ತಮವ ಕಳೆದಾಗ: ಶೇಖರಗೌಡ ವೀ ಸರನಾಡಗೌಡರ್

ಸಿಲಿಕಾನ್ ಸಿಟಿ ಬೃಹತ್ ಬೆಂಗಳೂರು ಮಹಾನಗರಿಯ ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ “ಮಧುವನ” ಕಾಲೋನಿಯ “ಅನಿರೀಕ್ಷಿತಾ” ಅಪಾರ್ಟಮೆಂಟಿನಲ್ಲಿ ವಾಸಿಸುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ರಾಹುಲ್ ಪಕ್ಕದ ಕಾಲೋನಿಯಲ್ಲಿ “ಸರಳ ಯೋಗ ಸಂಸ್ಥೆ”ಯವರು ಆಯೋಜಿಸಿದ್ದ ಹತ್ತು ದಿನಗಳ ಯೋಗ ಶಿಬಿರದಲ್ಲಿ ಭಾಗವಹಿಸಲು ತನ್ನ ಹೆಸರನ್ನು ನೊಂದಾಯಿಸಿದ್ದ. “ಧ್ಯಾನ, ಪ್ರಾಣಾಯಾಮ, ಭಕ್ತಿಯೋಗ, ಆಹಾರ ಪದ್ಧತಿ, ವ್ಯಕ್ತಿತ್ವ ವಿಕಸನ ಮತ್ತು ಸಾರ್ಥಕ ಜೀವನಕ್ಕಾಗಿ ಯೋಗ. ಅಲರ್ಜಿ, ಅಸ್ಥಮಾ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸಂಧಿವಾತಗಳಂಥಹ ರೋಗಗಳನ್ನು ದೂರವಿಡುವುದಕ್ಕೆ ಯೋಗ. ಪೂಜ್ಯ ವಿವೇಕಾನಂದ ಗುರೂಜಿಯವರ ಅಮೃತವಾಣಿಯ ಆಶೀರ್ವಚನವಿದೆ.” ಯೋಗ ಸಂಸ್ಥೆಯ ಕಾರ್ಯಕರ್ತರ ಹೇಳಿಕೆಗಳು ಎಲೆಕ್ಟ್ರಾನಿಕ್ ಸಿಟಿಯ ಪ್ರಸಿದ್ಧ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವ ಇಂಜಿನಿಯರ್ ರಾಹುಲನ ಮನಸ್ಸಿನಲ್ಲಿ ಕುತೂಹಲ ಮೂಡಿಸಿದ್ದವು. ದಿನಾಲೂ ಸಂಜೆ ಆರರಿಂದ ಏಳುವರೆಯವರೆಗೆ ತರಬೇತಿಯ ಕ್ಲಾಸುಗಳು ಇದ್ದವು. ಬೆಳಿಗ್ಗೆ ಆರರಿಂದ ಮಧ್ಯಾಹ್ನ ನಾಲ್ಕಕ್ಕೆ ರಾಹುಲನ ಕಂಪನಿಯ ಕೆಲಸ ಮುಗಿಯುತ್ತಿದ್ದರಿಂದ, ಯೋಗ ಸಂಸ್ಥೆಯ ವೇಳಾಪಟ್ಟಿ ಹೊಂದಿಕೆಯಾಗುತ್ತಿದ್ದರಿಂದ ಶಿಬಿರದ ಫೀಸು ಒಂದು ಸಾವಿರ ಕೊಟ್ಟು ಯೋಗ ತರಬೇತಿಗೆ ಸೇರುವ ಉತ್ಸಾಹ ತೋರಿಸಿದ್ದ. ಮೂವತ್ತರ ಬಿಸಿರಕ್ತದ ತರುಣ ರಾಹುಲ್ ಮದುವೆಯಾಗಿ ಈಗಷ್ಟೇ ಆರು ತಿಂಗಳುಗಳಾಗಿವೆ. ಜೊತೆಗಾತಿ ಸುಪರ್ಣಾ ಸಹ ಎಲೆಕ್ಟ್ರಾನಿಕ್ ಸಿಟಿಯ ಇನ್ನೊಂದು ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಇಂಜಿನಿಯರ್. ಗಂಡನೊಂದಿಗೇ ಯೋಗ ತರಬೇತಿ ಶಿಬಿರಕ್ಕೆ ಸೇರಬೇಕೆನ್ನುವ ತುಡಿತ ಅವಳ ಮನಸ್ಸಿನಲ್ಲಿದ್ದಿತ್ತಾದರೂ ಕಂಪನಿಯ ಕಚೇರಿಯ ವೇಳಾಪಟ್ಟಿ ಹೊಂದಾಣಿಕೆಯಾಗುತ್ತಿರಲಿಲ್ಲವಾದ್ದರಿಂದ ಆಕೆ ಸುಮ್ಮನಿರಬೇಕಾಯಿತು.

ಯೋಗ ಗುರೂಜಿ ಶ್ರೀ ವಿವೇಕಾನಂದರು ಸಮಯ ಪರಿಪಾಲನೆಯಲ್ಲಿ ತುಂಬಾ ಶಿಸ್ತಿನ ವ್ಯಕ್ತಿಯಾಗಿರುವರೆಂಬುದನ್ನು ಮೊದಲೇ ತಿಳಿದುಕೊಂಡಿದ್ದ ರಾಹುಲ್ ತರಬೇತಿಯ ಮೊದಲ ದಿನದಂದು ಅರ್ಧ ಗಂಟೆ ಮೊದಲೇ ಶಿಬಿರದ ಸ್ಥಳದಲ್ಲಿದ್ದ. ಅಲ್ಲಿ ಅವನಿಗೆ ತುಂಬಾ ಅಚ್ಚರಿಯ ಸಂಗತಿಯೊಂದು ಕಾದಿತ್ತು. ಅಲ್ಲೇನೋ ಒಂದು ರೀತಿಯ ಹಬ್ಬದ ವಾತಾವರಣವಿದ್ದಂತೆ ಢಾಳಾಗಿ ಎದ್ದು ಕಾಣುತ್ತಿತ್ತು. ಬಿಳಿಯುಡುಗೆಯಲ್ಲಿ ಮಿಂಚುತ್ತಿದ್ದ ಯೋಗ ತರಬೇತಿ ಕೇಂದ್ರದ ಹಿರಿಯ ಸತ್ಸಂಗಿಗಳು ಸಂಭ್ರಮದಿಂದ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಓಡಾಡುತ್ತಿದ್ದರು. ತರಬೇತಿಗಾಗಿ ಬರುತ್ತಿದ್ದ ಶಿಬಿರಾರ್ಥಿಗಳನ್ನು ಹಾರ್ದಿಕವಾಗಿ ಸ್ವಾಗತಿಸುತ್ತಿದ್ದರು. ರಾಹುಲ್ ಸ್ವಾಗತ ಸಮಿತಿಯ ಕೌಂಟರಿನತ್ತ ಹೋಗುತ್ತಿದ್ದಂತೆ ನಗುಮೊಗದಿಂದ ಅವನನ್ನು ಸ್ವಾಗತಿಸಿದ ಸ್ವಯಂ ಸೇವಕರು, ಅವನಿಗೆ ನೇಮ್ ಟ್ಯಾಗ್, ಬರೆದುಕೊಳ್ಳಲು ಕಿರು ಪುಸ್ತಕ ಮತ್ತು ಪೆನ್ನೊಂದನ್ನು ಕೊಟ್ಟು ತರಬೇತಿಯ ಹಾಲಿಗೆ ಕಳುಹಿಸಿದ್ದರು. ಪ್ರತಿಯೊಂದಕ್ಕೂ ಅಲ್ಲಿ ತುಂಬಾ ಶಿಸ್ತಿರುವುದನ್ನು ರಾಹುಲ್ ಗಮನಿಸಿದ. ಪಾದರಕ್ಷೆಗಳನ್ನು ಅವುಗಳಿಗಾಗಿ ಮೀಸಲಿಟ್ಟಿದ್ದ ಸ್ಥಳದಲ್ಲಿಯೇ ನೀಟಾಗಿ ಬಿಡಬೇಕಾಗಿತ್ತು.

