“ಕತ್ತಲ ಹೂವು” ನೀಳ್ಗತೆ (ಭಾಗ ೧೩): ಎಂ.ಜವರಾಜ್

ಭಾಗ – 13

ಬೆಳಗ್ಗೆ ನಾಲ್ಕರ ಹೊತ್ತು. ಹುಣಸೇ ಮರದ ಬೊಡ್ಡೆಯಲ್ಲಿ ಚಳಿಗೆ ರಗ್ಗು ಮುದುಡಿ ಮಲಗಿದ್ದ ದೊಡ್ಡಬಸವಯ್ಯನ ಕಿವಿಗೆ – ಅಲ್ಲಿ ನಿಂತರೆ ಎಲ್ಲವೂ ಕಾಣುವ, ದೂರದಲ್ಲಿದ್ದ ಸೇತುವೆ ದಾಟಿ ಸ್ವಲ್ಪ ಮುಂದೆ ಹೋದರೆ ಅಗಸ್ತೇಶ್ವರ ದೇವಸ್ಥಾನದ ಗೋಪುರದಲ್ಲಿ ಕಟ್ಟಿದ್ದ ರೇಡಿಯೋದಲ್ಲಿ “ಶಿವಪ್ಪ ಕಾಯೊ ತಂದೆ ಮೂ ಲೋಕ ಸ್ವಾಮಿದೇವ” ಹಾಡು ಕೇಳಿತು. ಹಾಡು ಕೇಳುತ್ತ ಕೇಳುತ್ತ ಮುಸುಕು ತೆಗೆದು ಕಣ್ಣಾಡಿಸಿದ. ಇನ್ನೂ ನಿದ್ದೆಯ ಮಂಪರು. ಕಣ್ಣಿಗೆ ಕತ್ತಲು ಕತ್ತಲಾಗಿ ಕಂಡಿತು. ಅಲ್ಲೆ ಕಣ್ಣಳತೇಲಿ ಬೇಲಿಗೆ ಆತುಕೊಂಡು ಶಿವನಂಜನ ಸೈಕಲ್ಲು ಒರಗಿ ನಿಂತಿತ್ತು. ಶಿವನಂಜನೋ ದಿಕ್ಕಾಪಾಲು ಕಾಲಗಲಿಸಿ ನೆಲಕ್ಕೆ ಅಪ್ಪಳಿಸಿ ಬಿದ್ದುಕೊಂಡಿದ್ದ. ಹಳೇ ತಿರುಮಕೂಡಿನ ಅಗಸ್ತೇಶ್ವರನ ದೇವಸ್ಥಾನದ ಗೋಪುರದ ರೇಡಿಯೊ ಮೊಳಗುತ್ತಲೇ ಇತ್ತು. ಆ ಅಗಸ್ತೇಶ್ವರ ದೇವಸ್ಥಾನ ಇರೋದು ಆಕಡೆ ಈಡೆ ಕಾವೇರಿ ಕಪಿಲ ಹೊಳೆಗಳು ಹರಿಯೋ ಮಧ್ಯೆ. ಅಲ್ಲೊಂದಷ್ಟು ಬ್ರಾಹ್ಮಣರ ಮನೆಗಳಿದ್ದವು. ಅಲ್ಲಿನ ಮನೆಗಳವರೇ ದೇವಸ್ಥಾನದ ಅರ್ಚಕರಾಗಿದ್ದರು. ಈ ಮನೆಗಳಿಗು ಮುಂಚೆ ಅದೇ ರೋಡಿನಲ್ಲಿ ಎರಡೂ ನದಿಗಳ ಸೇತುವೆಗಳ ಅಂಚಿಗೆ ಒಕ್ಕಲಿಗ, ನಾಯಕರ ಏಳೆಂಟು ಕುಲಗಳಿದ್ದವು. ಬ್ರಾಹ್ಮಣರ ಕೊನೇ ಮನೆ ಅಂಚಿಗೆ ಚೌಡೇಶ್ವರಿ ಅಮ್ಮನ ದೇವಸ್ಥಾನವಿತ್ತು. ಆ ಅಮ್ಮನಿಗೆ ನಾಯಕರ ಗುಡ್ಡಯ್ಯನ ಕುಲದವರು ಪೂಜೆ ಮಾಡ್ತ ಇದ್ರು. ಪ್ರತಿವರ್ಷ ರಾತ್ರಿ ಆ ಅಮ್ಮನ ಕೊಂಡವಿರುತ್ತಿತ್ತು. ಆ ಕೊಂಡ ನೋಡಲು ಅಕ್ಕಪಕ್ಕದ ಸೋಸಲೆ, ಮುಸುವಿನಕೊಪ್ಪಲು, ಕೆಂಡನಕೊಪ್ಪಲು, ಎಳೂರುಂಡಿ, ಬನ್ನಳ್ಳಿಹುಂಡಿ, ನಿಲ್ಸೋಗ, ಆಲ್ಗೂಡು, ಹುಣಸೂರು, ಬೈರಾಪುರ, ಕೆಂಪಯ್ಯನಹುಂಡಿ, ಕಿರುಗಸೂರಿನ ಜನ ಜಗನ್ ಜಾತ್ರೆಯಾಗಿ ಎಲ್ಲ ಜಾತಿ ಜನಾಗ್ವು ಸೇರ‌್ತಿತ್ತು. ಆದ್ರೆ ಅವತ್ತು ಹಬ್ಬದ ದಿನ ಆ ಅಮ್ಮನಗುಡಿಗೆ ಹೊಲೇರು ಮಾದಿಗ್ರು ಹೋಗಂಗಿಲ್ಲ. ಹೋದರು ದೂರದಲ್ಲೆ ಜನರ ಮಧ್ಯೆ ನಿಂತು ನೋಡ್ತ ಕೈಮುಗಿತಾ ಇದ್ರು.

