ಭಾಗ – 11
ಈಗ ಚೆನ್ನಬಸವಿ ಮೊದಲಿನಂತಿಲ್ಲ. ಅಲ್ಲಿ ಇಲ್ಲಿ ಸುತ್ತುವುದೂ ಕಮ್ಮಿಯಾಗಿತ್ತು. ಹೊಟ್ಟೆನೋವು, ಮೈ ಕೈ ನೋವು, ಸುಸ್ತು ಸಂಕ್ಟದ ಮಾತಾಡುತ್ತಿದ್ದಳು. ಯಾರಾದರು ಸುಮ್ನೆ “ಇದ್ಯಾಕಕ್ಕ” ಅಂತ ಕೇಳಿದರೆ “ನಂಗ ಯಾರ ಏನಾ ಕೆಟ್ಟದ್ ಮಾಡರ.. ಅದ್ಕೆ ಏನ್ ಮಾಡುದ್ರು ನನ್ ಸಂಕ್ಟ ನಿಲ್ದು” ಅಂತ ನಟಿಕೆ ಮುರಿದು ಶಾಪಾಕ್ತ ದೇವ್ರು ದಿಂಡ್ರು ಅಂತ ಮಾಡೋಕೆ ಶುರು ಮಾಡಿದ್ದಳು.
ಊರಿನಲ್ಲಿ ಒಬ್ಬ ಗೋವಿಂದ ಅಂತ. ಅವನು ನಿಧಾನಕ್ಕೆ ಜಬರ‌್ದಸ್ತ್ ಪುಡಾರಿಯಾಗಿ ಬೆಳೀತಿದ್ದ. ಊರಾಚೆ ದೊಡ್ಡ ಮನೆಯನ್ನೇ ಕಟ್ಟಿಕೊಂಡು ಪಂಚಾಯ್ತಿ ಎಲೆಕ್ಷನ್ ಹೊತ್ತಲ್ಲಿ ಊರೊಳಕ್ಕೆ ಬಂದು ಬೀದಿಬೀದಿ ಸುತ್ತಿ ರಂಗು ತರುತ್ತಿದ್ದ. ಅವನು ಊರಿಂದೂರಿಗೆ ಬಂದು ಸೇರಿಕೊಂಡಿದ್ದ. ನಿಲಸೋಗೆಯಲ್ಲಿ ಚೆನ್ನಬಸವಿಯ ದೂರದ ನೆಂಟರವನೇ. ವಾರಿಗೆಯಲ್ಲಿ ಅವಳಿಗೆ ಸಲ್ಲಬೇಕಾದವನೆ. ಅವಳಿಗೆ ಮದುವೆಯಾಗುವಾಗ ಅವನಿನ್ನು ಚಿಕ್ಕವನು. ಆಡಾಡ್ತ ಸಲುಗೆಯಿಂದ ಇದ್ದವನು. ಊರಲ್ಲಿದ್ದಾಗ ಚೆನ್ನಬಸವಿಯ ವೈಯ್ಯಾರ ನೋಡಿ ಮೈಬಿಸಿ ಮಾಡಿಕೊಂಡರು ಚೆನ್ನಬಸವಿಗೆ ಅದೇನೂ ಅನ್ನಿಸದೆ ಅವಳಿಂದ ಕೆನ್ನೆ ತಿವಿಸಿಕೊಂಡು ಗೇಲಿ ಮಾಡಿಸಿಕೊಂಡೇ ಬೆಳೆದವನು. ಚೆನ್ನಬಸವಿ ಮದುವೆಯಾಗಿ ಹೋದ ಮೇಲೆ ಅವನಿಗೆ ಪಿಚ್ಚೆನಿಸಿ ಊರೂರು ಅಲಿತಾ ಪೋಲಿ ಬಿದ್ದು ಚೆನ್ನಬಸವಿಯ ಗಂಡ ಸೌದೆ ಹೊಡೆದು ಬರುವಾಗ ಬಾಳೆಮಂಡಿ ಹತ್ತಿರ ಸಿಕ್ಕಿ ಮಾತಾಡ್ತ ಮಾತಾಡ್ತ ಊರು ತಲುಪಿ ಸಲುಗೆಯ ಚೆನ್ನಬಸವಿ ಕಂಡು ಕಷ್ಟಸುಖ ಹೇಳಿಕೊಂಡ. ಚೆನ್ನಬಸವಿಗೆ ಕರುಳು ಚುರ‌್ರ್ ಅನ್ನತರ ಆಗಿ ಗಂಡ ನಿಂಗಯ್ಯನಿಗೆ ಹೇಳಿ ಯಂಕ್ಟಪ್ಪನ ಜೊತೆಗೆ ಮಾತಾಡಿ ತೋಟದ ಕೆಲಸಕ್ಕೆ ಸೇರಿಸಿದ್ದು ಗೋವಿಂದನಿಗೆ ಒಂದು ದಾರಿಯಾಗಿತ್ತು.
