ಭಾರತದ ಸ್ವಾತಂತ್ಯ್ರ ಹುತಾತ್ಮ ಕವಿ ಅಶ್ಫಾಖ್‌ ಉಲ್ಲಾಖಾನ್‌ ಪುಸ್ತಕದ ಆಯ್ದ ಭಾಗ: ಜೆ ಕಲೀಂ ಬಾಷ

ಹಿಂದಿ ಮೂಲ: ಎಂ ಐ ರಾಜಸ್ವಿ

ಕನ್ನಡಕ್ಕೆ: ಜೆ ಕಲೀಂ ಬಾಷ

ಕಾಕೋರಿ ಕಾಂಡ

ಸಣ್ನ ಸಣ್ಣ ಪ್ರಯತ್ನಗಳಿಂದಾದ ಅಸಫಲತೆಗಳಿಂದ ರಾಂ ಪ್ರಸಾದ್ ಬಿಸ್ಮಿಲ್ ಹಾಗೂ ಅವರ ಮಿತ್ರರ ಮನಸ್ಸು, ಈ ತರಹದ ವಿಧಿ ವಿಧಾನಗಳಿಂದ ಬೇಸರಗೊಂಡಿತ್ತು. ಆದರೂ ಸಹ ಅವರ ಮನದಲ್ಲಿನ್ನೂ ದೇಶ ಭಕ್ತಿಯ ಸಾಗರದ ಅಲೆಗಳು ಹೊಯ್ದಾಡುತ್ತಿದ್ದವು. ದಬ್ಬಾಳಿಕೆಯ ಬ್ರಿಟಿಷ್ ಸರ್ಕಾರದ ಸವಾಲನ್ನು ಎದುರಿಸುವಲ್ಲಿ ದೇಶಭಕ್ತರ ಕೊರತೆ ಇಲ್ಲ ಎಂಬುದನ್ನು ಸಾಬೀತು ಪಡಿಸಲು ಕ್ರಾಂತಿಕಾರಿಗಳು ಸಿದ್ಧರಿದ್ದರು. ಆದ್ದರಿಂದ ಕ್ರಾಂತಿಕಾರಿಗಳು ತಮ್ಮ ದಳವನ್ನು ಸಂಘಟಿಸುವಲ್ಲಿ ನಿರತರಾದರು.

ಇದೇ ಸಂದರ್ಭದಲ್ಲಿ ಮಾರಾಟ ಮಾಡಲು ಜರ್ಮನಿಯ ಕೆಲವು ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ತರುತ್ತಿರುವ ವಿಷಯ ರಾಂ ಪ್ರಸಾದ್ ಬಿಸ್ಮಿಲ್‍ರಿಗೆ ತಿಳಿಯಿತು. ಅವುಗಳನ್ನು ಶೀಘ್ರವಾಗಿ ಖರೀದಿಸುವ ಅವಶ್ಯಕತೆ ಇತ್ತು ತಡವಾದರೆ ತಮಗೆ ಸಿಗಲಿಕ್ಕಿಲ್ಲವೆಂಬ ಆತಂಕ ಕ್ರಾಂತಿಕಾರಿ ದಳಕ್ಕಿತ್ತು. ಈ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಸಲುವಾಗಿ ಕ್ರಾಂತಿಕಾರಿದಳದ ನಾಯಕ ಪಂಡಿತ್ ರಾಂ ಪ್ರಸಾದ್ ಬಿಸ್ಮಿಲ್ ಬಹಳ ಚಿಂತಿತರಾಗಿದ್ದರು.

ಕ್ರಾಂತಿಕಾರಿ ದಳಕ್ಕೆ ತನ್ನ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಹಣ ಸಂಗ್ರಹಿಸುವುದು ಹೇಗೆ? ಈ ಬಗ್ಗೆ ಬಿಸ್ಮಿಲ್ ಜಿ ಅವರು ತಮ್ಮ ಆತ್ಮಕಥೆಯಲ್ಲಿ ಈ ರೀತಿ ಬರೆದಿರುತ್ತಾರೆ:
“ಇದೇ ಚಿಂತೆಯಲ್ಲಿ ನಾನೊಂದು ದಿನ ರೈಲಿನಲ್ಲಿ ಪ್ರಯಾಣ ಸುತ್ತಿದ್ದೆ. ಗಾರ್ಡ್ ಕೂರುವ ರೈಲು ಡಬ್ಬಿಯ ಹತ್ತಿರದ ಡಬ್ಬಿಯಲ್ಲಿ ಕುಳಿತಿದ್ದೆ. ಆಗ ಸ್ಟೇಷನ್ ಮಾಸ್ಟರ್ ಒಂದು ಚೀಲ ತಂದು ಗಾರ್ಡನ ಬಳಿ ಇರುವ ಒಂದು ಡಬ್ಬಿಯಲ್ಲಿ ಹಾಕಿಹೋದ. ಅದರಿಂದ ಝಣ ಝಣ ಶಬ್ದ ಕೇಳಿ ಬಂತು. ನಾನು ಕೆಳಗಿಳಿದು ನೋಡಿದಾಗ ಗಾರ್ಡನ ಬಳಿ ಒಂದು ಲೋಹದ ಪೆಟ್ಟಿಗೆ ಇತ್ತು. ಇದೇ ಪೆಟ್ಟಿಗೆಯಲ್ಲಿ ಚೀಲ ಹಾಕಿದ ಹಾಗಾಯಿತು. ಮುಂದಿನ ಸ್ಟೇಷನ್‍ನಲ್ಲೂ ಸಹ ಅದೇ ರೀತಿಯ ಚೀಲ ಹಾಕಿದುದನ್ನು ನಾನು ಕಂಡೆ. ಲೋಹದ ಪೆಟ್ಟಿಗೆ ಅಥವಾ ಸಂದೂಕ ಗಾರ್ಡ್‍ನ ಡಬ್ಬಿಯಲ್ಲಿ ಸಂಕೋಲೆಯಿಂದ ಕಟ್ಟಿರಬಹುದೆಂದುಕೊಂಡೆ. ಅವಶ್ಯಕತೆ ಇದ್ದಲ್ಲಿ ಬೀಗ ತೆಗೆದು ಕೆಳಗಿಳಿಸಬಹುದೆಂದು ಭಾವಿಸಿದೆ. ಇದಾದ ಕೆಲವು ದಿನಗಳ ನಂತರ ನನಗೆ ಲಕ್ನೋ ರೈಲ್ವೆಸ್ಟೇಷನ್‍ಗೆ ತೆರಳುವ ಅವಶ್ಯಕತೆ ಇತ್ತು. ಅಲ್ಲಿ ನೋಡಿದಾಗ ಗಾಡಿಯಿಂದ ಓರ್ವ ಕೂಲಿ ಲೋಹದ ಹಣವಿರುವ ಸಂದೂಕವೊಂದನ್ನು ಇಳಿಸುತ್ತಿದ್ದ. ಹಾಗೇ ವೀಕ್ಷಿಸಿದಾಗ ಅದರಲ್ಲಿ ಸಂಕೋಲೆಯಾಗಲಿ ಬೀಗವಾಗಲಿ ಗೋಚರಿಸಲಿಲ್ಲ. ಅದೇ ಸಮಯದಲ್ಲಿ ನಾನು ಈ ಹಣದ ಸಂದೂಕವನ್ನು ಲಪಟಾಯಿಸಬೇಕೆಂದು ನಿಶ್ಚಯಿಸಿದೆ.”
ಬಿಸ್ಮಿಲ್ ಜೀ ಅವರು ರೈಲ್ವೆ ವೇಳಾಪಟ್ಟಿಯನ್ನು ವೀಕ್ಷಿಸಿದರು, ಹಾಗೂ ಗಾಡಿಗಳು ಶಾಹಜಹಾಂಪುರಕ್ಕೆ ಬರುವ ವೇಳೆಯನ್ನು ಟಿಪ್ಪಣ ಮಾಡಿಕೊಂಡರು.

