ಕನ್ನಡ ಸಾರಸ್ವತ ಲೋಕದ ಕೇಂದ್ರಬಿಂದುವಾಗಿ ಸಾಹಿತ್ಯದ ವಿವಿಧ ಜ್ಞಾನಶಿಸ್ತುಗಳನ್ನು ಬೆಳಗಿಸಿದ ಹಣತೆ ಜಿ.ಎಸ್.ಶಿವರುದ್ರಪ್ಪನವರು. 1926 ಫೆಬ್ರವರಿ 7ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಜನಿಸಿದರು. ತಂದೆ ಶಾಂತವೀರಪ್ಪˌತಾಯಿ ವೀರಮ್ಮ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1949ರಲ್ಲಿ ಬಿ.ಎ ಅನರ್ಸ್ ಪದವಿˌ1953ರಲ್ಲಿ ಎಂ.ಎ ಪದವಿ ಪಡೆದರು. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸುವರ್ಣ ಪದಕಗಳನ್ನು ಪಡೆದಿರುವರು.1960ರಲ್ಲಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ ಎಂಬ ಸಂಶೋಧನಾ ಪ್ರೌಢಪ್ರಬಂಧ ಮಂಡಿಸಿ ಪಿಎಚ್ ಡಿ ಡಾಕ್ಟರೇಟ್ ಪದವಿ ಪಡೆದರು.
ವ್ರತ್ತಿಜೀವನವನ್ನು 1949ರಲ್ಲಿ ಆರಂಭಿಸಿದ ಇವರು 1949ರಿಂದ 1963ರ ವರೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿˌ1966ರಿಂದ 1966ರ ವರೆಗೆ ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. 1966 ರಿಂದ 1970ರ ವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ರೀಡರ್ ಆಗಿದ್ದರು. 1970 ರಿಂದ 1986ರ ವರೆಗೆ ಅದೇ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಧ್ಯಾಪಕರು ಹಾಗೂ ನಿರ್ದೇಶಕರು ಆಗಿದ್ದರು. 1987 ರಿಂದ 1990 ರ ಅವಧಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
ಇವರ ಕವನ ಸಂಕಲನಗಳು ಸಮಗಾನˌಚೆಲುವು ಒಲವುˌದೇವಶಿಲ್ಪˌತೀರ್ಥವಾಣಿˌಕಾರ್ತೀಕˌದೀಪದ ಹೆಜ್ಜೆˌಅನಾವರಣˌತೆರೆದ ದಾರಿˌಗೋಡೆˌಕಾಡಿನ ಕತ್ತಲಲ್ಲಿˌಪ್ರೀತಿ ಇಲ್ಲದ ಮೇಲೆˌಚಕ್ರಗತಿˌವ್ಯಕ್ತಮಧ್ಯ ಸಂಗ್ರಹಗಳು ಪ್ರಕಟವಾಗಿ ಸಮಗ್ರ ಕಾವ್ಯ ಮುದ್ರಣಗಳನ್ನು ಕಂಡಿವೆ. ಈ ಕವಿಯ ಕಾವ್ಯ ಸಮಗ್ರ ಮನಸ್ಥಿತಿಯ ಆಶಯವುಳ್ಳ ಸಾಧನೆಯಾಗಿದೆ. “ಹೊಸಗನ್ನಡ ಸಾಹಿತ್ರದಲ್ಲಿ ಜಿ.ಎಸ್.ಶಿವರುದ್ರಪ್ಪನವರದು ವಿಶಿಷ್ಟವಾದ ವ್ಯಕ್ತಿತ್ವ. ಅವರು ಪ್ರಖ್ಯಾತ ಕವಿಗಳೂ ವಿಮರ್ಶಕರೂ ಆಗಿದ್ದಾರೆ. ಕಾವ್ಯ ಮತ್ತು ವಿಮರ್ಶನ ಕ್ರಿಯೆಗಳೆರಡೂ ಒಂದೇ ಪ್ರತಿಭೆಯ ಮೂಲದಿಂದ ಪ್ರಚುರಗೊಂಡಿರುವುದು ಅವರ ವ್ಯಕ್ತಿತ್ವದ ವಿಶಿಷ್ಟತೆಯಾಗಿದೆ” ಕುವೆಂಪು ಅವರ ಕಾವ್ಯದಿಂದ ಪ್ರಭಾವಿತರಾದ ಕವಿ ಜಿ.ಎಸ್.ಶಿವರುದ್ರಪ್ಪನವರು ಮಾನವೀಯ ದ್ರಷ್ಟಿಕೋನವಿರುವ ಸ್ರಜನಶೀಲ ವ್ಯಕ್ತಿತ್ವದಿಂದ ಕೂಡಿದವರು.1951 ರಿಂದ ಕಾವ್ಯ ಸ್ರಜನಶೀಲ ಸಾಹಿತ್ಯ ರಚನೆಯ ಜೊತೆಗೆ ಸಾಹಿತ್ಯ ವಿಮರ್ಶೆಯ ಪರಿಪಾಠಗಳನ್ನು ಬೆಳೆಸಿದರು. ಜೀವನ ಪ್ರೀತಿಯ ರಥವ ಎಳೆದು ತಂದರು. ವಿಶಾಲಭಾವ ಪಥದಲ್ಲಿ ಸಂಚರಿಸುವ ಈ ಕವಿಯು ನವೋದಯˌನವ್ಯˌನವ್ಯೋತ್ತರˌದಲಿತ-ಬಂಡಾಯ ಕಾಲದ ಕಾವ್ಯಮಾರ್ಗದಲ್ಲಿ ಸಾರವತ್ತಾದ ಕಾವ್ಯ ಕ್ರಷಿ ಮಾಡುತ್ತ ˌತನ್ನ ಪೀಳಿಗೆಯ ಯುವ ಕಾವ್ಯ ಪರಂಪರೆಯನ್ನು ಬೆಳೆಸಿದರು. ಕಾವ್ಯದ ಜೊತೆಜೊತೆಗೆ ಆಧುನಿಕ ಸಾಹಿತ್ಯವನ್ನು ಗ್ರಹಿಸಬೇಕಾದ ಕಾವ್ಯಮೀಮಾಂಸೆˌಕಾವ್ಯ ವಿಮರ್ಶೆಯನ್ನು ಬೆಳೆಸಿದರು. ಕಾಲಮಾನದ ಜೀವನಕ್ಕೆ ಪ್ರತಿಸ್ಪಂದಿಸುತ್ತಾ ಕನ್ನಡ ಕಾವ್ಯಧಾರೆಯ ಹರಿಸಿದರು. ಜಿ.ಎಸ್.ಶಿವರುದ್ರಪ್ಪನವರ ಸಮಗ್ರ ಕಾವ್ಯವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿ ಅವುಗಳ ನೆಲೆಬೆಲೆˌಸಾಧನೆˌಇತಿಮಿತಿˌವಿವೇಚನೆ ಮಾಡಿ ಮೌಲ್ಯ ಪ್ರತಿಪಾದನೆ ಮಾಡುವುದು ಕಷ್ಟವಾದರೂ ಅದೊಂದು ಘನತೆಯ ಕೆಲಸ. ರಾಷ್ಟ್ರಕವಿಯನ್ನು ಗೌವರವಿಸುವ ರೀತಿಯೇ ಸರಿ ಎನ್ನಬಹುದು.
