“ಕತ್ತಲ ಹೂವು” ನೀಳ್ಗತೆ (ಭಾಗ ೧೨): ಎಂ.ಜವರಾಜ್

ಭಾಗ – 12

ಚೆನ್ನಬಸವಿ ಚೆಲ್ಲಿಕೊಂಡ ಕವ್ಡಗಳನ್ನೇ ನೋಡುತ್ತಲೇ ತುಟಿ ಕುಣಿಸುತ್ತ ಕೈಬೆರಳು ಒತ್ತಿ ಎಣಿಸುತ್ತಿದ್ದ ಕಡ್ಡಬುಡ್ಡಯ್ಯ ಹೇಳುವ ಮಾತಿಗೆ ಕಾದಂತೆ ಕಂಡಳು.

ಬಿಸಿಲು ರವ್ಗುಟ್ಟುತ್ತಲೇ ಇತ್ತು. ಆಗ ಹರಿದ ಲುಂಗಿ ಎತ್ತಿಕಟ್ಟುತ್ತ ಪಣ್ಣನೆ ಜಗುಲಿಗೆ ನೆಗೆದ ಚಂದ್ರ ಬಾಗಿಲತ್ತಿರ ಹೋದವನಿಗೆ ಕಂಚಿನ ತಣಗಕ್ಕೆ  ತಂಗ್ಳಿಟ್ಟು ಹಾಕಂಡು, ಅದಕ್ಕೆ ಈರುಳ್ಳಿ ಉಪ್ಪು ಬೆರುಸ್ಕೊಂಡು, ನೀರು ಉಯ್ಕಂಡು ಕಲಸಿ ಕಲಸಿ ಅಂಬ್ಲಿತರ ಮಾಡ್ಕಂಡು ಸೊರಸೊರ ಅಂತ ಕುಡೀತಿದ್ದ ಸೂರಿ ಕಂಡೊಡನೆ ಹೆದರಿ ಪಣ್ಣಂತ ಕೆಳಕ್ಕೆ ನೆಗೆದು ನೀಲ ನಿಂತಿದ್ದ ತೆಂಗಿನ ಮರದತ್ತಿರ ಹೋದ. 

ನೀಲ, ಚಂದ್ರ ಪಣ್ಣನೆ ನೆಗೆದು ಬದದ್ದು ನೋಡಿ “ಇದ್ಯಕುಡ ಹಿಂಗ್ ನ್ಯಗ್ದಾ..? ಹಿಟ್ಟುಂಡ್ಯ.. ? ಅಂವ ಸೂರಿ ಬಂದನಲ್ಲ ಅದ್ಕ್ಯಾ ನೀ ನ್ಯಗ್ದ್ ಬಂದು ನಿಂತಿರದು..? ಹೋಗು ಅವ್ನೇನು ಮಾಡ್ದನು.. ತಂಗ್ಳು ಪಂಗ್ಳು ಇದ್ರ ಉಣ್ಕ ಬರೋಗು. ಹೋಗುಡ. ನೀ ಹೋಗ್ನಿಲ್ಲ ಅಂದ್ರ ಎಲ್ಲನು ಅವ್ನೆ ಉಣ್ಕತನ. ನಿಮ್ಮೊವ್ವ ಮಕ್ರಿ ತಕ್ಕಂಡು ಹೊಲ್ಕೋದವ ಇನ್ನು ಬಂದಿಲ್ಲ ಕುಡ. ಬತ್ತಳ ಹೋಗು.. ಅವ್ನೇನು ಮಾಡಿನು. ನಾ ಅವ್ನಿ ಹೋಗು ಉಣ್ಕ ಬರಗು” ಅಂದಳು. 

ಈ ಚಂದ್ರ ಚಡ್ಡಿ ಕಾಣತರ ಹಿಂದಿನಿಂದ ಲುಂಗಿನ ಎತ್ತಿ ತಲ ಮೇಲ ಮಡಿಕಂಡು ಸಂದಿ ಕಡೆನೇ ಮೆಲ್ಲಮೆಲ್ಲಗೆ ಹೋಯ್ತಾ ಮನೆ ಬಾಗುಲ್ತವ್ಕ ಬಂದೇಟ್ಗೆ ನಿಧಾನುಕ್ಕೆ ಇಣುಕಿ ಸರಕ್ಕನೆ ಓಡಿ ಕವ್ಡ ಬುಡುಸ್ಕಂಡು ನೋಡ್ತಿದ್ದ ದೊಡ್ಡವ್ವ ಕುಂತಿದ್ದ ಜಗುಲಿ ಅಂಚಿಗೆ ದೂರಕ್ಕೆ ಹೋಗಿ ನಿಂತು ಜಗುಲಿ ಅಂಚು ಒರಗಿ ಕಡ್ಡಬುಡ್ಡಯ್ಯ ಬೆರಳು ಎಣಿಸೋದ ನೋಡ್ತಾ ನಿಂತ.

ಚಂದ್ರ ಎಸ್ಸೆಸೆಲ್ಸಿ ಫೇಲಾಗಿ ನಾಲ್ಕು ವರ್ಷವಾಗಿತ್ತು. ಏಳು ಅಟೆಂಪ್ಟ್ ಪರೀಕ್ಷೆ ಬರೆದ್ರು ಪಾಸಾಗದೆ ನೆಪ ಹೇಳಿಕೊಂಡೇ ತಿರುಗುತ್ತ ಎಲ್ಲರತ್ತಿರ ಆಡಿಸಿಕೊಂಡು ಅನ್ನಿಸ್ಕೊತ್ತಿದ್ದ. ರಾತ್ರಿವೊತ್ತು ಕುಡಿದು ಬರುತ್ತಿದ್ದ ಸೂರಿಯಂತು ಉಣ್ಣಗ ತಿನ್ನಗೆಲ್ಲ ಇಂವ ಫೇಲಾಗಿರೋದನ್ನೆ ಎತ್ತಿ ಆಡಿ ಬೊಯ್ತಿದ್ದರೆ ಶಿವಯ್ಯ “ಆಯ್ತು ಬುಡು ಇವತ್ತಲ್ಲ ನಾಳ ಆಯ್ತುದ” ಅಂತ ಸಪೋರ್ಟಿಗೆ ನಿಲ್ಲುತ್ತಿದ್ದ. ಫಸ್ಟ್ ಫೇಲಾದಾಗ ಕನ್ನಡ ಒಂದೇ ಪಾಸಾಗಿದ್ದು. ಆಮೇಲ ಗಣಿತ ಆಯ್ತು. ಅದಾದ ಮೇಲೆ ಒಂದೂ ಇಲ್ಲ. ಅಲ್ಲಿ ಇಲ್ಲಿ ತಿರುಗೋದು ಗೋಲಿ ಪಚ್ಚಿ ಆಡೋದು. ಇದನ್ನು ನೋಡ್ತಿದ್ದ ಸೂರಿ “ಓದದಿಲ್ಲ ಅಂದ್ರ ಇನ್ಯಾತಿಕಿರದು. ಹೊಲುತ್ತವ್ಕಾದ್ರು ಹೋಗಿ ಸ್ಯತ್ತ ಸ್ಯದ ಕಿತ್ಕಂಡು ನೀರ್ ಗೀರ್ ಹಾಯ್ಸುಟ್ಟು ಬರ‌್ದೆ ಉಣ್ಕ ಉಣ್ಕ ಇಲ್ಲಿಲ್ಲೆ ತಿರುಗ್ದಯ” ಅಂತ ಸ್ಯಬ್ಬದಲ್ಲಿ ಹೊಡೆದು ಬಾಸುಂಡೆ ಬಂದು ಆ ಬಾಸುಂಡೆ ಊದಿಕೊಂಡಿತ್ತು. ಅದು ಕೆಂಪಟ ಕೆಂಪಗಾಗಿ ಶಿವಯ್ಯ ನೋಡಲಾರದೆ ತನ್ನ ಜೊತೆ ಗದ್ದೆಗೆ ಕರೆದುಕೊಂಡು ಹೋಗಿ ಕೆಲಸ ಮಾಡಿಸುತ್ತಿದ್ದ. ಗದ್ದೆಗೆ ಹೋಗಿ ಕೆಲಸ ಮಾಡಿ ಬಂದಾಗ ಧೈರ್ಯವಾಗಿ ಮನೆ ಒಳಗೆ ನುಗ್ಗಿ ಆರಾಮಾಗಿ ಇರ್ತಿದ್ದ. ಇಲ್ಲದಿದ್ದರೆ ಅವನ ಕಾಲು ಬೀದೀಲೆ ನಿಂತು ಮನೆಯೊಳಗೆ ಹೋಗೋದೊ ಬ್ಯಾಡವೋ ಅಂತ ಎಳೆದಾಡುತ್ತ ಅವರಣ್ಣ ಸೂರಿ ಉಂಡು ತಿಂದು ಆಚೆ ಹೋಗ ತನಕ ಬೀದಿಬೀದಿ ಸುತ್ತಿ ಮಲುಗೊ ಹೊತ್ತಲ್ಲಿ ಬಂದು ಗಬಗಬ ಉಂಡು ಅಪ್ಪ ಶಿವಯ್ಯನ ಮಗ್ಗುಲಿಗೆ ಹೋಗಿ ರಗ್ಗೆಳೆದು ಮಲಗುತ್ತಿದ್ದ.