ಆಗಸ್ಟ್ 7ರಂದು, 1925ರಲ್ಲಿ ಶಾಹಜಹಾಂಪುರದಲ್ಲಿ ಸಭೆ
ಸರ್ಕಾರಿ ಖಜಾನೆಯನ್ನು ಲೂಟಿ ಮಾಡುವ ಯೋಚನೆ ಮತ್ತು ಯೋಜನೆ ರಾಂ ಪ್ರಸಾದ್ ಬಿಸ್ಮಿಲ್‍ರಿಗೆ ತುಂಬಾ ಇಷ್ಟವಾಯಿತು. ಏಕೆಂದರೆ ಮೇಲಿಂದ ಮೇಲೆ ತನ್ನ ದೇಶವಾಸಿಗಳ ಸಂಪತ್ತನ್ನು ಲೂಟಿ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಇದರಿಂದ ಲೂಟಿಯಾದ ಪರಿವಾರದವರಿಗಾಗುವ ದೈಹಿಕ ಮತ್ತು ಮಾನಸಿಕ ಹಿಂಸೆ, ನೋವಿನಿಂದ ಅವರಿಗೆ ದುಃಖವಾಗುತ್ತಿತ್ತು. ಜೊತೆಗೆ ಲೂಟಿಯಾದ ಸಂಪತ್ತನ್ನು ಹಿಂತಿರುಗಿಸುವ ಯೋಚನೆ, ಚಿಂತೆ ಅವರಿಗಿತ್ತು. ಇದೇ ಉದ್ದೇಶದಿಂದ ಬಿಸ್ಮಿಲ್ ಜೀ ಅವರು 7 ಆಗಸ್ಟ್ 1925ರಂದು ದಳದ ಪ್ರಮುಖ ಸದಸ್ಯರ ಸಭೆ ಕರೆದರು. ಅದಕ್ಕಾಗಿ ಅವರು ಶಾಹಜಹಾಂಪುರದ ಮೊಹಲ್ಲಾವೊಂದರಲ್ಲಿ ರಾಜಾರಾಂ ಭಾರತೀಯ ಅವರ ಹೆಸರಲ್ಲಿ ದಳದ ಕಾರ್ಯಕ್ಕಾಗಿ ಒಂದು ಮನೆಯನ್ನು ಬಾಡಿಗೆ ಪಡೆದರು. ಈ ಮನೆಯಲ್ಲಿ ಸಭೆಯನ್ನು ಆಯೋಜಿಸಿ, ಈ ಸಭೆಯ ನಡಾವಳಿಗಳನ್ನು ಗುಪ್ತವಾಗಿಟ್ಟರು.
ಸಭೆಯಲ್ಲಿ ಸರ್ವಶ್ರೀ ರಾಜೇಂದ್ರ ನಾಥ ಲಹಿರಿ, ಮನ್ಮಥನಾಥ ಗುಪ್ತ, ಶಚೀಂದ್ರನಾಥ ಬಕ್ಷಿ, ಠಾಕೂರ್ ರೋಶನ್ ಸಿಂಗ್, ಬನವಾರಿ ಲಾಲ್ ಶ್ರೀವಾಸ್ತವ, ಚಂದ್ರಶೇಖರ್ ಆಝದ್, ಇಂದ್ರ ವಿಕ್ರಮ ಗುಪ್ತ, ಮುಕುಂದಿ ಲಾಲ್, ಮುರಾರಿ ಲಾಲ್ ಶರ್ಮಾ, ಕೇಶವ ಚಂದ್ರ ಚಕ್ರವರ್ತಿ, ಅಶ್ಫಾಖ್ ಉಲ್ಲಾ ಖಾನ್ ಮತ್ತು ರಾಂಪ್ರಸಾದ್ ಬಿಸ್ಮಿಲ್ ಮತ್ತಿತರ ಕ್ರಾಂತಿಕಾರಿಗಳು ಭಾಗವಹಿಸಿದ್ದರು. ಸಭೆಯ ಕಾರ್ಯ ಸೂಚಿಯ ಪ್ರಮುಖ ವಿಷಯ “ದಳದ ಕಾರ್ಯಕ್ರಮಕ್ಕಾಗಿ ಧನ ಸಂಗ್ರಹ ಮಾಡುವುದು.” ಸಭೆಯಲ್ಲಿ ಬಿಸ್ಮಿಲ್ ಜೀ ಅವರು ಧನ ಸಂಗ್ರಹದ ತಮ್ಮ ಯೋಜನೆಯನ್ನು ದಳದ ಸಭೆಯಲ್ಲಿ ಮಂಡಿಸಿದರು. ಯೋಜನೆಯ ವಿವರ ಶಾಹಜಹಾಂಪುರದಿಂದ ಹೊರಡುವ ಯಾವುದೇ ರೈಲ್ವೆ ಗಾಡಿಯಲ್ಲಿನ ಸರ್ಕಾರಿ ಖಜಾನೆ ಲೂಟಿ ಮಾಡುವುದಾಗಿತ್ತು. ಯಾವ ರೈಲು ಗಾಡಿಯ ಖಜಾನೆ ಲೂಟಿ ಮಾಡಬೇಕೆಂಬುದನ್ನು ನಿರ್ಣಯಿಸುವುದು ದಳದ ಸದಸ್ಯರಿಗೆ ಬಿಡಲಾಯಿತು. ಎಲ್ಲಾ ಸದಸ್ಯರು ಬಿಸ್ಮಿಲ್‍ಜಿ ಅವರ ಈ ಯೋಜನೆಗೆ ತಮ್ಮ ಸಹಮತ ವ್ಯಕ್ತಪಡಿಸಿದರು.