ಒಂದ್ಸಲ ಮಾದಿಗರ ಕೆಲವು ಪುಂಡೈಕಳು ಅದೇನಾಗುತ್ತೊ ಅಂತ ಗುಂಪಿನೊಳಗೇ ಜಾಗ ಮಾಡಿಕೊಂಡು ಹಠ ಮಾಡಿ ಅಮ್ಮನ ಗುಡಿ ಬಾಗಿಲು ಮುಟ್ಟಿ ಒಳಕ್ಕೆ ಹೋಗಿ ನಮಸ್ಕರಿಸಿದ್ದರು. ಅದೇ ಹೊತ್ತಲ್ಲಿ ಒಕ್ಕಲಿಗರು ನಾಯಕರ ಒಂದಷ್ಟು ಪುಂಡೈಕಳು ಅಮ್ಮನ ಬಾಗಿಲು ಮುಟ್ಟಿ ಒಳ ಹೋಗಿದ್ದವರನ್ನು ಹುಡುಕಿ ಹೊಳೆ ಸೈಡಿಗೆ ಎಳೆದುಕೊಂಡೋಗಿ ಕೈಕಾಲು ಮುರಿದಿದ್ದರು. ಪೋಲೀಸರು ಮಾದಿಗ ಹುಡುಗರ ಮೇಲೆ ಕೇಸು ಹಾಕಿ ಸ್ಟೇಷನ್ ಗೆ ಕೋರ್ಟಿಗೆ ಎಳೆಸಿದ್ದರು. ಊರಿನ ಕುಲೊಸ್ತರು ಪುಂಡೈಕಳ ಪರವಾಗಿ ತಪ್ಪೊಪ್ಪಿಗೆ ಬರೆದುಕೊಟ್ಟು ಬಿಗಿಬಂಧ ಮಾಡಿದ್ದರು. ಆ ಪುಂಡೈಕಳು ಕುಲೊಸ್ತರ ಮೇಲೆನೆ ಎಗರಿ ಬಿದ್ದು ‘ನಿಮ್ಮನ್ಯಾರ ತಪ್ಪಾಯ್ತು ಅಂತ ಕೇಳಿ ಅಂದೋರು’ ಅಂತ ಚೆನೈನ್ ಗುಡಿತವು ಕುಡಿದು ಬಂದು ಸಿಕ್ಕಸಿಕ್ಕವರೊಂದಿಗೆ ಜಗಳಕ್ಕೆ ನಿಂತಿದ್ದವು.

ಅದೇ ತಾನೆ ಚೆನ್ನಬಸವಿ ಮದುವೆ ಆಗಿ ಬಂದಿದ್ದಳು.

ಮದುವೆಗು ಮುಂಚೆ ಉಗಾದಿ ಹಬ್ಬದ ದಿನ ಕಾವೇರಿ ಕಪಿಲ ಸಂಗಮದಲ್ಲಿ ನಡೀತಿದ್ದ ಹೊಳೆ ಜಾತ್ರೆಗೆ ಅವರ ಮನೆಯವರೊಂದಿಗೆ ನಿಲಸೋಗೆಯಿಂದ ಸಂತೆಮಾಳದ ದಾರಿಯಲ್ಲಿ ನಡೆದುಕೊಂಡು ಬಂದು ಹೊಳೆ ನಡುಮಧ್ಯೆ ಇದ್ದ ನಡೊಳೆ ಬಸಪ್ಪನಿಗೆ ಪೂಜೆ ಮಾಡಿ ರಾಶಿಯಾಗಿದ್ದ ಮರಳಿನಲ್ಲಿ ಮರಳು ಗೊಪ್ಪೆ ಕಟ್ಟಿ ಲಿಂಗ ಮಾಡಿ ಪೂಜೆ ಮಾಡ್ತ ಇದ್ದರು.

ಇದು ಕಾಲ್ದಿಂದು ಹಿಂಗೆ.

ಸುತ್ತುಮುತ್ತಲ ಊರೋರೆಲ್ಲ ಸಂಗಮದಲ್ಲಿ ನೆರೆದು ನೀರಲ್ಲಿ ಮುಳುಗಿ ಮನೆಯಿಂದಲೇ ಬಾಡುಬಳ್ಳ ಗೊಜ್ಜು ಮಾಡಿಕೊಂಡು ಬಂದು ಉಣ್ಕ ತಿನ್ಕಂಡು ಹಬ್ಬ ಮಾಡುವುದೂ ಉಂಟು. ಹಂಗೆ ಅವರೂರಿನವರು ಚೌಡೇಶ್ವರಿ ಅಮ್ಮನ ಕೊಂಡದ ಬಗ್ಗೆ ಹೇಳುತ್ತಿದ್ದ ಕಥೆ ತರಾವರಿಯಾಗಿ ಅವಳಲ್ಲಿ ಇಳಿದು ಅವರ ಮನೆಯವರೊಂದಿಗೆ ಅದೇ ರೋಡಿನಲ್ಲಿ ಹೋಗ್ತಾ ನೋಡಿ ಕೈಮುಗಿದಿದ್ದಳು.

ಚೌಡೇಶ್ವರಿ ಅಮ್ಮನನ್ನು ನಾಯಕರ ಕುಲದ ಗುಡ್ಡಯ್ಯ ಪೂಜಿಸಿದರು ಒಕ್ಕಲಿಗರಿಗದು ದೊಡ್ಡ ಹಬ್ಬವಾಗಿತ್ತು. ಸರಿರಾತ್ರಿ ತನಕ ಕೊಂಡದ ಜಾತ್ರೆ ನಡೀತಿತ್ತು. ಕೊಂಡ ಆಗಿ ಸರೊತ್ತು ಜಾರಿದ ಮೇಲೆ ಒಕ್ಕಲಿಗರು ನಾಯಕರು ಆ ಅಮ್ಮನಿಗೇ ಅಂತ ತಂದು ಕಟ್ಟಾಕಿಕೊಂಡಿದ್ದ ಆಡು ಕುರಿ ಕೋಳಿಗಳ ರಕ್ತ ಚೆಲ್ಲಿ ಹೆಪ್ಗಟ್ಟಿ ರಟ್ಟುಕಟ್ಟಿಕೊಳ್ಳುತ್ತಿತ್ತು.

