ಪಂಜು ಕಾವ್ಯಧಾರೆ

ಶಕ್ತಿ

ಇಳಿದೊಮ್ಮೆ ನೋಡು ಎದೆಯೊಳಗೆ
ಪ್ರೀತಿ ಒಸರುವುದು ದನಿಯೊಳಗೆ
ಬಿತ್ತಿದವರ್ಯಾರು ಒಲವ ಇಳೆಗೆ
ಹೆಣ್ಣಿಲ್ಲವೆ ಹುಡುಕು ನಿನ್ನೊಳಗೆ?!

ತಾಯಾಗಿ ಹಾಲನು ಉಣಿಸಿ
ಸೋದರಿ ಸ್ನೇಹವ ಸೃಜಿಸಿ
ಮಡದಿ ಅಕ್ಕರೆಯಲಿ ರಮಿಸಿ
ನೀನು ಗೆಲುವಾದೆ ಬಯಸಿ!!

ಗುರುತಿರದಂತೆ ನೀ ನಟಿಸದಿರು
ಪಡೆದ ಕರುಣೆಯ ನೆನೆಯುತಿರು
ಇಂದಿಗೆ ನಾಳೆಗೆ ಮುನಿಯದಿರು
ಶಕ್ತಿಯಿಂದ ಬೆಳಕು ಕಡೆಗಣಿಸದಿರು!!

ಆಕೆಯಿರದೆ ನೀನು ಶೂನ್ಯ
ಹರಸಿ ಕೈಹಿಡಿದರೆ ಮಾನ್ಯ
ಪ್ರೇಮ ಕಡಲು ಅನನ್ಯ
ತೇಲಿದಾಗ ಬದುಕು ಧನ್ಯ..

-ನಿರಂಜನ ಕೆ ನಾಯಕ

ಮಗಳಾಗಿ ಬೇಡವಾದೆನೇ…?

ಹೆಣ್ಣಿನ ಜನುಮವೇಕೆ ಈ ಭೂಮಿಮ್ಯಾಲ,
ಒಡಲ ಬಗೆದು ಕಿಚ್ಚತ್ತು ಉರಿಯುವ
ಜ್ವಾಲೆಯಲಿ ತೇಲಾಡುವಳು ತನ್ನ ಬದುಕಿನಾಗ,
ಕಣ್ತೆರೆದು ನೋಡುವ ಮುನ್ನವೇ ಕ್ಷೀಣಿಸುವಳು ಈ ಜಗದಾಗ…

ಗರ್ಭದಲ್ಲಿ ಹಡೆದವ್ವಳೆ ಶತೃವಾದಳು ತನ್ನುಸಿರಿಗೆ,
ಬೇಕು ಬೇಡೆನ್ನುವ ಪರಿಯಲ್ಲಿರುವ ತಂದೆ
ಎಳೆ ಕೂಸನು ಕಿತ್ತೆಸೆದು ಸಂತಸದ ದ್ವಾರ ತೆರೆವನು.
ಹೆತ್ತ ತಾಯ್ತಂದೆಗೆ ಬೇಡವಾದ ಕೂಸು
ತನ್ನ ಮನದಾಗೆ ನೊಂದು ಸಾಯುವಳು.

ಗಂಡು ಮಗುವಾದರೆ ಓ ಮುದ್ದು ಕಂದ ಅದೃಷ್ಟವೆನ್ನುವರು.
ಹೆಣ್ಣಾದರೆ ತಮ್ಮ ಬದುಕಿಗೆ ಅನಿಷ್ಟ ಭಾರವೆನ್ನುವರು.