                        ——-

ಕಡ್ಡಬುಡ್ಡಯ್ಯನ ಎಣಿಕೆ ನಡೆಯುತ್ತಲೇ ಇತ್ತು. 

“ಇನ್ನು ಕಂಟ್ಕ ಕಳ್ದಿಲ್ಲ. ಅವತ್ತು ಆದ್ದು ನಿನ್ ತಲ್ಗ ಹೋಗಿಲ್ಲ ಅನ್ಕತಿನಿ. ನಿನ್ಗ ನಂಬ್ಕ ಜಾಸ್ತಿ. ನಿನ್ನವ್ರ್ ಮ್ಯಾಲ ನಿನ್ಗ ನಂಬ್ಕ ಇಲ್ಲ. ಅವ್ರ ಮಾತುಕತ ನಡನುಡಿ ಮ್ಯಾಲುವ ನಂಬ್ಕ ಇಲ್ಲ. ಆದ್ರ ನಿನ್ ರಕ್ತ ಅಲ್ದೆದವ್ರ್ ಮ್ಯಾಲಿನ್ ನಂಬ್ಕ ನಿನ್ಗ ಕಂಟ್ಕ ತಂದಿಟ್ಟದ” ಅಂತ ಚೆನ್ನಬಸವಿ ಕಡೆ ನೋಡಿದ.

ಚೆನ್ನಬಸವಿಯ ಕಣ್ಣು ಕೆಂಪಗಾಗಿ ಮುಖ ಬೆವ್ತು ಕಿತ್ತರಿತ ಉಸ್ಸನ್ನಿಸಿ ಕಡ್ಡಬುಡ್ಡಯ್ಯನ ಮಾತುಗಳು ಚುಚ್ಚತೊಡಗಿ ತೊಟ್ಟಿಕ್ಕುತ್ತಿದ್ದ ಬೆವರು ಒರೆಸಿಕೊಳ್ಳುತ್ತ ಹಿಂದಕ್ಕೆ ಜರುಗಿದಳು.

               ‌‌‌‌‌           ——-

 ಅವತ್ತು ಬಿರುಗಾಳಿ ಬೀಸ್ತಿತ್ತು. ಸರೊತ್ತು. ಗುಡುಗು ಸಿಡಿಲು ಎಗ್ಗಿಲ್ಲದೆ ಸದ್ದು ಮಾಡ್ತಿತ್ತು. ಆ ಬಿರುಗಾಳಿಗೆ ಮನೆಯ ಮೇಲಿನ ಕೈಯಂಚು ತೂರಿಕೊಂಡು ಬಳಬಳನೆ ಉದುರಿ ಹೋಗಿದ್ದವು. ನೀಲ ಆರು ತಿಂಗಳ ಬಾಣಂತಿ. ಹೆಣ್ಗೂಸು ಕರ‌್ರೊ ಪರ‌್ರೊ ಅಂತ ಅರುಚ್ತಿತ್ತು. ಆ ಕಡೆ ಶಿವಯ್ಯ ‘ಅಣೈ ಅಣ್ಣ.. ಕೂಸು ಅರುಚ್ತ ಅದಲ್ಲ..” ಅಂದ. ನಿಂಗಯ್ಯ ಸೌದ ಹೊಡ್ದು ಬಂದು ಸಾಕಾಗಿ ಕುಡ್ದು ಗೊರಕೆ ಹೊಡಿತಾ ನಿದ್ರೆ ಮಾಡ್ತಿದ್ದ. ಪುನ ‘ಅಣೈ..’ ಅಂದ. ಆ ಮಳೆಗಾಳಿ ಗುಡುಗು ಸಿಡಿಲಿಗೆ ಕೇಳಿಸಿತೊ ಏನೊ ಚೆನ್ನಬಸವಿ “ಳುಳುಳುಳು ಆಯೀ.. ಳುಳುಳುಳು ಅಜ್ಜೊ ಅಜ್ಜೊ ಅಜ್ಜಮ್ಮಾ..ಆಆಆ.. ಳುಳುಳು..ಆಯೀ” ಅಂತ ಜೋಗುಳ ಹಾಡತೊಡಗಿದಳು. ಚೆನ್ನಬಸವಿಯ ಜೋಗುಳಕ್ಕೆ ಕೂಸು ಅಳುವುದನ್ನು ನಿಲ್ಲಿಸಿ ಕಣ್ಣು ಮುಚ್ಚುತ್ತ ಶಿವಯ್ಯನಿಗೆ ಅದು ಅರುವಾಗೊ ಏನೊ ಅವನೂ ಕೂಗುವುದನ್ನು ನಿಲ್ಲಿಸಿದ್ದ.

                           ‌———

ಕವ್ಡ ಗೋರಿ ಕೈಯಲ್ಲಿ ಮುಸ್ಸಿ ಹಿಡಿದು ಲಳಲಳ ಅಳ್ಳಾಡಿಸಿ ಚೆನ್ನಬಸವಿ ಮುಖವನ್ನೇ ನೋಡ್ತಿದ್ದ ಕಡ್ಡಬುಡ್ಡಯ್ಯನೂ ಬೆವ್ತು ‘ಉಸ್ಸ್ ಶಿವ್ನೇ..’ ಅಂತ ಮುಖ ಒರೆಸಿಕೊಂಡು ಇನ್ನೊಂದ್ಸಲ ಕವ್ಡ ಬುಟ್ಟು ತೊಡೆ ಮೇಲಿದ್ದ ಇನ್ನೊಂದು ಚೀಲ ಬಿಚ್ಚಿ ಒದರಿದ. ಆ ಚೀಲಲಿ ಇರ ಬರದೆಲ್ಲ ಚೆಲ್ಲಿಕೊಂಡಿತು. 