8 ಆಗಸ್ಟ್, 1925ರಂದು ಕೆಲವು ಕ್ರಾಂತಿಕಾರಿ ಯುವಕರು ಶಾಹಜಹಾಂಪುರ ರೈಲ್ವೆ ಸ್ಟೇಷನ್ನಿನಿಂದ ನಂ.8 ಸಹರನ್ ಪುರ ಪ್ಯಾಸೆಂಜರ್ ಟ್ರೈನಿನಲ್ಲಿ ಕುಳಿತು ಲೂಟಿಗಾಗಿ ತೆರಳ ಬೇಕು ಎಂದು ನಿರ್ಣಯಿಸಲಾಯಿತು. ಲಕ್ನೋದ ಸಮೀಪವಿರುವ ಕಾಕೋರಿ ರೈಲ್ವೆ ಸ್ಟೇಷನ್ನಿನಲ್ಲಿ ರೈಲನ್ನು ನಿಲ್ಲಿಸಿ ಖಜಾನೆ ಲೂಟಿ ಮಾಡಲು ತೀರ್ಮಾನಿಸಲಾಯಿತು. ಈ ಕಾರ್ಯಕ್ಕಾಗಿ ಹತ್ತು ಕ್ರಾಂತಿಕಾರಿಗಳ ಒಂದು ಸಮಿತಿ ರಚಿಸಿದರು. ಅದರ ಸದಸ್ಯರು ಪಂಡಿತ್ ರಾಂ ಪ್ರಸಾದ್ ಬಿಸ್ಮಿಲ್, ಅಶ್ಫಾಖ್ ಉಲ್ಲಾ ಖಾನ್ ‘ವಾರಸಿ’, ರಾಜೇಂದ್ರನಾಥ ‘ಲಹರಿ’, ಚಂದ್ರಶೇಖರ್ ‘ಆಝದ್’, ಶಚೀಂದ್ರನಾಥ ಬಕ್ಷಿ, ಮನ್ಮಥನಾಥ ಗುಪ್ತ ಮುಕುಂದಿಲಾಲ್ ಗುಪ್ತ, ಕೇಶವಚಂದ್ರ ಚಕ್ರವರ್ತಿ, ಮುರಾರಿಲಾಲ್ ಶರ್ಮಾ ಮತ್ತು ಬನವರಿ ಲಾಲ್ ಆಗಿದ್ದರು. ಯೋಜನೆಯ ಅನುಸಾರ ಎಲ್ಲಾ ಕ್ರಾಂತಿ ವೀರರು ನಿಶ್ಚಿತ ದಿನಾಂಕ 8 ಆಗಸ್ಟ್, 1925 ರಂದು ನಿರ್ಧರಿತ ಸಮಯದಲ್ಲಿ ಶಾಹಜಹಾಂಪುರ ರೈಲು ನಿಲ್ದಾಣದಲ್ಲಿ ಬಂದು ಸೇರಿದರು. ಆದರೆ ದುರಾದೃಷ್ಟವಶಾತ್ ರೈಲು ನಿಲ್ದಾಣದಲ್ಲಿ ಬಿಸ್ಮಿಲ್ ಜಿ ಅವರ ಕೆಲವು ಪರಿಚಿತ ವ್ಯಕ್ತಿಗಳು ಭೇಟಿಯಾದರು. ಈ ಕಾರ್ಯವನ್ನು ಈ ದಿನ ತಾವು ಮಾಡಿ ಮುಗಿಸಿದಲ್ಲಿ ಪರಿಚಿತ ವ್ಯಕ್ತಿಗಳಿಂದ ತಮ್ಮ ಯೋಜನೆ ಬಯಲಾಗುವುದೆಂದು ಬಿಸ್ಮಿಲ್‍ಜಿ ಹೆದರಿದರು. ಆದ್ದರಿಂದ ಪೂರ್ವ ನಿರ್ಧಾರಿತ ಆಗಸ್ಟ್ 8ಕ್ಕೆ ಈ ಯೋಜನೆ ಕೈಗೂಡಲಿಲ್ಲ. ಸ್ಟೇಷನ್‍ನಿಂದ ಮರಳಿ ಬಂದು ಎಲ್ಲಾ ಕ್ರಾಂತಿಕಾರಿಗಳು ಶಾಹಜಹಾಂಪುರದ ಆರ್ಯ ಸಮಾಜ ಮಂದಿರದಲ್ಲಿ ಮತ್ತೆ ಸಭೆ ಸೇರಿ ಮುಂದಿನ ದಿನ ಸಹಾರನ್‍ಪುರ ಲಕ್ನೋ ಪ್ಯಾಸೆಂಜರ್ ಗಾಡಿಯಲ್ಲಿ ಕಾಕೋರಿ ಬಳಿ ಖಜಾನೆ ಲೂಟಿಮಾಡಬೇಕೆಂದು ತಿರ್ಮಾನಿಸಿದರು.