ವಿವಾಹ ಬoಧನಕ್ಕೆ ಹೆಣ್ಣು ಬೇಕು,
ಮಗುವಿಗೆ ಜನ್ಮ ನೀಡಲು ಹೆಣ್ಣು ಬೇಕು,
ಗಂಡಿಗೆ ಸುಖ – ಸಂಪತ್ತಿಗೆ ಹೆಣ್ಣು ಬೇಕು,
ತನ್ನ ಸಂತಸಕ್ಕೆ ರಮಿಸಲು ಹೆಣ್ಣು ಬೇಕು,
ಆದರೆ, ಮಗಳಾಗಿ ಹೆಣ್ಣು ಬೇಡವಾಯಿತೇ…….???

ಅನಿತ.ಎನ್

ಕಾವ್ಯದ ಕನಸೊಂದು

ಭಾವದೊಳಗೆ ಮಾತು
ಉಳಿದೀತು ಸುಮ್ಮನೆ
ಮಾತಿನೊಳಗೆ ನಸು ನಗುವು
ಕುಳಿತೀತು ಜಲ್ಲನೇ
ಒಲುಮೆಯಂತರದಲ್ಲಿ
ನಿಲುಮೆ ಸಾಗುತಿರಲಿ
ಜಗವೆಲ್ಲಾ ಹೃದಯದಿ
ಕರಗುವಂತಿರಲಿ
ಮುದ್ದು ಮಾತುಗಳು
ತೋರಣದ ಸಾಲಾಗಿರಲಿ
ಬರೆದ ಅಕ್ಷರಗಳು
ಹೃದಯವ ಕರಗಿಸಲಿ
ಕರಗಿದ ಹೃದಯದಲಿ
ಕವಿತೆಗಳು ಅರಳಲಿ
ಆಪ್ತತೆಯ ಮೊಗದಲ್ಲಿ
ನಸುನಗುವಿನ ಎಳೆಯಿರಲಿ
ಪ್ರೀತಿಸುವ ಮಾತಿಗೆ
ಹಗುರ ಮಾಡಲಿ ಬದುಕನು
ಒಳಿತಿನ ಅಲೆಯೊಂದು
ಬಲಿತು ಗಟ್ಟಿಯಾಗಲಿ
ನೆಲಮುಟ್ಟಿ ನೋಡುವ
ಕವಿಯ ಹಾಡಾಗಲಿ
ಕುಳಿತಲ್ಲೇ ಹಕ್ಕಿ
ಹಾಡೊಂದು ಹಾಡಲಿ
ಕಾವ್ಯದ ಕನಸೊಂದು
ಕಂಪನ್ನು ಹರಡಲಿ.

ನಾಗರಾಜ ಬಿ.ನಾಯ್ಕ

ಬೇರುಗಳು

ರಿಂಗಣಿಸುವ ಫೋನಿನಲ್ಲಿ ವಿಷಾದಗೀತೆಯೇ ಧ್ವನಿಸುವುದು
ತುತ್ತು ಗಂಟಲಲ್ಲಿ ಇಳಿಯುತ್ತದೆ ಸಾವು ನೋವಿನ ಸುದ್ದಿಯೊಡನೆ ಬೆರೆತು
ಕಣ್ಣೀರಿನಲ್ಲಿ ಅದ್ದಿ ಹೊಟ್ಟೆಗಿಳಿಯುವ ಅನ್ನದಗುಳಿಗೆ ಸೂತಕದ ಅರಿವಿಲ್ಲ

ಬಟಾಬಯಲಾಗಿವೆ ಮನೆಗಳು ನಿಟ್ಟುಸಿರಿನ ಝಳವು ಮನೆಮನಗಳನ್ನು ಸುಡುತ್ತಿದೆ
ಕುರುಡುಗಣ್ಣುಗಳಲ್ಲೀಗ ಕನಸುಗಳಿಲ್ಲ
ಎದೆಯೊಳಗೀಗ ಆಸೆಗಳಿಲ್ಲ ಊರ ನಡುವಿನ ಅರಳಿ ಮರದಲ್ಲಿ ಹಸಿರಿಲ್ಲ ಹಕ್ಕಿಪಿಕ್ಜಿಗಳ ಸಂಸಾರವಿಲ್ಲ

