ್ಲಿ ಬೆಳಗಬೇಕೆಂಬ ಆತನ ಆಸೆಯನ್ನು ತನ್ನ ಇಷ್ಟದಂತೆ ಬಳಸಿಕೊಂಡ ಪ್ರಭುತ್ವ, ಪ್ರಖರ ಬೆಳಕಿನಲ್ಲೇಆತನನ್ನು ಕೊನೆಗಾಣಿಸುತ್ತದೆ.

ಈ ಚಿತ್ರದ ವರ್ಣ ಸಂಯೋಜನೆ, ಛಾಯಾಗ್ರಹಣ, ನಟನೆ, ದೃಶ್ಯಗಳು ವಿದ್ಯಾರ್ಥಿಗಳನ್ನು ಸೆಳೆದವು. ಚಿತ್ರವನ್ನು ಹಲವರು ಮೆಚ್ಚಿಕೊಂಡರು. ಹೆಂಡ್ರಿಕ್‌ಹೊಜೆನ್‌ ಏಕೆ ಊರು ಬಿಟ್ಟು ಬರುತ್ತಾನೆ, ಅವನ ಸುತ್ತ ಬೆಳಕು ಯಾಕೆ ಚೆಲ್ಲುತ್ತಾರೆ ಎನ್ನುವ ಪ್ರಶ್ನೆಗಳೂ ಇದ್ದವು.

ಚಿತ್ರದ ಒಂದೆರಡು ಸಂದರ್ಭಗಳಲ್ಲಿ ನಗ್ನ ದೃಶ್ಯಗಳಿದ್ದವು ಫಣಿರಾಜ್‌, . ಇದರಿಂದ ನಿಮಗೆ ಸಂಕೋಚವಾಗಿದೆಯೇ ಎಂದು ಪ್ರಶ್ನಿಸಿದರು. ಹೆಣ್ಣು ಮಕ್ಕಳು ನಾಚುತ್ತಾ ಹೌದೆಂದರು. ಹಿಂದಿ, ಕನ್ನಡ ಚಿತ್ರಗಳಲ್ಲಿ ಹಾಡಿನ ಸಂದರ್ಭಗಳಲ್ಲಿ ಮೈಗಂಟುವ ಬಟ್ಟೆಯನ್ನು ಧರಿಸಿರುತ್ತಾರೆ. ಅದರ ಅವಶ್ಯಕತೆ ಇರುವುದಿಲ್ಲ. ಉದ್ರೇಕಗೊಳಿಸುವ ಉದ್ದೇಶದಿಂದಲೇ ಅದನ್ನು ಮಾಡುತ್ತಾರೆ. ಆದರೆ ಇಲ್ಲಿ ಹಾಗಿಲ್ಲ. ಚಿತ್ರದ ವಿಷಯಕ್ಕೆ ಪೂರಕವಾಗಿ ಆ ದೃಶ್ಯಗಳು ಬಂದಿವೆ. ಅದು ಯಾರನ್ನೂ ಉದ್ರೇಕಗೊಳಿಸುವುದಿಲ್ಲ ಎಂದು ಫಣಿರಾಜ್‌ಹೇಳಿದ್ದು ವಿದ್ಯಾರ್ಥಿಗಳನ್ನು ಮುಟ್ಟಿತು.

ಹೆಂಡ್ರಿಕ್‌ಹೊಜೆನ್‌ಗೆ ಬೆಳಕಿನಲ್ಲಿಯೇ ಇರಬೇಂಬ ಆಸೆಯಲ್ಲವೇ? ತಗೋ ಬೆಳಕು, ಸುತ್ತುಮುತ್ತು, ನಾಲ್ಕೂ ಕಡೆಗಳಿಂದ ಬೆಳಕು, ಅದರಲ್ಲೇ ನಿನ್ನ ಕೊನೆ ಎನ್ನುವುದು ಪ್ರಖರ ಬೆಳಕು ಹಾಯಿಸುವುದರ ಉದ್ದೇಶ ಎಂದು ತಿಳಿಸಿ ಹೇಳಲಾಯಿತು.