ಚೆನ್ನಬಸವಿ ಆ ರಾತ್ರಿ ಗಂಡ ನಿಂಗಯ್ಯನೊಂದಿಗೆ ಕೊಂಡ ನೋಡಲು ಬಂದು ನಿಯಮದಂತೆ ದೂರ ನಿಂತು ನಿಗುರಿ ನಿಗುರಿ ಅಮ್ಮನ ಗುಡಿಯ ಬಾಗಿಲಿಗೆ ಕಣ್ಣಾಡಿಸುತ್ತಿದ್ದಳು. ಹಾಗೆ ಕೊಂಡ ಹಾಯಲು ಹಾಕಿದ್ದ ಬೆಂಕಿಕೆಂಡವನ್ನು ಬೇವಿನಸೊಪ್ಪಿನಲ್ಲಿ ಬೀಸುತ್ತ ನಿಗಿಗೊಳಿಸುತ್ತಿದ್ದ ಗುಡ್ಡಯ್ಯನವರು ‘ಹಾ.. ಹೂ..’ ಅಂತ ಕಿರುಚುವುದನ್ನು ಮೈಮರೆತು ನೋಡುತ್ತಿದ್ದಳು.

ಈ ವೈಭೋಗ ನೋಡಲು ಜನ ಜಗನ್ ಜಾತ್ರೆಯಾಗಿ ನೆರೆದಿತ್ತು. ಆ ಸಂದಿಯಲ್ಲಿ ಮಿರಮಿರ ಮಿಂಚುತ್ತಿದ್ದ ಚೆನ್ನಬಸವಿ ಯಂಕ್ಟಪ್ಪನ ಕಣ್ಣಿಗೆ ಬಿದ್ದಳು. ಅವತ್ತು ಮದುವೆ ದಿನ ಚಪ್ಪರದಟ್ಟಿಲಿ ನಿಂಗಯ್ಯನ ಕೈಗೆ ಮುಯ್ಯಿ ಕೊಟ್ಟು ಚೆನ್ನಬಸವಿ ಕಡೆ ಕಣ್ಣಾಯಿಸಿ ಕಣ್ಣು ಮಿಟುಕಿಸಿದ್ದಾಗ ಚೆನ್ನಬಸವಿ ಕಣ್ಣರಳಿಸಿದ್ದು ನೆನಪಾಯ್ತು.

ಇಲ್ಲಿ ಕೊಂಡದೊಳಗೆ ನಿಗಿನಿಗಿ ಕೆಂಡವಿತ್ತು. ಕೆಂಡದ ಕಾವು ರಾಚಿ ಹೊಗೆ ಏಳುತ್ತಿತ್ತು. ಯಂಕ್ಟಪ್ಪ ಆ ಹೊಗೆ ಕಾವಿನ ದಾರಿಗುಂಟ ಹಾದು ಬಂದು ‘ಏ ನಿ ನಮ್ ಅಡಿನಿಂಗಿ ಸೊಸ ಅಲ್ವ’ ಅಂತ ಗೊತ್ತಿದ್ದೂ ಗೊತ್ತಿದ್ದು ಕೇಳಿ ಜನರ ಸಂದಿಲಿ ‘ಬಾ ಇಲ್ಲಿ’ ಅಂತ ಕರೆದ.

ಚೆನ್ನಬಸವಿ ನಿಂಗಯ್ಯನ ಕಡೆ ನೋಡಿದಳು. ನಿಂಗಯ್ಯ ಹಲ್ಲು ಕಿರಿದ.

ಚೆನ್ನಬಸವಿ ಯಂಕ್ಟಪ್ಪನ ಹಿಂದೆ ದಾರಿ ಮಾಡಿಕೊಂಡು ನಡೆದಳು. ಗುಡಿಯ ಬಾಗಿಲಲ್ಲಿದ್ದವರು ಯಂಕ್ಟಪ್ಪನ ನೋಡಿ ಹಲ್ಲು ಕಿರಿದು ‘ಬನ್ನಿ ಬನ್ನಿ’ ಅಂತ ಗೌರವ ಕೊಟ್ಟರು. ಚೆನ್ನಬಸವಿ ಯಂಕ್ಟಪ್ಪನ ಸಮಕ್ಕೆ ಮುಂದೆ ಬಂದು ನಿಂತು ಅಮ್ಮನ ದರುಶನ ಪಡೆದಳು. ಈ ಯಂಕ್ಟಪ್ಪ ವಾರೆಗಣ್ಣಲ್ಲಿ ನೋಡ್ತಾ ಜನರ ಸಂದಿಲಿ ಅಂಜಿದವನಂತೆ ಹಿಂದೆ ನಿಂತಿದ್ದ ನಿಂಗಯ್ಯನ ರಟ್ಟೆ ಹಿಡಿದು ಎಳೆದು ಬೆನ್ನು ತಟ್ಟಿದ್ದು ಮಾದಿಗೇರಿ ಪುಂಡೈಕಳು ‘ಹಹಹ’ ಅಂತ ಗೇಲಾಡಿದ್ದು ದೊಡ್ಡಬಸವಯ್ಯಿನಿಗು ಗೊತ್ತಿತ್ತು. ಅದಾದ ಮೇಲೆ ಹೋಗ ಬರ ಸಿಕ್ಕ ನಿಂಗಯ್ಯನನ್ನು ‘ಏನ್ ನಿಂಗ ಯಂಕ್ಟಪ್ಪೋರು ನಿನ್ ಬೆನ್ ತಟ್ಟರ ಅಂದ್ರ ನಿ ಮುಟ್ಟುದ್ದೆಲ್ಲ ಒಳ್ಳೆದೆ ಕಣ ಬುಡು’ ಅಂತ ನಗಾಡಿದ್ದ.

