ತುಂಗಾತೀರದ ಸಿನಿಹಬ್ಬ: ಎಂ ನಾಗರಾಜಶೆಟ್ಟಿ

” ಟ್ರೈನ್‌ ಹತ್ತು ಮೂವತ್ತಕ್ಕೇರಿ”
” ಹೌದಾ, ಎಲ್ಲಿದೀರಾ ನೀವು?
“ಇಲ್ಲೇ ರೈಲ್ವೇ ಸ್ಟೇಷನ್ನಲ್ಲಿ. ಡಿಸ್‌ಪ್ಲೇ ಬೋರ್ಡ್‌ ಎದುರಲ್ಲಿ”
” ಅಯ್ಯೋ, ನಾನಿನ್ನೂ ಹೊರಟೇ ಇಲ್ವಲ್ಲ!”
” ಈಗಿನ್ನೂ ಹತ್ತು ಗಂಟೆ. ಬೇಗ ಹೊರಡಿ”

ಪೋನಿಡುವುದರಲ್ಲಿ ಡಿಸ್‌ಪ್ಲೇ ಬದಲಾಯಿತು. ಮೈಸೂರಿಂದ 10. 30 ಕ್ಕೆ ಆಗಮಿಸುವ ಶಿವಮೊಗ್ಗ ಟ್ರೈನ್‌ 11. 15ಕ್ಕೆ ಹೊರಡುವುದೆಂದು ಪ್ರಕಟಣೆ ಬಂತು. ಮತ್ತೆ ಚಂದ್ರಪ್ರಭ ಕಠಾರಿಗೆ ಪೋನ್‌ ಮಾಡಿದೆ; ಹೊಟ್ಟೆಗೆ ಹಾಕಿಕೊಳ್ಳಿ, ತಪ್ಪಾಯಿತು ಎಂದೆ.

ನಾವು ಹೊರಟಿದ್ದು ಜನವರಿ 27, 28ರಂದು ಶಿವಮೊಗ್ಗದಲ್ಲಿ ಮನುಜಮತ ಸಿನಿಯಾನ, ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಯೋಜಿಸಿರುವ ಸಿನಿಹಬ್ಬಕ್ಕೆ. ಶಿವಮೊಗ್ಗ ಟೌನ್‌ ಸ್ಟೇಷನ್ನಲ್ಲಿ ಇಳಿದಾಗ ಬೆಳಿಗಿನ ಜಾವ ಐದಾಗಿತ್ತು. ಪಕ್ಕದ ಬೋಗಿಗಳಿಂದ ಮುರಳಿಕೃಷ್ಣ, ಕೃಷ್ಣಪ್ರಸಾದ್‌ ಧುಮುಕಿದರು.

ಅಕ್ಷತಾ ರೈಲ್ವೇ ಸ್ಟೇಷನ್ನಿಂದ ವಸತಿ ಗೃಹಕ್ಕೆ ಹತ್ತು ನಿಮಿಷದ ದಾರಿ ಎಂದಿದ್ದರು. ಆಹ್ಲಾದಕರ ಬೆಳಗಿನಲ್ಲಿ ನಡೆಯೋಣ ಎಂದು ತೀರ್ಮಾನಿಸಿ, ಮುತ್ತಿದ ಆಟೋಚಾಲಕರಲ್ಲಿ ದಿಕ್ಕು ಕೇಳಿದೆವು. ಬನ್ನಿ, ಹತ್ತಿ ಅನ್ನುತ್ತಾರೆಯೇ ವಿನಹ ದಾರಿ ತೋರಿಸುತ್ತಿಲ್ಲ. ಅಟೋದಲ್ಲಿ ಕೂತರೆ ಮಾತ್ರಾ ಸರಿದಿಕ್ಕಿಗೆ ಹೊರಳುವ ತಾಂತ್ರಿಕತೆ ಅಳವಡಿಸಿರಬೇಕೆಂದುಕೊಂಡು”ಹೂವು ಹೊರಳುವುದು ಚಂದ್ರನ ಕಡೆಗೆ, ನಮ್ಮ ದಾರಿ ಮಾತ್ರ ವಸತಿಯ ಕಡೆಗೆ” ಎಂದು ಕಣವಿಯವರನ್ನು ನೆನಪಿಸಿಕೊಳ್ಳುವಷ್ಟರಲ್ಲಿ ಅಕ್ಷತಾ, ಸತೀಶ್‌ ಶಿಲೆ ನಿಮ್ಮನ್ನು ಹುಡುಕುತ್ತಿದ್ದಾರೆಂದು ತಿಳಿಸಿದರು. ನಮ್ಮ ಮೌಲ್ಯ ಇದ್ದಕ್ಕಿದ್ದಂತೆ ಹೆಚ್ಚಿದ ಬಗ್ಗೆ ಹರ್ಷಿಸುತ್ತಾ ಕಾರಲ್ಲಿ ಆಸೀನರಾದೆವು.