ಸುಮಾರು ಎರಡು ನೂರಕ್ಕಿಂತಲೂ ಹೆಚ್ಚಿನ ಶಿಬಿರಾರ್ಥಿಗಳು ಕುಳಿತುಕೊಳ್ಳುವುದಕ್ಕೆ ಅನುಕೂಲ ಕಲ್ಪಿಸಲಾಗಿತ್ತು ಹಾಲಿನಲ್ಲಿ. ಒಳಗೆ ಬಂದ ಶಿಬಿರಾರ್ಥಿಗಳನ್ನು ಸಾಲಾಗಿ ಕುಳಿತುಕೊಳ್ಳಲು ಸ್ವಯಂ ಸೇವಕರು ಮಾರ್ಗದರ್ಶನ ನೀಡುತ್ತಿದ್ದರು. ಹಾಲಿನ ಮಧ್ಯೆದಲ್ಲಿ ಮೂವರು ವ್ಯಕ್ತಿಗಳು ಸರಾಗವಾಗಿ ಅಡ್ಡಾಡುವಷ್ಟು ಜಾಗಬಿಟ್ಟು ಎರಡೂ ಕಡೆಗೆ ಶಿಬಿರಾರ್ಥಿಗಳನ್ನು ಕೂಡ್ರಿಸುತ್ತಿದ್ದರು. ಒಂದು ಕಡೆಗೆ ಪುರುಷ, ಮತ್ತೊಂದು ಕಡೆಗೆ ಸ್ತ್ರೀ ಶಿಬಿರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಹಾಲಿನ ಕೊನೆಗೆ ಎತ್ತರಕ್ಕೆ ವೇದಿಕೆಯನ್ನು ನಿರ್ಮಿಸಿ ಗುರೂಜಿಯವರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಮಾಡಿದ್ದರು. ತಾಜಾ ಹೂವುಗಳ ಪರಿಮಳದಿಂದ ಹಾಲ್ ಘಮಘಮಿಸುತ್ತಿತ್ತು. ಶಾಸ್ತ್ರೀಯ ಸಂಗೀತದ ಹಾಡಿನ ಮೆಲುಧ್ವನಿಯೊಂದು ಹಾಲಿನಲ್ಲಿ ನಿಧಾನವಾಗಿ ಉಲಿಯುತ್ತಿತ್ತು. ಶಾಂತತೆಯಿಂದಿರಲು ಹಾಲಿಗೆ ಕಳುಹಿಸುವ ಮುನ್ನವೇ ಶಿಬಿರಾರ್ಥಿಗಳಿಗೆಲ್ಲಾ ತಾಕೀತುಮಾಡಿ ಕಳುಹಿಸುತ್ತಿದ್ದರು ಸ್ವಯಂ ಸೇವಕರು. ಹಾಲಿನಲ್ಲಿ ಸೂಜಿ ಬಿದ್ದರೂ ಶಬ್ದವಾಗುವಂತೆ ಶಾಂತತೆ ಇತ್ತು. ಯಾರೊಬ್ಬರೂ ಮಾತಾಡದೇ ಸಂಗೀತದ ಆಸ್ವಾದನೆಗೆ ಮುಂದಾಗುತ್ತಿದ್ದರು ಶಿಬಿರಾರ್ಥಿಗಳು ಹಾಲನ್ನು ಪ್ರವೇಶಿಸುತ್ತಿದ್ದಂತೆ.

ಸ್ವಯಂ ಸೇವಕರು ಹೇಳಿದ ಸ್ಥಾನದಲ್ಲಿ ಕುಳಿತ ರಾಹುಲ್ ನಂತರ ತನ್ನ ಅಕ್ಕ ಪಕ್ಕ, ಹಾಲಿನ ಇತರೆಡೆ ದೃಷ್ಟಿ ಹಾಯಿಸಿದ್ದ. ಆಗಲೇ ಸುಮಾರು ನೂರರಷ್ಟು ಶಿಬಿರಾರ್ಥಿಗಳು ಅಲ್ಲಿ ಕುಳಿತಿದ್ದದುದು ಕಂಡು ಬಂತು ಅವನಿಗೆ. ಪುರುಷರಿಗಿಂತ ಸ್ತ್ರೀಯರ ಸಂಖ್ಯೆ ಹೆಚ್ಚೆಂದು ಗೊತ್ತಾಗಲು ಅವನಿಗೆ ಹೆಚ್ಚಿನ ಸಮಯವೇನು ಬೇಕಾಗಲಿಲ್ಲ. ಪ್ರತಿಶತ ಅರವತ್ತಕ್ಕಿಂತ ಮೇಲ್ಪಟ್ಟು ಹೆಂಗಸರೇ ಅಲ್ಲಿ ಜಮಾಯಿಸಿದ್ದರು. ಹದಿನೆಂಟು, ಇಪ್ಪತ್ತರ ವಯಸ್ಸಿನಿಂದ ಹಿಡಿದು ಎಂಭತ್ತರ ವಯಸ್ಸಿನವರು ಅಲ್ಲಿ ಸೇರಿದ್ದರು. ತನ್ನಂತೆ ಹಲವಾರು ಗಂಡಸರು ಜುಬ್ಬಾ, ಪಾಯಿಜಾಮಾ ಹಾಕಿಕೊಂಡು ಬಂದಿದ್ದರು. ಕೆಳಗೆ ಕುಳಿತುಕೊಳ್ಳುವುದಕ್ಕೆ ಈ ಡ್ರೆಸ್ ಅನುಕೂಲಕರವಾಗಿದ್ದರಿಂದ ತನ್ನ ಆಯ್ಕೆ ಸರಿಯಾಗಿದೆ ಎಂದು ಅಂದುಕೊಂಡ ಮನದಲ್ಲೇ. ಹೆಂಗಸರಲ್ಲಿ ಬಹಳಷ್ಟು ಜನ ಚೂಡಿಯಲ್ಲಿದ್ದರೆ ಬಹುತೇಕ ತರುಣಿಯರು ತಮ್ಮ ದೈನಂದಿನ ಟೈಟ್ ಡ್ರೆಸ್ಸಿನಲ್ಲಿಯೇ ಇದ್ದರು.

ಆರು ಗಂಟೆಗೆ ಇನ್ನೇನು ಐದು ನಿಮಿಷಗಳು ಬಾಕಿ ಇರುವಾಗಲೇ ಶ್ವೇತ ವಸ್ತ್ರಧಾರಿಗಳಾದ ಗುರೂಜಿಯವರು ವೇದಿಕೆಯ ಮೇಲಿದ್ದ ತಮ್ಮ ಆಸನದಲ್ಲಿ ವಿರಾಜಮಾನರಾದರು. ಐವತ್ತರ ಹರೆಯದ, ನೀಳವಾದ ಕೇಶರಾಶಿಯ ಜೊತೆಗೆ ನೀಳವಾದ ಗಡ್ಡಧಾರಿ ಅವರಾಗಿದ್ದರು. ಬಹಳಷ್ಟು ಬೆಳುಪಾಗಿದ್ದ ಕೂದಲುಗಳನ್ನು ತಿದ್ದಿ, ತೀಡಿ ಬಾಚಿದ್ದರು. ತುಟಿಯಂಚಿನಲ್ಲಿ ಮುಗುಳು ನಗೆ ಲಾಸ್ಯವಾಡುತ್ತಿದ್ದುದರಿಂದ ಅವರನ್ನು ಹಸನ್ಮುಖಿಗಳೆಂದು ಗುರುತಿಸಬಹುದಾಗಿತ್ತು. ಅವರ ಆತ್ಮೀಯ ನಗೆಯ ಮೋಡಿಗೆ ಒಳಗಾಗದಿರಲು ಕಷ್ಟವೆನಿಸಬಹುದೇನೋ? “ಈ ರೀತಿಯ ನಗುಮೊಗದಿಂದಲೇ ಗುರೂಜಿಯವರು ಹಲವರ ಮನಸ್ಸುಗಳನ್ನು ಗೆಲ್ಲುತ್ತಾರೆ” ಎಂದು ಯಾರೋ ಹೇಳಿದ್ದನ್ನು ರಾಹುಲ್ ನೆನಪಿಸಿಕೊಂಡ.