ಅದಲ್ದೆ ಕಾವೇರಿ ಕಪಿಲ ಜೊತ್ಗ ಅಲ್ಲೇ ಹುಟ್ಟಿ ಅಲ್ಲೇ ಕೂಡ್ಕೊಂಡು ಹೋಗೊ ಸ್ಪಟಿಕ ಸರೋವರದ ಬಗ್ಗೆ ಪೇಪರಲೆಲ್ಲ ಬಂದಿತ್ತು. ಇದರ ಬಗ್ಗೆ ಅಲ್ಲಿ ಪೂಜೆ ಮಾಡೋರೂ ಹೇಳ್ತಿದ್ರು ‘ಅಲ್ಲೆ ಒಂದ್ ನದಿ ಹುಟ್ಟುತ್ತ ಅದ್ರಲ್ಲಿ ಮಿಂದ್ರ ಪುಣ್ಯ ಬತ್ತುದ’ ಅಂತ. ಅದ ನೋಡೋಕೆ ಶಿವರಾತ್ರಿ ಹಬ್ಬದ ದಿನ ಎಲ್ಲೆಲ್ಲಿಂದನೊ ಬಂದ ಜನ ಹೊತ್ತು ಮೂಡುವ ಮುನ್ನ ಅವು ಕೂಡೊ ಜಾಗ್ದಲ್ಲಿ ಮುಳುಗೆದ್ದು ಅಗಸ್ತೇಶ್ವರನಿಗೆ ಪೂಜೆ ಮಾಡಿ ಹಂಗೆ ಬರ‌್ತಾ ಆ ಚೌಡೇಶ್ವರಿ ಅಮ್ಮನಿಗೂ ಕೈಮುಗಿದು ಶಿವರಾತ್ರಿ ಹಬ್ಬ ಮಾಡ್ತ ಇದ್ದುದು ಕಾಲದಿಂದಲೂ ವಾಡಿಕೆ.

ಈ ದೊಡ್ಡಬಸವಯ್ಯ ಅಲ್ಲಿ ಇಲ್ಲಿ ನಾಟ್ಕಗೀಟ್ಕ ಅಂತ ಇದ್ದಾಗ ಈ ಬಗ್ಗೆ ಕಥೆ ಹೇಳ್ತಿದ್ದ. ಸಂಗಮದಲ್ಲಿ ದೂರದ ಪರಿಚಯಸ್ತರು ಸಿಕ್ಕರೆ ಅವರು ಜೊತೆ ಬರುವಂತೆ ಪೀಡಿಸುತ್ತಿದ್ದರು. ಅವನು ಅವರೊಂದಿಗೆ ಹೋಗಿ ಅಗಸ್ತೇಶ್ವರ, ನಡೊಳೆ ಬಸಪ್ಪ, ನೂರು ಲಿಂಗದ ಉದ್ಬವ, ನೂರೊಂದು ಗಣಪತಿ ಕಟ್ಟೆ, ನರಸಿಂಹಸ್ವಾಮಿ ಗುಡಿ, ಬಳ್ಳೇಶ್ವರ, ಮರುಳು ರಾಶಿ, ಪಂಚಲಿಂಗ ದರುಶನ ಇಲ್ಲಿ ಮಾಡದೆ ತಲಕಾಡಿಗೆಂಗೋಯ್ತು ಅನ್ನೊದನ್ನೆಲ್ಲ ತನಗೆ ಗೊತ್ತಿದ್ದಷ್ಟನ್ನ ಕೇಳಿದವರಿಗೆ ಹೇಳ್ತಾ ಇದ್ದ.

ಶೀತಗಾಳಿ ಬೀಸ್ತಿತ್ತು.

ಹುಣಸೇಮರದ ಮೇಲೆ ಹಣ್ಣಾದ ಹುಣಸೇ ಹಣ್ಣಿನ ಜೊಂಪು ಜಲಿಜಲಿ ಸದ್ದಾಯ್ತು. ಅದೇ ಹೊತ್ತಿಗೆ ಕಾಗೆಗಳು ಅರಚುತ್ತ ಪುರ್ ಅಂತ ಹಾರುವಾಗ ಆ ಅಗಸ್ತೇಶ್ವರ ದೇವಸ್ಥಾನದ ಗೋಪುರದ ರೇಡಿಯೋದಲ್ಲಿ ಶಿವನ ಹಾಡು ಮೊಳಗುತ್ತಲೇ ಇತ್ತು. ದೊಡ್ಡಬಸವಯ್ಯನಿಗೆ ನಿದ್ದೆಯ ಮಂಪರು. ಚಳಿಗೆ ಎದ್ದೇಳಲೂ ಆಗದೆ ಬಾಯಿ ತೆರೆದು ಆಕಳಿಸುತ್ತ ಮೆಲ್ಲಗೆ ರಗ್ಗೆಳೆದು ಮುಖ ಕವುಚಿ ಮಲಗಿದ.

            ------

ಇತ್ತ ಊರೊಳಗೆ ಜನಗಳ ಸದ್ದು.

ಸೂರ್ಯ ನಿಧಾನಕೆ ಕಣ್ಬಿಡ್ತಿದ್ದ. ದೊಡ್ಡಬಸವಯ್ಯ ರಗ್ಗು ಸರಿಸಿ ಮೆಲ್ಲಗೆ ಎದ್ದು ಕುಂತ. ಶಿವನಂಜ ಹೆಂಗೆ ಬಿದ್ದಿದ್ದನೊ ಹಂಗೇ ಬಿದ್ದಿದ್ದ. “ಅಳಿ, ಅಳೈವ್.. ನೀವೂ ಇಲ್ಲೆ ಮನಿಕಂಡ್ರ್ಯಾ.. ಏಳಿ ಮ್ಯಾಕ್ಕೆ ಹೊತ್ತಾಯ್ತು” ಅಂತ ಕೈ ತಡವಿದ. ಶಿವನಂಜ ಮೈ ಕೊಡವಿ “ಆ್ಞ ಏನಯ್ಯ” ಅಂತ ಆಕಳಿಸಿ ನಿಧಾನಕೆ ಕಣ್ಣು ಬಿಟ್ಟು ಅಂಗಲಾಚಿ ಸುತ್ತಲೂ ಕಣ್ಣಾಡಿಸಿ “ಅಯ್ಯೊ ಎಂತ ಕೆಲ್ಸ ಆಯ್ಸು.. ನನ್ ಎಲ್ಲ ಕೆಲ್ಸನು ಎಕ್ಕುಟ್ಟೋಯ್ತು.. ಅಯ್ಯವ್ ನೀನಾರು ಹೇಳುಸ‌್ಬಾರ‌್ದಯ್ಯ ತೂ..ತಿರಿಕಿ” ಅಂತಲೆ ಮರದಲ್ಲಿ ಜೊಂಪೆ ಜೊಂಪೆ ಹುಣಸೇ ಹಣ್ಣು ಕಂಡು “ಎಲ್ಲ ಹಣ್ಣಾಗವಲ್ಲ. ಹದ್ದು ಕಾಗ ಬಂದು ಕೂತ್ರ ಎಲ್ಲ ಉದ್ರೊಯ್ತವ.. ಜಲ್ದಿ ಬಡಿಸಕಿಲ್ವ” ಅಂದ. ದೊಡ್ಡಬಸವಯ್ಯ ‘ಆಳಿಲ್ಲ ಕ ಅಳಿ. ನಾ ಏನ್ಮಾಡ್ಲಿ ನೋಡಿ ನೋಡಿ ಸಾಕಾಯ್ತು. ಇವತ್ತು ಹಬ್ಬ ಕಳಿಲಿ. ಬೆಟ್ಟುಕ್ಕೋಗಿರವ್ರೂ ಬರ‌್ಲಿ..’ ಅಂತ ಎದ್ದು ರಗ್ಗೊದರಿದ.