ಕೆಲ ಹೊತ್ತು ವಿಶ್ರಾಂತಿ ಹೊಂದಿ ಸಭಾಭವನಕ್ಕೆ ಬಂದಾಗ ಬಹಳಷ್ಟು ಪರಿಚಿತ ಮುಖಗಳು. ಅಪರೂಪದ ಸಲ್ಲಾಪದಲ್ಲಿ ತೊಡಗಿಉಪಾಹಾರ ಕಬಳಿಸುವುದರಲ್ಲಿ ಉದ್ಘಾಟನೆಯ ಹೊತ್ತಾಗಿತ್ತು. ವೇದಿಕೆಯಲ್ಲಿ ಎನ್‌ ಮಂಜುನಾಥ್‌, ಅಧ್ಯಕ್ಷರು, ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌, ಸಂತೋಷ್‌ ಕಾಚಿನಕಟ್ಟೆ ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮನುಜಮತ ಸಿನಿಯಾನದ ಐವನ್‌ ಡಿʼ ಸಿಲ್ವಾ, ಕೆ ಫಣಿರಾಜ್‌ ಮತ್ತು ಶ್ರೀಮತಿ ಸುಜಾತ ಪ್ರಸಾರ ನಿರ್ವಾಹಕರು, ಆಕಾಶವಾಣಿಹಾಸನ ಆಸೀನರಾಗಿದ್ದರು. ಹೊನ್ನಾಳಿ ಚಂದ್ರಶೇಖರ್‌ ಪ್ರೀತಿಯಿಂದ ಎಲ್ಲರನ್ನೂ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.

