“ಲೇ, ನಾ ಸುಮ್ಮನಿದ್ದೇನೆಂದರ, ಏನರ ತಿಳೀಬ್ಯಾಡ, ಇಷ್ಟ ದಿನ ನನ್ನ ಒಂದು ಮುಖಾ ನೋಡಿದ್ದಿ, ಇನ್ನ ಮುಂದ ನನ್ನ ಇನ್ನೊಂದು ಮುಖಾ ನೋಡ ಬೇಕಾಗತದ.” ಅಂತ ಯಾರೋ ಯಾರಿಗೋ ಬೈಯಲಿಕ್ಕೆ ಹತ್ತಿದ್ದು ಕೇಳಿಸಿತು. ಬಹುಷಃ ಅದು ಜಂಗಮ ದೂರವಾಣಿಯಲ್ಲಿ ಕಂಡು ಬಂದ ಒಂದು ಕಡೆಯ ಸಂಭಾಷಣೆ ಇರಬೇಕು, ಇನ್ನೊಂದು ಕಡೆಯವರ ಮಾತು ನನಗೆ ಕೇಳಲಿಲ್ಲ. ಆದರೂ, ಯಾರಿಗೋ ತಾವು ಅಂದುಕೊಂಡಂಗ ಕೆಲಸ ಆಗಿಲ್ಲ, ಅದಕ್ಕ, ಅವರು ಇನ್ನೊಬ್ಬರನ್ನ ಬೈಯಲಿಕ್ಕೆ ಹತ್ತಿದ್ದು ಖರೇ. ನಾನು ಈ ಬೈದವರು ಯಾರೂ ಅಂತ ಬಗ್ಗೀ ಬಗ್ಗೀ ನೋಡಲಿಕ್ಕೆ ಹತ್ತಿದೆ. ಸುಟ್ಟ ಬಸ್ಸಿನ ಗದ್ದಲದಾಗ, ಈ ಮಹಾನುಭಾವ ಯಾರು ಅಂತ ಕಾಣಲೇ ಇಲ್ಲ. ಆದರ, ನನ್ನ ಬಾಜೂ ಕೂತಾಕೀ, “ಏನು ನೋಡತೀ, ನೀ ಹೋಗಿ ಜಗಳಾ ಬಿಡಿಸಿ ಬರತೀಯನು” ಅಂದಳು. “ಅವ್ವಾ, ತಾಯೀ, ಮೊದಲ ನನಗೂ ಜಗಳಕ್ಕೂ ಭಾಳ ಧೂರ. ಅಂವಾ ಏನರ, ನನಗ ಬೈದರ, ಬೈಸಿಕೊಳ್ಳೋದಿರಲಿ, ನಾಕು ಹೊಡದರೂ ಹೊಡಿಸಿಕೊಂಡು ಬರತೇನಿ.” ಅಂದೆ. “ಹಂಗಾರ ಏನು ಹುಡುಕಲಿಕ್ಕೆ ಹತ್ತೀದಿ” ಅಂದಳು.
ನಾನಂದೆ, “ಅಲ್ಲಾ, ಅಂವಾ ಅಂದನಲ್ಲಾ, ಇಷ್ಟ ದಿನ ನನ್ನ ಒಂದು ಮುಖಾ ನೋಡಿದ್ದಿ, ಇನ್ನ ಮುಂದ ನನ್ನ ಇನ್ನೊಂದು ಮುಖಾ ನೋಡ ಬೇಕಾಗತದ. ಅಂತ, ಅವನಿಗೆ ಎಷ್ಟು ಮುಖಾ ಅವ. ಅಂತ ನೋಡಲಿಕ್ಕೆ ಹತ್ತಿದ್ದೆ.” ಅಂದೆ. “ಅಯ್ಯ, ಹುಚ್ಚವ್ವಾ, ಅಂವಾ ಮಾತಿಗೆ ಹಂಗಂದ. ಆದರ, ಖರೇ ಅಂದ್ರೂ ಅಂವಗೂ ಒಂದೇ ಮುಖಾ ಅದ. ಹಂಗೇನರ, ಎರಡೋ, ಮೂರೋ ಮುಖಾ ಇದ್ದರ, ನೀ ಒಬ್ಬಾಕೀನೇ ಅಲ್ಲ, ಭಾಳ ಮಂದಿ ತಿರುಗಿ ತಿರುಗಿ ಅವನನ್ನ ನೋಡತಿದ್ದರು.” ಅಂದಳು. “ಖರೇ ಅಂದ್ರ ಅಂವಗ, ಒಂದಕ್ಕಿಂತ ಹೆಚ್ಚು ಮಾರಿ ಇದ್ದರ, ಅದು ನೋಡಿದ ಕೂಡಲೇ ಎಲ್ಲಾರಿಗೂ ತಿಳಿದೇ ಹೋಗತಿತ್ತು, ಇಂವಾ ಹಿಂಗ ಅದನ್ನ ಎಲ್ಲಾರಿಗೂ, ಫೋನಿನೊಳಗ ಹೇಳೋ ಅವಶ್ಯಕತಾ ಇರಲಿಲ್ಲ” ಅಂದೆ.