“From time to time every hundred years or so,it is desirable that some critics shall appear to review the past of our literature and set the poets and the poems in a new order,this task is nat one of revaluation but of readjustment” (Selected prose by T.S Eliot) ಎಂದು ಬರಗೂರು ರಾಮಚಂದ್ರಪ್ಪನವರು ಶ್ರಮ ,ಸಂಸ್ಕ್ರತಿ ಮತ್ತು ಸ್ರಜನಶೀಲತೆ ಗ್ರಂಥದಲ್ಲಿ ಪುನರ್ ಮೌಲ್ಯೀಕರಣ ಪ್ರಕ್ರಿಯೆ ಎಂಬ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಮಾಡಿದ್ದಾರೆ. ಕಾಲದಿಂದ ಕಾಲಕ್ಕೆ ಒಂದು ಶತಮಾನಕ್ಕೆ ಒಮ್ಮೆಯಾದರೂ ಹಿಂದಿನ ಸಾಹಿತ್ಯ ಅಭ್ಯಾಸಿಸಿ ಪರಿಶೀಲಿಸಿ ಕವಿ ಕ್ರತಿಗಳ ನೆಲೆ ಬೆಲೆಯನ್ನು ಹೊಸಕ್ರಮದಲ್ಲಿ ನೆಲೆಗೊಳಿಸುವ ವಿಮರ್ಶಕ ಕಾಣಿಸಿಕೊಳ್ಳುತ್ತಾನೆ. ಈ ಹೊಸ ಕ್ರಮವು ಕ್ರಾಂತಿಯಲ್ಲˌಇದೊಂದು ಬಗೆಯ ಮೌಲ್ಯ ನಿರ್ಣಯದ ಜಿಜ್ಞಾಸೆ ಎಂದು ಹೇಳಬಹುದು. “ವಿಮರ್ಶೆಯ ಪುನರ್ ಮೌಲ್ಯಮಾಪನದ ಅಗತ್ಯ ಇದ್ದೇ ಇದೆ. ಕಾಲವು ಬದಲಾದಂತೆ ಮಾನವನ ಧೋರಣೆಗಳನ್ನು ಅನುಸರಿಸಿ ಮೌಲ್ಯವೂ ಮಾರ್ಪಡುತ್ತದೆ.” ಕಾವ್ಯವು ನಿತ್ಯ ನಿರಂತರ ನೂತನವಾಗಿರುವ ಮೌಲ್ಯವನ್ನು ಪ್ರತಿಪಾದಿಸುತ್ತದೆ. ಜನಮನವನ್ನು ತಲುಪುತ್ತದೆ. ಈ ಮೌಲ್ಯಗಳು ಸರ್ವಕಾಲಿಕ ಮಾನವೀಯ ಆದರ್ಶ ಧ್ಯೇಯಗಳಿಂದ ಕೂಡಿ ಸಾರಸ್ವತ ಲೋಕವನ್ನು ಬೆಳಗುತ್ತಿವೆ. ನಾಡು, ನುಡಿˌದೇಶಪ್ರೇಮˌಪ್ರಕ್ರತಿˌಬದುಕುˌಒಲವುˌಸಮಾಜ ಹೀಗೆ ಹತ್ತು ಹಲವಾರು ನೆಲೆಗಳಲ್ಲಿ ಸಾಹಿತ್ಯ ಸಂಚರಿಸುತ್ತದೆ. ಜಿ.ಎಸ್.ಶಿವರುದ್ರಪ್ಪನವರ ಕಾವ್ಯ “ಸಮಕಾಲೀನ ಕನ್ನಡ ಕಾವ್ಯವನ್ನು ಚರ್ಚಿಸುವ ಲೇಖನಗಳಲ್ಲಿ ಬಹುಮಟ್ಟಿಗೆ ಜಿ.ಎಸ್.ಎಸ್ ಅವರನ್ನು ‘ಸಮನ್ವಯ’ ಮಾರ್ಗದ ಕವಿ ಎನ್ನುವ ಪರಿಪಾಠ ತೀರಾ ಈಚಿನವರೆಗೂ ಬಳಕೆಯಲ್ಲಿತ್ತು.
