ಸಂಕ್ರಮಣ: ಡಾ. ವೃಂದಾ ಸಂಗಮ್

ಎಲ್ಲಾ ಕತೀಗಳೂ ಸಹ ಒಂದೂರಾಗ, ಅಂತ ಶುರುವಾಗೋ ಹಂಗ, ಹರಟೆಗಳು ಮಾತ್ರ ನಮ್ಮೂರಾಗ ಅಂತ ಶುರುವಾಗತಿರಬೇಕು. ನಮ್ಮೂರಾಗ ಅಷ್ಟ ಅಲ್ಲ, ನಾವು ಸಣ್ಣವರಿದ್ದಾಗ, ಅಂತನೂ ಇರತಾವ. ಯಾಕಂದರ, ಸಣ್ಣವರಿದ್ದಾಗ ಇದ್ದ ಕುತೂಹಲ, ಗಳಿಸಿದ ವಿಶೇಷ ಅನುಭದಷ್ಟು ಮುಂದಿನ ಜೀವನದಾಗ ಇರೋದಿಲ್ಲ. ಹಬ್ಬ ಹರಿದಿನಗಳ ನೆನಪಂತೂ ಬಾಲ್ಯದ ಅನುಭವಕ್ಕಿಂತಾ ಮುಂದ ಯಾವುದೂ ನೆನಪಿರೋದಿಲ್ಲ. ಮತ್ತ, ಅದನ್ನ ಹಂಚಿಕೊಳ್ಳೋದರಾಗೂ ಇರತದ.

ಹಂಗನ ಇದು ಸಂಕ್ರಮಣ ಹಬ್ಬ. ಸಂಕ್ರಮಣ ಅಂದರ, ಇರೋ ಹನ್ನೆರಡು ರಾಶಿಗಳೊಳಗ, ಪ್ರತಿಯೊಂದು ರಾಶಿಯೊಳಗ ಸೂರ್ಯ ಚಲಸತಾನ, ಅಂದರ ಒಂದೊಂದು ರಾಶಿಯೊಳಗ, ಒಂದೊಂದು ತಿಂಗಳಿರತಾನ. ಹಿಂಗ ಒಂದೊಂದು ರಾಶಿಯಿಂದ ಸೂರ್ಯ ಇನ್ನೊಂದು ರಾಶಿಗೆ ಚಲಿಸುವದನ್ನೇ ಸಂಕ್ರಮಣ ಅಂತಾರಂತ. ಹಂಗಾರ, ಹನ್ನೆರಡು ಸಂಕ್ರಮಣ ಬರಬೇಕಲ್ಲ. ಹೌದು, ಹನ್ನೆರಡು ಸಂಕ್ರಮಣನೇ ಬರೋದು. ಆದರ, ಸೂರ್ಯ ತನ್ನ ಪಥ ಬದಲಿಸೋದು ಎರಡೇ ಸಲ. ಅದು ಕರ್ಕಾಟಕ ಸಂಕ್ರಮಣದಲ್ಲಿ ಮತ್ತ ಮಕರ ಸಂಕ್ರಮಣದಲ್ಲಿ. ಮಕರ ಸಂಕ್ರಮಣದಲ್ಲಿ, ಸೂರ್ಯ ತನ್ನ ಪಥವನ್ನು ದಕ್ಷಿಣದಿಂದ ಉತ್ತರದೆಡೆಗೆ ಬದಲಿಸತಾನ. ಅದಕ್ಕ ಮುಂದ ಉತ್ತರಾಯಣ ಶುರುವಾಗತದ. ಅದು ಶುಭ ಕಾಲ. ಅಂತನ, ಈ ಸಮಯದಾಗ ಮಕರ ಸಂಕ್ರಮಣದ ಹಬ್ಬವನ್ನ ಆಚರಣಾ ಮಾಡತೇವಿ. ಅಂದರ, ಸೂರ್ಯ ಮಕರ ರಾಶಿಯನ್ನ ಪ್ರವೇಶ ಮಾಡತಾನ ಅಂತ ಅರ್ಥ.