ಸರಿಯಾಗಿ ಆರು ಗಂಟೆಗೆ ಗುರೂಜಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದ್ದರು. ಮೊದಲು ತಮ್ಮ ಪರಿಚಯ, ನಂತರ ಸ್ವಯಂ ಸೇವಕರು ಅಂದರೆ ಹಿರಿಯ ಸಾಧಕರ ಪರಿಚಯ ತದನಂತರ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಜನರ ಪರಿಚಯ ಮುಂದುವರೆದಿತ್ತು. ರಾಹುಲ್ ಪ್ರತಿಯೊಬ್ಬರ ಮಾತುಗಳನ್ನು ಗಮನವಿಟ್ಟು ಆಲಿಸತೊಡಗಿದ್ದ. ಇಂದಿನ ಬಿಡುವಿಲ್ಲದ ವೇಗೋತ್ಕರ್ಷದ ಜೀವನದಿಂದ ಚಿಂದಿಯಾಗುತ್ತಿರುವ ಮನುಷ್ಯ ಜೀವನಕ್ಕೆ ಪುನಶ್ಚೇತನ ನೀಡಲು ಬಹಳಷ್ಟು ಜನ ಅಂದಿನ ಶಿಬಿರಕ್ಕೆ ಸೇರಿದ್ದರು. ಮಾಹಿತಿ ತಂತ್ರಜ್ಞಾನದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಬಹಳಷ್ಟು ಉದ್ಯೋಗಿಗಳು ಅಲ್ಲಿ ಜಮಾಯಿಸಿರುವುದು ವಿಶೇಷವಾಗಿತ್ತು.

“ಈ ಜಗತ್ತಿನ ಪ್ರತಿಯೊಬ್ಬ ಮಾನವ ಜೀವಿಯಲ್ಲಿ ಅಗಾಧವಾದ ಮತ್ತು ಅನನ್ಯವಾದ ಶಕ್ತಿ ಹುದುಗಿದೆ. ಈ ಶಕ್ತಿ ಸಕಾರಾತ್ಮಕವಾಗಿ ಹೂವಿನಂತೆ ಅರಳಿ ಸುವಾಸನೆ ಬೀರಿದರೆ ಮಾತ್ರ ಈ ಪ್ರಪಂಚ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೃಪ್ತಿಯಿಂದ ಕೂಡಿದ ಸುಸಂಸ್ಕೃತ ಸಮಾಜವಾಗಬಲ್ಲದು. ಉತ್ತಮ ಆರೋಗ್ಯ, ಮಾನಸಿಕ ಸಮನ್ವತೆಗಳ ಜೊತೆಗೆ, ಗುರಿ ಮುಟ್ಟುವ ಛಲ, ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಧೈರ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಮಾನವ ತನ್ನ ಕಲ್ಪನೆಯ ಕನಸುಗಳನ್ನು ಸಾಮರ್ಥ್ಯ ಮತ್ತು ಶ್ರದ್ಧೆ ಎಂಬ ಸೇತುವೆಗಳಿಂದ ಸಾಕಾರಗೊಳಿಸಿಕೊಳ್ಳಬಹುದು. ಪ್ರಯತ್ನ, ಪರಿಶ್ರಮಗಳನ್ನು ಶ್ರದ್ಧೆಯಿಂದ ಸಕಾರಾತ್ಮಕವಾಗಿ ಬಳಸಿಕೊಂಡರೆ ಅಭಿವೃದ್ಧಿ ಕಟ್ಟಿಟ್ಟ ಬುತ್ತಿ. ಹತ್ತು ದಿನಗಳ ಈ ತರಬೇತಿ ಶಿಬಿರದಲ್ಲಿ ಇವೆಲ್ಲವುಗಳಿಗೆ ಒತ್ತು ನೀಡಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು. ಆದ್ದರಿಂದ ಶಿಬಿರಾರ್ಥಿಗಳು ಲಕ್ಷ್ಯವಿಟ್ಟು ಪಾಠಗಳನ್ನು ಕೇಳಿಸಿಕೊಳ್ಳಬೇಕು.” ಗುರೂಜಿಯವರು ತುಂಬಾ ಅರ್ಥಪೂರ್ಣವಾಗಿ, ಪರಿಣಾಮಕಾರಿಯಾಗಿ ಹೇಳಿದ್ದರು.


“ಯೂ ಡರ್ಟಿ ಬಿಚ್, ನೀನು ಮೋಸಗಾತಿ. ನನಗೆ ಮೊದಲಿನಿಂದಲೂ ನಿನ್ನ ಮೇಲೆ ಅನುಮಾನವಿತ್ತು. ನೀನು ಇಂಥಹ ನೀಚ ಕೃತ್ಯಕ್ಕೆ ಇಳಿಯಬಹುದು ಎಂದು ನಾನು ಅಂದುಕೊಂಡಿದ್ದು ಇಂದು ನಿಜವಾಗಿ ಬಿಟ್ಟಿತು. ತುಡುಗು ದನಕ್ಕೆ ಕದ್ದು ಮೇಯುವುದರಲ್ಲೇ ಹೆಚ್ಚಿನ ಖುಷಿಯಂತೆ. ಥೂ, ನಿನ್ನಂಥಹವಳು ಬದುಕಿರಬಾರದು. ಇಲ್ಲದಿದ್ದರೆ ನಿನ್ನಂಥಹವಳಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ನಿನ್ನ ವಂಚನೆಗೆ ಜೀವನರ್ಯಂತ ಮನಸಲ್ಲೇ ನಾನು ಕೊರಗಿ ಸಾಯುವುದಕ್ಕಿಂತ ಜೇಲಲ್ಲಿ ಜೀವನ ಕಳೆದರೂ ಪರವಾಗಿಲ್ಲ, ನೀನು ಮಾತ್ರ ಬದುಕಿರಬಾರದು. ಅಹ್ಹ…. ಅಹ್ಹ…. ನೀನು ಜೀವದಿಂದ ಇರಬಾರದು. ಅಹ್ಹ….ಅಹ್ಹ….ಇದೋ ನೋಡು ಈ ಚಾಕುವಿನ ರುಚಿ. ಹೇಗಿದೆ…..? ನಿನ್ನ ರಕ್ತ ಕುಡಿಯುವ ತವಕ. ಬೇಡ, ಬೇಡ. ನಿನ್ನ ರಕ್ತ ಹಾಗೇ ಹರಿದು ಭೂಮಿಯಾಯಿಯ ತಳ ಸೇರಲಿ. ಇದೋ ನೋಡು….” ಎಂದೆನ್ನುತ್ತಾ ದೆವ್ವ ಹಿಡಿದವರಂತೆ ತೇಕುತ್ತಾ ಮೇಲಿಂದ ಮೇಲೆ ಚಾಕುವಿನಿಂದ ಅವಳ ಎದೆ, ಹೊಟ್ಟೆ, ಕುತ್ತಿಗೆ, ತೊಡೆ, ತಲೆಗೆ ತಿವಿದಿದ್ದ. ಅಟ್ಟಹಾಸದ ನಗು ಎಲ್ಲೆಡೆ ವಿಜೃಂಭಿಸತೊಡಗಿತ್ತು.