ಅವನು ಬುಟ್ಟ ಒಂಭತ್ತು ಕವ್ಡಗಳಲ್ಲಿ ಐದು ಕವ್ಡಗಳು ಸೂರು ನೋಡುತ್ತ ಉಳಿದವು ಜಗುಲಿ ನೋಡ್ತ ಮಲಗಿದ್ದವು. 

ಚೆನ್ನಬಸವಿ ‘ಏನಳಿ..’ ಅಂದಳು. ಕಡ್ಡಬುಡ್ಡಯ್ಯ ‘ಏನೂ ಇಲ್ಲ ಇದಿಂಗೆ.. ಕಾಲ ನಡಿತಾ ಹೋಗುತ್ತ.. ನಾವು ಅದ್ನ ಹಿಡಿಯಾಕ ಹೋಗ್ದೆ ಅದರೊಂದ್ಗ  ನಡಿತಾ ಹೋಯ್ತ ಇರ‌್ಬೇಕು’ ಅಂದ. 

ಚೆನ್ನಬಸವಿಗೆ ಇದು ಒಗಟಿನಂತೆ ಕೇಳಿತು. ಇನ್ನೊಂದ್ಸಲ ‘ಏನಳಿ’ ಅಂದಳು. 

ಕಡ್ಡಬುಡ್ಡಯ್ಯ “ಜಗತ್ಗ ಗೊತ್ತಿರದು ನಿಂಗೊತ್ತಿಲ್ಲಕವ್ವ.. ಅದೇ ನಿನ್ ಕಂಟ್ಕ. ಅದ ಮರಿಸಕ ಅಂವ ನಿನ್ಮೇಲ ಬತ್ತಿರಂಗ ಆಯ್ತ ಅದ.. ಅವ್ನ್ ಕುಡಿನ ಇಂದ್ಗೆಲ್ಯಾರ ಏನಾರ ಕಂಡಿದಯ..’ ಅಂದ. 

ಈಗ ಚೆನ್ನಬಸವಿ ಕಣ್ಣಲ್ಲಿ ನೀರು ತುಂಬಿಕೊಂಡು ಅದು ಆಚೆ ಬರದೆ ಕಣ್ಣಲ್ಲೇ ಹಿಂಗ ತರ ಆಯ್ತಿತ್ತು.

ಕಡ್ಡಬುಡ್ಡಯ್ಯನಿಗೆ ಇದು ಅರುವಾಗಿ ತೊಡೆ ಮೇಲೆ ಇಟ್ಟುಕೊಂಡಿದ್ದ ಕಡ್ಡಬುಡ್ಡಿಯನ್ನು ಎತ್ತಿಕೊಂಡು ಅಲ್ಲಾಡಿಸಿದ. ಅದು ‘ಬುಡುಬುಡುಬುಡುಬುಡು’ ಅಂತ ಸದ್ದು ಮಾಡಿತು. 

ಆ ‘ಬುಡುಬುಡುಬುಡುಬುಡು’ ಸದ್ದು ಕಡ್ಡಬುಡ್ಡಯ್ನಿಂದ ಹಾದು ಚೆನ್ನಬಸವಿನ ಸುತ್ಕಂಡು ಜಗುಲಿ ಅಂಚಿಗೋಗಿ ಆ ಚಂದ್ರುನ್ನೂ ಸುತ್ಕಂಡು ಹಂಗೆ ಹೋಯ್ತಾ ಹೋಯ್ತಾ ಸಂದಿಗುಂಟ  ಶಿವಯ್ಯನ ಮನೆ ಜಗುಲಿ ನ್ಯಾರುಕ್ಕ ಹಾದು ನೀಲುನ್ತವ್ಕ ಹೋಗಿ ಅಲ್ಲಿ ಗರಗರ ಸುತ್ತಿ ಸುತ್ತಿ ರೋಡಿಗೆ ಬಿದ್ದು ಚೆನೈನ್ ಗುಡಿ ದಾಟಿ ಕಾಲುವೆ ಏರಿನ ಹತ್ತಿ ಇಳುದು ದೊಡ್ಡಬಸವಯ್ಯನ ಹುಣಸೇಮರದ ಬೊಡ್ಡೆತವು ಸುತ್ತತೊಡಗಿತು.

                            ———

ವರ್ಷ ಆರ‌್ತಿಂಗ್ಳು ಕಳ್ದು ಉಳ್ದಿತ್ತು. 

ಬಾಣಂತನ ಮುಗಿಸಿ ಎಂಟು ತಿಂಗ್ಳು ಕಳೆದು,  ವಾರವಪ್ಪತ್ತಿಗೆ ತವರಿಂದ ನಿಲಸೋಗಲಿರ ಗಂಡನ ಮನೆಗೆ ಹೋಗಿ ನ್ಯಾನ ಕಟ್ಟಿ ಗುಂಡಕಲ್ಲ ಆಡ್ಸಿ ತೊಟ್ಲು ಶಾಸ್ತ್ರ ಮುಗಿಸಿ ಅಲ್ಲಿ ಒಂದೆರಡು ತಿಂಗ್ಳು ತುಂಬ್ಸಿ ತೊಟ್ಲ ಹಿಂದುರುಗ್ಸ ಶಾಸ್ತ್ರಕ್ಕೆಂತ ತವರಿಗೆ ಬಂದು ನಾಕ್ ತಿಂಗ್ಳಾಗಿತ್ತು. 