ಆಗಸದಲ್ಲಿನ‌ ನಕ್ಷತ್ರಗಳು ಚಂದ್ರ ಸೂರ್ಯರು ಹಳ್ಳಿಗಳೆಡೆ ಸುಳಿಯುತ್ತಿಲ್ಲ ಮಳೆಮೋಡಗಳ ಸುಳಿವಿಲ್ಲ ಅವಕ್ಕೂ ಕಣ್ಣಿನ ಪೊರೆ ಬಂದಿದೆ
ಒಣಗಿದ ಬೇರುಗಳಿಗೆ ಜೀವ ನೀಡುವ ತೇವವಿಲ್ಲ
ಹೃದಯದ ಬಡಿತ ಸಿಡಿಲಾಗಿ ಗುಡುಗುತ್ತಿದೆ

ಆಡುತ್ತಾ ಬಿದ್ದಾಗ ಎತ್ತಿ ನಿಲ್ಲಿಸಿ ಓಡುವುದನ್ನು ಕಲಿಸಿದ ಜೀವಕ್ಕಿ ಹಿಡಿ ಮಣ್ಣು ಹಾಕಿ ಮುಕ್ತಿ ನೀಡಿ ಋಣಮುಕ್ತರಾಗಲು ಸಮಯದ ಅಭಾವ
ಸಾವಿನ ಸುದ್ದಿಯನ್ನು ಜೀರ್ಣಿಸಿಕೊಳ್ಳುವ ಕಲೆಯನ್ನು ಕಲಿತಿದ್ದೇವೆ

ಧಾವಂತದ ಬದುಕು ಭಾವನೆಗಳನ್ನು ತಿಂದು ತೇಗುತ್ತಿದೆ ದುರಂತಗಳು ನೀರು ಕುಡಿದಷ್ಟೇ ಸಲೀಸಾಗುತ್ತಿವೆ ; ಊರುಗಳಲ್ಲೀಗ ಜೀವವಿಲ್ಲ ಗಾಳಿಯೂ ಅತ್ತ ಹಾಯುವುದಿಲ್ಲ ಮರಗಿಡಗಳು ಒಣಗಿ ದಿನಗಳನ್ನೆಣಿಸುತ್ತಿವೆ ಹಕ್ಕಿ ಗೂಡು ಕಟ್ಟುತ್ತಿಲ್ಲ

-ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

ಸೆಲ್‌ಫೋನ್ ದೇವ!

ಬೆಳಗೆದ್ದು ನಾನೀಗ ಯಾರನ್ನ ನೆನೆದೇನು
ಅಂಗೈ ಮ್ಯಾಲಿರುವಾ ಸೆಲ್ ಫೋನಾ!
ಅಂಗೈಯ್ಯ ಮ್ಯಾಲಿರುವ ಸೆಲ್ ಫೋನ ನೆನೆಯುತ್ತಾ, ಚಾರ್ಜಿನ್ ಪ್ಲಗ್ಗಿಂದಾ ತೆಗೆದೇನಾ॥

ಮಕ್ಕಾಳಾಟಕು ಫೋನು
ಮತ್ತೆ ಯೌವ್ವನದೋರ್ಗೂ
ಮುಪ್ಪಿನಲಿ ಸೆಲ್ ಫೋನೇ ಸಂಗಾತಿ
ಮುಪ್ಪಿನಲಿ ಎಲ್ಲರಿಗೂ ಸೆಲ್ಫೋನೇ ಸಂಗಾತಿ
ಎತ್ತ ನೋಡಿದರೂ ಸನಿಹವಾಣೀ ॥

ಕರೆನ್ಸಿಗೆ ಅತ್ತಾನ, ಫೋನ್ ಬೇಕು ಎಂದಾನಾ
ಪುಸ್ತಕ ತೆಗೆದೂ ಒಗೆದಾನಾ
ಪುಸ್ತಕಾ ತೆಗೆದೂ ಒಗೆದಾನಾ ನನ ಕಂದ ಫೋನೀನಲ್ಲಾಟಾಕೆ ಇಳಿದಾನ ॥