“ರೀ ರಾಹುಲ್, ಇದೇಕೆ ಈ ರೀತಿ ಒಮ್ಮಿಂದೊಮ್ಮೆಲೇ ವಿಕಾರವಾಗಿ ಚೀರುತ್ತಿರುವಿರಿ? ಏದುಸಿರು ಬಿಡುತ್ತಿರುವಿರಲ್ಲಾ, ಲಂಗ್ಸ್ನಲ್ಲಿ ಇನ್ಫೆಕ್ಷನ್ ಆಗಿದೆಯೇ ಹೇಗೆ? ಕೆಟ್ಟ ಕನಸು-ಗಿನಸು ಏನಾದರೂ ಬಿದ್ದಿತ್ತೇ ಹೇಗೆ…? ಮೊದಲು ಸ್ವಲ್ಪ ಈ ನೀರು ಕುಡಿದು ದೀರ್ಘವಾಗಿ ಉಸಿರಾಡಿಸಿರಿ ಕೊಂಚ ಹೊತ್ತು ನನ್ನೆದೆಯ ಮೇಲೆ ತಲೆ ಇಟ್ಟು” ಎಂದು ಹೇಳುತ್ತಾ ಸುಪರ್ಣಾ ರಾಹುಲನನ್ನು ತನ್ನೆದೆಗೆ ಒತ್ತಿ ಹಿಡಿದುಕೊಂಡು ಪಕ್ಕದ ಟೀಪಾಯ್ ಮೇಲಿದ್ದ ಬಾಟಲಿನಿಂದ ನೀರನ್ನು ಕುಡಿಸತೊಡಗಿದಳು. ಹಾಗೇ ಅವನ ಎದೆಯನ್ನು ನವಿರಾಗಿ ತೀಡತೊಡಗಿದಳು.

ಮಡದಿ ಸುಪರ್ಣಾಳ ಎದೆಗೊರಗಿದ್ದ ರಾಹುಲ್ ಕಣ್ ಕಣ್ ಬಿಡತೊಡಗಿದ್ದ. ಹೆಂಡತಿಯ ಮಾತಿನಂತೆ ಕೊಂಚ ನೀರನ್ನು ಗುಟುಕರಿಸುತ್ತಾ ಕಣ್ರೆಪ್ಪೆ ಬಡಿಯದೇ ಸುಪರ್ಣಾಳ ಮುಖ ದಿಟ್ಟಿಸತೊಡಗಿದ್ದ.

“ಅದೇನು ಈ ರೀತಿ ನೋಡುತ್ತಿದ್ದೀರಿ? ನನಗೊಂದೂ ಅರ್ಥವಾಗುತ್ತಿಲ್ಲ….? ನೀವು ಚೀರಾಡುತ್ತಿದ್ದುದನ್ನು ನೆನೆಸಿಕೊಂಡರೆ ನನ್ನ ಹೃದಯ ನಿಂತು ಹೋಗುವಂತಾಗುತ್ತಿದೆ. ನನಗೆ ತುಂಬಾ ಗಾಬರಿ, ಭಯವಾಗತೊಡಗಿತ್ತು. ಹೇಗೋ ಮ್ಯಾನೇಜ್ ಮಾಡಿಕೊಂಡು ಧೈರ್ಯ ತೆಗೆದುಕೊಂಡೆ ನನ್ನಲ್ಲೇ. ಏನಾಯಿತು ಅಂತ ಸ್ವಲ್ಪ ಬಿಡಿಸಿ ಹೇಳಿದರೆ ನಾನು ನಿರಾಳವಾಗಿ ಉಸಿರಾಡಬಹುದು…” ಸುಪರ್ಣಾಳ ಮಾತಿನಲ್ಲಿ ಆತಂಕವಿತ್ತು.

“ಅಂದರೆ ನಾನು ಇದುವರೆಗೂ ಮಾಡಿದ್ದು ಕನಸಿನಲ್ಲಿಯೇ? ಅಂದರೆ….ಅಂದರೆ ನಾನು ಸುಪರ್ಣಾಳನ್ನು ಕೊಚ್ಚಿ ಹಾಕಿದ್ದು ಕನಸಿನಲ್ಲಿಯೇ….? ಕನಸಿನಲ್ಲಿ ನನ್ನಿಂದ ಹತಳಾದವಳಿಂದಲೇ ನನಗೆ ಉಪಚಾರವಾಗುತ್ತಿದೆಯಲ್ಲಾ? ಇವಳ ನಡತೆಯಲ್ಲಿ ಢಾಂಬಿಕತೆಯ ಸೋಗು ಕಾಣುತ್ತಿರುವ ಹಾಗಿಲ್ಲ..? ಅಂದರೆ ಇವಳ ಪ್ರೇಮಿ ತಪ್ಪಿಸಿಕೊಂಡದ್ದು ಕನಸಿನಲ್ಲಿಯೇ? ಕನಸಿನಲ್ಲಿ ನಾನಾಡಿದ ಮಾತುಗಳು ಇವಳ ಕಿವಿಗೆ ಬಿದ್ದಿವೆಯೇ ಹೇಗೆ?….ಅಂದರೆ….ಅಂದರೆ….ಕೇಳಿಸಿಕೊಂಡಿದ್ದರೆ ನನ್ನ ಬಗ್ಗೆ ಇವಳ ಅಭಿಪ್ರಾಯ ಹೇಗಿರಬಹುದು? ಏನೂ ಆಗಿಲ್ಲವೆಂಬಂತೆ ಸ್ವಾಭಾವಿಕವಾದ ಉಪಚಾರ, ಆರೈಕೆಯಲ್ಲಿ ಇವಳು ತೊಡಗಿದವಳಂತೆ ಕಾಣುತ್ತಿದೆ….? ಇದೂ ಒಂದು ರೀತಿಯ ಸೋಗೇ ಹೇಗೆ? ಅಯ್ಯೋ ದೇವರೇ, ನಾನಾಡಿದ ಮಾತುಗಳು ಇವಳ ಎದೆಯನ್ನು ತಲುಪಿರದಂತೆ ನೋಡಿಕೋ.” ರಾಹುಲ್ ಮನಸ್ಸಿನಲ್ಲಿ ಏನೇನೋ ಲೆಕ್ಕಾಚಾರ ಮಾಡಿಕೊಳ್ಳತೊಡಗಿದ್ದ ಸುಮ್ಮನೇ.

“ಏನ್ರೀ, ಮಾತೇ ಆಡುತ್ತಿಲ್ಲವಲ್ಲ? ತುಂಬಾ ಭಯವಾಗುತ್ತಿದೆಯೇ ಹೇಗೆ?” ಎಂದೆನ್ನುತ್ತಾ ಸುಪರ್ಣಾ ರಾಹುಲನ ಕಣ್ಗಳಲ್ಲಿ ದೃಷ್ಟಿ ನೆಟ್ಟಿದ್ದಳು. ಅವಳ ತೀಕ್ಷಣ ನೋಟ ಅವನಿಗೆ ಸಹಿಸದಂತಾಗಿತ್ತು. ಕತ್ತಿಯ ಅಲುಗಿನಂತೆ ಅವನೆದೆಯನ್ನು ಸೀಳತೊಡಗಿತ್ತು.

“ಸುಪು, ನಾನೇನು ಮಾತಾಡಿದೆ? ನನಗೊಂದೂ ನೆನಪಿಲ್ಲ.”

“ರಾಹುಲ್, ನೀವು ಅದೇನನ್ನೋ ಗೊಣಗಿಕೊಳ್ಳುತ್ತಿದ್ದಿರಿ. ನನಗೆ ನಿಮ್ಮ ಮಾತುಗಳು ಅರ್ಥವೇ ಆಗಲಿಲ್ಲ. ಆದರೆ ನಿಮ್ಮ ಮುಖದಲ್ಲಿ ರೌದ್ರವ ಕಳೆ ತುಂಬಿತ್ತು.”

“ಅಂದರೆ ನನ್ನ ಮಾತುಗಳು ನಿನಗೆ ಗೊತ್ತಾಗಲಿಲ್ಲವೇ?”

“ಹೌದ್ರೀ. ಆದರೆ ನಿಮ್ಮ ಮುಖದಲ್ಲಿನ ಭಾವನೆಗಳು ಭಯಂಕರವಾಗಿದ್ದವು.”