“ಎಲ್ಲಾರಿಗೂ, ನಮಗೆ ಕಾಣೋ ಒಂದು ಮುಖಾ ಅಲ್ಲದೇನೇ, ಇನ್ನೂ ಒಂದು ಮುಖಾ ಇರತದ. ಅದು ಒಳಗಿನ ಮುಖಾ, ಯಾರಿಗೂ ಕಾಣೂದಿಲ್ಲ. ಅದನ್ನೇ ಅಂವಾ ಹೇಳಿದ್ದು.” ಅಂದಳು. “ಹೌದ, ಅದು ಒಳಗ ಅಂದರ, ದೇಹದೊಳಗ, ಎಲ್ಲಿರತದ. ನಮಗ, ಬಯೊಲಜಿಯೊಳಗ ದೇಹದ ಅಂಗ ರಚನೆಯೊಳಗ ಕಲಿಸೇ ಇಲ್ಲ.” ಅಂದೆ. ಯಾಕಂದರ, ಎಸ್ಎಸ್ಎಲ್ ಸಿ ಯೊಳಗ, ಬಯೋಲಜಿಗೆ ನನಗ 35 ಕ್ಕ 34 ಮಾರ್ಕ್ಸ ಬಂದಿದ್ದವು, ಅಕೀ, ನಕ್ಕು ಬಿಟ್ಟಳು. “ಅಯ್ಯ ದಡ್ಡೀ” ಅಂದಳು. ಖರೇನ ನನಗ ಬ್ಯಾಸರಾತು. ಅಷ್ಟೆಲ್ಲಾ ಕಷ್ಟಪಟ್ಟು ಓದಿ, ನೂರಾ ಎಂಟು ಚಿತ್ರ ತಗೆಯೋದು ಕಲತು, ಅದರ ಹೆಸರು ನೆನಪಿಟ್ಟುಕೊಂಡು, ಇಷ್ಟು ಮಾರ್ಕ್ಸ ತೊಗೊಂಡಾಕಿಗೆ, ದಡ್ಡೀ ಅಂತಾಳೀಕಿ. ಹೋಗಲಿ ಬಿಡರೀ.
“ಅಲ್ಲಾ, ಮನಸು ಅಂತ ಒಂದಿದ್ದರ ವಿಚಾರ ಮಾಡು” ಅಂದಳು. ಖರೇನ ಹೇಳತೇನಿ, ನಮ್ಮ ಬಯೋಲಜಿ ಸರ್, ಮನಸು ಕೂಡಾ ಎಲ್ಲೆದ ಅಂತ ಹೇಳಿಲ್ಲರೀ. ಮುಖ್ಯವಾಗಿ, ಹೃದಯದ ಚಿತ್ರ, ಹೃದಯದ ತೆರೆದ ಚಿತ್ರ ಅಥವಾ ಮೆದಳಿನ ಚಿತ್ರ ಅದರಾಗೂ ಮುಖ್ಯವಾದ ಮೂರು ಭಾಗಗಳನ್ನ ಕಲಿಸಿದ್ದರು. ಇದು ದೊಡ್ಡ ಪ್ರಶ್ನೆ ಮೂರು ಮಾರ್ಕ್ಸ ಅಂತ ಸೈತ ಹೇಳಿದ್ದರು. ಮತ್ತ ಈ ಹೃದಯದ ಚಿತ್ರ ಕೂಡಾ, ಈಗ ಹುಡುಗರು ತೆಗೀತಾರಲಾ, ಕೆಂಪಗ ಎರಡು ಬಾದಾಮಿ ಜೋಡಿಸಿದಂಗೆ, ಅದರಾಗ ಒಂದು ಬಾಣಾ ಚುಚ್ಚಿ ಹಂಗೂ ಇರಲಿಲ್ಲರೀ. ಈ ಮನಸ್ಸು ಎಲ್ಲದ. ಇನ್ನ ಬಸ್ಸು ಇಳಿಯೋ ಸಮಯ ಬಂತು, ಅಲ್ಲಲ್ಲ, ನಾವು ಪ್ರಯಾಣದೊಳಗ, ಇಳಿಯುವ ಗಮ್ಯ ಬಂತು. ನಾನೇನ ಹೇಳಿದರೂ ಚಂದಲ್ಲ ಅಂತ ಸುಮ್ಮಾದೆರೀ. ಆದರ, ಎರಡು ಮುಖಾ ಇರೋದು ಅಂದರ, ಒಂದು ನಾಣ್ಯಕ್ಕೆ ಮಾತ್ರ. ನಾವೆಲ್ಲಾ ನೋಡೇವಿ, ಅದಕ್ಕ ಹೆಸರು ಒಂದು ಕಡೆ ರಾಜಾ, ಮತ್ತೊಂದು ಕಡೆ ರಾಣಿ ಅಂತ.