ಅವನು ತೋಟದ ಕೆಲ್ಸ ಮಾಡ್ತ ಮಾಡ್ತ ಯಂಕ್ಟಪ್ಪನಿಗೆ ಹತ್ರ ಆಗಿ ಬೆಳಿತಾ ಹೋದ. ಅವನ ಮೈ ಕೈ ಗಟ್ಟಿಯಾಗಿ ನೋಡಕೆ ಮೊದಲಿಗಿಂತಲೂ ಚೆನ್ನಾಗತೊಡಗಿದ. ಬರ‌್ತಾ ಬರ‌್ತಾ ಯಂಕ್ಟಪ್ಪನ ವ್ಯವಹಾರದ ಗುಟ್ಟುಗಳೂ ಅವನಿಗೆ ತಾಕಿದವು. ಅವನ ಮಗ ಶಿವನಂಜನ ಗುಟ್ಟನ್ನೂ ಕಂಡ. ಶಿವನಂಜ ಏನೂ ಮಾಡಕ್ಕಾಗದೆ ಒಳಗೊಳಗೆ ಕುದಿಯತೊಡಗಿದ. ಅವರಪ್ಪ ಯಂಕ್ಟಪ್ಪ ಇಲ್ಲದಿದ್ದಾಗ ಗೋವಿಂದನೊಂದಿಗೆ ಕ್ಯಾತೆ ತೆಗೆದಿದ್ದ. ಗೋವಿಂದ ಇದ್ಯಾವುದಕ್ಕು ಕ್ಯಾರೆ ಅನ್ನದೆ ಸೆಡ್ಡು ಹೊಡೆದಿದ್ದ.
ಕುಲ ಸೇರಿ ಯಂಕ್ಟಪ್ಪನ ಪರವೇ ಕುಲದ ತೀರ್ಪು ಕೊಟ್ಟಿದ್ದಾಗ ಒಳಗೊಳಗೆ ನೀಲಳಿಗೆ ಹುಬ್ಬು ಹಾರಿಸಿದ್ದವನಿಗೆ ಸಪೋರ್ಟಾಗಿ ಶಿವನಂಜನ ವಿರುದ್ದ ನಿಂತಿದ್ದ. ಇದು ಯಂಕ್ಟಪ್ಪನಿಗೆ ಗೊತ್ತೊ ಏನೋ.. ಇದನ್ನು ಬಾಯಿಬಿಟ್ಟು ಹೇಳಲಾಗದ ಶಿವನಂಜ ಹಲ್ಲುಮುಡಿ ಕಚ್ಚಿ ಸುಮ್ಮನಿದ್ದ. ಆತರ ಸುಮ್ಮನಿರಲು ಯಂಕ್ಟಪ್ಪನ ಕತ್ತಲ ವಿಚಾರಗಳಿದ್ದವು. ಅವನನ್ನು ಬಿಟ್ಟು ಆಚೀಚೆ ವ್ಯವಹರಿಸಲು ಯಂಕ್ಟಪ್ಪನಿಗೂ ಆಗದ ಮಾತಿತ್ತು. ಇದರೊಂದಿಗೆ ಶಿವನಂಜನ ಅಪಾಪೋಲಿತನ ಯಂಕ್ಟಪ್ಪನಿಗಿಂತಲೂ ಒಂದು ಕೈ ಮೇಲೇ ಇತ್ತು. ಮಗನ ಈ ಆಟಟೋಪ ಕಂಡಿದ್ದ ಯಂಕ್ಟಪ್ಪ ಅವನು ಗೋವಿಂದನ ಮೇಲೆ ಏನೇ ಹೇಳಿದರು ಯಂಕ್ಟಪ್ಪ ನಂಬುವ ಮಾತೂ ಇರಲಿಲ್ಲ.
ಈ ಶಿವನಂಜ ನೀಲಳ ಹಿಂದೆ ಸುತ್ತುತ್ತಿದ್ದುದು ಯಂಕ್ಟಪ್ಪನಿಗೆ ಹೇಳಿದ್ದು ಈ ಗೋವಿಂದನೆ. ಅವನು ಚಿಕ್ಕವನಾಗಿರುವಾಗಲೇ ಚೆನ್ನಬಸವಿಯ ವೈಯ್ಯಾರ ಕಂಡಿದ್ದ ಗೋವಿಂದ, ಯಂಕ್ಟಪ್ಪನಿಗೆ ಗೊತ್ತಾಗಲೆಂದೆ ಹೇಳಿದ್ದು ಸುಳ್ಳಲ್ಲ. ಇದು ಯಂಕ್ಟಪ್ಪನಿಗೆ ಸಂಕಟವಾಗಿತ್ತು. ರಾತ್ರಿಯೆಲ್ಲ ನಿದ್ರೆ ಹತ್ತದೆ ಎದ್ದು ಎದ್ದು ಕುಂತಾಗಲೆಲ್ಲ ಎಲ್ಲಾ ಒಂದೇ ಸಲ ದುತ್ತನೆ ಬಂದು ಬಂದು ಎರಗುತ್ತಿದ್ದವು.