ಸಿನೆಹಬ್ಬದ ಕೊನೆಯ ಚಿತ್ರ Alsino And The Condor ಎಂದು ನಿಗದಿಯಾಗಿತ್ತು. ಆ ಚಿತ್ರದ ಡಿಜಿಟಲ್‌ ಪ್ರತಿ ಉತ್ತಮ ಮಟ್ಟದಲ್ಲಿರದ ಕಾರಣ 2016ರ ಪೋಲಿಶ್‌ಭಾಷೆಯ ಚಿತ್ರ ʼಆಫ್ಟರ್‌ಇಮೇಜ್‌ʼ ಪ್ರದರ್ಶಿಸಲಾಯಿತು. ಅಂತಾರಾಷ್ಟ್ರೀಯ ಖ್ಯಾತಿಯ ಆಂಡ್ರೆಜ್‌ವಾಜ್ದ ನಿರ್ದೇಶನದ ಕೊನೆಯ ಸಿನಿಮಾವಿದು.

ಚಿತ್ರ 1948ರ ಜಾಗತಿಕ ಯುದ್ಧಾನಂತರದ ಕಾಲದ ವಸ್ತುವನ್ನೊಳಗೊಂಡಿದೆ. ಮೊದಲ ಜಾಗತಿಕ ಯುದ್ಧದಲ್ಲಿ ತನ್ನ ಒಂದು ಕೈ ಮತ್ತು ಒಂದು ಕಾಲನ್ನು ಕಳೆದುಕೊಂಡ ಖ್ಯಾತ ಕಲಾವಿದನ ಬದುಕುವ ಹಕ್ಕನ್ನು ಸ್ಟಾಲಿನ್‌ ಪ್ರಭುತ್ವ ನಿರಾಕರಿಸುತ್ತದೆ. ಸರಕಾರದ ನೀತಿಗಳನ್ನು ಒಪ್ಪಬೇಕು, ಅಮೂರ್ತ ಕಲೆಯ ರಚನೆ ಮಾಡಬಾರದು ಎನ್ನುವ ನಿಯಮಗಳಿಗೆ ಆತ ಸಮ್ಮತಿಸದಿದ್ದಾಗ ಉದ್ಯೋಗದಿದ ಕಿತ್ತು ಹಾಕಿ, ಕೆಲಸವಿಲ್ಲದೆ ಅಂಡಲೆಯುವಂತೆ ಮಾಡಲಾಗುತ್ತದೆ. ಜೊತೆಯಿರುವವರೆಲ್ಲ ದೂರಾಗುತ್ತಾರೆ. ಮಗಳು ಮನೆ ಬಿಡುತ್ತಾಳೆ. ʼದುಡಿಯದವರಿಗೆ ಉಣ್ಣುವ ಹಕ್ಕಿಲ್ಲʼ ಎನ್ನುವ ಸ್ಟಾಲಿನ್‌ಧೋರಣೆಯಂತೆ ಪಡಿತರವನ್ನೂ ನಿರಾಕರಿಸಲಾಗುತ್ತದೆ. ಆತ ಬೀದಿಯಲ್ಲಿ ಕುಸಿಯುತ್ತಾನೆ.

ಆಗಲೇ ನಾಲ್ಕು ಚಿತ್ರಗಳನ್ನು ನೋಡಿ ತರಬೇತಿ ಹೊಂದಿದ ವಿದ್ಯಾರ್ಥಿಗಳು, ಸರಳವಾದ ಈ ಚಿತ್ರವನ್ನು ಮೆಚ್ಚಿದರು. ದೈಹಿಕ ನ್ಯೂನತೆ ಇರುವವರನ್ನೂ ಬಿಡದೆ ಪ್ರಭುತ್ವ ಶೋಷಿಸುವ ರೀತಿ ಅವರಲ್ಲಿ ನೋವನ್ನೂ ಬೇಸರವನ್ನೂ ಉಂಟು ಮಾಡಿತು. ಅಪ್ಪನಿಗೆ ತೊಂದರೆ ಕೊಡಬಾರದೆನ್ನುವ ಕಾರಣಕ್ಕೆ ಬಾಲಕಿ ಮನೆ ಬಿಡುವ ಕಾರಣವನ್ನು, ಚಿತ್ರದ ಮೊದಲಲ್ಲಿ ಕ್ಯಾನ್ವಾಸ್‌ ಕೆಂಪಾಗುವ, ಕೊನೆಯಲ್ಲಿ ಮುರಿದು ಬೀಳುವ ಮನೆಕ್ವಿನ್‌(ಮನುಷ್ಯಾಕೃತಿಯ ಬೊಂಬೆ)ಗಳ ರೂಪಕಾರ್ಥವನ್ನು ವಿವರಿಸಿ ಹೇಳಲಾಯಿತು.