ಎಲ್ಲಾರದು ಇರಿ ನಿಮ್ಮ ಫೋನಾ ಹಿಡಿದು ಹೋಗಿ ಫೋನೊಂದಿದ್ದರೆ ಸಾಕು ಜಗದೊಳಗೆ
ಫೋನೊಂದಿದ್ದರೆ ಸಾಕು ಇವತ್ತಿನ ಜಗದೊಳಗೆ
ನೆಂಟ ಬಂಟ ಗಂಟು ಸಕಲ ಫೋನೊಳಗೇ ॥

ಫೋನಿಂದ ಅಡ್ಡಪರಿಣಾಮ ಆದ್ರೇನೂ?
ಫೋನಿಲ್ಲದ ಬದುಕೂ ಬದುಕೇನೂ?
ಫೋನಿಲ್ಲದ ಬದುಕೂ ಬದುಕೇನೋ ನರಮಾನವ ಫೋನೇ ನಮ್ಮ ಮನೆದೇವರಲ್ಲವೇನೋ!

-ರೂಪ ಮಂಜುನಾಥ

ವರುಷ – ಹರುಷ

ಸಂಕಲನವಾಗುತ್ತಿವೆ ವರ್ಷಗಳು
ಎಲ್ಲರ ಮನೆಯಲ್ಲೂ ಬದಲಾಗುತ್ತಿವೆ
ಬಣ್ಣ ಬಣ್ಣದ ಕ್ಯಾಲೆಂಡರಗಳು

ಒಂದೆಡೆ ಗುಪ್ಪೆ ಹಾಕಿ
ಅಳೆದು, ತೂಗಿ ಲೆಕ್ಕ ಹಾಕಿದ
ಕಬಸುಗಳಿಗೆಲ್ಲಾ ಮತ್ತೇ ಹುರುಪು

ಕಂಡ ಕನಸುಗಳೆಲ್ಲಾ
ವಿಲೇವಾರಿಯಾಗಲಿ ಅನ್ನುವ
ಆಶಯ ನಮ್ಮದು

ವಿಲೇವಾರಿಯಾಗದ ಕನಸಿಗೂ
ಚಿಂತೆಬೇಡ
ಮತ್ತೇ ಬದಲಾಗುತ್ತವೇ ಕ್ಯಾಲೆಂಡರಗಳು.

ಬಂದಿಹುದು ಹೊಸ ವರುಷ
ತಂದಿಹುದು ಹೊಸ ಹರುಷ
ಇರಲಿ ಸಿಹಿ ಕಹಿಗಳ ಮಿಶ್ರದ ಮಾಸ.
-ನಾಗರಾಜನಾಯಕ ಡಿ.ಡೊಳ್ಳಿನ

ಬತ್ತಿದ ಭಾವನೆಗಳು

ಲೋಕದ ಬವಣೆಗಳನ್ನು ನೋಡಿ
ಎಲ್ಲರ ಭಾವನೆಗಳು ಬತ್ತಿಹೋಗಿವೆ
ನಿತ್ಯವೂ ನಡೆಯುವ ಅತ್ಯಾಚಾರ, ಕೊಲೆ
ಸುದ್ಧಿಯ ಕೇಳಿ ಭಾವನೆಗಳಿಗೆಲ್ಲಿದೆ ಬೆಲೆ!

ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ
ಈ ರೀತಿ ದಿನಾ ಕಾಡುವ ಹೊಲಸು ಹೇಸಿಗೆ
ಇವುಗಳ ಮಧ್ಯ ಜಾಗವೆಲ್ಲಿದೆ ಈ ಭಾವನೆಗಳಿಗೆ!