ಈ ಸಮಯದಾಗ ಎಳ್ಳು ಬೆಲ್ಲ ಯಾಕ ತಿನತಾರಂತ ಎಲ್ಲಾರಿಗೂ ಗೊತ್ತದ. ಅಂದರ, ಈ ಸಂಕ್ರಮಣ ಬರೋದು ಜನೆವರಿ ತಿಂಗಳದಾಗ. ಚಳಿಗಾಲ, ದೇಹಕ್ಕ ಶಾಖ ಬರಲೀಂತ, ಬೆಲ್ಲವನ್ನ ಮತ್ತ ಚರ್ಮ ಬಿರಕು ಬಿಡದೇ ಇರಲಿ ಅಂತ, ಎಣ್ನೆ ಹೊಂದಿದ ಎಳ್ಳು, ಶೇಂಗಾ, ಖೊಬ್ರಿ ತಿಂತಾರ. ತಾವಷ್ಟ ತಿನ್ನೂದಾರಾಗ ಏನಿರತದ ಮಜಾ, ಸುತ್ತ ಮುತ್ತಲಿನವರೊಂದಿಗೆ ಹಂಚಿಕೊಂಡು, ಸಂಭ್ರಮಿಸಿಕೊಂಡು ತಿಂತಾರ. ಬೀರತಾರ.

ಎಳ್ಳು ಬೆಲ್ಲಾ ತಿಂದು, ಒಳ್ಳೆ ಮಾತಾಡೋಣು ಅಂತ ಹೇಳತಾರಲಾ ಇದು ಮರಾಠಿ, ಕನ್ನಡ ಅಷ್ಟ ಅಲ್ಲ, ಇನ್ನೂ ಅನೇಕ ಭಾಷಾದಾಗ ಹೀಂಗ ಹೇಳೋ ಪದ್ಧತಿ ಅದ. ಅದು ಯಾಕಂದ್ರ, ಅದೂ ಕೂಡಾ ಸೂರ್ಯನ ಸುತ್ತಲೇ ಸುತ್ತುವ ವಿಷಯ ಅದ. ನಮಗೆಲ್ಲಾ ತಿಳಿದಂಗ, ಒಂಬತ್ತು ಗ್ರಹಗಳವ. ಅದರಾಗ, ಸೂರ್ಯ ಎಲ್ಲಾ ಗ್ರಹಗಳೊಳಗೂ ಅತೀ ಮುಖ್ಯ ಗ್ರಹ ಇದ್ದಾನ. ಇನ್ನುಳಿದ ಗ್ರಹಗಳೊಳಗ ಶನಿ ಗ್ರಹ ಅತ್ಯಂತ ಪ್ರಭಾವೀ ಗ್ರಹ. ಶನಿ ಇದ್ದಾನಲಾ, ಇಂವಾ ಸೂರ್ಯನ ಮಗ ಅಂತ. ಆದರೂ ಇವರು ಇಬ್ಬರಿಗೂ ಬದ್ಧ ವೈರತ್ವ ಅದ ಅಂತ. ಇನ್ನ ಈ ಶನಿಗ್ರಹಕ್ಕ ಮಕರ ಮತ್ತು ಕುಂಭ ಈ ಎರಡೂ ರಾಶಿಗಳು ಸ್ವಂತ ಮನೀ. ಅಂದರ, ಸೂರ್ಯ ತನ್ನ ಚಲನೆಯೊಳಗ, ತನ್ನ ಮಗಾ ಆದರೂ, ವೈರಿಯಾಗಿರುವಂತಾ ಶನಿಯ ಮನೆಗೆ ಬಂದು, ಒಂದು ತಿಂಗಳಿರತಾನ. ಇದರಿಂದ ವೈರಿಗಳಾದರೂ ಒಟ್ಟಿಗೇ ಮಾತಾಡಿಕೊಂಡು ಗ್ರಹಗಳೇ ಇರೋವಾಗ, ನಾವಾದರೋ ಹುಲು ಮಾನವರು. ನಾವು, ನಮ್ಮಲ್ಲಿರೋ ಈ ವೈರತ್ವ ಬಿಟ್ಟು, ಸಿಹಿ ತಿಂದು ಸಿಹಿಯಾಗಿ ಮಾತಾಡೋಣು ಅಂತ ಹಿಂಗ ಹೇಳತಾರ.

ಸಂಕ್ರಮಣ ಅಂದರ, ಎಳ್ಳು ಬೀರೋದು ಅಂತಾರ. ಮುಂಜಾನೆ ಚಳೀ ಜಾಸ್ತಿ ಇದ್ದಾಗ, ಸೂರ್ಯೋದಯಕ್ಕೂ ಮೊದಲೇ, ಬೆಳ್ಳಗಿನ ಬುಟ್ಟಿ, ಬೆಳ್ಳಗಿನ ಪಾಕ ಹಿಡದು, ಕುಸುರೆಳ್ಳು ತಯಾರಿಸೋದು ಚಂದದ ಕ್ರಮ, ಚಳೀಗೆ ಉದ್ದದ ಕುಸುರು ಬರೋ ಹಂಗ ಕಾಳಜೀಯಿಂದ ತಯಾರಿಸಬೇಕು, ಅವು ಬೆಳ್ಳಗಿರಬೇಕು, ಮುರೀದಂಗಿರಬೇಕು, ಅದು ಹುಡುಗೇರ ಶ್ಯಾಣ್ಯಾತನ. ನಡು ನಡುವ ಕೆಂಪು, ಹಳದಿ ಬಣ್ಣದ ಒಂದೊಂದು ಕುಸುರೆಳ್ಳು ನೋಡಲಿಕ್ಕೂ ಚಂದ ಕಾಣತಾವ. ಹಂಗ ಖಮ್ಮಗ ಶೇಂಗಾ ಹುರುದು, ಎಳ್ಳು ಹುರುದ, ಒಣ ಕೊಬ್ಬರಿ ಸಿಪ್ಪಿ ಹೆರದು, ಹೆಚ್ಚಿ, ಬೆಲ್ಲಾನೂ ಸಹ ಸಣ್ಣ ಸಣ್ಣ ತುಂಡು ಬರೋ ಹಂಗ ಹೆಚ್ಚಿ, ಎಳ್ಳು ತಯಾರಿಸೋದು ಸಹ ಚಂದದ ಕಲೆ, ಕಲಾವಿದರ ಜಾಣತನ ತೋರಸತದ. ಈಗೆಲ್ಲಾ ಕೊಂಡದ್ದ ಎಳ್ಳ ರುಚಿ, ಅವ ಚಂದ. ಮಾಡುವವರೂ ಯಾರಿಲ್ಲ, ಪದ್ಧತೀಗಳೂ ಮರತಾವ.

ಇದರ ಜೊತಿಗೆ ಇನ್ನೂ ಒಂದು ಮುಖ್ಯವಾದದ್ದು, ಅಂದರ ನದೀ ಸ್ನಾನ. ಅಂದರ, ಸಂಕ್ರಮಣದ ಪರ್ವ ಕಾಲದೊಳಗ, ಸಂಗಮ ಸ್ನಾನವಾಗಲೀ, ಪುಣ್ಯ ನದೀ ಸ್ನಾನವಾಗಲೀ ಮಾಡುವುದು ರೂಢಿ. ಕೆಲವೊಂದು ಕ್ಷೇತ್ರಗಳಲ್ಲಂತೂ ಸಂಕ್ರಾಂತಿ ಜಾತ್ರೆ ಅಂತನೂ ನದೀ ತೀರಗಳಲ್ಲಿ ಮಾಡುವುದಿದೆ. ನಮ್ಮ ಬಾಲ್ದದ ನೆನಪುಗಳೇ ಈ ನದೀ ಸಂಸ್ಕೃತಿಯೊಂದಿಗೆ ಹಾಸು ಹೊಕ್ಕಾಗಿರುವುದು. ಅದಕ್ಕೇ ಹೇಳತಾರ, ನದೀ ಇದ್ದ ಊರಿನ ಸಂಸ್ಕೃತಿಯ ಸಂಭ್ರಮವು, ರಾಜನಿರುವ ರಾಜಧಾನಿಯಂತೆ ಬೆಳಗತಿರುವುದಂತೆ.

ನಮ್ಮೂರಾಗ ಹರಿಯೋ ಹೊಳೀ ಗಂಗವ್ವ ಅಂದರ, ವರದವ್ವ, ಅಕೀ ನಮ್ಮ ಊರಿನ ಜನರಿಗೆ, ಅವ್ವ, ಅಕ್ಕ, ತಂಗಿ, ಮಗಳು ಹಿಂಗ ಎಲ್ಲಾ ಆಗ್ಯಾಳ. ಖರೇ ಹೇಳಬೇಕಂದರ, ನಮ್ಮ ದೇಹ ಬೆಳದಿದ್ದೇ ಆಕೀ ನೀರು ಕುಡುದು. ಮತ್ತ ಕಡೀಕೇ ನಮ್ಮ ದೇಹ ಬೂದಿಯಾಗೋದು ಅಕೀ ದಂಡೀ ಮ್ಯಾಲೆ, ನಮ್ಮ ಅಸ್ತಿ ವಿಸರ್ಜನಾನೂ ಆಗೋದು, ಅಕಿಯ ಮಡಿಲಿನೊಳಗೇನೇ. ಹಿಂಗ ವರದಾ ನದಿ ನಮ್ಮ ಜೀವನದೊಳಗ ಹಾಸು ಹೊಕ್ಕಾಗೇದ. ಇಂತಾ ನದೀ ದಂಡೀ ಮ್ಯಾಲ ಇರೋ ನಮಗ, ಸರ್ವ ಕಾಲವೂ ಪರ್ವ ಕಾಲವೇ. ಸರ್ವ ದಿನವೂ ಸಂಕ್ರಮಣವೇ. ಅಂದರೆ, ಪ್ರತಿ ದಿನವೂ ನದೀ ಸ್ನಾನವನ್ನೇ ಮಾಡುವ ನಮಗ, ಸಂಕ್ರಮಣದ ದಿನಾ ಅನ್ನುವ ವಿಶೇಷವೇನೂ ಇರುತಿರಲಿಲ್ಲ. ಅದಕ್ಕೇನೆ, ಬೇರೇ ಬೇರೇ ಊರಿನಿಂದ ನದೀ ಸ್ನಾನಕ್ಕೆಂದು ಬೇರೆ ಬೇರೆ ಊರಿನಿಂದ ಬರುವವರನ್ನು ಕಂಡರೆ ಆಶ್ಚರ್ಯವಾಗುತ್ತಿತ್ತು. ಅಲ್ಲದೇ, ಅವರು ನದೀ ಸ್ನಾನಕ್ಕೆಂದಷ್ಟೇ ಬರುತ್ತಿರಲಿಲ್ಲ. ನಂತರ ನದೀ ತೀರದಲ್ಲಿ, ಊಟವನ್ನೂ ಮಾಡಲೆಂದು ಬಂದಿರುತ್ತಿದ್ದರು. ಅದು ನಮಗೆ ಆಕರ್ಷಣೆಯಾಗಿರುತ್ತಿತ್ತು.

ಸರಿ, ನಾವು ನಮ್ಮ ಹಿರಿಯರಿಗೆ, “ನಾವೂ ನದೀಗೆ ಹೋಗೋಣ” ಅಂತಿದ್ವಿ. ಹಿರಿಯರೇನೂ ಸಾಮಾನ್ಯದವರಲ್ಲ. “ಮುಂಜಾನೆ ಹೋಗಿದ್ದಿ, ಸಾಕಾಗಿಲ್ಲೇನು, ಬೇಕಂದರ ಈಗೂ ಹೋಗು, ಇಕಾ ಇಲ್ಲೆ ಮಡಿ ಮಟ್ಟಿ ಅವ. ನದಿಯೊಳಗ ಒಗದು, ಒಣಗಿಸಿಕೊಂಡು ಬಾ, ಇಕಾ ಇಲ್ಲೆ ಉಪಕಾರ್ಣಿ ಅವ ತೊಳಕೊಂಡು ಬಾ, ಇಕಾ ಇಲ್ಲೆ ಕೊಡ ಅದ, ಕುಡಿಯೋ ನೀರು ತುಂಬಿಕೊಂಡು ಬಾ.” ಅಂತಿದ್ರು. ನದೀಗೆ ಹೋಗಲಿಕ್ಕೆ ಕಾರ್ಯ ಕಾರಣ ಬೇಕಾದಷ್ಡಿರತಿದ್ದವು ಅವರಿಗೆ. ಆದರೆ, ನಮಗ ಬೇಕಾಗಿದ್ದು, ನದೀ ದಂಡೀ ಊಟ ಮಾತ್ರ.

ನದೀಗೆ ಊಟಕ್ಕ ಕಟ್ಟಿಕೊಂಡು ಹೋಗೋಣ ಇದು, ನಮ್ಮ ಸಂಕ್ರಾಂತಿಯ ಹಾಡು. ಒಂದು ರೀತಿಯೊಳಗೆ, ಎಳ್ಲು ಬೆಲ್ಲಾ ತಿಂದು, ಒಳ್ಳೊಳ್ಳೇ ಮಾತಾಡೋಣು ಅಂತಾರಲ್ಲ, ಅದರ ಮೊದಲಿನ ಭಾಗ ಇದು. ನಮ್ಮ ಮನಿಯೊಳಗ, ಇದನ್ನ ಒಪ್ಪದಿರಲಿಕ್ಕೆ ಕಾರಣಗಳು ನೂರಾರು. ಈ ಸಂಕ್ರಮಣ ಹಬ್ಬ ತಿಥಿ ನೋಡೀ ಬರೂದಿಲ್ಲ. ಅದು ಇಂಗ್ಲೀಷರ ಹಂಗ, ದಿನಾಂಕ ನೋಡತದ. ಜನೆವರಿ 14 ಅಥವಾ 15 ಅಂತ. ಒಮ್ಮೊಮ್ಮೆ ಅದು ಏಕಾದಶೀ ಬಂದಿದ್ದೂ ಉಂಟು. ನಮ್ಮ ಇಂಡೆಂಟ್ ಮರತೇ ಹೋಗುವಂಗ. ಅಲ್ಲದ ಈ ಪರ್ವ ಕಾಲ ಅನ್ನೋ ಸಮಯ, ಇದೂ ನಮ್ಮ ವೈರೀನೇ. ಒಮ್ಮೊಮ್ಮೆ ಸೂರ್ಯೋದಯಕ್ಕೆ ಪರ್ವ ಕಾಲ ಇದ್ದರ, ಆ ಸಮಯದೊಳಗೆ ನಮ್ಮ ಸ್ನಾನ ನದಿಯೊಳಗೆ ಆಗಿರತಿತ್ತು. ಮತ್ತ ಇನ್ನೊಮ್ಮೆ ನದೀಗೇ ಹೋಗೋದು ಅಭಾಸ ಅಂತ ಹಿರಿಯರ ವಾದ. ಸಾಮಾನ್ಯವಾಗಿ, ಪ್ರತೀ ವರ್ಷದ ಮೊದಲ ನಿರಾಕರಣೆಯ ಕಾರಣ ಇದು. ಕೆಲವೊಮ್ಮೆ ಇದಕ್ಕೆ ವಿನಾಯತಿ ಸಿಗುವಂತೆ ಸ್ವಲ್ಪ ನಿಧಾನವಾಗಿ ಬರುವ ಪರ್ವ ಕಾಲ, ನಮಗೆ ವರ ಕೊಟ್ಟಂತೆ. ಎರಡನೇ ನಿರಾಕರಣೆ ಇರೋದು, ಸಂಜೀ ಮುಂದ, ಊರ ಮಂದಿ ಎಲ್ಲಾರೂ ಎಳ್ಳು ಕೊಡಲಿಕ್ಕೆ ಬರತಾರ, ಸಂಜೀ ತನಕಾ ನದೀಗೆ ಹೋಗೋದು ಏನು ಛಂದ, ನೋಡದೇ ಇರೋ ನದೀ ಅಲ್ಲ. ಇದು ಎರಡನೇ ನಿರಾಕರಣೆಯ ಕಾರಣ. ಹಿಂಗ ಅನೇಕ ಕಾರಣಗಳಿದ್ದರೂನು, ಒಮ್ಮೆ ಹಿರಿಯರು ಒಪ್ಪಿದ ಮ್ಯಾಲೆ ಮುಗೀತು. ಅಕ್ಕ ಪಕ್ಕದ ನಾಲ್ಕೈದು ಮನೀಗಳವರೂ ಸೇರಿ, ಒಟ್ಟಿಗೇ ನದೀಗೆ ಹೋಗಿ, ಉಂಡು ಬರುವದು ನಿರ್ಧಾರಾದಂತೆ.

ಏನೇ ಇರಲಿ, ಈ ನದೀಗೋ, ಹೊಲಕ್ಕೋ ಊಟಕ್ಕ ಕಟ್ಟಿಕೊಂಡು ಹೋಗುವ ಸಂಭ್ರಮ, ಒಂದು ಪುಕ್ಕಟೆ ಜಾಲಿ ಔಟಿಂಗ್, ಇದು ಸಂಕ್ರಾಂತಿಯ ಸಡಗರಕ್ಕೆ ಮೆರಗು. ಅಕ್ಕ ಪಕ್ಕದವರ ಮನೀಗೆ ಹೋಗಿ, ನಾಳೆ ನದೀಗೆ ಊಟಕ್ಕ ಹೋಗೋದು, ಹನ್ನೆರಡು ಗಂಟೆಕ್ಕ, ಅಂತ ಸುದ್ದಿ ಮುಟ್ಟಿಸ ಬರತಿದ್ದಿವಿ. ಎಲ್ಲರೂ ಹೂಂ ಅಂದರ ಮುಗೀತು.

ಹಂಗಂತ, ನಾವು ಊಟಕ್ಕ, ಭಾಳ ವಿಶೇಷವಾದ ಅಡುಗೆಗಳನ್ನೇನೂ ಬಯಸುತ್ತಿರಲಿಲ್ಲ. ನಮ್ಮ ಹಿರಿಯರೂ, ತಮ್ಮ ಆರ್ಥಿಕ ಅನುಕೂಲಗಳನ್ನು ನೆನಪಿಟ್ಟುಕೊಂಡೇ ಇರತಿದ್ದರು. ಯಾರಾದರೂ ಸ್ವಲ್ಪ ಕಷ್ಟದೊಳಗಿದ್ದಾರಂದರ, ಅವರನ್ನ ಬ್ರಾಹ್ಮಣ ಮುತ್ತೈದಿ ಅಂತ ಕರೀತೇನೀ, ನೀ ಅಡಗೀ ಮಾಡಬ್ಯಾಡ ಅಂತ ಅವರನ್ನ ಗೌರವಿಸತಿದ್ದರು. ಅವರ ಮನಸ್ಸಿಗೆ ಒಂಚೂರು ನೋವಾಗದಂಗ, ಸಹಾಯ ಮಾಡೋದು ಎಂತಾ ಹಿರಿಗುಣಾ ನಮ್ಮ ಹಿರಿಯರದು. ಇಷ್ಟಾದರೂ ನಾವು ನಮ್ಮ ಕಾಲನೇ, ನಮ್ಮ ಸುಖಾನೇ ದೊಡ್ಡದು ಅಂತೇವಿ, ಇದೇ ದಡ್ಡತನ.

ನಮ್ಮೂರಿನ ನದೀ ದಂಡೀ, ನಮ್ಮ ಹೊಲಾನೇ, ಆಗಿದ್ದರೂ, ಬೇರೇ ಊರಿನ ಯಾರರೇ, ನಮ್ಮ ಮಾವಿನ ಗಿಡದ ಕೆಳಗ ಊಟಕ್ಕಂತ ಬಂದಿದ್ದರ, ಅವರನ್ನ ಎಬ್ಬಿಸಿ, ಬ್ಯಾರೇ ಕಡೀ ಕಳಿಸೋದು ಧರ್ಮ ಅಲ್ಲ. ಅದಕ್ಕಂತನ, ಆಳು ಮಗಾ, ಹೆಸರು ಹೆಂಗದ ನೋಡರೀ, ಮನೀ ಆಳು ಅಂವಾ, ಆದರ ನನ್ನ ಮಗಾ ಇದ್ದಂಗ ಅನ್ನೂದು, ಅದಕ್ಕೇ ಆಳು ಮಗಾ, ಅಂವಾ ಮೊದಲೇ ಹೊಲಕ್ಕ ಹೋಗಿ, ನದೀ ನೀರು ಹತ್ತಿರಿರಬೇಕು, ಗಿಡದ ನೆರಳು ಜಾಸ್ತಿ ಇರಬೇಕು, ಕೂತು ಊಟ ಮಾಡಲಿಕ್ಕೆ ಛೊಲೋ ಇರಬೇಕು ಹಿಂಗ, ಜಾಗಾ ಹಿಡದಿರತಿದ್ದ.

ಸಂಕ್ರಮಣ ಹಬ್ಬಕ್ಕ, ಭಾಳ ವಿಶೇಷ ಸಿಹಿ ಊಟಗಳೇನೂ ಇರೋದಿಲ್ಲ. ದಿನಾ ಮಾಡೋ ಭಕ್ಕರೀ ಪಲ್ಯನೂ ಇರತದ. ಅದ ನಮಗ ಭಾಳ ಮುಖ್ಯ. ಅದಕ್ಕ ಸಾಥೀ, ಎದುರಿಗಿನ ಮನೀ ಕಾಕು, ಹಿತ್ತಲದಾಗ ಕಚ್ಚಾ ಟೊಮೆಟೊ ಇದ್ದವು ಚಟ್ನಿ ಮಾಡಿದೆ, ಹಿಂದಿನ ಮನಿ ಮಾಮಿ ಹೊಲದಿಂದ ಮೆಂಥೆ, ಮೂಲಂಗಿ,ಸೊಪ್ಪ ತಂದಿದ್ದೆ ಅಂತ ಪಚಡಿ, ಮತ್ತೊಬ್ಬರು ಶೇಂಗಾ ಚಟ್ನಿಪುಡಿ, ಹಿಂಗ ರಂಜಕ, ಕರಿಂಡಿ, ಜುಣಕದ ವಡಿ, ಉದುರ ಬ್ಯಾಳಿ, ಮುದ್ದಿ ಪಲ್ಯ, ಹೆಸರು, ಅಲಸಂದಿ, ಕಡಲಿ ಹಿಂಗ ಕಾಳಿನ ಉಸಳಿ, ಬದನೀಕಾಯಿ, ಹೀರೀಕಾಯಿ ಮತ್ತ ಮ್ಯಾಲೆ ಹುಳಿ, ಇಷ್ಟು ಸಾಧನಿ ಜೊತೀಗೆ ಸಜ್ಜೀ ಭಕ್ಕರೀ, ಎಳ್ಳ ಹಚ್ಚಿದ ಭಕ್ಕರೀ, ಕಟೀ ಕಟೀ ಭಕ್ಕರೀ, ಮೆತ್ತನೀ ಪದರ ಪದರ ಚಪಾತಿ. ಯಾವದನ್ನೂ ಬಿಡಲಿಕ್ಕೆ ಮನಸಾಗೂದಿಲ್ಲ. ಮ್ಯಾಲ ಮೊಸರು, ಕಾದ ಎಣ್ನೀ ಚಟ್ಣೀಗೆ ಬೇಕ ಅಂತ ಕೇಳತಾರ. ಭಕ್ಕರೀ ಮ್ಯಾಲ ತಾಜಾ ಬೆಣ್ಣಿ ಹಾಕತಾರ. ಇನ್ನೇನು ಹೇಳಬೇಕು. ಅದಕ್ಕಂತನ, ನಮ್ಮ ಆನಂದಕಂದರು,

ನಂದನ ವನ ಪಾರಿಜಾತ | ಬಂದು ಭೂಮಿಗಿಳಿದೈತೆವ್ವಾ |
ಮುಂದ ಹಿಂದ ಮ್ಯಾಲಕ ಕೆಳಗ | ಚಂದ ಗಂಧ ಹರಡೈತವ್ವಾ ||

“ಇಷ್ಟೆಲ್ಲಾ ಬಡಿಸೋವಾಗ, ಏನೂ ಎಲೀ ಒಳಗ ಛಲ್ಲಬಾರದೂ, ಎಲ್ಲಾ ಬಿಡದೇ ತಿನಬೇಕೂ” ಅಂತಿದ್ದರು. ಅಲ್ಲದ ಸುಬ್ಬೂ ಮಾಮಾ, “ಎಲೀ ಒಳಗ ಬಡಿಸಿದ್ದೇನದ, ಅದನ್ನ, ಕಣ್ಣ ಮುಚಗೊಂಡು ಒಂದನ್ನೂ ಮರೀದೇ ಹೇಳಿದವರಿಗೆ, ಒಂದು ಬಹುಮಾನ” ಅಂತ ಸಾರತಿದ್ದ. ನಾವೂ ಬಹುಮಾನದಾಸೆಗೆ, ತಿನ್ನೂದ ಬಿಟ್ಟು, ಎಲ್ಲಾ ನೆನಪಿಟ್ಟುಕೊಂಡು, ಹೇಳಲಿಕ್ಕೆ ಪ್ರಯತ್ನಾ ಮಾಡತಿದ್ದಿವಿ, ಆದರ, ಬಹುಮಾನದ ಹತ್ತಿರ ಹತ್ತಿರವೂ ಹೋಗುತ್ತಿರಲಿಲ್ಲ. ಯಾವಾಗೋ ಒಮ್ಮೆ ಎಲ್ಲಾ ಹೇಳಿದ ಸಾಧ್ಯತೆಗಳೂ ಇದ್ದವು. ಅವು ಭಾಳ ಕಡಿಮಿ. ಅಷ್ಟೆಲ್ಲಾ ಕಷ್ಟಾಪಟ್ಟು ಹೇಳಿದ್ದಕ್ಕ, ಮಾಮಾ, “ಶಭಾಷ್, ಇಕೀಗೆ ಇನ್ನೊಂದು ಭಕ್ರೀ ಒಗೀ” ಅಂತಿದ್ದ, ಅದೇ ಬಹುಮಾನ ಅಂತ. ನಂಗ ಬಹುಮಾನ ಬ್ಯಾಡಾ ಅಂತ ಕೂಗತಿದ್ದವಿ. ಈ ಗದ್ದಲಾ ಕೇಳಿ, ಆಜೂ ಬಾಜೂ ಕೂತವರು ನಮ್ಮನ್ನೇ ನೋಡತಿದ್ದರು. ಊಟಕ್ಕ, ಶೇಂಗಾ ಹೋಳಿಗಿ, ಎಳ್ಳಿನ ಉಂಡಿ, ಎಳ್ಳು ಶೇಂಗಾದ ಚಿಕ್ಕಿ, ಕರ್ಚಿಕಾಯಿ, ಇಂತಾ ಸಿಹಿ ಅಡಗಿ, ಮತ್ತ ಬೆಣ್ಣಿ ಬುತ್ತಿ, ಚಿತ್ರಾನ್ನ ಇವು ಸಂಕ್ರಮಣದ ಊಟದ ಅಂಗಡೀಯೊಳಗ, ಮಾರಾಟಾಗೋದು ಭಾಳ ಕಡಿಮಿ.

ಊಟಾದ ಮ್ಯಾಲೆ, ಆಟ ಆಡಲಿಕ್ಕೆ ರಿಂಗ್, ವಾಲಿಬಾಲ್, ಚಿಣಿ-ಫಣಿ ಹೀಂಗ, ಏನರ ಇರುತಿದ್ದವು. ಅವತ್ತಿನ ಹುಕಿ. ಕೆಲವೊಮ್ಮೆ ಗಂಡಸರು, ಹೆಂಗಸರು ಎರಡು ತಂಡವಾಗಿ, ಹಾಡಿನ ಬಂಡಿ ಕಟ್ಟೋದು. ಇದು ಅತ್ಯಂತ ಮನರಂಜನೀಯ. ಒಂದೂ ಹಾಡು ಬರದೇ ಇರೋರು, ಹಾಡದೇ ಇರೋ ಗಂಡಸರೂ ಹಾಡತಿದ್ದರು. ಕೆಲವೊಮ್ಮೆ ಹಾಡಿನ ಸಂದರ್ಭ, ಹಿಂದಿನ ನೆನಪಾಗಿ ನಗತಿದ್ದರು, ಕೆಲವೊಬ್ಬರು ರೇಗಸತಿದ್ದರು. ಆದರೂ ಒಬ್ಬರಿಗೊಬ್ಬರು ಹಾಡಿನ್ಯಾಗ ಮೋಸ ಮಾಡತಿದ್ದರು. ಹಾಡಿನ ಸಾಹಿತ್ಯ ಮರತು, ತಾವೇ ಏನಾರೆ ಸೇರಿಸಿ ಹಾಡತಿದ್ದರು. ಸುಳ್ಳೇ ಪಳ್ಳೇ ಈ ಹಾಡು ಆಗೇದ, ನಾನೇ ಹಾಡೇನಿ ಅಂತರೆ ವಾದಿಸತಿದ್ದರು, ಇಲ್ಲಾಂದರೆ, ಹಾಡಿದ ಹಾಡನ್ನೇ ಮತ್ತ ಮತ್ತ ಹಾಡತಿದ್ದರು. ಎಲ್ಲಾದಕಿಂತ ಮುಖ್ಯ ಅಂದರೆ, ಯಾವತ್ತೂ ಗಂಡನ ಜೊತೆ ಮಾತಾಡಿದ್ದನ್ನೇ ಕಾಣದಿದ್ದ ಹೆಂಗಸರು, ಅವತ್ತಿನ ಮಟ್ಟಿಗೆ, ನಾಚಿಕಿ ಬಿಟ್ಟು, ಯುದ್ಧಕ್ಕ ನಿಂತವರ ಹಂಗ ಗಂಡನ ಜೋಡಿ ವಾದಿಸತಿದ್ದರು. ನಮಗ, ಹಾಡಿನ ಬಂಡಿಕಿಂತಾ ಇದೇ ಮೋಜೆನಸತಿತ್ತು. ಕೆಲವೊಮ್ಮೆ ಈ ವಾದಿಸ್ಯಾಟ ಎಲ್ಲಿ ಖರೇವಂದರೂ ಜಗಳಕ್ಕ ಕಾರಣಾಗತದೋ ಹಂಗ ಹೆದರಿಕೆ ಹುಟ್ಟಸತಿತ್ತು. ಕೆಲವೊಂದು ಜಿದ್ದಿನ ಪ್ರಸಂಗದಿಂದ, ಮನಸು ಕೆಟ್ಟಿದ್ದೂ ಉಂಟು.
ಇಷ್ಟೆಲ್ಲಾ ಆದ ಮ್ಯಾಲೆ, ಮತ್ತ ಹಸಿವಿ ಅನ್ನೋರಿಗೆ ಇನ್ನೊಮ್ಮೆ ತಿನಲಿಕ್ಕೆ ಕೊಟ್ಟು, ಉಳಿದದ್ದನ್ನ ಚಂದಾಗಿ ಕಟ್ಟಿ, ಆಳ ಮಗನ ಮನೀಗೆ ಕಳಿಸಿ, ಮನೀಗೆ ಬಂದರ, ಸಂಜೀ ಆಗಿರತಿತ್ತು. ಆಗ, ಊರವರೆಲ್ಲಾ, ಹಿಂದಿನ ಮನಸ್ತಾಪದಿಂದ ದೂರ ಉಳಿದವರು, ಮಾತು ಬಿಟ್ಟವರು, ಕುಸುರೆಳ್ಳು ಹಂಚಿ, ಎಲ್ಲಾರೂ ಒಂದಾಗಿ, ಹಿಂದಿಂದ ಮರ್ತು, ಮುಂದಿನ ದಿನಗಳನ್ನು ಚಂದಾಗಿರಿಸು ಅಂತ ದೇವರಲ್ಲಿ ಬೇಡಿಕೊಂಡು, ಊರಾಗಿನ ಎಲ್ಲಾ ಹಿರಿಯರ ಆಶೀರ್ವಾದ ಪಡೆದರ ಹಬ್ಬ ಸಂಪನ್ನ ಆದಂಗ.

ವೃಂದಾ ಸಂಗಮ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x