ಮನುಜಮತ ಸಿನಿಯಾನದ ಅಧ್ವರ್ಯುಗಳಲ್ಲೊಬ್ಬರಾದ ಐವನ್‌ ಡಿʼ ಸೋಜರವರು ʼಮನುಜಮತ ಸಿನಿಯಾನ ʼ ದ ಹುಟ್ಟನ್ನು ತಿಳಿಸಿ ಈ ವರೆಗೆ ಶಿವಮೊಗ್ಗದಲ್ಲಿ 2, ಕುಪ್ಪಳ್ಳಿಯಲ್ಲಿ 3 ಹೀಗೆ ರಾಜ್ಯಾದ್ಯಂತ 20 ಸಿನಿಹಬ್ಬಗಳನ್ನು ಅಯೋಜಿಸಿದ್ದೇವೆ. ಇದು 21ನೆಯ ಸಿನಿ ಹಬ್ಬ ಎನ್ನುವ ವಿವರಗಳನ್ನು ನೀಡಿದರು. ಫಣಿರಾಜ್‌, ಸಮಾಜವಾದದ ನೆಲೆ ಎಂದೆಣಿಸಿಕೊಂಡಿದ್ದ ಶಿವಮೊಗ್ಗೆಯ ಸಿನಿ ಹಬ್ಬಕ್ಕೆ ʼಸಮಾಜವಾದʼ ವಸ್ತುವನ್ನು ಆಯ್ಕೆ ಮಾಡಿದ ಔಚಿತ್ಯದ ಕುರಿತು ವಿವರಣೆ ನೀಡಿ, ಪ್ರದರ್ಶಿತವಾಗಲಿರುವಚಿತ್ರಗಳ ಮುನ್ನೋಟ ಒದಗಿಸಿದರು. ಅಧ್ಯಕ್ಷತೆ ವಹಿಸಿದ್ದ ಮಂಜುನಾಥ ಪ್ರಸ್ತುತ ಸನ್ನಿವೇಶದಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ಸಿನಿಮಾಗಳ ಮೂಲಕ ಜಾಗೃತಿಯನ್ನು ಉಂಟುವ ಅಗತ್ಯವನ್ನು ವಿಷದ ಪಡಿಸಿದರು. ಸಂತೋಷ್‌ ಕಾಚಿನಕಟ್ಟೆ ತಮ್ಮ ಸಿನಿಮಾ ಅನುಭವಗಳನ್ನು ಮೆಲುಕು ಹಾಕಿ, ಸಿನಿಮಾ ಹಬ್ಬಗಳ ಅವಶ್ಯಕತೆಯನ್ನು ತಿಳಿಸಿದರು. ಸುಜಾತಾರವರು ಸಿನಿಹಬ್ಬಗಳ ಮೂಲಕ ತಾನು ಸಿನಿಮಾಗಳನ್ನು ನೋಡಲು ಕಲಿತಿದ್ದನ್ನು ಹೇಳಿದರು.

ಸಿನಿಹಬ್ಬಕ್ಕೆ ಆಗಮಿಸಿದ ಸಿನಿಮಾಸಕ್ತರ ಸ್ವಪರಿಚಯದ ಬಳಿಕʼ ದ ಓಲ್ಡ್‌ ಓಕ್‌ ʼ ಪ್ರದರ್ಶನಗೊಂಡಿತು. ಇದು87ವರ್ಷ ವಯಸ್ಸಿನ, ಜಗತ್ತಿನ ಅತ್ಯುತ್ತಮ ನಿರ್ದೇಶಕರಲ್ಲೊಬ್ಬನಾದ ಕೆನ್‌ ರೋಚ್‌ ನಿರ್ದೇಶಿಸಿದ ಸಿನಿಮಾ. ಎಲ್ಲರನ್ನೂಆಕರ್ಷಿಸಿದ ಈಚಿತ್ರಸಿನಿ ಹಬ್ಬಕ್ಕೆ ಒಳ್ಳೆಯ ಪ್ರವೇಶಿಕೆ ನೀಡಿತು.