“ಸುಪಿ, ಅದೇನೋ ಕೆಟ್ಟ ಕನಸು ಬಿದ್ದಿತ್ತು ಕಣೇ. ಕನಸು ಏನೆಂದು ಮಿದುಳಿನ ಪರದೆಯಲ್ಲಿ ಸರಿಯಾಗಿ ಮೂಡುತ್ತಿಲ್ಲ. ಅನಾವಶ್ಯಕವಾಗಿ ನಿನ್ನ ನಿದ್ದೆ ಕೆಡಿಸಿದೆ. ಸಾರಿ ನಿನಗೆ ತುಂಬಾ ಡಿಸ್ಟರ್ಬ ಮಾಡಿಬಿಟ್ಟೆ. ಸದ್ಯ ನಿಶ್ಚಿಂತೆ ಇಂದ ಮಲಗು.”

“ಸ್ವಲ್ಪ ಚಹ-ಗಿಹ ಮಾಡಿಕೊಡಲೇ? ನೀವು ತುಂಬಾ ಆಯಾಸಗೊಂಡವರಂತೆ ಕಾಣುತ್ತಿರುವಿರಿ” ಎಂದೆನ್ನುತ್ತಾ ಸುಪರ್ಣಾ ರಾಹುಲನ ತಲೆಗೂದಲಲ್ಲಿ ಆತ್ಮೀಯವಾಗಿ ಕೈಯಾಡಿಸುತ್ತಾ ಅವನನ್ನು ಗಟ್ಟಿಯಾಗಿ ತನ್ನೆದೆಗೆ ಒತ್ತಿಕೊಂಡಿದ್ದಳು.

“ಆಯ್ತು ಸುಪು, ಚಹ ಮಾಡಿಕೊಡು” ಎಂದೆನ್ನುತ್ತಾ ರಾಹುಲ್ ಗೋಡೆ ಗಡಿಯಾರದ ಕಡೆಗೆ ನೋಡಿದಾಗ ರಾತ್ರಿ ಎರಡು ಗಂಟೆಯಾಗಿತ್ತು. ಸುಪರ್ಣಾ ನವಿರಾಗಿ ರಾಹುಲನ ಹಣೆ, ಕೆನ್ನೆ, ತುಟಿಗಳಿಗೆ ಮುತ್ತಿಡುತ್ತಾ ಅವನ ತಲೆಯನ್ನು ದಿಂಬಿನ ಮೇಲೆ ಇಟ್ಟು ಅಡಿಗೆ ಮನೆಯತ್ತ ಹೆಜ್ಜೆ ಹಾಕಿದ್ದಳು. ಬಳ್ಳಿಯಂತೆ ಬಳುಕುವ ಅವಳ ನಡು, ಹಿಂಬಾಗದ ಲಾಸ್ಯ ರಾಹುಲನ ಮನಸ್ಸನ್ನು ಸೆಳೆಯತೊಡಗಿದ್ದವು. ಅಂಗಾತ ಮಲಗಿ ದೀರ್ಘವಾಗಿ ಉಸಿರು ಹಾಕಿದ ರಾಹುಲ್.


“ಗುರೂಜಿ, ಈ ಯೋಗ ತರಬೇತಿ ಶಿಬಿರಕ್ಕೆ ಸೇರಿದಾಗಿನಿಂದಲೂ ನನ್ನ ಮನಸ್ಸಿನಲ್ಲಿನ ದ್ವಂದ್ವದ ಬಗ್ಗೆ ವಿವರಿಸಬೇಕೆಂದು ನಾನು ಹಂಬಲಿಸುತ್ತಿದ್ದೇನೆ. ಮೊದಲ ದಿನದಂದು ನಾನು ಸೂಕ್ಷ್ಮವಾಗಿ ನನ್ನ ಮನಸ್ಸಿನಲ್ಲಿನ ಹೊಯ್ದಾಟದ ಬಗ್ಗೆ ಹೇಳಿಕೊಂಡಿದ್ದೆ ಕಿರುಪರಿಚಯದಲ್ಲಿ. ಗುರೂಜಿ, ತಾವೀಗ ಫ್ರೀಯಾಗಿದ್ದರೆ ಎಲ್ಲವನ್ನೂ ವಿವರಿಸಲೇ?” ಗುರೂಜಿಯವರ ಪಾದಗಳಿಗೆ ನಮಸ್ಕರಿಸುತ್ತಾ ಹೇಳಿದ್ದ ರಾಹುಲ್ ಯೋಗ ತರಬೇತಿ ಶಿಬಿರಕ್ಕೆ ಸೇರಿದ್ದ ಆರನೆಯ ದಿನ ಬೆಳಿಗ್ಗೆ ಅಂದರೆ ಶನಿವಾರದ ದಿನದಂದು. ಅಂದು ಶಿಬಿರಾರ್ಥಿಗಳು ತಮ್ಮ ಸಮಸ್ಯೆಗಳಿಗೆ ಗುರೂಜಿಯವರಿಂದ ಪರಿಹಾರ ಪಡೆಯುವುದಕ್ಕೆ ಅನುಕೂಲ ಕಲ್ಪಿಸಿಕೊಡಲಾಗಿತ್ತು. ರಾಹುಲನ ಆಫೀಸಿಗೆ ರಜೆ ಬೇರೆ ಇತ್ತಲ್ಲವೇ? ಅಂದು ಸುಪರ್ಣಾಳ ಗೆಳತಿಯೊಬ್ಬಳು ಮನೆಗೆ ಬರುತ್ತಿದ್ದುದರಿಂದ ಅವಳು ಅವನೊಂದಿಗೆ ಬರುವುದು ತಪ್ಪಿದ್ದರಿಂದ ರಾಹುಲ್ ಮನದಲ್ಲೇ ಖುಷಿಪಟ್ಟಿದ್ದ. ಏಕೆಂದರೆ ತನ್ನ ಮನಸ್ಸಿನಲ್ಲಿದ್ದುದನ್ನು ಗುರೂಜಿಯವರ ಹತ್ತಿರ ನಿರ್ಭೀತನಾಗಿ ಹೇಳಬಹುದೆಂದು.

“ರಾಹುಲ್, ನಿನ್ನ ಮನಸ್ಸಿನಲ್ಲಿ ಅದೇನು ಸಮಸ್ಯೆ ಇದ್ದರೂ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳು. ಸಮಸ್ಯೆಯ ಮೂಲ ಸಿಕ್ಕರೆ ತಾನೆ ಪರಿಹಾರ ಹುಡುಕಬಹುದು. ಮನಸ್ಸನ್ನು ತೆರೆದಿಡು.” ಗುರೂಜಿ ತುಂಬಾ ಪ್ರಸನ್ನರಾಗಿ ಹೇಳಿದರು. ಅವರ ಆತ್ಮೀಯ, ಹೃದಯಕ್ಕೆ ತಲುಪುವಂತಿದ್ದ ಮುಕ್ತ ಮಾತುಗಳಿಂದ ಉತ್ತೇಜಿತನಾದ ರಾಹುಲ್ ತನ್ನದೆಯೊಳಗೆ ಹುದುಗಿದ್ದ, ಒಳಗೊಳಗೇ ಕುದಿಯುತ್ತಿದ್ದ ತುಮುಲವನ್ನು ಬಯಲಿಗಿಡತೊಡಗಿದ.

“ಗುರೂಜಿ, ಈಗ್ಗೆ ಆರು ತಿಂಗಳ ಹಿಂದೆಯಷ್ಟೇ ನನ್ನ ಮದುವೆಯಾಗಿದೆ. ಮದುವೆಯಾಗುವುದಕ್ಕೆ ಮುಂಚೆ ದಾಂಪತ್ಯ ಜೀವನದ ಬಗ್ಗೆ ಇದ್ದ ಉತ್ಸಾಹದ ಬುಗ್ಗೆ ಬತ್ತಿ ಹೋಗುತ್ತಿದೆಯೇನೋ ಎಂದು ಅನಿಸುತ್ತಿದೆ. ಸಂಸಾರದಲ್ಲಿ ಸ್ವಾರಸ್ಯವೇ ಇಲ್ಲದಂತಾಗಿದೆ. ಮದುವೆಯ ಉದ್ದೇಶಕ್ಕೆ ಅರ್ಥವಿಲ್ಲದಂತಾಗಿದೆ. ಇದೆಲ್ಲಾ ನನ್ನ ಅತಂತ್ರ ಮನಸ್ಸಿನಿಂದಲೇ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೂ ಒಂದು ಗಟ್ಟಿಯಾದ ನಿರ್ಧಾರಕ್ಕೆ ಬರಲು ಆಗುತ್ತಿಲ್ಲ.

