ಎಲ್ಲೆಲ್ಲೂ ನೀರವ ಮೌನ
ತಾಳಲಾರೆ ನಾ ವೇದನೆ
ಬಳಿ ಒಮ್ಮೆ ನೀ ಬಂದು
ತೀರಿಸುವೆಯ ಮನದ ಕಾಮನೆ
ಕಣ್ಣು ರೆಪ್ಪೆ ಆಲಂಗಿಸಿ
ಕಳೆದಿವೆ ದಿನ ಸಾವಿರ
ನೆಮ್ಮದಿಯ ತಾಣ ಹುಡುಕುತ
ದಾಟಿರುವೆ ಸಪ್ತ ಸಾಗರ
ಮನವೆಂದೋ ಕೊಟ್ಟಾಗಿದೆ
ಈ ತನುವೂ ಎಂದಿಗೂ ನಿನಗೇ
ನೀರವ ಈ ಮೌನದಲಿ
ಸಖಿ ಗೀತದ ಜೊತೆಗೆ
ಕದ್ದು ನೋಡದಿರು ಹೀಗೆ
ಕಣ್ಣಂಚಿನಲಿ ಕೊಲ್ಲದಿರು ಹಾಗೆ
ಬಂದು ಬಿಡು ಸುಮ್ಮನೇ
ಪ್ರೇಮ ಲೋಕವೇ ನಮ್ಮನೆ
ರಂಗೇರಲಿ ಮಾತಿನಾ ರಂಗೋಲಿ
ಮುದ್ದಾದ ನಮ್ಮೀ ಸಾಂಗತ್ಯದಲಿ
ಮೌನಕೂ ಪದವುಂಟು
ಅದಕಿದೆ ಪಿಸು ಮಾತಿನಾ ನಂಟು!
-ಶ್ರೀವಲ್ಲಭ ಕುಲಕರ್ಣಿ