——
ಅವತ್ತು ಮನೆಯವರೆಲ್ಲ ಮಲೆಮಾದೇಶ್ವರ ಬೆಟ್ಟಕ್ಕೆ ಹೋದ ದಿನ, ತಾನು ಇಲ್ಲೆ ಉಳಿದಿದ್ದು.. ರಾತ್ರಿ ಎಂಟಾದ ಮೇಲೆ ಗವ್ವಗತ್ತಲಲ್ಲಿ ಮನೆ ಸೇರಿಕೊಂಡಿದ್ದು… ಆ ರಾತ್ರಿ ಕದತಟ್ಟಿದ ಸದ್ದು.. ಬಾಗಿಲು ತೆಗೆದಾಗ ಸೆರಗು ತಲೆಮೇಲೆ ಹೊದ್ದು ಚೆನ್ನಬಸವಿ ಒಳಗೆ ಬಂದದ್ದು… ಆಗ ಊರೊಳಗೆ ‘ನಾಳ ಹಬ್ಬ ಅದ ಮನಕ್ವಾಣ ತೊಳ್ಕಳಿ’ ಅಂತ ಮಾದಿಗೇರಿಲಿ ಚಿಕ್ಕೆಜಮಾನ ಸಾರುತ್ತಿದ್ದುದು.. ಅದೇ ಹೊತ್ತಿಗೆ ನಾಯಿಗಳು ಗಳ್ಳಾಕ್ತ ಬೊಗಳುವ ಸದ್ದು.. ರೂಮಿನಲ್ಲಿ ಮಂದ ಬೆಳಕಿನಲ್ಲಿ ಬೀಡಿ ಕಚ್ಚಿ ಹೊಗೆ ಬಿಡ್ತಾ ಅವಳನ್ನು ಎಳೆದು ತಬ್ಬಿಕೊಂಡಿದ್ದು… ಈತರ ಆದುದು ಒಂದ್ಸಲ ಅಲ್ಲವೇ ಅಲ್ಲ..!
ಒಂದೆರಡು ತಿಂಗಳು ಕಳೆಯಿತು. ಒಂದಿನ ಅವಳು ತೋಟಕ್ಕೆ ಬಂದಾಗ ಮುಖ ರಂಗಾಗಿತ್ತು. ಅದೇ ರಂಗಿನಲ್ಲಿ ಯಂಕ್ಟಪ್ಪನಿಗೂ ಗೊತ್ತಾಗದ ಹಾಗೆ ಮರದಲ್ಲಿದ್ದ ಮಾವಿನಕಾಯಿ ಕಿತ್ತುಕೊಂಡು ಸೀರೆ ಸೆರಗಿಗೆ ಗಂಟಾಕಿಕೊಂಡು ಹೋದದ್ದು….!
——-
ನಿದ್ದೆ ಹತ್ತದ ಯಂಕ್ಟಪ್ಪ ಸಂಕಟದಲ್ಲಿದ್ದ. ಅವನ ಸಂಕಟಕ್ಕೆ ಜೇಬಿನಲ್ಲಿದ್ದ ಮಂಗಳೂರು ಗಣೇಶ ಬೀಡಿಗಳು ಉರಿದು ಉರಿದು ಖಾಲಿಯಾಗುತ್ತಿದ್ದವು. ಇದೆಲ್ಲ ಅವನಿಗೆ ತಲೆ ತಿರುಗಿದಂತಾಗಿ ಒಂದಿನ ಶಿವನಂಜನನ್ನು ರೂಮಿನಲ್ಲಿ ಕೂಡಾಕಿ ಬಾಂಡ್ಲಿಗೆ ಒಣಮೆಣಸಿಕಾಯಿ ತುಂಬಿ, ಅದರ ಮೇಲೆ ಕೆಂಡ ಸುರಿದು ಹೊಗೆ ಹಾಕಿ ಒಂದಿಡೀ ರಾತ್ರಿ ಕತ್ತಲಲ್ಲಿ ಇರಿಸಿದ್ದು.
ಇದೆಲ್ಲ ಆಗಿ ಯಂಕ್ಟಪ್ಪ ಸತ್ತ ಮೇಲೆ ಶಿವನಂಜ ಗೋವಿಂದನನ್ನು ತೋಟದಿಂದ ಓಡಿಸಿದ್ದು ಮಸಲತ್ತಿಗೆ ಕಾರಣವಾಗಿತ್ತು.
———-
ಈಗಲೂ ಚೆನ್ನಬಸವಿ ಮೇಲೆ ಯಂಕ್ಟಪ್ಪ ಬರ‌್ತಿದ್ದ ಎಂಬುದು ಮಾಮೂಲಾಗಿತ್ತು. ಯಂಕ್ಟಪ್ಪನ್ನ ಕೇಳಲು ವಾರವಾರ ಒಕ್ಕಲಗೇರಿಯಿಂದ ಬರುವವರಿಗೇನು ಕಮ್ಮಿ ಇರಲಿಲ್ಲ. ಇವರೊಂದಿಗೆ ಈಗೀಗ ಆ ಪುಡಾರಿ ಗ್ಯಾಂಗೂ ಸೇರ‌್ತಿತ್ತು. ಅವರೆಲ್ಲ ಬರ‌್ತಿದ್ದದ್ದು ಸಿದ್ದೇಶನಿಗೆ ಸ್ವರ್ಗ ಸಿಕ್ಕಿದಂತಾಗುತ್ತಿತ್ತು. ಬಂದವರೆಲ್ಲ ಸಿದ್ದೇಶನ ಕೈ ತುಂಬಿಸುತ್ತ ಅವನು ಹೊಸಿಲು ಬಿಟ್ಟು ಹೋಗುತ್ತಿರಲಿಲ್ಲ. ಈ ನಡುವೆ ಸಿದ್ದೇಶನಿಗೆ ಮದುವೆ ಮಾಡಲು ಮಾತುಕತೆ ನಡೀತಿತ್ತು. ಹೆಣ್ಣು ನೋಡಿ ನೋಡಿ ಸಾಕಾಗಿ ಒಂದೆಣ್ಣೂ ಸಿಗದೆ ಅದ್ಕೂ ‘ಯಾರಾ ಏನಾ ಮಾಡರ’ ಅನ್ನೋದೇ ನೆಪವಾಗಿತ್ತು.