ಉತ್ತರ ಬ್ರಿಟನ್ನಿನ ಪ್ರದೇಶವೊಂದರಲ್ಲಿ ಕಲ್ಲಿದ್ದಲು ಗಣಿ ಸ್ಥಗಿತಗೊಂಡಿದ್ದು ಸ್ಥಳೀಯರು ಪರದಾಡುತ್ತಿದ್ದಾರೆ. ಸಿರಿಯಾದಿಂದ ಬಂದ ನಿರಾಶ್ರಿತರೂ ಅವರೊಂದಿಗಿದ್ದಾರೆ. TJ ಎನ್ನುವ ಹೆಂಗರುಳಿನ ವ್ಯಕ್ತಿ ಯಾರಾ ಎನ್ನುವ ಸಿರಿಯಾ ನಿರಾಶ್ರಿತಳೊಂದಿಗೆ ಸಾಮುದಾಯಿಕ ಬದುಕನ್ನು ನೆಲೆಗೊಳಿಸಲು ಪ್ರಯತ್ನ ಮಾಡುತ್ತಾನೆ. ʼ we eat togethȩr we stick together ʼಎನ್ನುವುದೇನೋ ಸರಿ, ಅದನ್ನು ಕಾರ್ಯರೂಪಕ್ಕೆ ತರಲೆಷ್ಟು ಕಷ್ಟ?ಬ್ಯಾನರ್‌ನಲ್ಲಿ ಕಾಣುವ ಸಾಲಿಡಾರಿಟಿ, ರೆಸಿಸ್ಟೆನ್ಸ್‌ ಚಿತ್ರಕ್ಕೆಧನಾತ್ಮಕಕೊನೆಒದಗಿಸಿದರೂಚಿತ್ರಮೀಟುವಭಾವನೆಗಳಿಗೆಕೊನೆಯಿಲ್ಲ. ಸಿನಿಮಾನೋಡಿಎಲ್ಲರೂ ಅತ್ಯುತ್ಸಾಹದಿಂದತಮ್ಮ ಅನ್ನಿಸಿಕೆಗಳನ್ನು ಹಂಚಿಕೊಂಡರು. ಅದರಲ್ಲೂ ಮೊದಲ ಬಾರಿ ಸಿನಿಹಬ್ಬಕ್ಕೆ ಬಂದವರ ಪ್ರತಿಕ್ರಿಯೆಗಳು ಅವರ ಸೂಕ್ಷ್ಣ ಗ್ರಹಿಕೆಯನ್ನು ಸಾದರ ಪಡಿಸಿದವು. ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ ಹಿರಿಯರೂ ಅನೇಕರಿದ್ದುದರಿಂದ ಸಂವಾದಕ್ಕೆ ಪ್ರೌಢತೆಯ ಮಗ್ಗುಲೂ ದೊರಕಿತು. ಚಿತ್ರ ವಿಮರ್ಶಕ ಕೆ ಫಣಿರಾಜ್‌ ಎಲ್ಲರ ಅಭಿಪ್ರಾಯಗಳನ್ನು ಆಲಿಸಿ ಚಿತ್ರದ ಮಹತ್ವವನ್ನು ಮನದಟ್ಟು ಮಾಡಿದರು.

ಚಿತ್ರ ಮುಗಿಯವಾಗ ಮಧ್ಯಾಹ್ನ. ಗೋದಿ ಪಾಯಸವನ್ನು ಮೆಲ್ಲುತ್ತಿದ್ದವರ ತಟ್ಟೆ ಖಾಲಿ ಮಾಡಿಸಿ ಫಣಿರಾಜ್‌ಬೇಗನೇ ಎರಡನೇ ಚಿತ್ರಕ್ಕೆ ಪ್ರತಿನಿಧಿಗಳನ್ನು ಸಜ್ಜುಗೊಳಿಸಿದರು.