ಹತ್ತು ಕ್ರಾಂತಿಕಾರಿಗಳು ಫಿರಂಗಿ ಖಜಾನೆ ಲೂಟಿ ಮಾಡಿದರು.
ಒಂಭತ್ತು, ಆಗಸ್ಟ್ 1925ರಂದು ಉಳಿ, ಸುತ್ತಿಗೆ, ಕೊಡಲಿ ಶಸ್ತ್ರಾಸ್ತ್ರಗಳ ಸಹಿತ ಕ್ರಾಂತಿಕಾರಿ ಯೋಜನಾನುಸಾರವಾಗಿ ರೈಲು ದರೋಡೆಗಾಗಿ ಕ್ರಾಂತಿಕಾರಿ ಯುವಕರು ಹೊರಟರು. ಅಂದು ಸಂಜೆ ಏಳು ಗಂಟೆಗೆ ನಂ. 8 ಸಹಾರನ್‍ಪುರ-ಲಕ್ನೋ ಪ್ಯಾಸೆಂಜರ್ ಗಾಡಿಯಲ್ಲಿ ಶಾಹಜಹಾಂಪುರದಿಂದ ಲಕ್ನೋ ಕಡೆಗೆ ಹೊರಟರು. ಎಲ್ಲರಲ್ಲೂ ರೈಲಿನ ಟಿಕೆಟ್‍ಗಳಿದ್ದವು. ಯೋಜನೆಯಂತೆ ಮೂರು ವ್ಯಕ್ತಿಗಳು ಶ್ರೀ ಅಶ್ಫಾಖ್‍ಉಲ್ಲಾಖಾನ್, ಶ್ರೀಶಚೀಂದ್ರನಾಥ್ ಬಕ್ಷಿ, ಮತ್ತು ರಾಜೇಂದ್ರ ಲಹಿರಿ ದ್ವಿತೀಯ ಶ್ರೇಣ ಯ ಡಬ್ಬಿಯಲ್ಲಿ ಪ್ರಯಾಣ ಸಿದರು. ಉಳಿದ ಏಳು ವ್ಯಕ್ತಿಗಳು ತೃತೀಯ ಶ್ರೇಣ ಯ ಡಬ್ಬಿಯಲ್ಲಿ ಕುಳಿತರು. ತೃತೀಯ ಶ್ರೇಣ ಯ ಡಬ್ಬಿಯಲ್ಲಿ ರೈಲನ್ನು ನಿಲ್ಲಿಸುವ ಚೈನು ಸೂಕ್ತವಾಗಿ ಕಾರ್ಯ ನಿರ್ವಹಿಸದ ಕಾರಣ ದ್ವಿತೀಯ ಶ್ರೇಣ ಯಲ್ಲಿ ಕುಳಿತ ವ್ಯಕ್ತಿಗಳು ಪೂರ್ವ ನಿರ್ಧಾರಿತ ಸ್ಥಳದಲ್ಲಿ ರೈಲು ಡಬ್ಬಿಯ ಚೈನನ್ನು ಎಳೆದು ನಿಲ್ಲಿಸಲು ಸಾಧ್ಯವೆಂದು ಭಾವಿಸಲಾಗಿತ್ತು. ಟ್ರೇನು ಶಾಹಜಹಾಂಪುರದಿಂದ ಮುಂದೆ ಸಾಗಿತ್ತು. ಸಂಜೆಯ ಸಮಯ, ಕೆಲ ಸಮಯದ ಹಿಂದೆ ಭೀಕರ ಮಳೆ ಸುರಿಯಿತು. ಅದರಿಂದ ರೈಲಿನ ಹಳಿಗಳ ಮೇಲೆ ಅಲ್ಲಲ್ಲಿ ನೀರು ತುಂಬಿತ್ತು. ಹಸಿರು ಹುಲ್ಲಿನ ಮೈದಾನಗಳ ಮಧ್ಯೆ ಇದ್ದ ತೆಗ್ಗು, ಗುಂಡಿಗಳಲ್ಲಿ ಮಳೆ ನೀರು ಬಿದ್ದು, ಸ್ಪಚ್ಛ ನೀರಿನಿಂದಾಗಿ ಭೂ ಮಾತೆ ಸ್ಪಚ್ಛ ಬಿಳಿ ಪ್ಯಾಚ್ ವರ್ಕಿನ ಹಸಿರು ಸೀರೆಯನ್ನು ಹೊದ್ದಂತೆ ಕಾಣುತ್ತಿತ್ತು. ಮಳೆಯ ಪಟ ಪಟ ಶಬ್ದ ಇನ್ನೂ ಜಾರಿಯಲ್ಲಿತ್ತು. ರೈಲುಗಾಡಿ ಚುಕ್-ಬುಕ್ ಎನ್ನುತ್ತಾ ಲಕ್ನೋದತ್ತ ವೇಗವಾಗಿ ಹೋಗುತ್ತಿತ್ತು. ಎಲ್ಲಾ ಪ್ರಯಾಣ ಕರು ಮೋಜು ಮಜೆಯಲ್ಲಿದ್ದರು. ಕೆಲವರು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದರೆ ಕೆಲವರು ಬಿಸಿ ಚಹಾದ ಸ್ವಾದವನ್ನು ಸುರು, ಸುರ್ ಎಂದು ಎಳೆಯುತ್ತಿದ್ದರು.