ಇದು ಎಷ್ಟರ ಮಟ್ಟಿಗೆ ರೂಢಿಗೆ ಬಿದ್ದು ಬಿಟ್ಟಿದೆ ಎಂದರೆ ಯಾರು ಇದನ್ನು ಮೊದಲು ಮಾಡಿದರು.ಅವರ ಅಭಿಪ್ರಾಯವೇನಿತ್ತು ಎಂಬುದು ಈಗ ಮುಖ್ಯವಾಗಿಲ್ಲ. ಚಲಾವಣೆಯ ನಾಣ್ಯದಂತೆ ಕೈ ಬದಲಾಯಿಸುತ್ತಾ ನಡೆದಿದೆ. ನವೋದಯ ಹಾಗೂ ನವ್ಯ ಮಾರ್ಗಗಳ ಲಕ್ಷಣಗಳನ್ನು ಒಗ್ಗೂಡಿಸಲು ಯತ್ನಿಸಿದವರು ಎಂಬ ಸರಳ ಅರ್ಥದಲ್ಲಿ ‘ಸಮನ್ವಯ’ ಕವಿ ಎಂಬ ಮಾತು ಚಾಲ್ತಿ ಪಡೆದಿದೆಯಷ್ಟೇ .ಹೀಗೆ ಎರಡು ಎರಡು ಕಾವ್ಯ ಮಾರ್ಗಗಳ ಲಕ್ಷಣಗಳನ್ನೂ ಒಟ್ಟಾಗಿಸುವುದೆಂದರೇನು? ಅದರ ಸಾಧ್ಯತೆಗಳೆಷ್ಟು? ಯಾವ ಕವಿತೆಗಳಲ್ಲಿ ಈ ಸಂಗತಿ ಗಾಢವಾಗಿ ಕಾಣಬಲ್ಲುದು? ಇಂಥ ಯತ್ನದ ಸಾಫಲ್ಯವೆಷ್ಟು? ಎಂಬಿವೇ ಪ್ರಶ್ನೆಗಳು ಇಂದಿನ ಕಾವ್ಯಭ್ಯಾಸಿಗಳ ಎದುರು ನಿಲ್ಲುತ್ತವೆ.” ಎಂದು ಸಮಗ್ರ ಕಾವ್ಯಕ್ಕೆ ಮುನ್ನುಡಿ ಬರೆದ ಡಾ.ಕೆ.ವಿ.ನಾರಾಯಣ ತಿಳಿಸಿದ್ದಾರೆ. ಮುಖ್ಯವಾಗಿ ಕಾವ್ಯ ಎಂದರೇನು? ಎಂಬ ಪ್ರಶ್ನೆಯನ್ನು ವಿವೇಚಿಸಿಕೊಳ್ಳಬೇಕು.”ಕಾವ್ಯವೇನ್ನುವದು ನಿತ್ಯ ನಿರಂತರˌನಿತ್ಯ ನೂತನವಾದುದುˌಕಾವ್ಯವು ಯಾವುದೇ ಕ್ರತಕ ಕಟ್ಟುಪಾಡಿಗೆ ಒಳಗಾಗಿ ಉಳಿಯಬಾರದು. ಕವಿಗೆ ತನ್ನ ದನಿ ಎತ್ತರಿಸಲುˌಹಾಡಲು ಸ್ವಾತಂತ್ರ್ಯವಿರಬೇಕು.” ಅದು ಹರಿಯಲು ಯಾವ ಭೂಗೋಳ ಶಾಸ್ತ್ರದ ಅರಿವಿಗೆ ಒಳಪಡಬೇಕಿಲ್ಲ. ಅದು ತನ್ನ ಮಾರ್ಗದಲ್ಲಿ ಪ್ರವಾಹೋಪಾದಿಯಲ್ಲಿ ಹರಿದು ಕಡಲ ಸೇರುತ್ತದೆ. ಎಂದು ಕಾವ್ಯಮಾರ್ಗ ಕವಿತೆಯಲ್ಲಿ ಜಿ.ಎಸ್.ಎಸ್ ಹೇಳಿದ್ದಾರೆ. “ಈ ಪ್ರಶ್ನೆ ಪೌರತ್ಯˌಪಾಶ್ಚಾತ್ಯ ಮೀಮಾಂಸೆಗಳೆರಡರಲ್ಲೂ ಓದುಗರು ದಿಗ್ಭ್ರಮೆಗೊಳ್ಳುವಷ್ಟು ಚರ್ಚಿತವಾಗಿದೆ. ಆದರೂ ಅದರ ಉತ್ತರವನ್ನು ಏಕಸೂತ್ರದ ಉಕ್ಕಿನ ಪಂಜರದಲ್ಲಿ ಹಿಡಿದಿಡಲು ಸಾಧ್ಯವಾಗಿಲ್ಲ.ಏಕೆಂದರೆ ಕಾವ್ಯವೆನ್ನುವುದನ್ನು ಬುದ್ಧಿಶಕ್ತಿಯ ಶಸ್ತ್ರಕ್ರಿಯೆಗಾಗಲೀˌತರ್ಕಶಕ್ತಿಯ ಶುಷ್ಕ ವಿಭಜನೆಗಾಗಲೀ ಒಳಪಡಿಸಿ ಅದರ ಕೊನೆಯ ಸತ್ಯವನ್ನು ಕಂಡುಕೊಳ್ಳುವುದು ಅಸಾಧ್ಯ. ಮುಖ್ಯವಾಗಿ ಕಾವ್ಯ “ಹ್ರದಯ ಸಂವೇದನ ಸಾಕ್ಷಿಕ”ವಾದದು.