ಸಿನಿಮಾ ಜ್ಞಾನಿ ಚಂದ್ರ ಪ್ರಭ ಕಠಾರಿಯವರು ʼಡಿಯರ್‌ ಕಾಮ್ರೇಡ್‌ʼ ಚಿತ್ರದ ಮಾಹಿತಿ ಒದಗಿಸಿದರು. 121 ನಿಮಿಷ ಕಾಲಾವಧಿಯ ಈ ರಷ್ಯನ್‌ ಚಿತ್ರದ ನಿರ್ದೇಶಕ ಆಂದ್ರೆ ಕಂಚೊಲೋವ್ಸ್ಕಿ. 1962ರ ರಶ್ಯದಲ್ಲಿ ಬೆಲೆಯೇರಿಕೆಯಾಗಿ, ವೇತನ ಕಡಿಮೆಯಾದಾಗ ಜನ ಪ್ರತಿಭಟಿಸುತ್ತಾರೆ. ಇಲೆಕ್ಟ್ರಿಕ್‌ ಫ್ಯಾಕ್ಟರಿಯ ಕಾರ್ಮಿಕರ ಪ್ರತಿಭಟನೆ ಜೋರಾದಾಗ ಅದನ್ನು ಹತ್ತಿಕ್ಕಲು ಸರಕಾರ ಬಲ ಪ್ರಯೋಗ ಮಾಡುತ್ತದೆ. ಹಲವರು ಹತರಾಗುತ್ತಾರೆ. ಪಾರ್ಟಿಯ ನಿಷ್ಠಾವಂತ ಸದಸ್ಯೆ ಲುಡ್ಲಿಲಾ ತಾನು ಅಪಾರವಾಗಿ ಭರವಸೆ ಇಟ್ಟ ಸರಕಾರದಿಂದ ಇಂತಹ ಕೃತ್ಯಗಳಾಗುವುದಕ್ಕೆ ಆತಂಕಗೊಳ್ಳುತ್ತಾಳೆ. ಆ ಸಮಯದಲ್ಲಿ ಅವಳ ಮಗಳು ಕಣ್ಮರೆಯಾಗುತ್ತಾಳೆ. ಪ್ರಭುತ್ವದ ದರ್ಪದೊಂದಿಗೆ ಸಾಂಸಾರಿಕ ತಲ್ಲಣಗಳನ್ನು ಸಶಕ್ತವಾಗಿ ಹಿಡಿದಿಡುವ ಈ ಸಿನಿಮಾ ವ್ಯವಸ್ಥೆಯ ವಿಕಾರಗಳಿಗೆ ಕನ್ನಡಿ ಹಿಡಿಯುತ್ತದೆ.

ಈ ಚಿತ್ರ ದೀರ್ಘ ಸಂವಾದಕ್ಕೆ ಎಡೆ ಮಾಡಿತು. ಸಿದ್ಧಾಂತ ಎಷ್ಟೇ ಚೆನ್ನಾಗಿದ್ದರೂ ಆಳುವವರು ತಮ್ಮ ಕಾರ್ಯಸೂಚಿಗೆ ಅದನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ʼಸಮಾಜವಾದʼ ದ ಬೆಳಕಲ್ಲಿ ಚಿತ್ರ ತೋರಿಸುತ್ತದೆ. ಸಿನಿಹಬ್ಬದ ಪಾರದರ್ಶಕ ಆಯ್ಕೆಗೆ ಇದು ಉದಾಹರಣೆ. ಲುಡ್ಮಿಲಾ ಏನೋ ನಿಟ್ಟುಸಿರು ಬಿಡುತ್ತಾಳೆ; ಆದರೆ ಚಿತ್ರವನ್ನು ನೋಡುವವರಿಗೆ ಉಸಿರು ಕಟ್ಟಿದ ಅನುಭವವಾಗುತ್ತದೆ.

ಈ ಬಾರಿಯ ಸಿನಿಹಬ್ಬದ ವಿಶೇಷ ʼಸಿನಿಮಾ ಮಾಧ್ಯಮ ಹಾಗೂ ರಚನೆ ʼ ಕುರಿತ ಪ್ರಾತ್ಯಕ್ಷಿಕೆ ಮತ್ತು ಸಂವಾದ. ಇದನ್ನು ದೃಶ್ಯ ಕಲಾವಿದ ಹಾಗೂ ಸಿನಿಮಾ ನಿರ್ದೇಶಕರಾದ ಎಂ ಎಸ್‌ ಪ್ರಕಾಶ್‌ ಬಾಬು ನಡೆಸಿಕೊಟ್ಟರು. ಮೂಲತಃ ಚಿತ್ರದುರ್ಗದವರಾದ ಎಂ ಎಸ್‌ ಪ್ರಕಾಶ್‌ ಬಾಬು ವಿಶ್ವಭಾರತಿ ವಿಶ್ವವಿದ್ಯಾನಿಲಯದಿಂದ ದೃಶ್ಯ ಕಲೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದವರು. ಅವರು ನಿರ್ದೇಶಿಸಿದ ʼ ಅತ್ತಿಹಣ್ಣು ಮತ್ತು ಕಣಜ ʼ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ.