ಸುಪರ್ಣಾಳನ್ನು ವಧು ಪರೀಕ್ಷೆಗೆಂದು ನೋಡಲು ಹೋದ ದಿನವೇ ನಮ್ಮ ಮತ್ತು ಆಕೆಯ ತಂದೆ-ತಾಯಿಗಳಿಗೆ ಎಲ್ಲಾ ರೀತಿಯಿಂದ ಪರಸ್ಪರ ಒಪ್ಪಿಗೆಯಾಗಿತ್ತು. ಎಲ್ಲರೂ ತಮ್ಮ ಮನದಲ್ಲಿದ್ದುದನ್ನು ಹಂಚಿಕೊಂಡು ಖುಷಿಪಟ್ಟಿದ್ದರು. ಸುಪರ್ಣಾ ನನ್ನ ಜೊತೆಗೆ ಕೊಂಚ ಮಾತಾಡಲು ಆಸೆ ವ್ಯಕ್ತಪಡಿಸಿದಾಗ, ಅವಳೊಂದಿಗೆ ಏಕಾಂತದಲ್ಲಿ ಮಾತಾಡುವುದಕ್ಕೆ ಅವಕಾಶ ತಾನಾಗಿ ಒದಗಿ ಬಂದಿದ್ದರಿಂದ ನನ್ನ ಖುಷಿಗೆ ಮಿತಿಯೇ ಇರಲಿಲ್ಲ. ತುಂಬು ಲವಲವಿಕೆ, ಉತ್ಸಾಹ ಇಬ್ಬರಲ್ಲೂ. ತುಸು ಸಮಯದ ಗುಣಾಕಾರ, ಭಾಗಾಕಾರ, ಮೌನದ ನಂತರ ಇಬ್ಬರೂ ಮಾತಿಗಿಳಿದಿದ್ದೆವು.

“ರಾಹುಲ್, ಒಂದು ವಿಷಯವನ್ನು ನಿಮಗೆ ತಿಳಿಸಬೇಕಾಗಿದೆ. ನಂತರ ನೀವು ನಿಮ್ಮ ನಿರ್ಧಾರ, ಅಭಿಪ್ರಾಯ ಪರಾಮರ್ಶಿಸಿದರೆ ನನ್ನ ಅಭ್ಯಂತರವೇನಿಲ್ಲ….” ಸುಪರ್ಣಾ ತನ್ನ ಮಾತನ್ನು ಶುರುಮಾಡಿದ್ದಳು.

“ಸುಪರ್ಣಾ, ಅದೇನಿದ್ದರೂ ಹೇಳಿರಿ” ಎಂದಿದ್ದೆ ನಾನು. ನನ್ನಲ್ಲೂ ಒಂದು ರೀತಿಯ ತವಕ ಇತ್ತು ಆಕೆ ಅದೇನು ಹೇಳುತ್ತಾಳೆಂದು.

“ರಾಹುಲ್, ನೇರವಾಗಿ ವಿಷಯವನ್ನು ತಿಳಿಸಿಬಿಡುತ್ತೇನೆ. ಕಾಲೇಜಿನಲ್ಲಿ ಇದ್ದಾಗ ನಾನು ಸುಜನ್ ಎಂಬ ಹುಡುಗನನ್ನು ಪ್ರೀತಿಸಿದ್ದೆ. ಅವನೂ ನನ್ನನ್ನು ಮನಸಾರೆ ಪ್ರೀತಿಸಿದ್ದ. ನಾವು ಪ್ರೀತಿಸುತ್ತಿದ್ದ ವಿಚಾರ ನಮ್ಮಿಬ್ಬರ ಮನೆಯವರಿಗೆ ಹೇಗೋ ತಿಳಿದು ಹೋಗಿತ್ತು. ನಮ್ಮಿಬ್ಬರ ಜಾತಿ ಬೇರೆ ಬೇರೆ ಆಗಿದ್ದರಿಂದ ಇಬ್ಬರ ಮನೆಯವರ ಸಮ್ಮತಿ ಇರಲಿಲ್ಲ. ಜಾತಿಯ ಅಟ್ಟಹಾಸ ಈಗಲೂ ಮುಂದುವರಿದಿದೆ ಅಲ್ಲವೇ ನಮ್ಮ ದೇಶದಲ್ಲಿ? ಇಬ್ಬರಿಗೂ ಬೋಧನೆಯಾಗಿತ್ತು. ತಮ್ಮ ಹಿತೋಪದೇಶಗಳನ್ನು ಧಿಕ್ಕರಿಸಿ ನಾವು ಮದುವೆಯಾದದ್ದೇ ಆದರೆ ಅದರ ಪರಿಣಾಮ ಘನ ಘೋರವಾಗಬಹುದು ಎಂದು ತಿಳಿಸಿದ್ದರು. ಇದನ್ನೆಲ್ಲಾ ಪರಾಮರ್ಶಿಸಿದ ನಾನು ಅದೊಂದು ದಿನ ಸುಜನ್ನ ಜೊತೆಗೆ ಚರ್ಚೆಗೆ ಮುಂದಾಗಿದ್ದೆ. “ಸುಜನ್, ನಮ್ಮ ಪ್ರೀತಿಗೇಕೋ ಅಡೆ-ತಡೆಗಳು ಬಹಳ ಎಂದೆನಿಸುತ್ತಿದೆ. ನಮ್ಮಿಬ್ಬರ ಸ್ವಾರ್ಥಕ್ಕಾಗಿ ನಾವು ಮದುವೆಯಲ್ಲಿ ಮುಂದುವರಿದರೆ ಇಬ್ಬರ ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡಲಿಕ್ಕೆ ಸಾಧ್ಯವಿಲ್ಲವೆಂದು ನನಗನಿಸುತ್ತಿದೆ ಹಾಗೇ ನಾವೂನೂ ಸಹ. ಅದಕ್ಕಾಗಿ ನಾನೊಂದು ಮಾತನ್ನು ಹೇಳಬೇಕೆಂದಿದ್ದೇನೆ” ಎಂದು ನಾನು ಹೇಳುವಷ್ಟರಲ್ಲಿ ಸುಜನ್, “ಸುಪರ್ಣಾ, ನಿಮ್ಮ ಮನಸ್ಸಿನಲ್ಲಿ ಏನಿದೆಯೆಂದು ನಾನು ಅರಿಯನೇ? ಹಿರಿಯರ ಮನ ನೋಯಿಸಿ ನಾವಿಬ್ಬರೇ ಸುಖ ಕಂಡುಕೊಂಡರೆ ಅದಕ್ಕೆ ಅರ್ಥವಿದೆಯೇ? ಆಗಲಿ, ನಮ್ಮಿಬ್ಬರ ಪ್ರಾಂಜಲ ಪ್ರೀತಿಗೆ ತಿಲಾಂಜಲಿ ಇತ್ತು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆಯೋಣ. ಹಿರಿಯರ ಇಚ್ಛೆಗೆ ಸ್ಪಂದಿಸುತ್ತಿರುವ ನಮ್ಮಿಬ್ಬರಿಗೂ ಒಳ್ಳೆಯ ಸಂಗಾತಿಗಳು ಸಿಗಲಿ ಎಂದು ಹಾರೈಸುವೆ” ಎಂದು ಹೇಳಿದ್ದ ಸುಜನ್. ಅದುವರೆಗೆ ಅವನೆಂದೂ ನನ್ನ ಕೈ ಮುಟ್ಟಿ ಸಹ ಮಾತಾಡದವನು ನನ್ನ ಕೈ ಕುಲುಕಿ ನನ್ನ ಭಾವೀ ಜೀವನಕ್ಕೆ ಶುಭ ಕೋರಿದ್ದ. ನಾನೂ ಅವನನ್ನು ಫಾಲೋ ಮಾಡಿದ್ದೆ.