ದಿನಬೆಳಗಾದ್ರ ಹಸಿವಿನಿಂದ ನರಳುವ ಸದ್ದು
ಅಲ್ಲಲ್ಲಿ ಜಾತಿ ಧರ್ಮದ ಗುಟುರು, ಗುದ್ದು,
ಇವುಗಳಿಂದ ಉಂಟಾದ ರಕ್ತದ ಕಲೆಗಳು
ಎಲ್ಲರ ಭಾವನೆಗಳನ್ನು ಚಿವುಟುವ ಕಳೆಗಳು!

ಅಧಿಕಾರಿ, ರಾಜಕಾರಣಿ, ಶ್ರೀಮಂತರ ದರ್ಪ
ದೀನ ದಲಿತ ತುಳಿತ, ಸ್ಪಶ್ಯ, ಅಸ್ಪಶ್ಯರ ಎಳೆದಾಟ
ಇವುಗಳ ಮಧ್ಯ ಭಾವನೆಗಳು ಅಡಗಿಕೊಂಡಿವೆ!

ಹಬ್ಬಕಷ್ಟೆ ಹಚ್ಚುವ ಮತಾಪು ಸಿಡಿಮದ್ದುಗಳು
ಬದಲಾಗಿದೆ ಜನರನ್ನು ಸಾಯಿಸುವ ಬಾಂಬಗಳಾಗಿ!
ಖಾಕಿ, ಖಾದಿ, ಖಾವಿಗಳಲ್ಲಿ ಅಡಗಿಕೊಂಡ ಕೊಲೆಗಾರನಿಗೆ
ಹೆದರಿ ಸದ್ಭಾವನೆಗಳು ಉಸಿರುಕಳೆದುಕೊಂಡಿವೆ!

-ಬಾಲು ಪಟಗಾರ.


ಬದಲಾವಣೆ ಜಗದ ನಿಯಮ

ಇದು ಒಂದು ಬದಲಾವಣೆಯ ಜಗತ್ತು
ಹಿಂದಿನ ಕಾಲದಿಂದ ಮುಂದಿನ ಕಾಲ
ಇಂದು ಮುಂದು ಎಂದು ಮಾಂತ್ರಿಕ ಜಾಲ
ಸಮ ಸಮ ಸಮಯ ಹೀಗಿದೆ ……

ಊರು ಪಟ್ಟಣ ಆದ ಸಮಯ
ದೇವಾಲಯ ಶ್ರೀ ಕ್ಷೇತ್ರ ಆದ ಸಮಯ
ಮನೆ ಬಂಗಲೆ ಆದ ಸಮಯ … ಬದಲಾಗುವ
ಕಾರಣ ಬದಲಾವಣೆ ಜಗದ ನಿಯಮ

ಕಾಡು ಆಯಿತು ನಾಡು
ಪದ ಆಯಿತು ಹಾಡು
ಮಣ್ಣು ಆಯಿತು ರೈತರಿಗೆ ಹೊನ್ನು…. ಬದಲಾಗುವ
ಕಾರಣ ಬದಲಾವಣೆ ಜಗದ ನಿಯಮ

ಬ್ಲಾಕ್ ಅಂಡ್ ವೈಟ್ ಕಾಲದಿಂದ…..
ಕಲರ್ ಫುಲ್ ಕಾಲದವರೆಗೂ……
ನಾಟಕದಿಂದ ಸಿನಿಮಾ ವರೆಗೂ….. ಬದಲಾಗುವ
ಕಾರಣ ಬದಲಾವಣೆ ಜಗದ ನಿಯಮ

ರಾಜರಿಂದ ಬದಲಾಗಿ ಎಲೆಕ್ಷನ್ ವರೆಗೂ
ಗುರುಕುಲ ಶಿಕ್ಷಣದಿಂದ….
ಆಧುನಿಕ ಶಿಕ್ಷಣದ ವರೆಗೂ…. ಬದಲಾಗುವ
ಕಾರಣ ಬದಲಾವಣೆ ಜಗದ ನಿಯಮ

-ರಜನಿ ಜಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x