ಪ್ರಕಾಶ್‌ ಬಾಬುರವರು ಸಾಕಷ್ಟು ಸಲಕರಣೆಗಳೊಂದಿಗೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅವರು ಪ್ರಸ್ತುತ ಪಡಿಸಿದ ಕ್ಲಿಪ್ಪಿಂಗ್‌ಗಳು, ಕಿರು ಚಿತ್ರಗಳು ಬೆರಗು ಹುಟ್ಟಿಸುವಂತಿದ್ದವು. ಸಿನಿಮೋತ್ಸಾಹಿಗಳಿಗೆ, ನಿರ್ಮಾಣದ ಉಮೇದುಳ್ಳವರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಅಂಶಗಳು ಹಲವಿದ್ದವು. ಮನುಜಮತ ಸಿನಿಯಾನ ಪ್ರಕಾಶ್‌ ಬಾಬುರವರ ಪರಿಣತಿಯನ್ನು ಮತ್ತೆ, ಮತ್ತೆ ಪಡೆದುಕೊಳ್ಳಬಹುದು.

ಪ್ರಾತ್ಯಕ್ಷಿಕೆಯ ಮುಕ್ತಾಯದಲ್ಲಿ ಅವರು ನಿರ್ಮಿಸಿದ, ಈ ವರೆಗೆ ಎಲ್ಲೂ ಪ್ರದರ್ಶಿತಗೊಳ್ಳದ ಕಿರು ಚಿತ್ರ ʼ ಜೋಮು ʼ ಪ್ರಸ್ತುತ ಪಡಿಸಿದರು. ಕಾವ್ಯಾತ್ಮಕವಾದ ಈ ಕಿರು ಚಿತ್ರದ ಬಿಡಿಬಿಡಿ ದೃಶ್ಯಗಳು ಮನಸೂರೆಗೊಳ್ಳುವಂತಿದ್ದು, ʼತನ್ನ ಕಲ್ಪನೆಯು ತನ್ನ ಒಡಲನೆ ಚಿತ್ರಿಸಿ, ಚಿಂತಿಸಿ ಸುಯ್ಯುವಂತಿದೆ ʼ.

ಜನವರಿ 28ರಂದು ಬೆಳ್ಳನೆ ಬೆಳಕಾದಾಗ, ಸಿನೀಮಯ ದಿನವೊಂದು ಕಳೆಯಿತಲ್ಲಾ ಎನ್ನುವ ಎಚ್ಚರದೊಂದಿಗೆ, ವಸತಿ ಗೃಹದಿಂದ ತೆರಳುವ ಧಾವಂತವೂ ಇತ್ತು. ತಿಂಡಿ ತಿಂದು ಸಭಾಭವನಕ್ಕೆ ಬರುವಷ್ಟರಲ್ಲಿ ಸಿನಿಮಾ ಜೀವಿ ಕೃಷ್ಣಪ್ರಸಾದ್‌ ಧ್ವನಿ ವರ್ಧಕ ಹಸ್ತರಾಗಿದ್ದರು. ಮಲಯಾಳಂ ಚಿತ್ರ ʼ ತುರಮುಖಂʼ ಬಗ್ಗೆ ವಿವರಿಸಿಲು ಚಿತ್ರದ ನಿರ್ದೇಶಕ ರಾಜೀವ್‌ ರವಿಗಿಂತ ಹೆಚ್ಚಿನ ಉತ್ಸಾಹ ಅವರಲ್ಲಿದ್ದಂತಿತ್ತು!