ಒಂದ್ಸಲ ಹೆಣ್ಣು ಒಪ್ಪಿ ಆಯ್ತು. ಮನೆ ನೋಡಲು ಬತ್ತರ ಅಂತ ಮನೆ ತೊಳ್ದು ಕಿರುಸುಣ್ಣ ಬುಟ್ಟು ಕಾಯ್ತ ಕುಂತರೆ ಹೆಣ್ಣಿನ ಕಡೆಯವರು ಬಂದದ್ದು ಕಾಣೆ. ಚಿಂತೆಗೆ ಬಿದ್ದ ಚೆನ್ನಬಸವಿ ಹೆಣ್ಣು ತೋರಿಸಿದವರ ಮನೆಗೆ ಎಡತಾಕಿದರೆ ಅವರು “ಚೆನ್ಬಸಕ್ಕ ಅವ್ರೇನೊ ಒಪ್ಪರ. ಆದ್ರ ಅದ್ಯಾರ ನಿನ್ ಮಗ್ಳು ನೀಲ ಅವ್ಳಲ್ಲ.. ಅವ್ಳ ಬಗ್ಗ ಇಂಗಿಂಗ ಅನ್ತ ಯೇಳಿದರಾ ಏನಾ ಕಾಣಿ. ಅವ್ಳ ಅವ್ತಾರನ ಕೇಳಿದರಾ ಏನಾ.. ಅದ್ಯಾಕ ಏನಾ ಅವ್ರೂ ಏನೂ ಹೇಳ್ದೆ ನೋಡೇಳ್ತಿವಿ ಅಂದ್ರು ಕಕ್ಕ..” ಅಂತಂದು ತಮ್ಮ ಪಾಡಿಗೆ ತಾವು ಸೈಡಿಗೋಗುತ್ತಿದ್ದರು. ಇದಲ್ಲದೆ ಸಿದ್ದೇಶ ಯಾವಾಗಲೂ ಚೆನೈನ್ ಗುಡಿಲಿ ಕುಂತು ಇಸ್ಪೀಟ್ ಆಡುವುದು. ಸರ್ಕಲ್ ಕಡ ಹೋಗಿ ಪ್ಯಾಕೆಟು ಸಾರಾಪು ಕುಡಿಯುವುದು ಮಾಮೂಲಿಯಾಗಿತ್ತು. ಕಾಸಿಲ್ಲದಿದ್ದರೆ ಮನೆಯಲ್ಲಿದ್ದ ಕಂಚಿನ ತಟ್ಟೆ ಲೋಟ ಬಿಂದಿಗೆಯನ್ನು ಎತ್ತಿಕೊಂಡು ಹೋಗಿ ಮಾರುವ ಚಾಳಿ ಬೆಳೆಸಿಕೊಂಡಿದ್ದ. ಇದೇ ಮಾತಿಗೆ ಚೆನ್ನಬಸವಿ ತನ್ನ ಹಳೇ ಖದರ್ ತೋರಿಸಿ ಮಗನಿಗೆ ಕಿರಿಕಿರಿ ಎಟ್ಟಿ ರಂಪ ಮಾಡುತ್ತಿದ್ದುದು ಊರು ನೋಡಿತ್ತು. ಇದೂನು ಹೆಣ್ಣಿನ ಕಡೆಯವರಿಗೆ ತಲುಪಿ ಮುಖ ತಿರುವುತ್ತಿದ್ದದ್ದು ಚೆನ್ನಬಸವಿಯ ಸಿಟ್ಟಿಗೆ ಕಾರಣವಾಗಿತ್ತು. ಈ ಸಿಟ್ಟನ್ನು ಒಳಗೇ ಇಟ್ಟಕೊಳ್ಳದ ಚೆನ್ನಬಸವಿ ವಾರಗಿತ್ತಿಯರನ್ನೊ ಮೈದ್ದಿರನ್ನೊ ಅವರ ಮಕ್ಕಳನ್ನೊ ಕಂಡ್ ಕಂಡಾಗ ಯಾವ್ಯದ್ಯಾವುದೊ ನೆಪದಲ್ಲಿ ಲಕಲಕನೆ ಬೊಯ್ಯುವುದು ರೇಗುವುದು ನೀಲಳ ಕೆನ್ನೆ ಚಿವುಟುವುದು. ಅದಕ್ಕೆ ಅವಳೂ ಚೆನ್ನಬಸವಿಯ ಮುಂದಲೆ ಹಿಡಿದು ಬಡಿಯುವುದು ನಡೆದೇ ಇತ್ತು. ಇದಾದಾಗ ಶಿವಯ್ಯ ‘ಇದ್ಯಾಕತ್ಗ ಇಂಗಾಡಿಯೆ.. ಲಕಲಕ ಅಂತಿದ್ದಯಲ್ಲ.. ನಿನ್ನಿಂದ ಈ ಮನ ಮಾನ ಮರ‌್ಯಾದಿಯೆಲ್ಲ ಹೋಯ್ತು ‘ ಅಂದಿದ್ದೆ ತಡ ಅವನಿಗೂ ಎರಗುತ್ತಿದ್ದಳು. ಒಳಗಿದ್ದ ಸಿದ್ದಿ ಬಂದು ಮೆಲ್ಲಗೆ ಆಯ್ತು ಹೋಗಕ್ಕ ಅಂತ ಸಮಾಧಾನದ ಮಾತಾಡಿದರು ಅವಳ ಕಿರಿನೂ ಎಟ್ಟಿ ಲಕಲಕ ಅನ್ನೋಳು.