ಹೆಣ್ಗೂಸು ಮನೆನೆಲ್ಲ ಆಡ್ತ ಕಿಲಕಿಲ ನಗ್ತಿತ್ತು. ಆ ಹೆಣ್ಗೂಸು ಹುಟ್ಟುದ್ಮೇಲೆ ಮಂಜನ ವ್ಯವಹಾರ ದುಪ್ಪಟ್ಟಾಗಿತ್ತು. ಆ ಕೂಸ ಒಂದಿನಾನು ಬುಟ್ಟಿರದೆ ನಿಲಸೋಗಯಿಂದ ಮೊಬ್ಬಿಗೆ ಎದ್ದು ಓಡೋಡಿ ಬರ‌್ತಿದ್ದ. ಚೆನ್ನಬಸವಿ ತಮ್ಮನನ್ನು ನೋಡಿ ಹಿರಿಹಿರಿ ಹಿಗ್ಗುತ್ತಿದ್ದಳು. ಮಂಜ ಅಕ್ಕನ ಕೈಗೆ ದುಡ್ಡುಕಾಸು ಕಾಳುಕಡ್ಡಿ ತಂದು ತಂದು ಕೊಡ್ತಿದ್ದ. ನೀಲ ಕೂಸು ಆಡುವುದನ್ನು ನೋಡಿ ನಲಿಯುತ್ತಿದ್ದಳು. ಅಕ್ಕಪಕ್ಕದವರೂ ಬಂದು ಬಂದು ನೋಡ್ತ ಮಾತಾಡುಸ್ತ ಸಂದಿ ಮನೆಯೀಗ ತುಂಬಿ ತುಳುಕುತ್ತಿತ್ತು. ಯಂಕ್ಟಪ್ಪನೂ ಅವನ ಮಗ ಶಿವನಂಜನೂ ಅವನ ಮನೆ ಆಳುಕಾಳುಗಳೂ ಬಂದು ಬಾಗಿಲಾಚೆ ನಿಂತು ಕೂಸಿನ ಕೈಗೆ ದುಡ್ಡು ಹಿಡಿಸಿ ಕೆನ್ನೆ ಚಿವುಟಿದನು. ಶಿವನಂಜ ನೀಲಳಿಗೆ ಹುಬ್ಬು ಹಾರಿಸಿದ್ದು ಕಂಡಿತ್ತು. ಅಡಿನಿಂಗಿ ಯಂಕ್ಟಪ್ಪ ಬಂದದ್ದು ನೋಡಿ ಒಳೊಳಗೆ ಕುದಿಯತೊಡಗಿದಳು. ಅವನು ಹೋದ ಮೇಲೆ ಆ ಕೂಸ ಎತ್ತಿಕೊಂಡು “ಅದ್ಯಾಕ ಆ ನನೈದ ಬಂದೋದ್ನ.. ಕುಲೆವ್ನ ಜಾತ್ಯವ್ನ ನೆಂಟ್ನಾ ಏನಾ.. ತೂ..” ಅಂತ ಉಗಿತ ಕೂಸ ಎತ್ತಿ ಮುದ್ದಾಡ್ತ “ಅಂತೆವೆಲ್ಲ ನಿನ್ನ ಮುಟ್ಟುದ್ರ ಆ ತಿಬ್ಬದೇವಿ ಸುಮ್ ಬುಟ್ಟಿಳಾ..” ಅಂತಿದ್ದರೆ ಆ ಕೂಸು ಅಡಿನಿಂಗಿನ ನೋಡಿ ಕಿಲಕಿಲ ನಗೋದು. ಚೆನ್ನಬಸವಿ ‘ಇಸ್ಯವ್’ ಅಂತ ‘ಕೊಡಿಲ್ಲಿ ಕೂಸ. ನಿನ್ಯಾರ ಎತ್ಕ ಅಂದವ’ ಅಂತ ಕೊಸರಿ ಕೂಸ ಕಿತ್ತುಕೊಂಡು ನೀಲಳ ಕೈಗೆ ಕೊಟ್ಟು ‘ಏಯ್ ಕೂಸ ಯಾರ‌್ ಕೈಗ್ಯಾರ ಕೊಟ್ಗಿಟೈ ಜ್ವಾಕ..: ಅಂತ ಮುಕ್ಕರಿದಳು. 

                           ———-

ಶಿವರಾತ್ರಿ ಹಬ್ಬ ಮೂರು ದಿನ ಇತ್ತು. ಇಂಥ ಹೊತ್ಲಿ ವರ್ಷ ವರ್ಷ ಊರಿಗೂರೇ ಮನೆಗೊಬ್ರು ಇಬ್ರು ಮಾದೇಶ್ವರನ ಬೆಟ್ಟಕ್ಕೆ ಹೋಗ್ತಿತ್ತು. ಇದು ಊರಲ್ಲಿ ಕಾಲ್ದಿದ್ಲು ಹಿಂಗೇ ನಡೀತಿತ್ತು.  ಬಸ್ಸಿಲ್ದೆದ್ ಕಾಲ್ದಲ್ಲಿ ಹಸುಬೆ ಹೊತ್ಕಂಡು ನಡೆದುಕೊಂಡೇ ಹೋಯ್ತ ಇದ್ದದ್ದು ಉಂಟು. ಆಗ ಬೆಟ್ಟದ ಜಾತ್ರ ಮುಗಿಸಿ ಬರದು ಅಂದ್ರ ತಿಂಗ್ಳೇ ಆಗದು. ಬೆಟ್ಟಕ್ಕೆ ಹೋಗೋರನ್ನ ಕಳಿಸಿ ಮನೆಲಿರೊರೆಲ್ಲ ಗೋಳೋ ಅಂತ ಕಣ್ಣೀರಾಕ್ತ ಇದ್ರು. ಆಮೇಲಮೇಲ ಬಸ್ಸಂತು ಬಂತು. ವಾರವಪ್ಪತ್ತಲ್ಲಿ ಮಾದಪ್ಪನ ದರ್ಶನ ಪಡೆದು ಬರ್ತಿದ್ರು. 

ಈಗ ತಲ ಬಾಗಿಲಲ್ಲಿ ಶಂಭುಲಿಂಗೇಶ್ವರ, ಮಲ್ಲಿಕಾರ್ಜುನ ಬಸ್ಸುಗಳು ಬಂದು ನಿಂತಿದ್ದವು.

ಚೆನ್ನಬಸವಿ ಮಂಜನ್ನ ಕರೆಸಿದಳು. ಈ ಚಳಿ ಗಾಳಿಲಿ ಆ ಜನಜಂಗುಳಿ ಬಸ್ಲಿ ಕೂಸು ಬಾಣಂತಿನ ಕರೆದುಕೊಂಡು ಹೋಗಕೆ ಆಗ್ದು. ಅದಕ್ಕೆ  ನೀಲಳನ್ನ ಬಿಟ್ಟು ಉಳಿದೆಲ್ಲರು ಮಾದೇಶ್ವರ ಬೆಟ್ಟಕ್ಕೆ ಹೋಗಕ್ಕೆ ತಯಾರಿ ಆಯ್ತು. ಶಿವಯ್ಯನ ಮನೆಯವರೂ ಹೋಗ್ತಿದ್ರು. ಚೆನ್ನಬಸವಿ ಮಂಜನಿಗೆ “ನಾವ್ ಬರದು ವಾರ ಆಗ್ಬೋದು. ಇವತ್ತು ಸೋಮಾರ ಹೊಂಟ್ರ ಇನ್ನು ಮುಂದುಕ್ಕ ಆಯ್ತೋರ ಆಯಿತ್ತ ಬರದು. ನೀ ಇಲ್ಲೆ ಇರು ಜ್ವಾಕ. ನಿಲುಸೋಗ್ಗ ಹೋಗ ಬದ್ಲು ಇಲ್ಲೆ ಬಂದು ಮನಿಕ..” ಅಂದಳು. ಮಂಜ ಅಕ್ಕನ ಮಾತಿಗೆ ತಲೆಯಾಡಿಸಿದ. ಚೆನ್ನಬಸವಿ ಇನ್ನೂ ಏನೇನೊ ಹೇಳುತ್ತ “ಅಲ್ಲಿ ಕ್ವಾಣ ಮೂಲಲಿ ನೆಲುನಲ್ಲಿ ಮಡಕವೊಳಗ ಅವರಕಾಳು ಕಳ್ಳಕಾಳು ಅವ. ಅದೇ ಮೂಲ ಸೂರಲ್ಲಿ ಕೊರಬಾಡು ಏಡ್ ಸೇರ್ ಒಣುಗ್ಸಿ ತುಂಬಿ ನ್ಯಾತಕೀನಿ. ಕಾಳ್ಗಳ ಬೆರ‌್ಕಲಿ ಉನಿಯಾಕಿ ಕೊರಬಾಡನೊಂದ್ಗ ಗೊಜ್ ಮಾಡಿ ಇಡ್ಲಿ ಮಾಡ್ಕಂಡು ನಾವ್ ಬತ್ತಿವ್ಯಲ್ಲ ಅವತ್ಕ ತೋಪ್ಗ ಹೊತ್ಗ ಬನ್ನಿ” ಅಂತದ್ದಳು. ಮಂಜ “ಆಯ್ತು ಬುಡಕ ನಂಗೊತ್ತಿಲ್ವ ತೋಪುಗ್ ತರದು ಅದೇನ್ ಹೊಸ್ದಾ ನಂಗ” ಅಂತ ಮುಖದಲ್ಲೆ ನಕ್ಕ. ನೀಲ ಕಂಕಳಲ್ಲಿದ್ದ ಕೂಸು ಮಂಜನ ಹತ್ತಿರ ಬರಲು ಕೈನೀಡಿ ಕೂಗುತ್ತ ಸತಾಯಿಸುತ್ತಿತ್ತು. ಈಗ ಮಂಜನ ಕೈತೋಳಿಗೆ ಬಂದು ಎಗರಿ ಎಗರಿ ಕುಣಿಯುತ್ತಿತ್ತು. 