ಕೆಲವರು ಇಸ್ಪೀಟ್ ಎಲೆಗಳ ಆಟದಲ್ಲಿ ಮಗ್ನರಾಗಿದ್ದರು. ಕೆಲವರು ಹರಟೆಯಲ್ಲಿ, ಹೀಗೆ ಎಲ್ಲರೂ ತಮ್ಮದೇ ಪ್ರಪಂಚದಲ್ಲಿ ಲೀನರಾಗಿದ್ದರು. ಮುಂದಿನ ಕ್ಷಣದಲ್ಲಿ ಏನಾಗಬಹುದೆಂದು ಯಾರಿಗೂ ಅರಿವಿರಲಿಲ್ಲ. ರೈಲು ಸಮಾನತೆಯಿಂದ ಪ್ರತಿ ಚಿಕ್ಕ ದೊಡ್ಡ ಸ್ಟೇಷನ್‍ಗಳಲ್ಲಿ ನಿಧಾನವಾಗಿ ನಿಂತು ನಿಂತು ಸಾಗುತ್ತಿತ್ತು. ಪ್ರತಿ ನಿಲ್ದಾಣದಲ್ಲಿ ಕೆಲವು ಹೊಸ ಯಾತ್ರಿಕರು ರೈಲನ್ನು ಏರುತ್ತಿದ್ದರೆ, ಕೆಲವರು ತಮ್ಮ ತಮ್ಮ ಊರುಗಳಲ್ಲಿ ಇಳಿಯುತ್ತಿದ್ದರು. ಜೀವನವೇ ಹೀಗೊಂದು ಯಾತ್ರೆ ಇದ್ದಂತೆ. ಇಲ್ಲಿ ಕೆಲವರು ಹೊಸಬರು ಆಗಮಿಸಿದರೆ, ಹಳಬರು ನಿರ್ಗಮಿಸುತ್ತಾರೆ. ಇದೇ ಜೀವನದ ಸಾರ. ಇದೇ ರೀತಿ ಬರುವ ಹೋಗುವ, ಏರುವ-ಇಳಿಯುವ ಜನಗಳ ಮಧ್ಯೆ ಕೂಗು “ಚಾಯ್-ಚಾಯ್”, ಚಾಯ್‍ವಾಲ ‘ಗರಂ ಗರಂ ಚಾಯ್’ ‘ಗರಂ ಪುರಿ’, ‘ಸಮೋಸ’ದ ಶಬ್ದಗಳು ಸಹ ಕೇಳಿ ಬರುತ್ತಿದ್ದವು. ಅದೇ ಸಮಯದಲ್ಲಿ ಓರ್ವ ಪ್ರಯಾಣ ಕ ತನ್ನ ಪಕ್ಕದಲ್ಲಿ ಕುಳಿತ ಸಹ ಪ್ರಯಾಣ ಕನನ್ನು ಕುರಿತು ಭಾಯಿ ಸಾಹಬ್, ಕಾಕೋರಿ ಸ್ಟೇಷನ್ ಬರಲು ಇನ್ನೂ ಎಷ್ಟು ಸಮಯ ಬೇಕು’? ಎಂದ ‘ಬೇಗ ಬರಲಿದೆ’ ಸಹ ಪ್ರಯಾಣ ಕ ಅತನನ್ನು ನೋಡದೆ ಉತ್ತರಿಸಿದ. ಈ ಸಮಯದ ತನಕ ರೈಲುಗಾಡಿ ಕಾಕೋರಿ ಸಮೀಪದಲ್ಲಿ ಆಗಮಿಸಿತ್ತು. ಯೋಜನಾನುಸಾರ ದ್ವಿತೀಯ ಶ್ರೇಣ ಯ ಡಬ್ಬಿಯಲ್ಲಿ ಕುಳಿತ ಆಶ್ಫಾಖ್‍ಉಲ್ಲಾಖಾನ್ ಅವರು ಇಲ್ಲಿ ಗಾಡಿಯ ಚೈನನ್ನು ಎಳೆದರು. ಗಾಡಿಯು ಕೆಲವು ಕ್ಷಣ ಮುಂದೆ ಉರುಳಿ ಮತ್ತೆ ನಿಂತಿತು. ಗಾಡಿಯು ನಿಂತ ಕ್ಷಣ ಪ್ರಯಾಣ ಕರಲ್ಲಿ ಗಲಿಬಿಲಿ ಉಂಟಾಯಿತು. “ಅರೆ ಗಾಡಿ ಇಲ್ಲೇಕೆ ನಿಂತಿತು’? ಎಲ್ಲರ ಮನದಲ್ಲೂ ಇದೇ ಪ್ರಶ್ನೆ ಎದ್ದಿತು. ಕೆಲವರು ಎಂಜಿನ್ ಕೆಟ್ಟಿದೆ ಎಂದರು. ಕೆಲವರು ಮುಂದೆ ಸಿಗ್ನಲ್ ಹಾಕಿರಲಿಕ್ಕಿಲ್ಲ ಎಂದರು. ಕೆಲವರು “ರೈಲು ಹಳಿ ಮುರಿದಿದೆ’ ಎಂದರು. ಕೆಲವರು ರೈಲಿನಲ್ಲಿ “ಕೆಲವು ದರೋಡೆಕೋರರು ನುಗ್ಗಿದ್ದಾರೆ, ಪೆÇೀಲಿಸರು ಅವರನ್ನು ಹುಡುಕುತ್ತಿದ್ದಾರೆ’ ಎಂದರು. ಇದೇ ಕೋಲಾಹಲದಲ್ಲಿ ಎಲ್ಲಾ ಪ್ರಯಾಣ ಕರು ಸತ್ಯ ಏನೆಂದು ಅರಿಯಲು ಕಿಟಕಿ, ಬಾಗಿಲುಗಳ ಮೂಲಕ ಇಣುಕಿ ನೋಡಲು ಆರಂಭಿಸಿದರು.