ಸಿನೆಹಬ್ಬದ ಎರಡು ದಿನ, ಚಿತ್ರವನ್ನು ನೋಡುವ, ಅರಿತುಕೊಳ್ಳುವ ರೀತಿಯನ್ನು ತಿಳಿಸುವ ಕೆಲಸವನ್ನು ಮಾತ್ರಾ ಮಾಡಿರಲಿಲ್ಲ. ಬೇರೆ ಬೇರೆ ದೇಶದ, ಭಿನ್ನ, ಭಿನ್ನ ನಿರ್ಮಾಣದ ಚಿತ್ರಗಳನ್ನು ನೋಡುವುದಷ್ಟೇ ಅಲ್ಲ, ಸಾಮಾಜಿಕ ಕಳಕಳಿಯನ್ನು ಉಂಟು ಮಾಡಿ, ನಾಗರಿಕರ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ದಮನ ಮಾಡುವ ಪ್ರಭುತ್ವದ ಕ್ರೌರ್ಯವನ್ನು, ಚಲನಚಿತ್ರಗಳ ಮುಖೇನ ತಿಳಿಸುವ ಪ್ರಯತ್ನವನ್ನೂ ಮಾಡಲಾಗಿತ್ತು. ಫ್ಯಾಸಿಸಂ, ಸರ್ವಾಧಿಕಾರ, ಯಾವ ರೂಪದಲ್ಲಿ ಬಂದರೂ ಮಾನವತೆಗೆ ತಕ್ಕುದಲ್ಲ, ಅದಕ್ಕೆ ಪ್ರತಿರೋಧ ಒಡ್ಡಬೇಕಾದ ಅಗತ್ಯವಿದೆ ಎನ್ನುವುದನ್ನು ಈ ಸಿನಿಮಾಗಳು ಮನಗಾಣಿಸಿದ್ದವು.

ಸಂಜೆ ಬೆಳಕಲ್ಲಿ ಗ್ರೂಪ್‌ಫೋಟೋಗೆ ನಿಂತವರೆಲ್ಲರ ಮುಖದಲ್ಲಿ ಸಿನಮಾ ಬೆಡಗಿನ ಹೊಳಪಿತ್ತು, ಭರವಸೆಯ ಹೊಳಹೂ ಇತ್ತು.

ನೋಂದಣಿ ಮಾಡುವಾಗ ಕಾವ್ಯಾ ವೆಜ್ಜಾ, ನಾನ್‌ವೆಜ್ಜಾ ಎಂದು ಕೇಳಿದ್ದಕ್ಕೆ ಪ್ಯೂರ್‌ನಾನ್‌ವೆಜ್‌ ಅಂದಿದ್ದೆ. ಅವರು ಇದೆಂತ ಪ್ರಾಣಿ ಎಂದು ಕಕ್ಕಾಬಿಕ್ಕಿಯಾಗಿದ್ದರು. ಆದರೆ ನನ್ನಿಷ್ಟದಂತೆ ಎರಡು ದಿನ ಚಿಕನ್‌‌, ಮಟನ್ ಸಿಕ್ಕಿತು;ಹಾಗೇ ಅಪರೂಪಕ್ಕೆ ತಿನ್ನುವ ರಾಗಿ ಮುದ್ದೆ. ಅನ್ನ ಸೇರಿಸಿ ಮಾಡುವ ಕೋಲಾರ ಮುದ್ದೆ ಸಿರಿವಂತಿಕೆಯ ಕುರುಹು ಎಂದರು ಶ್ರೀಪಾದ್. ನಾನಂತೂ ಪೊಗದಸ್ತಾಗಿ ತಿಂದೆ. ಈ ಭರ್ಜರಿ ವ್ಯವಸ್ಥೆಗೆ ಯಾರನ್ನೆಲ್ಲ ನೆನೆಯಲಿ, ಕಾವ್ಯಾ, ಮಂಜುಳಾ, ಐವನ್‌, ವಿಎಲ್‌ಎನ್‌, ಡಾ ನಟರಾಜ್‌, ಸಂದೀಪ್‌‌, ಅನಿಲ್. . . . . . . .

ಹಾಗೇ ಸಂವಾದದಲ್ಲಿ ಆಸಕ್ತಿಯಿಂದ ಪಾಲ್ಗೊಂಡ ರಮೇಶ್‌ಶಿವಮೊಗ್ಗ, ಶಂಕರಯ್ಯ ಘಂಟಿ, ಕೆ ಎಚ್‌ ಸ್ವಾಮಿ, ಶ್ರೀಪಾದ್‌, ನಟೇಕರ್‌, ಚಂದ್ರಪ್ರಭಕಠಾರಿ, ಕೃಷ್ಣಪ್ರಸಾದ್‌, ಕುಮಾರರೈತ, ಪ್ರಥ್ವಿ, ಅಜಯ್‌ಕೀರ್ತಿ, ಪ್ರವೀಣ್, ಮಹೇಶ್‌, ವಿನಯ್‌, ಪ್ರಶಾಂತ್‌, ಶಿವಮಲ್ಲೇಗೌಡ, ಶಿವಾನಂದ, ಅಭಿನವ್ ಎಲ್ಲರೂ ಸಿನೆ ಹಬ್ಬವನ್ನು ಸಂಪನ್ನಗೊಳಿಸಿದ್ದಾರೆ.

ಬೀಳ್ಗೊಡುವ ಸಮಯದಲ್ಲಿ ಕೋಟಿಗಾನಹಳ್ಳಿ ರಾಮಯ್ಯನವರಲ್ಲಿ ಹೇಳಬೇಕಾದ ಮಾತುಗಳಿದ್ದವು. ಬದಲಾದ ಕಾಲದಲ್ಲಿ ಬದಲಾದ ರೀತಿಯ ಪ್ರತಿರೋಧದ ಅಗತ್ಯವಿದೆ. ಪಾ ರಂಜೀತ್‌ತಂಡದವರನ್ನು ಕರೆಸುವ, ಸಾಧ್ಯವಾದರೆ ಇಲ್ಲೇ ಒಂದು ಪ್ರಾಜೆಕ್ಟ್‌ ಮಾಡೋಣ. . . . . ಅವರ ಮಾತುಗಳನ್ನು ನೆನೆಯುತ್ತಾ, ಸವಿನೆನಪುಗಳೊಂದಿಗೆ ಬೆಂಗಳೂರಿನತ್ತ ಮುಖ ಮಾಡಿದೆವು.

-ಎಂ ನಾಗರಾಜ ಶೆಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಚಂದ್ರಪ್ರಭ ಕಠಾರಿ
ಚಂದ್ರಪ್ರಭ ಕಠಾರಿ
1 year ago

ಮಮಸಿಯ ಸಿನಿಹಬ್ಬವನ್ನು ನಾಗರಾಜ ಶೆಟ್ಟಿಯವರ ಲೇಖನ ಬಹಳ ವಿವರವಾಗಿ ಕಟ್ಟಿಕೊಡುತ್ತದೆ. ಉತ್ಸವದಲ್ಲಿ ಪಾಲ್ಗೊಳಲು ಸಾಧ್ಯವಾಗದವರಿಗೆ ಸಂಪೂರ್ಣ ಮಾಹಿತಿ, ಚಿತ್ರಣ ದಕ್ಕುತ್ತದೆ.

1
0
Would love your thoughts, please comment.x
()
x