ನಿಂಗಯ್ಯ ನಡುಮನೆ ಮೂಲೇಲಿ ಕುಂತು ವಡಾಳ ತಂದು ನೀರಿಗಜ್ಜಿ ಮೆದು ಮಾಡಿ ಅಗಲಿಸಿ ಚೆನ್ನಾಗಿ ಸವರಿ ಎರಡೂ ಅಂಚಲ್ಲಿ ಸಣ್ಣದಾಗಿ ದಾರದಂತೆ ಸೀಳಿಕೊಂಡು ರೆಡಿ ಮಾಡಿ ಇಟ್ಟುಕೊಂಡ. ಶಿವಿ ಹುಳಿಅನ್ನ ಚಿತ್ತಾನ್ನ ಬಿಳಿಅನ್ನ ತಂದಿಟ್ಟಳು. ನಿಂಗಯ್ಯ ಅಗಲಿಸಿದ ವಡಾಳಕ್ಕೆ ಚಿತ್ರಾನ್ನ ಒಂದಕ್ಕೆ ಹುಳಿಅನ್ನ ಒಂದಕ್ಕೆ ಬಿಳಿಅನ್ನ ಒಂದಕ್ಕೆ ಹಾಕಿ ಮುಸ್ಸಿ ಬಿಗಿಯಾಗಿ ಮೂರು ದೊಡ್ಡ ಬುತ್ತಿ ಕಟ್ಟಿದ. ಇನ್ನೆರಡು ವಡಾಳ ರೆಡಿ ಮಾಡಿ ಅದರಲ್ಲಿ ಒಂದಕ್ಕೆ ಗಟ್ಟಿಚಟ್ನಿ ಇನ್ನೊಂದು ವಡಾಳಕ್ಕೆ ಒಣಗಿಸಿ ಸುಟ್ಟು ಉಪ್ಪು ಮೆಣಸು ಜೀರ್ಗ ಒಣಮೆಣಸಿನಕಾಯಿ ಅರೆದು ಎಣ್ಣೆಗಾಕಿ ಉರುದು ಮಾಡಿದ್ದ ಒಂದು ಸೇರು ಕೊರಬಾಡನ್ನು ಹಾಕಿ ಬುತ್ತಿಕಟ್ಟಿದ. ಒಟ್ಟು ಐದು ಬುತ್ತಿಯನ್ನು ಹಸುಬೆಯೊಳಗೆ ಹಾಕಿ ಕಟ್ಟಿ ನಡುಮನೆ ಮೂಲೆಗೆ ಒರಗಿಸಿದ. 

ಕೂಸು ಮಂಜನ ತೋಳಿಂದ ಕೆಳಕ್ಕಿಳಿಯಲು ಎಗರಿ ಎಗರಿ ಜಾರತೊಡಗಿತು. ಅವನು  ಕೂಸಿನ ಕೊಸರಾಟ ತಡೆಯಲಾರದೆ ಕೆಳಕ್ಕೆ ಬಿಟ್ಟು ಜಗುಲಿಗೆ ಬಂದ. ಅದು ಓಡೋಡಿ ಬಂದು ಅಳಿದುಳಿದು ಬಿದ್ದಿದ್ದ ವಡಾಳ ಎಳೆದೆಳೆದು ಚೆಲ್ಲುತ್ತಿತ್ತು. ನೀಲ ಕೂಸು ಎತ್ತಿ ಅದರ ಚೆಲ್ಲಾಟ ನೋಡ್ತ ನಗಾಡ್ತ ಮುತ್ತಿಕ್ಕುತ್ತಿದ್ದಳು. 

ಚೆನ್ನಬಸವಿ ಮಂಜನೊಂದಿಗೆ ಮಾತಾಡ್ತ ಮಾತಾಡ್ತಲೇ ರೆಡಿಮಾಡಿ ಕಟ್ಟಿಟ್ಟ ಬುತ್ತಿಯ ಕುಟುಮಿಗೆ ಹೂವು ಹಾಕಿ ಊಬತ್ತಿ ಬಳಿದು ಗಂದಲಕಡ್ಡಿ ಹಸ್ಸಿ ಪೂಜೆ ಮಾಡಿದಾಗ ಗಂಟೆ ನಾಕಾಗಿ ಬಸ್ಸುಗಳು ಪೋಂಪ್ ಪೋಂಪ್ ಅಂತ ಹಾರನ್ ಮಾಡುತ್ತಿದ್ದವು. 

ಜನ ಜಗನ್ ಜಾತ್ರೆಯಾಗಿ ಚೆನೈನ್ ಗುಡಿತವು ನೆರೆದಿತ್ತು. ಐಕ್ಳು ಮಕ್ಳು ಬೆಟ್ಟಕ್ಕೆ ಹೋಗುವವರ ಹತ್ತಿರ ಕೈಯೊಡ್ಡಿ ಕಾಸು ಪೆಪ್ಪರುಮಿಂಟು ಈಸಿಕೊಳ್ಳುತ್ತಿದ್ದವು. ಎರಡೂ ಬಸ್ಸಿನ ಮೇಲೆ ಇಬ್ಬರು ದೇವರಗುಡ್ಡರು ಹತ್ತಿನಿಂತು ಎಲ್ಲರ ಹಸುಬೆ ಈಸಿಕೊಂಡು ಲೈನಾಗಿ ಜೋಡಿಸುತ್ತಿದ್ದರೆ ಹಸುಬೆ ಕೊಟ್ಟವರು ತಮ್ಮ ತಮ್ಮ ಹಸುಬೆ ಎಂದು ಗುರುತಿಸಲು ಶಾಲು ಟವಲು ಛತ್ರಿ ಏನೋನೊ ಕೊಟ್ಟು ಅವರವರ ಹಸುಬೆ ಮೇಲೆ ಇಡಲು ಕೂಗಾಡುತ್ತಿದ್ದರು. 

                          ———-

ಮೊಕ್ಕತ್ತಲ ಬೆನ್ನಿಗೆ ಕಾಲುವೆ ಏರಿ ಕಡೆ ನೀರ‌್ಕಡೆಗೆ ಬಂದಿದ್ದ ದೊಡ್ಡ ಬಸವಯ್ಯ ಬಿದಿರುಮೆಳೆ ಮಗ್ಗುಲಲ್ಲಿ ಕಲ್ಲುಗಳ ಮೆಟ್ಟಿಲಿಳಿದು ನೀರು ಅಟ್ಟಿಕೊಂಡು ಮೇಲತ್ತಿ ತನ್ನೆರಡು ಹುಣಸೇ ಮರದತ್ರಕ್ಕೆ ಹೋಗ್ತಿದ್ದ. 