ಇದೇ ಸಮಯದಲ್ಲಿ ಎಲ್ಲಾ ಕ್ರಾಂತಿಕಾರಿಗಳು ತಮ್ಮ ಕೆಲಸಗಳಲ್ಲಿ ತೊಡಗಿಕೊಂಡರು. ಗಾರ್ಡ್ ರೈಲು ಏಕೆ ನಿಂತಿದೆ ಎಂದು ಅರಿಯಲು ವೇಗವಾಗಿ ಓಡಿ ಬಂದು ಎರಡನೇ ದರ್ಜೆಯ ಡಬ್ಬಿಯ ಸಮೀಪ ಬಂದಾಗ ಓರ್ವ ಕ್ರಾಂತಿಕಾರಿ ಅವನ ಮೇಲೆ ಗುರಿ ಇಟ್ಟು ಬಂದೂಕು ತೋರಿಸಿ, “ನೀನು ಜೀವಂತವಾಗಿರಬೇಕೆಂದರೆ ಹೊಟ್ಟೆಯನ್ನು ನೆಲದ ಮೇಲೆ ಮಾಡಿ ಸುಮ್ಮನೆ ಮರು ಮಾತಾಡದೆ ಮಲಗು ಎಂದು ಹೇಳಿ ಆದೇಶಿಸಿದ. ಪ್ರಾಣ ಭಯದಿಂದ ಗಾರ್ಡ್ ಮರು ಮಾತಾಡದೆ ಆದೇಶ ಪಾಲಿಸಿದ. ಏಕೆಂದರೆ ಗಾರ್ಡ್‍ನ ಆದೇಶವಿಲ್ಲದೆ ಗಾಡಿ ಮುಂದೆ ಚಲಿಸದು.
ಇನ್ನೋರ್ವ ಕ್ರಾಂತಿಕಾರನು ರೈಲಿನ ಆಂಗ್ಲ ಚಾಲಕನಿಗೆ ತನ್ನ ಜಾಗ ಬಿಟ್ಟು ತೆರೆಳಲು ಹೇಳಿದ. ಹೆದರಿದ ರೈಲಿನ ಚಾಲಕ ತನ್ನ ಸೀಟಿನ ಕೆಳಗೆ ನುಸುಳಿ ಕುಳಿತ. ಇನ್ನೋರ್ವ ಚಾಲಕನ ಬಳಿ ಇದ್ದ ಆಂಗ್ಲ ರೈಲ್ವೆ ಎಂಜಿನಿಯರ್ ಹೆದರಿ ಶೌಚಾಲಯದಲ್ಲಿ ಹೋಗಿ ಅಡಗಿಕೊಂಡ. ಪ್ರಯಾಣ ಕರಿಗೆ ಹೆದರಿಸುವ ಉದ್ದೇಶದಿಂದ ಕ್ರಾಂತಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದರು. ಇದರಿಂದ ಪ್ರಯಾಣ ಕರಿಗೆ, ಈ ಕ್ರಾಂತಿಕಾರಿಗಳು ನಿಜವಾಗಲೂ ಏನೂ ಮಾಡಬಲ್ಲರು ಎಂಬುದು ಖಾತ್ರಿಯಾಯಿತು. ಗಾಳಿಯಲ್ಲಿ ಗುಂಡು ಹಾರಿಸಿದ ತಕ್ಷಣ ಪ್ರಯಾಣ ಕರ ಮೇಲೆ ಪ್ರಭಾವ ಬೀರಿ ಅವರು ತಮ್ಮ ಆಸನದ ಬಳಿ ಇರುವ ಕಿಟಕಿಗಳನ್ನು ಮುಚ್ಚಿ ಸುಮ್ಮನೆ ಕುಳಿತರು.

