ʼಅನ್ನಪೂರಣಿ- ದಿ ಗೊಡೆಸ್ ಆಫ್ ಫುಡ್ʼ ಹೆಸರಿನ ತಮಿಳು ಚಿತ್ರ ಸುದ್ದಿ ಮಾಡುತ್ತಿದೆ. ಆಹಾರ ಸಂಸ್ಕೃತಿ, ಮಹಿಳೆಯರ ವೃತ್ತಿ ಸ್ವಾತಂತ್ರ್ಯ ಮತ್ತು- ವಿನಾಕಾರಣ- ಲವ್ ಜಿಹಾದ್ ಇವು ಚರ್ಚಿತವಾಗುತ್ತಿರುವ ವಿಷಯಗಳು. ಚಿತ್ರ ಆಹಾರದ ಮಡಿವಂತಿಕೆಯನ್ನು ತೋರಿಸುತ್ತದೆ; ವೃತ್ತಿಯ ಆಯ್ಕೆಯ ಬಗೆಗಿನ ಮಹಿಳೆಯರ ಮಿತ ಅವಕಾಶವನ್ನೂ ಪ್ರಸ್ತಾಪಿಸುತ್ತದೆ. ಆದರೆ ಲವ್ ಜಿಹಾದ್ ಎನ್ನುವುದು ಆರೋಪಿತವಾದದ್ದು ಮಾತ್ರವಲ್ಲ, ಚಿತ್ರದ ಆಶಯಕ್ಕೆ ವಿರುದ್ಧವಾಗಿದೆ. ಆದರೆ ಈ ಚರ್ಚೆಗಳಿಂದಾಗಿ ʼಅನ್ನಪೂರಣಿʼ ಬಿಡುಗಡೆಯ ಬಳಿಕ ಥಿಯೇಟರ್‌ನಲ್ಲಿ ಗಳಿಸಲಾಗದ್ದನ್ನು ಓಟಿಟಿಯ ಮುಖಾಂತರ ಗಳಿಸಿತು.
ʼದಿ ಗ್ರೇಟ್ ಇಂಡಿಯನ್ ಕಿಚನ್ʼ ಮಲಯಾಳಂ ಸಿನಿಮಾ ಅಡುಗೆ ಮನೆಯಲ್ಲಿ ಬಂಧಿಯಾದ ಹೆಣ್ಣಿನ ಒಳತೋಟಿಯನ್ನು, ಗಂಡಾಳ್ವಿಕೆಯ ದರ್ಪವನ್ನು ಸೊಗಸಾಗಿ ಕಟ್ಟಿ ಕೊಟ್ಟಿತ್ತು. ʼಅನ್ನಪೂರಣಿʼ ಸಿನಿಮಾದ ವಿಷಯವೂ ಅಡುಗೆಯದ್ದೇ; ಇದು ಕೂಡಾ ಕೆಲವು ಮಹತ್ವದ ಪ್ರಶ್ನೆಗಳನ್ನು ಎತ್ತುತ್ತದೆ. ಆದರೆ ʼದಿ ಗ್ರೇಟ್ ಇಂಡಿಯನ್ ಕಿಚನ್ʼ ರೀತಿಯಲ್ಲಿ ತಟ್ಟುವುದಿಲ್ಲ. ತಾನು ಎತ್ತಿಕೊಂಡ ವಿಷಯಕ್ಕೆ ಪೂರ್ತಿ ನ್ಯಾಯ ಒದಗಿಸುವಲ್ಲಿ ಸೋಲುತ್ತದೆ.