ಹುಣಸೇಹಣ್ಣು ಬಡಿಸೊ ಹೊತ್ತು. ಸಂಕ್ರಾಂತಿ ಹೊತ್ತಲ್ಲೆ ಬಡಿಸ್ಬೇಕಿತ್ತು. ಇನ್ನೂ ಒಂದೊಂದು ಕಾಯಿ ದೋರ‌್ಗಾಯಿ ಇದ್ದವು. ಈಗೆಲ್ಲ ಹಣ್ಣಾಗವ. ಆದ್ರ ಬಡಿಸಕ ಆಳಿಲ್ದೆ ನಾಳನಾಳ ಅಂತ ಹೋಯ್ತನೇ ಅದ. ಈಗಂತು ಸಾಲ್ ಸಾಲು ಹಬ್ಗಳು. ಈ ಜನುಕ್ಕ ಹಬ್ಬ ಬಂದ್ರ ಕೆಲಸಕ್ಕೆ ಬರದೆ ಬರೀ ಕಾಡ್ಮಾತು ಆಡೇ ತಿರುಗೋದು. ಸರಿ, ಆಳು ಸಿಗೋ ತನಕ ಹಗಲು ರಾತ್ರಿ ಕಾಯಬೇಕು. ಕಾಯದೆ ಇದ್ರೆ ಕದ್ದು ಉದುರಿಸಿಕೊಂಡು ಹೋಗ್ತಾರೆ ಅಂತ ರಗ್ಗು ಚಾಪೆ ದಿಂಬು ತಂದು ಮರದ ಬೊಡ್ಡೆಯಲ್ಲಿ ಇಟ್ಟಿದ್ದ.

ಕುರುಬಗೇರಿ ಮಾದೇವಪ್ಪನ ತೋಟದಲ್ಲಿ ಹೆಂಡದಂಗಡಿ ಇತ್ತು. ಹೆಂಡ ಮಾರುತ್ತಿದ್ದವನು ಉದ್ದವಾಗಿ ಬಿಳಿ ಗಡ್ಡ ಬುಡ್ಕಂಡಿದ್ದಂವ. ಹೆಚ್ಚುಕಮ್ಮಿ ದೊಡ್ಡಬಸವಯ್ಯನ ವಯಸ್ಸೇ. ಈಗ ಹೆಂಡದಂಗಡಿಯಲ್ಲಿ ಗಲಾಟೆ ನಡೀತಿತ್ತು. ಅಷ್ಟೊತ್ತಿಗೆ ಬ್ಯಾಟರಿ ಬಿಟ್ಟುಕೊಂಡು ಬ್ಯಾಗೊಂದ ನ್ಯಾತಾಕಿಕೊಂಡು ಸೈಕಲ್ ತುಳಿಯುತ್ತಾ ಬಂದ ಶಿವನಂಜ ದೊಡ್ಡ ಬಸವಯ್ಯನನ್ನು ನೋಡಿ ಸರ‌್ರನೆ ಕೆಳಕ್ಕಿಳಿದ. ದೊಡ್ಡ ಬಸವಯ್ಯ ‘ಏನಳಿ ಈ ಹೊತ್ಲಿ’ ಅಂದ. ಶಿವನಂಜ “ಹಿಂಗೆ ಬಂದಿ. ಸ್ಯಾನೆ ಜಿನ ಆಗಿತ್ತು. ಅಲ್ಲೇನ ನಿಮ್ಮವ್ರು ಬಡ್ಡೆತವು ಬಾಡುಬಳ್ಳ ತಿಂತಾ ತೂ.. ಕಿತ್ತಾಡ್ಕಂಡು ಎರಚಾಡ್ಕಂಡು.. ತೂ ಅನ್ನುಸ್ತು ಅದ್ಕೆ ಇತ್ತಗೆ ತಕ್ಕ ಬಂದಿ. ಕಾಯಿ ಕಳ್ಳಪುರಿ ಎರಡೂ ಅದ ಬಾ ಮರುದ್ ಬೊಡ್ಡುತವ್ಕ ಹೋಗಂವ್” ಅಂದ. ದೊಡ್ಡ ಬಸವಯ್ಯ ‘ಬನ್ನಿ ಅಳಿ ನಂಗು ಊರ್ ನೋಡ್ತ ಪಿಚ್ಚನ್ಸುತ್ತ” ಅಂತ ಸರಸರನೆ ಮರದ ಬೊಡ್ಡೆತವ್ಕ ನಡೆದ. 

ಶಿವನಂಜ ಸೈಕಲ್ ನಲ್ಲಿ ನ್ಯಾತಾಕಿದ್ದ ಬ್ಯಾಗು ಇಳಿಸಿದ. ನಾಕೈದು ಬಾಟ್ಲು ಹೆಂಡ ಇತ್ತು. ಒಂದೋಳು ಕಾಯಿ ಇತ್ತು. ಕಳ್ಳಪುರಿ ಕಾರಸ್ಯಾವ್ಗನು ಇತ್ತು. ದೊಡ್ಡಬಸವಯ್ಯನ ಟವಲ್ಗೆ ಕಳ್ಳಪುರಿ  ಹಾಕಿದ.  ಒಂದು ಬಾಟಲಿನು ಇಟ್ಟ. ದೊಡ್ಡ ಬಸವಯ್ಯನಿಗೆ ಸ್ವರ್ಗವೇ ಸಿಕ್ಕಿದಂತಾಯ್ತು. ‘ಏನಳಿ ನಿಮ್ ದರ್ಬಾರೇ ದರ್ಬಾರು’ ಅಂದ. ಶಿವನಂಜ ‘ನೋಡು, ಇರಗಂಟ ಉಂಡು ತಿಂದು ಮಜಾ ಮಾಡಿ ಸಾಯ್ಬೇಕು..’ ಅಂತ ಬಾಟಲಿ ಎತ್ತಿ ಅರ್ಧ ಇಳಿಸಿದ. ಶಿವನಂಜ ಎತ್ತಿದ್ದು ನೋಡಿ ದೊಡ್ಡ ಬಸವಯ್ಯನೂ ಅರ್ಧ ಎತ್ತಿ ಕಳ್ಳಪುರಿ ಮುಕ್ಕಿ ಕಾರಸ್ಯಾವ್ಗ ತುಂಡುಗಳನ್ನು ಆಯ್ದು ಆಯ್ದು ಬಾಯಿಗೆಸೆದು ಮಾತಾಡತೊಡಗಿದ.

‘ನಿಮ್ಮಪ್ಪವ್ರು ಸುತ್ಲು ಊರೂರ‌್ಗು ಗೊತ್ತು. ಅವ್ರಿಂದ ಎಂತೆಂತ ಕಾರ್ಯ ಆಗವ ಅಂದ್ರ ನಾನು ಹುಣ್ಸಹಣ್ಣು ಮಾರಕ್ಕೋದಾಗ ಜನ ಹೇಳ್ತರ ಅಳಿ” ಅಂತ ಗುಣಗಾನ ಮಾಡಿದ.

ಕತ್ತಲಾಗ್ತ ಆಗ್ತ ಊರು ಗಕುಂ ಅಂತಿತ್ತು. 

ಊರ ಜನ ಬೆಟ್ಟಕ್ಕೆ ಹೋಗಿ ಎರಡು ದಿನವಾಗಿತ್ತು. ನಾಳ ಶಿವರಾತ್ರಿ. ರೋಡಿನಲ್ಲಿದ್ದ ಕಂಬದಲ್ಲಿ ಲೈಟುಗಳು ಪಿಣಿಪಿಣಿ ಅಂತ ಪಿಣುಗುಟ್ಟುತ್ತಿದ್ದವು. 