ಇಲ್ಲಿ ಕವಿಯ ವಿಶಿಷ್ಟತೆಯನ್ನು ಗುರ್ತಿಸುವಾಗ “ಕವಿಯ ವ್ಯಕ್ತಿತ್ವ ಅನೇಕ ಶ್ರೇಣಿಗಳಲ್ಲಿ ಸಂಚರಿಸುತ್ತದೆ. ವಾದ್ಯವೊಂದರ ವಿವಿಧ ಸ್ವರ ಸ್ಥಾನಗಳ ಮೇಲಾಡುವ ವಾದಕನ ಬೆರಳುಗಳಂತೆ ಅವನ ಈ ಸಂಚಾರ ಶ್ರೇಣಿಯಲ್ಲಿ ಈ ಲೌಕಕಿವೂ ಅಂಥದೊಂದು ಸ್ವರಸ್ಥಾನವಾಗಬಹುದು. ಅವನು ಅಲ್ಲಿ ನಿಂತು ಒಮ್ಮೆ ಆಧ್ಯಾತ್ಮಿಕವಾದˌಒಮ್ಮೆ ಪ್ರೇಮದˌಒಮ್ಮೆ ಸಾಮಾಜಿಕದ ವಿವಿಧ ಸ್ತರಗಳನ್ನು ಮುಟ್ಟಿ ಮುಟ್ಟಿ ಬರುತ್ತಾನೆ. ಆಧ್ಯಾತ್ಮದ ಮಜಲಿಗೇರಿದಾಗˌ ಆ ಅನುಭವದ ಸ್ವರಸ್ಥಾನದಲ್ಲಿ ನಿಂತಾಗ ಅವನು ಆಧ್ಯಾತ್ಮ ಕವಿ; ಪ್ರೇಮದ ಮಜಲಿನಲ್ಲಿ ಪ್ರೇಮಕವಿ; ಹೀಗೆ ಆಯಾ ಅನುಭವವನ್ನು ಮುಟ್ಟಿ ಮಿಡಿದಾಗ ಆಯಾ ಸ್ತರದ ಕವಿ. ಆದರೆ ಅವನ ಒಲವು ಯಾವ ಒಂದು ನಿರ್ದಿಷ್ಟ ಶ್ರೇಣಿಯ ಬಗೆಗಿದೆಯೋˌ ಯಾವುದನ್ನು ಅವನು ತನ್ನ ಜೀವಜೀವಾಳ ಮಾಡಿಕೊಂಡಿದ್ದಾನೆಯೋˌಅದರ ಮೇಲೆ ನಾವು ಆತನ ವಿಶಿಷ್ಟತೆಯನ್ನು ಗುರುತಿಸುತ್ತೇವೆ.” ಎಂದು ಜಿ.ಎಸ್.ಎಸ್ ಹೇಳುತ್ತಾರೆ. “ಕವಿ ಸ್ವರ ಸತುಷ್ಟˌಅವನು ಯಾವ ರಸಗಳನ್ನು ಅನುಭವಿಸಿ ಆನಂದಿಸುತ್ತಾನೋ ಅವುಗಳನ್ನು ವಿಶ್ವದಲ್ಲಿ ದರ್ಶಿಸುತ್ತಾನೆ. ‘ಕಲ್ಪನಾ ಪ್ರತ್ಯಕ್ಷೀಕರಣ ಶಕ್ತಿ’ ಅವನಲ್ಲಿ ಇತರರಿಗಿಂತಲೂ ಅಧಿಕವಾಗಿರುತ್ತದೆ…… ನಮ್ಮ ಮೊದಲ ಅನುಭವ ‘ನಾನು’ ಎಂಬುದು ಸ್ಥೂಲ ಜಗತ್ತು. ನಮ್ಮ ಮೊದಲ ಅನುಭವದಲ್ಲಿ ನಾವು ನಮ್ಮ ಅನುಭವಗಳನ್ನೆಲ್ಲ ಜೋಡಿಸಿ ಲೋಕವನ್ನು ಮಾಡಿಕೊಳ್ಳುತ್ತೇವೆ. ಲೋಕ ಎಂಬುದು ‘ಕ್ರಮ ಬದ್ಧವಾದ’ ಅನುಭವಗಳ ಸಮಷ್ಟಿಯಾಗಿದೆ.” ಎನ್ನುವರು ಕವಿ ಜಿ.ಎಸ್.ಎಸ್.
“ಹಾಡು ಹಳೆಯದಾದರೇನು
ಭಾವ ನವನವೀನ ಎದೆಯ ಭಾವ ಹೊಮ್ಮುವುದಕ್ಕೆ
ಭಾಷೆ ಒಂದು ಸಾಧನ”…….
“ಹಳೆಯ ಹಾಡಿನಿಂದ ಹೊಸತು
ಜೀವನವನೆ ಕಟ್ಟುವೆ”
ಹಮ್ಮು ಬಿಮ್ಮು ಒಂದು ಇಲ್ಲ
ಹಾಡು ಹ್ರದಯ ತೆರೆದಿದೆ”
ಎಂದು ಕವಿ ಜಿ.ಎಸ್.ಎಸ್ ತಮ್ಮ ಕಾವ್ಯ ಸ್ರಜನಶೀಲ ಕ್ರಿಯೆಯ ಬಗ್ಗೆ ಹೇಳಿದ್ದಾರೆ.
“ನಾನು ಬರೆಯುತ್ತೇನೆˌಸುಮ್ಮನಿರಲಾರದಕ್ಕೆ
ನನ್ನ ಸಂವೇದನೆ ಕ್ರಿಯೆˌಪ್ರತಿಕ್ರಿಯೆಗಳನ್ನು ದಾಖಲಿಸುವದಕ್ಕೆ
ನಿಂತ ನೀರಾಗದೆ ಮುಂದಕ್ಕೆ ಹರಿಯುವದಕ್ಕೆ
ಎಲ್ಲರ ಜತೆ ಬೆರೆಯುವದಕ್ಕೆ
ನಾನು ಬರೆಯುತ್ತೇನೆ
ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ
ಮತ್ತೆ ಕಾಣಿಸುವುದಕ್ಕೆ !
ನಿಮ್ಮೊಂದಿಗೆ ಸಂವಾದಿಸುವುದಕ್ಕೆ
ನಾನು ಬರೆಯುತ್ತೇನೆ
ಖುಷಿಗೆˌನೋವಿಗೆˌರೊಚ್ಚಿಗೆ
ಮತ್ತು ಹುಚ್ಚಿಗೆ ಅಥವಾ ನಂದಿಸಲಾರದ ಕಿಚ್ಚಿಗೆ”
ಎಂದು ತಮ್ಮ ಕಾವ್ಯ ನಿರ್ಮಿತಿಯ ಹಿನ್ನೆಲೆಯ ಉದ್ದೇಶಗಳನ್ನು ತಿಳಿಸಿದ್ದಾರೆ. ನವೋದಯದ ಪರಂಪರೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಕವಿ ಜಿ.ಎಸ್.ಎಸ್ ತಮ್ಮ ಗುರುಗಳಾದ ಕುವೆಂಪು ಅವರನ್ನು ನೆನೆಯುವುದು ಸಹ ಒಂದು ಅವೌಚಿತ್ಯಪೂರ್ಣ ಕ್ರತಜ್ಞತೆಯ ಭಾವವಾಗಿದೆ. ಗುರುವಿನಿಂದ ತಿಳಿದುಕೊಂಡಿದ್ದುˌಪಡೆದುಕೊಂಡಿದ್ದು ಬಹಳಷ್ಟು ಇದೆ. ಇದನ್ನೆ ನಾವು ಗುರುಶಿಷ್ಯ ಪರಂಪರೆ ಎನ್ನುವುದು.