ಶ್ರೀ ರಂಗಂ ದೇವಸ್ಥಾನದಲ್ಲಿ ಪ್ರಸಾದ ಮಾಡುವ ಭಟ್ಟನ ಮಗಳು ಪೂರ್ಣಿಗೆ ಬಾಲ್ಯದಿಂದಲೇ ಆಹಾರ ತಯಾರಿಯ ಕುರಿತು ಆಸಕ್ತಿ. ರೈಲ್ವೇ ಉದ್ಯೋಗಿಯಾಗದೆ, ಪ್ರಸಾದ ಮಾಡುವ ಕಾಯಕದಲ್ಲಿ ಇಷ್ಟ ಪಟ್ಟು ತೊಡಗಿಸಿಕೊಂಡ ಅಪ್ಪ ರಂಗರಾಜನ್ ಮಗಳ ಆಸೆಗೆ ನೀರೆರೆಯುತ್ತಾನೆ. ಮೀನು ಹುರಿಯವ ವಾಸನೆಗೆ ವಾಸನೆಗೆ ಮೂಗು ಮುಚ್ಚಿಕೊಳ್ಳುವ ರಂಗರಾಜನ್, ಪೂರ್ಣಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸನ್ನು ಆಯ್ಕೆ ಮಾಡಿಕೊಳ್ಳುವುದನ್ನು ಒಪ್ಪಲಾರ. ಪೂರ್ಣಿ ದೇಶದ ಪ್ರಮುಖ ಶೆಫ್ ಆಗಬೇಕೆಂಬ ವಾಂಛೆಯಿಂದ, ಗೆಳೆಯ ಫರ್ಹಾನ್ ನೆರವಿನೊಂದಿಗೆ ಎಂಬಿಎ ಮಾಡುವ ನೆವದಲ್ಲಿ ಹೋಟೆಲ್ ಮ್ಯಾನೆಜ್‌ಮೆಂಟ್ ಕೋರ್ಸಿಗೆ ಸೇರಿಕೊಳ್ಳುತ್ತಾಳೆ. ಶೆಫ್ ಕೆಲಸಕ್ಕೆ ಮಾಂಸಾಹಾರ ತಯಾರಿಸುವ ಅಗತ್ಯವಿರುವುದರಿಂದ, ಒಮ್ಮೆ ಚಿಕನ್ ರುಚಿ ನೋಡುವಾಗ ಅಪ್ಪನ ಕಣ್ಣಿಗೆ ಬೀಳುತ್ತಾಳೆ. ರಂಗರಾಜನ್ ಮಗಳ ಓದನ್ನು ನಿಲ್ಲಿಸಿ ಮದುವೆಯ ಏರ್ಪಾಡು ಮಾಡುತ್ತಾನೆ. ಪೂರ್ಣಿ ತನ್ನ ಮಹತ್ವಾಕಾಂಕ್ಷೆಯನ್ನು ಪೂರೈಸಿದಳೇ? ಅವಳ ಉದ್ದೇಶ ಸಾಧನೆಯಲ್ಲಿ ಬರುವ ಆಡಚಣೆಗಳೇನು? ಸಾಧನೆಯ ಫಲಶ್ರುತಿ ಏನು? ಇದು ʼಅನ್ನಪೂರಣಿʼ ಚಿತ್ರದ ಕಥಾ ವಸ್ತು.
ʼಅನ್ನಪೂರಣಿʼ ನಟಿ ನಯನತಾರಾರವರ 75ನೇ ಚಿತ್ರ. ಬಾಲ್ಯದ ಪೂರ್ಣಿ ಪಾತ್ರವನ್ನು ಬಿಟ್ಟರೆ ಚಿತ್ರವನ್ನು ಪೂರ್ತಿಯಾಗಿ ವ್ಯಾಪಿಸಿರುವುದು ನಯನತಾರಾ ಅವರೇ. ಆಕೆ ತಮ್ಮ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸಿದ್ದಾರೆ. ಆದರೆ ನಯನತಾರಾರಂತಹ ತಾರಾ ನಟಿಗೆ ಸವಾಲೊಡ್ಡುವ ಪಾತ್ರ ಇದಲ್ಲ. ಚಿಕನ್ ಕಟ್ ಮಾಡುವ ಸಂದರ್ಭದಲ್ಲಿ, ರುಚಿ ನೋಡುವಾಗ, ಅಪ್ಪನ ದರ್ಶನವಾದಾಗ, ಪಿಜಿ ಒಡತಿಯ ಜೊತೆ ತಿಕ್ಕಾಟವಾದಾಗ ಪಾತ್ರದ ಗಟ್ಟಿತನವನ್ನು ಸಾಬೀತು ಪಡಿಸುವ ಅವಕಾಶವಿತ್ತು. ಚಿತ್ರಕತೆಯಲ್ಲಿ ಅದಕ್ಕೆ ಆಸ್ಪದವಿಲ್ಲದುದರಿಂದ ನಯನತಾರಾ ಲೀಲಾಜಾಲವಾಗಿ ನಟಿಸಿದ್ದಾರೆ.
ನಯನತಾರಾ, ಸತ್ಯರಾಜ್‌ರಂತಹ ಪಳಗಿದ ಕಲಾವಿದರಿದ್ದು, ರೂಢಿಗೆ ವಿರುದ್ಧವಾದ, ಸಂಪ್ರದಾಯವನ್ನು ಪ್ರಶ್ನಿಸುವ, ಹೆಣ್ಣಿನ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕಥಾ ವಸ್ತು ಹೊಂದಿದ್ದರು ಕೂಡಾ ಚಿತ್ರ ಮರೆಯಲಾರದ ಅನುಭವ ನೀಡುವುದಿಲ್ಲ. ಚಿತ್ರದ ಅವಧಿ, ಎರಡನೇ ಭಾಗದ ನಿಧಾನ ಗತಿ, ತಲೆ ಚಿಟ್ಟು ಹಿಡಿಸುವ ಸ್ಪರ್ಧೆಯ ಆವರ್ತನೆಗಳು ಬೇಸರ ಉಂಟು ಮಾಡುತ್ತವೆ. ಅಂತ್ಯವನ್ನು ಊಹಿಸಬಹುದಾದ ಕತೆಗೆ ಪ್ರೇಕ್ಷಕರನ್ನು ಹಿಡಿದು ನಿಲ್ಲಿಸುವ ದೃಶ್ಯಗಳು ಅಗತ್ಯ. ಇಲ್ಲಿ ಮದುವೆಯ ದೃಶ್ಯ ಆತಂಕ ಹುಟ್ಟಿಸುವುದಿಲ್ಲ; ಅಶ್ವಿನ್‌ಸುಂದರಾಜನ್ ಸವಾಲು ಮೈ ನವಿರೇಳಿಸುವುದಿಲ್ಲ; ಸತ್ಯರಾಜ್ ಮೇಲೆ ಮಗ ಆಕ್ರಮಣ ಮಾಡುವುದೂ ಪರಿಣಾಮ ಬೀರುವುದಿಲ್ಲ!
ಕನ್ನಡದ ಅಚ್ಯುತ ಕುಮಾರ್ ರಂಗರಾಜನ್ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ಪಾತ್ರಕ್ಕೆ ಅವರು ನ್ಯಾಯ ಸಲ್ಲಿಸಿದ್ದರೆ, ಪೂರ್ಣಿ ಗೆಳೆಯ ಫರ್ಹಾನ್ ಪಾತ್ರದಲ್ಲಿ ಜೈರವರದ್ದು ತೃಪ್ತಿಕರ ನಟನೆ. ಹಿರಿಯ ನಟ ಸತ್ಯರಾಜ್ ನಟನೆಯಲ್ಲಿ ಘನತೆ ಇದೆ. ಆದರೆ ಅವರ ಮಗನ ಪಾತ್ರದ ಕಟ್ಟುವಿಕೆ ಪೇಲವವಾಗಿದೆ.
ಆದರೂ ʼಅನ್ನಪೂರಣಿʼ ನೋಡಬಹುದಾದ ಚಿತ್ರ. ಕಾರಣ: ಸಂಪ್ರದಾಯ ಬದ್ಧನಾದ ಅಡುಗೆ ಭಟ್ಟನ ಮಗಳು ಮಾಂಸದಡುಗೆಯ ರುಚಿಯನ್ನೂ ಸವಿಯುವ ಶೆಫ್ ಆಗ ಬಯಸುವ ಕಥಾವಸ್ತುವಿನ ಆಯ್ಕೆ ಸುಲಭದ್ದಲ್ಲ. ಅಂತಹ ಧೈರ್ಯವನ್ನು ನವ ನಿರ್ದೇಶಕ ನಿಲೇಶ್ ಕೃಷ್ಣ ತೋರಿದ್ದಾರೆ. ತಮಿಳು ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ಆಹಾರ ಪದಾರ್ಥಗಳನ್ನು ಉದ್ಧರಿಸಿರುವುದೂ ಸಂಸ್ಕೃತಿ ಪ್ರಿಯರಿಗೆ ಇಷ್ಟವಾಗುವ ಅಂಶ. ಹಾಗೆಯೇ ಶ್ರದ್ಧೆ, ಪ್ರೀತಿಯಿಂದ ತಯಾರಾದ ಬಿರಿಯಾನಿಯ ರಸ ವಿಶೇಷವನ್ನು ಹೇಳುವಾಗ, ಅಡುಗೆ ಎನ್ನುವುದು ಪ್ರೀತಿ, ಶ್ರದ್ಧೆಗಳ ಸಮ್ಮಿಲನ ಎನ್ನುವುದಕ್ಕೆ ಒತ್ತು ಸಿಗುತ್ತದೆ.
ನಿರ್ದೇಶಕ ನಿಲೇಶ್ ಕೃಷ್ಣ ಚಿತ್ರಕತೆಯೊಂದಿಗೆ, ಸಂಭಾಷಣೆಯ ಜವಾಬ್ದಾರಿಯನ್ನೂ ಹಂಚಿಕೊಂಡಿದ್ದಾರೆ. ಪೂರ್ಣಿಯ ಅಜ್ಜಿ “ಸೋತಾಗ ಆಗಲೇ ಹೇಳಿದ್ದೇನಲ್ಲವೇ ಎಂದು ತೆಗಳುವವರು, ಗೆದ್ದಾಗ ನಮಗೆ ಮೊದಲೇ ಗೊತ್ತಿತ್ತು ಎಂದು ಹೇಳುತ್ತಾರೆ” ಎನ್ನುವುದು; ವೃತ್ತಿಧರ್ಮದ ಕುರಿತಾದ ಮಾತುಗಳು, ಸಂದರ್ಭಕ್ಕೆ ಅನುಗುಣವಾಗಿವೆ. ಮುಸ್ಲಿಂ ಗೆಳೆಯನ ಪಾತ್ರವನ್ನು ಸೃಷ್ಟಿಸಿ ಅವನ ತಾಯಿಯಿಂದ ಬಿರಿಯಾನಿಯ ಸ್ವಾದಿಷ್ಟತೆಯ ಗುಟ್ಟು ತಿಳಿದುಕೊಳ್ಳುವುದು ಚಿತ್ರ ಕತೆಯ ಗುಣಾತ್ಮಕ ಅಂಶ. ಆದರೆ ನೋಡುಗನ ಬಾಯಲ್ಲಿ ನೀರೂರಿಸುವ ಬಿರಿಯಾನಿ ತಯಾರಿ ಇಲ್ಲ! ನಿರ್ದೇಶಕನ ಜಾಣ್ಮೆಯಿಂದ, ಬೆಂಕಿಯ ಝಳಕ್ಕೆ aguesia ಉಂಟಾಗಿ ನಾಲಿಗೆಯ ರುಚಿ ಕಳಕೊಂಡು, ಸ್ಮೆಲ್ ಮೂಲಕವೇ ಅಹಾರದ ಗುಣಮಟ್ಟ ಅರಿಯುವ ಸನ್ನಿವೇಶ ಸೃಷ್ಟಿಸುತ್ತಾರೆ. ಇದರಿಂದ ಶಾಖಾಹಾರಿಗಳನ್ನು ಎದುರು ಹಾಕಿಕೊಳ್ಳದೆ ಬಚಾವಾಗುತ್ತಾರೆ!
ಸ್ತ್ರೀಯರನ್ನು ಅಡುಗೆ ಮನೆಗೆ ಸೀಮಿತಗೊಳಿಸಿದ ಸಮಾಜ ಅವರನ್ನು ಪಾಕ ಪ್ರವೀಣೆಯರು ಎಂದು ಒಪ್ಪಿಕೊಳ್ಳುವುದಿಲ್ಲ. ಪುರುಷ ಪ್ರಧಾನ ಸಮಾಜಕ್ಕೆ ನಳ, ಭೀಮರೇ ಶ್ರೇಷ್ಠ ಪಾಕ ತಜ್ಞರು! ಈ ಮನೋವೃತ್ತಿ ತಾರಾ ಹೋಟೆಲುಗಳ ಶೆಫ್ ಆಯ್ಕೆಯಲ್ಲಿಯೂ ಇದೆ. ಮಹಿಳೆಯೂ ಶ್ರೇಷ್ಠ ಶೇಫ್ ಆಗಬಲ್ಲಳು ಎನ್ನುವುದನ್ನು ತೋರಿಸುವ ಮೂಲಕ ಸಿನಿಮಾ ಮಹಿಳೆಯ ಘನತೆಯನ್ನು ಎತ್ತಿ ಹಿಡಿಯುತ್ತದೆ.
ಚಿತ್ರದ ಮೊದಲಲ್ಲಿ ರಂಗನಾಥನ ದೇವಸ್ಥಾನಕ್ಕೆ ವಿದೇಶಿಯರು ಭೇಟಿ ನೀಡುವ ಪ್ರಸಂಗವಿದೆ. ಅದರಲ್ಲಿ ಸ್ಥಳೀಯ ರಾಜನನ್ನು ಸೋಲಿಸಿದ ಸೇನಾಧಿಕಾರಿ ಶ್ರೀರಂಗನ ಮೂರ್ತಿಯನ್ನು ದೆಹಲಿಯ ಬಾದಶಹನಿಗೆ ಒಪ್ಪಿಸಿದ ವಿವರ ಬರುತ್ತದೆ. ಬಾದಶನ ಮಗಳು ಆಯಿಷಾ ಮೂರ್ತಿಗೆ ಮನಸೋಲುತ್ತಾಳೆ; ಶ್ರೀರಂಗನಲ್ಲಿ ಲೋಲುಪಳಾಗುತ್ತಾಳೆ. ಮೂರ್ತಿ ಮತ್ತೆ ಶ್ರೀರಂಗಂಗೆ ಬರುತ್ತದೆ. ಬಾದಶಹನ ಮಗಳು ಇಲ್ಲವಾದ ನಂತರ ಯತಿ ರಾಮಾನುಜರು ತನ್ನ ಕೊನೆಗಾಲದಲ್ಲಿ ಶ್ರೀರಂಗಂನ ಕಡಲ ತಡಿಯಲ್ಲಿ ಕುಳಿತು ಆಯಿಷಾಳೊಂದಿಗೆ ದೆಹಲಿಯಿಂದ ಸಾಗಿ ಬಂದಿದ್ದನ್ನು ಮೆಲುಕು ಹಾಕುತ್ತಾರೆ. ರಾಮು ಮೈಸೂರು ಅವರು ತಮ್ಮ ʼವಿಷ್ಣುಕ್ರಾಂತಿʼ ಕವನ ಸಂಕಲನದಲ್ಲಿ ಹಜರತ್ ರಾಮಾನುಜರ ಮೆಲುಕುಗಳನ್ನು ಅಪೂರ್ವ ರೀತಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಚಿತ್ರ ನೋಡುವಾಗ ಈ ಕವನ ಕಾಡಿತು.
ಕವನದ ಒಂದು ಭಾಗದಲ್ಲಿ ಹೀಗಿದೆ:
ಹೃದಯಸ್ಪಂದದ ಗಂಟೆ, ಕಣ್ಣ ಬೆಳಕಿನ ನೀರಾಜನ!
ಮುಂಜಾವು ಎಲೆಯಿಂದ ಹನಿಯುದುರಿದಂತೆ
ನಿನ್ನ ದುವಾ ಅದೆಷ್ಟು ಸರಳ ಆಯೀಷಾ!
ಅದರ ಅಂತರಂಗದ ಬೆಳಕು ಕತ್ತರಿಸುವುದು ಎಲ್ಲ ಬೇಡಿಯನ್ನು
ಅವನುಸಿರಲ್ಲಿ ಸಂಗಮಿಸೊ ನಿನ್ನುಸಿರ ತಂಗಾಳಿ
ತೆರವು ಮಾಡುವುದು ನಮ್ಮೆದೆಯ ಮೃತ್ಯುವನ್ನು
-ಎಂ. ನಾಗರಾಜ ಶೆಟ್ಟಿ