‘ಇಂಗ ಊರಿಗೂರೇ ಹೊಂಟ್ರ ಹೆಂಗ್ಯಾ.. ನೋಡಿ ಊರ‌್ನ ಯಾರ್ ಕೊಳ್ಳ ಹೊಡುದ್ರು ಯಾರು ಕೇಳಂಗಿಲ್ಲ. ಜನಿಲ್ದೆದ್ ಊರ್ ನೋಡಿ ಹೆಂಗ್ ಗಕುಂ ಅಂತುದ. ಅದ್ರಲ್ಲು ಊರ‌್ಗ ಎದ್ದಾಳು ಅನ್ನೊರೆಲ್ಲ ಹೊಂಟೊಗರ. ಇನ್ನು ಬರದು ವಾರ‌್ವೆ.. ಬಂದು ತೋಪ್ಲಿ ಉಣ್ಕ ತಿನ್ಕ ಬರದೆಲ್ಲ ಆಯ್ತುದ” ಅಂತ ಬಾಟಲಿಯಲ್ಲಿದ್ದ ಇನ್ನರ್ಧನು ಎತ್ತಿದ. ಶಿವನಂಜ ಒಂದ್ ಪೂರ್ತಿ ಎತ್ತಿ ಕಳ್ಳಪುರಿ ಎಸೆದುಕೊಂಡು ‘ಔವ್’ ಅಂತ ತೇಗಿದ. 

“ಎತ್ತು ಬಸ್ವ ಬ್ಯಾಗ್ನೆ ನಂಗೊಸಿ ಕೆಲ್ಸ ಅದ. ಆಲ್ಗೂಡ್ಲಿ ಎರಡು ಕಡ್ಸ್ ನೋಡ್ಕ ಬಂದಿದ್ದಿ.. ವಸಿ ಯವರ ಅದ. ಸಂತ್ಗೋದ್ರ ಒಂದುಕ್ಕ ನಾಕೇಳ್ತರ” ಅಂದ. ಈಗ ದೊಡ್ಡಬಸವಯ್ಯನೂ ತೇಗುತ್ತಲೇ “ಅದ್ಯಾಕಳಿ ನಮ್ ಮಂಜನ್ಗೆ ಹೇಳಕಿಲ್ವ.. ಅವ್ನೇನು ಕಾಡವ್ನ.. ನಿಮ್ಗ ಅಂದ್ರ ಒಂದೆಚ್ಚು ಕಮ್ನಿ ನೋಡಿ ಕೊಡುಸ್ತನ. ಒಳ್ಳೆ ಯವರಸ್ತ. ನಿಮ್ಮಪ್ಪವ್ರು ಅಂದ್ರ ಅಂವ ತಗ್ಗಿ ಬಗ್ಗಂವ” ಅಂದ. ಶಿವನಂಜ ಯೋಚಿಸಿ “ನಂಗ ಕಡ್ಸು ಬೇಕಿರದು ನಾಳ ನಾಳಿದ್ದು. ಸಂತ ಇರದು ಇನ್ನು ಅದ. ಅಲ್ಲಿಗಂಟ ಆಗಲ್ಲಕವೈ… ಈಗ ಅವ್ನ ಹುಡಿಕಂಡ್ ಬೇರೆ ನಿಲ್ಸೊಗ್ಗ ಹೋಗಕಾದ್ದ” ಅಂದ. ದೊಡ್ಡ ಬಸವಯ್ಯ ಕಳ್ಳಪುರಿ ಗೋರಿ ಬಾಯಿಗಾಕಂಡು “ಅಯ್,  ಅಂವ ಇಲ್ಲೆ ಅವ್ನ. ಕೂಸು ಬಾಣ್ತಿ ನೋಡ್ಕಂಡು. ಅವ್ರೆಲ್ಲ ಬೆಟ್ಟುಕ್ಕೋಗಿಲ್ವ.. ಇಂಜದಲಿ ನಾನೆ ಮಾತಾಡುಸ್ದಿ. ಅವ್ರು ಬೆಟ್ದಿಂದ ಬರಗಂಟ ಇಲ್ಲೆ ಇರ‌್ತನ ಅಳಿ. ಬೆಳುಗ್ಗ ಹೋಗಿ ಸಂದನಾಗಿ ಬಂದು ಇರ‌್ತನ. ಈಗೋಗಿ ನೋಡಿ ಸಿಕ್ಕುದ್ರು ಸಿಕ್ಬೋದು..” ಅಂದ. 

ಈಗಾಗಲೇ ಶಿವನಂಜ ಒಂದೂವರೆ ಎತ್ತಿದ್ದ. ಬಾಟಲಿಯಲ್ಲಿ ಇನ್ನರ್ಧ ಉಳ್ದಿತ್ತು. ಅದನ್ನೂ ಎತ್ತಿ “ದೊಡ್ಬಸ್ವ ನೋಡು ನಮ್ಗ ಏನೂ ಗೊತ್ತೇ ಇರಲ್ಲ ಎಲ್ಲನು ಮರ‌್ತು ಸುಮ್ನ ಇರ‌್ತಿಂವಿ. ಇಂಗ ನಿಮ್ಮಂತೆವ್ರು ದಾರಿ ತೋರ‌್ತರ” ಅಂತ ದೊಡ್ಡದಾಗಿ ತೇಗಿದ. ದೊಡ್ಡಬಸವಯ್ಯ “ಬುಡ್ತು ಅನ್ನಿ. ದಾರಿ ತೋರದ.. ನಾನು. ಇದು ದೊಡ್ಮಾತು ಅಳಿ. ಅವೆಣ್ಗ ಒಂದ್ ನ್ಯಾರ ಅಂತ ಮಾಡ್ದವ್ರು ಯಾರ ಅಂತ ಅಂದ್ಕಂಡ್ರಿ.. ನಿಮ್ಮಪ್ಪವ್ರೆ.  ಆ ಮಂಜ ಯವರ ಯವರ ಅಂತ ಸಾಯ್ತಿದ್ದ. ಸಂತಲೊಂದಿನ ಮದ್ವ ಗಿದ್ವ ಮಾಡ್ಕ ನಿನ್ ಯವರ‌್ಕು ಒಂದು ಬ್ಯಲ ಬತ್ತುದ ಅಂತ ಅಂದವತ್ಗ ‘ನನ್ ಯಾಸ ನೋಡಿ ಯಾರೆಣ್ಕೊಟ್ಟರು’ ಅಂತ ಗೇಲಿ ಮಾಡ್ಕಂಡು ನಿಂತಿದ್ನ. ಅದ್ಕ ಯಂಕ್ಟಪ್ಪೋರು ‘ಅದ್ಯಾಕ್ಲ ನಿಮ್ಮಕ್ಕ ಚೆನ್ಬಸ್ವಿ ಮಗ್ಳಿಲ್ವ’ ಅಂದಿದ್ರು. ಮಂಜ ನಗ್ತ ‘ಬುದ್ದಿ ಅವ ಓದಳ. ಅವ ನೋಡುದ್ರ ಅಸ್ಟ್ ಚೆನ್ನಾಗಳ ನನ್ನ ಮದ್ವ ಮಾಡ್ಕಂಡಳ’ ಅಂತ ತೇಲ್ಸಿ ದನ ಯಾಪಾರಕ್ಕ ದನಿಗೂಡ್ಸಿದ್ದ. ಆಮೇಲ ಆ ಚೆನ್ಬಸ್ವಿಗ ಹೇಳಿ ಹಿಂಗಿಂಗ ನಿನ್ ತಮ್ಮ ಯವರೊಸ್ತ ನೀಲುನ್ನ ಕೊಟ್ಟು ಮದ್ವ ಮಾಡು ಅದೇನ ನಾ ನೋಡ್ಕತಿನಿ ಅಂದ್ರು. ಅವ್ರು ಮನ್ಸ್ ಮಾಡುದ್ದುಕ್ಕೆ ಈಗ ಅವುನ್ಗೂ ಒಂದ್ ಬಾಳು ಅಂತಾಗಿ  ಒಂದ್ ಕೂಸೂ ಆಯ್ತು. ಅದೂ ಒಂದಾವಣಿ ಮಾಡ್ಕಂಡು ಹೋಯ್ತಾ ಅದ ಅಳಿ. ನೋಡಿ ಈಗೋಗಿ ನೋಡಿ ಅಳಿ” ಅಂದ. ನೀಲಳ ಹೆಸರು ಹೇಳಿದ್ದೇ ತಡ ಶಿವನಂಜನಿಗೆ ತಲೆ ಗಿರ್ ಅಂತು. ಅವತ್ತು ಮೈಸೂರಿಂದ ನೀಲಳ ಜೊತೆ ಬಸ್ಸಲ್ಲಿ ಕುಂತ್ಕ ಬಂದದ್ದು ನೆನಪಾಯ್ತು. ಬಸ್ಸಿಳ್ದು ಬರುವಾಗ ಗವ್ಗತ್ತಲಲ್ಲಿ ಊರ‌್ದಿಕ್ಕ ಹೋಗುವಾಗ ಒತ್ತರೊತ್ತರಿಸಿ ಬೇಲಿ ಆಚೆಗೆ ತಬ್ಬಿಡಿದು ಎತ್ತಿಕೊಂಡು ಹೋಗಿದ್ದು. ಈಗ ಅವನಿಗೆ ಮೈ ಜುಂ ಅಂತು.