ಆದರ, ಯಾರಿಗರೇ ಒಂದಕ್ಕಿಂತ ಹೆಚ್ಚು ಮುಖಾ ಅವ ಅಂದರ, ಅಂವಾ ಸಾಮಾನ್ಯ ಮನಷ್ಯಾ ಅಲ್ಲರೀ, ದೇವರ ಆಗಿ ಬಿಡತಾನ. ಹಿಂದ ಮುಂದ ಕೇವಲ ಎರಡು ಮುಖದ ದೇವರು, ಮೂರು ಮುಖಾ ಇದ್ದವರು ಯಾಕ, ನಾಲ್ಕು ಮುಖದ ಬ್ರಹ್ಮನ ಇದ್ದಾನಲ್ಲ. ಮತ್ತ ಶಿವಗ ಐದು ಮುಖಾ ಇದ್ದವಂತ. ಹೀಂಗ, ಏನೋ ಜಗಳದಾಗ, ಮ್ಯಾಲಿನ, ಊರ್ಧ್ವ ಮುಖಾನ ಯಾರೋ ಕಡದು ಬಿಟ್ಟಾರಂತ, ಈಗ ನಾಲ್ಕು ಮುಖಾ ಮಾತ್ರ ಕಾಣತಾವಂತ. ಪಂಚಮುಖಿ ಆಂಜನೇಯ, ಪಂಚಮುಖಿ ಗಣಪತಿ ಕಂಡಿಲ್ಲೇನರಿ. ಆರು ಮುಖದ ಷಣ್ಮುಖ ನಮ್ಮ ಮನೀ ಕುಲದೇವರು. ಆದರ, ಚಿತ್ರದಾಗ ಮಾತ್ರ, ಒಂದ ಒಂದು ಚಂದದ, ಮುದ್ದು ಸುರಿಯೋ ಬಾಲಕನ ಮಾರಿ ತೋರಸತಾರರೀ. ಹಂಗ ಹದಿನೆಂಟು ಮುಖದ ದೇವರು ವಿಶ್ವರೂಪ ದರ್ಶನದ ಭಾವ ಚಿತ್ರದಲ್ಲಿ. ಕೆಲವೊಮ್ಮೆ ಮಾತ್ರ ಈ ಬಾಯಿ ಅಥವಾ ನಾಲಿಗೆ ತಗೀತಾನಂತ. ಹಂಗಾರ, ಒಂದಕ್ಕಿಂತ ಹೆಚ್ಚು ಮುಖಾ ಇದ್ದವರೆಲ್ಲಾ ದೇವರೇನೂ ಅನ ಬ್ಯಾಡರೀ. ಹತ್ತು ಮುಖದ ರಾವಣ ರಾಕ್ಷಸಾಗ್ರೇಸರ. ಇದನ್ನ ಹರಿದಾಸರು ಕಂಡಿದ್ದರು. ಶ್ರೀ ವೆಂಕಟೇಶ ಪಾರಿಜಾತದಾಗ, ಉರುಟಣೆ ಹಾಡು, ಒಬ್ಬರು ನಾಲ್ಕು ಮುಖದಿಂದ ಉಣ್ಣುವರು, ಒಬ್ಬರು ಆರು ಮುಖದಿಂದ ಉಣ್ಣುವರು.” ಅಂತ ಹಾಡ್ಯಾರ
ಮತ್ತ, ಬರೇ ದೇವರಿಗೆ, ರಾಕ್ಷಸರಿಗೆ ಮಾತ್ರ ಒಂದಕ್ಕಿಂತ ಹೆಚ್ಚಿನ ಮುಖಾ ಅವ. ಯಾಕಂದರ, ಚತುರ್ಮುಖ ಬ್ರಹ್ಮನ ಹೆಂಡತಿ ಸರಸವ್ವ, ಚಂದಾಗಿ ಒಂದ ಮುಖದಿಂದ ವೀಣಾ ನುಡಸಲಿಕ್ಕೆ ಹತ್ತಿದ್ದ ಫೋಟೋ ನೋಡತೇವಿ. ಪಂಚ ಮುಖದ ರುದ್ರನಿಗೆ, ಏಕ ಮುಖದ ರುದ್ರಾಣಿ ಅನ್ನೂದೇನೂ ಬ್ಯಾಡ. ಯಾಕಂದರ, ಕಾಳಿದೇವಿಗೆ ಅನೇಕ ಮುಖಗಳಿದ್ದವು, ಎರಡೇ ಕೈಗಳಿದ್ದವು, ನೆಗಡಿಯಾದರೆ ಏನು ಮಾಡುತ್ತೀ ಅಂತ, ಕಾಳಿದಾಸ ಕಾಲಿಕೆಯನ್ನ ಕೇಳಿದನಂತ. ಬಂಗಾಲದ ದುರ್ಗೆಗೆ ಅನೇಕ ಕೈಗಳು, ಒಂದೇ ಮುಖದ ಚಿತ್ರವನ್ನ ನೋಡತೇವಿ. ಇರಲಿ ಬಿಡರಿ, ಅದು ಮುಖ್ಯವಲ್ಲ ಈಗ. ನನ್ನ ತಲೀ ಅಲ್ಲಲ್ಲ ಮುಖ, ಅಯ್ಯೋ ಮುಖಾ ಅಲ್ಲ, ತಲೀನೇ, ಕೊರೀಲಿಕ್ಕೆ ಹತ್ತಿದ್ದು, ಒಂದೇ ಮುಖದೊಳಗೆ ಇನ್ನೊಂದು ಮುಖಾ ಹೆಂಗಿರತದ ಅನ್ನೋದು.
ಆದರೆ, ಪ್ರತಿಯೊಬ್ಬರಿಗೂ, ಎರಡು ಮುಖಾ ಇರತಾವ, ಒಂದು ಸುಪ್ತ ಮುಖಾ. ಅದು ನಮಗ ಗೋಚರಿಸೋದಿಲ್ಲ. ಕೆಲವೊಮ್ಮೆ ಮಾತ್ರ, ನಮ್ಮ ಮನಸ್ಸು ತನ್ನ ಸಮತೋಲನ ತಪ್ಪಿದರೆ ಮಾತ್ರ, ಮನುಷ್ಯನ ದ್ವಿಮುಖ ನಡುವಳಿಕೆ ಗೋಚರವಾಗತದ. ಅಂತ ಮನಃಶಾಸ್ತ್ರಜ್ಞರು ಹೇಳತಾರ. ಅದೂ ಕೂಡಾ ಮೇಲೆ ಕಾಣೋ ಮುಖಾ ಅಲ್ಲ, ನಡುವಳಿಕೆಯಿಂದ ತೋರಿದ್ದು ಅಂತ. ಅಂತಹ ಅನೇಕ ಕತೆಗಳು, ಸಿನಿಮಾ ಬಂದಿವೆ. ಎರಡು ಮುಖ ಅಂತಲೇ ಜಯಂತಿಯವರ ಒಂದು ಸಿನೆಮಾ ಬಂದದಲ್ಲಾ. ಆದರೂ ಈ ಮುಖಾ ನೋಡಿ ಮಣೆ ಹಾಕೋದು ಅಂತಾರಲಾ, ಎರಡು ಮುಖ ಇರೋವರಿಗೆ ಯಾವ ಮುಖ ನೋಡಿ ಮಣಿ ಹಾಕತಾರ.
ಹಂಗಾದರ, ಮುಖ ಅಂದರೇನು ಮಾನವ ತಲೆಯ ಮುಂದಿನ ಭಾಗವನ್ನು ಮುಖವೆಂದು ಕರೆಯಲಾಗುತ್ತದೆ. ಇದು ಹಲವಾರು ಪ್ರತ್ಯೇಕ ಪ್ರದೇಶಗಳನ್ನು ಹೊಂದಿರುತ್ತದೆ. ಹಣೆಯು ಕೂದಲ ಅಂಚಿನ ಆಚೆಗೆ ಚರ್ಮ, ಪಾರ್ಶ್ವದಲ್ಲಿ ಕಣತಲೆಗಳ ಮತ್ತು ಕೆಳಗೆ ಹುಬ್ಬುಗಳು ಹಾಗೂ ಕಿವಿಗಳನ್ನು ಎಲ್ಲೆಯಾಗಿ ಹೊಂದಿರುತ್ತದೆ. ಕಣ್ಣು ರೆಪ್ಪೆಗಳು ಮತ್ತು ರೆಪ್ಪೆಗೂದಲಿನಿಂದ ರಕ್ಷಿತವಾಗಿರುವ ಗೂಡಿನಲ್ಲಿರುವ ಕಣ್ಣುಗಳು. ವಿಶಿಷ್ಟವಾದ ಮೂಗಿನ ಆಕಾರ, ಮೂಗಿನ ಹೊಳ್ಳೆಗಳು ಮತ್ತು ಮೂಗಿನ ವಿಭಾಜಕ ಭಿತ್ತಿ.ದವಡೆ ಎಲುಬು ಮತ್ತು ಕೆಳದವಡೆಯನ್ನು ಆವರಿಸಿರುವ ಕೆನ್ನೆಗಳು, ದರ ತುದಿಯೇ ಗದ್ದ. ಬಾಯಿ, ಜೊತೆಗೆ ಮೇಲಿನ ತುಟಿ, ಕೆಲವೊಮ್ಮೆ ಹಲ್ಲುಗಳು ಮೇಲಿನ ತುಟಿ, ಕೆಲವೊಮ್ಮೆ ಹಲ್ಲುಗಳು ಕಾಣಿಸುವಂತೆ ಮಾಡುತ್ತದೆ. ಮೌಖಿಕ ನೋಟ ಮಾನವನ ಗುರುತಿಸುವಿಕೆ ಮತ್ತು ಸಂವಹನಕ್ಕಾಗಿ ಅತ್ಯಗತ್ಯವಾಗಿದೆ. ಮಾನವರಲ್ಲಿ ಮುಖದ ಸ್ನಾಯುಗಳು ಭಾವನೆಗಳ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಡುತ್ತವೆ. ಮುಖವು ಸ್ವತಃ ಮಾನವ ಶರೀರದ ಬಹಳ ಸೂಕ್ಷ್ಮವಾದ ಪ್ರದೇಶವಾಗಿದೆ.ಮತ್ತು ಮಿದುಳು ಅನೇಕ ಮಾನವ ಇಂದ್ರಿಯಗಳ ಪೈಕಿ ಯಾವುದರಿಂದಾದರೂ ಪ್ರಚೋದಿತವಾದಾಗ ಇದರ ಭಾವ ಬದಲಾಗಬಹುದು. ಉದಾಹರಣೆಗೆ ಸ್ಪರ್ಶ, ತಾಪಮಾನ, ವಾಸನೆ, ರುಚಿ, ಶ್ರವಣಶಕ್ತಿ, ಚಲನೆ, ಹಸಿವು, ಅಥವಾ ದೃಶ್ಯ ಪ್ರಚೋದಕಗಳು. ಮುಖವು ಒಬ್ಬ ವ್ಯಕ್ತಿಯನ್ನು ಅತ್ಯುತ್ತಮವಾಗಿ ವ್ಯತ್ಯಾಸಮಾಡುವ ಲಕ್ಷಣವಾಗಿದೆ. ಮಿದುಳಿನ ವಿಶೇಷ ಪ್ರದೇಶಗಳು ಮೌಖಿಕ ಗುರುತಿಸುವಿಕೆಯನ್ನು ಸಾಧ್ಯವಾಗಿಸುತ್ತವೆ; ಇವು ಹಾನಿಗೊಂಡಾಗ, ಮುಖಗಳನ್ನು ಗುರುತಿಸುವುದು ಅಸಾಧ್ಯವಾಗಬಹುದು, ನಿಕಟ ಕುಟುಂಬ ಸದಸ್ಯರ ಮುಖಗಳನ್ನು ಕೂಡ. ಈ ಲಕ್ಷಣಗಳಿಂದಲೇ ಆಧಾರ ಕಾರ್ಡನಿಂದ ಪ್ರತಿಯೊಬ್ಬರನ್ನೂ ಗುರುತಿಸಲು ಸಾಧ್ಯವಾಗುವುದು.
ಆದರ, ಪ್ರತಿಯೊಬ್ಬನಿಗೂ ನಿಜವಾಗಿಯೂ ನಾಲ್ಕು ರೀತಿಯ ಮುಖಗಳಿರುತ್ತವಂತ. ಅಂದರ ಒಂದೇ ಮುಖದೊಳಗೆ ನಾಲ್ಕು ರೀತಿಯ ನಡುವಳಿಕೆಯನ್ನು ತೋರಿಸುತ್ತಾನಂತೆ. ಚತುರ್ಮುಖ ಬ್ರಹ್ಮನ ಸೃಷ್ಟಿ ಅಂತಾದ ಮೇಲೆ, ನಾಲ್ಕು ಮುಖದ ಮನುಷ್ಯ, ಅದರಾಗೇನು ವಿಶೇಷ ಅನಬ್ಯಾಡರೀ. ಅವು ಯಾವವು ಅಂದರ, ಮೊದಲನೆಯದು, ನಮಗ ನೋಡಲಿಕ್ಕೆ ಕಾಣುವ ಮುಖ ಅಂದರ ಒಬ್ಬ ಮನುಷ್ಯನ ದಿನ ನಿತ್ಯದ ನಡುವಳಿಕೆಯಿಂದ, ಸಮಾನ್ಯವಾಗಿ, ಒಬ್ಬ ವ್ಯಕ್ತಿಯು ತೋರಿಸಿಕೊಂಡಿರುವ ನಡುವಳಿಕೆಯ ಮುಖ. ಸದಾ ನಗುನಗುತಿರುವ ಮುಖ. ನಾನು ಏನಾಗಿದ್ದೇನೆ, ಏನಾಗಿರಬೇಕೆಂದು ಕನಸು ಕಂಡಿದ್ದೇನೆಯೋ ಅದೇ ನನ್ನ ಮುಂದಿರುವ ಮುಖ, ಎಲ್ಲರಿಗೂ, ಜಗತ್ತಿಗೂ ನಾನು ತೋರುತ್ತಿರುವೆ ಎಂದು ನಾನು ಭಾವಿಸಿರುವ ಮುಖ. ನಾನು ಹೀಗೆ ತೋರಬೇಕೆಂದು ನನ್ನ ಕಲ್ಪನೆಯಲ್ಲಿರುವ ಮುಖ. ಅದು ಬೇಂದ್ರೆಯವರ, ನಾರಿ ನಿನ್ನ ಮಾರಿ ಮ್ಯಾಲೆ ನಗೀ ನವಿಲು ಆಡತಿತ್ತ ಅಂತ.
ಹಂಗಾದರ, ಇನ್ನೊಂದು ಮುಖ ಯಾವುದೆಂದರೆ, ಸಮಾಜದ ರೀತಿ ನೀತಿ, ಕ್ರಿಯೆಗಳಿಂದ, ತಾನು ತೋರುವ ಪ್ರತಿಕ್ರಿಯೆಯ ಮುಖ. ಇದು ಅವನ ಅಂತರಾಳ ಅಂತಲೂ ಹೇಳಲೂ ಬಹುದು. ಸಾಮಾನ್ಯವಾಗಿ, ನಾವು ನಮ್ಮ ಮನಸ್ಸಿನ ಪ್ರತಿಕ್ರಿಯೆಯನ್ನು ತೋರದೇ, ಮೇಲ್ನೋಟದ ಬೇರೆಯನ್ನೇ ತೋರಿಸಿರುತ್ತೇವಲ್ಲ ಅದು. ಇದನ್ನೇ ಬೇಂದ್ರೆಯವರು, ನನ್ನ ಕೈಯ ಹಿಡಿದಾಕಿ, ಅಳು ನುಂಗಿ ನಗುವಾಗ ಅಂತ ಹೇಳ್ಯಾರಲ್ಲ, ಅಂದರ, ನಾವು ಯಾವಾಗಲೂ ಸಮಾಜದ ಎದುರಿಗೆ ನಮ್ಮ ನಿಜವಾದ ನಡುವಳಿಕೆಯನ್ನು ತೋರಿಸಿರುವುದಿಲ್ಲ. ಮೇಲ್ನೋಟಕ್ಕೆ ಒಂದು ಸಾಭ್ಯಸ್ಥ ಮುಸುಕು ಹಾಕಿಕೊಂಡಿರುತ್ತೇವೆ ಅಂತಾಯಿತು. ಅದನ್ನೇ, ನಿನ್ನ ಮನಸ್ಸಿನಲ್ಲೇನಿದೆ ಹೇಳು ಎಂತ ಹೇಳುವುದೋ ಅಥವಾ ಅವನ ಮನಸ್ಸೇ ತಿಳಿಯದೇ ಮೋಸ ಹೋದೆ ಎನ್ನುವುದೋ ಆಗಿರುತ್ತದೆ. ಇದೇ ಕೆಲವೊಮ್ಮೆ ನಮ್ಮ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟು, ಯಾವತ್ತೋ ಒಮ್ಮೆ ಸ್ಫೋಟವಾಗುವ ಸ್ಥಿತಿ. ಇದನ್ನೇ ನನ್ನ ಇನ್ನೊಂದು ಮುಖವೇನೆಂದು ನೀನು ತಿಳಿದಿಲ್ಲ ಎಂದು ಹೇಳುವುದು. ಕೆಲವೊಮ್ಮೆ ಇದನ್ನು ರಾಜಕಾರಣಿಗಳ ನಡುವಳಿಕೆ ಎಂತಲೂ ಹೇಳುತ್ತಾರೆ. ಇದೇ ದ್ವಿ ಮುಖ. ಇದೇ ಎಲ್ಲರಿಗಿರುವ ಇನ್ನೊಂದು ಮುಖ. ಇದು ಕರಾಳ, ಘೋರ ರೂಪವೂ ಆಗಿರಹುದು ಅಥವಾ ಶಾಂತ, ಮಗುವಿನ ಮುಗ್ಧ ಮುಖವೂ ಆಗಿರಬಹುದು. ಆದರೆ ಮೇಲ್ನೋಟಕ್ಕೆ ಕಾಣದ ಮುಖ. ಹಿಂದೆ ಯಾರಿಗೂ ಕಾಣದಿರುವ ಮುಖವನ್ನು ತತ್ವಜ್ಞಾನಿಗಳು ಹೀಗೆ ಹೇಳುತ್ತಾರೆ. ಇದು ಭಗವಂತನ ಸೃಷ್ಟಿ, ನನಗೆ ಭೂಮಿಗೆ ಬರುವಾಗ ಭಗವಂತ ಒಪ್ಪಿಸಿದ ಕಾರ್ಯಕ್ಕೆ ನೀಡಿರುವ ವ್ಯಕ್ತಿತ್ವ ಆದರೆ ಇದು ಯಾರಿಗೂ ಕಾಣದಂತೆ ಹಿಂದೆ ಮರೆಮಾಚಿರುವುದೇ ಸೃಷ್ಟಿಯ ವೈಚಿತ್ರ್ಯ. ಅಂದರೆ, ನಿಜವಾಗಿ ನಾನು ಇರಬೇಕಾಗಿರುವ ವ್ಯಕ್ತಿತ್ವ, ಇಲ್ಲದೇ ಇರುವ ಮುಖ.
ಇದಲ್ಲದೇ ನಮಗೆ ಇನ್ನೂ ಎರಡು ಮುಖಗಳಿರುತ್ತವೆ. ಆಶ್ಚರ್ಯವಾಗುತ್ತದೆಯಲ್ಲವೇ. ಹೌದು, ನಮಗಿರುವುದು ನಾಲ್ಕು ಮುಖಗಳು ಎಂದಾದರೆ, ಅದರಲ್ಲಿ ಒಂದು, ಸಾಮಾನ್ಯವಾಗಿ ಕಾಣಿಸಿಕೊಳ್ಳಲು ಬಯಸುವ ಮುಖ, ನಗುನಗುತ್ತಿರುವ ಮುಖ, ಚತುರ್ಮುಖ ಬ್ರಹ್ಮನ ಮುಂದಿನ ಮುಖವೆಂದರೆ, ನಾವು ನುಂಗಿದ ನೋವಿನ ಮುಖ, ಚತುರ್ಮುಖನ ಹಿಂದಿನ ಮುಖ ಅಂದುಕೊಳ್ಳೋಣ. ಆಗ ಉಳಿದಿರುವುದು, ಬ್ರಹ್ಮನ ನಾಲ್ಕು ಮುಖದಲ್ಲಿ ಎಡಗಡೆಯ ಮುಖ ಮತ್ತು ಬಲಗಡೆಯ ಮುಖ. ನಮ್ಮ ನಡುವಳಿಕೆಯಲ್ಲಿ ಈ ಎರಡೂ ಮುಖಗಳನ್ನೂ ತೋರುತ್ತೇವೆ.
ಎಡಗಡೆಯ ಮುಖವೆಂದರೆ, ನಾವೇನು ಅಲ್ಲವೋ ಅದನ್ನು ನಾವು ಹೌದು, ನಮ್ಮಲ್ಲಿದೆ ಎಂದು ಜಗತ್ತಿಗೆ ತೋರಲು ಪ್ರಯತ್ನಿಸುವ ಮುಖ. ತುಂಬ ಸುಲಭವಾಗಿ ಹೇಳುವುದಾದರೆ, ನಮಗೇನೂ ತಿಳಿದಿರದಿದ್ದರೂ ಎಲ್ಲವನ್ನೂ ಬಲ್ಲೆ, ನಾನೇ ಬ್ರಹ್ಮಾಂಡ ಎಂದು ನಟಿಸುತ್ತೇವಲ್ಲವೇ, ನಾನು ಸರ್ವ ಗುಣ ಸಂಪನ್ನ ಎಂದೂ, ಎಲ್ಲವನ್ನೂ ತಿಳಿದಿರುವ ಜ್ಞಾನಿ ಎಂದು ತೋರುತ್ತೇವಲ್ಲವೇ ಅದೇ ಎಡಗಡೆಯ ಮುಖ. ನಮ್ಮಲ್ಲಿಲ್ಲದ್ದನ್ನೂ ಇದೆ ಎಂದು ತೋರುವ ಮುಖ. ಒಂದು ಹೊತ್ತು ಊಟಕ್ಕಿಲ್ಲದಿದ್ದರೂ, ಸಮಾಜದಲ್ಲಿ ನಾವು ದಿನವೂ ಐದು ನಕ್ಷತ್ರದ ಹೋಟೇಲಿನಲ್ಲಿಯೇ ವಾಸಿಸುವುದು ಎಂದು ತೋರುವ ಮುಖ. ಎಷ್ಟೋ ಸಲ ನಮ್ಮ ಮನೆಯನ್ನು ತೋರಲು ಬಯಸದೇ, ಇಲ್ಲೇ ನಮ್ಮ ಮನೆಯಿದೆ. ಇಲ್ಲೇ ನಿಲ್ಲಿಸಿಬಿಡಿ ಎಂದು ಇಳಿದು, ಅವರನ್ನು ಮನೆಗೂ ಕರೆಯದೇ ಹೋಗುವುದಿದೆಯಲ್ಲ, ಇದು ಎಡಗಡೆಯ ಮುಖದ ಮುಚ್ಚಿಡುವಿಕೆಯ ಲಕ್ಷಣ. ಕೆಲವೊಮ್ಮೆ ನಮ್ಮ ಕನಸು, ನಾನು ಹೀಗೆ ಬಾಳ ಬೇಕಾಗಿತ್ತು ಎನ್ನುವುದಕ್ಕೂ, ನಾನು ಈಗ ಹೀಗಿದ್ದೀನಿ ಎನ್ನುವುದರಲ್ಲಿನ ನಡುವಿನ ವ್ಯತ್ಯಾಸವೂ ಇರಬಹುದು.ಇದು ಮೂರನೇ ಮುಖ. ಎಡ ಭಾಗದ ಮುಖ, ವಾಮ ದೃಷ್ಟಿ, ಎಂದರೆ ನಾನು ಏನಾಗಿದ್ದೇನೆಂದು ಜನರು ತಿಳಿಯುತ್ತಾರೋ ಅದು ನನ್ನ ವಾಮ ಪರಿಚಯವನ್ನು ಹೇಳುವ ಮುಖ. ನಾನು ಏನೇ ಆಗಿದ್ದರೂ, ಜಗತ್ತು, ನನ್ನನ್ನು ಹೀಗೆ ತಿಳಿದಿರುತ್ತದೆ ಎಂದು ನನ್ನ ಕಲ್ಪನೆಯಲ್ಲಿರುವ ಮುಖ.
ಇನ್ನು ಕೊನೆಯ ಮುಖವೆಂದರೆ, ನನ್ನ ಬಲಬದಿಯ ಮುಖ, ಅಂದರೆ, ವಾಮ ಭಾಗದ ಎದುರಿಗಿನ ಮುಖ, ಇದು ನನ್ನ ನಿಜವಾದ ಮುಖ, ನಾನು ಜಗತ್ತಿಗೆ ತೋರಬೇಕೆಂದು ಬಯಸಿರುವ ಮುಖವೂ ಅಲ್ಲದ, ಜನರು ಏನೆಂದು ಕೊಂಡಿದ್ದಾರೋ ಅದೂ ಅಲ್ಲದ, ಭಗವಂತ ನನಗೆ ಎಂದು ಸಂಕಲ್ಪಿಸಿದ ಕಾರ್ಯಗಳಿಗೆ ಸೃಷ್ಟಿಸಿದ ಮುಖವೂ ಅಲ್ಲದ, ಕೇವಲ ನನ್ನ ಕಾರ್ಯಗಳಿಂದ ಸೃಷ್ಟಿಯಾಗಿರುವ ಮುಖ. ಇದನ್ನು ಸದಾ ಮರೆಮಾಚಿರುತ್ತೇವೆ, ಅದನ್ನು ಮರೆಮಾಚಲು ಬಯಸುತ್ತೇವೆ. ಅಲ್ಲವೇ. ನನ್ನ ನಿಜವಾದ ಶಕ್ತಿಯ, ನನ್ನ ಜಿವಾದ ಯೋಗ್ಯತೆಯ ಮುಖ. ಗುಣಾವಗುಣಗಳು, ದೋಷಗಳು, ಸರಿ ತಪ್ಪುಗಳನ್ನು ಜೊತೆಜೊತೆಯಾಗಿಯೇ ಇಟ್ಟ ಮುಖವಿದು.