ಅವರಹುರುಪಿಗೆ ಕಾರಣವಿತ್ತು. 2023ರಲ್ಲಿ ಬಿಡುಗಡೆಯಾದ ʼ ತುರಮುಖಂ ʼ 1940-50 ದಶಕದಲ್ಲಿ ಕೇರಳದ ಕೊಚ್ಚಿಯಲ್ಲಿ ನಡೆದ ನೈಜ ಘಟನೆಗಳನ್ನಾಧರಿಸಿದೆ ಮಾತ್ರವಲ್ಲ ಯಾವುದೇ ರೀತಿಯ ತೀರ್ಮಾನಗಳಿಗೆ ಧಾವಿಸದೆ ಅಮಾನುಷ ಪದ್ಧತಿಯಿಂದ ಕೂಲಿಗಾರರು ಅನುಭವಿಸುವ ಸಂಕಷ್ಟಗಳನ್ನು ಉಮ್ಮಾ ಎನ್ನುವ ಹೆಣ್ಣುಮಗಳ ಕಣ್ಣಿನಿಂದ ಯಥಾವತ್ತಾಗಿ ದಾಖಲಿಸುತ್ತದೆ. ಉಮ್ಮಾಳ ಮಗ ಮೊಯ್ದು ಅಡ್ಡದಾರಿ ಹಿಡಿಯುವುದು, ನಿಯತ್ತಿನಿಂದ ದುಡಿವ ಎರಡನೇ ಮಗ ಹಂಜು ಕಾರ್ಮಿಕರ ಹೋರಾಟದಲ್ಲಿ ಬಲಿಯಾಗುವುದು ನೋಡುಗರ ಮನ ತಟ್ಟುತ್ತದೆ. ಸಿನಿಮಾ ನಂತರ ಮಾತನಾಡಿದವರೆಲ್ಲ ಕಾರ್ಮಿಕರ ದಾರುಣ ಸ್ಥಿತಿಗೆ ಮರುಗಿದವರೇ. ಕಾರ್ಮಿಕರನ್ನು ಬಗ್ಗು ಬಡಿಯಲು ಮಾಲೀಕರು ಬಳಸುವ ತಂತ್ರಗಳು, ಕಾರ್ಮಿಕರಲ್ಲಿ ಒಗ್ಗಟ್ಟಿಲ್ಲದಿರುವುದು ಚರ್ಚೆಗೆ ವಸ್ತುವಾಯಿತು.

ಸುಮಾರು ಮೂರು ಗಂಟೆ ಕಾಲಾವಧಿಯ ಚಿತ್ರ ಮುಗಿದಾಗ ಊಟದ ಸಮಯವಾಗಿತ್ತು. 3. 15 ರ ರೈಲಿಗೆ ನಾವು ಕಾದಿರಿಸಿದ್ದರಿಂದ ʼ ಟೈಮ್‌ ಟು ರೈಸ್‌ ʼ ಎಂದುಕೊಂಡು ಬ್ಯಾಗ್‌ ಹೆಗಲಿಗೇರಿಸಿದೆವು. ಆನಂದ ಪಟವರ್ಧನ್‌ ಮತ್ತು ಜಿಮ್‌ ಮನ್ರೋ ಜೋಡಿಯ ʼ ಎ ಟೈಮ್‌ ಟು ರೈಸ್‌ʼ ಡಾಕ್ಯುಮೆಂಟರಿ ನೋಡಲಾಗಲಿಲ್ಲ. ಅದರೇನಂತೆ, ದೃಶ್ಯವಿಲ್ಲದಿದ್ದರೂ ಶ್ರಾವ್ಯವಾಗಿ ಸಿನಿ ಹಬ್ಬದ ಚಟುವಟಿಕೆಗಳು ಬಿತ್ತರಗೊಳ್ಳುತ್ತಿದ್ದವು. ದುಷ್ಟಕೂಟದ ಗೌರವಾನ್ವಿತಅಧ್ಯಕ್ಷರಾದ ಮ ಶ್ರೀ ಮುರಳಿಕೃಷ್ಣರವರು ವೇದಿಕೆಯನ್ನು ಅಲಂಕರಿಸಿದ ವಿಷಯ ತಿಳಿದು ಹೆಮ್ಮೆ ಎನಿಸಿತು.