ಶಿವಯ್ಯನ ಮಗ ಸೂರಿಗ ಇದಾಗದು. ತನ್ನ ಅವ್ವಳಿಗೆ ಕಿರಿ ಎಟ್ಟೋದು ಅಂದ್ರ ಏನ ಅಂತ ಸರ‌್ರಂತ ಬರೋನು. ಅವನಿಗೆ ಯಾವಾಗ್ಲು ಕೆಂಡ್ಗೋಪ. ಈ ಕೆಂಡ್ಗೋಪದಿಂದ ಊರಲ್ಲಿ ನಿಷ್ಠೂರ ಆಗಿದ್ದ. ಸೂರಿನ ಕಂಡರೆ ಹೆದರುತ್ತಿದ್ದರು. ಇದೇ ಕೋಪದಲ್ಲಿ ಒಂದ್ಸಲ ನೀಲಳಿಗೆ ಹೊಡೆದಿದ್ದ. ಸೂರಿಯ ಏಟು ತಡೆಯಲಾರದೆ ನೀಲ ನಾಪತ್ತೆಯಾಗಿದ್ದಾಗ ಚೆನ್ನಬಸವಿಯ ಬೈಗುಳ ಶಿವಯ್ಯನಿಗೆ ಥೂ ಅನ್ನಿಸಿ ಸೂರಿಗೆ ಉಗಿದಿದ್ದು ಗೊತ್ತೇ ಇದೆ. ಸೂರಿ ಏನು ಕಮ್ಮಿಯಿರದೆ ಅವನೂ ಲಕಲಕ ಅಂತ ಬೀದಿಯಲ್ಲಿ ಅರಚಿದ್ದ.
——–
ಒಂದಿನ ಕಡ್ಡಬುಡ್ಡೆವ್ನು ತನ್ನ ತಲೆ ಮೇಲೆ ಕರಡಿ ಕೂದಲಿರ ಗುಬರ ಹಾಕೊಂಡು “ಕಡ್ಡಬುಡ್ಡಕಡ್ಡಬುಡ್ಡ ..” ಅಂತ ಕಡ್ಬುಡ್ಕೆ ಸದ್ದು ಮಾಡ್ತ ಬಂದ. ಮನೆಮನೆ ಮುಂದೆ ನಿಂತು ಸದ್ದು ಮಾಡಿ ಮಕ್ಕಳು ಮರಿಗಳಿಗೆ ತಲೆ ಮೇಲಿದ್ದ ಕರಡಿ ಕೂದಲಿದ್ದ ಗುಬರನ ಅವರ ತಲೆ ಮೇಲಿಟ್ಟು ಹಣೆಗೆ ಊಬತ್ತಿ ಹಚ್ಚಿ ಶಿವಾ ಒಳ್ಳೇದ್ ಮಾಡಪ್ಪ ಅಂತ ಹರಸುತ್ತ ಹಂಗೆ ಶಿವಯ್ಯನ ಮನೆ ಮುಂದೆನು ನಿಂತ. ಅವನೇನು ಊರಿಗೆ ಹೊಸಬನಲ್ಲ. ಕಾಲದಿಂದಲೂ ಬರ‌್ತಿದ್ದ. ಸುತ್ಮುತ್ತಲ ಹತ್ತಾರು ಊರಿಗೆ ಗೊತ್ತಿದ್ದಂವ. ಎಲ್ರು ಗೊತ್ತಿದ್ದ ಮೇಲೆ ಈ ನೀಲಳು ಗೊತ್ತು. ಅವ ಓದಕ ಹೋಗ್ತಾ ಇದ್ಲಲ್ಲ ಆಗಿಂದ್ಲು ಗೊತ್ತು. ಅವ ಗ್ಯಾನ ತಪ್ಪುದ್ದು ಗೊತ್ತು. ತೆಂಗಿನ ಮರ ಒರಗಿ ನಿಂತಿದ್ದ ನೀಲ ಕಡ್ಡಬುಡ್ಡಯ್ನ ನೋಡಿ ಹಲ್ಲು ಕಿರಿದು “ಅಯ್ಯವ್ ನಿನ್ ತಲ ಮೇಲಿರದ ನನ್ ತಲ ಮೇಲೂ ಮಡ್ಗಿ ಅದೇನ ಹೇಳ್ತಿದ್ದಯಲ್ಲ ಅದ ಹೇಳು ನಮ್ಮೊವ್ವತಾವು