ಈಗ ಕ್ರಾಂತಿಕಾರಿಗಳಾದ ಆಶ್ಫಾಖ್‍ಉಲ್ಲಾಖಾನ್ ಮತ್ತು ಮುಕುಂದಿ ಲಾಲ್ ನಿಶ್ಚಿಂತೆಯಿಂದ ಹಣ ತುಂಬಿದ ಲೋಹದ ಭಾರಿ ಸಂದೂಕವನ್ನು ಗಾಡಿಯಿಂದ ಕೆಳಗೆ ಬೀಳಿಸಿದರು. ಇಬ್ಬರು ಕ್ರಾಂತಿಕಾರಿಗಳು ಬಂದೂಕು ಹಿಡಿದು ಖಜಾನೆಯ ರಕ್ಷಣೆಗಾಗಿ ಅತ್ತ-ಇತ್ತ ನಿಂತರು. ನಾಲ್ಕು ಜನ ಕ್ರಾಂತಿಕಾರಿಗಳು ಇಬ್ಬಿಬ್ಬರಾಗಿ ಗಾಡಿಯ ಎರಡೂ ಬದಿಯಲ್ಲಿ ನಿಂತು ಐದು-ಐದು ನಿಮಿಷಗಳ ಅಂತರದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಘೋಷಿಸುತ್ತಿದ್ದರು “ನಾವು ದರೋಡೆ ಕೋರರಲ್ಲ. ನಾವು ಕ್ರಾಂತಿಕಾರಿಗಳು, ನಾವು ದೇಶಕ್ಕಾಗಿ ಸರ್ಕಾರಿ ಖಜಾನೆ ಲೂಟಿಮಾಡುತ್ತಿದ್ದೇವೆ. ನಾವು ಯಾವುದೇ ಪ್ರಯಾಣ ಕರನ್ನು ಲೂಟಿ ಮಾಡುವುದಿಲ್ಲ. ನಿಮಗೆ ಯಾವುದೇ ತೊಂದರೆ ಕೊಡುವುದಿಲ್ಲ. ಪ್ರಯಾಣ ಕರು ಹೆದರುವ ಅವಶ್ಯಕತೆ ಇಲ್ಲ. ನೀವೆಲ್ಲರೂ ನಿಮ್ಮ ನಿಮ್ಮ ಆಸನಗಳಲ್ಲಿ ಸುಮ್ಮನೆ ಕುಳಿತಿರಿ. ನೀವೆಲ್ಲರೂ ನಮ್ಮ ಸಹೋದರರೇ ನಾವು ಆತಂಕಕಾರಿ ಬ್ರಿಟೀಷರಿಂದ ನಮ್ಮ ಭಾರತಮಾತೆಗೆ ಬ್ರಿಟಿಷ್ ದಾಸ್ಯತ್ವದಿಂದ ಸ್ವಾತಂತ್ರ್ಯಗೊಳಿಸಲು ಈ ರೀತಿ ನಡೆದುಕೊಳ್ಳುತ್ತಿದ್ದೇವೆ.” ಎಲ್ಲಾ ಪ್ರಯಾಣ ಕರು ಮೊದಲೇ ಗುಂಡಿನ ಶಬ್ದ ಕೇಳಿ ತಮ್ಮ ಆಸನಗಳಲ್ಲಿ ಸುಮ್ಮನೆ ಕುಳಿತಿದ್ದರು.

ಈಗ ಕ್ರಾಂತಿಕಾರಿಗಳು ಲೋಹದ ಭಾರಿ ಸಂದೂಕವನ್ನು ರೈಲಿನಿಂದ ಕೆಳಗಿಳಿಸಿದ ನಂತರ, ಸಂದೂಕಕ್ಕೆ ಹಾಕಿದ ಭಾರಿ ಬೀಗವನ್ನು ಕಬ್ಬಿಣದ ಆಯುಧ ಸುತ್ತಿಗೆಗಳಿಂದ ಒಡೆಯುವ ಪ್ರಯತ್ನ ಮಾಡಿದರು. ಎಷ್ಟು ಬಾರಿ ಮರಳಿಯತ್ನವ ಮಾಡಿದರೂ ಸಹ ಲೋಹದ ಭಾರಿ ಬೀಗ ಅವರಿಂದ ಒಡೆಯಲಾಗಲಿಲ್ಲ. ಕೊನೆಗೆ ಬಲಿಷ್ಠ ಭುಜಬಲದ ಆರಡಿ ಉದ್ದದ ಅಜಾನುಬಾಹು ಅಶ್ಫಾಖ್‍ಉಲ್ಲಾಖಾನ್ ಅವರು ಭಾರಿ ಕೊಡಲಿ ಹಿಡಿದು ಸಂದೂಕದ ಬೀಗದ ಮೇಲೆ ಜೋರಾಗಿ ಮೇಲೆ ಮೇಲೆ ಪ್ರಹಾರ ಮಾಡಲು ಆರಂಭಿಸಿದರು. ಅದರಿಂದ ಲೋಹದ ಸಂದೂಕದಲ್ಲಿ ಬಹು ದೊಡ್ಡ ರಂಧ್ರ ಬಿದ್ದಿತು. ಕ್ರಾಂತಿಕಾರಿಗಳು ನೋಡ ನೋಡುತ್ತಿದ್ಧಂತೆ ಆ ದೊಡ್ಡ ರಂಧ್ರದಿಂದಲೇ ಸಂದೂಕದಲ್ಲಿದ್ದ ಎಲ್ಲಾ ಹಣದ ಚೀಲಗಳನ್ನು ಹೊರ ತೆಗೆದು ಒಂದು ಬಟ್ಟೆಯಲ್ಲಿ ಗಂಟು ಕಟ್ಟಿದರು. ಈ ರೀತಿ ಬೇಗ ಬೇಗ ದರೋಡೆ ಕೆಲಸ ಮುಗಿಸಿ ಕ್ರಾಂತಿಕಾರಿ ಯುವಕರು ಅಲ್ಲಿಂದ ಲಕ್ನೋ ನಗರದತ್ತ ಓಡಲು ಆರಂಭಿಸಿದರು. ಅದೇ ಸಂದರ್ಭದಲ್ಲಿ ನಡೆದ ಒಂದು ಘಟನೆ ಬಗ್ಗೆ ಬಿಸ್ಮಿಲ್ ಅವರು ತಮ್ಮ ಆತ್ಮ ಕಥೆಯಲ್ಲಿ ಹೀಗೆ ಬರೆಯುತ್ತಾರೆ:
“ಓರ್ವಕ್ರಾಂತಿಕಾರಿ ಶಸ್ತ್ರಧಾರಿ ಗಾರ್ಡ್‍ನ ಡಬ್ಬಿಯಿಂದ ಇಳಿದು, ಇಂತಹ ಶುಭ ಅವಕಾಶ ಯಾವಾಗಲೂ ಸಿಗಲಿಕ್ಕಿಲ್ಲ ಎಂದು ಲೆಕ್ಕ ಹಾಕಿ ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಲು ಶುರು ಮಾಡಿದ. ಇದನ್ನು ಕಂಡ ಬಿಸ್ಮಿಲ್ ಅವರು ಅವನಿಗೆ ಬೆದರಿಸಿ ನಿಲ್ಲಿಸಲು ಸೂಚಿಸಿದರು. ಗುಂಡು ಹಾರಿಸುವುದು ಅವನ ಕೆಲಸ ಆಗಿರಲಿಲ್ಲ. ಅಕಸ್ಮಾತ್ ಯಾರಾದರೂ ಪ್ರಯಾಣ ಕ ಕುತೂಹಲದಿಂದ ತಮ್ಮ ತಲೆ ಕಿಟಕಿ ಅಥವಾ ಬಾಗಿಲಿನಿಂದ ಇಣುಕಿ ನೋಡಿದ್ದೇ ಆದರೆ ಗುಂಡು ನೇರವಾಗಿ ಅವನಿಗೆ ತಗಲುವ ಸಂಭವವಿತ್ತು. ಹಾಗೇ ಆಯ್ತು. ಓರ್ವ ವ್ಯಕ್ತಿ ತನ್ನ ಡಬ್ಬಿಯಿಂದಿಳಿದು ತನ್ನ ಹೆಂಡತಿ ಇರುವ ಮಹಿಳಾ ಡಬ್ಬಿಯಡೆಗೆ ಹೋಗುತ್ತಿದ್ದ. ಆಗ ಆ ಕ್ರಾಂತಿಕಾರಿಯ ಗುಂಡು ಆ ವ್ಯಕ್ತಿಗೆ ತಗುಲಿದೆ. ಕೇವಲ ಎರಡು ಮೂರು ಗುಂಡು ಹಾರಿದ್ದವು. ಅದೇ ಸಮಯ ಆ ವ್ಯಕ್ತಿಯ ಹೆಂಡತಿ ಮೊದಲೇ ಕಿರುಚಾಡಲು ಆರಂಭಿಸಿದ್ದಾಳೆ. ಅದನ್ನು ಕೇಳಿದ ಅವಳ ಪತಿ ಹೋಗುತ್ತಿದ್ದಿರಬಹುದು. ಈ ಗುಂಡು ಹಾರಿಸಿದ ವ್ಯಕ್ತಿಯ ಅತಿ ಉತ್ಸಾಹಕ್ಕೆ ಈ ಅಮಾಯಕ ಬಲಿಯಾಗಬೇಕಾಯಿತು.