ಶಿವನಂಜ ಮೇಲೆದ್ದಾಗ ಹತ್ತತ್ತಿರ ರಾತ್ರಿ ಒಂಭತ್ತು ದಾಟಿತ್ತು. ದೂರದಲ್ಲಿ ನಾಯಿಗಳು ಗಳ್ಳಾಕುತ್ತಿದ್ದವು. ಸೈಕಲ್ ತಿರುಗಿಸಿ ಹತ್ತಲು ನೋಡಿದ. ಪೆಡಲ್ ಸ್ಕಿಡ್ ಆಗಿ ಕಾಲು ಜಾರಿ ಮುಗ್ಗರಿಸಿದ. ಕಣ್ಣು ಮಂಜು ಮಂಜಾದಂತೆ ಆಯ್ತು. ನಿಲ್ಲಲಾಗದೆ ಹಂಗೆ ಕುಂತ. ಮರದ ಮೇಲೆ ಏನೋ ಸದ್ದು. ದೊಡ್ಡಬಸವಯ್ಯ ಕೆಮ್ಮಿ ಕ್ಯಾಕರಿಸಿ ಒಂದೆರಡು ಸಲ ಉಗಿದು ಮರದ ಬೊಡ್ಡೆಯಲ್ಲಿದ್ದ ಚಾಪೆ ದಿಂಬು ಎತ್ತಿ ಪಕ್ಕಕ್ಕೆ ಎಳೆದು ಹಾಸಿದ. ರಗ್ಗನ್ನು ಅಸ್ತವ್ಯಸ್ತವಾಗಿ ತಲೆಗೆ ಹಾಕಿಕೊಂಡು  “ವಸಿ ಕುಂತ್ಕಳಿ ಗಾಳಿಗ ಸರ‌್ಯಾಯುತ್ತ” ಅಂತ ಅಂದ.

ಇಬ್ಬರೂ ಮತ್ತಿನಲ್ಲಿದ್ದರು. ಗಾಳಿ ತಿಸ್ಸಂತ ಬೀಸ್ತಿತ್ತು.

ಈಗ ದೊಡ್ಡಬಸವಯ್ಯ ಮಲಗಿದ ಮಗ್ಗುಲಲ್ಲೆ  ಯಂಕ್ಟಪ್ಪನ ವಿಚಾರ ಎತ್ತಿದ. ಚೆನ್ನಬಸವಿ ವಿಚಾರನು ಎತ್ತಿದ. ನೀಲಳ ವಿಚಾರನು ಎತ್ತಿದ. ಶಿವನಂಜ ‘ಆ್ಞ ಊ್ಞ’ ಅಂತಿದ್ದ. ಹಂಗೆ ಮಾತಾಡ್ತ ಮಾತಾಡ್ತ ತೊದಲತೊಡಗಿದ. ಶಿವನಂಜನಿಗೆ ಮತ್ತಷ್ಟು ಮಂಪರು ಆದಂಗಾಯ್ತು. ಆ ಮಂಪರಲ್ಲೆ “ಯೋ.. ಯೋ..’ ಅಂತಲೆ. ನಿದ್ದೆಗೆ ಜಾರಿದ.

ಹೊತ್ತು ಏರುತ್ತಿತ್ತು. ಗಾಳಿ ಬೀಸ್ತನೇ ಇತ್ತು. ಮೈ ಅದುರಿದಂತಾಯ್ತು. ದೊಡ್ಡಬಸವಯ್ಯ ಉರುಳಾಡ್ತ ಸೊಳ್ಳೆಯ ಹೊಡೆತಕ್ಕೆ ಕೆರೆತ ಶುರು ಮಾಡ್ತ ಮಾಡ್ತನೆ ಗೊರಕೆ ಸದ್ದು ಕೇಳ್ತು. ದೊಡ್ಡಬಸವಯ್ಯನ ಗೊರಕೆಗೆ ಶಿವನಂಜನಿಗೆ ಎಚ್ಚರ ಆದಂತಾಗಿ ಎದ್ದು ಕುಂತ. ಮತ್ತು ಇಳ್ದಂಗಿತ್ತು. ಏನೋ ಗ್ಯಾನ ಬಂದಂಗಾಗಿ ಸರ‌್ರನೆ ಮೇಲೆದ್ದ. ಸೈಕಲ್ ನ ಅಲ್ಲೆ ಬೇಲಿ ಸಂದಿಗೆ ಒರಗಿಸಿ ಬೇಲಿ ದಾಟಿದ. ಗವ್ಗತ್ಲು. ಆ ಗವ್ಗತ್ತಲಲ್ಲಿ ಕಿರುದಾರಿಲಿ ಹೆಜ್ಜೆ ಎತ್ತಿಟ್ಟು ಅಡ್ಡದಾರಿಯ ಜಾಡು ಹಿಡಿದು ಊರೊಳಕ್ಕೆ ಬಂದು ಶಿಶುವಾರದ ಜಗುಲಿಗೆ ಬಂದು ನಿಂತ. ಆಗ ಹಿಂದುಗಡೆ ಬೀದೀಲಿ ನಾಯಿಗಳು ದಿಕ್ಕಾಪಾಲು ಬೊಗಳುತ್ತಿದ್ದವು. 

-ಎಂ.ಜವರಾಜ್

                                  (ಮುಂದುವರಿಯುವುದು)


[ ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ  ಪ್ರಕಟಗೊಂಡಿವೆ ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x