ಈ ವಿಷಯವನ್ನು ಇಂದೇ ನಿಮಗೆ ತಿಳಿಸಿದರೆ ಒಳ್ಳೆಯದೆಂದು ನನ್ನ ಮನಸ್ಸಿಗೆ ಅನಿಸಿದ್ದರಿಂದ ಮುಚ್ಚಿಡದೇ ಎಲ್ಲವನ್ನೂ ಹೇಳಿದ್ದೇನೆ. ಇದನ್ನು ಕೇಳಿದ ಮೇಲೆ ನಿಮಗೆ ಹೇಗೆ ಅನ್ನಿಸುತ್ತಿದೆಯೋ ಹಾಗೇ ನೀವು ತೀರ್ಮಾನ ತೆಗೆದುಕೊಳ್ಳಬಹುದು. ನನ್ನ ಪಾಲಿನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಆದರೆ ಒಂದು ಮಾತಂತೂ ಸತ್ಯ. ನಾನು ಗಂಗೆಯಷ್ಟೇ ಪವಿತ್ರಳು. ಈ ಮೊದಲೇ ಹೇಳಿದಂತೆ ನಾವು ಪರಸ್ಪರ ಪ್ರೀತಿಸುತ್ತಿದ್ದರೂ ಎಂದೂ ದೈಹಿಕ ಕಾಮನೆಗಾಗಿ ಆಸೆ ಪಟ್ಟವರಲ್ಲ.” ಸುಪರ್ಣಾ ತನ್ನೆದೆಯಲ್ಲಿದ್ದ ಮಾತುಗಳನ್ನು ಹೊರಗಿಟ್ಟಿದ್ದಳು. ತುಸು ಹೊತ್ತು ನಮ್ಮಿಬ್ಬರ ನಡುವೆ ಮೌನ ಆವರಿಸಿತ್ತು. ಅವಳೇನು ನನ್ನ ಮಾತಿಗೆ ಅವಸರ ವ್ಯಕ್ತಪಡಿಸಲಿಲ್ಲ. ಅವಳ ಮಾತುಗಳು, ಓಪನ್ನೆಸ್ ನನಗೆ ತುಂಬಾ ಇಷ್ಟವಾಗಿದ್ದವು. ಅವಳು ನನಗೆ ತುಂಬಾ ಮೆಚ್ಚುಗೆಯಾಗಿ ಬಿಟ್ಟಳು. ಈಗಿನ ಕಾಲದ ಎಷ್ಟೋ ಜನ ಹುಡುಗಿಯರು ಮದುವೆಗೆ ಮುಂಚೆ ಬಾಯ್ ಫ್ರೆಂಡ್ಸ್, ಡೇಟಿಂಗ್ ಎಂದು ಎಲ್ಲವನ್ನೂ ಮುಗಿಸಿಕೊಂಡು ಮದುವೆಯಾಗುವಾಗ ಪತಿವ್ರತೆಯರಂತೆ ನಾಟಕವಾಡುತ್ತಿರುವುದು ನನಗೆ ತಿಳಿಯದ ವಿಷಯವೇನಾಗಿರಲಿಲ್ಲ. ನನ್ನ ಕಾಲೇಜಿನ ಬಹಳಷ್ಟು ಹುಡುಗಿಯರು ಇದಕ್ಕೆ ಹೊರತಾಗಿರಲಿಲ್ಲವೆಂಬುದು ನನಗೆ ತಿಳಿದೇ ಇದೆ.

“ಸುಪರ್ಣಾ, ನಿಮ್ಮ ಮಾತುಗಳು ನನಗೆ ತುಂಬಾ ಹಿಡಿಸಿಬಿಟ್ಟವು. ನನ್ನದು ಅಚಲ ನಿರ್ಧಾರ” ಎಂದು ತಿಳಿಸಿ ಅವಳ ಮನಸ್ಸಿಗೆ ಸಂತಸ ನೀಡಿದ್ದೆ.

ಆದರೆ ಏಕೋ, ಏನೋ, ಮದುವೆಯಾದ ನಂತರ ನನ್ನ ಮನಸ್ಸಿನಲ್ಲಿ ಯಾವಾಗಲೂ ಅವಳ ನಡತೆಯ ಬಗ್ಗೆ ಸಂಶಯ ಮೂಡತೊಡಗಿದೆ. ಸುಪರ್ಣಾ ನಾಟಕವಾಡುತ್ತಿದ್ದಾಳೆ ಎಂದು ಅನಿಸತೊಡಗಿದೆ. ಅವಳ ನಡತೆಯಲ್ಲಿ ಅನುಮಾನಿಸುವಂಥಹದ್ದೇನು ನನಗೆ ಕಂಡು ಬಂದಿರದಿದ್ದರೂ ಸುಮ್ಮನೇ ನನ್ನ ಮನಸ್ಸು ಗೊಂದಲದ ಗೂಡಾಗಿಬಿಟ್ಟಿದೆ. ಅವಳು ನನಗೆ ಮೋಸ ಮಾಡುತ್ತಿದ್ದಾಳೆ. ಕದ್ದು ಮುಚ್ಚಿ ಮಾಜಿ ಲವರ್ನೊಂದಿಗೆ ಮಾತಾಡುತ್ತಿದ್ದಾಳೆ, ಭೆಟ್ಟಿಯಾಗುತ್ತಿದ್ದಾಳೆ, ಸಂದರ್ಭ ನೋಡಿಕೊಂಡು ಕೂಡುತ್ತಿದ್ದಾಳೆ ಎಂಬ ಭ್ರಮೆ ನನ್ನ ಮನಸ್ಸಿನಲ್ಲಿ ಮನೆ ಮಾಡಿಬಿಟ್ಟಿದೆ. ಈಗ್ಗೆ ಹದಿನೈದು ದಿನಗಳ ಹಿಂದೆ ಸುಪರ್ಣಾ ಸುಜನ್ನೊಂದಿಗೆ ಅನೈತಿಕತೆಯಲ್ಲಿ ತೊಡಗಿದಂತೆ, ನಾನು ಅವಳನ್ನು ಅಟ್ಟಾಡಿಸಿಕೊಂಡು ಕೊಚ್ಚಿಹಾಕಿದಂತೆ, ಆಕೆಯ ಪ್ರಿಯಕರ ನನ್ನ ಚಾಕುವಿನ ಏಟಿನಿಂದ ತಪ್ಪಿಸಿಕೊಂಡು ಓಡಿ ಹೋದಂತೆ ಘನಘೋರವಾದ ಕನಸನ್ನು ಕಂಡಿದ್ದೆ. ಬೆದರಿದ್ದ ನನ್ನನ್ನು ಸುಪರ್ಣಾ ತಾಯಿ ಮಗುವನ್ನು ಸಂತೈಸುವಂತೆ ಸಂತೈಸಿದ್ದಳು. ಅವಳ ಮನಸ್ಸಿನಲ್ಲಿ ಯಾವುದೇ ಕೆಟ್ಟ ಭಾವನೆಗಳಿಲ್ಲವೆಂದು ನನ್ನ ಮನಸ್ಸು ಹೇಳುತ್ತಿದ್ದರೂ, ಏಕೋ ಏನೋ ಅದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ನಾನೆಲ್ಲಿ ಮಾನಸಿಕ ರೋಗಿಯಾಗಿ ಬಿಡುತ್ತೇನೋ ಎಂದು ಭಯವಾಗತೊಡಗಿದೆ ಇತ್ತೀಚಿಗೆ. ಮಾನಸಿಕ ನೆಮ್ಮದಿ ಅರಸಿ ನಾನು ನಿಮ್ಮ ಶಿಬಿರಕ್ಕೆ ಸೇರಿದ್ದೇನೆ. ಗುರೂಜಿ, ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ಸೂಚಿಸಬೇಕಾಗಿ ವಿನಂತಿ.”