ಸಮಾರೋಪದ ನಂತರ ಶಿವಮೊಗ್ಗ ಸಿನಿಹಬ್ಬಕ್ಕೆ ಅಧಿಕೃತ ತೆರೆ ಬಿತ್ತು. ಆದರೆ ಸಿಹಿ ನೆನಪುಗಳು ತೆರೆತೆರೆಯಾಗಿ ಮನಃಪಟಲವನ್ನು ಚೋದಿಸುತ್ತಿವೆ. ಮನೆಹಬ್ಬದಂತೆ ಬಂದವರಿಗೆಲ್ಲ ಅಕ್ಕರೆಯ ಮಳೆಗರೆದ ಆಯೋಜಕರು ʼಸಿನಿ ಹಬ್ಬದʼ ಯಶಸ್ಸಿನ ಮಾಲೀಕರು. ಹೊನ್ನಾಳಿ ಚಂದ್ರಶೇಖರ್‌, ಅಕ್ಷತಾ ಹುಂಚದಕಟ್ಟೆ, ಸತೀಶ್‌ ಶಿಲೆ, ಭಾರತಿ ದೇವಿ, ರೇಖಾಂಬ, ಮೈತ್ರಿ ಇವರನ್ನೆಲ್ಲ ಎಷ್ಟು ನೆನೆದರೂ ಸಾಲದು. ಯಾರವರು ಶಂಕರ್‌ ಶಿವಮೊಗ್ಗ? ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೋ ನೋಡಬೇಕು! ಅವರ ಚುರುಕಿಗೆ ಸಲಾಂ. ಸಂವಾದವನ್ನು ಅರ್ಥಪೂರ್ಣವಾಗಿಸುವಲ್ಲಿ ಎಲ್ಲರ ಕೊಡುಗೆಯೂ ಇದೆ. ಸಬಿತಾ ಬನ್ನಾಡಿ, ಕೃತಿ ಪುರಪ್ಪೆ ಮನೆ, ಮಂಜುನಾಥ ಸ್ವಾಮಿ, ರಮೇಶ್‌ ಶಿವಮೊಗ್ಗ ಶಿವಮಲ್ಲೇಗೌಡ, ವೃಂದಾ ಹೆಗಡೆ, ಹಮೀರ್‌ ಮುಗಿಲು, ರೋಹಿತ್‌ ಹೀಗೆ ಅನೇಕರು ತಮ್ಮ ಒಳನೋಟಗಳ ಮೂಲಕ ಸಿನಿಮಾ ಅರಿಯುವ ಬಗೆಯನ್ನು ವಿಸ್ತ್ರತಗೊಳಿಸಿದರು.

ಶಿವಮೊಗ್ಗದಿಂದ ಬೆಂಗಳೂರು ತನಕವೂ ರೈಲಲ್ಲಿ ಕಿಕ್ಕಿರಿದ ಜನ. ಅದರೂ ರೈಲು ಕ್ಲುಪ್ತ ಸಮಯದಲ್ಲಿ ಯಶವಂತಪುರ ಸ್ಟೇಷನ್ನಿಗೆ ಆಗಮಿಸಿತು. ಸ್ಟೇಷನ್ನಲ್ಲಿ ಜನ ಸಾಗರ. ನಾವುದಿಕ್ಕು ಕಾಣದೆನಿಂತೆವು. ಅಟೋ ಸಿಗುತ್ತಿಲ್ಲ; ಮೆಟ್ರೋ ಹತ್ತಲಾಗುತ್ತಿಲ್ಲ. ಒಂದೆರಡು ನಿಮಿಷ ಯೋಚಿಸಿ ಇಬ್ಬರೂ ಎಡಕ್ಕೆ ಹೊರಳಿದೆವು, ಎಂದಿನಂತೆ!

ಎಂ ನಾಗರಾಜಶೆಟ್ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x