“ನಿಶ್ಯಬ್ದದಲ್ಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ ಗುಟ್ಟುಗಳ
ನೀವು ಕಲಿಸಿದಿರಿ ನನಗೆ ತಲೆಯೆತ್ತಿ ನಿಲ್ಲುವುದನ್ನು
ಕಿರುಕುಳಗಳಿಗೆ ಜಗ್ಗದೇ
ನಿರ್ಭಯವಾಗಿ ನಡೆಯುವುದನ್ನು
ಸದ್ದಿರದೇ ಬದುಕುವುದನ್ನು
ಎಷ್ಟೊಂದು ಕೀಲಿ ಕೈಗಳನ್ನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ : ನಾನರಿಯದನೇಕ
ಬಾಗಿಲುಗಳನ್ನು ತೆರೆದಿದ್ದೀರಿ ನನ್ನೊಳಗೆ
ಕಟ್ಟಿ ಹರಸಿದ್ದೀರಿ ಕನ್ನಡ ಕಂಕಣವನ್ನು ಕೈಗೆ
ಸದ್ದುಗದ್ಧಲದ ತುತ್ತೂರಿ ದನಿಗಳಾಚೆಗೆ ನಿಂತು
ನಿಶ್ಯಬ್ದದಲ್ಲಿ ನೆನೆಯುತ್ತೇನೆ ಗೌರವದಿಂದ
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ ನನ್ನ ಸುತ್ತ
ಪಟ ಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ” ಎಂದು ಕವಿಗುರು ಕುವೆಂಪು ಅವರನ್ನು ಅತಿ ವಿನಮ್ರವಾಗಿ ನೆನೆಯುತ್ತಾರೆ. ಇದು ಪೂರ್ವ ಕವಿಗಳ ಪರಂಪರೆಯೊಂದಿಗೆ ˌಓದಿನೊಂದಿಗೆ ಹೊಂದಿದ್ದ ಅವಿನಾಭಾವ ಸಂಬಂಧವನ್ನು ಹೇಳುತ್ತದೆ. “ಹಳಗನ್ನಡ ಕಾವ್ಯ ಪರಂಪರೆಯೊಂದಿಗೆ ಕನ್ನಡ ನವೋದಯವು ರೂಪಿಸಿಕೊಂಡ ಸಂಬಂಧ. ಈ ಸಂಬಂಧದಲ್ಲಿ ಒಂದು ಬಗೆಯ ದ್ವೈವಿಧ್ಯವನ್ನು (Duality)ಗುರುತಿಸಬಹುದು. ತನಗಿಂತ ಹಿಂದೆ ಇದ್ದ ಸಾಹಿತ್ಯಕ ಚಳುವಳಿಯ ಬಸಿರನ್ನು ಸೀಳುವುದರಿಂದಲೇ ಹೊಸ ಮಾರ್ಗವನ್ನು ಕಂಡುಕೊಳ್ಳುವ ಸರಳ ಪರಿಪಾಠ ಈ ಸನ್ನಿವೇಶಕ್ಕೆ ಅನ್ವಯವಾಗುವುದಿಲ್ಲ. ಈ ದ್ರಷ್ಟಿಯಲ್ಲಿ ನವ್ಯ ಮತ್ತು ಬಂಡಾಲ ಸಾಹಿತಿಗಳು ತಮ್ಮ ತಮ್ಮ ತಕ್ಷಣದ ಪೂರ್ವಜರನ್ನು ನಿರಾಕರಿಸುವ ಅವಕಾಶ ಪಡೆದಿರುತ್ತಿದ್ದರು. ಆದರೆ ಇಂಗ್ಲೀಷ್ ಮತ್ತು ಸಂಸ್ಕ್ರತ ಭಾಷೆಗಳ ಅಭಿಮಾನಿ ವಲಯದ ಆಕ್ರಮಣಶೀಲ ಧೋರಣೆಗಳ ವಿರುದ್ಧ ಹೋರಾಡಿˌ ಕನ್ನಡ ಸಂಸ್ಕ್ರತಿಯ ತನ್ನತನವನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಹೊಂದಿದ್ದ ನವೋದಯದ ಹಿರಿಯರು ಇಂತಹ ಸರಳೀಕ್ರತ ನಿಲುವನ್ನು ತಳೆಯುವಂತಿರಲಿಲ್ಲ. ಹಿಂದಿನ ಸಾಹಿತಿಗಳ ಸಾಧನೆಯ ಎತ್ತರಗಳನ್ನು ಪ್ರಶಂಸಿಸುತ್ತಿರುವಾಗಲೂˌಹೊಸ ಮಾರ್ಗವನ್ನು ಹಿಡಿಯುವುದರ ಸಮರ್ಥನೆ ಮಾಡುವ ಹೊಣೆಗಾರಿಕೆ ಅವರ ಮೇಲಿತ್ತು. ಇದನ್ನು ಅವರೆಲ್ಲರೂ ಸಾಕಷ್ಟು ಸಮರ್ಪಕವಾಗಿಯೇ ನಿರ್ವಹಿಸಿದರೆಂದು ಹೇಳಬೇಕು.” ಬಿ.ಎಂ.ಶ್ರೀˌಗೋವಿಂದ ಪೈˌಕುವೆಂಪುˌಬೇಂದ್ರೆˌಮಾಸ್ತಿ ˌಎಂ.