“ರಾಹುಲ್, ನಂಬಿಕೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬಹು ಮುಖ್ಯವಾದದ್ದು. ನಂಬಿಕೆ, ನಿಷ್ಠೆ ಪರಸ್ಪರ ಪೂರಕ ಅನ್ಯೋನ್ಯ ದಾಂಪತ್ಯ ಜೀವನಕ್ಕೆ. ಸಾಮರಸ್ಯವಿರದ ಸಂಸಾರ ಅದೆಂಥಹದೋ? ನಿನ್ನ ಹೆಂಡತಿಗೆ ತನ್ನ ಮಾಜಿ ಪ್ರೇಮಿಯೊಡನೆ ಕದ್ದು-ಮುಚ್ಚಿ ವ್ಯವಹಾರ ನಡೆಸುವ ಯೋಚನೆಯಿದ್ದರೆ ಆಕೆ ಆ ವಿಷಯವನ್ನು ನಿನ್ನೊಂದಿಗೆ ಹೇಳುತ್ತಿರಲೇ ಇಲ್ಲ. ಯಾರಾದರೂ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುತ್ತಾರೆಯೇ? ಉಹೂಂ ಇಲ್ಲ ತಾನೇ? ನೀನೇ ಹೇಳುತ್ತಿರುವಿಯಲ್ಲಾ, ಆಕೆಯ ನಡತೆಯಲ್ಲಿ ಯಾವುದೇ ಕೆಟ್ಟ ಭಾವನೆಗಳಿಲ್ಲವೆಂದು. ತಪ್ಪು ಅದೇನಿದ್ದರೂ ನಿನ್ನ ಮನಸ್ಸಿನಲ್ಲಿಯೇ ಇದೆ. ನಿನ್ನ ಅಂತರಾತ್ಮವನ್ನು ಮೊದಲು ಶೋಧಿಸು. ನಿನ್ನ ಮನಸ್ಸನ್ನು ಮೊದಲು ಅರಿತುಕೋ. ನಿನ್ನ ಮನಸ್ಸನ್ನು ಪರಿಶುದ್ಧ ಮಾಡಿಕೋ. ಪ್ರಾಣಾಯಾಮ, ಧ್ಯಾನಗಳಿಂದ ನಿನ್ನ ದೇಹ, ಮನಸ್ಸುಗಳೆರಡನ್ನೂ ಶುದ್ಧವಾಗಿಸಿಕೋ. ಈ ಧ್ಯಾನದಿಂದ ನಿನ್ನ ಅಂತರಂಗವನ್ನು ಅರಿತುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಮನಸ್ಸಿನಲ್ಲಿ ತುಂಬಿರುವ ಅನುಮಾನದ ಮೂಲವನ್ನು ಮೊದಲು ಕಿತ್ತೊಗೆದು ಬಿಡು. ಎಲ್ಲಾ ತನ್ನಿಂದ ತಾನೇ ಸರಿ ಹೋಗುತ್ತದೆ. ಅದಕ್ಕೇ ಹಿರಿಯರು, “ಅನುಮಾನಂ ಪೆಡಂಭೂತಂ” ಎಂದು ಹೇಳಿದ್ದಾರೆ. ಅನುಮಾನದ ಬೇಗೆಯಲ್ಲಿ ಅದೆಷ್ಟೋ ಸಂಸಾರಗಳು ಹಾಳಾಗುತ್ತಿರುವುದನ್ನು ನೀನು ದಿನನಿತ್ಯ ನೋಡುತ್ತಿರಬಹುದು. ನಾವು ಹೇಳಿಕೊಟ್ಟಿರುವ ಧ್ಯಾನವನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಾ ಹೋದಂತೆ ನಿನ್ನನ್ನು ನೀನು ಅರ್ಥಮಾಡಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಧ್ಯಾನದ ಆಳ ನಿನ್ನ ಮನಸ್ಸನ್ನು ಪರಿಶುದ್ಧನನ್ನಾಗಿ ಮಾಡುತ್ತದೆ. ಮೊದಲೇ ನಾನು ಹೇಳಿದಂತೆ ಪ್ರಯತ್ನ, ಪರಿಶ್ರಮ, ಶ್ರದ್ಧೆ ಇರಲಿ. ತನ್ನಿಂದ ತಾನೇ ಎಲ್ಲಾ ಒಳ್ಳೆಯದಾಗುತ್ತದೆ. ಶುಭವಾಗಲಿ” ಎಂದು ಗುರೂಜಿ ರಾಹುಲನಿಗೆ ಧೈರ್ಯ ನೀಡುವುದರ ಜೊತೆಗೆ ಆಶೀರ್ವಾದವನ್ನೂ ಮಾಡಿದ್ದರು.


ಆರು ತಿಂಗಳ ನಂತರ ಶ್ರೀ ವಿವೇಕಾನಂದ ಗುರೂಜಿ ಮತ್ತೊಮ್ಮೆ ತಮ್ಮ ಸಂಸ್ಥೆಯ ಶಿಬಿರವನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆಯೋಜಿಸಿದ್ದರು. ತರಬೇತಿಯ ಮೊದಲ ದಿನ ರಾಹುಲ್ ಗುರೂಜಿಯವರ ಸಾನಿಧ್ಯದಲ್ಲಿದ್ದ. ಒಬ್ಬನೇ ಇರಲಿಲ್ಲ. ಜೊತೆಗೆ ಮನದನ್ನೆ, ಮುದ್ದಿನ ಮಡದಿ ಸುಪರ್ಣಾಳೂ ಸಹ ಇದ್ದಳು. ಗುರೂಜಿಯವರ ಪಾದಪದ್ಮಗಳಲ್ಲಿ ನಮಿಸುತ್ತಾ, ಗುರೂಜಿ, ಈಕೆ ನನ್ನ ಹೆಂಡತಿ ಸುಪರ್ಣಾ. ಶಿಬಿರಕ್ಕೆ ಸೇರುತ್ತಿದ್ದಾಳೆ ತಮ್ಮ ಆಶೀರ್ವಾದದಿಂದ...’ ಎಂದು ಹೇಳುತ್ತಿರುವಷ್ಟರಲ್ಲಿ,ರಾಹುಲ್, ನನಗಷ್ಟೂ ಗೊತ್ತಾಗುವುದಿಲ್ಲವೇ? ನಿನ್ನ ಮುಖದಲ್ಲಿನ ಮಂದಹಾಸ ನೋಡುತ್ತಿದ್ದಂತೆ ನನಗೆಲ್ಲಾ ಅರ್ಥವಾಗಿ ಹೋಯಿತು. ನೀನೀಗ ನಿನ್ನ ಬಾಳ ಸಂಗಾತಿಯೊಂದಿಗೆ ತುಂಬಾ ಖುಷಿಯ ಜೀವನವನ್ನು ಅನುಭವಿಸುತ್ತಿರುವಿ ಅಲ್ಲವಾ? ಜೀವನರ್ಯಂತ ಇದೇ ರೀತಿ ನಿಮ್ಮ ಬಾಳದೋಣಿ ಸಾಗಲಿ’ ಎಂದು ಹಾರೈಸಿ, ಆಶೀರ್ವದಿಸುತ್ತಾ ಗುರೂಜಿ ಇಬ್ಬರ ತಲೆಯ ಮೇಲೆ ನವಿರಾಗಿ ಕೈಯಾಡಿಸುತ್ತಾ, ಏನಮ್ಮಾ ಸುಪರ್ಣಾ, ನಾನು ಹೇಳಿದ್ದು ನಿಜ ತಾನೇ?”’ ಎಂದಾಗ ಸುಪರ್ಣಾಳ ಮುಖ ಕೆಂಪೇರತೊಡಗಿತ್ತು. ಇಬ್ಬರ ಹೃದಯಗಳಲ್ಲಿ ಸಂಭ್ರಮದ ಅಲೆಗಳು ಪುಟಿದೇಳತೊಡಗಿದ್ದವು.

-ಶೇಖರಗೌಡ ವೀ ಸರನಾಡಗೌಡರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x