ಊರೊಳಗಿನ ಸದ್ದು ಇನ್ನೂ ಜೋರಾಯ್ತು.

‘ಅದೇನಳಿ ಸದ್ದು’ ಅಂತ ಬೇಲಿ ದಾಟಿ ಇಣುಕಿದ. ಎಲಗಳ್ಳಿ ಬೇಲಿ ಬೆಳ್ದು ತೊನ್ಯಾಡ್ತ ಊರು ಕಾಣ್ದು. ಆದ್ರ ಜನ ಮಾತಾಡದು ಕೂಗಾಡದು ಕೇಳ್ತನೇ ಇತ್ತು.

ಶಿವನಂಜ ಮೇಲೆದ್ದು ಸೈಕಲ್ ಎತ್ತಿ ನಿಲ್ಲಿಸಿ ‘ತಾಡು ಬಸ್ವ ನಿನ್ ಸಾವಾಸ್ದಿಂದ ನನ್ ಕೆಲ್ಸ ವಸಿ ಹಿಂದ ಆಗೋಗದ. ರಾತ್ರ ಇತ್ತಗ ಬರ‌್ದೆ ಹಂಗೆ ನಮ್ ತ್ವಾಟುತ್ತವ್ಕೆ ಹೋಗಿದ್ರ ಇಂಗಾಯ್ತಿರ‌್ನಿಲ್ಲ.. ಸರಿ, ಆದ್ದು ಆಯ್ತು ಆ ಬಾಟ್ಳ ಎತ್ತಿ ಹೆಂಡದಂಡ್ಗಿಗ ಇಟ್ಬುಟ್ಟು ಅದೇನ ನೋಡು.. ನಾ ವಸಿ ಹಂಗೆ ನೀರ‌್ಕಡ ಹೋಗಿ ಆಲ್ಗೂಡ್ಲಿ ಹಸ ನೋಡ್ಕ ಬತ್ತಿನಿ’ ಅಂತ ಸೈಕಲ್ ಏರಿ ಹೊಳೆಕಡೆ ಹೊಂಟ.

ದೊಡ್ಡಬಸವಯ್ಯ ರಗ್ಗು ಚಾಪೆ ದಿಂಬನ್ನ ಮರದ ಬೊಡ್ಡೆಗೆ ಎಸೆದು ಅಲ್ಲಿ ಬಿದ್ದಿದ್ದ ನಾಲ್ಕು ಹೆಂಡದ ಬಾಟ್ಲಿನ ಬ್ಯಾಗೊಳಕ ಹಾಕಂಡು ಬಿದುರು ಮೆಳೆತವು ಕಾಲುವೆ ಒಳಕ್ಕಿಳಿದು ಹಂಗೆ ಏರಿ ಹತ್ತಿ ಹೆಂಡದಂಗಡಿ ಕಡೆ ನಡೆದ.

ಆಗ ಅದೆ ದಾರಿಲಿ ತಿರುಮಕೂಡ್ಲು ಗೌಡ್ರ ಗಂಡು ನೀರ‌್ಕಡ ಬಂದು ನೀರಟ್ಟಿಕೊಂಡು ಕಾಲುವೆಯಿಂದ ಮೇಲತ್ತಿ ಗದ್ದೆ ಕಡೆ ಹೋಯ್ತಾ ‘ಅಯ್ಯವ್ ಅದೇ ಆ ಹೆಣ್ಗ ಅದೇನ ಆಗಿದ್ದಂತಲ್ಲ.. ಕೂಸೂ ಸತ್ತೊಗದ ಅನ್ನತರ ಅಂತಿದ್ರು..” ಅಂದ.

ದೊಡ್ಡಬಸವಯ್ಯನಿಗೆ ದಿಗಿಲಾಯ್ತು.

ಊರೊಳಗೆ ಜನರ ಸದ್ದು ಗದ್ದಲ ಆಗುತ್ತಲೇ ಇತ್ತು. “ಅಪ್ಪೊಯ್ ಯಾರಪ್ಪ.. ಗಲಾಟಿ ಆಯ್ತಿರದು ಅದಿಯಾ.. ಆಗ್ಲಿಂದ ಸದ್ದಾಯ್ತಿರದು ಗೊತ್ತು. ಅದೇನ, ಐಕಮಕ್ಕ ಚೆನೈನ್ ಗುಡಿಲಿ ಹಬ್ಬುದ್ ಬೆಳುಗ್ಗ ಏನ ತಾನಗೀನ ಮಾಡಕ ಕಚ್ಚಾಡ್ತ ಇರಬೇಕು ಅನ್ಕಂಡಿ. ಇದೇನಪ ಹೊಸ್ಮಾತು..” ಅಂತ ಬಾಟಲಿದ್ದ ಬ್ಯಾಗ ಅಲ್ಲೆ ಇಟ್ಟು ತನ್ನ ನೀಲಿ ಜುಬ್ಬ ಎಳ್ದು ಸರಿ ಮಾಡ್ಕಂಡು ಕಚ್ಚೆಪಂಚೆ ಬಿಗಿ ಮಾಡ್ಕಂಡು ತಿರುಗಿದ. ಆ ಗೌಡ್ರ ಗಂಡು “ನಂಗು ಗೊತ್ತಿಲ್ಲ ಕಯ್ಯ.. ಅದ್ಯಾರ ಅಲ್ಲಿ ಮಾತಾಡ್ಕಂಡು ನೀರಟ್ಕತಿದ್ರು.. ಅದೆ ನಿಮ್ ಚೆನ್ಬಸ್ವಿ ಹೆಣ್ಣು ನೀಲ ಅಂತರಲ್ಲ ಅವೆಣ್ಣು” ಅಂತ ಬೀಡಿ ಕಚ್ಚಿಕೊಂಡು ಸೇದುತ್ತಾ ಗದ್ದೆ ಕಡೆ ನಡೆದ.

ದೊಡ್ಡಬಸವಯ್ಯ ‘ಅಯ್ಯೋ ಶಿವ್ನೇ..’ ಉಸಿರು ಬಿಗಿ ಹಿಡಿದು ಏರಿಗುಂಟ ದಡದಡಾಂತ ಊರ‌್ದಿಕ್ಕ ಓಡಿದ.

             ---------

ಶಿವಯ್ಯನ ಮನೆ ಜಗುಲಿಯಿಂದ ಹಿಡಿದು ಚೆನ್ನಬಸವಿ ಮನೆ ಸಂದಿಗುಂಟ ಜನ ತುಂಬಿದ್ದರು. ರೋಡಿನಲ್ಲಿ ಒಂದಷ್ಟು ಜನ ನಿಂತು ಮಾತಾಡ್ತ ‘ಊರ‌್ಲಿ ಜನ ಇಲ್ಲ. ಎಲ್ಲ ಬೆಟ್ಟುಕ್ಕೋಗರ. ಅವೆಣ್ಣು ಬಂಗಾರ‌್ದಗದ. ಅಂತ ಹೆಣ್ಣು ಊರ‌್ಲೇ ಇಲ್ಲ ಅನ್ನದಲ್ಲ ಈ ದೇಶ್ದಲ್ಲೆ ಇಲ್ಲ.. ಅವ್ಳ ನೋಡುದ್ರ ಎಂತೆವ್ನ್ ಗೇ ಆಗ್ಲಿ ರ‌್ವಾಮ್ ರ‌್ವಾಮುವ ಏಳ್ತವ. ಇಂಗಿರಗ ಇದೇ ಒಂದು ಸವುಳು ಅಂತ ಬಡ್ಡಿಮಕ್ಕ ನುಗ್ಗರ. ಅವುರೊವ್ವ ನ್ಯಟ್ಗ ಇದ್ದಿದ್ರ ಇದೆಲ್ಲ ಆಗದ.. ಅವ ನಲಿತಿದ್ಕ ಅವ್ಳಿಗೇ ಆಗ್ಬೇಕಿತ್ತು ಇವೆಣ್ಗಾಯ್ತು. ಹೆತ್ತವ್ರ್ ಪಾಪ ಮಕ್ಳುಗೆ ಅಂತರಲ್ಲ ಹಂಗಾಯ್ತು. ಏನಾ.. ಯಾವತ್ತಾ ಆಗಬೇಕಿತ್ತು ಇವತ್ತಾಗದ ಬುಡು.. ‘ ಅಂತ ತರಾವರಿ ಮಾತಾಡ್ತ ಇದ್ದರು.

ದೊಡ್ಡಬಸವಯ್ಯ ಏಗುತ್ತಾ ಬಂದ.

ಅವನು ಸುಸ್ತಾಗಿ ನಿಧಾನುಕ್ಕೆ ಜಾಗ ಮಾಡ್ಕಂಡು ಬಾಗಿಲತ್ತಿರ ಹೋದ. ಅರ್ಧ ಬಾಗಿಲು ತೆರೆಕೊಂಡಿತ್ತು. ಚೂರು ಕಾಣ್ತು. ಕೂಸು ಗೋಡೆಗೆ ಆತುಕೊಂಡು ಸತ್ತು ಬಿದ್ದಿತ್ತು. ನೀಲ ರೂಮೊಳಗೆ ಹಲ್ಲು ಕಡಿತಾ ಕಟಿಕಟಿ ಅಂತ ಮೆಲ್ಲಗೆ ಅರುಚ್ತಾ ಇದ್ದದು ಕೇಳ್ತಿತ್ತು. ಮನೆಯೊಳಗೆ ಯಾವ ದಿಕ್ಕೂ ಕಿಟಕಿ ಇಲ್ದೆ ಕತ್ಲು ಕತ್ಲಾಗಿತ್ತು. ಇಲ್ಲಿಗಂಟ ಯಾರೂ ಒಳಕ್ಕೆ ಹೋದಂಗಿ ಕಾಣ್ತಿಲ್ಲ. ದೊಡ್ಡಬಸವಯ್ಯ ನಿಧಾನುಕ್ಕೆ ಬಾಗಿಲು ತಳ್ಳಿದ. ಒಳಕ್ಕೆ ಬೆಳಕು ಬಿದ್ದಂಗಾಯ್ತು. ಒಳಕ್ಕೋದ. ಗೋಡೆಗೆ ಆತುಕೊಂಡಿದ್ದ ಕೂಸ ತಡವಿದ. ಅಂಗಲಾಚಿ ಮಲಗಿಸಿದ. ಬಾಯಲ್ಲಿ ರಕ್ತ ಸೋರಿತ್ತು. ಕೈಕಾಲು ಜಜ್ಜಿರತರ ಇತ್ತು. ಮೈಮೇಲಿದ್ದ ಬಿಳಿ ಬಟ್ಟೆ ಮೇಲೆ ಅಗಲವಾದ ಕಾಲಿನ ಹೆಜ್ಜೆ ಗುರ‌್ತಿತ್ತು. ಇದನ್ನು ನೋಡಿ ದೊಡ್ಡಬಸವಯ್ಯನಿಗೆ ದುಃಖ ಉಮ್ಮಳಿಸಿ ಬಂತು.