ಕಾಸಿಸ್ಕೊಡ್ತಿನಿ ” ಅಂದಳು. ಅವನು ಇವಳನ್ನು ಮೇಲಿಂದ ಕೆಳಕ್ಕೆ ನೋಡಿದನು. ಅವಳ ತಲೆ ಗಂಟುಗಂಟಾಗಿ ಗಟ್ಟಿಯಾಗಿ ಜಡೆಯಾಗಿತ್ತು. ಅವಳ ಮುಖ ಬಿಸಿಲ ಬೇಗೆಗೆ ಬೆವ್ತು ಅದ್ದಿ ಮುಖದಲ್ಲಿದ್ದ ಕೊಳೆ ಕರ‌್ರಗೆ ತೊಟತೊಟನೆ ತೊಟ್ಟಿಕ್ಕುತ್ತಿತ್ತು. ಅವಳ ಲಂಗದಾವಣಿ ಎತ್ತೆತ್ತಗೊ ಏನೇನೊ ಕಾಣತರ ಹರದೋಗಿತ್ತು. ಅವಳ ಮುಟ್ಟಾಗಿದ್ಲಲ್ಲ ಆ ರಕ್ತ ಇಡೀ ಲಂಗದಾವಣಿನ ಅಂಟಿಕೊಂಡು ಕರ‌್ರಗೆ ಕೆಂಪಗೆ ಬೆಳ್ಳಗೆ ತರಾವರಿ ಕಲರ್ ನಲ್ಲಿ ಚಿತ್ರ ಬರೆದಂಗಿ ಕಾಣ್ತಿತ್ತು. ಅವನ ಕಣ್ಣು ಲಂಗದಾವಣಿಲಿ ಅಂಟಿದ್ದ ಆ ಕಲರ್ ಚಿತ್ರಗಳನ್ನೇ ಬೆರಗಿನಿಂದ ನೋಡ್ತಿತ್ತು. ಅವನು ಈ ಊರ‌್ಕಡ ಬಂದು ಸ್ಯಾನೆ ದಿನನೇ ಆಗಿತ್ತು. ಮೊದುಲ್ಗೂ ಈಗ್ಗೂ ನೀಲಳ ಆಕಾರವೇ ಬದಲಾಗಿತ್ತು. ಅವಳು “ಅಯ್ಯವ್ ಅದೇನ ಹಂಗ್ ನೋಡ್ದೈ.. ನಾ ಹೇಳದು ಕೇಳ್ತಿಲ್ಲ.. ನಿನ್ ತಲ ಮೇಲಿರದ ನನ್ ತಲ ಮೇಲ ಮಡ್ಗು” ಅಂದಳು. ಅವನು “ನಾ ಏನ್ ಮಡುಗ್ಲಿ.. ಎಲ್ಲ ನಿಂತವೇ ಅದಲ್ಲ… ಆ ಶಿವನಂಗೆ ಕಾಣ್ತ ಇದ್ದಯಲ್ಲ…” ಅಂತ ಹಲ್ಲು ಕಿರಿತ “ಆ ಮುಕ್ಕಣುಂಗ ನಿನ್ ಮುಟ್ ತಟ್ತೋ.. ಮುಕ್ಕಣ್ಣನೇ ನಿನ್ ಮುಟ್ನ ಸವುರ‌್ಕಂಡು ನಿಂತ್ನಾ ಏನಾ.. ಇದು ಒಗ್ಟುಕವ್ವ…. ನೋಡು ಕಸ್ಟನೆಲ್ಲ ಹೊತ್ಗಂಡಿರತಿರ ಇದೈ… ಆದ್ರ ಆ ಕಸ್ಟನೆ ನಿನ್ನ ಹುಡಿಕಂಬಂದು ತಬ್ಬಿ ಮೆರಿತಾ ಅದ ಅನ್ಸುತ್ತ.. ಹಂಗೆ ನಿನ್ ರೂಪ್ದಲ್ಲಿ ಆ ಶಿವ್ನ ಅರ್ದರೂಪನೆ ನನ್ ಕಣ್ಗ ಕಾಣ್ತ ಅದ..” ಅಂತ ‘ಕಡ್ಡಬುಡ್ಡಕಡ್ಡಕಡ್ಡ ಬುಡುಕ್ ಬುಡುಕ್’ ಅನ್ನಿಸಿ ಅತ್ತ ಪಾದ ಊರಿದ.