ವಿ.ಸೀˌವೀಸಿˌಪಂಜೆ ಮೊದಲಾದವರು ಹಾಕಿಕೊಟ್ಟ ನವೋದಯ ಕಾವ್ಯದ ತಳಹದಿಲ ಹೊಳಹುಗಳು ಸಾಕಷ್ಟು ಕೆಲಸ ಮಾಡಿವೆ. ಶ್ರೀಯವರ ಇಂಗ್ಲೀಷಾ ಗೀತೆಗಳು ಪ್ರಕಟಣೆಯ ನಂತರ ಕನ್ನಡದಲ್ಲಿ ಆದ ಹೊಸ ಬದಲಾವಣೆ ನವೋದಯ ಕಾವ್ಯದ ಒಂದು ಹೆಬ್ಬಾಗಿಲನ್ನೆ ತೆರೆಯಿತು. ಆ ಕಾವ್ಯ ಪಡೆದುಕೊಂಡ ಸ್ವರೂಪˌನಿರ್ಮಿಸಿಕೊಂಡ ವಿವಿಧ ನೆಲೆಗಳು ಮುಂದಿನ ತಲೆಮಾರಿನ ಕವಿಗಳಿಗೆ ಆದರ್ಶ ಮತ್ತು ಸ್ಫೂರ್ತಿಯನ್ನು ನೀಡಿ ಹಾರೈಸಿತು ಎಂದರೆ ಬಹುಶಃ ತಪ್ಪಾಗುವುದಿಲ್ಲ. “ಕವಿಗೆ ಅಸಾಧಾರಣವಾದ ಶಕ್ತಿಬೇಕು.ಆದರೆ ಬರಿಯ ಭಾವನುಭವ ಸಾಲದು.ಅದಕ್ಕೆ ಬುದ್ಧಿಯ ಅಂಶವೂ ಸೇರಬೇಕು. ಆ ಭಾವಕ್ಕೆ ಸ್ಥಾಯಿತ್ವ ಲಭಿಸಬೇಕಾದರೆ ಬಹುಕಾಲ ತತ್ವ ಜಿಜ್ಞಾಸೆ ಮಾಡಿರಬೇಕು. ಜೀವನ ದ್ರಷ್ಟಿ ಸಿದ್ಧವಾಗಿರಬೇಕು.” ಎಂದು ಕವಿ ಜಿ.ಎಸ್.ಎಸ್ ಅಭಿಪ್ರಾಯ ಪಡುತ್ತಾರೆ.
“ಕಾವ್ಯವಿರುವುದು ಆಲಸ ಸಮಯದ ವಿನೋದಕ್ಕಲ್ಲ. ಜನ ಹ್ರದಯ ಚೇತನವನ್ನು ಎಚ್ಚರಿಸುವುದಕ್ಕೆˌ ಇಲ್ಲಿಯ ಉದ್ಧಾರ ಆಹ್ಲಾದದ ವಿನಾ ಅಲ್ಲ ˌಇಲ್ಲಿಯ ಉದ್ಧಾರಕ್ಕೂ ಆಹ್ಲಾದಕ್ಕೂ ಅವಿನಾಸಂಬಂಧವಿದೆ.” ಎಂದು ಕಾವ್ಯ ನಂಟು ಇರಬೇಕಾದ ಬಗೆಯನ್ನು ವಿವರಿಸುತ್ತಾರೆ. ಅಂತಿಮವಾಗಿ ಕಾವ್ಯ ಯಾವ ರಸಗಳನ್ನು ಸ್ಫುರಿಸಬೇಕು. ಆನಂದ ಮತ್ತು ಕಾವ್ಯ ರಸದ ಪ್ರಯೋಜನಗಳೆನೂ ಎನ್ನುವುದಕ್ಕೆ
“ಯಾವ ಕಾವ್ಯ ಬರಿಯ ರಸಾನುಭವವನ್ನು ಮಾತ್ರವಲ್ಲದೆ ಬ್ರಹ್ಮರಸವನ್ನು ಕೊಡುವುದೋ ಅದು ಚಿರಕಾವ್ಯ…….. ಈ ಬ್ರಹ್ಮರಸ ಪ್ರಯೋಜನವು ಎಷ್ಟೂ ಸವಿದರೂ ತೀರುವುದಿಲ್ಲ ಕಾವ್ಯ ರಸ ಪ್ರಯೋಜನದ ಕ್ರತಿ ಕೇವಲ ಒಂದೆರಡು ಸಲದ ಓದಿನಲ್ಲಿ ತ್ರಪ್ತಿ ಕೊಟ್ಟೀತು.” ಎಂಬುದು ಕಾವ್ಯದ ತುಷ್ಟಿಕರಣ ಪ್ರಕ್ರಿಯೆಯನ್ನು ಹೇಳುತ್ತದೆ.
“ಕೊತಕೊತನೆ ಕುದಿವ ಹುಡುಕಾಟಗಳ ನಡುವೆ
ಮಾತಿರದ ಮೌನದೊಳಗಸ್ತವ್ಯಸ್ತವಾಗಿ ತೊಳಲಿದ್ದ ಅಶರೀರ
ಭಾವ ನಿಧಾನಕ್ಕೆ ಪಾಕವಾಗುತ್ತ ಶಬ್ದಾರ್ಥ
ಸಂಪುಟದೊಳಗೆ ಹೊಳೆವ ಮುತ್ತಾಗಿ
ಮಿನುಗುತಿದೆಯಲ್ಲˌ ಯಾರ ಪ್ರಭಾವ?”
ಇಂತವುಗಳನ್ನು ಗುರುತಿಸುವ ಕಾವ್ಯದ ಪುನರ್ ಮೌಲ್ಯಮಾಪನದ ಅಗತ್ಯ ˌ ಕಾವ್ಯದ ನಿಜ ಮೌಲ್ಯಗಳುˌ ನವೋದಯ ಕವಿಗಳ ಪ್ರಭಾವ ಈ ಕವಿಯ ಮೇಲೆ ಬೀರಿದ ಪರಿಣಾಮˌಪಾಶ್ಚಾತ್ಯ ಮತ್ತು ಭಾರತೀಯ ಕಾವ್ಯ ಮೀಮಾಂಸೆ ಅವರಲ್ಲಿ ಮೂಡಿಸಿದ ಪ್ರಭಾವˌಅದಕ್ಕೆ ದೊರೆತ ಮನ್ನಣೆಯನ್ನು ಕಾವ್ಯರ್ಥ ಚಿಂತನ ಗ್ರಂಥದಲ್ಲಿ ಕಾಣಬಹುದು.