ಅವತ್ತು ಹಳೇದು ಒಂದು ಚೀಲ ಹುಣಸೆಹಣ್ಣು ಹಂಗೇ ಇತ್ತು. ಬ್ಯಲ ಜಾಸ್ತಿ ಆಯ್ತಲ್ಲ ಅಂತ ತೂಕಕ್ಕೆ ಹಾಕಿ ಊರೊಳಕ್ಕೆ ಕಾಲಿಟ್ಟಾಗ ಮೊಕ್ಕತ್ತಲೇನು ಆಗಿರಲಿಲ್ಲ. ಅವನು ಇನ್ನೂ ಒಂದಾಕಿರಲಿಲ್ಲ. ಚೆನ್ನಬಸವಿ ಸೆಕೆಗೆ ಕೂಸ ಎತ್ತಿಕೊಂಡು ರೋಡಿನಲ್ಲಿ ನಿಂತು ಓಡಾಡುವ ನಾಯಿ ಕೋಳಿಗಳನ್ನ ತೋರಿಸುತ್ತ ಕಿಲಕಿಲ ನಗಿಸುತ್ತಿದ್ದಳು. ದೊಡ್ಡಬಸವಯ್ಯ ಹತ್ತಿರಕ್ಕೆ ಬಂದು ಕೂಸ ಈಸಿ ಹೆಗಲಿಗಾಕಿಕೊಂಡು ಮುತ್ತಿಕ್ಕಿ ದುಡ್ಡು ಹಿಡಿಸಿ ಇದ್ಕ ಏನಾರ ತಕ್ಕೊಡು ಚೆನ್ಬಸ್ವಿ ಅಂತ ಇನ್ನೊಂದ್ಸಲ ಮುತ್ತಿಕ್ಕಿ ಕೊಟ್ಟು ಕೆನ್ನೆ ಚಿವುಟಿ ತುಟಿಗೊತ್ತಿ ನಟಿಕೆ ಮುರಿದು ‘ಬತ್ತಿನಿ ಇರು ಕೂಸು’ ಅಂತ ಹೋಗ್ತಿದ್ದಾಗ ಆ ಕೂಸು ಚೆನ್ನಬಸವಿ ಎದೆಯ ಮೇಲೆ ತುಮ್ಮತುಮ್ಮನೆ ಕುಣಿದು ಕೇಕೆ ಹಾಕುತ್ತಿದ್ದುದು ಎದುರಿಗೆ ಬಂದಂಗಾಯ್ತು.

ತಿರುಗಿದ. ರೂಮಿನ ಬಾಗಿಲು ಮುಚ್ಚಿತ್ತು.

ನೀಲ ಕಿರುಚುತ್ತಲೇ ಇದ್ದಳು. ಒಳಗಿಂದ ಚಿಲಕ ಹಾಕೊಂಡಿದ್ದಳು‌. ತಳ್ಳಿದ. ಬಾಗಿಲು ಬರಲಿಲ್ಲ. ಒಂದಿಬ್ಬರನ್ನು ಕರೆದ. ಯಾರೂ ಬರುವ ಧೈರ್ಯ ಮಾಡಲಿಲ್ಲ. ‘ಯಾಕ್ ಬೇಕಪ್ಪ ಪೋಲೀಸ್ನವ್ರು ಬಂದು ಏನಾದ್ರು ಆದ್ರ ಏನ ಮಾಡದು’ ಅಂತ ಪಿಸುಗುಟ್ಟಿದರು. ಅಲ್ಲೆ ಒಂದಷ್ಟು ಪುಂಡೈಕಳು ಇದ್ದವು. ಅವು ನೋಡಗಂಟ ನೋಡಿ ಅವವೇ ಮಾತಾಡ್ಕಂಡು ‘ಬಂದ್ರುಡ ಆದ್ದು ಆಗ್ಲಿ’ ಅಂತ ಒಳಕ್ಕೋಗಿ ಬಾಗಿಲು ಬಡಿದು ಬಡಿದು ತಳ್ಳಿದರು. ಅದು ಲಟಕ್ಕಂತ ಮುರಿದು ಬಿತ್ತು. ರೂಮು ಗವ್ ಅಂತಿತ್ತು. ಕಡ್ಡಿಗೀರಿ ಅಲ್ಲೆ ಮೂಲೇಲಿದ್ದ ಲಾಟೀನು ಹಸ್ಸಿದರು. ಆ ಲಾಟೀನು ಹಿಡಿದು ಒಳಕ್ಕೋಗಿ ನೋಡಿದರೆ ಅವಳು ಹುಟ್ಟಿದ್ದ ಸೀರೆ ಒಂದ್ಕಡೆ ಬಿದ್ದಿತ್ತು. ರವಿಕೆಲಿದ್ದ ಉಕ್ಸೆಲ್ಲ ಕಿತ್ತೋಗಿ ಅದು ತೆರೆದುಕೊಂಡಿತ್ತು. ಲಂಗ ಒಂದ್ಸೈಡು ನೆಟ್ಟಗೆ ಹೊಲಿಗೆ ನೇರಕ್ಕೆ ಸೀಳು ಸೀಳಾಗಿ ಹರಿದಿತ್ತು. ಅವಳು ಕಾಲು ನೀಡಿ ಒದರುತ್ತ ಅರಚುತ್ತಲೇ ಇದ್ದಳು.