ಅವನು ಪಾದ ಊರಿ ಹೋಯ್ತಾ ಇದ್ದಂಗೆ ಅವಳು ಗುಡುಗುಡನೆ ಓಡಿ ಅವನ ತಲೇಲಿದ್ದ ಕರಡಿ ಕೂದಲಿನ ಗುಬರ ಕಿತ್ತುಕೊಂಡು ತನ್ನ ತಲೆ ಮೆಲೆ ಇಟ್ಟುಕೊಂಡು ಆಮೇಲೆ ಅವನ ತಲೆ ಮೇಲೂ ಇಟ್ಟು “ಒಳ್ಳೆದಾಗ್ಲಿ.. ” ಅಂತ ಅವನನ್ನು ಕೆಕ್ಕಳಿಸಿ ನೋಡಿ “ಕೊಡು ಕಾಸ” ಅಂದಳು. ಅವನು ‘ಯಾಕವ್ವ’ ಅಂದ. ಅವಳು “ಮಂತಾ.. ಇದಲ್ವ ಮಾತು. ನೀನಾರ ಇದ ಮಡ್ಗಿ ಎಲ್ರುತವ್ವ ಈಸ್ಕತಿದೈ.. ಈಗ ನನ್ ತಲ್ಗ ಮಡಿಕಂಡು ನಿನ್ ತಲ್ಗು ಮಡ್ಗಿನಿ.. ಅದ್ಕೆ ತತ್ತಾ” ಅಂದಳು. ಅವನು ದುರುದುರನೆ ನೋಡಿ ಮೆಲ್ಲಗೆ ನಕ್ಕ. ಅವನ ನಗೂಗೆ ಅವಳೂ ಪಾಚಿಕಟ್ಟಿದ ಹಲ್ಲುಬೀರಿ ನಕ್ಕು ಕಡ್ಡಬಡ್ಡಿ ಕಿತ್ತುಕೊಂಡು ಎರ‌್ರಾಬಿರ‌್ರಿ ಬುಡ್ಕಬುಡ್ಕ ಅನ್ನಿಸಿ “ಕೊಡು. ಕಾಸ್ಕೊಡು. ನೀ ಕೊಡ್ನಿಲ್ಲ ಅಂದ್ರ..” ಅಂತ ಆ ಕಡ್ಡಬುಡ್ಡಿನ ಕೆಳಕ್ಕೆ ರಪ್ಪಂತ ಬಡಿದಳು. ಅವನು “ಬ್ಯಾಡಕವ್ವ ಅದು ಶಿವುಂದು” ಅಂತ ಸಪ್ಪಗೆ ನಗುತ್ತಾ ಹೇಳಿದ. ಹಂಗೆ ಅವಳು ಅವನ ತಲೆ ಮೇಲಿದ್ದ ಗುಬರ ಕಿತ್ತೆಸೆದು ಅದನ್ನೂ ಕೆಳಕ್ಕೆ ಬಡಿದಳು. ಅದನ್ನು ಕಿತ್ತುಕೊಳ್ಳಲು ಬಂದ ಅವನ ಜುಟ್ಟು ಹಿಡಿದಳು. ಆಗ ರೇಷ್ಮ ಗೂಡುನ್ ಮಾರ್ಕಟ್ಗ ಹೋಗಿ ರೇಷ್ಮ ಗೂಡ ಹೊತ್ತು ರೀಲಿಂಗ್ ಮಿಶಿನ್ ಸೆಂಟರ್ ಗ ರೇಷ್ಮಗೂಡ ಹಾಕಿ ಸುಡುಸುಡು ನಡು ಮದ್ಯಾಹ್ನ ಉಣ್ಣಕೆ ಅಂತ ಸೈಕಲ್ ತುಳಿಯುತ್ತ ಬಂದು ಕೆಳಕ್ಕಿಳಿದ ಸೂರಿ ‘ಏಯ್’ ಅಂತ ಸೈಕಲ್ ಸ್ಡ್ಯಾಂಡ್ ಹಾಕದೆ ಹಂಗೇ ಬುಟ್ಟು ಕೂಗಿದ. ಸೂರಿಯ ಕೂಗು ಕೇಳ್ತಿದ್ದಂಗೆ ಕಡ್ಡಬುಡ್ಡಯ್ನ ಜುಟ್ಟು ಬುಟ್ಟು “ಅಯ್ಯಯ್ಯಪ್ಪೋ ಬಂದಕಪ್ಪೊ.. ನನ್ ಸಾಯಿಸ್ತನಕಪ್ಪೊ” ಅಂತ ಅರಚುತ್ತಾ ಶನಿ ಮಹಾತ್ಮನ ಗುಡಿ ಹಿಂದಕ್ಕೆ ಓಡಿದಳು. ಸೂರಿ ರೇಗುತ್ತ ಬೀದಿಲಿ ಬಿದ್ದ ಕಲ್ಲು ಎತ್ತಿಕೊಂಡು ಅವಳಿಗೆ ಬೀರಬೇಕು ಆಗ ಕಡ್ಡಬುಡ್ಡಯ್ಯ “ಬ್ಯಾಡ. ಅವ ಗ್ಯಾನ್ಗೆಟ್ಟಳ. ನಮ್ಗ ಗ್ಯಾನದ. ಗ್ಯಾನ ಇರ ನಾವು ಅವ್ಳಿಗ ಗ್ಯಾನ ಬರಗಂಟ ಸುಮ್ನ ಇರ‌್ಬೇಕು.. ಬಾಯಿಲ್ಲಿ” ಅಂತ ಸೂರಿಯ ತಲೆಗೆ ಗುಬರ ಇಟ್ಟು “ಹಿಂಗಾಯ್ತಲ್ಲ ಚೇ.. ಅವ್ರಪ್ಪ ನಿಂಗ ಸತ್ತೊದ್ನಲ್ವ.. ಆಗ ನಂಗ ಮೈಗ ಸರಿಲ್ದೆ ಬರಕಾಗ್ನಿಲ್ಲ ” ಅಂದ. ಸೂರಿ “ಊ್ಞ… ನಿಮುಗ್ ಗೊತ್ತಿಲ್ಲ ಅನ್ಕಂಡಿದ್ದ… ” ಅಂದ. ಕಡ್ಡಬುಡ್ಡಯ್ಯ “ಅದ್ಯಾಕಿಂಗ್ ಕೇಳಿಯೆಯ್ ನಂಗು ಗೊತ್ತಿತು ಇವ್ನೆ. ಆದ್ರ ಏನ್ಮಾಡದು.. ಇವ ಓದಕ್ಕೊಯ್ತಿದ್ಲಲ್ಲ ಹೆಂಗಿದ್ದ.. ಚೆಂದುಳ್ಳಿ ಹೆಣ್ಣು.. ನೀವೆಲ್ಲ ಇದ್ಕಂಡು ಅವ್ನ ಸುಮ್ನ ಬುಡ್ಬಾರ‌್ದಿತ್ತು ಇವ್ನೆ” ಅಂತ “ಕಡ್ಡಬಡ್ಡ ಕಡ್ಡಬಡ್ಡ ಬುಡುಕ್ ಬುಡುಕ್” ಅಂತ ಆಡುಸ್ತ ಹಿಂದುಲ್ ಬೀದಿದಿಕ್ಕ ಪಾದ ಊರಬೇಕು.. ಅಷ್ಟೊತ್ಗ ಚೆನ್ನಬಸವಿ ಕಾಣಿಸಿಕೊಂಡಳು. ಸೂರಿ ಅತ್ತ ತಿರುಗಿ ಸೈಕಲ್ ಮೇಲೆತ್ತಿ ತೆಂಗಿನ ಮರಕ್ಕೆ ಒರಗಿಸಿ ಅಲ್ಲಿಂದಲೆ ಜಗುಲಿಗೆ ಪಣ್ಣನೆ ಎಗರಿ ಒಳ ಹೋದ. ಶನಿಮಹಾತ್ಮ ಗುಡಿ ಹಿಂದಕ್ಕೆ ಓಡಿ ಹೋಗಿದ್ದ ನೀಲ ಅದೇ ಸ್ಪೀಡಲ್ಲಿ ಬಂದು ಸೈಕಲ್ ನ ಎಳೆದು ಬಿಸಾಡಿ ತಾನು ಆ ತೆಂಗಿನ ಮರನ ಒರಗಿ ನಿಂತಳು.
ಈ ಕಡ್ಡಬುಡ್ಡಯ್ಯ ಅವಳು ಸೈಕಲ್ ಎಳೆದು ಬಿಸಾಡಿದ್ದನ್ನು ನೋಡ್ತ ಚೆನ್ನಬಸವಿ ಕಡೆ ತಿರುಗಿದ. ಚೆನ್ನಬಸವಿ “ಬನ್ನಿ ಅಳಿ ಕವ್ಡನಾದ್ರು ಬುಟ್ಟು ನಂಗಾಗಿರ ಸಂಕ್ಟ ಇನ್ನು ಎಲ್ಲಿಗಂಟ್ಯಾ.. ಅವ್ಳ್ ಗ್ಯಾನ ನೆಟ್ಗಾರು ಆದ್ರ ನೆಮ್ದಿಲಿ ಜೀವ ಬುಡ್ತಿನಿ. ನಾ ಇರಗಂಟೇನ ಸರಿ. ನಾ ಹೋದ್ಮೇಲ..? ನಂಗ ನೆಮ್ದಿ ಇಲ್ಲ ಅಳಿ.. ಅದೇನ ಅಂತ ನೋಡೇಳಿ” ಅಂದಳು. ಹಿಂದಲ ಬೀದಿಗೆ ಹೋಗುತ್ತಿದ್ದ ಕಡ್ಡಬುಡ್ಡಯ್ಯನಿಗೆ ಕಳ್ಳು ಕರ‌್ಕ್ ಅಂದು ಚೆನ್ನಬಸವಿ ಹಿಂದೆ ನಡೆದು ಸಂದಿಗ ಕಾಲೂರಿ ಜಗುಲಿಯಲ್ಲಿ ಕುಂತು ಚೀಲ ಬಿಚ್ಚಿ ನೀಲಳನ್ನೇ ನೋಡ್ತ ಕವ್ಡ ತಗ್ದು ಕೆಳಕ್ಕ ಬುಟ್ಟು ಬೆರಳಿಗೆ ಬೆರಳು ತಾಕಿಸಿ ಎಣಿಸತೊಡಗಿದ.
-ಎಂ.ಜವರಾಜ್
[ ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ]