ಮಂಜಯ್ಯ ದೇವರಮನಿ ಅವರ “ದೇವರ ಹೊಲ” ಪುಸ್ತಕ ನನ್ನ ಕೈ ಸೇರಿ ಒಂದು ತಿಂಗಳ ಮೇಲೆ ಒಂದು ವಾರವಾಗಿತ್ತು. ಸುಮಾರು ದಿನಗಳ ಹಿಂದೆ ನೂರಾ ಐವತ್ತಕ್ಕೂ ಹೆಚ್ಚು ಜನರಿಗೆ ಕೃತಜ್ಙತೆ ಅರ್ಪಿಸಿರುವ ಮಂಜಯ್ಯ ಅವರ ಮೊದಲ ಮಾತುಗಳನ್ನು ಅವರ ಈ ಪುಸ್ತಕದಲ್ಲಿ ಓದಿದ್ದೇನಾದರೂ ಇಡೀ ಪುಸ್ತಕವನ್ನು ಓದಲು ಯಾಕೋ ಸಾಧ್ಯವಾಗಿರಲಿಲ್ಲ. ನಿನ್ನೆ ಭಾನುವಾರ ಬಿಡುವು ಮಾಡಿಕೊಂಡು ಇಡೀ ದಿನ ಒಂದೊಂದೇ ಕತೆಗಳನ್ನು ಓದುತ್ತಾ ಓದುತ್ತಾ ಮಂಜಯ್ಯ ಅವರ ಕಥನ ಕಲೆಗೆ ಬೆರಗಾಗಿ ಹೋದೆ.
“ದೇವರ ಹೊಲ” ಪುಸ್ತಕವು ಮಂಜಯ್ಯ ಅವರ ಎರಡನೇ ಕಥಾ ಸಂಕಲನವಾಗಿದ್ದು ಈ ಪುಸ್ತಕದಲ್ಲಿ ಒಟ್ಟು ಹದಿನಾಲ್ಕು ಕತೆಗಳಿವೆ. ಇವುಗಳಲ್ಲಿ ಒಂದೆರಡು ಕತೆಗಳನ್ನು ಬಿಟ್ಟರೆ ಎಲ್ಲವೂ ಕಳೆದೆರಡು ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಣೆಯ ಭಾಗ್ಯವನ್ನು ಕಂಡಿರುವ ಕತೆಗಳಾಗಿವೆ. ಯುವ ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕತೆಗಾರರಾದ ಸ್ವಾಮಿ ಪೊನ್ನಾಚಿ ಅವರ ಆಶಯ ನುಡಿ, ಕತೆಗಾರರಾದ ಎಸ್ ಗಂಗಾಧರಯ್ಯ ಅವರ ಮುನ್ನುಡಿ ಈ ಪುಸ್ತಕಕ್ಕಿದೆ. ಮಂಜಯ್ಯ ಅವರ ಅನೇಕ ಕತೆಗಳನ್ನು ಪ್ರಕಟಿಸಿರುವ ಪ್ರಜಾವಾಣಿ ಪತ್ರಿಕೆಯಲ್ಲಿ ಇವರ ಮೊದಲ ಕಥಾಸಂಕಲನಕ್ಕೆ ಬಂದ ಟಿಪ್ಪಣಿ ಹಾಗು ಕೃಷಿಕ, ಲೇಖಕ ಚಂಸು ಪಾಟೀಲರ ಬೆನ್ನುಡಿಗಳು ಈ ಪುಸ್ತಕಕ್ಕಿದೆ. ಹಸಿರು ಪೈರು ಹಾಗೂ ನೀಲಿ ಆಗಸದ ಚಂದದ ಮುಖಪುಟವನ್ನು ಹಾಗು ಒಳ ಪುಟವಿನ್ಯಾಸವನ್ನು ಸ್ವಯಂಭು ಅವರು ಮಾಡಿದ್ದಾರೆ. ಪುಸ್ತಕವನ್ನು ಅಚ್ಚುಕಟ್ಟಾಗಿ ರೀಗಲ್ ಪ್ರಿಂಟ್ ಸರ್ವಿಸ್ ಬೆಂಗಳೂರು ಇವರು ಪ್ರಿಂಟ್ ಮಾಡಿದ್ದರೆ, ರಾಣಿಬೆನ್ನೂರಿನ ಸುದಿಕ್ಷ ಸಾಹಿತ್ಯ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.
ಪುಸ್ತಕದ ಹೆಸರು ಮತ್ತು ಲೇಖಕರ ಹೆಸರು ಎರಡರಲ್ಲೂ ದೇವರು ಇರುವ ಕಾರಣಕ್ಕೆ “ದೇವರ ಹೊಲ” ಎನ್ನುವುದೇ ವಿಶಿಷ್ಟ ಶೀರ್ಷಿಕೆಯಾಗಿರುವ ಈ ಪುಸ್ತಕದಲ್ಲಿ ಅನೇಕ ವಿಶಿಷ್ಟತೆಗಳಿವೆ. ಕೆಲವು ವಿಶಿಷ್ಟತೆಗಳು ಇಷ್ಟವಾದ ಕಾರಣ ಅವುಗಳ ಕುರಿತು ಬರೆಯಲೇಬೇಕು ಅನಿಸಿದ ಕಾರಣ ಈ ಲೇಖನ ಬರೆಯುತ್ತಿದ್ದೇನೆ.
ಕಥಾಸಮಯ:
ಮಂಜಯ್ಯ ಅವರ ಈ ಕಥಾಸಂಕಲನದ ಒಂದಷ್ಟು ಕತೆಗಳು ಒಂದು ಮುಂಜಾನೆಗೆ ಶುರುವಾದರೆ, ಕೆಲ ಕತೆಗಳು ಇಳಿಸಂಜೆ ಹೊತ್ತಿಗೆ, ಒಂದೆರಡು ಕತೆಗಳು ಮಧ್ಯಾಹ್ನದ ಸಮಯದಲ್ಲೂ ಶುರುವಾಗುತ್ತವೆ. ಹೀಗೆ ಶುರುವಾಗುವ ಕತೆಗಳು ಓದುಗರಿಗೆ ನೆರಳು ಬೆಳಕಿನ ಆಟ ತೋರುತ್ತಲೇ ಕಥಾ ಪಾತ್ರಗಳನ್ನು, ಕಥಾ ಪರಿಸರವನ್ನು ವಿಸ್ಮಯಕರವಾಗಿ ನಮ್ಮ ಕಣ್ಣ ಮುಂದೆ ತೆರೆದಿಡುತ್ತಾ ಹೋಗುತ್ತವೆ. ಕಥಾಸಮಯಕ್ಕೆ ಒತ್ತು ನೀಡುತ್ತಲೇ ಒಂದೊಂದೇ ಪಾತ್ರಗಳಿಂದ ಮಾತುಗಳನ್ನಾಡಿಸಿ, ಇಲ್ಲ ಅವರಿಂದ ಏನನ್ನೋ ಮಾಡಿಸಿ, ರಂಗಸ್ಥಳದ ಮೇಲೆ ಪಾತ್ರಗಳನ್ನು ಸಾದರಪಡಿಸುವುದು ಮಂಜಯ್ಯ ಅವರ ಸಿಗ್ನೇಚರ್ ಸ್ಟೈಲ್ ಎನ್ನಬಹುದು.
ಮಂಜಯ್ಯನವರ ಮುಂಜಾನೆ ಶುರುವಾದ ಕತೆಗಳಾದರೆ ಸೂರ್ಯನ ಎಳೆ ಬಿಸಿಲು ಬೀಳುತ್ತಾ ಪ್ರಕರವಾಗುವ ಸೂರ್ಯನ ಕಿರಣದ ಹಾಗೆ ಕತೆಯೂ ರಂಗು ಪಡೆಯುತ್ತಾ ಪ್ರಕರವಾಗುತ್ತಾ ಹೋಗುತ್ತದೆ. ಕತೆ ಸಂಜೆಯ ಸಮಯಕ್ಕೆ ಶುರುವಾಗಿದ್ದರೆ ಸಂಜೆಯ ರಂಗಿನ ಕಂಪು ಹರಡುತ್ತಾ ರಾತ್ರಿಗೆ ನಮ್ಮನ್ನು ಕೊಂಡೊಯ್ದು ಮುಂಜಾವಿನವರೆಗೂ ಪಾತ್ರದ ಬಣ್ಣ ಕಳಚದೆ ಕಥಾ ಓಘವನ್ನು ಕಾಯ್ದಿಟ್ಟುಕೊಂಡೇ ಇರುತ್ತದೆ. ಮಧ್ಯಾಹ್ನದಲ್ಲಿ ಶುರುವಾದ ಕತೆಗಳಾಗಿದ್ದರೆ ಸೂರ್ಯನ ಪ್ರಕರತೆಯನ್ನು ಬಿಂಬಿಸುತ್ತಾ ಪಾತ್ರಗಳನ್ನು ರಣ ಬಿಸಿಲಿನಲ್ಲಿ ಒಣಗಿಸುತ್ತಾ ಅವರ ಕಷ್ಟ ಕಾರ್ಪಣ್ಯಗಳನ್ನು ನಮ್ಮ ಕಣ್ಣಮುಂದೆ ಚಿತ್ರಿಸುತ್ತಾ ಹೋಗುತ್ತವೆ. ಈ ರೀತಿಯಾಗಿ ಬಣ್ಣ ಬಳಿದಂತೆ ಕಥಾಚಿತ್ರಣವನ್ನು ನಮ್ಮ ಮುಂದಿಡುವ ಮಂಜಯ್ಯನವರ ಕತೆಗಳಲ್ಲಿಅವರ ರಂಗಭೂಮಿಯ ಒಡನಾಟದ ಛಾಯೆ ಗಾಢವಾಗಿ ಎದ್ದು ಕಾಣುತ್ತದೆ ಎನ್ನಬಹುದು.
ಕೆಲವು ಉದಾಹರಣೆಗಳು
“ಮುಂಜಾನೆಯ ಬಿಸಿಲಿಗೆ ಮನೆ ಮುಂದಿನ ಜೋಳದ ರಾಶಿ ಪಳಗುಟ್ಟುತ್ತಿತ್ತು. ಜೋಳದ ರಾಶಿಯ ಪಕ್ಕದಲ್ಲಿದ್ದ ರೊಣ್ಗಲ್ಲು ಹಾಡ್ಗಿ ಈಚು ಬಿಗಿಸಿಕೊಂಡು ಒಕ್ಕಲಿಗೆ ಸಿದ್ದವಾಗಿತ್ತು. ಕಣದ ಪಕ್ಕದ ಮುಡಿಕೆ ಸಾಲಿನಲ್ಲಿ ಕಳ್ಳಿಗಿಡಗಳು ಮೂಡುಗಾಳಿಗೆ ಸಡ್ಡು ಹೊಡೆಯುವಂತೆ ಹಸಿರು ಮುಕ್ಕಳಿಸುತ್ತಿದ್ದವು.” (ಕತೆ- ಮುತ್ತಿನ ರಾಶಿ).
“ಮಧ್ಯಾಹ್ನದ ರಣ ಬಿಸಿಲು, ಸುತ್ತಲು ಎಲೆಯುದುರಿ ನಿಂತ ಗಿಡಮರಗಳು, ಬಿಕೋ ಎನ್ನುತ್ತಾ ಬೆತ್ತಲಾದ ಜಮೀನುಗಳು, ಕೆರೆ ಕಟ್ಟೆಗಳೆಲ್ಲಾ ಬತ್ತಿ ಬಡವಾಗಿ ಬಾಯ್ದೆರೆದು ಕುಂತಿವೆ, ಎರೆಮಣ್ಣಿನ ಹೊಲಗಳು ಬೀಟಿ ಬಿಟ್ಟು ಮುಂಗಾರು ಮಳೆಗೆ ಗರ್ಭಧರಿಸಲು ಮೂರ್ನಾಲ್ಕು ವರ್ಷದಿಂದ ಕಾಯುತ್ತಿವೆ.” (ಕತೆ- ಕೈವಲ್ಲಿ).
“ಇಳಿಸಂಜಿ ಹೊತ್ತು, ಚೌತಿ ಬರವು, ಬಳ ಬಳ ಸುರಿವ ಬಿಸಿಲು ಸರ ಸರ ಸರಿದು ಸಂಜಿಗೆ ಸೆರಗು ಹಾಸಿತ್ತು. ಅಂಗಳದಾಗ ಬುಗುರಿಯಾಡುತ್ತಿದ್ದ ಹುಡುಗರು ಕರ್ಲಮುರಲು ಬಂದವರಂಗೆ ಕುಣಿಯುತ್ತಿದ್ದವು. ಚಾಟಿ ಬೀಸಿ ನೆಲಕ್ಕೆ ಎಸೆಯುತ್ತಿದ್ದ ಬುಗುರಿಗಳು ಗಿರ ಗಿರ ತಿರುಗಿ ಬೀಳುತ್ತಿದ್ದವು.” (ಕತೆ-ಕೂಗು)
ಮೇಲೆ ತಿಳಿಸಿದ ಮೂರು ಉದಾಹರಣೆಗಳಂತೆ ತಮ್ಮ ಎಲ್ಲಾ ಕತೆಗಳಲ್ಲಿ ಹೊತ್ತನ್ನು ಮಂಜಯ್ಯನವರು ಪ್ರಸ್ತುತಪಡಿಸುವುದನ್ನು ಓದುವುದೇ ಚೆನ್ನ. ಮಂಜಯ್ಯನವರ ಕತೆಗಳಲ್ಲಿ ಮುಂಜಾನೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಂಬ ವಿಷಯ ಕುರಿತು ಪ್ರಬಂಧ ಬರೆದರೆ ಅದೇ ಒಂದು ಅಧ್ಯಯನವಾಗಿಬಿಡುತ್ತದೆ ಎಂದರೆ ಅತಿಶಯೋಕ್ತಿಯಾಗದು. ಅಷ್ಟು ಪರಿಣಾಮಕಾರಿಯಾಗಿ ಮಂಜಯ್ಯನವರು ದಿನದ ಪ್ರಾಮುಖ್ಯತೆಯನ್ನು ತಮ್ಮ ಪ್ರತೀ ಕತೆಗಳಲ್ಲೂ ಸಾದರಪಡಿಸಿದ್ದಾರೆ.
ಅಡ್ಡ ಹೆಸರುಗಳು:
ಮಂಜಯ್ಯನವರ ಈ ಕೃತಿಯಲ್ಲಿ ಅನೇಕ ಅಡ್ಡ ಹೆಸರುಗಳ ಪ್ರಸ್ತಾಪವಿದೆ. ಪ್ರತೀ ಕತೆಗಳ ಪಾತ್ರಧಾರಿಗಳ ಹೆಸರುಗಳು ವಿಭಿನ್ನವಾಗಿದ್ದರೂ “ಅಗಸಿ ಹೆಣ” ಕತೆಯಲ್ಲಿನ “ಕೇಸಕ್ಕಿ ಕುಸ್ಲವ್ವ”, “ನಾಯಿಬುಡ್ಡನ ಪವಾಡ”ದ “ನಾಯಿ ಬುಡ್ಡ”, “ಕಲ್ಲೇಶಿ ಪ್ರೇಮ ಪುರಾಣ” ಕತೆಯ “ಕಿತ್ತಲಿ ಕಲ್ಲೇಶಿ”, “ಕಪಲಿ ಬಾವಿ” ಕತೆಯ “ಗೋಧಿ ಹುಗ್ಗಿ ಗಂಗಯ್ಯ”, ಮುಂತಾದ ಪಾತ್ರಧಾರಿಗಳು ತಮ್ಮ ಅಡ್ಡ ಹೆಸರಿನ ಕಾರಣಕ್ಕೂ ತಮ್ಮ ವಿಶಿಷ್ಟ ವ್ಯಕ್ತಿತ್ವದ ಕಾರಣಕ್ಕೂ ಸದಾ ಮನಸಿನಲ್ಲಿ ಉಳಿಯುತ್ತಾರೆ.
ಕಡುಬಡತನವನ್ನು ಅನುಭವಿಸುವ ಕುಸ್ಲವ್ವ ಒಂದು ಕಾಲಕ್ಕೆ ಬಿದಿರಿನ ಅಕ್ಕಿಯನ್ನು ತಂದು ಬೇಯಿಸಿ ತಿನ್ನುವ ಪರಿಪಾಠ ಬೆಳೆಸಿಕೊಳ್ಳುವ ಕಾರಣಕ್ಕೆ ಅವಳಿಗೆ ಕೇಸಕ್ಕಿ ಕುಸ್ಲವ್ವ ಎಂಬ ಹೆಸರು ನಿಲ್ಲುತ್ತದೆ. ಇನ್ನು ನಾಯಿ ಬುಡ್ಡನ ವೃತ್ತಾಂತವೇ ವಿಚಿತ್ರವಾದರೂ ಅವನಿಗೆ ಆ ಹೆಸರು ಬರುವುದನ್ನು ಬಹಳ ವಿವರಣಾತ್ಮಕವಾಗಿ ಮಂಜಯ್ಯ ಕಟ್ಟಿಕೊಟ್ಟಿದ್ದಾರೆ. ಕಿತ್ತಲಿ ಕಲ್ಲೇಶಿ ಕುರಿತು ಬರೆಯುವ ಮಂಜಯ್ಯ ಕಲ್ಲೇಶಿಯ ಪಾತ್ರವನ್ನು ವಿಶಿಷ್ಟವಾದ ಪಾತ್ರವನ್ನಾಗಿಸುತ್ತಾರೆ. ಗೋಧಿ ಹುಗ್ಗಿ ಗಂಗಯ್ಯನ ಪಾತ್ರದ ಪರಿಚಯವೂ ಸಹ ವಿಭಿನ್ನವಾಗಿರುವ ಕಾರಣಕ್ಕೆ ಗೋಧಿ ಹುಗ್ಗಿಯ ಸವಿಯ ಕಾಣದ ನನ್ನಂತಹವರಿಗೆ ಒಮ್ಮೆ ಗೋಧಿ ಹುಗ್ಗಿಯ ಸವಿಯ ಸವಿಯಬೇಕು ಅನಿಸದೆ ಇರಲಾರದು.
ಗಂಗಯ್ಯ ಮತ್ತು ಕಲ್ಲೇಶಿಯ ಅಡ್ಡ ಹೆಸರು ಬಂದುದರ ವಿವರಣಾತ್ಮಕ ಶೈಲಿಯ ಒಂದೆರಡು ತುಣುಕುಗಳನ್ನು ನೋಡುವುದಾದರೆ…
“ಗಂಗಯ್ಯನಿಗೆ “ಗೋಧಿಹುಗ್ಗಿ” ಅನ್ನುವ ಅಡ್ಡೆಸರು ಬರಲು ಅವನು ಮಾಡುತಿದ್ದ ಗಮಾಡುವ ಗೋಧಿಹುಗ್ಗಿಯೇ ಕಾರಣವಾಗಿತ್ತು. ಹುಟ್ಟಿದ ಮಗಿಗೆ ಹೆಸರಿಡುವ ಕಾರ್ಯದಿಂದ ಹಿಡಿದು ಹೊಲೆ ತೆಕ್ಕೊಳ್ಳೋ ತಿಥಿಕಾರ್ಯದವರೆಗೂ ಗಂಗಯ್ಯನದ್ದೆ ಅಡುಗೆ ಉಸ್ತುವಾರಿ, ಸುತ್ತ ನಾಕಾರು ಊರುಗಳಲ್ಲಿ ಒಂದು ಕಾಸೂ ಇಸ್ಕಳದೇ ಹುಗ್ಗಿ ಮಾಡುತ್ತಿದ್ದ.” (ಕತೆ-ಕಪಲಿ ಬಾವಿ)
“ಕಲ್ಲೇಶನಿಗೆ ಊರಿನ ಜನಗಳು ಕಿತ್ತಲಿ ಕಲ್ಲೇಶಿ ಅಂತಲೇ ಕರೆಯುತ್ತಿದ್ದರು. ಕಿತ್ತಲಿಗೂ ಅವನಿಗೂ ಜನ್ಮದಾರಭ್ಯದ ನಂಟು ಅಂತ ಕಾಣಿಸುತ್ತದೆ. ಎಡಗೈಯಲ್ಲಿ ಕಿತ್ತಲಿ ಬಲಗೈಯಲ್ಲಿ ಲೋಟ, ಬೇಕೆಂದಾಗ ಬಗ್ಗಿಸಿಕೊಂಡು ಹೀರುತ್ತಿದ್ದ. ಕಿತ್ತಲಿ ಸದಾ ಅವನ ಬಳಿ ಇರಲೇಬೇಕು.” (ಕತೆ-ಕಲ್ಲೇಶಿ ಪ್ರೇಮ ಪುರಾಣ)
ಹೀಗೆ ಮಂಜಯ್ಯನವರು ಅಡ್ಡ ಹೆಸರು ಬರಲು ಕಾರಣವನ್ನು ಹೇಳಿ ಕತೆಯೊಳಗೊಂದು ಕತೆಯಂತೆ ಕಥಾಪಾತ್ರಗಳ ಕುರಿತ ನಿರೂಪಣೆ ಓದುಗರ ಮನಃಪಟಲದಲ್ಲಿ ಒಂದು ಬೇರೆಯದೇ ಚಿತ್ರಣವನ್ನು ಸೃಷ್ಟಿಸುತ್ತದೆ. ಹಾಗೆಯೇ ಯಾವ ಯಾವ ಪಾತ್ರಗಳಿಗೆ ಲೇಖಕ ಅಡ್ಡ ಹೆಸರು ನೀಡಿದ್ದಾರೋ ಆ ಪಾತ್ರಗಳನ್ನೆಲ್ಲಾ ಆದರ್ಶ ವ್ಯಕ್ತಿತ್ವಗಳನ್ನಾಗಿ ಚಿತ್ರಿಸುವಲ್ಲಿ ಶ್ರಮಿಸಿದ್ದಾರೆ. ಆ ಪಾತ್ರಗಳ ಮೂಲಕ ಅನೇಕ ಸಂದೇಶಗಳನ್ನು ಓದುಗರಿಗೆ ನೀಡುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.
ಆಹಾರ ಸಂಸ್ಕೃತಿ ಮತ್ತು ಕಮತ:
ಕಳೆದ ಸಲ ಕೆ ನಲ್ಲತಂಬಿಯವರ ಅತ್ತರ್ ಕಥಾಸಂಕಲನದ ಕುರಿತು ಬರೆಯುವಾಗ ಆ ಪುಸ್ತಕದಲ್ಲಿ ಆಹಾರ ಸಂಸ್ಕೃತಿಯ ತುಣುಕುಗಳು ನೋಡಲು ಸಿಕ್ಕಿದ್ದವು. ಮಂಜಯ್ಯನವರ ದೇವರ ಹೊಲದಲ್ಲೂ ಸಹ ಆಹಾರ ಸಂಸ್ಕೃತಿ ಅದರಲ್ಲೂ ಹಾವೇರಿ ಭಾಗದ ಆಹಾರ ಸಂಸ್ಕೃತಿಯನ್ನು ತುಂಬಾ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಅನೇಕ ಕತೆಗಳಲ್ಲಿ ಬರುವ ಕಟಿ ಕಟಿ ರೊಟ್ಟಿ, ಕೆಂಪಿಂಡಿ ಆ ಭಾಗದ ಜನರ ಪ್ರಮುಖ ಆಹಾರವೆಂಬುದನ್ನು ಈ ಪುಸ್ತಕ ಹೇಳುತ್ತದೆ. ಚಹಾ ಕೂಡ ಬಹು ಮುಖ್ಯ ಪಾನೀಯ ಎಂಬುದು “ಕಲ್ಲೇಶಿ ಪ್ರೇಮ ಪುರಾಣ” ಕತೆಯಲ್ಲಿ ತಿಳಿಯುತ್ತದೆ. ಬಿಸಿ ರೊಟ್ಟಿ, ಎಣ್ಣೆಗಾಯಿ ಪಲ್ಯ,, ಕೆನೆ ಮೊಸರು ಹಾವೇರಿ ಸೀಮೆಯ ಊಟವಾದರೂ “ಹುಳಿ ಮಾವು” ಕತೆಯಲ್ಲಿ ಬರುವ ಹಸಿಂಬರ ಮುದ್ದೆ ಹೆಸರು ಕೇಳಿ ನಿಜಕ್ಕೂ ಕೌತುಕವೆನಿಸಿತು. ಆ ಕತೆಯಲ್ಲಿ ಮುದ್ದೆಯ ಜೊತೆ ಮಜ್ಜಿಗೆಗೆ ಹಸಿಮೆಣಸಿನ ಕಾಯಿ ಜಜ್ಜಿ ಹಸಿಂಬರ ಮಾಡಿ ತಿನ್ನುವುದೇ ಕಥಾನಾಯಕನ ಪಾಲಿಗೆ ಮೃಷ್ಟಾನ್ನ ಭೋಜನ ಎನ್ನುವುದ ನೋಡಿದಾಗ ಹಾಗು “ಕೂಗು” ಕತೆಯಲ್ಲಿ ಮಜ್ಜಿಗೆ ನವಣಕ್ಕಿ ಅನ್ನ ಕಲಸಿ ಬಳ್ಳುಳ್ಳಿ ಹಸಿಮೆಣಸಿನ ಕಾಯಿ ಜಜ್ಜಿ ಭೇಷ್ಯಾಗಿ ನಾದಿ ಮಗನಿಗೆ ಬುತ್ತಿ ನೀಡುವ ಸಿದ್ದವ್ವನ ಅಡಿಗೆಯ ಕುರಿತು ಓದುವಾಗ ಬಡವರ ಮನೆಯ ಊಟ ಚೆನ್ನ ಎಂಬ ಮಾತು ನೆನಪಿಗೆ ಬರುತ್ತದೆ.
ಇನ್ನೂ ಅನೇಕ ಕತೆಗಳಲ್ಲಿ ಬರುವ “ಗೋಧಿ ಹುಗ್ಗಿ” ವಿಶೇಷ ತಿನಿಸು ಎನ್ನುವುದ ತಿಳಿದ ಕೂಡಲೇ ಕುತೂಹಲಕ್ಕೆ ಯೂ ಟ್ಯೂಬ್ ನಲ್ಲಿ ಗೋಧಿ ಹುಗ್ಗಿ ಮಾಡುವ ವಿಧಾನ ಅಂತ ಹುಡುಕಿದಾಗ ಒಂದಷ್ಟು ವಿಡಿಯೋಗಳು ಸಿಕ್ಕವು. “ಹುಗ್ಗಿಯಷ್ಟೇ ಅಲ್ಲ ಗಂಗಯ್ಯ ಮಾಡುವ ಮಾಡ್ಲಿ, ಜೋಳದ ಕಿಚ್ಚಡಿ, ಮುಳ್ಳುಗಾಯಿ ಪಲ್ಯ ನಾಲಿಗೆ ಕುಣಿಯುವಂತೆ ಮಾಡುತ್ತಿದ್ದವು” ಎಂಬ ಸಾಲುಗಳನ್ನು ಪುಸ್ತಕದಲ್ಲಿ ಓದುವಾಗ ಒಮ್ಮೆಯಾದರೂ ಈ ತಿನಿಸುಗಳ ರುಚಿ ಸವಿಯಬೇಕು ಎಂದೆನಿಸುತ್ತದೆ.
ಹೀಗೆ ನಮಗೆ ತಿಳಿಯದ ಅಥವಾ ಚೂರೇ ಚೂರು ತಿಳಿದ ಒಂದು ಭಾಗದ ಆಹಾರ ಸಂಸ್ಕೃತಿಯ ಜೊತೆಜೊತೆಗೆ ಪುಸ್ತಕವು ಕಮತ ಅಂದರೆ ಬೇಸಾಯದ ಕುರಿತು ಅನೇಕ ವಿಷಯಗಳನ್ನು ಪುಸ್ತಕದಲ್ಲಿ ಮಂಜಯ್ಯನವರು ಹೇಳುತ್ತಾರೆ. ಅವರ ಅನೇಕ ಕತೆಗಳಲ್ಲಿ ಹಸಿವಿನ ಚಿತ್ರಣ, ಅನ್ನಕ್ಕಾಗಿ ಜನ ಅಲೆದಾಡುವುದನ್ನು ನೋಡಿದಾಗ ಹಸಿವು ಇಂದಿಗೂ ನಮ್ಮ ದೇಶದ ಜ್ವಲಂತ ಸಮಸ್ಯೆ ಎನ್ನುವುದನ್ನು ಲೇಖಕರು ಪ್ರಸ್ತುತಪಡಿಸಿದ್ದಾರೆ. ಹಾಗೆ ಸಮಸ್ಯೆಗಳನ್ನು ಪ್ರಸ್ತುತಪಡಿಸುತ್ತಲೇ ಅದಕ್ಕೊಂದು ಪರಿಹಾರವನ್ನೂ ಕೂಡ ಸೂಚಿಸುವ ಮಂಜಯ್ಯನವರು ಅನೇಕ ಕತೆಗಳನ್ನು ಮಾನವೀಯ ಅಂತಃಕರಣದ ವ್ಯಕ್ತಿತ್ವಗಳನ್ನು ಕತೆಗಳ ಮೂಲಕ ಜೀವಂತವಾಗಿಟ್ಟು ಅವರ ಬದುಕು ಇತರರಿಗೆ ಸ್ಫೂರ್ತಿಯಾಗುವಂತೆ ಮಾಡಿದ್ದಾರೆ. ಉದಾಹರಣೆಗೆ “ಕೈವಲ್ಲಿ” ಕತೆಯ ಬಸಮ್ಮ, “ಲೆಕ್ಕ ಪುಸ್ತಕ” ಕತೆಯ ಜಗದಣ್ಣ, “ದೇವರ ಹೊಲ” ಕತೆಯ ಸಂಗಪ್ಪ” ಹೀಗೆ ಹಲವಾರು ವಿಶಿಷ್ಟ ವ್ಯಕ್ತಿತ್ವಗಳು ಪುಸ್ತಕದ ಉದ್ದಕ್ಕೂ ನಮಗೆ ಕಾಣಲು ಸಿಗುತ್ತವೆ.
ಹಳ್ಳಿಯ ಸೊಗಡು ಮತ್ತು ವೈಶಿಷ್ಟ್ಯಗಳು:
ದೇವರ ಹೊಲ ಪುಸ್ತಕದಲ್ಲಿ ಹಳ್ಳಿಯ ಅನೇಕ ವೈಶಿಷ್ಟ್ಯಗಳ ಕುರಿತು ಬರೆಯಲಾಗಿದೆ. ಹಳ್ಳಿಯ ಜೀವನಾನುಭವವೇ ಒಂದು ವೈಶಿಷ್ಟ್ಯತೆಯಿಂದ ಕೂಡಿದ ಬದುಕಾದರೂ ಆ ಬದುಕು ಕುರಿತು ಒಂದೆಡೆ ದಾಖಲಿಸುವ ಪ್ರಯತ್ನವನ್ನು ಮಂಜುಯ್ಯನವರು ತಮ್ಮ ಪ್ರತೀ ಕತೆಗಳಲ್ಲೂ ಮಾಡಿದ್ದಾರೆ ಎನ್ನಬಹುದು. ಒಂದಷ್ಟು ಉದಾಹರಣೆಗಳ ಕುರಿತು ನೋಡುವುದಾದರೆ… ನಮ್ಮ ಕಡೆ ಒಂದು ಕಾಲದಲ್ಲಿ ರಾಗಿಯನ್ನು ನೆಲದಲ್ಲಿ ದೊಡ್ಡ ಗುಳಿಗಳನ್ನು ಬಗೆದು ಸಂಗ್ರಹಿಸುತ್ತಿದ್ದರು. ಅವುಗಳಿಗೆ ರಾಗಿ ಗುಳಿಗಳು ಎಂದು ಕರೆಯುತ್ತಿದ್ದರು. ಯಥೇಚ್ಛವಾಗಿ ಬೆಳೆದ ರಾಗಿಯನ್ನು ಶೇಖರಿಡಿಸಲು ನಮ್ಮ ಹಿರಿಯರು ಕಂಡುಕೊಂಡ ರಾಗಿ ಗುಳಿಗಳು ಇಂದು ಹುಡುಕಿದರೆ ಒಂದೂ ಸಹ ಬಹುಶಃ ಸಿಗಲಾರದು. ಅದೇ ತರಹ “ಕೈವಲ್ಲಿ” ಕತೆಯಲ್ಲಿ ಬರುವ “ಹಗೇವು” ಜೋಳವನ್ನು ನೆಲಮಾಳಿಗೆಯಲ್ಲಿ ಸಂಗ್ರಹಿಸುವ ಒಂದು ವಿಧಾನದ ನೆನಪುಗಳನ್ನು ಮಂಜಯ್ಯನವರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹಳ್ಳಿಗಳಲ್ಲಿ ನಡೆಯುತ್ತಿದ್ದ ಸಾಹಸ ಕ್ರೀಡೆಗಳ ಕುರಿತು ಕೂಡ ಪ್ರಸ್ತಾಪಿಸಿರುವ ಲೇಖಕರು “ತುಂಬಿದ ಗಡಿಗೆ ಎತ್ತುವುದು, ಚಕ್ಕಡಿಬಂಡಿ ಗಾಲಿಗಳನ್ನು ಒಬ್ಬನೇ ಬಿಡಿಸಿ ಮತ್ತೆ ಜೋಡಿಸುವುದು, ಒಬ್ಬನೇ ಎತ್ತಿನಗಾಡಿಗೆ ಕೀಲೆಣ್ಣೆ ಎರೆಯುವುದು, ಅರ್ತಿಕಲ್ಲು ಕಟ್ಟಿ ಹೊಡೆಯುವುದು, ಮರದ ನೇಗಿಲನ್ನು ಬಾಯಲ್ಲಿ ಕಚ್ಚಿ ಎತ್ತುವುದು, ಜೋಡಿ ಗುಂಬದ ಗಾಲಿಗಳನ್ನು ಒಬ್ಬನೇ ಓಡಿಸುವುದು, ಕಲ್ಲಿನ ದುಂಡಿಗಳನ್ನು ಎತ್ತುವುದು ಇನ್ನೂ ತರಹೇವಾರಿ ಕಸರತ್ತುಗಳು ಜರುಗುತ್ತಿದ್ದವು.” ಎಂದು “ವೀರಭುಜಬಲದ ದುಂಡಿಯೋ… ಸುಕೋಮಲ ಸುಂದರಿಯೋ…” ಕತೆಯಲ್ಲಿ ಕಲ್ಲಿನ ಗುಂಡುಗಳನ್ನು ಎತ್ತುವ ಕ್ರೀಡೆಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ. ಹಾಗೆಯೇ “ಅಗಸಿ ಹೆಣ” ಕತೆಯಲ್ಲಿ ಹೋರಿ ಬೆದರಿಸುವ ಹಬ್ಬದ ಕುರಿತು ಬರೆದಿದ್ದಾರೆ ಹಾಗೆಯೇ “ಕಪಲಿ ಬಾವಿ” ಕತೆಯಲ್ಲಿ ಏತ ನೀರಾವರಿ ಪದ್ದತಿಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.
ಇನ್ನೂ ಪುಸ್ತಕದ ಟೆಕ್ನಿಕಲ್ ಎರರ್ ಗಳ ಕುರಿತು ಹೇಳಬೇಕೆಂದರೆ ಪುಸ್ತಕದ ಒಂದೆರಡು ಕತೆಗಳಲ್ಲಿ ಪಾತ್ರದಾರಿಯೊಬ್ಬನ ಚಿತ್ರಿಸುತ್ತಾ ಅದೇ ಪ್ಯಾರಾಗಳನ್ನು ಆ ವ್ಯಕ್ತಿತ್ವದ ವರ್ಣನೆಗೆ ಎರಡೂ ಕತೆಗಳಲ್ಲಿ ಮತ್ತೆ ಬಳಸಿದ್ದಾರೆ. ಆ ತರಹದ ತಪ್ಪುಗಳು ಮುಂದೆ ಆಗದಿರಲಿ. “ಅಗಸಿ ಹೆಣ” ಕತೆಯಲ್ಲಿ ಕತೆಯ ನಿರೂಪಣೆ ಮಧ್ಯೆ ಚೂರೇ ಚೂರು ಗೊಂದಲ ಸೃಷ್ಟಿಸುತ್ತದೆ. ಕತೆಯೊಂದನ್ನು ಮೊದಲಿಗೆ ಪ್ರಬಂಧ ರೂಪದಲ್ಲಿ ಬರೆದು ನಂತರ ಕತೆಯಾಗಿಸಿರುವುದರಿಂದ ಇದು ಮೊದಲು ಪ್ರಬಂಧವಾಗಿತ್ತು ಎನ್ನುವುದು ಕತೆಯ ನಿರೂಪಣೆಯಲ್ಲೇ ತಿಳಿದುಹೋಗುತ್ತದೆ. ಆ ತರಹ ಪ್ರಬಂಧವನ್ನು ಕತೆರೂಪವಾಗಿ ಬದಲಿಸುವಾಗ ಲೇಖಕರು ಎಚ್ಚರ ವಹಿಸಲಿ ಎಂಬುದು ನನ್ನ ಕಿವಿ ಮಾತು. ಹಾಗೆಯೇ ದಮನಿತರ ಬದುಕನ್ನು ಕಟ್ಟಿಕೊಡುವಾಗ ತಾವು ಕಾಣದ ಮತ್ತೊಂದು ಮಗ್ಗಲು ಲೇಖಕರಿಗೆ ಕಾಣಲಿ ಎಂದು ಆಶಿಸುತ್ತೇನೆ.
ಕೊನೆಯದಾಗಿ, ಮಂಜಯ್ಯನವರು ತಮ್ಮ ಪ್ರತೀ ಕತೆಗಳಲ್ಲೂ ಹಳ್ಳಿಯ ವೈಶಿಷ್ಟ್ಯತೆಗಳ ಕುರಿತು ಬರೆಯುತ್ತಲೇ ಒಂದು ಭಾಗದ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ತಮ್ಮ ಕತೆಗಳಲ್ಲಿ ದಾಖಲಿಸಿ ಅದಕ್ಕೆ “ದೇವರ ಹೊಲ” ಎಂಬ ಹೆಸರಿಟ್ಟು ಹುಲುಸಾದ ಪಸಲು ಬೆಳೆದಿದ್ದಾರೆ. ಮುನ್ನುಡಿಯಲ್ಲಿ ಎಸ್ ಗಂಗಾಧರಯ್ಯನವರು “ಲೋಕದ ಸಂಕಟಗಳಿಗೆ ಮುಖಾಮುಖಿಯಾಗುವ ಲೇಖಕನಿಗೆ ಬಹುಮುಖ್ಯವಾಗಿ ಸಾಮಾಜಿಕ ಜವಾಬ್ದಾರಿ ಅನ್ನುವುದು ಇರಬೇಕಾಗುತ್ತದೆ.” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಹ ಸಾಮಾಜಿಕ ಜವಾಬ್ದಾರಿಯನ್ನು ತುಂಬಾ ಎಚ್ಚರಿಕೆಯಿಂದ ನಿರ್ವಹಿಸುತ್ತಾ ಬರವಣಿಗೆಯಲ್ಲಿ ತೊಡಗಿರುವ ಮಂಜಯ್ಯ ದೇವರಮನಿಯವರು ತಮ್ಮ “ದೇವರ ಹೊಲ” ಕೃತಿಯನ್ನು ಹೊರತಂದಿರುವುದಕ್ಕಾಗಿ ಅಭಿನಂದನೆಗಳು. ಮಂಜಯ್ಯ ಅವರಿಂದ ಇನ್ನಷ್ಟು ಕೃತಿಗಳು ಬರಲಿ. ಅವರ ಸಾಹಿತ್ಯದ ಹೊಲ ಯಾವತ್ತಿಗೂ ಹಸಿರಿನಿಂದ ಕಂಗೊಳಿಸಲಿ ಎಂದು ಹಾರೈಸುತ್ತೇನೆ.
-ಡಾ. ನಟರಾಜು ಎಸ್ ಎಂ
ಕೃತಿ: ದೇವರ ಹೊಲ (ಕಥಾ ಸಂಕಲನ)
ಲೇಖಕರು: ಮಂಜಯ್ಯ ದೇವರಮನಿ
ಪ್ರಕಾಶನ: ಸುದೀಕ್ಷ ಸಾಹಿತ್ಯ ಪ್ರಕಾಶನ, ರಾಣಿಬೆನ್ನೂರು
ಪ್ರಕಟಣೆಯ ವರ್ಷ: ೨೦೨೨
ಬೆಲೆ: ೧೫೦/-
ಪ್ರತಿಗಳಿಗಾಗಿ ಸಂಪರ್ಕಿಸಿ: 9986348931