ದೊಡ್ಡಬಸವಯ್ಯ ಇದ ನೋಡಲಾರದೆ ಪುಂಡೈಕಳ ಈಚೆ ಕರೆದುಕೊಂಡು ಬಂದು ಹೊರಗಿದ್ದ ಅಕ್ಕಪಕ್ಕದ ಒಂದಿಬ್ಬರು ಹೆಂಗಸರನ್ನ ಕರೆದುಕೊಂಡೋಗಿ ಅವ್ನೂ ಹತ್ರ ನಿಂತುಕೊಂಡು ಮೂಲೇಲಿದ್ದ ಸೀರೆ ಎತ್ತಿಕೊಟ್ಟ. ನೀಲ ಅವರಿಗೆ ಬಗ್ಗದೆ ಎಗರಿ ಎಗರಿ ಬೀಳತೊಡಗಿದಳು. ‘ಈ ನೀಲ ಯಾವತ್ತೂ ಈತರ ರಂಪ ಮಾಡ್ದವ್ಳೇ ಅಲ್ಲ. ಜಾಸ್ತಿ ಯಾರೊಂದ್ಗು ಮಾತಾಡ್ದವ್ಳೇ ಅಲ್ಲ. ಈಗ ನೋಡು ಅವ್ಳ ಹಿಡ್ದು ನಿಲ್ಸಕಾಯ್ತಿಲ್ಲ’ ಅಂತ ಮಾತಾಡಿಕೊಂಡರು. ದೊಡ್ಡಬಸವಯ್ಯ ‘ಏನಾಯ್ತವ್ವ.. ಯಾರವ್ವ ಇಂಗ್ ಮಾಡ್ದವ್ರು ತೂ ಮುಂಡೆ ಮಕ್ಳ’ ಅಂತ ಬೊಯ್ತ ಲೊಚಗುಟ್ತಿದ್ದ.

ನೀಲಳನ್ನು ಬಿಗಿಯಾಗಿ ಹಿಡಿದುಕೊಂಡು ಹಂಗೆ ಸುಮಾರಾಗಿ ಸೀರೆ ಸುತ್ಕಂಡು ರೂಮಿಂದ ಈಚೆ ಕರೆದುಕೊಂಡು ಬಂದರು. ನೀರು ಕುಡಿಸಿದರು. ಸತ್ತು ಮಲಗಿದ್ದ ಕೂಸಿನ ಹತ್ರ ಅವಳನ್ನು ಕೂರಿಸಿದರು. ಅವಳು ‘ಇದೇನ ಇದು ಎತ್ಗ ಹೋಗಿ ಅತ್ತಗ’ ಅಂತ ತಳ್ಳಿದಳು. ನಿಂತಿದ್ದವರು ಕುಂತಿದ್ದವರು ಅಯ್ಯೋ ಶಿವ್ನೇ ಅಂತ ಲೊಚಗುಟ್ಟಿದರು. ಅದೇನಾಯ್ತೊ ಏನೊ ದೊಡ್ಡಬಸವಯ್ಯ ಎದ್ದು ಈಚೆ ಬಂದು ಆ ‘ಯಂಕ್ಟಪ್ಪೋರು ಬಂದ್ರ ಇದ್ಕ ಏನಾರ ಒಂದ್ ಮಾಡ್ಬೇದು’ ಅಂದ. ಇದನ್ನು ಕೇಳಿ ಗುಂಪಿನಲ್ಲಿದ್ದ ಯಾರೋ ಒಬ್ಬ ಒಕ್ಕಲಗೇರಿ ಕಡೆ ಓಡಿದ್ದು ಕಂಡಿತು.

              ----------

ಕಡ್ಡಬುಡ್ಡಯ್ಯ ಕವ್ಡನೆಲ್ಲ ಎತ್ತಿ ಸಣ್ಣ ಚೀಲಕ್ಕೆ ಹಾಕಿ ಕುಟುಮಿ ಕಟ್ಟಿದ. ಚೆನ್ನಬಸವಿ ಕಣ್ಣಲ್ಲಿ ನೀರು ತುಂಬಿ ಬುಳಬುಳನೆ ಹರಿಯುತ್ತ ಸೆರಗಲ್ಲಿ ಮುಸ್ಸಿ ಮುಸ್ಸಿ ಒತ್ತಿಕೊಂಡು ಕಡ್ಡಬುಡ್ಡಯ್ಯನನ್ನೇ ನೋಡ್ತಿದ್ದಳು. ರವಗುಟ್ಟುತ್ತಿದ್ದ ಬಿಸ್ಲು ತಂಪಾಗ್ತ ಇತ್ತು. ಇದ್ನೆಲ್ಲ ನೋಡ್ತ ಕೇಳ್ತ ನಿಂತಿದ್ದ ಚಂದ್ರ ‘ಅವ್ವಾ..’ ಅಂತ ಸಂದಿಗುಂಟ ಲುಂಗಿ ಕಟ್ಟಿಕೊಳ್ಳುತ್ತ ಓಡಿದ. ಸಿದ್ದಿ ಹೊಲದಿಂದ ಮಕ್ಕರಿ ತುಂಬ ತೊಗರಿಕಾಯಿ ತುಂಬಿ ತಲೆ ಮೇಲೆ ಹೊತ್ತುಕೊಂಡು ಬಂದು ಜಗುಲಿಲಿ ಸುರಿದು ಉಸ್ ಅಂತ ತೊಗರಿಕಾಯಿ ಕೆದಕುತ್ತಾ ಕಸ ಆಯ್ತ ಇದ್ದರೆ ಚಂದ್ರನೂ ಅವ್ವನೊಂದಿಗೆ ತೊಗರಿಕಾಯಿ ಕೆದಕುತ್ತಾ ಕುಂತಾಗ, ನೀಲ ಓಡಿ ಬಂದು ಒಂದಿಡೀ ತೊಗರಿಕಾಯಿ ಗೋರಿ ದಾವಣಿಗೆ ಸುತ್ತಿಕೊಂಡು ತೆಂಗಿನಮರ ಒರಗಿ ನಿಂತು ತೊಗರಿಕಾಯಿ ಎಡೆದು ಎಡೆದು ತಿನ್ನುತ್ತಾ ಕಿಸಕಿಸ ನಗತೊಡಗಿದಳು.

-ಎಂ.ಜವರಾಜ್

(ಮುಂದುವರಿಯುವುದು)


[ ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x