“ಕವಿತೆ ಬರೆಯುವುದು ಬಲು ಸುಲಭ:
ಈ ಕಾಲದಲ್ಲೂ ಇದರಿಂದ ಇಲ್ಲದೆ ಇಲ್ಲ
ಸಾಕಷ್ಟು ಲಾಭ”
ಎಂದು ಕವಿ ತಮ್ಮ ಕಾವ್ಯ ಪ್ರಯೋಜನದ ಲಾಭವನ್ನು ಹೇಳುತ್ತಾರೆ. ಹಾಗೇ ಅದರ ಇತಿಮಿತಿಯನ್ನು ಹೇಳುತ್ತಾರೆ.
“ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ”
ಕಾವ್ಯವಿರುವುದು ಸಹ್ರದಯ ಜನರಿಗೆ ಅಥವಾ ಅದನ್ನು ಎತ್ತಿಕೊಂಡು ಓದುವ ಓದುಗರಿಗೆ ಮಾತ್ರ. ಕಾವ್ಯ ಎಲ್ಲರನ್ನು ತಲುಪಬೇಕು ˌಹಿತವಾಗುವಂತೆ ಇರಬೇಕು ಎಂದೇನೂ ಇಲ್ಲ. ” ವಿಮರ್ಶೆಯ ಹೆಸರಿನಲ್ಲಿ ನಿಂದನೆಯೇ ವಿಜ್ರಂಭಿತವಾಗಿ ಕಲಾ ಕ್ರತಿಗಳನ್ನು ಬೆಲೆಕಟ್ಟುವ ಸರಿಯಾದ ಪರಿಪಾಠ ಮರೆಯಾಗಿ ˌನಮ್ಮದಲ್ಲದ ಅಳತೆಗೋಲುಗಳುˌನಮ್ಮದಲ್ಲದ ನುಡಿಗಳು ˌನಮ್ಮದಲ್ಲದ ದ್ರಷ್ಟಿಕೋನಗಳು ಇಣುಕಲು ಆರಂಭಿಸಿ ವಿಮರ್ಶೆಯ ಭಾಷೆಯೇ ಸಂಪೂರ್ಣ ಬದಲಾಗಿ ˌಭಾರತೀಯ ಸಹ್ರದಯ ತತ್ವವನ್ನು ಗಾಳಿಗೆ ತೂರಿ ಅತಿರೇಕವಾದಿಗಳ ಲೇಖನಿಗಳು ಹರಿತ ಖಡ್ಗಗಳಾಗಿˌತೆಗಳುವುದೇ ವಿಮರ್ಶಕನ ಉದ್ಯೋಗವೇನೋ ಎಂಬಂತೆ ಅಸಾಹಿತ್ಯಕ ಧೋರಣೆ ಆಚರಣೆಗೆ ಬಂದುˌ ಕನ್ನಡ ವಿಮರ್ಶಾ ಜಗತ್ತು ಪಾಶ್ಚಾತ್ಯ ಅಭಿಪ್ರಾಯಗಳ ತುಣುಕುಗಳ ಹಾಗೆ ಅಪರಾವತಾರವಾಗಿˌ ನಮ್ಮದಲ್ಲದ ಕೆಲವೇ ಕೆಲವು ಪಾರಿಭಾಷಿಕ ಪದಗಳು ಜಾರ್ಗನ್ಗಳಾಗಿ ವಿಮರ್ಶೆ ಸಹ್ರದಯನ ದ್ರಷ್ಟಿಯಿಂದ ಆಲರ್ಜಿಯಾಯಿತು.” ಇಂತಹ ಸನ್ನಿವೇಶ ಸಂದರ್ಭದಲ್ಲಿ ನಿಜವಾಗಲೂ ಇತರರಿಗೆ ಮಾದರಿ ಸಾಹಿತ್ಯ ಚಿಂತನೆಗಳನ್ನು ರೂಪಿಸುವ ಸಾಹಿತ್ಯದ ನಿಯಮಗಳು ಏನು? ಅವುಗಳನ್ನು ಸ್ರಷ್ಟಿಸುವ ಕವಿಯ ಸ್ರಜನಶೀಲ ಪಾತ್ರವೇನು? ಕವಿಯು ಸಹ ಒಬ್ಬ ಮನುಷ್ಯ. ಅವನ ವ್ಯಕ್ತಿತ್ವದ ವಿಕಾಸದೊಂದಿಗೆ ಒಳ್ಳೆಯ ಸಾಹಿತ್ಯದ ನೆಲೆ ಬೆಲೆ ಯಾವುದು? ಎಂಬುದು ಸಾಹಿತ್ಯ ಸಂಶೋಧನೆಯ ವಸ್ತುವಾಗಿದೆ. ಕವಿ ಕಾವ್ಯ ಮೌಲ್ಯಗಳ ಜೊತೆಗೆ ಅದರ ರಚನೆಯ ಕಾಲದ ಮಹತ್ವದ ಹಿನ್ನೆಲೆ ಮುನ್ನೆಲೆಗಳನ್ನು ವಿವೇಚಿಸಬೇಕಾದ ಅಗತ್ಯವಿದೆ. ಕವಿ ಜಿ.ಎಸ್.ಎಸ್ ಅವರ ಕಾವ್ಯ ಸಮಕಾಲೀನ ಕಿರಿಯ ಕವಿಗಳಿಗೆˌ ಉದಯೋನ್ಮುಕ ಕವಿಗಳಿಗೆˌ ವಿಮರ್ಶಕರಿಗೆ ಮಾದರಿಯಾಗುವ ಬಗೆ ಹೇಗೆ? ಅವರ ವಿಮರ್ಶೆ ಮತ್ತು ಮೀಮಾಂಸೆ ಗ್ರಂಥ ಪರಿಕರಗಳು ಮಾಡಿದ ಅಸಾಧರಣ ಮಾರ್ಗದರ್ಶನ ಯಾವುದು? ಕನ್ನಡ ಅಧ್ಯಯನ ಕೇಂದ್ರವು ಇತರ ಪ್ರತಿಭೆಗಳಿಗೆ ಪ್ರೋತ್ಸಾಹ ತೋರಿದ ಉಮೇದುವಾರಿಕೆಯ ಅವಲೋಕನ ಸೈದ್ಧಾಂತಿಕ ವಿಚಾರಗಳ ಚರ್ಚೆಗಳು ಸೆಮಿನಾರುಗಳ ಪರಿಣಾಮ ಇವುಗಳು ಸಂಶೋಧನೆಯಿಂದ ಧ್ರಡಪಡಬೇಕಾದ ಸಾಹಿತ್ಯಜಿಜ್ಞಾಸೆಯಾಗಿದೆ.