ನಿಜವಾಗಿ ನಾಲ್ಕು ರೀತಿಯಲ್ಲಿ, ಚತುರ್ಮುಖ ಬ್ರಹ್ಮನಂತೆ ಹೊಂದಿರುವ ನಾಲ್ಕು ಮುಖದ ಚಿತ್ರಣವೇ ನಾನು. ಈ ನಾಲ್ಕು ತದ್ವಿರುದ್ಧ ವ್ಯಕ್ತಿ ಚಿತ್ರಗಳ, ಮುಖವಾಡಗಳ ಒಂದೇ ಮೂರ್ತ ರೂಪವೇ ನಾನು. ಇವುಗಳಲ್ಲಿ ಕೆಲವೊಂದಕ್ಕೆ ಮುಸುಕು ಹಾಕಿ, ಕೆಲವೊಂದಕ್ಕೆ ಹೆಚ್ಚಿನ ಬಣ್ಣ ಹಾಕಿ, ಹೊಳಪು ನೀಡಿ, ನಟಿಸುವುದು, ನಟಿಸಿದಂತೆ ನಟನೆ ಮಾಡುವುದೇ ನಾಲ್ಕು ಮುಖಗಳ ಅರ್ಥವತ್ತಾದ ಜೀವನ. ಇವುಗಳಲ್ಲಿ ಕೆಲವನ್ನು ಸದಾ ಮುಚ್ಚಿಡಲು ಯತ್ನಿಸುತ್ತಾ, ಕೆಲವನ್ನು ಸದಾ ಎತ್ತಿ ತೋರಲು ಯತ್ನಿಸುತ್ತಾ, ಕೆಲವನ್ನು ಜನರು ನಂಬಿದ್ದಾರೆ ಎಂದು ಭ್ರಮಿಸುತ್ತಾ, ಜೀವನ ನಾಟಕದಲ್ಲಿ, ಕೆಲವೊಮ್ಮೆ ಪರದೆ ಹಾಕುವ ಮುನ್ನವೇ, ನಾವೇ ಎಚ್ಚರ ತಪ್ಪಿ, ಮುಖವಾಡ ಸರಿಸಿ ಬಿಟ್ಟಿರುತ್ತೇವೆ. ಮತ್ತೆ ಕೆಲವೊಮ್ಮೆ ಸಮಯ ಸಂದರ್ಭಗಳು, ಇನ್ನೂ ಕೆಲವೊಮ್ಮೆ ನಮ್ಮ ಸಹವರ್ತಿಗಳೋ, ವೈರಿಗಳೋ ಮುಖವಾಡ ಸರಿಸುತ್ತಾರೆ.
ಆದರೂ ನಟಿಸುವುದೇ ಜೀವನ. ಅಂತಹ ಪ್ರಸಂಗದಲ್ಲೇ, ಒಮ್ಮೊಮ್ಮೆ, ಸನ್ನಿವೇಶಕ್ಕೆ, ಪಾತ್ರಕ್ಕೆ ಅವಶ್ಯವಿಲ್ಲದಿದ್ದರೂ, ನಮ್ಮ ಇನ್ನೊಂದು ಮುಖವನ್ನು ತೋರಿಬಿಡುತ್ತೇವೆ. ಇಷ್ಟೆಲ್ಲಾ ಆದ ಮ್ಯಾಲೂ ಹಾಡತೇವಿ, ಚಲುವೆಯ ಅಂದದ ಮೊಗಕೆ……ಮುಖವಾಡಕೆ, ಮುಖಗಳಿಗೆ ಅಂತಲ್ಲಾ.
ಆದರೂ ನಮಗೊಂದು ಹೆಮ್ಮೆ, ನಮ್ಮ ದೇಶದ ಲಾಂಛನ, ಅಶೋಕ ಸ್ಥಂಭದ ಮೇಲಿರುವುದೂ ಸಹ ನಾಲ್ಮೊಗದ ಸಿಂಹ, ಅಷ್ಟೇ ಅಲ್ಲ, ನಮ್ಮ ಮೈಸೂರು ರಾಜ್ಯದ ಲಾಂಛನವು ಎರಡು ಮುಖವುಳ್ಳ ಗಂಡಭೇರುಂಡ ಪಕ್ಷಿಯೇ.
-ಡಾ.ವೃಂದಾ ಸಂಗಮ್