ಬಿಸ್ಮಿಲ್ ಜೀ ಹೇಳುತ್ತಾರೆ. “ನಾನು ಕ್ರಾಂತಿಕಾರಿಗಳಿಗೆ ಯಾರೂ ಸಹ, ಯಾರ ಮೇಲೂ ಬಂದೂಕು ಪ್ರಯೋಗ ಮಾಡಬಾರದೆಂದು ಶಿಸ್ತಿನಿಂದ ಆದೇಶಿಸಿದ್ದೆ. ನಾನು ಮಾನವ ಹತ್ಯೆಯ ವಿರೋಧಿಯಾಗಿದ್ದೆ. ಮಾನವ ಹತ್ಯೆ ಮಾಡಿಸಿ ದರೋಡೆಗೆ ಭೀಕರ ರೂಪ ಕೊಡಲು ನನಗೆ ಇಷ್ಟವಿರಲಿಲ್ಲ. ಆದರೂ ಸಹ ತನ್ನ ಕರ್ತವ್ಯವನ್ನು ಬಿಟ್ಟು ಈ ವ್ಯಕ್ತಿ ಬಂದೂಕು ಪ್ರಯೋಗಿಸಿ ಈ ಹತ್ಯೆ ಮಾಡಿದ. ನಾನು ಬಂದೂಕು ಪ್ರಯೋಗಿಸುವ ಕರ್ತವ್ಯ ಯಾರಿಗೆ ನೀಡಿದ್ದೆನೊ ಆತ ದಕ್ಷ ಹಾಗೂ ಅನುಭವಿಯಾಗಿದ್ದ. ಆತನಿಂದ ತಪ್ಪಾಗುವ ಸಂಭವವೇ ಇರಲಿಲ್ಲ. ಆ ದಕ್ಷ ಕ್ರಾಂತಿಕಾರಿ ಯುವಕರಿಗೆ ನಾನು ನೋಡಿದಾಗ ಅವರು ತಮ್ಮ ಸ್ಥಾನದಿಂದ ಪ್ರತಿ ಐದು ನಿಮಿಷಕ್ಕೊಮ್ಮೆ ಬಂದೂಕ ಚಲಾಯಿಸುತ್ತಿದ್ದರು. ಇದೇ ನನ್ನ ಆದೇಶ ಸಹ ಆಗಿತ್ತು”.


ಕೃತಿ: ಭಾರತದ ಸ್ವಾತಂತ್ಯ್ರ ಹುತಾತ್ಮ ಕವಿ ಅಶ್ಫಾಖ್‌ ಉಲ್ಲಾಖಾನ್‌

ಹಿಂದಿ ಮೂಲ: ಎಂ ಐ ರಾಜಸ್ವಿ

ಕನ್ನಡಕ್ಕೆ: ಜೆ ಕಲೀಂ ಬಾಷ

ಪ್ರಕಾಶನ: ನವಕರ್ನಾಟಕ ಪ್ರಕಾಶನ

ಬೆಲೆ: 150/-

ಪ್ರತಿಗಳಿಗಾಗಿ ಸಂಪರ್ಕಿಸಿ: 8861326188

ಪುಸ್ತಕ ಕೊಳ್ಳಲು: ಈ ಕೆಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ…

http://www.navakarnataka.com/bhaarata-swaatantrya-hutaatma-ashfaq-ullakhan


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x