“ನೂರುಲ್ಕೆಯ ರಭಸ ಮತಿಯ ಅಬ್ಬರಗಳ ನಡುವೆಯೂ
ನಿಯತ ಗತಿಯ ತಾರಗೆಯೊಲು ನೇರವೇರಿಸು ನನ್ನನು”
“ಹೇಗೊ ಏನೋ ಎಂತೊ ಒಳದನಿಯ ಹೊಮ್ಮಿಸುವ
ಕಾವ್ಯ ಕ್ರಪೆಗೆನ್ನದೆಯು ಮಣಿಯುತಿಹುದುˌ
ಇನಿತಾದರೂ ಇಂಥ ಶಕ್ತಿಯನು ವ್ಯಕ್ತಿಯಲಿ
ಕ್ರಪೆಗೈದ ಶಕ್ತಿಗಿದು ನಮಿಸುತಿಹುದು”
ಎಂದು ಕವಿ ಜಿ.ಎಸ್.ಎಸ್ ಅರಿಕೆ ಮಾಡುತ್ತಾರೆ. “ಜಿ.ಎಸ್.ಎಸ್ ಅವರು ಕಾವ್ಯ ಮಾರ್ಗಗಳ ಕ್ರತಕ ಸಂಘರ್ಷದಲ್ಲಿ ಸಿಲುಕಿದವರಲ್ಲ. ಅವರು ನಮ್ಮ ನಡುವಿನ ಜೀವಂತ ಹಿರಿಯ ಭಾವಗೀತಕಾರರಾಗಿದ್ದಾರೆ. ಅಬ್ಬರದ ಬರವಣೆಗೆ ಅವರ ಜಾಯಾಮಾನಲ್ಲ.” ಸಾಹಿತ್ಯವೇ ಜೀವನದ ಗತಿಬಿಂಬ ಎಂದು ನಂಬಿಕೆಯಿಂದ ನಡೆದವರು. ಆ ಗತಿ ಒಂದು ಚಲನೆˌಶಕ್ತಿˌನಡಿಗೆ(Movement),ಅದೊಂದು ದಿಕ್ಕುˌಗುರಿˌಉದ್ದೇಶ(Direction purpose), ಗತಿ ಎಂದರೆ ಸದ್ಯದ ಸ್ಥಿತಿˌ ಅವಸ್ಥೆ (The state of life,Condition) ಎಂದು ಸಾಹಿತ್ಯ ಜೀವನದ ಗತಿಬಿಂಬ ಎಂಬ ಲೇಖನದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಭಾರತೀಯ ಪುನರುಜ್ಜೀವನ ಕಾಲದಲ್ಲಿ ನವೋದಯ ಕಾವ್ಯ ಹಾಕಿದ ಸಾಮಾನ್ಯ ತತ್ವಗಳ ಮೇಲೆ ನಡೆದು “ವಿಶಾಲ ಭಾವಪಥದಲ್ಲಿ ಜೀವನ ಪ್ರೀತಿರಥ ಹರಿಸಿದ ಜಿ.ಎಸ್.ಎಸ್ “23 ಅವರ ಕಾವ್ಯದ ನೆಲೆಗಳನ್ನು ಅರಿತುಕೊಳ್ಳುವ ಲೇಖನ ಇದಾಗಿದೆ. “ಭಾರತೀಯ ಕಾವ್ಯ ಮೀಮಾಂಸೆಯ ಪ್ರಧಾನ ಆಶಯವನ್ನು ಕವಿ -ಕಾವ್ಯ -ಸಹ್ರದಯ ವಿಚಾರ ಎಂದು ಅಡಕವಾಗಿ ಹೇಳಬಹುದು. ಸತ್ಯಂ-ಶಿವಂ-ಸುಂದರಂ ಅಂತಲೂ ಗ್ರಹಿಸಬಹುದಾಗಿದೆ. ಕವಿ ಎಂದರೆ ಯಾರು? ಕಾವ್ಯ ಎಂದರೆ ಏನು? ಅದರ ಗುಣ ಸ್ವರೂಪ ಲಕ್ಷಣಗಳು ಯಾವುವು? ಕಾವ್ಯದ ಉದ್ದೇಶ ಪ್ರಯೋಜನಗಳು ಯಾವುವು? ಅದು ಸಹ್ರದಯನ ಮನಸ್ಸಿನಲ್ವಿ ಹೇಗೆ ಆಸ್ವಾಧ್ಯಾವಾಗುತ್ತದೆ. ಈ ಆಸ್ವಾಧ್ಯಾನುಭವದ ಸ್ವರೂಪವೇನು? ಇತ್ಯಾದಿ ” ಗಳ ಚರ್ಚೆ ಜಿ.ಎಸ್.ಎಸ್ ಅವರ ಕಾವ್ಯದ ಮೇಲೆ ಸಂಶೋಧನಾ ಲೇಖನ ಶ್ರಮಿಸಿದೆ.
–ಸಂತೋಷ್ ಟಿ